ಮಹಮ್ಮದ್ ಅಲ್ಪಾಜ್
ಯಾಕೇ ಹುಡುಗಿ, ನಿನ್ನ ಒಂದೊಂದು ಕಣ್ಣು ಸನ್ನೆ ನನ್ನ ಹೃದಯದ ಬಡಿತವನ್ನ ಹೆಚ್ಚಿಸಿ ಬಿಡುತ್ತದೆ. ನೀನೇನು ಮಾಯಗಾತಿಯೆ? ಮೊದಲ ಬಾರಿ ನಿನ್ನನ್ನ ನೋಡಿದಾಗಿನಿಂದ ಅದೇಕೋ ನಿದ್ರೆನೆ ಬರ್ತಾ ಇಲ್ಲ.
ಯಾವಾಗ ನೀನು ನನ್ನವಳಾಗುತ್ತೀಯ ಅನ್ನುವ ಭಾವನೆ ದಿನೇ ದಿನೇ ನನ್ನ ಪ್ರೀತಿಯ ಅಮಲನ್ನ ಹೆಚ್ಚಿಸುತ್ತಿದೆ. ನಿನ್ನ ಮೆಲ್ಲುಸಿರಿನ ಮಾತಿನಿಂದ ಹೇಳು, ನೀನ್ಯಾವಾಗ ನನ್ನವಳಾಗುವೆ? ಮೊಬೈಲ್ ಫೋನಿಗೆ ಸಂದೇಶ ಬಂದಾಗೆಲ್ಲ ನಿನ್ನದೇ ಇರಬಹುದೆಂದು ನೋಡುತ್ತೇನೆ. ಆದರೆ ನಿನ್ನ ಸಂದೇಶ ಬರುತ್ತಲೇ ಇಲ್ಲ. ನಿನಗಿನ್ನು ನನ್ನ ಪರಿಚಯವೇ ಆಗಲಿಲ್ಲ ಎಂಬ ಹುಚ್ಚು ಭ್ರಮೆ ಅರಿವಿಗೆ ಬರುವುದೇ ಇಲ್ಲ.
ನಿರಾಸೆ ಆದಾಗಲೆಲ್ಲ ನಿನ್ನ ಆ ದಾಳಿಂಬೆ ಬೀಜದ ಹಲ್ಲುಗಳು ನಿನ್ನ ಮುಗುಳ್ನಗೆಯನ್ನು ನೆನಪಿಸಿಕೊಂಡು ಆಗಸ ದಿಟ್ಟಿಸುತ್ತಾ ಕುಳಿತುಕೊಳ್ಳುತ್ತೇನೆ. ಯಾಕೆ ನಿನ್ನ ಮೇಲಿನ ಅಮಲು ಅಂತ ಗೊತ್ತಾಗುತ್ತಿಲ್ಲ. ಯಾರಲ್ಲೂ ಮಾತನಾಡದ ನಾನು ನಿನ್ನಲ್ಲಿ
ಮಾತನಾಡಬೇಕೆಂಬ ಆಸೆಯನ್ನೆಲ್ಲ ಕಟ್ಟಿ ಧೈರ್ಯದಿಂದ ಮುನ್ನಡೆಯುತ್ತ ಬಂದಾಗಲೆಲ್ಲ ನಿನ್ನ ಆ ಕಣ್ಣುಗಳಲ್ಲಿ ಕಾಣುವ ಆ ಒಂದು ಮಿಂಚಿನ ಹೊಳಪು ನನ್ನ ಆಸಕ್ತಿಯ ಕಟ್ಟೆಯನ್ನ ಒಡೆದು ಬಿಡುತ್ತದೆ.
ನೀನ್ಯಾಕೆ ಹಾಗೆ ? ಯಾರ ಮುಂದೆಯೂ ಬೆವರದ ನನ್ನ ಮೈ ನೀನೆದುರು ಬಂದರೆ ಸಾಕು, ಬೆವರಿನ ಸ್ನಾನಕ್ಕೇ ಒಳಗಾಗುತ್ತದೆ. ನೀ ಬಳಿ ಬಂದರೆ, ನನ್ನೊಳಗಿರುವ ಶಬ್ದ ಭಂಡಾರವೆಲ್ಲ ಶಾಂತಿಯಿಂದ ಮಲಗಿ ಬಿಡುತ್ತದೆ! ನೀನೇನು ಮಾಟಗಾತಿಯೇ ? ಹೃದಯ ಬಡಿದಾಗೆಲ್ಲ ನಿನ್ನ ಹೆಸರಿನ ಧ್ವನಿ ಮತ್ತೆ ಮತ್ತೆ ನಿನ್ನ ಮೇಲಿನ ಅಮಲನ್ನ ಹೆಚ್ಚಿಸಿ ಬಿಡುತ್ತದೆ.
ಒಮ್ಮೆ ನೀನೇ ಬಂದು ಮಾತನಾಡಿದರೆ ಚಂದವಿತ್ತು ಅಲ್ವ? ನಿನ್ನನ್ನ ದೂರದಿಂದ ನೋಡುತ್ತಾ, ಮನಸ್ಸಿನಲ್ಲಿ ಮಧುರವಾದ ಗಾಳಿಗೋಪುರಗಳನ್ನು ಕಟ್ಟುತ್ತಿದ್ದೇನೆ. ನಾನು ನೀನು ಬೆರೆತು ಮಾತನಾಡುವ ಆ ಒಂದು ಸುಸಮಯಕ್ಕಾಗಿ ಕಾತರದಿಂದ ನಿರೀಕ್ಷಿಸುತ್ತಿದ್ದೇನೆ. ನಿನಗಾಗಿ ತೆರೆಯ ಮರೆಯಲ್ಲಿ ಅಡಗಿ ಕಾಯುತ್ತಿದ್ದೇನೆ. ನೀನೆ ನನ್ನ ಮುಂದಿನ ಬಾಳ ಸಂಗಾತಿ ಅಂದು ಕೊಂಡಿದ್ದೇನೆ. ಸಮಯ ಸಿಕ್ಕರೆ ಈ ಪತ್ರವನ್ನೊಮ್ಮೆ ಓದು, ಸರಿನ! ನಿನಗಾಗಿ ಕಾಯುವ ಅನಾಮಿಕ ನಾನು.