Sunday, 15th December 2024

ಭಾವನಾತ್ಮಕ ಮೀರಾ ಮಂದಿರ

ಮಂಜುನಾಥ್ ಡಿ.ಎಸ್

ಚಿತ್ತೋರ್‌ಗಡ್‌ನಲ್ಲಿರುವ ಮೀರಾ ಮಂದಿರದಲ್ಲಿ, ಕೃಷ್ಣನ ಭಕ್ತೆ ಮೀರಾಬಾಯಿಯು, ಕೃಷ್ಣನ ಭಜನೆಗಳನ್ನು ಹಾಡುತ್ತಾ ಬಹುಕಾಲ ಕಳೆದಿದ್ದಳು. ಆ ಭಾವನಾತ್ಮಕ ತಾಣವು ಇಂದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು.

ವಿಶ್ವ ಪರಂಪರೆಯ ತಾಣವೆಂದು ಪ್ರಖ್ಯಾತಿ ಗಳಿಸಿರುವ ರಾಜಸ್ಥಾನದ ಚಿತ್ತೋರ್‌ಗಡ್ ಕೋಟೆಯ ವಿಶಾಲ ಆವರಣದಲ್ಲಿ ಹಲವಾರು ದೇವಾಲಯಗಳಿವೆ. ಮೀರಾ ಮಂದಿರ ಇವುಗಳಲ್ಲೊಂದು. ನಾಗರ್ ಶೈಲಿಯ (ಉತ್ತರ ಭಾರತ) ವಾಸ್ತುಶಿಲ್ಪದ ಈ
ಮಂದಿರವನ್ನು ಮಹಾರಾಣ ಕುಂಭ ಹದಿನೈದನೆಯ ಶತಮಾನದಲ್ಲಿ ನಿರ್ಮಿಸಿದರು. ಪಕ್ಕದಲ್ಲಿಯೇ ಇರುವ ಕುಂಭ ಶ್ಯಾಮ ದೇಗುಲಕ್ಕೆ ಹೋಲಿಸಿದರೆ ಈ ಗುಡಿ ಕುಬ್ಜವಾಗಿ ಕಾಣಿಸುತ್ತದಲ್ಲದೆ ಅದರಷ್ಟು ಭವ್ಯವಾಗಿಯೂ ಇಲ್ಲ.

ಇದು ದೊಡ್ಡ ದೇಗುಲದ ನೆರಳಿನಂತಿದೆ ಎನ್ನಬಹುದು. ಆದರೂ ಸಹ ಈ ಕೋಟೆಯ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು ಭಾವನಾತ್ಮಕ ಕಾರಣ ಗಳಿಂದಾಗಿ ಈ ಮಂದಿರವನ್ನು ತಪ್ಪದೇ ಸಂದರ್ಶಿಸುತ್ತಾರೆ. ಸುಮಾರು ನಾಲ್ಕು ಅಡಿ ಎತ್ತರದ ಜಗುಲಿಯ ಮೇಲೆ ವಿರಾಜಮಾನವಾಗಿರುವ ಈ ದೇವಾಲಯ ಮುಖಮಂಟಪ (ಅರ್ಧಮಂಟಪ), ಮಂಟಪ, ಮಹಾಮಂಟಪ, ಮತ್ತು
ಗರ್ಭಗೃಹ ಹೀಗೆ ನಾಲ್ಕು ಮುಖ್ಯ ಭಾಗಗಳಿಂದ ಕೂಡಿದೆ.

ಗರ್ಭಗುಡಿಯ ದ್ವಾರದ ಇಕ್ಕೆಲಗಳಲ್ಲಿ ಶಿಲಾಬಾಲಿಕೆಯರ ಶಿಲ್ಪಗಳಿವೆ. ಗರ್ಭಗುಡಿಯ ಮೇಲ್ಭಾಗದಲ್ಲಿ ಅಂದದ ಶಿಖರವಿದೆ. ಶಿಖರದ ಶೃಂಗದಲ್ಲಿ ಸಾಂಪ್ರದಾಯಿಕ ಶೈಲಿಯ ಅಮಲಕ (ವೃತ್ತಾಕಾರದ ರಚನೆ) ಮತ್ತು ಕಲಶ ಗಳಿವೆ. ಮಂಟಪಗಳು ಗುಮ್ಮಟಾ ಕಾರದ ಚಾವಣಿ ಹೊಂದಿವೆ. ನವಿರಾದ ಕೆತ್ತನೆಗಳಿಂದ ಅಲಂಕೃತಗೊಂಡ ಕಂಬಗಳು ಹಾಗು ಗೋಡೆಗಳು ಆಕರ್ಷಕ ವಾಗಿವೆ. ಜಗತಿಯ ಹಂತದಲ್ಲಿ ಪರಿಕ್ರಮ ಪಥ ಇಲ್ಲದಿರುವುದರಿಂದ ನೆಲಹಂತದಲ್ಲಿಯೇ ಪ್ರದಕ್ಷಿಣೆ ಮಾಡಬೇಕಾಗುತ್ತದೆ.

ಮಂದಿರದ ಗರ್ಭಗೃಹದಲ್ಲಿ ಮೊದಲು ಯಾವ ವಿಗ್ರಹವಿತ್ತೆಂಬ ಮಾಹಿತಿ ಸ್ಪಷ್ಟವಿಲ್ಲ. ಈಗ ಅಲ್ಲಿ ಸ್ಥಾಪನೆಗೊಂಡಿರುವುದು ಕೊಳಲು ನುಡಿಸುತ್ತಿರುವ ಕೃಷ್ಣನ ಮತ್ತು ಕೃಷ್ಣನನ್ನು ಭಜಿಸುತ್ತಿರುವ ಸಂತ ಮೀರಾಬಾಯಿಯವರ ಅಮೃತಶಿಲೆಯ ಮೂರ್ತಿ ಗಳು. ಲೋಹದಿಂದ ನಿರ್ಮಿಸಿದ ಕೃಷ್ಣನ ಪುಟ್ಟ ಪ್ರತಿಮೆ ಮತ್ತು ಕೆಲವು ಚಿತ್ರಪಟಗಳೂ ಸಹ ಇಲ್ಲಿವೆ. ಈ ದೇವಾಲಯದ ಎದುರಿನಲ್ಲಿ ಮೀರಾಬಾಯಿಯವರ ಗುರುಗಳು ಎಂದು ಭಾವಿಸಲಾಗಿರುವ ಸ್ವಾಮಿ ರವಿದಾಸರ ಛತ್ರಿ (ಸ್ಮಾರಕ ಮಂಟಪ) ಇದೆ.

ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ಇಲ್ಲಿ ಜರುಗುವ ಮೀರಾ ಮಹೋತ್ಸವಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸೇವೆ ಸಲ್ಲಿಸುತ್ತಾರೆ. ರಾಜವಂಶದ ಕುಡಿಯಾಗಿದ್ದರೂ ಭೋಗ ಜೀವನವನ್ನು ತ್ಯಜಿಸಿ, ತಾವು ದೃಢವಾಗಿ ನಂಬಿದ ಭಗವಾನ್ ಕೃಷ್ಣನನ್ನು ಒಲಿಸಿಕೊಳ್ಳಲು ಇಡೀ ಜೀವಿತವನ್ನು ಮುಡಿಪಾಗಿಟ್ಟ ಸಂತ ಕವಯಿತ್ರಿ ಮೀರಾಬಾಯಿ. ತಾವು ರಚಿಸಿದ ಭಜನೆಗಳನ್ನು ಭಾವ ಪರವಶರಾಗಿ ಹಾಡಿಕೊಂಡು ಕೃಷ್ಣನನ್ನು ಆರಾಧಿಸು ತ್ತಿದ್ದ ಈಕೆ ತಮ್ಮ ಬದುಕಿನ ಬಹುಪಾಲು ಸಮಯವನ್ನು ಸವೆಸಿದ್ದು ಇದೇ ದೇವಾಲಯದಲ್ಲಿ. ಇಷ್ಟೇ ಅಲ್ಲದೆ, ಮೀರಾ ಬಾಯಿಯವರ ಜೀವನದಲ್ಲಿ ಘಟಿಸಿತೆನ್ನಲಾದ ಅನೇಕ ಪವಾಡ ಸದೃಶ ಪ್ರಸಂಗಗಳಿಗೆ ಈ ಮಂದಿರ ಸಾಕ್ಷಿ ಯಾಗಿದೆ ಎನ್ನಲಾಗುತ್ತದೆ.

ಮೀರಾಬಾಯಿಯವರ ನಂಬಿಕೆ ಮತ್ತು ಆಚರಣೆಗಳು ಸಾಮಾಜಿಕ ಕಟ್ಟಳೆಗಳ ವಿರುದ್ಧವಾಗಿವೆ ಎಂಬ ಕಾರಣದಿಂದ ನಿಕಟ ಬಂಧುಗಳೇ ಆಕೆಯನ್ನು ಹತ್ಯೆಗೈಯ್ಯುವ ಹಲವು ಪ್ರಯತ್ನ ನಡೆಸಿದ್ದರಂತೆ. ಮೀರಾಬಾಯಿಯವರ ಮಾವ ಮಹಾರಾಣಾ ಸಂಗ ಅವರೇ ಒಮ್ಮೆ ಬಟ್ಟಲಿ ನಲ್ಲಿ ವಿಷವನ್ನು ಕಳಿಸಿ ಮೀರಾಬಾಯಿಯವರು ಅದನ್ನು ಕುಡಿಯುವಂತೆ ಆದೇಶಿಸಿದರಂತೆ. ಮೀರಾಬಾಯಿಯವರು ಕೃಷ್ಣ ನನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿ ಆ ಹಾಲಾಹಲವನ್ನು ಕುಡಿದರಂತೆ.

ಭಗವದನುಗ್ರಹದಿಂದ ಆ ವಿಷವು ಅಮೃತಸದೃಶವಾಗಿ ಆಕೆಗೆ ಯಾವುದೇ ತೊಂದರೆಯಾಗಲಿಲ್ಲವಂತೆ. ಇನ್ನೊಂದು ಸಂದರ್ಭ ದಲ್ಲಿ, ಸರ್ಪವೊಂದನ್ನು ಅಡಗಿಸಿಟ್ಟ ಹೂವಿನ ಬುಟ್ಟಿಯನ್ನು ಮೀರಾಬಾಯಿಯವರಿಗೆ ಕಳಿಸಿದರಂತೆ. ಇದರ ಪರಿವೆಯಿಲ್ಲದ ಮೀರಾಬಾಯಿಯವರು ಸಹಜವಾಗಿ ಬುಟ್ಟಿಯನ್ನು ತೆರೆದಾಗ ಅದರಲ್ಲಿದ್ದ ಹಾವು ಹೂವಿನ ಹಾರವಾಗಿತ್ತಂತೆ. ಈ ಎಲ್ಲ ಕಾರಣ ಗಳಿಂದಾಗಿ ಮೀರಾ ಮಂದಿರ ವಿಶೇಷ ಪ್ರಾಮುಖ್ಯತೆ ಪಡೆಯುತ್ತದೆ.

ಭಕ್ತಿಯ ಪರಾಕಾಷ್ಠೆ ತಲುಪಿದ್ದ ಮೀರಾಬಾಯಿಯವರ ಉಪಸ್ಥಿತಿಯಿಂದ ಅಂದು ಪವಿತ್ರಗೊಂಡ ಈ ಮಂದಿರವನ್ನು ಇಂದು
ಪ್ರತಿನಿತ್ಯ ಸಾವಿರಾರು ಜನರು ಸಂದರ್ಶಿಸಿ ಧನ್ಯತೆಯ ಭಾವದಲ್ಲಿ ಮೀಯುತ್ತಾರೆ. ಭಾವನಾತ್ಮಕವಾಗಿ ಪ್ರವಾಸಿಗರಿಗೆ ಸಾಕಷ್ಟು ಆತ್ಮೀಯತೆಯನ್ನು ತಂದುಕೊಡುವ ಮೀರಾ ಮಂದಿರವ ಚಿತ್ತೋರ್ ಗರ್‌ನ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದು.