ಸಾವಿತ್ರಿ ಶ್ಯಾನುಭಾಗ
ಪ್ರೀತಿಯ ಆಳ ಗೊತ್ತಿಲ್ಲದ ಹುಡುಗಿ ನಾ, ಪತ್ರ ಬರೆಯುವುದ ತಿಳಿಯದ ಅಮಾಯಕಿ ನಾ. ಇದೆನ್ನ ಮೊದಲ ಪ್ರೇಮಪತ್ರ.
ಈ ಕಾಲ, ಮೆಸ್ಸೇಜು, ವಾಟ್ಸಾಪ್ ಎಲ್ಲ ಬೋರು ಬಂದು ನಿನಗೊಂದು ಸರ್ಪ್ರೈಸಾಗಿ ಪತ್ರ ಬರೆಯುವ ಹುಕಿ ಬಂತು ಕಣೋ ನನಗೆ. ಶಾಲಾ ದಿನಗಳಲ್ಲಿ ಬರಿಯ ರಜಾ ಅರ್ಜಿ, ಕೆಲಸಕ್ಕಾಗಿ ಪತ್ರಗಳನ್ನು, ಪ್ರಬಂಧ ಅದು ಇದು ಅಂತ ಕಲಿಸಿದ ಗುರುಗಳು ಪ್ರೇಮಪತ್ರ ಬರೆಯೋದು ಹೇಗೆ ಅಂತ ಹೇಳೇಕೊಟ್ಟಿಲ್ಲ ನೋಡು.
ಅದಕ್ಕೆ ನನಗೆ ಪ್ರೇಮಪತ್ರ ಬರೆಯೋದು, ಪ್ರಾರಂಭ ಮಾಡೋದು ಹೇಗೆ ಅಂತಾನೆ ಗೊತ್ತಿಲ್ಲ. ಇನ್ನೂ ಈ ಪತ್ರದಲ್ಲಿ ವ್ಯಾಕರಣ, ಶಬ್ದ ಏನೇ ದೋಷಗಳಿದ್ದರೂ ನೀನು ನಗದೇ ನನ್ನ ಪಾತ್ರವನ್ನು ಓದಬೇಕೆಂದು ನನ್ನ ಮನವಿ.
ಪ್ರೇಮಪತ್ರದಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಬರೆಯಬೇಕೋ ಅಥವಾ ಬೇರೆ ಹೇಗೆ ಬರೆಯಬೇಕು ಒಮ್ಮೆ ನೀನೇ ಹೇಳು. ಪ್ರೀತಿಸಲು ಕಲಿಸಿದವನು ನೀನು ಈಗ ಪತ್ರ ಬರೆಯಲು ಅಂಚೆ ತರಗತಿ ತೆಗೆದುಕೊಳ್ಳಲು ಶುರುಮಾಡು. ಪತ್ರ ಒಂದನ್ನು ಬರೆದು ಕಳಿಸು, ಅಂಚೆ ಯಣ್ಣನೆಂಬ ರಾಯಭಾರಿ ಸಾಕೆಮಗೆ ನಮ್ಮ ಪ್ರೀತಿಯ ಸಂದೇಶ ಕಳಿಸಲು.
ಪಲ್ಲವಿ ಗೊತ್ತಾಗದೆ ಅನುಪಲ್ಲವಿಗಳ ಬರೆದಂತಿದೆ ಈ ಪತ್ರ. ಪ್ರಶ್ನೆಪತ್ರಿಕೆಯಂತೆ ಅನ್ನಿಸಿದರೆ ನನ್ನ ಮನ್ನಿಸು ಗೆಳೆಯ. ಹೊಂದಿಸಿ ಬರೆಯಲು, ಪ್ರಶ್ನೆ ಪ್ರಕಾರ ಲೆಕ್ಕ ಮಾಡಲು, ಒಂದು ಶಬ್ದದಲ್ಲಿ, ಹತ್ತು ವಾಕ್ಯದಲ್ಲಿ ಉತ್ತರಿಸಲು ಎನಗೆ ಗೊತ್ತು. ಆದರೆ ಬಿಟ್ಟ ಸ್ಥಳ ತುಂಬುವುದು ಪ್ರೀತಿಯಿಂದಲೇ ಸಾಧ್ಯ ಎಂದು ಎನಗೆ
ತಿಳಿದಿಹಿದು. ಪಾತ್ರಜ್ಞಾನವಿಲ್ಲದೆ, ಬರೆದಿಹ ಪಾತ್ರಕ್ಕೆ ನೂರಕ್ಕೆ ನೂರು ಕೊಟ್ಟು ಎ ಗ್ರೇಡ್ ಕೊಟ್ಟು, ಸ್ಟಾರ್ ನೀಡಿ, ಗೋಲ್ಡು ಮೆಡಲು ಎನಗೆ ಬೇಡ. ನನ್ನ ಪತ್ರ ನಿನಗೆ ತಲುಪಿ, ಅದನ್ನು ನೀನು ಓದಿದ ನಂತರ, ಪಾಸ್ ಗ್ರೇಡ್ ಅಂಕಗಳನ್ನು ನೀನು ನೀಡಿದರೆ, ಅಷ್ಟೇ ಸಾಕು ನನಗೆ.
ಅಯ್ಯೋ ಈ ಪತ್ರದಿಂದ ಕರೋನಾ ಬಂದೀತು ಎಂದು ಹೆದರಬೇಡ, ಸ್ಯಾನಿಟೈಝೆರ್ ಹಚ್ಚಿಯೇ ಕಳಿಸಿದ್ದೇನೆ. ಏಕೆಂದರೆ, ನಿನ್ನ ಆರೋಗ್ಯ ನನಗೆ ಮುಖ್ಯ, ನೀ ಎನ್ನ ಪ್ರೀತಿಯ ಗೆಳೆಯ ಅಲ್ಲವೆ! ಸಾಧ್ಯವಾದರೆ ಬೇಗ ಸಣ್ಣ ಉತ್ತರ ನೀಡುವ ಪತ್ರ ಬರೆದು ಅಂಚೆಗೆ ಹಾಕು. ನಾನು ಕಾರ್ಡು ಗೀಚಿದಕ್ಕೆ ಕ್ಷಮೆಯಿರಲಿ. ಇಂತಿ ನಿನ್ನ ಪತ್ರಕ್ಕಾಗಿ ಕಾಯುತ್ತಿರುವ ನಿನ್ನ ಹುಡುಗಿ.