ನಮ್ಮ ಸಮಾಜದಲ್ಲಿ ವ್ಯಕ್ತಿಯೊಬ್ಬರಿಗೆ ಸಿಗುವ ಗೌರವದ ಮಾನದಂಡ ಯಾವುದು? ಗಳಿಸಿದ ಹಣವೆ, ಪಡೆದ ಪದವಿಯೇ ಅಥವಾ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಶೈಲಿಯೆ?
ಸಂದೀಪ್ ಶರ್ಮಾ
ನಮಗೆ ನೆಂಟರಿಷ್ಟರ ಸಮಾರಂಭವೊಂದರಲ್ಲಿಯೋ ಅಥವಾ ಕಾರ್ಯಕ್ರಮ ವೊಂದರಲ್ಲಿಯೋ ಹೊಸಬರು ಪರಿಚಿತರಾಗುತ್ತಾರೆ. ಅಥವಾ ದೂರದ ನೆಂಟಸ್ತಿಕೆಯಲ್ಲಿರುವ ಅಷ್ಟೇನೂ ಪರಿಚಯವಿಲ್ಲದ ವ್ಯಕ್ತಿಗಳು ಭೇಟಿಯಾಗು ತ್ತಾರೆ ಎಂದುಕೊಳ್ಳಿ. ಉಭಯ ಕುಶಲೋಪರಿ ಎಲ್ಲವನ್ನು ವಿಚಾರಿಸುತ್ತ ಅವರು ನಮ್ಮನ್ನು ಕೇಳುವ ಮೊದಲ ಪ್ರಶ್ನೆಯೇ ‘‘ನೀವೇನು ಕೆಲಸ ಮಾಡುತ್ತೀರಿ?’’ ಎಂದು. ಅಂದರೆ ನೀವು ಯಾವ ಕೆಲಸದಲ್ಲಿದ್ದೀರಿ ನಿಮ್ಮ ಡೆಸಿಗ್ನೇಷನ್ ಏನು ಮತ್ತು ಯಾವ ಕಂಪೆನಿಯಲ್ಲಿದ್ದೀರಿ ಎನ್ನುವುದರ ಮೇಲೆಯೇ ಎದುರಿನ ವ್ಯಕ್ತಿಯ ಗಮನ. ನಮ್ಮ ಉತ್ತರ ಕೇಳಿದ ನಂತರ, ಈ ಸಮಾಜದಲ್ಲಿ ನಿಮಗೆಷ್ಟು ಮಹತ್ವ, ಮರ್ಯಾದೆ ಕೊಡಬೇಕು ಎಂದು ನಿರ್ಧರಿಸಿಬಿಡುತ್ತದೆ. ಇದಲ್ಲವೇ ಮನುಷ್ಯನ ಬದುಕಿನ ದೊಡ್ಡ ದುರಂತ? ಇದಲ್ಲವೇ ಬೇಸರ ಮೂಡಿಸುವ ಸಂಗತಿ? ಏಕೆಂದರೆ ನಮ್ಮ ಜೀವನವೇ ಹೀಗಾಗಿಬಿಟ್ಟಿದೆ.
ನಾವು ನಿಜಕ್ಕೂ ಎಂಥವರು ಎನ್ನುವುದಕ್ಕಿಂತಲೂ ನಾವೇನು ಕೆಲಸ ಮಾಡುತ್ತೇವೆ, ಯಾವ ಹುದ್ದೆೆಯಲ್ಲಿದ್ದೇವೆ ಎನ್ನುವುದರ
ಆಧಾರದ ಮೇಲೆಯೇ ನಮ್ಮ ಸ್ಥಾನಮಾನ ನಿರ್ಧಾರವಾಗುತ್ತದೆ, ನಮ್ಮೊೊಂದಿಗೆ ವ್ಯವಹರಿಸಲಾಗುತ್ತದೆ. ಸಂಬಳ ಉತ್ಪ್ರೇಕ್ಷೆ ಮಾಡಿ ಹೇಳುವ ಭೂಪರು!
ಇಂತಹ ಪ್ರಶ್ನೆಗಳಿಗೆ ಕೆಲವರು ಹಿಂಜರಿಕೆಯಿಲ್ಲದೇ ಉತ್ತರಿಸುತ್ತಾರೆ. ಇನ್ನು ಕೆಲವರು ಏನೆಂದು ಉತ್ತರಿಸಲಿ ಎಂದು ಯೋಚ
ನಾಲಹರಿಯಲ್ಲಿರುತ್ತಾರೆ. ಇನ್ನೂ ಕೆಲವರು ಭೂಪರಿರುತ್ತಾರೆ, ತಮ್ಮ ಹುದ್ದೆೆ, ಸಂಬಳ ಇತ್ಯಾದಿಗಳನ್ನು ಸಾಕಷ್ಟು ಉತ್ಪ್ರೇಕ್ಷೆ ಮಾಡಿ ಉತ್ತರಿಸುತ್ತಾರೆ! ಈ ಪ್ರಶ್ನೆ ಮತ್ತು ಉತ್ತರದ ಭರಾಟೆಯಲ್ಲಿ ಎದುರಿನವರು ವ್ಯವಹರಿಸುವ ರೀತಿಯೇ ಬದಲಾಗುತ್ತದೆ.
ಆತನ ನಿರೀಕ್ಷೆಗೂ ಕಡಿಮೆ ಎನ್ನಿಸುವಂಥ ಕೆಲಸದಲ್ಲಿದ್ದೀರೆಂದರೆ, ಒಂದೆರಡು ಮಾತಾಡಿ, ಮೂದಲಿಸುವ ರೀತಿ ಮುಖಮಾಡಿ
ಮುಂದೆ ಸಾಗುತ್ತಾನೆ. ನಾವೂ ಅಷ್ಟೇ, ಎದುರಿನವ ಏನು ಮಾಡುತ್ತಾನೆ, ಆತನ ಧಿರಿಸು ಹೇಗಿದೆ, ಆತ ಕಾರಿನಲ್ಲಿ ಬಂದಿದ್ದಾನೆಯೋ, ಬೈಕೇರಿ ಬಂದಿದ್ದಾನೆಯೋ ಎನ್ನುವುದನ್ನೆಲ್ಲ ಒಳಮನಸ್ಸಿನಲ್ಲಿ ಲೆಕ್ಕ ಹಾಕಿ ಆತನೊಂದಿಗೆ ಹೇಗೆ ನಡೆದುಕೊಳ್ಳಬೇಕು, ಎಷ್ಟು ಮಾತನಾಡಬೇಕು, ಎಷ್ಟು ಗೌರವ ಕೊಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ.
ನಾವು ಮಾಡುವ ಕೆಲಸ, ನಮ್ಮ ಆರ್ಥಿಕ ಸ್ತರದ ಆಧಾರದ ಮೇಲೆಯೇ ಎದುರಿನವರು ನಮ್ಮನ್ನು ಅಳೆಯುತ್ತಾರಾದ್ದರಿಂದ,
ನಿರಂತರವಾಗಿ ಜನರಿಗೆ ನಮ್ಮನ್ನು ನಾವು ರುಜುವಾತು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಒತ್ತಡ ಮನಸ್ಸಿನಲ್ಲಿ ತಹತಹಿಸುತ್ತಲೇ ಇರುತ್ತದೆ. ಜನರು ಹಣವಿಲ್ಲದಿದ್ದರೂ ಸಾಲ ಮಾಡಿ ಕಾರು ಖರೀದಿಸುವುದು, ಮನೆಯ ತುಂಬಾ ಸಾಮಾನು ಗಳನ್ನು ತುಂಬಿಕೊಳ್ಳುವುದು, ಲೋನ್ ತೀರಿಸುವ ಶಕ್ತಿ ಇಲ್ಲದಿದ್ದರೂ ಮನೆ ಖರೀದಿಸುವುದು, ಐಷಾರಾಮಿ ಜೀವನ ತೋರ್ಪಡಿಸಿ ಕೊಳ್ಳುವುದು, ಹಲವು ಬಾರಿ ಹೊಟೇಲ್ ಗಳಿಗೆ ಹೋಗಿ ಹಣ ಖರ್ಚು ಮಾಡುವುದು ಹೀಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಅಂತಸ್ತನ್ನು ಹೊರಜಗತ್ತಿಗೆ ಕಾಣಿಸುವಂತೆ ಮಾಡುತ್ತಾರೆ.
ನಮ್ಮನ್ನು ಜನರು ಪ್ರೀತಿಸಬೇಕೆಂದರೆ, ಗೌರವಿಸಬೇಕೆಂದರೆ, ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಬೇಕೆಂದರೆ, ನಮ್ಮೊಂದಿಗೆ
ಉತ್ತಮವಾಗಿ ವರ್ತಿಸಬೇಕೆಂದರೆ ಹಣ-ಅಧಿಕಾರದಿಂದ ಮಾತ್ರ ಸಾಧ್ಯ ಎನ್ನುವ ಭಾವನೆಯೇ ನಮ್ಮಲ್ಲಿ ನಿರಂತರ ಅಶಾಂತಿ ಮನೆಮಾಡುವಂತೆ ಮಾಡಿರುತ್ತದೆ. ಕೆಲಸದಲ್ಲಿ ಆಸಕ್ತಿ ಹುಟ್ಟುತ್ತಿಲ್ಲ, ನೆಮ್ಮದಿ ಸಿಗುತ್ತಿಲ್ಲ ಎನ್ನುವ ಬಹುತೇಕರ ವೇದನೆಯ ಹಿಂದೆ, ಆ ಕೆಲಸ, ಆ ಸಂಬಳ ಸಮಾಜದಲ್ಲಿ ನನಗೆ ಒಂದು ಘನತೆಯನ್ನು, ಘನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಿಲ್ಲ, ಎದುರಿನವರ ಕಣ್ಣಲ್ಲಿ, ಮನೆಯವರ ಕಣ್ಣಲ್ಲಿ ಗೌರವ ಭಾವನೆಯನ್ನು ಹುಟ್ಟುಹಾಕುತ್ತಿಲ್ಲ ಎನ್ನುವ ನೋವು ಅಧಿಕವಾಗಿರುತ್ತದೆ. ಈ ಕಾರಣಕ್ಕಾಗಿಯೇ ಹಣ, ಅಧಿಕಾರದ ಹಿಂದೆ ಓಡುವವರನ್ನು ಯಾರಾದರೂ ಸ್ವಾರ್ಥಿಗಳು ಎಂದು ಕರೆದರೆ ಪೂರ್ಣವಾಗಿ ಒಪ್ಪುವಂತಹ ಮಾತಲ್ಲ. ಬಹುತೇಕರು ಸ್ವಾರ್ಥಿಗಳಾಗಿರುವುದಿಲ್ಲ. ಅವರು ಅಧಿಕಾರಕ್ಕಾಗಿ ಹಪಹಪಿಸುವುದು, ಹಣ ಸಂಗ್ರಹಿಸಲು ಹೆಣಗುವುದು, ಅದ ರಿಂದ ತಮಗೆ ಸಮಾಜದಲ್ಲಿ ಗೌರವ ಹೆಚ್ಚಳಗೊಳ್ಳುತ್ತದೆ ಎಂಬ ಭಾವನೆಯಿಂದ ತಾನೆ!
ಬಾಲ್ಯದಲ್ಲೇ ಬುನಾದಿ
ವಾಸ್ತವವೇನೆಂದರೆ, ಮನುಷ್ಯನ ಬದುಕಿನ ನೀಲನಕ್ಷೆ ತಯಾರಾಗುವುದು ಆತನ ಬಾಲ್ಯದಲ್ಲಿಯೇ. ಕೆನಡಾದ ಮನಃ ಶಾಸ್ತ್ರಜ್ಞ ಜೋರ್ಡನ್ ಪೀಟರ್ಸನ್ ಅವರ ಮಾತುಗಳು ನಿಜೆ ನಿಸುತ್ತದೆ. ಯಾವ ಮಕ್ಕಳು ಬಾಲ್ಯದಲ್ಲಿ ಪೋಷಕರಿಂದಾಗಲಿ, ಮಿತ್ರರಿಂದಾ ಗಲಿ ಅವಗಣನೆಗೆ ಗುರಿಯಾಗಿರುತ್ತಾರೋ ಅವರು ಮುಂದೆ ತಮ್ಮಲ್ಲಿರುವ ಈ ಅಭಾವವನ್ನು ತುಂಬಿಕೊಳ್ಳಲು ಅಧಿಕಾರ, ತಮ್ಮ ಸ್ಥಾನಕ್ಕಾಗಿ ಹಪಹಪಿಸುವುದು ಅಧಿಕ ಎನ್ನುತ್ತಾರೆ. ಇದಕ್ಕೆ ಇನ್ನೊಂದು ಅರ್ಥವೂ ಇದೆ. ಹಣ, ಅಧಿಕಾರಕ್ಕಾಗಿ ಹಂಬಲಿಸು ವವರನ್ನು ನಾವು ಸ್ವಾರ್ಥಿಗಳು, ದುಷ್ಟರು ಎಂದು ನೋಡುವ ಬದಲು ಅವರನ್ನು ಸಹಾನುಭೂತಿಯಿಂದಲೂ ನೋಡಬೇಕಿದೆ!
ದುರಂತವೆಂದರೆ, ಇಂದು ಬಹುತೇಕರ ಬಾಲ್ಯವು ಈ ರೀತಿಯ ಅವಗಣನೆ, ಅಭಾವದ ಪ್ರೀತಿ ಅಗೌರವದಿಂದಲೇ ತುಂಬಿರುತ್ತದೆ. ಆ ನಿರ್ಯಾತವನ್ನು ಕೊನೆಗಾಣಿಸುವ ಪ್ರಯತ್ನಗಳೆಲ್ಲ ವಿಫಲವಾಗುತ್ತಾ ಹೋದಂತೆ, ಇನ್ನು ತನ್ನಿಂದ ಏನೂ ಸಾಧಿಸಲಾಗದು ಎಂಬ ಭಾವನೆ ಬೆಳೆಯುತ್ತಾ ಹೋದಂತೆ ವ್ಯಕ್ತಿಯಲ್ಲಿ ಕೀಳರಿಮೆ ಹೆಚ್ಚಾಗುತ್ತದೆ, ನೆಮ್ಮದಿ ಮರೀಚಿಕೆಯೆಂದೆನಿಸಲಾರಂಭಿಸುತ್ತದೆ. ಮಾಡುತ್ರಿರುವ ಕೆಲಸ ಖುಷಿ ಕೊಡುತ್ತಿಲ್ಲ, ತೃಪ್ತಿ ತರುತ್ತಿಲ್ಲ ಎನ್ನುವ ಅಸಮಾಧಾನ ಹೆಚ್ಚುತ್ತಾ ಹೋಗುತ್ತದೆ.
ಹಾಗಿದ್ದರೆ ಇದಕ್ಕೆ ಪರಿಹಾರವೇನು? ಇದೊಂದು ಬಹು ದೊಡ್ಡ ಪ್ರಶ್ನೆ ಎಂದೇ ಹೇಳಬೇಕು. ಇದಕ್ಕೆ ಪರಿಹಾರವನ್ನು ಕೇವಲ ಒಬ್ಬರಿಂದ ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಂತಸ್ತು, ಗೌರವ, ಇತರರು ಬೆಲೆ ಕೊಡುವುದು, ಸಮಾಜದಲ್ಲಿ ಸ್ಥಾನಮಾನ ಇವೆಲ್ಲವನ್ನೂ ನಿರ್ಧರಿಸಲು ಆ ಒಬ್ಬ ವ್ಯಕ್ತಿಯ ಪ್ರಯತ್ನ ಸಾಕಾಗುವುದಿಲ್ಲ. ಇಡೀ ಮಾನವ ಕುಲದ ಮನಃಸ್ಥಿತಿಯೇ ಅದಕ್ಕಾಗಿ ಬದಲಾಗಬೇಕಿದೆ. ಸಮಾಜದಲ್ಲೇ ಅದಕ್ಕೆ ಸೂಕ್ತ ಬದಲಾವಣೆ ಬರಬೇಕಾಗಿದೆ. ಮಕ್ಕಳನ್ನು ಅವಗಣಿಸದೇ ಅವರಲ್ಲಿ ಅತೀವ ಕೀಳರಿಮೆ ಹುಟ್ಟಿಕೊಳ್ಳ ಪ್ರೀತ್ಯಾದರಗಳಿಂದ ಕಾಣಬೇಕು. ಮಕ್ಕಳು ಬೆಳೆಯುತ್ತಿರುವಾಗ, ಅವರಲ್ಲಿ ಆತ್ಮ ವಿಶ್ವಾಸ ಅಭಿವೃದ್ಧಿ ಹೊಂದುವಂತೆ ಪೋಷಕರು, ಜತೆಯಲ್ಲಿರುವವರು, ಉಪಾಧ್ಯಾಯರು ಮತ್ತು ಸಮಾಜ ನೋಡಿಕೊಳ್ಳಬೇಕು. ವ್ಯಕ್ತಿಯೊಬ್ಬ ಯಾವುದೇ ಕೆಲಸದಲ್ಲಿರಲಿ, ಆತ ಎಷ್ಟೇ ಹಣ ಸಂಪಾದಿಸುತ್ತಿರಲಿ ಯಾವುದೇ ಉದ್ಯೋಗದಲ್ಲಿರಲಿ ಆತನನ್ನು ಸೂಕ್ತ ಗೌರವದಿಂದ ಕಾಣುವಂತಾಗಬೇಕು.
ವ್ಯಕ್ತಿಯೊಬ್ಬನ ಬಳಿ ಹಣ ಕಡಿಮೆ ಇದ್ದರೂ, ಆತನ ಹುದ್ದೆ ಸಾಮಾನ್ಯವಿದ್ದರೂ, ಆತನ ವ್ಯಕ್ತಿತ್ವಕ್ಕೆ ಬೆಲೆ ದೊರೆಯಬೇಕು,
ಸಮಾಜದಲ್ಲಿ ಸಮಾನ ಗೌರವ ದೊರೆಯಬೇಕು. ಈ ಬದಲಾವಣೆಗೆ ನಾವೆಲ್ಲ ಸಿದ್ಧರಿದ್ದೇವೆಯೇ?