Thursday, 12th December 2024

ನಾಳೆಯ ದಿನದ ಬದುಕು

ರವಿಂದ್ರ ಸಿಂಗ್ ಕೋಲಾರ

ವಾಸ್ತವ ಜೀವನದಲ್ಲಿ ನಾವು ಬದುಕಿಯೂ ಸತ್ತಂತ್ತಿದ್ದೇವೆ ಅಂದರೆ ಆಶ್ಚರ್ಯವಾಗಲೇಬೇಕು! ದೇವರು ನಮ್ಮ ಇರುವಿಕೆಯಲ್ಲೇ ಎಷ್ಟೋ ಆನಂದದಾಯಕ, ಶಾಂತಿದಾಯಕ ಜೀವನವನ್ನು ಕರುಣಿಸಿದ್ದಾನೆ.

ಅನುಮಾನದ ಛಾಯೆ ನಮ್ಮ ಮೈಯಲೆಲ್ಲಾ ತುಂಬಿರುವುದರಿಂದ ತೃಪ್ತಿದಾಯಕ ಜೀವನವನ್ನು ನೋಡುವ ಕಣ್ಣಿರದೆ ನಾವು ಕುರುಡರಾಗಿದ್ದೇವೆ. ವಿಪರ್ಯಾಸವೆಂದರೆ ಇರುವುದೆಲ್ಲವ ಬಿಟ್ಟು ನಾಳೆಯ ಕನಸಿಗೆ ಹಾತೊರೆಯುತ್ತೇವೆ. ಕೈಗೆಟುಕದ ಗಗನ ಕುಸುಮವನ್ನು ಅಪೇಕ್ಷಿಸುವುದು, ಬಿಸಿಲ್ಗುದುರೆಯ ಕಂಡು ಮೋಹಕ್ಕೊಳಗಾಗುವುದು, ಮನುಷ್ಯನ ಮೆದುಳಿನಲ್ಲಿ ತಲ್ಲಣವನ್ನು ಸೃಷ್ಠಿಮಾಡುವಂಥ ಈ ರೀತಿಯ ಆಸೆಗಳು, ದೊರೆತಿರುವ ಭವ್ಯ ಬದುಕನ್ನು ಆಸ್ವಾದಿಸಲಾಗದಂತೆ ಮನುಜನನ್ನು ನತದೃಷ್ಟನನ್ನಾಗಿ ಮಾಡಲು ಹೊರಟಿವೆ.

ನಾಳೆ ಎಂಬ ಪದವೇ ನಶ್ವರದ ಅರ್ಥವನ್ನು ಸೂಚಿಸುವಾಗ, ನಾಳೆಯ ಬದುಕಿನ ಕುರಿತು ಮನುಷ್ಯನೇಕೆ ಇಷ್ಟೊಂದು ಗಂಭೀರ ನಾಗುತ್ತಾನೆ ಎಂಬುದೇ ಆಶ್ಚರ್ಯ. ನಶ್ವರ ಬಾಳಿನ ತಿರುಳನ್ನು ಅರಿಯದೆ ಭ್ರಾಂತರಾಗಿದ್ದವರು ಎಷ್ಟೊ ಮಂದಿ ಭೂಮಿಮೇಲೆ ಜನಿಸಿ ಅಳಿಸಿ ಹೋಗಿದ್ದಾರೆ. ವ್ಯರ್ಥ ಬದುಕು ನೆಮ್ಮದಿಯನ್ನು ಕಸಿದುಕೊಂಡು ಆಸೆಯ ಪಾಶಕ್ಕೆ ಮನುಷ್ಯನ ಬಂಧಿಸಿಡುತ್ತೆ.
ಮಗುವಿಗಾಗಿ ಕನವರಿಸುವ ಮಕ್ಕಳಿಲ್ಲದ ದಂಪತಿಗಳಿಗೆ ಒಂದು ಚಿಂತೆಯಾದರೆ, ಮಕ್ಕಳಿಂದ ಶೋಷನೆಗೆ, ಹಾಗೂ ತಿರಸ್ಕಾರಕ್ಕೆ
ಒಳಪಟ್ಟಂಥ ಮಕ್ಕಳ ಹೆತ್ತವರಿಗೆ ನೂರಾರು ಚಿಂತೆಗಳಿರುವುದನ್ನು ನಾವು ಕಾಣುತ್ತಿದ್ದೇವೆ.

ಬುದ್ಧನು ಸಾರಿದಂತೆ, ‘ನಿನಗೆ ದುಖಃ ಆವರಿಸಿದೆ ಎಂದರೆ, ಆ ದುಖಃದ ಹಿಂದಿರುವ ನಿನ್ನ ಆಸೆಯ ಕುಣಿದಾಟವೇ ಅದಕ್ಕೆ ಮೂಲ ಕಾರಣವಾಗಿರುತ್ತದೆ’ ಎಂಬ ಮಾತನ್ನು ಪುರಸ್ಕರಿಸಬೇಕಾಗುತ್ತೆ. ಆಸೆಯೆಂದರೆ ಮನಸ್ಸಿನ ಮುಂದಿರುವ, ಕಣ್ಣಿಗೆ ಗೋಚರಿಸದೆ ನಾಳೆಯ ಬದುಕನ್ನು ಬಣ್ಣಬಣ್ಣವಾಗಿ ಆಕರ್ಷಿಸುವ ಒಂದು ವಿಧಾನ. ವಿಚಿತ್ರವೆಂದರೆ ಎಲ್ಲ ಬಲ್ಲವನಾಗಿರುವ ಮನುಷ್ಯ ತನಗೆ ದಕ್ಕಿರುವುದನ್ನು ಅನುಭವಿಸಿ ಅದರಲ್ಲೇ ಸುಖಿಸುವ ಸ್ಥಿತಿಯಲ್ಲಿ ಇರಲು ತಯಾರಿಲ್ಲ. ಅವನದೇನಿದ್ದರೂ, ನಾಳೆಯ ನಿರೀಕ್ಷೆ ಯಲ್ಲಿ ದುಗುಡಗಳನ್ನು ಮೈಮೇಲೆ ಹಾಕಿಕೊಂಡು ಹುಚ್ಚು ಹುಮ್ಮಸ್ಸಿನಲ್ಲಿ ಒದ್ದಾಡುವ ಪ್ರಾರಬ್ದ. ಇನ್ನಷ್ಟು ಬೇಕು ಎಂಬ
ಹಪಹಪಿ, ಶ್ರೀಮಂತಿಕೆಯನ್ನು ಹೆಚ್ಚಿಸಬೇಕು ಎಂಬ ದುರಾಸೆ, ಸುಖದ ಮಹಾಪೂರವನ್ನೇ ಆಸೆಪಡುವ ತುಡಿತ, ಇವೆಲ್ಲವೂ
ಮನುಷ್ಯನ ಗುಣಗಳೆನಿಸಿವೆ.

ದುರಾಸೆಯ ದಾಸನಾದ ಮನುಷ್ಯಜೀವಿ ಎನಿಸಿಕೊಂಡವನು ತನಗರಿವಿಲ್ಲದೆ ತನಗೆ ಕೇಡನ್ನು ತಂದೊಡ್ಡುವ ಕೆಲಸಗಳನ್ನು
ಮಾಡುತ್ತಾ ಹೋಗುತ್ತಾನೆ. ಕಡೆಗೆ ಇದರ ಪ್ರತಿಫಲವನ್ನು ಅನುಭವಿಸುವಾಗ ಅದರಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಾನೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತನ್ನ ಆಸೆಗಳ ಪ್ರಭಾವವನ್ನು ಬಿತ್ತುತ್ತಾ ಜೀವನ ಸವೆಸುವ ಮನುಷ್ಯ, ಶಾಶ್ವತವಲ್ಲದ ವಸ್ತುಗಳನ್ನು
ತನ್ನದಾಗಿಸಿಕೊಳ್ಳುವ ಚಂಚಲತೆಯಲ್ಲಿ ವಾಸ್ತವ ಬದುಕನ್ನೇ ಅಂಧಾಕಾರದಲ್ಲಿ ಮುಳುಗಿಸಿಡುವನು. ಅಂದರೆ ಪುಣ್ಯ ಸಂಪಾದನೆ ಯಿಂದ ಬಹು ದೂರ ಉಳಿದುಬಿಡುತ್ತಾನೆ.

ಕೇವಲ ತನ್ನ ಬದುಕನ್ನೇ ಮುಖ್ಯವಾಗಿಸಿಕೊಂಡವನಿಗೆ, ಯಾರ ಸಂತೋಷದಲ್ಲೂ ಭಾಗಿಯಾಗಿ ರಮಿಸುವ ವಿಸ್ತಾರತೆ ಇರುವು ದಿಲ್ಲ. ಕಾಲಗತಿ ಕ್ರಮಿಸಿದಂತೆ ಇನ್ನೊಬ್ಬರ ಕಷ್ಟದಲ್ಲಿ ನೆರವಾಗುವ ಅಥವ ಮಿಡಿಯುವ ಹೃದಯ ವೈಶಾಲ್ಯತೆಯನ್ನೇ ಅವನು ಮರೆತುಬಿಡುವನು. ನಾಳೆ ಎಂಬ ಕತ್ತಲಿನಲ್ಲಿ ಕಪ್ಪುಮಾರ್ಜಾಲವನ್ನು ಹುಡುಕುತ್ತಾ ವಾಸ್ತವ ಬದುಕಿನ ಮೌಲ್ಯವನ್ನೇ ಮರೆತು ಬಿಡುವ ಸ್ಥಿತಿ ತಲುಪುತ್ತಾನೆ. ನರರೂಪಿ ಮನುಷ್ಯನಾದವನು ತನ್ನ ಮನುಷ್ಯತ್ವದಿಂದ ಬದುಕನ್ನು ಸಾಗಿಸಿದರೆ ಮಾತ್ರ ತನ್ನನ್ನು ತಾನು ಉದ್ಧರಿಸಿಕೊಳ್ಳಬಲ್ಲ. ಅಲ್ಲದೆ ಅವನು ಹಾಕಿಕೊಂಡಿರುವ ಅಜ್ಞಾನದ ಬೇಲಿಯನ್ನು ಜ್ಞಾನವೆಂಬ ಆಯುಧದಿಂದ ಕತ್ತರಿಸಿದರೆ ಸಾರ್ಥಕತೆಯೂ ಹೊಂದಬಲ್ಲ.

ಧೂಳು ಮುಚ್ಚಿದ ಕಣ್ಣನ್ನು ಶುಭ್ರಗೊಳಿಸಲು ಪ್ರಯತ್ನಪಟ್ಟರೆ ಪ್ರಪಂಚವೆಂಬ ಕನ್ನಡಿಯಲ್ಲಿ ತನ್ನನ್ನು ತಾನು ಚೆಂದವಾಗಿ
ನೋಡಿಕೊಳ್ಳಬಹುದು. ಪ್ರೀತಿ ತುಂಬಿದ ಕಣ್ಣುಗಳಿಂದ ಆಗ ಮಾತ್ರ ನಾವು ಎಲ್ಲರನ್ನೂ ನಮ್ಮವರೇ ಎಂದು ಭಾವಿಸಲಿಕ್ಕೆ ಸಾಧ್ಯ. ಸ್ವಾರ್ಥ ತುಂಬಿಕೊಂಡ ಮನಸ್ಸಲ್ಲಿ ಏನನ್ನು ಪಡೆಯಲಿಕ್ಕೆ ಆಗದು. ಕೊನೆಯಲ್ಲಿ ಉಳಿಯುವುದು ಪ್ರೀತಿ. ಈ ಜಗತ್ತಿನಲ್ಲಿ
ಪ್ರೀತಿಯೇ ನಿಜವಾದದ್ದು.