Wednesday, 11th December 2024

ಮಂಕುತಿಮ್ಮ ಮತ್ತು ಮನಸ್ಸು

ಡಾ.ಕೆ.ಎಸ್‌.ಪವಿತ್ರ

ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧ ಎನಿಸಿರುವ ಇದೊಂದು ಕಾವ್ಯ ಸುರಿಸುತ್ತಿರುವ ಅರ್ಥವ್ಯಾಪ್ತಿಯಾದರೂ ಅದೆಷ್ಟು ವಿಶಾಲ! ಕನ್ನಡನಾಡಿನ ಅತಿ ಪರಿಚಿತ ಕಾವ್ಯಗಳಲ್ಲಿ ಮಂಕುತಿಮ್ಮನ ಕಗ್ಗವು ಮೊದಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಓದಿದವರ ಸಂಸ್ಕಾರಕ್ಕನುಗುಣವಾಗಿ ಹೊಸ ಹೊಸ ಅರ್ಥ ಸುರಿಸುವುದು ಒಂದೆಡೆಯಾದರೆ, ಮಾರ್ಗದರ್ಶನ ಬಯಸುವ ಹೊಸ ಓದುವವರಿಗೆ ಇನ್ನೊಂದೇ ರೀತಿಯ ಸಾಂತ್ವನ ನೀಡುವ ಅಪರೂಪದ ಕೃತಿ ಇದು. ಡಿವಿಜಿ ಅವರು ತಮ್ಮ ಜೀವಿತಾವಧಿ ಯಲ್ಲಿ ಸಾಕಷ್ಟು ಇತರ ಕೃತಿಗಳನ್ನು ರಚಿಸಿದ್ದರೂ, ಅವರ ಹೆಸರು ಕೇಳಿದಾಕ್ಷಣ ನೆನಪಾಗುವುದೇ ಮಂಕುತಿಮ್ಮನ ಕಗ್ಗ. ಜನಸಾಮಾನ್ಯ  ರಿಂದ, ಮಕ್ಕಳಿಂದ ಹಿಡಿದು ಪಂಡಿತರಿಗೂ ಪರಿಚಿತ ಎನಿಸಿರುವ ಈ ಕೃತಿಯ ಕುರಿತು ಬಂದಿರುವ ವ್ಯಾಖ್ಯಾನಗಳು ಅದೆಷ್ಟೋ! ಮಂಕುತಿಮ್ಮನ ಕಗ್ಗವನ್ನು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿ ಖ್ಯಾತರಾದವರೂ ಇನ್ನೆಷ್ಟೋ! ಈ ಅಪರೂಪದ ಕೃತಿಯ ಕುರಿತು ಮನೋವೈದ್ಯೆಯೊಬ್ಬರು ಬಹಳ ಕುತೂಹಲಕಾರಿ ಎನಿಸುವ ಅಭಿಪ್ರಾಯವನ್ನು ಇಲ್ಲಿ ನೀಡಿದ್ದಾರೆ. ಇಮೋಷನಲ್ ಫಸ್ಟ್ ಏಡ್ ಮತ್ತು ಕೆಥಾರ್ಸಿಸ್ ಹಿನ್ನೆಲೆಯಲ್ಲಿ ಮಂಕುತಿಮ್ಮನ ಕಗ್ಗವನ್ನು ವಿಶ್ಲೇಷಿಸಿದ್ದಾರೆ. ಓದಿ ನೋಡಿ.

ಬಾಲ್ಯದಿಂದ ಡಿ.ವಿ.ಜಿ. ಅವರ ಹೆಸರು ನನಗೆ ಗೊತ್ತಿತ್ತು. ‘ಮಂಕುತಿಮ್ಮನ ಕಗ್ಗ’ ಬರೆದವರು ಅವರು ಎನ್ನುವುದಕ್ಕಿಂತ, ನನಗೆ ಆಗಿದ್ದ ಜ್ಞಾನದಂತೆ ಅವರು ಬರೆದ ಕೃತಿಯ ಬಗ್ಗೆ ಹೇಳು ಎಂದರೆ ಅದೊಂದೇ ನನಗೆ ಗೊತ್ತಿದ್ದ ಅವರ ಕೃತಿ! ಬಹುದಿನಗಳ
ಕಾಲ ‘ಜ್ಞಾನಪೀಠ ಪ್ರಶಸ್ತಿ ಬಂದವರನ್ನು ಹೆಸರಿಸು’ ಎಂದರೆ ತತ್‌ಕ್ಷಣ ಮೊದಲಿಗೆ ನನ್ನ ಮನಸ್ಸಿಗೆ ಡಿ.ವಿ.ಜಿ. -ಮಂಕುತಿಮ್ಮನ ಕಗ್ಗ ಎರಡೂ ಬಂದು ಬಿಡುತ್ತಿದ್ದವು! (ಆ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಇರುವುದು ಬೇರೆ ವಿಚಾರ ಮಾತು).

ಮೂರು ಪ್ರಸಿದ್ಧ ಪದ್ಯಗಳೂ ಮಂಕುತಿಮ್ಮನ ಕಗ್ಗದಿಂದ ನನಗೆ ಬಾಯಿಗೆ ಬರುತ್ತಿದ್ದವು. ‘ನಗುವು ಸಹಜದ ಧರ್ಮ….’, ‘ಬದುಕು ಜಟಕಾ ಬಂಡಿ….’ ಮತ್ತು ‘ಹುಲ್ಲಾಗು ಬೆಟ್ಟದಡಿ….’ ಇವು ನಮಗೆ ಪಠ್ಯಪುಸ್ತಕದಲ್ಲಿದ್ದದ್ದು ನೆನಪಿಲ್ಲ. ಆದರೂ ಅವು ಬಾಯಿಗೆ ಬರುವಷ್ಟು ಹಿರಿಯರಿಂದ ಕೇಳಿ, ಆಗಾಗ್ಗೆ ಎಲ್ಲೋ ಉದಾಹೃತವಾದದ್ದನ್ನು ಓದಿದ್ದಿರ ಬೇಕು. ಇವಿಷ್ಟು ಬಾಲ್ಯದ ನೆನಪುಗಳನ್ನು ಬಿಟ್ಟರೆ, ನಂತರ ನಾನು ‘ಮಂಕುತಿಮ್ಮನ ಕಗ್ಗ’ವನ್ನು 2005ರಲ್ಲಿ ಶಿವಮೊಗ್ಗೆಯಲ್ಲಿ ನನ್ನದೇ ನೃತ್ಯ ಸಂಸ್ಥೆಯನ್ನು ಹುಟ್ಟು ಹಾಕು ವಾಗ ಕೈಗೆತ್ತಿಕೊಂಡಿದ್ದೆ.

ಕಲೆ ಮತ್ತು ಮಾನಸಿಕ ಆರೋಗ್ಯಕ್ಕೆ ಅರ್ಪಿತವಾಗಿದ್ದ ಆ ಸಂಸ್ಥೆಯ ಮೊದಲ ನೃತ್ಯ ಕಾರ್ಯಕ್ರಮದ ಮಂಗಳಕ್ಕೆ ನಾನು ಆಯ್ದು ಕೊಂಡದ್ದು ‘ಜಗದ ಬಂಧಿಗೃಹದಿ ವಿಧಿ ನಿನ್ನ ಬಿಗಿಯುತಿರೆ…’ ಎಂಬ ಕಗ್ಗದ ಪದ್ಯವನ್ನು. ‘ಮಂಕು ತಿಮ್ಮನ ಕಗ್ಗ’ ಬಗ್ಗೆ ನನಗೆ ಅಪಾರವಾದ ಗೌರವವೇನೋ ಇತ್ತು. ಆದರೆ ಡಿ.ವಿ.ಜಿ. ಅವರ ಇತರ ಜ್ಞಾಪಕ ಶಾಲೆಯ ಚಿತ್ರಗಳಂತೆ, ಅದು ಓದಲು ಸುಲಭ ಎನಿಸುವಂತಿಲ್ಲ ಎಂಬ ಭಾವನೆ. ಹಾಗೆಯೇ ಅವರದೇ ಅಂತಃಪುರಗೀತೆಗಳು ನೃತ್ಯದಲ್ಲಿ ಪ್ರಚುರವಾಗಿದ್ದಷ್ಟು, ಕಗ್ಗದ ಪದ್ಯ ಗಳನ್ನು ಮಾಡುತ್ತಿದ್ದದ್ದು ವಿರಳ.

ಹಾಗಾಗಿ ‘ಮಂಕುತಿಮ್ಮನ ಕಗ್ಗ’ ನನ್ನ ಪಾಲಿಗೆ ‘ಕಗ್ಗಂಟು’ ಎನಿಸಿಯೇ ಉಳಿದುಬಿಟ್ಟಿತ್ತು. ಆದರೂ ನನ್ನ ನೃತ್ಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಯಾವುದಾದರೊಂದು ಕನ್ನಡ ಪುಸ್ತಕವನ್ನು ಕೊಡುಗೆಯಾಗಿ ನೀಡುವ ಪರಿಪಾಠ ಹಾಕಿಕೊಂಡಿರುವ ನಾನು ಕಗ್ಗದ ಪುಟ್ಟ ಪಾಕೆಟ್ ಪುಸ್ತಕಗಳನ್ನು ತರಿಸಿ ಹಂಚಿದ್ದೆ ಎಂದು ನೆನಪು.

‘ಮಂಕು ತಿಮ್ಮನ ಕಗ್ಗ’ ವನ್ನು ನನ್ನ ಸೋದರಿ ಡಾ. ಶುಭ್ರತಾ ನೃತ್ಯದಲ್ಲಿ ಮಾಡಿದ್ದು, ಕಗ್ಗದ ವ್ಯಾಖ್ಯಾನವನ್ನು ಎಲ್ಲೆಡೆ ಮಾಡಿ, ಖ್ಯಾತರಾಗಿರುವ ವಿದ್ವಾನ್ ಜಿ.ಎಸ್. ನಟೇಶ್‌ರವರು ಮಾಡಿದ್ದು, ಇವು ‘ಕಗ್ಗ’ದ ಬಗೆಗೆ ನನ್ನ ಆಸಕ್ತಿ ಮತ್ತೆ ಚಿಗುರಿಸಿದವು. ಆಗಲೇ ಮತ್ತೆ ಪುಟ್ಟ ಪಾಕೆಟ್ ಪುಸ್ತಕವನ್ನು ನಾನು ಕೈಗೆತ್ತಿಕೊಂಡೆ. ಮನಸ್ಸಿಗೆ ಸಂಬಂಧಪಟ್ಟಂತೆ ಅದರಲ್ಲಿರುವ  ವಿಷಯಗಳನ್ನು ಕುತೂಹಲ ದಿಂದ ಓದಲಾರಂಭಿಸಿದೆ. ಆಗಲೇ ನನಗೆ ಕಗ್ಗಕ್ಕಿರುವ ಹಲವು ಆಯಾಮಗಳು ಹೊಳೆದದ್ದು. ಅದರ ಬಗೆಗೆ ಸ್ವಾರಸ್ಯಕ ರವೆನ್ನಬಹುದಾದ ವಿಷಯಗಳು ತಿಳಿದದ್ದು.

‘ಮಂಕುತಿಮ್ಮನ ಕಗ್ಗ’ದ ಮಹತ್ವ ಅದರ ಹಿಂದಿರುವ ‘ಜೀವನಾನುಭವ’ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಅದು ಮನಸ್ಸಿಗೆ ಎಷ್ಟು ಹತ್ತಿರ ಎಂದು ಒಬ್ಬ ಮನೋವೈದ್ಯೆಯಾಗಿ ಗಮನಿಸಿದರೆ ಅಚ್ಚರಿಯೆನಿಸುತ್ತದೆ. ‘ಮಂಕು ತಿಮ್ಮನ ಕಗ್ಗ’ದ ಮುಖಪುಟದಲ್ಲಿ ಒಂದು ಅಸ್ಪಷ್ಟ ವಾದ ಚಿತ್ರವಿದೆ. ನಾನು ಅದನ್ನು ನೋಡಿದಾಗಲೆಲ್ಲ ‘ಕಾವ್ಯಾಲಯ’ ದವರು ‘ಆಂಟಿಕ್ ಇಫೆಕ್ಟ್’ಗಾಗಿ ಈ ಥರ ಮಾಡಿದ್ದಾರೆ ಎಂದು ನಗುತ್ತಿದ್ದೆ.

ಆದರೆ ‘ಮಂಕುತಿಮ್ಮನ ಕಗ್ಗ’ದ ಬಗೆಗೆ ಇರುವ ಹಲವು ಹಿರಿಯರ ಟಿಪ್ಪಣಿಗಳನ್ನು ನೋಡಿದಾಗ ಅದರ ಅರ್ಥ ಅರಿವಾಯಿತು. ಈ ಚಿತ್ರ ಮುಖ ಯಾರೆಂದು ಗುರುತಿಸಲಾಗದ ಚಹರೆ ಅಸ್ಪಷ್ಟವಾಗಿರುವ ವ್ಯಕ್ತಿ ಪಾಳು ಬಿದ್ದ ಮಂಟಪವೊಂದರಲ್ಲಿ ಧ್ಯಾನಿಸುತ್ತ ಕುಳಿತಿರುವಂಥದ್ದು. ಅಲ್ಲಿರುವ ಮಂದ ಬೆಳಕು ಎಲ್ಲವನ್ನೂ ಅಸ್ಪಷ್ಟವಾಗಿಸಿದೆ.

ಉದ್ದೇಶಪೂರ್ವಕ ಮುದ್ರಣ
ಮೇಧಾವಿಯೊಬ್ಬರು ಡಿ.ವಿ.ಜಿ. ಅವರ ಬಳಿ ‘ಈ ಚಿತ್ರ ಸರಿಯಾಗಿ ಪ್ರಿಂಟಾಗಿಲ್ಲ’ ಎಂದರಂತೆ. ಆದರೆ ಹೀಗೆ ಮುದ್ರಿಸಿರುವುದು ಉದ್ದೇಶಪೂರ್ವಕವಾಗಿಯೇ! ಜಗತ್ತಿನಲ್ಲಿರುವ ಎಲ್ಲರೂ (ತಿಳಿದವರು -ತಿಳಿಯದವರು, ಓದಿದವರು-ಓದದವರು, ಜ್ಞಾನಿಗಳು -ಅಜ್ಞಾನಿಗಳು) ಜೀವನದ ಸತ್ಯಗಳನ್ನು ತಿಳಿದುಕೊಂಡಿರುತ್ತಾರೆ.

ಎಷ್ಟೋ ಬಾರಿ ಅವುಗಳ ಆಳಕ್ಕೆ ಇಳಿದಾಗಲೂ, ಜ್ಞಾನಿಗಳಿಗೂ ಅವು ಸ್ಪಷ್ಟವೆನಿಸುವುದಿಲ್ಲ. ಅಂದರೆ ಈ ಚಿತ್ರದ ಉದ್ದೇಶ, ನಮ್ಮ ಪ್ರಪಂಚ ಜ್ಞಾನವಾಗಲೀ, ಜ್ಞಾನಗಳಿಸುವ ಸಾಮರ್ಥ್ಯವಾಗಲೀ ಸೀಮಿತ. ಎಲ್ಲವೂ ಇಲ್ಲಿ ‘ಅರೆ’, ಅರ್ಧ ಬೆಳಕು, ಅರೆಜ್ಞಾನ, ಪೂರ್ಣವಾಗದ ಒಳನೋಟ. ನನ್ನ ಮಟ್ಟಿಗೆ ಈ ಚಿತ್ರದ ಕಥೆಯೇ ಪ್ರತಿಯೊಬ್ಬರಲ್ಲಿ ಮಂಕುತಿಮ್ಮನ ಕಗ್ಗವನ್ನು ಓದಲು ಪ್ರೇರೇಪಿಸಬೇಕು. ನಂತರದ ಗಮನ ‘ಮಂಕು ತಿಮ್ಮನ ಕಗ್ಗ’ ಎಂಬ ಶೀರ್ಷಿಕೆಯತ್ತ.

‘ಮಂಕು’ ಎಂಬುದು ಮರುಳರೊಡೆಯ ‘ಶಿವ’ನನ್ನು, ತಿಮ್ಮ -ತಿಮ್ಮಪ್ಪ-ವಿಷ್ಣುವನ್ನು ಹರಿಹರರಿಬ್ಬರ ಮೈತ್ರಿಯನ್ನು ಪ್ರತಿ ನಿಧಿಸುತ್ತದೆ ಎನ್ನಲಾಗುತ್ತದೆ. ಅಥವಾ ‘ಮಂಕು ತಿಮ್ಮ’ ಎನ್ನುವ ವ್ಯಕ್ತಿ ಒಬ್ಬ ಸರಳ-ಮುಗ್ಧ, ಹಳ್ಳಿಯ ವ್ಯಕ್ತಿ ಎನ್ನುವುದನ್ನೂ ಸೂಚಿಸಬಹುದು. ‘ಕಗ್ಗ’ ಎಂಬುದರ ಅರ್ಥ ಬಹಳಷ್ಟು ಹಿರಿಯರು ವಿಶ್ಲೇಷಿಸಿರುವಂತೆ ‘ಖಡ್ಗ’ ಎಂಬ ಪದಕ್ಕೆ ಕನ್ನಡ ಪದ ವಾಗಿರಬಹುದು. ಅಜ್ಞಾನವನ್ನು, ಮನಸ್ಸಿನ ಕೊಳೆಯನ್ನು ಕಳೆಯುವಂತಹದ್ದು ಎಂದೂ ಆಗಬಹುದು.

ಕಗ್ಗದ ಮೊದಲಿಗೆ ಒಂದು ‘ತಿಮ್ಮ ಗುರು’ ಮತ್ತು ‘ಸೋಮಿ’ಯರ ಕಥೆ ಬರುತ್ತದೆ. ಚಿಕ್ಕ ಮಕ್ಕಳಿಗೆ ಪಾಠ ಕಲಿಸುವಾಗ ಕಥೆಯ ರೂಪದಲ್ಲಿ ಪಾಠ ಹೇಳುವಂತೆ, ಬುದ್ಧಿ ಹೇಳುವಾಗ ಕಥೆಯೊಂದನ್ನು ಪೀಠಿಕೆಯಾಗಿ ಬಳಸಿದಂತೆ! ನಂತರ ಬರುವ ನಾಲ್ಕು ನಾಲ್ಕು ಸಾಲುಗಳ ‘ಮುಕ್ತಕ’ಗಳು ಬಿಡಿ ಮುತ್ತುಗಳು ಸರದಲ್ಲಿ ಹೊಂದಿಕೊಂಡೂ ಸುಂದರವೇ, ಬಿಡಿ ಬಿಡಿಯಾಗಿಯೂ ಮುದ್ದೇ! ಒಂದೊಂದೇ ಪದ್ಯವನ್ನು ತೆಗೆದುಕೊಂಡು ಸುಮ್ಮನೇ ಯೋಚಿಸಲು ಆರಂಭಿಸಿದರೆ, ನಮ್ಮ ಅನುಭವಗಳನ್ನು ಅದರೊಡನೆ ಸಮೀಕರಿಸಲು ತೊಡಗಿದರೆ ಪ್ರತಿ ಪದ್ಯವೂ ಒಂದು ದೊಡ್ಡ ಚಿತ್ರವನ್ನೇ ನಮ್ಮ ಮುಂದೆ ತೆರೆದಿಡುತ್ತದೆ.

ಬೌದ್ಧ ಸಂಪ್ರದಾಯದ ಝೆನ್‌ಕಥೆಗಳು ಪುಟ್ಟ ಕಥೆಯಲ್ಲಿ ಒಂದು ‘ಸತ್ಯ’ದ ದರ್ಶನ ಮಾಡಿಸುವಂತೆ ಒಂದೊಂದು ಪದ್ಯವೂ ನಮ್ಮ ಒಳಗಣ್ಣನ್ನು ತೆರೆಸುತ್ತವೆ. ಕಗ್ಗದ ಪ್ರತಿ ಪದ್ಯವೂ ಸಹಜವಾಗಿ ಸಾಹಿತ್ಯಕ್ಕೂ-ಮನಸ್ಸಿಗೂ ಇರುವ ಸಂಬಂಧವನ್ನು ವಿಶದ ಪಡಿಸಿದರೂ ಮನಸ್ಸಿಗೇ ನೇರವಾಗಿ ಸಂಬಂಧಿಸಿದ ಕೆಲವು ಭಾಗಗಳನ್ನು ಮನಸ್ಸಿಗೆ ‘ಚಿಕಿತ್ಸಕ’, ‘ರೋಗನಿರೋಧಕ ಶಕ್ತಿ’ ಯನ್ನು ಪ್ರಚೋದಿಸುವ ವ್ಯಾಕ್ಸಿನ್ ಆಗಿ ಗುರುತಿಸಲು ಸಾಧ್ಯ.

ಆತ್ಮ ವಿಸ್ತರಣ, ಮನಸ್ಸಿನ ಹದ, ಭಾವರಾಗೋದ್ರೇಕ, ಆತ್ಮ ಚಿಕಿತ್ಸೆ, ಏಕಾಕಿ ಮನಸ್ಸಾಕ್ಷಿ, ಎರಡು ಕೋಣೆಗಳು, ಜೀವನ ಕಲೆ, ಕೊಳೆ ಶುಚಿ ವ್ಯಾಪಕ ಎಂಬ ಪದ್ಯಗಳಿಗೆ ಸಂಬಂಽಸಿದ ಭಾಗಗಳಲ್ಲಿ ಮನಸ್ಸಿಗೆ ಚಿಕಿತ್ಸೆ ಕೊಟ್ಟು ಕೊಳ್ಳುವ, ಮನಸ್ಸಿನ ಆರೋಗ್ಯ ವನ್ನು ವಧಿಸುವ ಸ್ವಂತ ಸಾಧನವಾಗಿ ಕಗ್ಗ ನಮಗೆ ಆಪ್ತವೆನಿಸಿಬಿಡುತ್ತದೆ. ಕೆಲವು ಪದಗಳ ಅರ್ಥಗಳು ನಿರ್ದಿಷ್ಟವಾಗಿ ಗೊತ್ತಾಗ ದಿರಬಹುದು, ಆದರೆ ಕನ್ನಡ ಓದಿ-ಮಾತನಾಡಿ ಗೊತ್ತಿರುವ ಯಾರಿಗೂ ಆ ತಕ್ಷಣಕ್ಕೆ ಪದ್ಯದ ಒಟ್ಟರ್ಥವನ್ನು ತಿಳಿಯಲು ನಿಘಂಟು, ವ್ಯಾಖ್ಯಾನ ಯಾವುದೇ ಬೇಕಿಲ್ಲ.

ಒಂದರೆಡು ಬಾರಿ ನಾವೇ ಹಾಡಿಕೊಂಡರೆ, ಸುಮ್ಮನೇ, ನಮ್ಮ ಅನುಭವದೊಂದಿಗೆ ಅದನ್ನು ತಳುಕು ಹಾಕುವ ಪ್ರಯತ್ನ ಮಾಡಿ ದರೆ ಸಾಕು. ಮನಸ್ಸಿಗೆ ಪರಿಹಾರವೊಂದು ಹೊಳೆದಂತಾಗುತ್ತದೆ, ಸಮಾಧಾನವಾಗುತ್ತದೆ. ಆಧುನಿಕ ಮನೋವಿಜ್ಞಾನ ಹೇಳುವ ಹಲವು ಜೀವನ ಕೌಶಲಗಳನ್ನು ಕಗ್ಗ ಕಾವ್ಯವಾಗಿ ತೆರೆದಿಡುತ್ತದೆ.

ಉಞಟಠಿಜಿಟ್ಞZಜ್ಟಿoಠಿ Zಜಿb – ಭಾವನಾತ್ಮಕ ಪ್ರಥಮ ಚಿಕಿತ್ಸೆ ಎಂಬ ಪರಿಕಲ್ಪನೆಯಿದೆ. ಕಾಲಿಗೋ, ಕೈಗೋ ಗಾಯವಾಯಿತು ಎನ್ನಿ, ಏನು ಮಾಡುತ್ತೇವೆ? ಔಷಧಿ ಹಚ್ಚಿ, ಅದಕ್ಕೆ ಪಟ್ಟಿ ಕಟ್ಟಿ ಅದನ್ನು ಮಾಯಲು ಸಹಾಯ ಮಾಡುತ್ತೇವೆ, ತಾನೆ? ಆದರೆ
ಮನಸ್ಸಿಗಾಗುವ ನೋವು -ದುಃಖಗಳಿಗೆ? ಅದರ ಬಗೆಗೆ ಮತ್ತೆ ಮತ್ತೆ ಯೋಚಿಸಿ, ಗಾಯವನ್ನು ಚೂರಿಯಿಂದ ಮತ್ತಷ್ಟು ಕೊಯ್ದು ಆಳವಾಗಿಸುವಂತೆ ಮಾಡುತ್ತೇವೆಯೆ? ಅದನ್ನೇ ‘ಆತ್ಮ ಚಿಕಿತ್ಸೆ’ ಎಂಬ ಪದ್ಯಪುಂಜದಲ್ಲಿ ಡಿ.ವಿ.ಜಿ. ಹೀಗೆ ಹೇಳುತ್ತಾರೆ.

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ|

ಕೊರತೆಯೊಂದನು ನೀನು ನೆನೆನೆನೆದು ಕೆರಳಿ||
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ|
ನರಳುವುದು ಬದುಕೇನೋ? – ಮಂಕುತಿಮ್ಮ||
ಹಾಗಿದ್ದರೆ ಮನಸ್ಸಿಗೆ, ನಕಾರಾತ್ಮಕ ಭಾವನೆಗಳು
ಎದುರಾದಾಗ ಓದಲು ಒಂದು ಪದ್ಯ ಯಾವುದು?
ಚಿಂತೆ ಸಂತಾಪುಗಳು ಮನಸ್ಸಿಗೆ ವಿರೇಚಕವೋ|
ಸಂತಸೋತ್ಸಾಹಗಳೆ ಪಥ್ಯದುಪಚಾರ||
ಇಂತು ಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ|
ಎಂತಾದೊಡಂತೆ ಸರಿ-ಮಂಕುತಿಮ್ಮ ||

ಒಂದು ಕಡೆ ‘ವಿರೇಚನ’ – ಕೆಥಾರ್ಸಿಸ್- ಅಂದರೆ ಕೊಳೆಯನ್ನು ಹೊರ ಹಾಕುವುದು, ಇನ್ನೊಂದೆಡೆ ಸಂತಸ-ಉತ್ಸಾಹಗಳ ಉಪಚಾರದಿಂದ ಮನಸ್ಸಿನ ಗಾಯಗಳನ್ನು ಚಿಕಿತ್ಸೆಗೆ ಒಳಪಡಿಸಬೇಕು. ಆತ್ಮವನ್ನು ಸ್ವಸ್ಥವಾಗಿಟ್ಟುಕೊಳ್ಳಬೇಕು. ಹಾಗೆಯೇ ನಮ್ಮದೇ ಮನಸ್ಸನ್ನು ಮಗುವೆಂದು ಭಾವಿಸಿ ಅದನ್ನು ತಿದ್ದುವುದು, ತಿಳಿ ಹೇಳುವುದು, ಸಮಾಧಾನಿಸುವುದು ಇವೆಲ್ಲವೂ ಸ್ವ-ಚಿಕಿತ್ಸಕ ಅಂಶಗಳೇ.

ಡಿ.ವಿ.ಜಿ. ಹೇಳುವ

ಮನವನಾಳ್ವುದು ಹಟದ ಮಗುವನಾಳುವ ನಯದೆ|
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು|
ಇನಿತಿತ್ತು ಮರಸಿನಿತ – ಮಂಕುತಿಮ್ಮ ||

ಅಥವಾ ಮಕ್ಕಳ ಬಗ್ಗೆ ಚಿಂತಿಸುತ್ತ, ತಾವೇ ಖಿನ್ನರಾಗಿ ಬರುವ ಎಷ್ಟೋ ತಂದೆ-ತಾಯಿಗಳನ್ನು ನೋಡಿದಾಗ ನನಗೆ ನೆನಪಾಗುವ ಕಗ್ಗದ ಸಾಲು

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ|
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ||
ದಕ್ಕಿತೇಂ ಕುರುಪಾಂಡು ತನಯರ‍್ಗೆ ರಾಜ್ಯಸುಖ?|
ದಿಕ್ಕವರಿಗವರವರೆ- ಮಂಕುತಿಮ್ಮ||

ಹೀಗೆ ಜೀವನಕಲೆ, ಬದುಕಲು ಬೇಕಾದ ಕೌಶಲಗಳನ್ನು ಯಾರೂ ತಮ್ಮ ಜೀವನವನ್ನು ಅವಲೋಕಿಸುವುದರಿಂದಲೇ ಕಲಿಯ ಬಹುದು. ಡಿ.ವಿ.ಜಿ. ಅವರು ಹೇಳಿರುವ ಹಾಗೆ ‘ಬಹುವಿದ್ಯೆ ಬಹುತರ್ಕ ಬಹು ನೇಮ ಬೇಕಿಲ್ಲ’ ಆದರೆ ‘ಸಹನೆ ಸಮರ ಸಭಾವ ದಂತಃ ಪರೀಕ್ಷೆಗಳು’ ಬೇಕು. ಅಂತಹ ಜೀವನಾವಲೋಕನ ನಡೆಸಲು, ನಮ್ಮ ಮನಸ್ಸಿನ ಹಲವು ಮುಖಗಳನ್ನು ಅರಿಯಲು ‘ಮಂಕು ತಿಮ್ಮನ ಕಗ್ಗ’ ಒಂದು ಪ್ರಮುಖ ಮಾರ್ಗ ಎನಿಸುತ್ತದೆ.