Sunday, 13th October 2024

ಸಂಬಂಧಗಳ ಮೌಲ್ಯ ಸಾರುವ ಮಂಗಳವಾರ ರಜಾದಿನ

ಪ್ರಶಾಂತ್‌ ಟಿ.ಆರ್‌

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಪ್ರಯೋಗಗಳು ನಡೆಯುತ್ತಿವೆ. ಸಿನಿಪ್ರಿಯರ ಮನಕ್ಕೆ ಮೆಚ್ಚುಗೆಯಾಗುವ ಕೌಟುಂಬಿಕ ಕಥೆಯಾಧಾರಿತ
ಚಿತ್ರಗಳು ತೆರೆಗೆ ಬರುತ್ತಿವೆ. ಅಂತಹ ಚಿತ್ರಗಳಲ್ಲಿ ‘ಮಂಗಳವಾರ ರಜಾದಿನ’ವೂ ಒಂದು. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದೇನಪ್ಪ, ಟೈಟಲ್ ಹೀಗಿದೆ ಅಂದುಕೊಳ್ಳಬಹುದು. ಇದು ಕಾಮಿಡಿ ಕಥೆಯ ಚಿತ್ರವೇ ಎಂಬುದು ಅದಾಗಲೇ ನಿಮಗೆ ತಿಳಿದುಬಿಡಬಹುದು. ಅದಕ್ಕೂ ಮಿಗಿಲಾದ ಸೆಂಟಿಮೆಂಟ್ ಕಥೆ ಚಿತ್ರದಲ್ಲಿದೆ. ಅಂದುಕೊಂಡದ್ದನ್ನು ಸಾಧಿಸುವ ಛಲಗಾರನ ಯಶೋಗಾಥೆ ಇಲ್ಲಿ ಮಿಳಿತವಾಗಿದೆ. ಅದು ಏನು, ಹೇಗೆ ಎಂಬುದನ್ನು ಚಿತ್ರ
ನೋಡಿದ ಮೇಲೆಯೇ ತಿಳಿಯುತ್ತದೆ.

ಕೇಶ ವಿನ್ಯಾಸಕರೆಂದರೆ ಎಲ್ಲರಿಗೂ ಗೌರವ. ಅವರಿದ್ದರೆ ನಾವು ಅಂದವಾಗಿ ಕಾಣುವುದು, ಹೊಸ ಗೆಟಪ್ ತಾಳಲು ಸಾಧ್ಯವಾಗುವುದು. ನಮ್ಮ ಕ್ಷೌರಿಕರಿಗೆ ಸಾಮಾನ್ಯವಾಗಿ ‘ಮಂಗಳವಾರವೇ ರಜಾದಿನ’. ಓಹೋ ಈಗ ಅನ್ನಿಸಬಹುದು ಖಂಡಿತಾ ಇದು ಕ್ಷೌರಿಕನೊಬ್ಬನ ಕಥೆ ಎಂದು. ಅಂದುಕೊಂಡಂತೆ ಸತ್ಯವೂ ಹೌದು. ಹಾಗಂತ ಇದು ಒಬ್ಬ ಕ್ಷೌರಿಕನಿಗೆ ಮಾತ್ರ ಸೀಮಿತವಾದ ಕಥೆಯಲ್ಲ, ಮಧ್ಯಮ ವರ್ಗದವರ ಮನೆಯಲ್ಲಿ ನಡೆಯುವ, ನಡೆಯುತ್ತಿರುವ ಘಟನೆಗಳೇ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ.

ನೈಜತೆಯ ಸ್ಪರ್ಶ 
‘ಮಂಗಳವಾರ ರಜಾದಿನ’ ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರಚನೆಯಾದ ಕಥೆ. ನಿರ್ದೇಶಕ ಯುವಿನ್, ಅವರ ಊರಿನಲ್ಲಿ ಕ್ಷೌರಿಕ ಹುಡುಗ ನಲ್ಲಿದ್ದ ಹಂಬಲ, ಆತನ ಗುರಿ ಎಲ್ಲವನ್ನು ಕಲೆ ಹಾಕಿ, ಕಥೆ ಹೆಣೆದಿದ್ದಾರೆ. ತಾನು ಕಣ್ಣಾರೆ ಕಂಡ ಘಟನೆಗಳಿಗೆ ಒಂದಷ್ಟು ಮನರಂಜನೆಯ ಅಂಶ ಗಳನ್ನು ಸೇರಿಸಿ ಸಿನಿಪ್ರಿಯರಿಗೆ ಇಷ್ಟವಾಗುವಂತೆ ತೆರೆಗೆ ತಂದಿದ್ದಾರೆ. ಸಿನಿಮಾವನ್ನು ಕಾಮಿಡಿಗೆ ಸೀಮಿತ ಮಾಡದೆ, ಮಧ್ಯಮ ವರ್ಗದವರ ಸಿಹಿ ಕಹಿ ಬೆರೆತ ಬದುಕಿನ ಸಾರವನ್ನು ತೆರೆಗೆ ತರುವ ಪ್ರಯತ್ನ ಮಾಡಿ ದ್ದಾರೆ. ಬೆಳ್ಳಿ ಪದರೆಯಲ್ಲಿ ಚಿತ್ರ ನೋಡುತ್ತಿದ್ದರೆ, ನಮ್ಮ ಮನೆಗಳ ಕಥೆಯೂ ತೆರೆಯಲ್ಲಿ ಹಾದುಹೋಗಲಿದೆಯಂತೆ.

ಸಂಬಂಧಗಳ ಕಥೆ

‘ಮಂಗಳವಾರ ರಜಾ ದಿನ’ ಕೌಟುಂಬಿಕ ಕಥೆಯ ಚಿತ್ರ. ಅದರಲ್ಲೂ ಮುಖ್ಯವಾಗಿ ಸಂಬಂಧಗಳ ಕಥೆ ಇಲ್ಲಿ ಬೆಸೆದಿದೆ. ಅಪ್ಪ ಮಗನ ಸಂಬಂಧ, ಅಪ್ಪ ಮಗಳ ಬಾಂಧವ್ಯ ಇವೆಲ್ಲವೂ ತೆರೆಯಲ್ಲಿ ಅನಾವರಣಗೊಂಡು ಸಂಬಂಧಗಳು ಎಷ್ಟು ಮುಖ್ಯ ಎನ್ನುವ ಕಥೆ ಹೇಳುತ್ತವಂತೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾಗ ಅಪ್ಪ, ಅಮ್ಮನ ಬೆಂಬಲ ಎಷ್ಟು ಮುಖ್ಯ ಎಂಬ ಸಂದೇಶವನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ.

ಜನಪ್ರಿಯ ಕೇಶ ವಿನ್ಯಾಸಕ ಚಿತ್ರದ ನಾಯಕ ಒಬ್ಬ ಕ್ಷೌರಿಕ. ವೃತ್ತಿಯನ್ನು ಪ್ರೀತಿಸುವ ಆತ, ತನ್ನ ಬಳಿ ಬಂದ ಎಲ್ಲರಿಗೂ ವಿಭಿನ್ನ ಹೇರ್ ಸ್ಟೈಲ್ ಮಾಡಿ, ಸಂತಸ ಪಡುತ್ತಾನೆ. ಗ್ರಾಹಕರ ಮೊಗದಲ್ಲೂ ನಗು ಮೂಡಿಸುತ್ತಾನೆ. ಹಾಗಾಗಿ ಈತನನ್ನೇ ಅರಸಿ ಬರುವ ವರು ಅನೇಕರಿರುತ್ತಾರೆ. ಎಲ್ಲರಿಗೂ ಪ್ರಿಯವಾದ ಈತನ ಜೀವನದಲ್ಲಿ ಹಂಬಲವೊಂದು ಮನೆ ಮಾಡಿರುತ್ತದೆ. ಅದು ಕಿಚ್ಚ ಸುದೀಪ್ ಅವರಿಗೆ ಕೇಶ ವಿನ್ಯಾಸ  ಮಾಡ ಬೇಕೆಂಬುದು. ಅದಕ್ಕಾಗಿ ಶತಾಯಗತಾಯ ಪ್ರಯತ್ನಿಸು ತ್ತಿರುತ್ತಾನೆ.

ಎಲ್ಲರೊಂದಿಗೂ ತನ್ನ ಆಸೆಯನ್ನು ಹೇಳಿಕೊಂಡಿರುತ್ತಾನೆ. ಹಾಗಾದರೆ ಆತ ಅಂದುಕೊಂಡಂತೆ ಸುದೀಪ್ ಅವರಿಗೆ ಹೇರ್‌ಸ್ಟೈಲ್ ಮಾಡುತ್ತಾನಾ. ತನ್ನ ತಂದೆ ಹೇಳಿದಂತೆ ವಾರವಿಡಿ ದುಡಿಯುವ ಈತ ಯಾವಾಗ ಸುದೀಪ್ ಅವರ ಬಳಿ ತೆರಳಬೇಕು ಅಂದುಕೊಳ್ಳುತ್ತಾನೆ. ಈತನಿಗೆ‘ಮಂಗಳವಾರ ರಜಾದಿನ’ ಅಂದು ಈತ ಏನು ಮಾಡುತ್ತಾನೆ ಎಂಬುದೇ ಚಿತ್ರದ ಸಸ್ಪೆನ್ಸ್‌.

ಇದರ ಜತೆಗೆ ಬರಪೂರ ಹಾಸ್ಯವೂ ಸಿನಿಮಾದಲ್ಲಿದೆ. ಹಾಸ್ಯ ನಟ ಜಹಂಗೀರ್ ಸಾದಾ ಸೀದ ಮಾತುಗಳ ಮೂಲ ಕವೇ ಎಲ್ಲರನ್ನು ನಗಿಸುತ್ತಾರೆ. ಇವರೊಂದಿಗೆ ಚಂದನ್ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ ಅವರ ಕಾಮಿಡಿ ಸಹಜಾಭಿನಯದ ಮೂಲಕವೇ ನಮ್ಮನ್ನು ರಂಜಿಸುತ್ತಾರೆ. ಇನ್ನು ಚಿತ್ರದ ಪಂಚಿಂಗ್ ಡೈಲಾಗ್‌ಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಈಗಾಗಲೇ ಟ್ರೇಲರ್ ನೋಡಿದವರು ಬಿದ್ದು ಬಿದ್ದು, ನಕ್ಕಿರುತ್ತಾರೆ.

ಚಿತ್ರದ ನಾಯಕಿಯಾಗಿ ಲಾಸ್ಯ ನಾಗರಾಜ್ ಬಣ್ಣಹಚ್ಚಿದ್ದಾರೆ. ‘ಮಂಗಳ ಮಂಗಳವಾರ ರಜಾ ದಿನ…’ ಎನ್ನುವ ಟೈಟಲ್ ಹಾಡನ್ನು ಕ್ಷೌರಿಕರಿಗೆ
ಅರ್ಪಿಸಿದೆ ಚಿತ್ರತಂಡ. ಸುದೀಪ್ ಅಭಿಮಾನಿಗಳಿಗೆ ಸರ್‌ಪ್ರೈಸ್ ಮೊದಲೇ ಹೇಳಿದಂತೆ, ಚಿತ್ರದ ನಾಯಕ ಸುದೀಪ್ ಅವರ ಅಭಿಮಾನಿ. ಅವರಿಗೆ ಹೇರ್‌ಸ್ಟೈಲ್ ಮಾಡಬೇಕೆಂಬುದು ಈತನ ಜೀವನದ ಪರಮ ಗುರಿ.

ಹಾಗಾದರೆ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದಾರ ಎಂಬ ಕುತೂಹಲ ಸಹಜವಾಗಿಯೇ ಕಾಡುತ್ತದೆ. ಈ ಬಗ್ಗೆೆ ಚಿತ್ರತಂಡ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಸುದೀಪ್ ಅಭಿಮಾನಿಗಳಿಗೆ ಸರ್‌ಪ್ರಸೈಸ್ ಇದ್ದೇ ಇದೆ ಎಂದು ಹೇಳಿದ್ದಾರೆ ನಿರ್ದೇಶಕರು. ಅದೇನು ಎಂಬುದಕ್ಕೆ ಚಿತ್ರ ದಲ್ಲಿಯೇ ಉತ್ತರ ಸಿಗಲಿದೆಯಂತೆ.

ಕೋಟ್‌

ನನಗೆ ಕೇಶವಿನ್ಯಾಸ ಮಾಡುವ ಹುಡುಗ ಅಚ್ಚುಮೆಚ್ಚು . ಆತನಿಗೆ ಸುದೀಪ್ ಎಂದರೆ ಬಲು ಇಷ್ಟ. ಇದೇ ವಿಚಾರವನ್ನು ಇಟ್ಟುಕೊಂಡು ಯಾಕೆ ಸಿನಿಮಾ ಮಾಡಬಾರದು ಎಂದು ಅಂದುಕೊಂಡೆ. ಅದಕ್ಕೆ ತಕ್ಕಂತೆ ಕಥೆ ಹೆಣೆದೆ. ಕಥೆಗೆ ತಕ್ಕ ಶೀರ್ಷಿಕೆಗಾಗಿ ಹುಡುಕಾಡಿದೆ. ಹೀಗಿರುವಾಗಲೇ ಒಂದು ದಿನ ಕಟ್ಟಿಂಗ್ ಮಾಡಿಸಲು ಹೊರಟಿದ್ದೆ. ಆಗ ನನ್ನ ತಾಯಿ ಇವತ್ತು ಮಂಗಳವಾರ ಮಗ.. ರಜಾದಿನ ಎಂದರು. ಅವರು ಹೇಳಿದ ಆ ಮಾತನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿದೆ. ನಾನು ಸಿನಿಮಾ ಮಾಡುತ್ತಿರುವುದು ನನ್ನ ತಾಯಿಗೆ ಸಂತಸ ತಂದಿತು. ಎಲ್ಲರಿಗೂ ಮೆಚ್ಚುಗೆಯಾಗುವಂತೆ ಸಿನಿಮಾ ಮಾಡು ಎಂದಿದ್ದರು. ನನ್ನ ಮೊದಲ ಸಿನಿಮಾವನ್ನು ಅವರಿಗೆ ತೋರಿಸಬೇಕೆಂದಿದ್ದೆ. ಅಷ್ಟರಲ್ಲೇ ಅವರು ನಮ್ಮನ್ನು ಅಗಲಿದರು. ಅವರಿಲ್ಲ ಎನ್ನುವ ದುಃಖ ನನ್ನಲ್ಲಿ ಮಡುಗಟ್ಟಿದೆ. ಆದರೂ ನನ್ನ ಚಿತ್ರವನ್ನು ಅವರು ನೋಡುತ್ತಾರೆ, ಮೆಚ್ಚುತ್ತಾರೆ ಎಂಬ ಆಶಾಭಾವ ನನ್ನಲ್ಲಿದೆ.

-ಯುವಿನ್ ನಿರ್ದೇಶಕ