Sunday, 15th December 2024

ಯುವಜನಾಂಗದ ಬಿಂಬ ಎಂಬಿಎ

ಪ್ರಸಕ್ತ ಯುವಜನಾಂಗಕ್ಕೆ ಅಂತಲೇ ಸಿದ್ಧಪಡಿಸಿರುವ ಹೊಸಬರ ‘ಎಂಬಿಎ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಯುವಕರನ್ನು ಸೆಳೆಯುವ ಪಂಚಿಂಗ್
ಡೈಲಾಗ್‌ಗಳು ಟ್ರೇಲರ್‌ನಲ್ಲಿವೆ. ಕಥೆಯು ಕಾಲೇಜಿನಲ್ಲಿ ನಡೆಯುವ ಸೆಸ್ಪ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ ಮತ್ತು ಭಾವನೆಗಳನ್ನು ಹೊಂದಿದೆ.

‘ಎಂಬಿಎ’ ವ್ಯಾಸಾಂಗ ಮಾಡುವವರು, ಮಾಡಿದವರು ಮತ್ತು ಮಾಡಬೇಕಾದವರು ಚಿತ್ರವನ್ನು ಒಮ್ಮೆ ನೋಡಿದರೆ ಮನ ಮುಟ್ಟುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕಂತೆ. ಎಸ್.ನಾರಾಯಣ್ ಬಳಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಹೆಚ್.ಪಿ ರಚನೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಸಾರಥ್ಯ ವಹಿಸಿದ್ದಾರೆ.

ಜತೆಗೆ ಪಬ್ಲಿಕ್ ಪ್ರೊಡಕ್ಷನ್ ಐಎನ್‌ಸಿ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹೆಚ್.ಪಿ, ಪಿಯುಸಿ ಓದುವಾಗಲೇ ಕಥೆಯ ಒಂದು ಎಳೆಯನ್ನು ಬರೆದಿದ್ದರಂತೆ, ಈಗ ಆ ಕಥೆ ಸಿನಿಮಾ ರೂಪ ಪಡೆದು ತೆರೆಗೆ ಬರಲು ಸಿದ್ಧವಾಗಿದೆ. ಶೀರ್ಷಿಕೆಗೆ ಬೇರೆ ಏನಾದರೂ ಅರ್ಥ ನೀಡಬೇಕೆಂದು, ಅದಕ್ಕಾಗಿ ಬಹುಮಾನ ನೀಡುವುದಾಗಿ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಅದರಂತೆ ಸಾಕಷ್ಟು ಶೀರ್ಷಿಕೆಗಳು ಬಂದಿದ್ದವು. ಅಂತು‘ಎಂಬಿಎ’ ಶಿರ್ಷಿಕೆಯನ್ನೇ ಅಂತಿಮಗೊಳಿಸ ಲಾಗಿದೆ. ಇದರ ತಾತ್ಪಾರ್ಯವನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ. ದೃಢ ಮನೋವೃತ್ತಿ ಹುಡುಗನಾಗಿ ಪುನೀತ್‌ಗೌಡ ನಟಿಸಿದ್ದು, ಪಾತ್ರದ ಸಲುವಾಗಿ ವಿಶೇಷ ಕೇಶವಿನ್ಯಾಸ ಮಾಡಿಸಿಕೊಂಡಿ ದ್ದಾರೆ. ಇನ್ನು ಗೂಳಿಸೋಮ ಮತ್ತೊಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇವರಿಗೆ ಜತೆಯಾಗಿ ಕಾವ್ಯಾಗೌಡ, ಸೌಮ್ಯಾಶಾನ್‌ಭೋಗ್ ಮುಂತಾದವರ ನಟನೆ ಇದೆ. ಹರ್ಷ ಕಾಗೋಡು ಸಂಗೀತ ಸಂಯೋಜಿಸಿದ್ದಾರೆ. ಛಾಯಾ ಗ್ರಹಣ ದರ್ಶನ್‌ದೇವ್, ಸಂಕಲನ ಮರಿಸ್ವಾಮಿ, ವಿಎಫ್‌ಎಕ್ಸ್ ದಯಾ ಅವರದಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು ಮತ್ತು ಹಾಸನದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ ಮೊದಲ ವಾರದಂದು ಏಕಕಾಲದಲ್ಲಿ ಥಿಯೇಟರ್‌ಗಳಲ್ಲಿ ಹಾಗೂ ಓಟಿಟಿಯಲ್ಲಿ
ಚಿತ್ರ ಬಿಡುಗಡೆಯಾಗಲಿದೆ.