ಕೆ.ಸತ್ಯನಾರಾಯಣ
ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಹೇಗೆ ಓದಬೇಕು? ಆ ಅದ್ಭುತ ಕೃತಿಯನ್ನು ಓದುವವರಿ ಗೆಲ್ಲರಿಗೂ ಈ ಪ್ರಶ್ನೆ ಒಂದಲ್ಲಾ ಒಂದು ಬಾರಿ ಕಾಡಿಬಹುದು. ಹಿರಿಯ ಸಾಹಿತಿ, ಕಾದಂಬರಿಕಾರ ಕೆ. ಸತ್ಯನಾರಾಯಣ ಅವರು ಈ ಪ್ರಶ್ನೆಯನ್ನು ಬೆನ್ನುಹತ್ತಿ ಹೋದಾಗ ಮೂಡಿದ ಕೃತಿಯೇ ‘ಚಿನ್ನಮ್ಮನ ಲಗ್ನ 1893’. ಆ ಬೃಹತ್ ಕಾದಂಬರಿಯ ಪ್ರತಿಯೊಂದು ಅದ್ಯಾಯವನ್ನು ಪ್ರತ್ಯೇಕವಾಗಿ ಅವಲೋಕಿಸಿ, ಟಿಪ್ಪಣಿಗಳನ್ನು ಮಾಡಿ ಕೊಂಡು, ಈ ಪುಸ್ತಕದಲ್ಲಿ ಅಡಕಗೊಳಿಸಿದ್ದಾರೆ. ಆಳವಾದ ಅಧ್ಯಯನದ ತಳಹದಿಯಲ್ಲಿ ರಚನೆಗೊಂಡ ಈ ಪುಸ್ತಕ ಕುವೆಂಪು ಅವರನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂದು ಬಿಡುಗಡೆಯಾಗಲಿರುವ ‘ಚಿನ್ನಮ್ಮನ ಲಗ್ನ 1893’ ಪುಸ್ತಕದ ಆಯ್ದ ಭಾಗಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
ಈ ಕಾದಂಬರಿಯ ಕೆಲವು ಅಧ್ಯಾಯಗಳನ್ನಾದರೂ ಗುಂಪು ಅಧ್ಯಾಯಗಳಾಗಿ ಓದಬಹುದು, ಓದಬೇಕು (6-7-8, 12-13-14, 21-22-23, ಹೀಗೆ). ಒಂದು ಪರಿಕಲ್ಪನೆ ಅಥವಾ ಕುಟುಂಬದ ಸುತ್ತ ಈ ಅಧ್ಯಾಯಗಳಿರುತ್ತವೆ. ಉದಾಹರಣೆಗೆ, ಒಳಾಂಗಣದ (ಡೊಮೆಸ್ಟಿಕ್ ಇಂಟೀರಿಯರ್) ಬದುಕನ್ನು ಕುರಿತು ಈ ಕಾದಂಬರಿ ಮಂಡಿಸುವ ವಿನ್ಯಾಸವನ್ನು ವಿವರವಾಗಿ ಪರಿಶೀಲಿಸುವು ದಕ್ಕಾಗಿ 21-22-23ನೇ ಅಧ್ಯಾಯಗಳನ್ನು ಒಟ್ಟಿಗೆ ಪರಿಶೀಲಿಸಬಹುದು. ಈ ಅಧ್ಯಾಯಗಳಲ್ಲಿ ಒಂದು ಅಂತರ್ಸಂಬಂಧವಿದೆ. ಒಂದು ಪರಿಕಲ್ಪನೆಯ ಅನೇಕ ಪದರುಗಳನ್ನು, ಒಳಸುಳಿಗಳನ್ನು ಈ ರೀತಿಯ ಓದಿನಿಂದ ಕಂಡುಕೊಳ್ಳಬಹುದು.
ಕುವೆಂಪು ಎನ್ನುವುದೇ ನಿಜವಾದ ಹೆಸರು ಎಂದು ತಿಳಿದಿದ್ದ ದಿನಗಳವು. ಕಾವ್ಯನಾಮ ಎಂದರೇನು, ಅದನ್ನೇಕೆ ಸಾಹಿತಿಗಳು ಇಟ್ಟುಕೊಳ್ಳುತ್ತಾರೆ ಎಂಬುದು ಗೊತ್ತಿರಲಿಲ್ಲ; ನನಗೆ ಮಾತ್ರವಲ್ಲ, ನನ್ನ ಸಹಪಾಠಿಗಳಿಗೂ ಕೂಡ. ಈಗಂತೂ ಬಿಡಿ; ಕಾವ್ಯ ನಾಮದ ಪದ್ಧತಿಯೇ ಚಾಲ್ತಿಯಲ್ಲಿಲ್ಲವಲ್ಲ!
ಆದರೆ ಹೈಸ್ಕೂಲು ದಿನಗಳಲ್ಲೇ ಕುವೆಂಪು ಪದ್ಯ, ನಾಟಕಗಳು ಗೊತ್ತಿದ್ದವು. ಅವರ ಪ್ರಸಿದ್ಧ ಕತೆ, ‘ಈಶ್ವರನೂ ನಕ್ಕಿರಬೇಕು’
ಎಂಟನೇ ತರಗತಿಯಲ್ಲೇ ನಮಗೆ ಪಠ್ಯವಾಗಿತ್ತು. ಆ ಕತೆಯನ್ನು ಇಷ್ಟಪಟ್ಟು ಪಾಠ ಮಾಡುತ್ತಿದ್ದ ನಾಗರಾಜಯ್ಯ ಅನ್ನುವ
ಮೇಷ್ಟರು, ತಾವೇನೂ ಆ ಕತೆಯ ಪಾತ್ರವಲ್ಲವೆಂದು ಮತ್ತೆ ಮತ್ತೆ ತಮಾಷೆ ಮಾಡುತ್ತಿದ್ದರು. ಏಕೆಂದರೆ, ಕಥಾನಾಯಕನ ಹೆಸರು ಕೂಡ, ನಾಗರಾಜ ಎಂದೇ ಇತ್ತು. ಶಾಲಾ ವಾರ್ಷಿಕೋತ್ಸವಕ್ಕೆ ಮಕ್ಕಳ ಕೈಲಿ ನಾಟಕಗಳನ್ನು ಆಡಿಸುತ್ತಿದ್ದ ಈ ಮೇಷ್ಟರು
ಕುವೆಂಪುರವರ, ‘ನನ್ನ ಗೋಪಾಲ’ ನಾಟಕವನ್ನು ಆಯ್ಕೆ ಮಾಡಿ ಅದರಲ್ಲಿ ಒಂದು ಪಾತ್ರವನ್ನು ಕೂಡ ನನಗೆ ಕೊಟ್ಟಿದ್ದು,
ಅಭಿನಯಕ್ಕಾಗಿ ಬಹುಮಾನ ಕೂಡ ಬಂದಿತ್ತು. ತುಂಬಾ ಮೆಲು ದನಿಯಲ್ಲಿ ಯಾರಿಗೂ ಕೇಳಿಸದ ಹಾಗೆ ಪಾಠ ಮಾಡುತ್ತಿದ್ದ ಈ
ಮೇಷ್ಟರ ಮಕ್ಕಳ ಪ್ರೀತಿ, ಸಾಹಿತ್ಯ ಪ್ರೇಮ ಅಮೋಘವಾಗಿತ್ತು.
ಶಾಲಾ ದಿನಗಳಲ್ಲಿ ಕುವೆಂಪುರವರ ಮುನ್ನುಡಿಯೊಡನೆ ಪ್ರಕಟವಾಗಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳ, ಬಂಕಿಂಚಂದ್ರ ಸಂಪುಟವನ್ನು
ಓದಿಸಿದ್ದರು. ಭಾರತೀಯ ಕಾದಂಬರಿಕಾರರಲ್ಲಿ ಶರತ್ಚಂದ್ರರ ಪರಂಪರೆ ಮತ್ತು ಬಂಕಿಂಚಂದ್ರರ ಪರಂಪರೆ ಎಂಬ ಎರಡು
ದಾರಿಗಳಿಯಿವೆಯಷ್ಟೆ. ಕುವೆಂಪು ಬಂಕಿಂರವರ ಪರಂಪರೆಯವರು. ಕೃಷ್ಣಶಾಸ್ತ್ರಿಗಳ ಕೃತಿ ರಚನೆಯ ಹಿಂದೆ ಕೂಡ ಕುವೆಂಪು ರವರ ಪ್ರೇರಣೆಯಿತ್ತಂತೆ. ಇದು ಅವರ ಮುನ್ನುಡಿಯಲ್ಲೂ ಗೊತ್ತಾಗುತ್ತದೆ. ಈಗ, ಶಾಲಾದಿನಗಳ 50 ವರ್ಷಗಳ ನಂತರ ಮದು ಮಗಳನ್ನು ಮತ್ತೆ ಓದುವಾಗ ಕುವೆಂಪುರವರ ವರ್ಣನಾತ್ಮಕ ಪ್ರತಿಭೆ, ಪಾತ್ರ ಸೃಷ್ಟಿ, ಭಾಷೆಯ ಬಳಕೆ ಎಲ್ಲದರಲ್ಲೂ ಬಂಕಿಂ ಪರಂಪರೆಗೆ ಅವರು ಹೇಗೆ ಸೇರುತ್ತಾರೆ ಎಂಬುದು ತಿಳಿಯುತ್ತದೆ. ಕುವೆಂಪು ಪ್ರೀತಿಯನ್ನು, ಅವರಿಗಿರುವ ಪ್ರೇರಣೆಗಳನ್ನು ಹೀಗೆ ಶಾಲಾ ದಿನಗಳಲ್ಲೇ ದಾಟಿಸಿದ ಆ ಮೇಷ್ಟರಿಗೆ ಕೃತಜ್ಞತೆಗಳು.
ಇನ್ನು ಕಾಲೇಜಿಗೆ ಬಂದರೆ ಕುವೆಂಪುರವರ ಶ್ರೀಸಾಮಾನ್ಯನ ದೀಕ್ಷಾಗೀತೆ, ಶಬರಿಗಾದನು ಅತಿಥಿ ದಾಶರಥಿ, ಇವೆಲ್ಲ ಪಠ್ಯವಾಗಿ ದ್ದವು. ಕನ್ನಡ ಮೇಷ್ಟರುಗಳಿಗೆ ಅವರ ಬಗ್ಗೆ ವಿಶೇಷವಾದ ಒಲವು, ಗೌರವ, ಭಕ್ತಿಭಾವಗಳಿದ್ದವು. ಉಳಿದವರು ಅವರ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಕಾಲೇಜಿನ ಸಮಾರಂಭಗಳಿಗೆ ಬರುತ್ತಿದ್ದ ಬಹುಪಾಲು ಕನ್ನಡ ಸಾಹಿತಿಗಳು, ಅದರಲ್ಲೂ ವಿಶೇಷ ವಾಗಿ ಮೈಸೂರಿನಿಂದ ಬರುತ್ತಿದ್ದವರು, ಕುವೆಂಪು ಬಗ್ಗೆ ಆರಾಧನಾ ಭಾವದಿಂದಲೇ ಪ್ರಸ್ತಾಪಿಸುತ್ತಿದ್ದರು. ಎಸ್.ಶ್ರೀನಿವಾಸನ್ ಎಂಬ ಮೇಷ್ಟರು ಕುವೆಂಪು ಅವರ ‘ರಾಮಾಯಣ ದರ್ಶನ’ದ ಎಷ್ಟೋ ಭಾಗಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಕುವೆಂಪುವನ್ನು ಇಷ್ಟಪಡುವವರಲ್ಲಿ, ಪಡದವರಲ್ಲಿ ಎಷ್ಟು ಜಾತೀಯತೆಯ ಭಾವನೆಯಿತ್ತು ಎಂಬುದು ನಮಗೆ ಗೊತ್ತಾಗು ತ್ತಿರಲಿಲ್ಲ. ಆವಾಗ ಅದು ನಮಗೆ ಅಷ್ಟು ಮುಖ್ಯವಾದ ವಿಷಯವೂ ಆಗಿರಲಿಲ್ಲ. ಅದೂ ಅಲ್ಲದೆ ಸಮಾಜ ವಿಜ್ಞಾನ, ಚರಿತ್ರೆಯ ವಿದ್ಯಾರ್ಥಿಗಳಾಗಿದ್ದ ನಮಗೆ ಸಾಹಿತ್ಯ, ಸಾಹಿತಿಗಳ ಬಗ್ಗೆ ಇದ್ದ ಆಸಕ್ತಿ ಪ್ರಾಸಂಗಿಕವಾಗಿತ್ತು.
ಅದೇನೂ ಪ್ರಧಾನ ಭೂಮಿಕೆಯಾಗಿರಲಿಲ್ಲ. ಈಗ ನೆನಸಿಕೊಂಡು, ಆದಷ್ಟು ಪ್ರಾಮಾಣಿಕವಾಗಿ ಹೇಳುವುದಾದರೆ, ಒಕ್ಕಲಿಗರ ಸೀಮೆಯಾದ ಮಂಡ್ಯದಲ್ಲಿ ಕುವೆಂಪು ಬಗ್ಗೆ ಒಂದು ರೀತಿಯ ಪೊಸೆಸಿವ್ ಭಾವನೆ ಇತ್ತು; ಯಾರಿಗಾದರೂ ಗೊತ್ತಾಗುವಂತೆ, ಗೊತ್ತಾಗುವಷ್ಟು. ಆದರೆ ಕಾರಂತ, ಗೊರೂರು, ಪುತಿನ, ಕೆಎಸ್ನ ಇಂತಹವರನ್ನು ಆರಾಧಿಸುವುದಕ್ಕೆ ಈ ಪೊಸೆಸಿವ್ನೆಸ್ ಅಡ್ಡಿ ಬರುತ್ತಿರಲಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಕುವೆಂಪು ಒಂದೇ ಒಂದು ಸಲ ಮಂಡ್ಯಕ್ಕೆ ಬಂದವರಲ್ಲ. ಹೆಚ್ಚಾಗಿ ಬರುತ್ತಿದ್ದವರು ಪುತಿನ, ಗೊರೂರು ಮತ್ತು ತಸು ಶಾಮರಾಯರು. ಕಾರಂತರು ಬಂದರೆ ಮಾತ್ರ ನಗರದಲ್ಲಿ ಸಮಾರಂಭಗಳು, ಸನ್ಮಾನಗಳು.
ನಗರದಲ್ಲಿದ್ದ ಪ್ರತಿಯೊಂದು ಸಂಸ್ಥೆಯೂ ಕಾರಂತರನ್ನು ಭಾಷಣಕ್ಕೆ ಆಹ್ವಾನಿಸುತ್ತಿತ್ತು. ಅವರ ಎಲ್ಲ ಭಾಷಣಗಳಿಗೂ ಕಡ್ಡಾಯ ವಾಗಿ ಎಲ್ಲ ವಿದ್ಯಾರ್ಥಿಗಳೂ ಹೋಗಲೇಬೇಕೆಂದು ಅಧ್ಯಾಪಕ ವೃಂದದ ಆಜ್ಞೆ ಬೇರೆ. ಕುವೆಂಪುವಿನ ವಿವರವಾದ ವಿಶೇಷವಾದ ಓದನ್ನು ಪ್ರೇರೇಪಿಸುವಂತಹ ವಾತಾವರಣವೇನಿರಲಿಲ್ಲ. ಪ್ರಗತಿಶೀಲರ ಕಾದಂಬರಿಗಳು, ಭೈರಪ್ಪ, ಮಂಡ್ಯ ಜಿಲ್ಲೆಯವರೇ ಆದ ತ್ರಿವೇಣಿ, ವಾಣಿ, ನಾಗಮಂಗಲದವರೇ ಆದ ಎಚ್.ಎಲ್.ನಾಗೇಗೌಡರ ಕಾದಂಬರಿಗಳು ತುಂಬಾ ಚಲಾವಣೆ ಯಲ್ಲಿದ್ದವು. ಎಂ.ಎ ಜಯಚಂದ್ರ, ಕಾರಂತರ ಕಾದಂಬರಿಗಳ ಖಾಸಗಿ ಸಂಗ್ರಹಾಲಯವೊಂದನ್ನು ಅವರ ಮನೆಯಲ್ಲಿಟ್ಟು ಕೊಂಡಿದ್ದು ಆಸಕ್ತ ವಿದ್ಯಾರ್ಥಿಗಳಿಗೆ ಓದಿಸುತ್ತಿದ್ದರು.
ಹೀಗೆ ಇವರೆಲ್ಲರನ್ನೂ ಓದಿದ ಮೇಲೆ ಕುವೆಂಪುರವರ ಕಾದಂಬರಿಗಳನ್ನು ಓದಿದ್ದು ಎಷ್ಟೋ ರೀತಿಯಲ್ಲಿ ಲಾಭವಾಯಿತು.
ಸಾಹಿತ್ಯ ಕೃತಿಗಳ ಓದಿನಲ್ಲಿ ಯಾವಾಗಲೂ ಒಂದು ರೀತಿಯ ಮುಗ್ಧತೆ, ಅಮಾಯಕತೆ ಇರಬೇಕು. ನಂತರ ವಿಮರ್ಶಾತ್ಮಕ
ಗಂಭೀರ ಓದು. ನನ್ನ ಓದುಗಾರಿಕೆ, ಸಂವೇದನೆಯ ಹಿಂದೆ ಯೌವ್ವನದ ದಿನಗಳ ಅಡ್ಡಾದಿಡ್ಡಿ ಓದು, ಜನಪ್ರಿಯ ಕೃತಿಗಳ ಬಗ್ಗೆ ಆಗಲೂ ಇದ್ದ, ಈಗಲೂ ಇರುವ ಆಸಕ್ತಿ, ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡಿದೆ, ಮಾಡುತ್ತಿದೆ.
1972-74ರ ಕಾಲಾವಧಿಯಲ್ಲಿ ಮಾನಸ ಗಂಗೋತ್ರಿಯಲ್ಲಿ ಓದುವಾಗ ಕುವೆಂಪು ಬಗ್ಗೆ ಏನೂ ಓದಲಾಗಲಿಲ್ಲ. ನಮ್ಮ ಅರ್ಥ ಶಾಸ್ತ್ರದ ಓದೇ ಬಹುಪಾಲು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಆವಾಗ ಚರ್ಚೆಯಲ್ಲಿದ್ದುದು ಭಾರತೀಪುರ, ದಾಟುವಿನಂತಹ ಕಾದಂಬರಿಗಳು, ಅನಂತಮೂರ್ತಿ, ಭೈರಪ್ಪ ಇಂತಹ ಲೇಖಕರ ಬಗ್ಗೆ ಇದ್ದ ಪರ-ವಿರೋಧ ಅಭಿಪ್ರಾಯಗಳು. ಮಲೆಗಳಲ್ಲಿ ಮದುಮಗಳು ಬಗ್ಗೆ ಯಾರೂ ಪ್ರಸ್ತಾಪಿಸುತ್ತಿರಲಿಲ್ಲ.
ಜಿ.ಎಚ್.ನಾಯಕರು ಮಾತ್ರ ಕುವೆಂಪು, ಕಾರಂತ ಇಂತಹವರ ಕಾದಂಬರಿಗಳ ಬಗ್ಗೆಯೂ ಯಾರಿಗೂ ಹೆದರದೆ ಪ್ರಶ್ನೆಗಳನ್ನು
ಎತ್ತುತ್ತಿದ್ದಾರೆ ಎಂಬುದು ಸಾಹಿತ್ಯ ವಲಯದಿಂದಾಚೆಗೂ ಒಂದು ಸುದ್ದಿಯಾಗಿ ಬಂದು ತಲುಪುತ್ತಿದ್ದರೂ ಕಾದಂಬರಿಯ
ಓದಿಗೆ ಹೊಸ ಓದುಗರನ್ನು ಇದೊಂದೇ ಅಂಶ ಹೇಗೆ ಪ್ರೇರೇಪಿಸಲು ಸಾಧ್ಯ? ಗಂಗೋತ್ರಿಯಲ್ಲಿ ಕುವೆಂಪು ಆದರೆ ಕುವೆಂಪುರವರ ವ್ಯಕ್ತಿತ್ವದ ಪ್ರೆಸೆನ್ಸ್ ಗಂಗೋತ್ರಿಯ ಆವರಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಅನುಭವಕ್ಕೆ ಬರುತ್ತಿತ್ತು. ಗಂಗೋತ್ರಿಯ ಅತಿಥಿಗೃಹ ದಲ್ಲಿ ಬಂದು ಉಳಿದುಕೊಳ್ಳುತ್ತಿದ್ದ ಬಂಧು-ಮಿತ್ರರನ್ನು ನೋಡಲು ಸ್ವತಃ ಕುವೆಂಪುರವರೇ ಕಾರ್ ಡ್ರೈವ್ ಮಾಡಿಕೊಂಡು ಬರುತ್ತಿದ್ದರು.
ಬೆಳಿಗ್ಗೆ ನಾವು ಕಾಲೇಜಿಗೆ ಬರುವ ಹೊತ್ತಿಗೆ ಸರಿಯಾಗಿ ಕುವೆಂಪು ಕಾರು ಅತಿಥಿಗೃಹದಿಂದ ಹೊರಡುತ್ತಿತ್ತು. ಮಾನಸ ಗಂಗೋತ್ರಿಯ ಹಿಂಭಾಗದಲ್ಲಿದ್ದ ಮರಗಳ ಗುಂಪಿನ ಹತ್ತಿರ ಅವರು ಆಗಾಗ್ಗೆ ವಾಯುವಿಹಾರಕ್ಕೆ ಬರುತ್ತಿದ್ದರು. ಯಾರಾದರೂ ಒಬ್ಬರು ಅವರನ್ನು ಗಮನಿಸಿಬಿಟ್ಟರೆ ಸಾಕು ಮಾರನೇ ದಿನದಿಂದ ಅವರು ಅಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.
ಅಪರೂಪಕ್ಕೆ ಅವರು ಕೆಲವು ಸಮಾರಂಭಗಳಿಗೆ ಬರುತ್ತಿದ್ದರಾದರೂ ಆ ಸಮಾರಂಭಗಳು ಸಾಹಿತ್ಯಕ್ಕಿಂತ ಹೆಚ್ಚಾಗಿ ತತ್ವಶಾಸ್ತ್ರ, ಆಧ್ಯಾತ್ಮ, ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಪಟ್ಟಿರುತ್ತಿದ್ದವು. ಕೇಳಿಬರುತ್ತಿದ್ದ ಇನ್ನೊಂದು ಮಾತೆಂದರೆ ಕುವೆಂಪುಗೆ ಸಾಹಿತ್ಯ ಮೇಷ್ಟರುಗಳಿಗಿಂತ ಹೆಚ್ಚಾಗಿ ವಿಜ್ಞಾನ, ತತ್ವಶಾಸ್ತ್ರ, ಈ ವಿಭಾಗದ ಪರಿಣಿತರ ಜೊತೆಯೇ ಹೆಚ್ಚು ಒಡನಾಟವೆಂದು, ಕನ್ನಡದಲ್ಲಿ ಪ್ರಕಟವಾಗುತ್ತಿರುವ ವಿಜ್ಞಾನ ಪುಸ್ತಕಗಳು, ಬರಹಗಳನ್ನು ಕುವೆಂಪು ವಿವರವಾಗಿ ಗಮನಿಸುತ್ತಾರೆಂದು, ಇಷ್ಟವಾದ ಬರಹಗಳ ಲೇಖಕರಿಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ ಎಂಬುದು ಇನ್ನೊಂದು ಸುದ್ದಿ.
ಕುವೆಂಪುಗಿಂತ ತೇಜಸ್ವಿಯವರೇ ಹೆಚ್ಚಾಗಿ ಕ್ಯಾಂಪಸ್ನಲ್ಲಿ ಅವರ ಗೆಳೆಯರ ಬಳಗದೊಡನೆ ಕಾಣಿಸಿಕೊಳ್ಳುತ್ತಿದ್ದರು. ಆ ಕಾಲಕ್ಕೆ
ಅವರದೊಂದು ಪ್ರಸಿದ್ಧ ಕಥಾಸಂಕಲನ ಪ್ರಕಟವಾಗಿತ್ತು. ಎಲ್ಲ ಪತ್ರಿಕೆಗಳ ವಾಚಕರವಾಣಿ ವಿಭಾಗಗಳಲ್ಲಿ ಅವರ ಪತ್ರಗಳು ಎಲ್ಲ
ವಿಷಯಗಳ ಮೇಲೂ ನಿರಂತರವಾಗಿ ಪ್ರಕಟವಾಗುತ್ತಿದ್ದವು. ಈ ಕಾಲಾವಧಿಯಲ್ಲೇ ಮೈಸೂರಿನಲ್ಲಿ ಕರ್ನಾಟಕ ಕಲಾವಿದ
-ಬರಹಗಾರರ ಒಕ್ಕೂಟ ಸ್ಥಾಪನೆಯಾದದ್ದು. ಅದರ ಒಂದು ಸಮಾರಂಭದಲ್ಲಿ ಕುವೆಂಪು ಮಾಡಿದ ಭಾಷಣ ಮುಂದೆ ತುಂಬಾ ಪ್ರಸಿದ್ಧವಾದರೂ, ಆವಾಗ ನನಗೆ ಅದರ ಸಾಂಸ್ಕೃತಿಕ ಮಹತ್ವ ಗೊತ್ತಾಗಲಿಲ್ಲವೆಂದು ಒಪ್ಪಿಕೊಳ್ಳುವುದು ಒಳ್ಳೆಯದು.
ತರಗತಿಗಳೆಲ್ಲ ಮುಗಿದ ಮೇಲೆ ಪರೀಕ್ಷೆಗಾಗಿ ಏಕಾಗ್ರತೆಯಿಂದ ಓದಲೆಂದು ಬಹುಪಾಲು ಸಹಪಾಠಿಗಳು ಸ್ವಂತ ಊರಿಗೆ ಹೋಗಿ ಬಿಡುತ್ತಿದ್ದರು. ನಾನೂ ಕೂಡ ಹಾಗೆ ಊರಿಗೆ ಹೊರಟುಹೋಗಿದ್ದೆೆ. ಕುವೆಂಪು ಭಾಷಣ ಮಾಡಿದ ಸಮಾರಂಭಕ್ಕೆ ಹೋಗಿರಲಿಲ್ಲ. ಮೂಲ ಪಠ್ಯಗಳನ್ನು ಸ್ವಂತವಾಗಿ, ಸ್ವತಂತ್ರವಾಗಿ ಓದಬೇಕು, ಅವುಗಳಿಂದಲೇ ಉಲ್ಲೇಖಿಸಬೇಕು ಎಂಬುದನ್ನು ಬಿಎ ಮತ್ತು ಎಂಎ ತರಗತಿಗಳಲ್ಲಿ ಪಾಠ ಹೇಳುತ್ತಿದ್ದ ಅಧ್ಯಾಪಕರು ಕಲಿಸಿದ್ದರಿಂದ, ಆವತ್ತು ಮತ್ತು ಈವತ್ತು ಕೂಡ ನನಗೆ ಸಂಘಟನೆ, ಚಳುವಳಿಗಳ ಸ್ಥೂಲ ಮಾತುಗಾರಿಕೆ, ಆಶಯಗಳ ವಿಜೃಂಭಣೆಯಿಂದ ಪ್ರೇರಣೆ ಪಡೆದು ಓದುಗಾರಿಕೆಯನ್ನು ರೂಪಿಸಿಕೊಳ್ಳು ವುದು ಸರಿಯೆನಿಸುವುದಿಲ್ಲ. ಅದೂ ಅಲ್ಲದೆ ಕುವೆಂಪುವಿನಂತಹ ಲೇಖಕರ ಕೃತಿಗಳು ಯಾವಾಗಲೂ ಒಳಗಿಂದೊಳಗೇ ಸಾವಯವವಾಗಿ ಬೆಳೆಯುತ್ತಲೇ ಇರುತ್ತವೆ.
ಹಾಗಾಗಿ, ಅಂತಹ ಲೇಖಕರನ್ನು ಓದಲು ಯಾವುದೇ ಚಳುವಳಿ, ಸಂಘಟನೆಗಳ ಆಶಯದಿಂದ ಪ್ರೇರಣೆ ಪಡೆಯುವುದು ಅಷ್ಟು ಯುಕ್ತವಾದ ಮಾರ್ಗವಾಗುವುದಿಲ್ಲ. ನಂತರ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದ್ದು, ಕರ್ನಾಟಕದಿಂದ ಎರಡು ದಶಕಗಳ ಕಾಲ ದೂರ ಇರಬೇಕಾಗಿ ಬಂದದ್ದು, ಎಲ್ಲವೂ ಸರಿಯೇ. ಆದರೆ ಕುವೆಂಪುವನ್ನು ನಿಜವಾಗಲೂ ಓದಬೇಕು ಎನ್ನುವ ಅಂತರಂಗದ ಪ್ರೇರಣೆ ಮೂಡಿದ್ದು ಅವರೇ ಟಾಲ್ಸ್ಟಾಯ್ ಬಗ್ಗೆ ಬರೆದ ಮಾತುಗಳಿಂದ. ‘ನೆನಪಿನ ದೋಣಿಯಲ್ಲಿ’ ದಾಖಲಾಗಿರುವ ಟಾಲ್ ಸ್ಟಾಯ್ ಕಾದಂಬರಿಗಳ ಕುರಿತಂತೆ ವೆಂಕಣ್ಣಯ್ಯ-ಕುವೆಂಪು ಮಾತುಕತೆ ಈಗಾಗಲೇ ಬಹಳ ಕಡೆ ಉಲ್ಲೇಖಗೊಂಡಿದೆ.
ಆವಾಗೆಲ್ಲ ನಮ್ಮ ಗೆಳೆಯರ ಬಳಗದಲ್ಲಿ ಟಾಲ್ಸ್ಟಾಯ್ ಹುಚ್ಚಿನ ದಿನಗಳು. ಅಂತಹ ಕಾದಂಬರಿಗಳು ಕನ್ನಡದಲ್ಲಿ ಏಕೆ ಬಂದಿಲ್ಲ ಎಂದು ಕೊರಗುತ್ತಿದ್ದಾಗ ಕುವೆಂಪು ಕಾದಂಬರಿಗಳ ಬೀಸು ಆಕರ್ಷಣೆ ಹುಟ್ಟಿಸಿದ್ದು ನಿಜ. ಶೇಕ್ಸ್ಪಿಯರ್-ಟಾಲ್ಸ್ಟಾಯ್ ನಡುವೆ
ಕುವೆಂಪುಗೆ ಇರುವ ಟಾಲ್ಸ್ಟಾಯ್ ಪಕ್ಷಪಾತವು ಕೂಡ ಯಾವ ಓದುಗನನ್ನಾದರೂ ಸಂಮೋಹಗೊಳಿಸುತ್ತದೆ. ಕುವೆಂಪು
ಕಾದಂಬರಿಗಳನ್ನು ಮತ್ತೆ ಮತ್ತೆ ಓದಲು ಪ್ರಾರಂಭಿಸಿದರೆ ನವೋದಯದವರನ್ನು ತೀವ್ರವಾಗಿ ವಿರೋಧಿಸುತ್ತಿದ್ದ, ಆಗ ತಾನೇ
ಪರಿಚಯವಾಗುತ್ತಿದ್ದ ನವ್ಯ ಸಾಹಿತಿಗಳು ಕೂಡ ಕುವೆಂಪು ಬಗ್ಗೆ ವಿಶೇಷವಾದ ಪ್ರೀತಿ, ಗೌರವಗಳನ್ನು ಸೂಚಿಸುತ್ತಿದ್ದರು.
ಮತ್ತೆ ಮತ್ತೆ ಓದು ನವ್ಯದ ಪ್ರೇರಕರೆಂದು ಮಾನ್ಯತೆ ಪಡೆದಿರುವ ವೈಎನ್ ಕೆಯವರು ಮುಂದೆ ಪರಿಚಯವಾದಾಗ ಹೇಳಿದ ಒಂದು
ಮಾತು ಈಗಲೂ ನನಗೆ ಮುಖ್ಯವೆನಿಸುತ್ತದೆ. ಕುವೆಂಪು, ಮಾಸ್ತಿ, ಕಾರಂತರಂತಹ ಲೇಖಕರನ್ನು ಎಲ್ಲ ತರುಣ ಲೇಖಕರೂ
ಸಮಗ್ರವಾಗಿ ಓದಿ, ಅವರವರಿಗೆ ಬೇಕಾದ ಕುವೆಂಪುವನ್ನು ಅವರೇ ರಿಡಿಸ್ಕವರ್ ಮಾಡಿಕೊಳ್ಳಬೇಕು; ತಮ್ಮ ತಮ್ಮ ವೈಯಕ್ತಿಕ
ಬರವಣಿಗೆಗೆ ಹೊಸ ಪ್ರೇರಣೆಗಳನ್ನು ಹುಡುಕಬೇಕು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.
1980ರ ದಶಕದ ನಂತರ ಕರ್ನಾಟಕದ ವೈಚಾರಿಕತೆ, ಸಾಮಾಜಿಕ ಆದರ್ಶ ಎರಡೂ ಕೂಡ ಕುವೆಂಪು ಪರವಾಗಿ ಇರುವುದು ಸರಿ. ಆದರೆ ಈ ರೀತಿಯ ಪರ-ವಿರೋಧ ವಿಜೃಂಭಣೆಯ ವಾತಾವರಣದಲ್ಲಿ ಸರಿಯಾದ, ಅಪಾಯಕಾರಿಯಲ್ಲದ ನಿಲುವು ತಳೆಯು ವುದು ಮುಖ್ಯವಾಗುತ್ತದೆಯೇ ಹೊರತು ಲೇಖಕನನ್ನು ಸಮಗ್ರವಾಗಿ, ವೈಯಕ್ತಿಕವಾಗಿ, ತೀವ್ರವಾಗಿ ಓದುವುದಲ್ಲ. ಕುವೆಂಪು ಕೃತಿಗಳನ್ನು ಓದುವಾಗ ನಾವು ಕುವೆಂಪುವಿನ ಪ್ರತಿಮೆಯನ್ನು ಕಟ್ಟಿಕೊಳ್ಳುತ್ತೇವೆ; ಹೊಸ ರೀತಿಯ ಕರ್ನಾಟಕವನ್ನು ಕಟ್ಟಿ ಕೊಳ್ಳುವ ಹಂಬಲ ನಮ್ಮಲ್ಲಿ ಜಾಗೃತವಾಗುತ್ತದೆ ಎನ್ನುವುದೆಲ್ಲ ತುಂಬಾ ದೊಡ್ಡತನ, ತುಂಬಾ ದೊಡ್ಡ ಮಾತು. ಕುವೆಂಪು ನೆರವಾಗುವುದು ನಮ್ಮನ್ನು ನಾವೇ ಕಟ್ಟಿಕೊಳ್ಳಲು, ರೂಪಿಸಿಕೊಳ್ಳಲು. ಇದಕ್ಕಾಗಿ ಅವರ ಕೃತಿಗಳನ್ನು ಸುಮ್ಮನೆ ಓದಿದರೆ ಸಾಲದು, ಮತ್ತೆ ಮತ್ತೆ ಓದುತ್ತಾ ನಮ್ಮ ಹಿಂದಿನ ಓದುಗಳನ್ನು ನಾವೇ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಓದುಗನಾಗಿ, ಬರಹಗಾರನಾಗಿ ನನ್ನ ಒಲವಿರುವುದು ಈ ದಿಕ್ಕಿಿನಲ್ಲಿ. ಓದುಗರಾಗಿ ನಮಗೆ ಒಬ್ಬ ಲೇಖಕನ ಪ್ರಜ್ಞೆ, ಕಲಾವಂತಿಕೆಯೆಲ್ಲ ಹಂತ ಹಂತವಾಗಿ ಹೇಗೆ ವಿಕಾಸಗೊಂಡಿತು ಎಂದು ತಿಳಿದುಕೊಳ್ಳುವುದೇ ಹೆಚ್ಚು ಮುಖ್ಯ. ನಿಲುವು, ಆಶಯ, ತಾತ್ವಿಕತೆಯಂತಹ ಗಹನವಾದ ಸಂಗತಿ ಗಳನ್ನು ವಿಮರ್ಶಕರಿಗೇ ಮೀಸಲಿಡುವುದು ಒಳಿತು.
ಕುವೆಂಪುಗೆ ಮೊದಲಿನಿಂದಲೂ ಭಕ್ತರ, ವಕ್ತಾರರ ಕಾಟ ಸ್ವಲ್ಪ ಹೆಚ್ಚೇ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಅನಿವಾರ್ಯ. ಏಕೆಂ
ದರೆ, ಕುವೆಂಪು ಪರವಾದ ಸ್ಥೂಲ ನಿಲುವು, ವಿಚಾರ, ಭಂಗಿಗಳಿಂದಲೂ ಕೆಲವರಿಗೆ ಲಾಭವಿರುತ್ತದೆ. ಓದುಗರಾಗಿ, ವೈಯಕ್ತಿಕವಾಗಿ ನಾವು ಕುವೆಂಪುಗೆ ಏನು ಮಾಡಬಹುದು ಎಂಬುದೇ ಮುಖ್ಯ ಪ್ರಶ್ನೆ. ಸುತ್ತು ಬಳಸದೆ ಹೇಳುವುದಾದರೆ, ಕುವೆಂಪು ಪುಟಗಳನ್ನು ನಮಗೆ ಬೇಕಾದ ನಿಧಾನದಲ್ಲಿ, ವ್ಯವಧಾನದಲ್ಲಿ, ಖಾಸಗಿತನದಲ್ಲಿ ಓದುತ್ತಾ ನಮ್ಮದನ್ನಾಗಿ ಮಾಡಿಕೊಳ್ಳುತ್ತಾ ಹೋಗಬೇಕು. ನೀವು ಕುವೆಂಪು ಪುಟಗಳನ್ನು ನಿಮಗಾಗಿಯೇ, ನಿಮ್ಮ ಒಳಗಿನಿಂದಲೇ, ಕೃತಿಯ ಒಳಗಿನಿಂದಲೇ, ನಿಮ್ಮ ಕಾಲದ ಒಳಗಿನಿಂದಲೇ ಓದಲು ಪ್ರಾರಂಭಿಸಿದರೆ, ಕುವೆಂಪುರವರ ವ್ಯಕ್ತಿತ್ವ, ಪ್ರತಿಮೆಗಳ ಸುತ್ತಮುತ್ತ ನಡೆಯುವ ಬಹುಪಾಲು ಚಟುವಟಿಕೆಗಳ ಅರ್ಥಹೀನತೆ ಗೊತ್ತಾಗುತ್ತದೆ. ಕುವೆಂಪು ಅವರ ಪ್ರಸಿದ್ಧ ಸಾಲುಗಳನ್ನು ಉಲ್ಲೇಖಿಸುವುದಾದರೆ, ಅದರರ್ಥಗಿರ್ಥಗಳು ಸೃಷ್ಟಿಕರ್ತ ನಿಗಿರಲಿ, ವ್ಯರ್ಥ ಜಿಜ್ಞಾಸೆಯಲ್ಲಿ ಕಾಲಹರಣವದೇಕೆ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗೆ 50 ವರ್ಷಗಳು ತುಂಬಿದಾಗ ಓದುಗನಾಗಿ ನಾನು ಏನು ಮಾಡಬಹುದು ಎಂದು ಯೋಚಿಸುತ್ತಲೇ ಇದ್ದೆ. ಕುವೆಂಪು ಕೃತಿಗಳ ಬಗ್ಗೆ ಹಿಂದೆ ನಾನೂ ಬರೆದಿರು ವುದು, ಆ ಲೇಖನಗಳು ಅಲ್ಲಲ್ಲಿ ಉಲ್ಲೇಖಗೊಂಡಿರುವುದು ನಿಜವಾದರೂ ಈಗ ಅದೆಲ್ಲ ಕೆಲಸಕ್ಕೆ ಬಾರದ ಬರವಣಿಗೆಯೆನಿಸು ತ್ತದೆ. ಈ ಭೂತವನ್ನೆಲ್ಲ ಬದಿಗೆ ಸರಿಸಿ, ಹೀಗೆ ಮಾಡೋಣವೆನ್ನಿಸಿತು.
ಇದುವರೆಗಿನ ಓದಿನ ಹಿನ್ನೆಲೆಯಲ್ಲಿ ಮಾಡಿಕೊಂಡು ಬಂದಿರುವ ಟಿಪ್ಪಣಿಗಳು, ಚಿಂತನೆಗಳನ್ನು ಇಟ್ಟುಕೊಂಡೇ, ಆದರೆ ಅದಕ್ಕೇ ಗಂಟುಬೀಳದೆ ಕೃತಿಯ ಪ್ರತಿಯೊಂದು ಅಧ್ಯಾಯ ಒಂದು ಸ್ವತಂತ್ರ ಘಟಕವೆಂಬಂತೆ, ಹಾಗೆಯೇ ಕಾದಂಬರಿಯ ಒಂದು ಭಾಗವೂ ಎಂಬಂತೆ ಓದುವುದು. ಹೀಗೆ ಓದುವಾಗ, ಓದು ನಿಲ್ಲಿಸಿದಾಗ, ಮತ್ತೆ ಓದಿಗೆ ಶುರು ಮಾಡಿದಾಗ ನಮ್ಮ ಮನಸ್ಸಿನಲ್ಲಿ ಏನೇನಾಗುತ್ತದೆ ಎಂದು ಪರಿಶೀಲಿಸಿಕೊಳ್ಳುವುದು, ಅದನ್ನೇ ವೈಯಕ್ತಿಕ ಟಿಪ್ಪಣಿಗಳೆಂದು ಬರೆದುಕೊಳ್ಳುತ್ತಾ ಹೋಗುವುದು, ಹೀಗೇ ಮಾಡಿದೆ. ಜೊತೆಗೆ ಟಾಲ್ ಸ್ಟಾಯ್ನ ‘ವಾರ್ ಅಂಡ್ ಪೀಸ್’ ಕಾದಂಬರಿಯನ್ನು ಈಚೆಗೆಂದು ಓದಿದ್ದು 2011ರಲ್ಲಿ. ಆ ಕಾದಂಬರಿಯನ್ನು ಕೂಡ ಆದಷ್ಟು ಮತ್ತೆ ಓದುವುದು, ಟಾಲ್ಸ್ಟಾಯ್ಗೆ ಕುವೆಂಪು ಮೂಲಕ ನಮಸ್ಕಾರ ಹಾಕುವುದು, ಎರಡು ಮಹಾನ್ ಪ್ರತಿಭೆಗಳನ್ನು ಹಾಗೆ ಒಟ್ಟಿಗೇ ಓದುವ ಸುಖ, ಶ್ರೀಮಂತ ಅನುಭವ ಎಂತಹುದೆಂದು ಬರವಣಿಗೆಯಲ್ಲಿ ಹೇಳಲು ಸಾಧ್ಯವೇ ಇಲ್ಲ.
ಇದನ್ನೆಲ್ಲ ಬರೆಯುತ್ತಿರುವಾಗಲೂ ಒಂದು ಮಾತನ್ನು ವಿನಯದಿಂದ ಓದುಗರ ಮುಂದೆ ಮಂಡಿಸಬೇಕು. ಪ್ರತಿಯೊಬ್ಬ ಓದುಗ ನಿಗೂ ಅವನಿಗೇ ವಿಶಿಷ್ಟವಾದ ಓದುವ ಕ್ರಮವೊಂದಿರುತ್ತದೆ ಮತ್ತು ಕುವೆಂಪುವಿನಂತಹ ಲೇಖಕ ಕೊನೆಗೂ ಬಯಸು ವುದು ಕೂಡ ಪ್ರತಿಯೊಬ್ಬ ಓದುಗನ ವಿಶಿಷ್ಟತೆಯಲ್ಲಿ, ಆಳದಲ್ಲಿ, ಏಕಾಂತದಲ್ಲಿ ನಿಜವಾಗುವುದನ್ನೇ. ಮುಂದಿನ ಪುಟಗಳನ್ನು ಈ ನಿರೀಕ್ಷಣಾ ಜಾಮೀನಿನೊಡನೆಯೇ ಓದಬೇಕೆಂದು ಕೋರಿಕೆ.
(ಪ್ರತಿಕ್ರಿಯಿಸಿ : viramapost@gmail.com)
ಮೂರು ಸ್ತರಗಳ ತಾದಾತ್ಮ್ಯ
ಪಾತ್ರಗಳ ಕುರಿತು ಇರುವ ಲೇಖಕರ ತಾದಾತ್ಮ್ಯದ ದೃಷ್ಟಿಯಿಂದ ಹೇಳುವುದಾದರೆ, ಇಲ್ಲಿ ಕುವೆಂಪುಗೆ ಮೂರು ಸ್ತರಗಳಿವೆ. ವೈಚಾರಿಕ ನೆಲೆಯಲ್ಲಿ ಅವರು ವೇದಾಂತ, ವಿವೇಕಾನಂದ, ಅದ್ವೈತ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ಹತ್ತಿರ. ಸಾಮಾಜಿಕವಾಗಿ ಮಲೆನಾಡಿನ ಒಕ್ಕಲಿಗ ಸಮಾಜದ ಜೊತೆ ಅವರಿಗೆ ಗಾಢವಾದ ಅನುಬಂಧವಿದೆ – ಬಾಲ್ಯದ ನೆನಪುಗಳು ಮತ್ತು
ಸಮಕಾಲೀನ ವಾಸ್ತವದ ಹಿನ್ನೆಲೆಯಲ್ಲಿ ಅವರ ಈ ಅನುಬಂಧ ವಿಮರ್ಶಾತ್ಮಕವಾದದ್ದು ಮತ್ತು ಸೂಕ್ಷ್ಮವಾದದ್ದು. ಕಲಾವಿದ ರಾಗಿ ಕುವೆಂಪುರವರ ತಾದಾತ್ಮ್ಯ ಮತ್ತು ಅನುಭೂತಿಯನ್ನು ಇಡಿಯಾಗಿ ಪಡೆದಿರುವುದು ಕೆಳವರ್ಗದ ಪಾತ್ರಗಳು – ಪೀಂಚಲು, ಗುತ್ತಿ, ಐತ, ತಿಮ್ಮಿ ಈ ಕ್ರಮದಲ್ಲಿ. ಈ ಪಾತ್ರಗಳ ಬಗ್ಗೆ ಬರೆಯುವಾಗ ಕುವೆಂಪುರವರ ಅನುಭೂತಿ ತೀವ್ರವಾದದ್ದು. ಅದರಲ್ಲೂ ವಿಶೇಷವಾಗಿ ಪೀಂಚಲುವಿನ ಪಾತ್ರ ಕುವೆಂಪುರವರ ಅನುಭೂತಿಯನ್ನು ಇಡಿಯಾಗಿ ಪಡೆದಿದೆ. ಈ ಕಾದಂಬರಿಯಲ್ಲಿ ಅವಳು ಶ್ರಮಜೀವಿ, ಸಹಿಷ್ಣು, ಹೆಂಡತಿ, ಸಖಿ, ಗೆಳತಿ, ಮಾರ್ಗದರ್ಶಿ, ದೂರದೃಷ್ಟಿಯುಳ್ಳ ನಾಯಕಿ, ಎಲ್ಲವೂ ಆಗಿದ್ದಾಳೆ.
ಪೀಂಚಲು ಬಗ್ಗೆ ಕುವೆಂಪುರವರ ಅನುಭೂತಿ ಯಾವ ಪ್ರಮಾಣದಲ್ಲಿದೆಯೆಂದರೆ, ಅವಳ ದೃಷ್ಟಿಕೋನದಿಂದಲೇ ಇಡೀ ಕಾದಂಬರಿಯನ್ನು ಮತ್ತೆ ಮತ್ತೆ ಓದಬಹುದು, ಓದುಗರ ಕಲ್ಪನೆಯಲ್ಲಿ ಪುನರ್ರಚಿಸಿಕೊಳ್ಳಬಹುದು. ಇನ್ನುಳಿದ ಪಾತ್ರಗಳು ಮತ್ತು ಚಿಂತನೆಗಳ ಬಗ್ಗೆ ಹೇಳೇಕಾದ್ದನ್ನೆಲ್ಲ ಪೀಂಚಲು ಪಾತ್ರವೊಂದರ ಮೂಲಕವೇ ಹೇಳಲಾಗಿದೆ. ಮುಕುಂದಯ್ಯ-ಚಿನ್ನಮ್ಮರ ಪಾತ್ರಗಳು ಎಷ್ಟೇ ಮೈದುಂಬಿದ್ದರೂ ಆ ಪಾತ್ರಗಳ ಕಲ್ಪನೆ ಮತ್ತು ವಿನ್ಯಾಸದಲ್ಲಿ ಲೇಖಕರ ವಿಶ್ಫುಲ್ ಥಿಂಕಿಂಗ್ ಕೂಡ
ಸೇರಿ ಕೊಂಡಿದೆಯಷ್ಟೆೆ.
ಕಾದಂಬರಿಯಲ್ಲಿ ಊಳಿಗಮಾನ್ಯ ಪದ್ದತಿ
ಈ ಕಾದಂಬರಿ, ಊಳಿಗಮಾನ್ಯ ಪದ್ಧತಿಯನ್ನು ಒಂದು ಸಂಸ್ಕೃತಿಯಾಗಿ, ಜೀವನಶೈಲಿಯಾಗಿ ತೀವ್ರವಾಗಿ, ಕಟುವಾಗಿ ವಿಮರ್ಶಿಸು ತ್ತದೆ. ಆದರೆ ಯಾವುದೇ ಸಂಸ್ಕೃತಿ, ಜೀವನಶೈಲಿಯನ್ನು ಹಲವು ನೆಲೆಗಳಿಂದ ವಿಮರ್ಶಿಸಬಹುದು. ಈ ಕಾದಂಬರಿ, ಗಂಡು-ಹೆಣ್ಣುಗಳ ಸಂಬಂಧದ ನೆಲೆಯನ್ನು ಆಯ್ಕೆ ಮಾಡಿಕೊಂಡಿದೆ. ಒಕ್ಕಲಿಗ ಸಮಾಜ ಪುರುಷ ಪ್ರಧಾನವಾದದ್ದು, ಪುರುಷ ಕೇಂದ್ರೀತ ವಾದದ್ದು.
ಇಲ್ಲಿಯ ಬಹುಪಾಲು ಗಂಡಸರಿಗೆ ದಾಂಪತ್ಯ ಜೀವನದಲ್ಲಾಗಲೀ, ಕಾಮ ಸಂಬಂಧಗಳಲ್ಲಾಗಲೀ ನೆಮ್ಮದಿಯೂ ಇಲ್ಲ,
ಸಂತೋಷವೂ ಇಲ್ಲ. ಹೆಂಗಸರು ದೈಹಿಕವಾಗಿ, ಮಾನಸಿಕವಾಗಿ ಇವರಿಗೆ ಬಲಿಯಾಗಿದ್ದಾರೆ. ಹಾಗೆಂದು ಅವರಿಗೆ ಗೊತ್ತಾಗದಷ್ಟು ಈ ಸಂಸ್ಕೃತಿ, ಜೀವನಶೈಲಿಯನ್ನು ಅವರು ಒಪ್ಪಿಕೊಂಡಿದ್ದಾರೆ. ಗಂಡಸರಿಗೂ ಕೂಡ ಇದೊಂದು ಸಹಜವಾದ ಜೀವನಕ್ರಮ ಎಂದೇ ಅನಿಸಿದೆ. ಇದಕ್ಕೆ ಹೋಲಿಸಿದರೆ, ಕೆಳ ವರ್ಗದ ಸ್ತ್ರೀ ಪಾತ್ರಗಳೇ ಹೆಚ್ಚು ಸ್ವಾತಂತ್ರ್ಯ, ಸ್ವಚ್ಛಂದತೆ ಪಡೆದಿವೆ. ಗಂಡಂದಿರು ಮತ್ತು ಗಂಡಸರಜೊತೆ ಅವರು ಒಡನಾಡಿಗಳ ಸ್ತರದಲ್ಲಿ ವ್ಯವಹರಿಸಲೂ ಬಲ್ಲರು, ಜೀವನವನ್ನು ಕೂಡ ನಡೆಸಬಲ್ಲರು; ದುಡಿಮೆಯಲ್ಲೂ ಕೂಡ ಸಕ್ರಿಯರು.
ಊಳಿಗಮಾನ್ಯ ಪದ್ಧತಿಯಲ್ಲಿ ಅಂತರ್ಗತವಾಗಿರುವ ಕೌಟುಂಬಿಕ ಹಿಂಸೆ (ಫ್ಯಾಮಿಲಿ ವಯಲೆನ್ಸ್)ಯನ್ನು ಕೂಡ ಕಾದಂಬರಿ ವಿಮರ್ಶಿಸುತ್ತದೆ. ದೇಶಾಂತರ ಹೋಗಿರುವ ಮಗ ದೊಡ್ಡಣ್ಣ ಹೆಗ್ಗಡೆಯನ್ನು ಕುರಿತು ಪ್ರಾಮಾಣಿಕವಾಗಿ ಪರಿತಪಿಸುತ್ತಲೇ ಅವನ ಪತ್ನಿಯನ್ನು ಮನೆಯೊಳಗೇ ಹಿಂಸಿಸುವ ಕ್ರಮವನ್ನು ನೋಡಬಹುದು. ನಾಗತ್ತೆ ಸ್ವಂತ ಸೊಸೆ ಯನ್ನೇ ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಬಲ್ಲಳು. ಮಂಜಭಟ್ಟರ ಸೊಸೆಯನ್ನು ಕೂಡ ಕುಟುಂಬದೊಳಗೇ ಹಿಂಸಿಸಲಾಗುತ್ತದೆ.
ಊಳಿಗಮಾನ್ಯ ಪದ್ಧತಿಯ ಒಂದು ನೆಲೆಯನ್ನು ಮಾತ್ರ ಕಾದಂಬರಿ ಪರಿಶೀಲಿಸುವುದರಿಂದ, ಆರ್ಥಿಕ ಸಂಬಂಧಗಳು, ಭೂಮಿಯ ಪ್ರಶ್ನೆಯೆಲ್ಲ ಹಿನ್ನೆಲೆಗೆ ಸರಿದಿವೆ. ಅಂದರೆ ಲೇಖಕರು ಈ ವಿದ್ಯಮಾನ ಕುರಿತು ಯಥಾಸ್ಥಿತಿವಾದಿಗಳು ಎಂದರ್ಥವಲ್ಲ. ಈ ಕಾದಂಬರಿಯ ಪರೀಶೀಲನೆಯ ವ್ಯಾಪ್ತಿಯಲ್ಲಿ ಅದು ಬರುವುದಿಲ್ಲ ಅಷ್ಟೇ.
ಊಳಿಗಮಾನ್ಯ ಪದ್ಧತಿಯ ಮುಖ್ಯ ಭಾಗವಾದ ಜಾತಿ ಪದ್ಧತಿಯನ್ನು ಕೂಡ ಕಾದಂಬರಿ ತೀವ್ರವಾಗಿ ವಿಮರ್ಶಿಸುತ್ತದೆ. ಈ ವಿಮರ್ಶೆ ಬಹುಪಾಲು ಒಕ್ಕಲಿಗ ಸಮಾಜದ ದೃಷ್ಟಿಕೋನದಿಂದ ನಡೆಯುತ್ತದೆ. ಏಕೆಂದರೆ, ಕಾದಂಬರಿಯ ಬದುಕು ನಡೆಯು ತ್ತಿರುವ ಕಾಲಮಾನ ಮತ್ತು ಸಂದರ್ಭದಲ್ಲಿ ಅವರು ಮಾತ್ರ ಬ್ರಾಹ್ಮಣ ಸಮಾಜವನ್ನು, ಆಶಯಗಳನ್ನು ಕುರಿತು ಪ್ರತಿಭಟಿಸಲು ಸಾಧ್ಯ. ಈ ಕಾರಣಕ್ಕಾಗಿಯೇ ಮತಾಂತರಕ್ಕೆ ಪ್ರಯತ್ನಿಸುತ್ತಿರುವ ಮಿಷನರಿಗಳು ಕೂಡ ಒಕ್ಕಲಿಗೆ ಸಮಾಜವನ್ನು ಬ್ರಾಹ್ಮಣರ ಕಪಿಮುಷ್ಠಿಯಿಂದ ಬಿಡಿಸುವ ಬಗ್ಗೆಯೇ ಮಾತನಾಡುತ್ತಾರೆ. ಕೆಳ ವರ್ಗದ ಕೆಲವು ಪಾತ್ರಗಳು – ಸೇಸನಾಯಕ, ಚೀಂಕ್ರ ಇಂತವ ರೆಲ್ಲ ಒಕ್ಕಲಿಗ ಸಮಾಜದ ಬಗ್ಗೆ ಮಾಡುವ ಟೀಕೆಗಳು ಇನ್ನೂ ವೈಯಕ್ತಿಕ ಸ್ತರದಲ್ಲೇ ಇವೆ. ಸಾಮಾಜಿಕವಾಗಿ ಪರಿವರ್ತನೆ ಗೊಂಡಿಲ್ಲ.
ಬ್ರಾಹ್ಮಣರನ್ನು ಪ್ರಶ್ನಿಸುತ್ತಿರುವ, ಟೀಕಿಸುತ್ತಿರುವ ಒಕ್ಕಲಿಗ ಸಮಾಜದ ಬಳಿ ಇರುವ ಸಂಪನ್ಮೂಲ, ಶಿಕ್ಷಣಗಳು ಕೂಡ ಆ
ವರ್ಗಕ್ಕೆ ಇನ್ನೂ ದಕ್ಕಿರಲಿಲ್ಲ. ಕುವೆಂಪುವಿನ ವೈಚಾರಿಕತೆಯನ್ನು ನಂತರದ ತಲೆಮಾರಿನವರು ಸ್ವೀಕರಿಸುವಾಗ, ಕುವೆಂಪು ಒಕ್ಕಲಿಗ ಸಮಾಜದ ರೀತಿ ನೀತಿಗಳ ಬಗ್ಗೆ, ಒಟ್ಟಾರೆ ಊಳಿಗಮಾನ್ಯ ಪದ್ಧತಿಯ ಬಗ್ಗೆ ತಳೆದ ವಿಮರ್ಶಾತ್ಮಕ ನಿಲುವುಗಳನ್ನು ಮುನ್ನೆಲೆಗೆ ಬಾರದಂತೆ ನೋಡಿಕೊಂಡಿದ್ದಾರೆ. ಕುವೆಂಪು ಮೇಲು ಜಾತಿಯವರ ಬಗ್ಗೆ ಮಾಡಿದ ಟೀಕೆಗಳನ್ನು ಮಾತ್ರವೇ ಮುನ್ನೆ
ಲೆಗೆ ತರುವುದು ಅವರನ್ನು ಸಾಂಸ್ಕೃತಿಕವಾಗಿ ಗ್ರಹಿಸುವುದರಲ್ಲಿನ ಅಪೂರ್ಣತೆಯನ್ನು, ಸಾಂಸ್ಕೃತಿಕ ರಾಜಕಾರಣವನ್ನು
ಸೂಚಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ತೇಜಸ್ವಿಯವರ ಬರವಣಿಗೆ ಕೂಡ ಓದುಗರ ನೆರವಿಗೆ ಬರಲಿಲ್ಲ.
ಕುವೆಂಪು ಬಗ್ಗೆ ಈಗಾಗಲೇ ಇರುವ ಸಂಸ್ಕೃತಿ ಚಿತ್ರವನ್ನು ಮತ್ತಷ್ಟು ಸ್ಥಿರೀಕರಿಸಿತು ಜನಪ್ರಿಯ ಧಾಟಿಯಲ್ಲಿ. ಹೀಗೆಯೇ ಕುವೆಂಪು ಮತಾಂತರದ ಬಗ್ಗೆ ತಳೆದ ಸಂಕೀರ್ಣ ನಿಲುವುಗಳಿಂದ ಕೂಡ ಮುಂದಿನ ತಲೆಮಾರುಗಳು ಒಳನೋಟ ಪಡೆಯಲಿಲ್ಲ. ಕೆಳ ವರ್ಗದವರಿಗೆ ಮತಾಂತರಗೊಳ್ಳುವ ಹಕ್ಕಿದೆ, ಮಿಷನರಿಗಳಿಗೂ ಮತಾಂತರ ಮಾಡುವ ಹಕ್ಕಿದೆ. ಆದರೆ ಪ್ರಲೋಭನೆಯಿಂದ ಕೆಳ ವರ್ಗದವರನ್ನು ದುರ್ಬಲಗೊಳಿಸಿ ಮತಾಂತರಗೊಳಿಸುವುದನ್ನು ಕುವೆಂಪು ಒಪ್ಪುವುದಿಲ್ಲ.
ಕುವೆಂಪು ಪ್ರಕಾರ, ಮೇಲು ಜಾತಿ ಗಳವರಿಗೆ ಹೋಲಿಸಿದರೆ, ಕೆಳ ಜಾತಿಗಳವರ ಧಾರ್ಮಿಕ, ಸಾಂಸ್ಕೃತಿಕಲೋಕ, ಪರಿಕಲ್ಪನೆಗಳು, ಆಚರಣೆಗಳು ಹೆಚ್ಚು ಗಾಢವಾಗಿವೆ, ಸಂಕೀರ್ಣವಾಗಿವೆ. ಅವರನ್ನು ಮತಾಂತರಗೊಳಿಸುವುದು ಅಷ್ಟು ಸುಲಭವಲ್ಲ.
ಮೆಟಾಫಿಸಿಕಲ್ ಈಕ್ವಾಲಿಟಿಯಲ್ಲಿ ಆಳವಾದ ನಂಬಿಕೆ ಇರುವ ಕುವೆಂಪುವಿನಂತಹ ಮನೋಧರ್ಮದವರಿಗೆ, ಆಧ್ಯಾತ್ಮಿಕ ಸಾಧನೆಗೆ, ಸಾಂಸ್ಥಿಕ ಧರ್ಮ, ಆಚರಣೆಗಳ ಅಗತ್ಯವೇ ಇರುವುದಿಲ್ಲ. ಕುವೆಂಪುರವರ ಈ ನಿಲುವುಗಳನ್ನು ಸರಿಯಾಗಿ ಗ್ರಹಿಸಿದ್ದರೆ, ಈವತ್ತು ಜಾತ್ಯಾತೀತತೆ, ಪ್ರಗತಿಪರತೆ ಕುರಿತು ನಡೆಯುತ್ತಿರುವ ವಾಗ್ವಾದಗಳು ಬೇರೆ ರೂಪವನ್ನೇ ಪಡೆಯುತ್ತಿದ್ದವು. ಈ
ಉದಾಹರಣೆಗಳು ಕುವೆಂಪುವನ್ನು ಆಂಶಿಕವಾಗಿ ಗ್ರಹಿಸುವುದರಿಂದ ಆಗುವ ವಿಸಂಗತಿಗಳನ್ನು ಸೂಚಿಸುತ್ತವೆ.
ಲೇಖಕ ತನ್ನ ಪ್ರತಿಯೊಂದು ಕೃತಿಯ ವಸ್ತುವನ್ನು, ಶೈಲಿಯನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಕೃತಿಯನ್ನು ಯಾವ ರೀತಿಯ ಓದುಗರು, ಎಷ್ಟು ಪೀಳಿಗೆಯ ಓದುಗರು ಓದಬೇಕು, ಓದುತ್ತಾರೆ ಎಂಬ ಆಯ್ಕೆಯನ್ನು ಕೂಡ ಮಾಡಿರುತ್ತಾನೆ. ಈ ಮಾನದಂಡ ದಿಂದ ಗಮನಿಸುವುದಾದರೆ, ಕುವೆಂಪುವಿನ ದೃಷ್ಟಿಯೆಲ್ಲ ತಕ್ಷಣದ ಅಥವಾ ಸಮಕಾಲೀನ ಓದುಗರಿಗಿಂತ ಹೆಚ್ಚಾಗಿ ಮುಂದಿನ ತಲೆಮಾರುಗಳಲ್ಲಿ ಬರುವ ಓದುಗರ ಕಡೆಗೇ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಕಾಲದ ಬೇರೆ ಬೇರೆ ಆಯಾಮಗಳನ್ನು ಲೇಖಕ ಕೃತಿಯೊಳಗೆ ನಿರ್ವಹಿಸುವ ಕ್ರಮದಲ್ಲಿ ಇದು ಸ್ಪಷ್ಟವಾಗುತ್ತದೆ. ಸಮಕಾಲೀನ
ಓದುಗರಿಗಿಂತ ಹೆಚ್ಚಾಗಿ ಮುಂದಿನ ತಲೆಮಾರುಗಳ ನಿರಂತರ ಓದುಗರನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಬರೆದ ಕನ್ನಡದ ಕೃತಿಗಳು, ಲೇಖಕರ ಸಂಖ್ಯೆ ತುಂಬಾ ಕಡಿಮೆ, ಬೆರಳೆಣಿಕೆಯಷ್ಟು ಕೂಡ ಇಲ್ಲ ಎಂದು ಹೇಳಬಹುದು.