ದುವೆ ಅಂದ ಮೇಲೆ ರುಚಿಕರ ಊಟ ಮಾಡಲೇಬೇಕು. ಆದರೆ, ಹೊಸ ಸೀರೆ ಉಟ್ಟಾಗ, ಒಡವೆ ಧರಿಸಿದಾಗ ಊಟದ
ಸಮಯದಲ್ಲಿ ಆಗುವ ಎಡವಟ್ಟುಗಳೇನು?
ನಳಿನಿ ಟಿ. ಭೀಮಪ್ಪ ಧಾರವಾಡ
ಈ ಮದುವೆಗೆಂದು ನಾವು ಹೆಣ್ಣುಮಕ್ಕಳು ಸುಮ್ಮನೆ ಹೋಗ್ತೀವಾ? ಸುಮ್ನೆ ಗೊಂಬೆಯ ಹಾಗೆ ಅಲಂಕಾರ ಮಾಡಿಕೊಂಡು ಹೋಗಿ
ಬಂದರೆ ಉಂಡ ಊಟವಾದರೂ ಕರಗುತ್ತದೆಯಾ ನೀವೇ ಹೇಳಿ? ಮದುವೆಯ ಜೋಡಿಯನ್ನು ಸರಿಯಾಗಿ ನೋಡ್ತೀವೋ ಇಲ್ವೋ ಗೊತ್ತಿಲ್ಲ, ಆದರೆ ನಮ್ಮ ಸೀರೆ, ಒಡವೆ, ಅಲಂಕಾರ, ಎಲ್ಲವನ್ನೂ ನಮಗೆ ಗೊತ್ತಿರುವ ಸ್ನೇಹಿತೆಯರು, ಬಂಧುಗಳು ಸರಿಯಾಗಿ ನೋಡಿ ಹೊಟ್ಟೆೆ ಉರ್ಕೋಂಡ್ರೋ ಇಲ್ವೋ ಅಂತ ಗಮನಿಸುತ್ತಲೇ ಇರುತ್ತೀವೆ. ಆ ಸೀರೆ, ಒಡವೆಗಳನ್ನು ಗಮನಿಸಿ, ಅವುಗಳ ಬಗ್ಗೆ ನಮ್ಮ ಗೆಳತಿಯರು, ಬಂಧುಗಳು ನಮ್ಮ ಬಳಿ ಸಾರಿ, ಕೇಳುವ ತನಕ ಅವರ ಗಮನ ಸೆಳೆಯಲು ಸಾಕಷ್ಟು ಕಸರತ್ತು ಮಾಡುತ್ತೇವೆ. ಆ ಕುರಿತು ಕೇಳಿದ ಮೇಲೆ ಕೈಬಾಯಿ ತಿರುವುತ್ತ ಸುತ್ತ ಮುತ್ತ ನಾಲ್ಕು ಜನಕ್ಕೆೆ ಕೇಳುವಂತೆ ವಿವರಣೆ ಕೊಡುವುದು, ಸ್ವಲ್ಪ ಹೊತ್ತು ಅವರಿವರ ಬಗ್ಗೆೆ ಆಡಿಕೊಳ್ಳುವುದು, ಒಂದಿಷ್ಟು ಸೆಲ್ಫೀ ತಕ್ಕೊಂಡು ಎಫ್‌ಬಿ ಗೆ, ವಾಟ್ಸಪ್ಪಿಗೆ ಸ್ಟೋರಿ ಹಾಕಿ ಕಮೆಂಟಿಗಾಗಿ ಪರಿತಪಿಸುವುದು, ಆಹಾ! ಇಂಥವೆಲ್ಲ ಮಾತ್ರ ಮಿಸ್ ಮಾಡಿಕೊಳ್ಳೋದಿಲ್ಲ ನೋಡಿ.
ಆದರೆ ಊಟಕ್ಕೆ ಹೋಗುವಾಗ ಆಗುವ ನುಗ್ಗಾಟ, ತಿಕ್ಕಾಟ, ಕೊಸರಾಟದಲ್ಲಿ ಆಗುವ ಒದ್ದಾಟ ದೇವರಿಗೇ ಪ್ರೀತಿ. ಊಟದ ಪಂಕ್ತಿಯ ಸ್ಥಳಕ್ಕೆ ಗುದ್ದಾಡುತ್ತ ಜಾಗ ಗಿಟ್ಟಿಸಿಕೊಂಡು ಕೂತರೆ, ಒಂದು ಕಡೆ ಉಟ್ಟುಕೊಂಡ ಭಾರೀ ಸೀರೆಗೆ ಎಲ್ಲಿ ಎಂಜಲು ಬಿದ್ದು ಗಲೀಜಾಗಿ ಬಿಡುತ್ತದೆಯೋ ಎನ್ನುವ ಆತಂಕ, ಮತ್ತೊಂದು ಕಡೆ ಕಣ್ಣಲ್ಲಿ ಕಣ್ಣಿಟ್ಟುಕೊಂಡು ತೊಟ್ಟ ಒಡವೆಗಳನ್ನು ಕಾಯಬೇಕಾದ ಕರ್ಮ,
ಜತೆಗೆ ಮುಂದಿನ ಪಂಕ್ತಿಯವರು ನಾವು ಕುಳಿತ ಸೀಟಿಗಾಗಿ ಹಿಂದೆ ನಿಂತು ಕಣ್ಕಣ್ಣು ಬಿಟ್ಕೊಂಡು, ಇವರ ಊಟ ಯಾವಾಗ ಮುಗಿಯುತ್ತೋ ಅಂತಾ ಕೆಕ್ಕರಿಸಿ ನೋಡುತ್ತಿರುವುದು, ಮುಗಿಯುವ ಹೊತ್ತಿಗೆ ದೂರದಲ್ಲಿದ್ದ ತಮ್ಮ ಬಳಗವನ್ನು ಇಲ್ಲೇ ಬರ್ರೀ ಸೀಟು ಖಾಲಿಯಾಗುತ್ತಿವೆ ಅಂತಾ ಕರೆಯುವಾಗ ಊಟದ ಮೇಲಿನ ಆಸಕ್ತಿ ಅರ್ಧ ಹೊರಟೇ ಹೋಗಿರುತ್ತದೆ.
ಊಟ ಮಾಡುವಾಗ ಸೀರೆ ಮೇಲೆ ಕಣ್ಣು ಇನ್ನು ನೀರಿನ ಲೋಟ ಯಾವಾಗ ಉರುಳಿಬೀಳುತ್ತದೆಯೋ, ಪಕ್ಕದಲ್ಲಿ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಕುಳಿತವರಿದ್ದರೆ ಅಥವಾ ಪುಟಾಣಿ ಮಕ್ಕಳು ಕುಳಿತಿದ್ದರೆ ಎಂಜಲು ಕೈಯ್ಯನ್ನು ಯಾವಾಗ ನಮ್ಮ ಸೀರೆಗೆ ತಿಕ್ಕಿ ಬಿಡುತ್ತವೆ ಎನ್ನುವ ಆತಂಕದಲ್ಲಿ ಒಂದು ಕಣ್ಣು ಅವರ ಮೇಲೆ ಇಡಬೇಕಾಗುತ್ತದೆ. ಬಾಳೆ ಎಲೆಯಿಂದ ಸಾರು ಜೋಗ ಜಲಪಾತ ದಂತೆ ಕವಲುಗಳಾಗಿ ಹರಿದು ಮೈಮೇಲೆ ಬಿದ್ದು ಸೀರೆಯನ್ನು ಹಾಳುಮಾಡುತ್ತದೆಯೆಂಬ ದಿಗಿಲು, ಒಟ್ಟಿನಲ್ಲಿ ಕಣ್ಣ ಮುಂದೆ ಪಕ್ವಾನ್ನಗಳಿದ್ದರೂ ಹೆದರಿಕೊಂಡು ನೆಮ್ಮದಿ ಇಲ್ಲದ ಹಾಗೆ ಉಣ್ಣುವುದು ಅಂದರೆ ಮದುವೆ ಮನೆಯಲ್ಲೇ ಅನಿಸುತ್ತೆ.
ಬಫೆಗೆ ಹೋದಾಗ ಮತ್ತೊಂದು ರೀತಿಯ ಫಜೀತಿ. ಒಂದು ಕೈಯ್ಯಲ್ಲಿ ಪರ್ಸ್, ಕರ್ಚೀಫ್, ಮತ್ತೊಂದು ಕೈಯ್ಯಲ್ಲಿ ತಟ್ಟೆೆ ಹಿಡಿದು ಬೇಕಾದ್ದನ್ನು ನೀಡಿಸಿಕೊಂಡು ಕುಳಿತುಕೊಳ್ಳೋಣ ಎಂದರೆ ಎಷ್ಟೋ ಸಲ ಕುರ್ಚಿಗಳೆಲ್ಲಾ ತುಂಬಿಬಿಟ್ಟಿರುತ್ತವೆ. ಇನ್ನು ಹಾಗೇ, ಹೀಗೇ ವಾಲಾಡುತ್ತಾ ನಿಂತು ಸರ್ಕಸ್ ಮಾಡಿಕೊಂಡು ಊಟ ಮಾಡುವಾಗ, ನೀಡಿಸಿಕೊಳ್ಳಲು, ಕೈ ತೊಳೆಯಲು ಹೋಗುವ ಜನರಿಗೆ, ಜತೆಗೆ ತುಂಬಿದ ಎಂಜಲು ತಟ್ಟೆೆಯ ಬುಟ್ಟಿಯನ್ನು ಹೊತ್ತುಕೊಂಡು ಹೋಗುವ ಕೆಲಸಗಾರರಿಗೆ ಜಾಗ ಮಾಡಿಕೊಡುತ್ತ, ಆತ್ಮೀಯರು ಕಂಡಾಗ ಎರಡೂ ಕೈಗಳು ಬಿಜಿ ಇರುವುದರಿಂದ ಕೈಬೀಸಲೂ ಆಗದೆ, ಬಾಯಾಡಿಸುತ್ತಿರುವುದರಿಂದ ಮಾತನಾಡಿಸಲೂ ಆಗದೆ, ಬರೀ ನಕ್ಕು, ಗೋಣಾಡಿಸಿ ಕಳಿಸುವ ಹೊತ್ತಿಗೆ ಏನು ತಿಂದೆವೋ, ಬಿಟ್ಟೆವೋ ನೆನಪು ಕೂಡ ಇರುವುದಿಲ್ಲ. ಅಲ್ಲಲ್ಲಿ ನೆಲಕ್ಕೆ ಬಿದ್ದ ಮುಸುರೆಯನ್ನು ಲಾಂಗ್ ಜಂಪ್ ಮಾಡಿಕೊಂಡು ಹೋಗಿ ಕೈತೊಳೆಯುವಾಗ ಅಲ್ಲಿನ ನಳವನ್ನು ಒಂದು ಕೈಯ್ಯಲ್ಲಿ ತಿರುವಿ, ಮತ್ತೊಂದು ಕೈ ತೊಳೆದು, ನೀರು ಸಿಡಿಸಿಕೊಳ್ಳದೆ ಹೊರಬಂದರೆ ಒಂದು ಸಣ್ಣ ಯುದ್ಧ ಗೆದ್ದುಬಂದ ಅನುಭವ.
ಕುಡಿಯುವ ನೀರನ್ನು ಇಟ್ಟ ಜಾಗದಲ್ಲಿ ಒಂದು ಫೈಟ್, ಐಸ್‌ಕ್ರೀಮ್‌ಗಾಗಿ ಕ್ಯೂ ನಿಂತ ಜನರ ಮಧ್ಯೆ ಮತ್ತೊಂದು ಫೈಟ್, ಆ ಮೇಲೆ ಫಲ ತಾಂಬೂಲ ಪಡೆಯುವಲ್ಲಿ ಕೊಸರಾಟ, ಎಲ್ಲಾ ಮುಗಿದು ಕೊನೆಗೆ ಪಾನ್ ಬೀಡಾ ಅಗಿಯುತ್ತಾ ಹೊರಗೆ ಬಂದಾಗ
ಬಿಡುಗಡೆ ಸಿಕ್ಕ ಹಾಗೆಯೇ ಸೈ.