Saturday, 14th December 2024

ಬಂಧನವಾಗದಿರಲಿ ಮದುವೆಯ ಈ ಬಂಧ !

ಮದುವೆ ಎನ್ನುವುದು ಸಿನಿಮಾಗಳಲ್ಲಿ ಕಂಡಷ್ಟು, ಪುಸ್ತಕದಲ್ಲಿ ಓದಿದಷ್ಟು ರಮ್ಯ, ಸುಲಭವಲ್ಲ ನಿಜ. ಸಂಪೂರ್ಣ ಭಿನ್ನ ವಾತಾ ವರಣದಲ್ಲಿ ಬೆಳೆದ ಇಬ್ಬರು ಪ್ರಬುದ್ಧ ವ್ಯಕ್ತಿಗಳು ಒಂದೇ ಸೂರಿನಡಿಯಲ್ಲಿ ಸ್ವತಂತ್ರವಾಗಿ ಬದುಕಬೇಕಾದರೆ ಹೊಂದಾಣಿಕೆಯ ಜತೆ ವೈಯಕ್ತಿಕ ಇಷ್ಟಾನಿಷ್ಟಗಳ ಕುರಿತಾದ ರಾಜಿಯೂ ಅನಿವಾರ್ಯ. ಹಾಗೆಯೇ ಹೆಗಲೇರುವ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸವೂ ಕಠಿಣವೇ. ಆದ್ದರಿಂದಲೇ ಕಲ್ಪನೆಯಲ್ಲಿ ಅಂದುಕೊಂಡಷ್ಟು ಮದುವೆ ಸುಲಭ ಮತ್ತು ಸುಂದರವಲ್ಲ.

ಡಾ.ಕೆ.ಎಸ್.ಚೈತ್ರಾ

ಇಬ್ಬರು ಬಾಳ ಸಂಗಾತಿಯಾಗುವ ಸಂದರ್ಭ ಬಹು ನಿರೀಕ್ಷೆಯನ್ನು ಹುಟ್ಟು ಹಾಕುವ ಸಮಧುರ ಕ್ಷಣ. ಏನೇನೋ ಆಸೆಗಳು,
ನಿರೀಕ್ಷೆಗಳು, ಸಾಧ್ಯತೆಗಳು, ಭರವಸೆಗಳು. ಎಲ್ಲವೂ ಸುಲಲಿತವಾಗಿ ಸಾಗಿದರೆ ಸುಖ, ನಡುವೆ ದಾರಿ ತೊಡಕಾದರೆ ಒತ್ತಡ!

ಮದುವೆಯಾದ ಹೊಸತರಲ್ಲಿ ಮದುವೆ ಎಂಬುದು ಇಬ್ಬರು ವ್ಯಕ್ತಿಗಳನ್ನು ಮಾತ್ರವಲ್ಲ, ಕುಟುಂಬಗಳನ್ನು ಬೆಸೆಯುವ ಪವಿತ್ರ ಸಂಬಂಧ. ದೇಹ, ಮನಸ್ಸು, ಆತ್ಮಗಳ ಮಿಲನ. ಪ್ರೀತಿಸಿ , ಗುರು- ಹಿರಿಯರ ಆಶೀರ್ವಾದ ಪಡೆದು ಮದುವೆಯಾಗಿದ್ದೇವೆ.
ನಾವಿಬ್ಬರೂ ಬರೀ ಗಂಡ-ಹೆಂಡತಿಯಲ್ಲ; ಆತ್ಮಸಂಗಾತಿ ಗಳು. ಬಾಳೆಂಬ ಪಯಣದಲ್ಲಿ ಸಹಚರರು.

ಮದುವೆಯಾಗಿ ಒಂದು ವರ್ಷದ ನಂತರ ಮದುವೆ ಎಂದರೆ ಶಿಕ್ಷೆಯೇ ಸರಿ! ಪರಸ್ಪರ ಪ್ರೀತಿ ವಿಶ್ವಾಸ ಇಲ್ಲದ ಬರೀ ಹೊಂದಾಣಿಕೆ ಯ ನೀರಸ ಬದುಕು. ಪ್ರೀತಿಗೆ ಕಣ್ಣಿಲ್ಲ ಎಂಬುದು ಅಕ್ಷರಶಃ ಸತ್ಯ. ಇಲ್ಲದಿದ್ದರೆ ಇಂಥ ವ್ಯಕ್ತಿಯೊಡನೆ ಬದುಕಲು ಹೇಗೆ ಸಾಧ್ಯ? ಈ ಉಸಿರುಕಟ್ಟಿಸುವ ವಾತಾವರಣದಲ್ಲಿ ಬೇಯುತ್ತಾ, ದೂಷಣೆಗೆ ಒಳಗಾಗಿ ಬದುಕಲು ನನ್ನಿಂದ ಸಾಧ್ಯವಿಲ್ಲ. ವಿ ವಾಹ್ ಅಲ್ಲ, ವ್ಯಾ ಎನ್ನುವಂತಾಗಿದೆ. ವಿಚ್ಛೇದನ ಬೇಕು!

ಅರೆ, ಪ್ರೀತಿಸಿ ಮದುವೆಯಾದವರ ವೈವಾಹಿಕ ಬದುಕಿನಲ್ಲಿ ಇಷ್ಟು ಬೇಗ ಹೀಗೆ ಅಪಶ್ರುತಿ ಮೂಡಲು ಕಾರಣವೇನು.. ಕ್ಯಾ ಕರ್‌ನಾ ? ಕರೋನಾ! ಮದುವೆ ಎನ್ನುವುದು ಸಿನಿಮಾಗಳಲ್ಲಿ ಕಂಡಷ್ಟು, ಪುಸ್ತಕದಲ್ಲಿ ಓದಿದಷ್ಟು ರಮ್ಯ, ಸುಲಭವಲ್ಲ ನಿಜ. ಸಂಪೂರ್ಣ ಭಿನ್ನ ವಾತಾವರಣದಲ್ಲಿ ಬೆಳೆದ ಇಬ್ಬರು ಪ್ರಾಯ ಪ್ರಬುದ್ಧ ವ್ಯಕ್ತಿಗಳು ಒಂದೇ ಸೂರಿನಡಿಯಲ್ಲಿ ಸ್ವತಂತ್ರವಾಗಿ ಬದುಕಬೇಕಾದರೆ ಹೊಂದಾಣಿಕೆಯ ಜತೆ ವೈಯಕ್ತಿಕ ಇಷ್ಟಾನಿಷ್ಟಗಳ ಜತೆ ರಾಜಿಯೂ ಅನಿವಾರ್ಯ. ಹಾಗೆಯೇ ಹೆಗಲೇರುವ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸವೂ ಕಠಿಣವೇ. ಆದ್ದರಿಂದಲೇ ಕಲ್ಪನೆಯಲ್ಲಿ ಇದ್ದಷ್ಟು ಮದುವೆ ಸುಲಭ ಮತ್ತು ಸುಂದರವಲ್ಲ. ಅತಿಯಾದ ನಿರೀಕ್ಷೆ, ವಾಸ್ತವಕ್ಕೆ ಹೊಂದಿಕೊಳ್ಳಲಾರದ ಮನಸ್ಸು, ತನ್ನದೇ ಸರಿ ಎಂಬ ಅಹಂ ಇವುಗಳೆಲ್ಲದರಿಂದ ಮದುವೆಗಳು ವಿಚ್ಛೇದನ ದಲ್ಲಿ ಕೊನೆಗೊಳ್ಳುತ್ತವೆ.

ಆದರೆ ಈ ಕರೋನಾ ಸಮಯದಲ್ಲಿ ವಿಚ್ಛೇದನ ಬಯಸುವವರ ಸಂಖ್ಯೆ ಅಧಿಕವಾಗುತ್ತಿದೆ ಎಂದು ವರದಿಗಳು ದೃಢಪಡಿಸಿವೆ. ಇದಕ್ಕೆ ಕಾರಣಗಳು ಹಲವು. ಹೆಚ್ಚಿದ ಮಾನಸಿಕ ಒತ್ತಡ ಕರೋನಾ ಎಂಬ ಸೋಂಕು ದೈಹಿಕ- ಮಾನಸಿಕ ಆರೋಗ್ಯ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಹೀಗೆ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಕರಿನೆರಳು ಚಾಚಿದೆ. ಸಹಜವಾಗಿಯೇ ಇದು ಪ್ರತಿಯೊಬ್ಬರಲ್ಲೂ
ಆರೋಗ್ಯ, ವೃತ್ತಿ, ಸಂಬಂಧಗಳ ಮೇಲೆ ಆತಂಕವನ್ನು ಹುಟ್ಟಿಸಿದೆ. ಮನಸ್ಸಿನಲ್ಲಿರುವ ಒತ್ತಡವನ್ನು ಹೊರಹಾಕುವ ಸುಲಭ ವಿಧಾನವೆಂದರೆ ಎದುರಿಗಿರುವವರ ಮೇಲೆ ಅದನ್ನು ನಾನಾ ರೂಪದಲ್ಲಿ (ಸಿಟ್ಟು, ಮೌನ, ಕಿರಿಕಿರಿ, ವ್ಯಂಗ್ಯ, ಬೈಗುಳ) ಹೊರ ಹಾಕುವುದು. ಒಂದೆರಡು ಬಾರಿಯಾದರೆ ಸರಿ, ಆದರೆ ಪದೇ ಪದೇ ಈ ರೀತಿಯ ವರ್ತನೆ ಸಂಗಾತಿಯ ಮೇಲೆ ನಡೆದಾಗ ಸ್ವತಃ ಒತ್ತಡದಲ್ಲಿರುವ ಅವರಿಗೆ ಸಹಿಸಲು ಅಸಾಧ್ಯವೆನಿಸುತ್ತದೆ.

ಸದಾ ಒಟ್ಟಿಗೇ ಇರುವ ಅನಿವಾರ್ಯತೆ ಎಷ್ಟೇ ಪ್ರೀತಿ ಇದ್ದರೂ, ಜೀವನಸಂಗಾತಿಗಳು ಎಂದರೂ ಪತಿ-ಪತ್ನಿ ಎರಡು ಬೇರೆ ದೇಹ-ಮನಸ್ಸಿನ ವ್ಯಕ್ತಿಗಳೇ. ದಿನದ ಇಪ್ಪತ್ತ ನಾಲ್ಕು ಗಂಟೆಯೂ ಒಟ್ಟಿಗೇ ಇದ್ದಾಗ ಕಿರಿಕಿರಿ ಎನಿಸುತ್ತದೆ. ಸಣ್ಣ ಪುಟ್ಟ ಸಹಜ ವರ್ತನೆ ಯೂ ಸಿಟ್ಟು ತರಿಸುತ್ತದೆ. (ದಿನಕ್ಕೆೆ ನಾಲ್ಕು ಬಾರಿ ಕಾಫಿ ಕುಡೀತಾರೆ. ಪ್ರತಿ ಸಲ ಸೊರ್ ಅನ್ನುವ ಶಬ್ದ ಕೇಳಿ ಮೈ ಉರಿಯುತ್ತೆ, ಇವಳು ದಿನಕ್ಕೆ ಹತ್ತು ಸಲ ಅಡಿಗೆಮನೆಗೆ ಓಡೋದು- ಪದೇ ಪದೇ ಅಡಿಗೆ ಏನ್ಮಾಡ್ಲಿ ಅಂತ ಕೇಳೋದು, ತರಕಾರಿ ಇಲ್ಲ ಅನ್ನೋದು.. ನಂಗೆ ಪಿತ್ತ ನೆತ್ತಿಗೇರುತ್ತೆ) ಹೀಗೆ ಕೇಳಲು ತೀರಾ ಸಣ್ಣದು ಎನಿಸಿದರೂ ದಿನವಿಡೀ ಮನೆಯಲ್ಲೇ ಇರುವ ಪರಿಣಾಮ ಇವೆಲ್ಲಾ ದೋಷಗಳಂತೆ ಭಾಸವಾಗುವುದು.

ಸಾಮಾಜಿಕ ಸಂಪರ್ಕದ ಕೊರತೆ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಕಾಡುತ್ತಿದೆ. ಕರೋನಾ ಹರಡುವ ಭೀತಿಯಿಂದಾಗಿ ಹೊರಗೆ ಹೋಗಲು ಹೆದರಿಕೆ, ಆಚೀಚೆ ಮನೆಯ ಆತ್ಮೀಯರ ಜತೆ ಬೆರೆಯಲು ಸಹ ಅಂಜಿಕೆ. ಒಟ್ಟಿನಲ್ಲಿ ನಾಲ್ಕು ಗೋಡೆಗಳ ನಡುವಿನ ನೀರಸ-ಅನಿಶ್ಚಿತ ಬದುಕು.

ಹೊರಗೆ ಹೋಗುವಂತಿಲ್ಲ, ಸಿನಿಮಾ ಥಿಯೇಟರ್‌ಗೆ ಭೇಟಿ ಇಲ್ಲ, ಹೊಟೇಲ್‌ಗೆ ಹೋಗಿ ತಿಂಡಿ ಅಥವಾ ಚಾಟ್ಸ್ ತಿನ್ನುವ ಅವಕಾಶ ವಿಲ್ಲ. ಜಡ್ಡುಕಟ್ಟಿದ ದಿನಚರಿ. ಮನಸ್ಸಿಗಾಗುವ ದುಗುಡ ಹಂಚಿಕೊಂಡು ಹಗುರಾಗುವ ಮಾರ್ಗವೇ ಇಲ್ಲದಿದ್ದಾಗ ಮನಸ್ಸಿಗೆ ಯಾವುದೂ ಬೇಡ ಎನ್ನಿಸುವುದು ಸಹಜವೇ. ಮನೆ ಜೈಲೆನಿಸಿದರೆ ಮದುವೆ ಎಂಬ ವ್ಯವಸ್ಥೆ ಬಿಗಿಯುವ ಬಂಧ ಅನ್ನಿಸುತ್ತದೆ.

ಒತ್ತಡಕ್ಕೆ ಮದ್ದು ವಿಚ್ಛೇದನವಲ್ಲ ನಿಜ ಇವೆಲ್ಲವೂ ನಡೆಯುತ್ತಿದೆ. ಆದರೆ ಇದಕ್ಕೆ ವಿಚ್ಛೇದನವೇ ಪರಿಹಾರವಲ್ಲ. ಬದಲಿಗೆ ಅದನ್ನು ಸರಿಯಾಗಿ ನಿರ್ವಹಿಸಲು ಕಲಿಯಬೇಕು ಅಷ್ಟೇ. ಕರೋನಾ ಮಾತ್ರವಲ್ಲ, ಯಾವುದೇ ಸಂಕಷ್ಟವನ್ನಾದರೂ ಒಬ್ಬಂಟಿ ಯಾಗಿ ಎದುರಿಸುವುದು ಕಠಿಣ. ಇಂಥಹ ಪರಿಸ್ಥಿತಿಯಲ್ಲಿ ಕುಟುಂಬದ ಪ್ರೀತಿ, ಬಹು ದೊಡ್ಡ ಶಕ್ತಿ ಎಂಬುದನ್ನು ನೆನಪಿನಲ್ಲಿಡ ಬೇಕು.

ಎಲ್ಲರೂ ಮನೆಯಲ್ಲಿ ಇದ್ದರೂ, ಒಂದು ಸ್ಥೂಲವಾದ ಶಿಸ್ತಿನ ಚೌಕಟ್ಟಿನಲ್ಲಿ ನಿಗದಿತವಾದ ದಿನಚರಿಯನ್ನು ಅನುಸರಿಸುವುದು ಅಗತ್ಯ. ದಿನನಿತ್ಯದ ಮಾಮೂಲಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವ ಸ್ವಯಂ ಶಿಸ್ತನ್ನು ಎಲ್ಲರೂ ಅವರವರೇ ಪಾಲಿಸಬೇಕು. (ಸ್ನಾನ, ಸ್ವಚ್ಛತೆ, ಊಟ, ನಿದ್ದೆ ಹೀಗೆ). ಇದಕ್ಕೆೆ ಬೇರೆಯವರು ನೆನಪಿಸುವ ತನಕ ಕಾಯಬಾರದು, ಆ ರೀತಿ ನೆನಪಿಸಿದಾಗಲೇ ಅನವಶ್ಯಕ ಒತ್ತಡ ಸೃಷ್ಟಿಯಾಗುವ ಸಾಧ್ಯತೆ ಇದೆ!

ಕೆಲಸ ಹಂಚಿಕೊಳ್ಳುವ ಸರಳ ಉಪಾಯ ಮಕ್ಕಳೂ ಸೇರಿದಂತೆ ವಯಸ್ಸು- ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳ ಹಂಚಿಕೆಯನ್ನೂ ಮಾಡಬೇಕು. ಆಗ ಒಬ್ಬರ ಮೇಲೆ ಒತ್ತಡ ಬೀಳುವುದಿಲ್ಲ, ಎಲ್ಲರಿಗೂ ತುಸು ಬಿಡುವಿನ ಸಮಯ ದೊರೆಯು ತ್ತದೆ. ಇದರ ಜತೆಯಲ್ಲೇ ಪ್ರತಿದಿನವೂ ತಮಗಾಗೇ ಒಂದಿಷ್ಟು ಸಮಯ ಹೊಂದಿಸಿಕೊಳ್ಳಬೇಕು. ರೂಮಿನಲ್ಲಿ ಕುಳಿತು ಸಂಗೀತ ಕೇಳುವುದು, ಇಷ್ಟದ ಪುಸ್ತಕ ಓದುವುದು, ಸುಮ್ಮನೇ ಮಲಗುವುದು, ಸಣ್ಣ ವಾಕ್ ಇತ್ಯಾದಿ. ಮನೆಯ ಆರ್ಥಿಕ ಪರಿಸ್ಥಿತಿ, ಉದ್ಯೋಗದ ಒತ್ತಡ ಇವುಗಳ ಬಗ್ಗೆ ಮನಸ್ಸಿನಲ್ಲೇ ಚಿಂತಿಸುವುದರ ಬದಲು ಸಂಗಾತಿಯೊಂದಿಗೆ ಚರ್ಚಿಸುವುದು ಒಳ್ಳೆಯದು.

ಅದರಿಂದ ತಕ್ಷಣ ಪರಿಹಾರ ಸಿಗದೇ ಇದ್ದರೂ ಮನಸ್ಸಿಗೆ ಸಮಾಧಾನವಾಗುತ್ತದೆ. ಆತ್ಮೀಯರೊಂದಿಗೆ ಫೋನ್- ಇಮೇಲ್, ಪತ್ರದ ಮೂಲಕ ಸಂಪರ್ಕ ಇಟ್ಟುಕೊಳ್ಳುವುದು ಮುಖ್ಯ. ಆಗಾಗ, ಸಂದರ್ಭ ನೋಡಿಕೊಂಡು, ವಿಡಿಯೋ ಕಾಲ್ ಮಾಡುವುದರಲ್ಲಿ ತಪ್ಪಿಲ್ಲ. ಪತಿ- ಪತ್ನಿಯರು ದಿನವಿಡೀ ಆಗಾಗ್ಗೆ ಜಗಳವಾಡುವ ಬದಲು ಒಂದು ಸಮಯ ಗೊತ್ತುಪಡಿಸಿ ತಮಗೆ ಇಷ್ಟವಾಗದ
ವಿಷಯಗಳ ಕುರಿತು ಚರ್ಚಿಸುವುದು ಉತ್ತಮ.

ಇವೆಲ್ಲದರ ಜತೆ ಮುಖ್ಯವಾಗಿ ದುಃಖ, ಕೋಪ, ಭಯ ಇವೆಲ್ಲವೂ ಎಲ್ಲರಿಗೂ ಆಗುವಂಥದ್ದೇ ಮತ್ತು ಸಹಜ, ಆದರದು ಆ ಕ್ಷಣಕ್ಕೆ ಮಾತ್ರ ಸೀಮಿತ ಎಂಬುದನ್ನು ತಿಳಿದು ತಾಳ್ಮೆ ವಹಿಸುವುದು. ಸಹನೆ, ಪ್ರೀತಿ ಮತ್ತು ಗೌರವಗಳಿದ್ದರೆ, ಮದುವೆ ಸುಂದರ ಬಂಧ, ಇಲ್ಲದಿದ್ದರೆ ಬಂಧನ!

ಪರಸ್ಪರ ದೂಷಣೆ
ಹೆಚ್ಚಿನವರಿಗೆ ವರ್ಕ್ ಫ್ರಾಮ್ ಹೋಂ, ಮಕ್ಕಳಿಗೆ ಮನೆಯಲ್ಲೇ ಆನ್ ಲೈನ್ ಶಾಲೆ ನಡೆಯುತ್ತಿದೆ. ಹಾಗೆಂದು ಜವಾಬ್ದಾರಿ ಕಡಿಮೆಯಲ್ಲ, ಬದಲಿಗೆ ಹೆಚ್ಚಿದೆ. ಮನೆಯ ಸ್ವಚ್ಛತೆ, ತಿಂಡಿ-ಊಟದ ವ್ಯವಸ್ಥೆ ಮತ್ತು ಆಫೀಸಿನ ಕೆಲಸ ಇವೆಲ್ಲವನ್ನೂ ನಿಭಾಯಿ ಸುವುದು ಅನಿವಾರ್ಯ. ಎಲ್ಲರೂ ಎಲ್ಲವನ್ನೂ ಹಂಚಿಕೊಂಡು ಮಾಡಿದರೆ ಸರಿ. ಆದರೆ ಒಬ್ಬರ ಮೇಲೆ ತೀರಾ ಹೊಣೆ ಹೆಚ್ಚಿದಾಗ ಅಸಮಾಧಾನ ಮೂಡುತ್ತದೆ.

ತಾನು ಒಬ್ಬನೇ ಜವಾಬ್ದಾರಿ ತೆಗೆದುಕೊಂಡು, ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಲ್ಲಾ ಎಂಬ ಒತ್ತಡ ಬೆಳೆಯುತ್ತದೆ. ತನಗೇಕೆ ಎಲ್ಲಾ ಜವಾಬ್ದಾರಿ ಎಂಬ ಪ್ರಶ್ನೆ ಮೂಡುತ್ತದೆ. ಪರಸ್ಪರರ ಮೇಲೆ ಮಕ್ಕಳಿಗೆ ಪಾಠ ಕಲಿಸುವುದಿಲ್ಲ, ತರಕಾರಿ ತರುವು ದಿಲ್ಲ, ಪಾತ್ರೆ ಬೆಳಗುವುದಿಲ್ಲ ಹೀಗೆ ದೂರಿನ ಪಟ್ಟಿ ಬೆಳೆಯುತ್ತಾ ಮನಸ್ಸುಗಳಲ್ಲಿ ಬಿರುಕು, ಸಂಸಾರದಲ್ಲಿ ಒಡಕು.