Thursday, 12th December 2024

ಪ್ರೀತಿಯೇ ಜೀವನದ ತಿರುಳು

ರಶ್ಮಿ ಹೆಗಡೆ ಮುಂಬೈ

ಈ ಜಗತ್ತಿನ ಮೂಲಾಧಾರ ಪ್ರೀತಿ. ಪ್ರೀತಿಯೇ ಬದುಕು, ಬೆಳಕು. ನೋವಿನ ದಿನಗಳಲ್ಲಿ ಒಬ್ಬರಿಗೊಬ್ಬರು ಆಸರೆಯಾದಾಗ, ಪ್ರೀತಿ ಬೆಳಗುತ್ತದೆ,
ಜಾಜ್ವಲ ಮಾನವಾಗುತ್ತದೆ.

ಆಕೆ ಬುದ್ಧಿವಂತೆ, ವಿದ್ಯಾವಂತೆ. ವೃತ್ತಿಯಲ್ಲಿ ಇಂಜಿನಿಯರ್. ಆಂತರಿಕ ಸೌಂದರ್ಯದ ಜೊತೆ ಬಾಹ್ಯ ಸೌಂದರ್ಯವೂ ಮೇಳೈಸಿದ, ಆಕರ್ಷಕ ವ್ಯಕ್ತಿತ್ವದ ಹೆಣ್ಣು. ಗಂಡನ ಮನೆಯಲ್ಲಿ ಎಲ್ಲರ ಅಚ್ಚುಮೆಚ್ಚು. ಮದುವೆಯಾಗಿ ಒಂದು ವಸಂತ ಕಳೆದಿತ್ತಷ್ಟೇ. ಎಲ್ಲವೂ ಸರಾಗವಾಗಿಯೇ ಸಾಗುತ್ತಿತ್ತು. ಸಂಸಾರದಲ್ಲಿ ಸಾಮರಸ್ಯ ವಿತ್ತು. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಸಂಭವಿಸಿದ ದುರ್ಘಟನೆಯೊಂದು ಜೀವನದ ದಿಕ್ಕನ್ನೇ ಬದಲಾಯಿಸಿತ್ತು.

ಆಫೀಸಿನಿಂದ ಸ್ಕೂಟರಿನಲ್ಲಿ ಬರುವಾಗ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಗರ್ಭಕೋಶಕ್ಕೆ ಪೆಟ್ಟು ಬಿದ್ದು ಆಕೆ ಸಂತಾನ ಶಕ್ತಿಯನ್ನೇ ಕಳೆದು ಕೊಂಡಿದ್ದಳು. ಒಂದು ಕಾಲು ಅವಳ ದೇಹದಿಂದ ಬೇರ್ಪಟ್ಟಿತ್ತು. ಸಾಮಾನ್ಯರಂತೆ ಓಡಾಡಿಕೊಂಡಿದ್ದ ಆಕೆಯ ಕಾಲಿಗೆ ತಾತ್ಕಾಲಿಕವಾದ ಜೈಪುರ ಕಾಲನ್ನು ಅಳವಡಿಸಲಾಯಿತು. ಅವಳ ವೈಯಕ್ತಿಕ, ಕೌಟುಂಬಿಕ ಹಾಗೂ ದಾಂಪತ್ಯ ಜೀವನದಲ್ಲಿ ಬಿರುಗಾಳಿಯ ಸುಳಿ ಏಳಲಾರಂಭಿಸಿತು. ಆಕೆಯ ಸುತ್ತಮುತ್ತಲಿನ ವ್ಯಕ್ತಿಗಳೂ ಬದಲಾಗತೊಡಗಿದರು.

ಕೌಟುಂಬಿಕ ಸಂಬಂಧಗಳು ಗೋಸುಂಬೆಯಂತೆ ಕ್ಷಣಕ್ಷಣಕ್ಕೆ ಬಣ್ಣ ಬದಲಾಯಿಸತೊಡಗಿದವು. ಆಕೆಗೆ ಅಂಗವಿಕಲೆಯ ಪಟ್ಟ ಕಟ್ಟಲಾಯಿತು. ಪತ್ನಿಯಿಂದ ಸಿಗದ ದೈಹಿಕ ಹಾಗೂ ಮಾನಸಿಕ ಸುಖದ ಅಭಾವ ಪತಿಯ ಮನಸ್ಸನ್ನು ಕಾಡಿ, ಚಂಚಲಗೊಳಿಸಿತು. ಆತ ಹೆಂಡತಿಯನ್ನು ನಿರ್ಲಕ್ಷಿಸತೊಡಗಿದ. ವಂಶದ ಕುಡಿಯನ್ನು
ಹೆತ್ತು ಕೊಡುವ ಶಕ್ತಿಯೂ ಇಲ್ಲದ ನಿಷ್ಪ್ರಯೋಜಕಳೆಂಬ ಅಪವಾದ, ಅಪಹಾಸ್ಯಕ್ಕೆ ಗುರಿಯಾಗಿ ಎಲ್ಲರಿಂದ ತಿರಸ್ಕರಿಸಲ್ಪಟ್ಟಳು.ಯಾರಿಗೂ ಬೇಡವಾದಳು.

ತವರೂರ ದಾರಿ ಹಿಡಿದು

ಇನ್ನು ಈಕೆಯಿಂದ ಕುಟುಂಬಕ್ಕೆ ಯಾವ ಪ್ರಯೋಜನವೂ ಇಲ್ಲ. ಮಗನಿಗೆ ತಕ್ಕ ಪತ್ನಿ,ಅತ್ತೆಗೆ ತಕ್ಕ ಸೊಸೆಯಾಗಲಾರದ ಆಕೆಯನ್ನು ಕುಟುಂಬದಿಂದ ದೂರ ಮಾಡುವುದೇ ಒಳಿತೆಂದು ನಿರ್ಧರಿಸಿ, ವಿಚ್ಛೇದನಕ್ಕೆ ಒತ್ತಾಯಿಸಿದರು. ತನಗೆ ಎರಗಿದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥ
ಮಾಡಿಕೊಂಡು, ಕೈ ಹಿಡಿದ ಗಂಡನಿಗೇ ತಾನು ಬೇಡವಾದಮೇಲೆ ಇನ್ನು ಇಲ್ಲಿರುವುದು ತರವಲ್ಲವೆಂದು ಮನಸಿಲ್ಲದ ಮನಸ್ಸಿನಿಂದ ವಿಚ್ಛೇದನ ನೀಡಿ ತವರಿಗೆ
ಬಂದಳು.

ತಾಯಿಯು ಮಗಳ ನೋವಿಗೆ ಸ್ಪಂದಿಸಿ, ಸಾಂತ್ವನ ನೀಡಿ, ಪ್ರೀತಿ ಕಾಳಜಿ ತೋರಿದ್ದರೂ, ಅಣ್ಣ ಅತ್ತಿಗೆಯ ವರ್ತನೆ ಮಾತ್ರ ದಿನದಿಂದ ದಿನಕ್ಕೆ ಬದಲಾಗ ತೊಡಗಿತ್ತು. ತವರಿಗೂ ತಾನು ಬೇಡವಾದೆ ಎಂಬ ನೋವು ಆಕೆಗೆ ಕಾಡತೊಡಗಿತು. ಮಗಳ ಜೀವನ ಹೀಗಾಯಿತೆಂಬ ನೋವಿಗೆ ತಾಯಿ ಹಾಸಿಗೆ ಹಿಡಿದಳು. ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ತೀರಿಕೊಂಡಳು.

ಒಂಟಿ ದಿನಗಳು 
ತಾಯಿ ಹೋದನಂತರ ಈಕೆ ತವರನ್ನು ತೊರೆದು ಬೇರೊಂದು ಮನೆ ಮಾಡಿ ಒಂಟಿ ಜೀವನ ಪ್ರಾರಂಭಿಸಿದಳು. ಮನೆಯಿಂದಲೇ ಕೆಲಸ ಮಾಡುತ್ತ ಆತ್ಮಬಲ ದಿಂದ ಧೈರ್ಯವಾಗಿ ಜೀವಿಸತೊಡಗಿದಳು. ಇತ್ತ ಆಕೆಯ ಮಾಜಿ ಪತಿಗೆ ಮರು ಮದುವೆ ನಡೆದಿತ್ತು. ಹೊಸ ಸೊಸೆಗೆ ಎಲ್ಲರ ಇಚ್ಛೆಯಂತೆ ಒಂದು ಮಗುವೂ ಹುಟ್ಟಿತು. ಆದರೆ ಆಕೆಯ ಗುಣವೇ ಬೇರೆ. ತಾನು, ತನ್ನ ಗಂಡ, ಮಗು ಇಷ್ಟೇ ಪ್ರಪಂಚ ಎನ್ನುವವಳು. ಮಗನೂ ಸಹ ಹೆಂಡತಿಯ ದಾಸ ನಾಗಿದ್ದ. ಮೊದಲಿನ ಸೊಸೆಯಲ್ಲಿದ್ದ ಒಳ್ಳೆಯ ರೀತಿ ನೀತಿ, ಆಕೆ ತೋರುತ್ತಿದ್ದ ಪ್ರೀತಿ ಕಾಳಜಿ ಎರೆಡನೆಯವಳಲ್ಲಿರಲಿಲ್ಲ. ಕೆಲವು ದಿನಗಳ ಬಳಿಕ ಮಗನಿಗೆ ಹೆಚ್ಚಿನ ಭಡ್ತಿಯೊಂದಿಗೆ ಅಮೆರಿಕದಲ್ಲಿ ಕೆಲಸ ಸಿಕ್ಕಿತು. ಒಬ್ಬಂಟಿಯಾಗಿರುವ ಅಮ್ಮನಿಗಿಂತ ಅಮೆರಿಕದ ದೊಡ್ಡ ಕೆಲಸವೇ ಮುಖ್ಯ ಎಂದೆನಿಸಿ, ಮಗ ಅಮ್ಮನನ್ನು ವೃದ್ಧಾಶ್ರಮದಲ್ಲಿರಿಸಿ ಅಮೆರಿಕಕ್ಕೆ ಹಾರಿಹೋದ.

ಅಪರೂಪದ ಭೇಟಿ 

ಮಗ, ಸೊಸೆ, ಮೊಮ್ಮಗು, ಸಂಬಂಧಿಕರಿದ್ದರೂ ಅನಾಥೆಯಂತೆ ಜೀವಿಸತೊಡಗಿದಳು ಆ ವೃದ್ಧೆ. ಹೀಗಿರುವಾಗ ಒಂದು ದಿನ ವೃದ್ಧಾಶ್ರಮಕ್ಕೆ ಒಬ್ಬ ಮಹಿಳೆ ಆಕೆಯನ್ನು ಭೇಟಿಯಾಗಲು ಬಂದಳು. ಮಗ ಹೋದಾಗಿನಿಂದ ಸಂಬಂಧಿಕರ್ಯಾರೂ ಆಕೆಯನ್ನು ಕಾಣಲು ಅಲ್ಲಿಗೆ ಬಂದಿರಲಿಲ್ಲ. ಈಗ ತನ್ನನ್ನು ಯಾರು ಕಾಣಲು
ಬಂದಿದ್ದಾರೆಂದು ನೋಡಿದಾಗ ಆಕೆಗೆ ನಂಬಲಾಗಲಿಲ್ಲ. ಅದೇ ಕುಂಟಿ,ತಾನು ಯಾರನ್ನು ನಿಷ್ಪ್ರಯೋಜಕಳೆಂದು ಮನೆಯಿಂದ ಓಡಿಸಿದ್ದೇನೋ ಅವಳೇ. ಖಂಡಿತವಾಗಿ ತನ್ನನ್ನು ಬೈದು, ಹಂಗಿಸಿ, ಸೇಡು ತೀರಿಸಿಕೊಳ್ಳಲು ಬಂದಿರುವಳೆಂದು ಹೆದರುತ್ತಲೇ ಬಂದಳು.

ಆದರೆ ವಿಚಿತ್ರವೊಂದು ಕಾದಿತ್ತು. ‘ಅತ್ತೆ, ನೀವಿಲ್ಲಿರುವುದು ಹೇಗೋ ತಿಳಿಯಿತು. ಅನಾಥರಂತೆ ನಿಮ್ಮನ್ನು ಈ ಪರಿಸ್ಥಿತಿಯಲ್ಲಿ ನೋಡಲು ನನಗೆ ಹಿಂಸೆಯಾಗು ತ್ತಿದೆ. ಹೇಗೂ ನನಗೆ ಕೈಯಲ್ಲಿ ಕೆಲಸವಿದೆ, ನಿಮ್ಮ ಮಗನಿಂದ ಬರುತ್ತಿರುವ ವಿಚ್ಛೇದನಾ ವೇತನವಿದೆ. ಅದು ನಿಮ್ಮದೇ ಹಣ, ನಿಮಗೂ ಅದರಲ್ಲಿ ಹಕ್ಕಿದೆ ಅಮ್ಮಾ. ನನ್ನ ಜೊತೆ ಬಂದುಬಿಡಿ. ನನ್ನದೂ ಒಂಟಿ ಜೀವನ. ಆಗಿದ್ದೆಲ್ಲ ಕೆಟ್ಟ ಕನಸೆಂದು ಮರೆತುಬಿಡಿ. ನಿಮಗೆ ನಾನು ಮಗಳು, ನನಗೆ ನೀವು ತಾಯಿ ಎಂದು ಒಬ್ಬರಿಗೊಬ್ಬರಾಗಿ ಬದುಕನ್ನು ಸಾಗಿಸೋಣ’ ಎಂದಳು. ಮೂವತ್ತು ವರ್ಷ ವಯಸ್ಸಿನ ದೊಡ್ಡ ಮನಸ್ಸಿನ ಹೆಣ್ಣಿನೆದುರು ಎಪ್ಪತ್ತು ವರ್ಷ ವಯಸ್ಸಿನ ಮಹಿಳೆ ತನ್ನ ಸಣ್ಣ ಬುದ್ಧಿಗೆ ನಾಚಿ ತಲೆತಗ್ಗಿಸಿದಳು. ತಪ್ಪಿಗೆ ಪಶ್ಚತ್ತಾಪ ಪಡುತ್ತಾ, ಸಂಬಂಧ ಹಳೆಯದಾದರೂ, ನವ ಭಾದೊಂದಿಗೆ ಹೊಸ ಜೀವನವನ್ನು ಹಳೆಯ ಸೊಸೆಯೊಂದಿಗೆ ಪ್ರಾರಂಭಿಸಿದಳು. ಒಬ್ಬರಿಗೊಬ್ಬರು ಜಗತ್ತಾಗಿ, ಆಸರೆಯಾಗಿ ಬದುಕಿ ಬಾಳಿದರು.

ಈ ಜಗತ್ತೇ ಹಾಗೆ! ಇದ್ದಾಗ ಎಲ್ಲರೂ ನಮ್ಮವರು, ಇಲ್ಲದಿದ್ದಾಗ ನಮ್ಮವರೂ ದೂರವಾಗುವರು. ಆದರೆ ಅಂತಹ ಬದುಕಿಗೂ ಅರ್ಥವಿದೆಯೇ? ನಮ್ಮವರೆಂದ ಮೇಲೆ ಕಷ್ಟ ಬಂದಾಗ ಹೊರಗೆ ತಳ್ಳದೆ, ಪ್ರೀತಿ ಕಾಳಜಿ ತೋರದಿದ್ದರೆ ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಅಂತರವೇನಿರುವುದು? ಸಂಬಂಧಗಳ ಬೆಲೆ ತಿಳಿಯುವುದು ನೋವಿನ ಸಮಯದಲ್ಲಿ. ಸುಖವಿದ್ದಾಗ ಎಲ್ಲರೂ ಜೊತೆಗಿರುತ್ತಾರೆ, ಆದರೆ ಕಷ್ಟದ ಸಮಯದಲ್ಲೂ ಕೈ ಬಿಡದೆ ನಮ್ಮೊಂದಿಗಿದ್ದು ಯಾರು ಜೊತೆ ನಡೆಯುವರೋ ಅವರೇ ನಿಜವಾದ ಆತ್ಮೀಯರು. ಸಂಬಂಧಗಳಿಗೆ ಬೆಲೆ ಕೊಟ್ಟಾಗಲೇ ಆ ಜೀವನಕ್ಕೊಂದು ಅರ್ಥ.

ಕಷ್ಟ ಬಂದಾಗ ದೂರ ಸರಿಯದೆ, ಕಷ್ಟಕ್ಕೆ ನೆರಳಾಗಿ, ಜತೆಗಿದ್ದು ನಡೆದಾಗ ಜೀವನಕ್ಕೊಂದು ಅರ್ಥ ಸಿಗುವುದು. ಸಂಬಂಧಗಳಿಗೆ ಬೆಲೆ ಕೊಟ್ಟು ಮುನ್ನಡೆಯೋಣ. ಮನೆ ಚಿಕ್ಕದಿದ್ದರೂ ಮನಸ್ಸು ದೊಡ್ಡದಾಗಿರಲಿ. ಪರಸ್ಪರರಲ್ಲಿ ಪ್ರೀತಿ, ಕಾಳಜಿ, ಗೌರವ ತುಂಬಿರಲಿ.