Thursday, 12th December 2024

ಹೆಮ್ಮೆಯ ಈ ಮಹಿಳೆ ಲೆಫ್ಟಿನೆಂಟ್‌ ಜನರಲ್‌

ಸೇನೆಯಲ್ಲಿ ಉನ್ನತ ಹುದ್ದೆಯನ್ನು ಏರುವುದು ಒಂದು ಸಾಧನೆ. ಧಾರವಾಡ ಮೂಲದ ವೈದ್ಯೆಯೊಬ್ಬರು ಲೆಫ್ಟಿನೆಂಟ್ ಜನರಲ್ ಸ್ಥಾನ ಪಡೆದಿರುವುದು ವಿಶೇಷ.

ಸುರೇಶ ಗುದಗನವರ

ಇಂದಿನ ಆಧುನಿಕ ಯುಗದಲ್ಲಿ ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸಾಕಷ್ಟು ಅವಕಾಶಗಳಿವೆ. ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ ಲೆಫ್ಟಿನೆಂಟ್ ಜನರಲ್ ಆಗಿ ಡಾ.ಮಾಧುರಿ ಕಾನಿಟ್ಕರ್ ಅವರು ಆಯ್ಕೆಯಾಗಿದ್ದಾರೆ. ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆದಂತಹ ಮೂರನೇ ಮಹಿಳೆ ಇವರಾಗಿದ್ದಾರೆ.

ಲೆಫ್ಟಿನೆಂಟ್ ಜನರಲ್ ಸ್ಥಾನ ಭಾರತೀಯ ಸೈನ್ಯದ ಮೂರನೇ ಅತ್ಯುತ್ತಮ ಹುದ್ದೆಯಾಗಿದೆ. ಮಾಧುರಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಕ್ಕಳ ವೈದ್ಯೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮೂಲತಃ ಧಾರವಾಡದವರಾದ ಮಾಧುರಿ ಯವರು 1961ರಲ್ಲಿ ಜನಿಸಿದರು. ತಂದೆ ಗೋಪಾ ಲರಾವ್ ಖೋತ ಹಾಗೂ ತಾಯಿ ಹೇಮಲತಾ. ಅವರ ಅಜ್ಜ ಅಜ್ಜಿ ಇಬ್ಬರೂ ವೈದ್ಯರಾಗಿದ್ದರು.

ಮಾಧುರಿಯವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಪ್ರೇರಣೆ ನೀಡಿದವರು ಅವರ ಅಜ್ಜಿ ಸರಳಾದೇವಿ. ನಾಲ್ವತ್ತು ವರ್ಷಗಳ ಹಿಂದೆಯೇ ಇವರ ಕುಟುಂಬ ಪುಣೆಗೆ ಸ್ಥಳಾಂತರಗೊಂಡಿತು. ಹೀಗಾಗಿ ಮಾಧುರಿ ಅವರ ಎಲ್ಲ ಶಿಕ್ಷಣ ಪುಣೆ ಯಲ್ಲಿಯೇ ಆಯಿತು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ 12ನೇ ತರಗತಿ ಇರುವ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಇಚ್ಛೆಯನ್ನು ಹೊಂದಿದರು. ಅವರು ಪುಣೆಯ ಸಶಸ ಪಡೆಗಳ ವೈದ್ಯಕೀಯ ಕಾಲೇಜಿಗೆ ಅರ್ಜಿಯನ್ನು ಹಾಕಿದರು. ಅವರ ಭಾವಿ ಪತಿಯನ್ನು ಮೊದಲ ಸಲ ಭೇಟಿಯಾಗಿದ್ದು ಸಹ ಅಲ್ಲಿಯೇ, ಹೀಗಾಗಿ ಸೇನೆಗೆ ಸೇರುವ ಆಸಕ್ತಿಯೂ ಮೊಳಕೆಯೊಡೆ ಯಿತು.

ಪ್ರಥಮ ರ‍್ಯಾಂಕ್ 1982ರಲ್ಲಿ ಎಂ.ಬಿ.ಬಿ.ಎಸ್. ಪದವಿಯ ಮೂರು ಹಂತಗಳಲ್ಲಿ ಉನ್ನತ ದರ್ಜೆಯೊಂದಿಗೆ ಪುಣೆ ವಿಶ್ವವಿದ್ಯಾ ಲಯದಿಂದ ಪ್ರಥಮ ರ‍್ಯಾಂಕ್ ಪಡೆದು ಉತ್ತೀರ್ಣರಾದರು. ಅವರು ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ
ಮಾಡಿದ್ದಕ್ಕಾಗಿ ರಾಷ್ಟ್ರಪತಿಗಳ ಬಂಗಾರ ಪದಕ ವನ್ನು ಸಹ ಪಡೆದರು. ವೈದ್ಯಕೀಯ ಶಿಕ್ಷಣದ ನಂತರ ಮಾಧುರಿಯವರು ಸೈನಿಕ ಶಿಕ್ಷಣ ಪಡೆಯಲು ಲಕನೌಗೆ ತೆರಳಿದರು. ಅಲ್ಲಿ ಅವರು ಬೆಳಿಗ್ಗೆ ಬೇಗನೆ ಎದ್ದು 5 ಕಿ.ಮೀ. ಓಟದೊಂದಿಗೆ ಹಗ್ಗವನ್ನು ಹಿಡಿದು ಗೋಡೆ ಹತ್ತುವುದು, ಎತ್ತರ ಜಿಗಿತ ಸೇರಿದಂತೆ, ಹತ್ತಾರು ಬಗೆಯ ಸೈನಿಕ ಕಸರತ್ತುಗಳನ್ನು ರೂಢಿಸಿಕೊಂಡರು.

ಅಲ್ಲದೇ ಶಸ್ತ್ರಾಸ್ತ್ರಗಳ ಬಳಕೆಯ ಕಲಿಕೆಯೊಂದಿಗೆ ಅವರು ಸಮರಸಿದ್ಧ ಸೈನಿಕಳಾಗಿ ರೂಪಗೊಂಡರು. ಡಾ. ಮಾಧುರಿಯವರು ಆರ್ಮಿ ಕಾಲೇಜ್ ಆಫ್ ಮೆಡಿಕಲ್ ಸೈನ್ಯದಲ್ಲಿ ಪ್ರೊಫೆಸರ್ ಆಗಿ ಕೆಲಸ ಪ್ರಾರಂಭಿಸಿದರು. ಬಳಿಕ ಆರ್ಮಿಯಲ್ಲಿ ವೈದ್ಯಾಧಿಕಾರಿ ಯಾಗಿ ಅವರು ಆಯ್ಕೆಯಾದರು. 1982ರಲ್ಲಿ ಸೇನೆ ಸೇರಿದ್ದ ಡಾ. ಮಾಧುರಿ 1990ರಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಸೇನಾ ಆಸ್ಪತ್ರೆಗಳ ವಿವಿಧ ಹುದ್ದೆಗಲ್ಲಿ ಸೇವೆ ಸಲ್ಲಿಸಿದ್ದಾರೆ. ಡಾ.ಮಾಧುರಿ ಯವರು ತಮ್ಮ ರಜೆಗಳನ್ನು ಬಳಸಿಕೊಂಡು ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ (ಏಮ್ಸ್) ಸೇರಿದಂತೆ ಹಲವು ಕಡೆಗೆ ಫೆಲೊಶಿಪ್‌ಗಳನ್ನು ಮಾಡಿದ್ದಾರೆ.

ಅವರಲ್ಲಿಯ ಬದ್ಧತೆ ಮತ್ತು ಸೇವೆಯಲ್ಲಿರುವ ಶ್ರದ್ಧೆಯನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಶೈಕ್ಷಣಿಕ ರಜೆಯನ್ನು ಮಂಜೂರು
ಮಾಡಿದರು. ಅಲ್ಲದೇ ಅವರು ಮಕ್ಕಳಿಗೆ ಡಯಾಲಿಸಿಸ್‌ ಮಾಡುವ ಕೋರ್ಸ್‌ಗಳನ್ನು ಸಿಂಗಪುರದಲ್ಲಿಯೆ ನಾಲ್ಕು ತಿಂಗಳವರೆಗೆ ಇದ್ದು ಮುಗಿಸಿದರು.

ಅವರು ಬ್ರಿಟನ್‌ನ ರಾಯಲ್ ಕಾಲೀಜಿನಿಂದ ಮಂಜೂರಾದ ಶಿಷ್ಯವೇತನ ಬಳಸಿಕೊಂಡು ಲಂಡನ್‌ನಲ್ಲಿ ಮೂತ್ರಕೋಶ
ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿದರು. 2017ರಲ್ಲಿ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ ಡೀನ್ ಆಗಿ ಡಾ. ಮಾಧುರಿಯವರು ನೇಮಕಗೊಂಡರು. ನಂತರ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖನ ಉತ್ತರ ಕಮಾಂಡ ವಲಯದ
ಯುದ್ಧ ವೈದ್ಯಕೀಯ ಆರೈಕೆಯ ಮೇಜರ್ ಜನರಲ್ ಆಗಿ ಉಧಂಪುರಕ್ಕೆ ವರ್ಗವಣೆಗೊಳ್ಳುತ್ತಾರೆ.

ಡಾ.ಮಾಧುರಿ ಕಾನಿಟ್ಕರ್ ಅವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ, 2020ರಲ್ಲಿ ಭಾರತೀಯ ಸೇನೆಯ ಅತ್ಯುನ್ನತ ಹುದ್ದೆ ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ನೀಡುತ್ತಾರೆ. ಲೆಟಿನೆಂಟ್ ಜನರಲ್ ಸ್ಥಾನ ಭಾರತೀಯ ಸೈನ್ಯದ ಮೂರನೇ ಅತ್ಯುತ್ತಮ ಹುದ್ದೆ ಯಾಗಿದೆ. ಡಾ. ಮಾಧುರಿಯವರು ಈ ಶ್ರೇಯಾಂಕವನ್ನು ಪಡೆದ ಮೂರನೆ ಮಹಿಳಾ ಅಧಿಕಾರಿಯಾಗಿದ್ದಾರೆ. ಈ ಮೂಲಕ ತ್ರಿಸ್ಟಾರ್ ಗೌರವ ಪಡೆದ ದೇಶದ ಮೂರನೇ ಮಹಿಳಾ ಅಧಿಕಾರಿ ಎಂಬ ಹಿರಿಮೆಗೆ ಡಾ. ಮಾಧುರಿ ಪಾತ್ರರಾಗಿದ್ದಾರೆ.

ಲೆಫ್ಟಿನೆಂಟ್ ಜನರಲ್ ಪುನೀತಾ ಅರೋರಾ ಮತ್ತು ಏರ್ ಮಾರ್ಷಲ್ ಪದ್ಮಾಬಂಡೋಪಾಧ್ಯಾಯ ಈ ಗೌರವ ಪಡೆದ ಇನ್ನಿಬ್ಬರು ಮಹಿಳೆಯರು. ರಾಷ್ಟ್ರೀಯ ಭದ್ರತೆ, ಸೈನಿಕ ತರಬೇತಿ, ಶಿಶು ಚಿಕಿತ್ಸೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಅಪರೂಪದ ಸಾಧನೆ ಮಾಡಿ
ದವರು ಡಾ. ಮಾಧುರಿ ಕಾನಿಟ್ಕರ್. ಸಶಸ್ತ್ರ ಪಡೆಗಳಿಗೆ ಸಲ್ಲಿಸಿದ ಸೇವೆಗಾಗಿ ಅವರು ಅತೀ ವಿಶಿಷ್ಟ ಸೇವಾ ಪದಕ, ಮುಂತಾದ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಡಾ. ಮಾಧುರಿ ಯವರ ಸಾಧನೆಗೆ ಕನ್ನಡಿಗರೆಲ್ಲರೂ ಹೆಮ್ಮೆಪಡುವಂತಾಗಿದೆ.

ಡಾ. ಮಾಧುರಿ ಅವರ ಪತಿ ರಾಜೀವ ಕಾನಿಟ್ಕರ್ ಕೂಡ ಲೆಫ್ಟಿನೆಂಟ್ ಜನರಲ್ ಆಗಿ ನಿವೃತ್ತಿ ಪಡೆದಿದ್ದಾರೆ. ರಾಜೀವ ಅವರು ಕೂಡ ತ್ರಿ ಸ್ಟಾರ್ ಹುದ್ದೆ ಪಡೆದಿರುವುದು ವಿಶೇಷ. ಈಗ ಡಾ. ಮಾಧುರಿ ಕಾನ್ಕಿಟರ್ ಕೂಡ ತ್ರಿ ಸ್ಟಾರ್ ಹುದ್ದೆಗೆ ಬಡ್ತಿ ಪಡೆದು, ಲೆಫ್ಟಿನೆಂಟ್ ಆದ ದೇಶದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಮಗ ನಿಖಿಲ್ ಪುಣೆಯ ನಿಯೋಟೆಕ್‌ನ ನಿರ್ದೇಶಕ ರಾಗಿದ್ದು, ಮಗಳು ವಿಭೂತಿ ವಾಷಿಂಗ್‌ಟನ್‌ನ ಮೈಕ್ರೊ ಸಾಫ್ಟ್ ನಲ್ಲಿ ಡಿಜೈನರ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.