Sunday, 15th December 2024

ಒಮ್ಮೆ ಮಡಿಲಲ್ಲಿ ಮಲಗಿಸಿಕೊಳ್ತೀಯಾ ಪ್ಲೀಸ್

ಅರ್ಪಿತಾ ಕುಂದರ್

ಪ್ರೀತಿ ಅಂದರೆ ಹೀಗೆಲ್ಲ ಇರುತ್ತೆ ಅಂತ ಗೊತ್ತೇ ಇರಲಿಲ್ಲ ಕಣೋ. ನನ್ನದೇ ಆದ ಲೊಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ಅದ್ಯಾಕೋ ನಿನ್ನ ಬಳಿ ಸೆಳೆದೆಯೊ ನಾ ಕಾಣೆ. ನಿನ್ನ ಮನದಲ್ಲಿ ನನಗೊಂದು ಸ್ಥಾನ ಸಿಕ್ಕಿತು ಎಂದು ತಿಳಿದ ನನಗಾದ ಸಂತಸ ಎಷ್ಟು ಗೊತ್ತಾ? ನೀನೇ ನನ್ನ ಸ್ವಂತ ಆಗಿ ಬಿಟ್ಟಿದ್ದೆ. ಮಧುರವಾದ ಸುವಾಸನೆ ಮನದೊಳಗೆ ಸುಳಿಯುತ್ತಿತ್ತು.

ಆದರೆ…
ನನಗೊಬ್ಬಳಿಗೆ ಸ್ವಂತವಾಗಿದ್ದ ನೀನು ಈಗ ಯಾಕೆ ವಿಚಿತ್ರವಾಗಿ ವರ್ತಿಸುತ್ತಿದ್ದಿ ಎಂದು ತಿಳಿಯಿತ್ತಿಲ್ಲ. ಅದು ಯಾರ ದೃಷ್ಟಿ ಬಿತ್ತೋ ಈ ನಮ್ಮ ನೈಜ ಪ್ರೇಮಕ್ಕೆ. ದಿನಂಪ್ರತಿ ಗಲಾಟೆ, ಕಣ್ಣೀರ ನಡುವೆ ನಾನು ನಿನ್ನ ದೂರ ಮಾಡಬೇಕಾಯಿತು. ಪ್ರತಿ ದಿನ ಮಾತಿನ ಮೂಲಕ ನಮ್ಮದೇ ಆದ, ಅದೊಂದು ಸುಂದರ ಮತ್ತು ಮೋಹಕ ಪ್ರಪಂಚಕ್ಕೆ ಹೋಗಿ ಬರುತ್ತಿದ್ದವರು ನಾವು. ಆದರೆ, ಈಗ ನಡೆಯುತ್ತಿರುವ ರಂಪಾಟಗಳ ನಡುವೆ ನನ್ನ ನಿನ್ನ ಪ್ರೀತಿ ಇಲ್ಲಿಗೆ ಮುಗಿದು ಹೋಗುತ್ತದೆ ಎಂದು ನಾನು ಕನಸಲ್ಲೂ ಅಂದು ಕೊಂಡಿರಲಿಲ್ಲ.

ಏಕೆಂದರೆ ನನ್ನ ನಿನ್ನ ನಡುವೆ ಅದ್ಯಾವ ಗಲಾಟೆಯಾದರೂ ಕೂಡ ಹೊಂದಾಣಿಕೆ ಕೂಡ ಹಾಗೆಯೇ ಇತ್ತು. ಯಾವತ್ತೂ ಯಾರೊ ಬ್ಬರಿಗೂ ಒಬ್ಬರನೊಬ್ಬರು ಬಿಟ್ಟು ಕೊಟ್ಟವರಲ್ಲ. ಅದೇನೇ ಮುನಿಸಿಕೊಂಡರೂ ನನ್ನಲ್ಲಿ ಕ್ಷಮೆ ಕೇಳುತ್ತಿದ್ದ ನೀನು ಇಂದು ನನ್ನ ಪಾಲಿಗೆ ಅದೇಕೆ ಮುನಿಸಿಕೊಂಡ ಮೂಕನಂತೆ ವರ್ತಿಸುತ್ತಿದ್ದೀಯಾ? ಇಂದು ನಾನು ನಿನ್ನನ್ನು ಪ್ರೀತಿಸಿದ ಪ್ರೇಯಸಿಯೋ ಅಲ್ಲ ಅಪರಿಚಿತ ಅಪರಂಜಿಯೋ ಎಂಬುವುದು ಗೊಂದಲದ ಪ್ರಶ್ನೆಯಾಗಿದೆ. ಅದ್ಯಾಕೆ ಹಾಗಾಗುತ್ತಿದೆಯೆಂದರೆಲ್ಲಿಯವರೆಗೆ ಏಕವಚನ ದಲ್ಲಿ ಸಂಭೋಧಿಸದ ನೀನು ಇಂದು ಮಾತ್ರ ನಿನಗೆ ನಾನೇನು ಅಲ್ಲವೆಂಬಂತೆ ವರ್ತಿಸಿದೆ. ಪ್ರತಿ ದಿನ ನಿನ್ನ ಮಾತಿಗೆ ಹಂಬಲಿಸು ತ್ತಿದ್ದವಳು ನಾನು. ಇಂದು ಅಯ್ಯೋ ಯಾಕಾಗಿ ನಿನ್ನ ಕಿರುಚಾಟ ಕೇಳುವ ಪಾಪ ನನ್ನರಸಿ ಬಂದಿದೆ ಎಂದೆನಿಸುತ್ತಿದೆ.

ಗೌರವ ಮತ್ತು ನಂಬಿಕೆಗಳ ನಡುವೆ ನಿಲ್ಲಬೇಕಾದ ಅದ್ಭುತ ಪ್ರೇಮ ಸಣ್ಣ ನೆಪದಿಂದ ಮುಗಿದು ಹೋಗುತ್ತಿದೆ. ಇರಲಿ ಬಿಡು, ಇದಕ್ಕೆ ಬೇಜಾರಿಲ್ಲ. ಆದರೆ ಒಂದಂತೂ ಸತ್ಯ ಗೆಳೆಯ. ನನ್ನ ಲೈಫಲ್ಲಿ ಪ್ರೀತಿಯ ಹೊಸ ಪ್ರಯೋಗ ನೀನೆ, ಕೊನೆಯವನೂ ನೀನೆ. ಪ್ರೀತಿ ಎಂದರೆ ಕೇವಲ ಮೇಲು ಮೇಲಿನ ಆಕರ್ಷಣೆ ಎಂಬ ಅಸ್ತ್ರದಿಂದ ಇದ್ದವರಲ್ಲಿ ಆಗುವುದಲ್ಲ. ಭಾವ ಮಂದಿರದಲ್ಲಿ ಪೂಜಿಸುತ್ತಾ ಪ್ರೇಮ ಪಾವಿತ್ರ್ಯತೆಗೆ ಬೆಲೆ ಕೊಟ್ಟು ನೀ ನನಗೆ ಒಲಿಯಬಹುದೇನೋ ಎಂದು ಕಾಯುತ್ತಿರುವ ಭಕ್ತೆ ನಾನು. ಪ್ರೀತಿ ಎಂಬ ಪ್ರಪಂಚ ದಲ್ಲಿ ತಾಯಿ ಮಮತೆ, ತಂದೆಯ ಕಾಳಜಿ, ಅಕ್ಕನ ಆಸರೆ ತೋರಿಸಿದವನು ನೀನು.

ಅದೇನೆ ಆದರೂ ನಿನ್ನ ಅಗಲುವಿಕೆ ನನಗೆ ನಿಜಕ್ಕೂ ಅನಿವಾರ್ಯವೆ ಎಂದು ತಿಳಿದುಕೊಳ್ಳಲು ನನ್ನಿಂದ ಆಗುತ್ತಿಲ್ಲ. ನೀನು ನೆನಪಾದಾಗಲೆಲ್ಲಾ ಅತ್ತು ಸಮಾಧಾನ ಮಾಡಿಕೊಳ್ಳುತ್ತೇನೆ. ನೆನಪುಗಳ ಸಾಗರದಲ್ಲಿ ಈಜೋ ಮೀನಾಗುವೆ, ನಂಬಿಕೆಯ ಕಲ್ಪ ವೃಕ್ಷನೂ ಆಗಬಲ್ಲೆ. ಧುಮುಕಿ ಬರುವ ನಿನ್ನ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವಷ್ಟು ಶಕ್ತಿ ನನಗಿಲ್ಲ. ಅದ್ಯಾವ ನೆಪವೊಡ್ಡಿಯೂ ನಿನ್ನ ಬಾಳಲ್ಲಿ ಮತ್ತೆ ಬಂದು ಸೇರಲಾರೆ.

ಆದರೆ ನನ್ನ ಬಿಟ್ಟು ಹೋಗುವ ನಿನ್ನಲ್ಲಿ ಒಂದೇ ಒಂದು ವಿನಮ್ರ ಕೋರಿಕೆ – ನನ್ನ ಒಂದೇ ಒಂದು ಸಲ ನಿನ್ನ ಮಡಿಲಲ್ಲಿ ಮಲಗಿಸಿ ಕೊಳ್ತೀಯಾ ಪ್ಲೀಸ್! ಒಂದೇ ಒಂದು ಬಾರಿ, ಮೆದುವಾಗಿ ನಿನ್ನ ಮಡಿಲಲ್ಲಿ ಆನಿಸಿಕೋ. ಅಲ್ಲಿ ನನ್ನ ಮನತುಂಬುವ ತನಕ ಬಿಕ್ಕಿ ಬಿಕ್ಕಿ ಅತ್ತು, ನನ್ನ ಕಂಗಳಲ್ಲಿರುವ ಕಣ್ಣೀರನ್ನು ಬತ್ತಿಸುವ ಆಸೆ. ನಾನು ಅದೆಷ್ಟು ಅಳಬೇಕು ಎಂದರೆ, ಮುಂದೆ ಕಣ್ಣೀರು ಬರಲೇ ಬಾರದು, ಎಲ್ಲವೂ ನಿನ್ನ ಮಡಿಲಲ್ಲಿ ಖಾಲಿಯಾಗಿ ಹೋಗಬೇಕು. ಆಗಲೇ ನಾ ನಿನ್ನಲ್ಲಿ ಕಂಡ ಪ್ರೀತಿಗೆ ಒಂದು ಮೌಲ್ಯ ಬಂದೀತು. ನನ್ನ ಈ ಪುಟ್ಟ ಕೋರಿಕೆಯನ್ನು ನೀನು ಈಡೇರಿಸುವೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಉತ್ತರಿಸುತ್ತೀ ಅಲ್ವಾ!