ಬನ್ನೂರು ಕೆ.ರಾಜು
ವಜ್ರಖಚಿತ ಮತ್ತು ಅಪೂರ್ವ ವಿನ್ಯಾಸದ ವೈರಮುಡಿ ಕಿರೀಟವನ್ನು ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವವು ಮತ್ತೊಮ್ಮೆ ಬಂದಿದೆ. ಇದೇ 19ರಿಂದ 12 ದಿನಗಳ ಕಾಲ ನಡೆಯುವ ಈ ಉತ್ಸವವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.
ಮೇಲುಕೋಟೆ ಎಂಬುದು ಮೂರ್ನಾಲ್ಕು ಸಾವಿರ ಜನಸಂಖ್ಯೆಯುಳ್ಳ ಒಂದು ಹೋಬಳಿ ಕೇಂದ್ರ. ಆದರೆ ಇಲ್ಲಿ ನಡೆಯುವ ವೈರಮುಡಿ ಬ್ರಹ್ಮೋತ್ಸವವನ್ನು ಕಾಣಲು ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಿಂದ ಜನರು ಬರುವ ಸಂಪ್ರದಾಯ ಉಂಟು. ಮೇಲುಕೋಟೆಯ ವೈರಮುಡಿಯ ಮಹತ್ವ ಅಂಥಾದ್ದು!
ಈ ವರ್ಷ ಕರೋನಾ ಮಾರ್ಗದರ್ಶಿ ಸೂತ್ರಗಳ ಅನ್ವಯ ಉತ್ಸವ ನಡೆಯುವು ದಾದರೂ, ಅದನ್ನು ಆನ್‌ಲೈನ್‌ನಲ್ಲಿ ನೋಡುವ, ದೂರದಿಂದಲೇ ಕೈ ಮುಗಿಯುವ ಸಾವಿರಾರು ಭಕ್ತಗಣವಿದೆ. ಮೇಲುಕೋಟೆಯು ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು. ಶ್ರೀರಂಗ, ತಿರುಪತಿ, ಕಾಂಚಿಪುರದೊಂದಿಗೆ ಮೇಲುಕೋಟೆಯೂ ಒಂದಾಗಿದೆ.
ಇಲ್ಲಿಯ ಆರಾಧನಾಮೂರ್ತಿಯು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಯತಿವರ್ಯ ಶ್ರೀ ರಾಮಾನುಜಾಚಾರ್ಯರ ಪ್ರೀತಿಪಾತ್ರ ಅಚ್ಚುಮೆಚ್ಚಿನ ಶೆಲ್ವ ಪಿಳ್ಳೆ (ಚೆಲುವಿನಕುವರ) ಯಾಗಿ, ಶ್ರೀ ವೈಷ್ಣವರ ತಿರುನಾರಾಯಣನಾಗಿ ಗ್ರಾಮೀಣ ಜನರ ಬಾಯಲ್ಲಿ ಚೆಲುವಯ್ಯನಾಗಿ ಜಾತಿ- ಮತ, ಕುಲ-ಧರ್ಮಗಳ ಭೇದ-ಭಾವವಿಲ್ಲದೆ ಸರ್ವರನ್ನೂ ಅನುಗ್ರಹಿಸುವ ಸರ್ವೇಶ್ವರ ನಾಗಿದ್ದಾನೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪುರಾಣೀತಿ ಹಾಸ ಮತ್ತು ಜಾನಪದ ಕಥೆಗಳುಂಟು. ಕಲಿಯುಗದ ಆರಂಭದ ಹಲವು ವರ್ಷಗಳವರೆಗೂ ಭವ್ಯವಾಗಿ ಮೆರೆದ ಈ ಕ್ಷೇತ್ರ ನಂತರದ ದಿನಗಳಲ್ಲಿ ಕಾಲಚಕ್ರದ ಉರುಳಿಗೆ ಸಿಲುಕಿ ದೇವಾಲಯದ ಸಹಿತ ಇಡೀ ಕ್ಷೇತ್ರ ನೆಲಸಮವಾಯಿತು.
ಚೆಲುವನಾರಾಯಣನ ಉತ್ಸವ ಮೂರ್ತಿ ಅಪಹರಿಸಲ್ಪಟ್ಟರೆ ದೇವಾಲಯದ ಒಳಗಿದ್ದ ತಿರುನಾರಾಯಣ ಮೂರ್ತಿಯನ್ನು ತಾನು ರಕ್ಷಿಸುವಂತೆ ಅದನ್ನು ವಲ್ಮೀಕ (ಹುತ್ತ) ಆವರಿಸಿಕೊಂಡಿತ್ತು. ದೇವಾಲಯವೆಲ್ಲಾ ಪಾಳುಬಿದ್ದು ಇಡೀ ಕ್ಷೇತ್ರ ದುರ್ಗಮ ಅರಣ್ಯ ವಾಗಿತ್ತು. ಮತ್ತೆ ಈ ದೇವಾಲಯ ಜೀರ್ಣೋದ್ಧಾರಗೊಂಡದ್ದು 12ನೇ ಶತಮಾನದಲ್ಲಿ. ಅದೂ ಆದಿಶೇಷನ ಅವತಾರ ವೆಂದೇ ಹೇಳಲಾಗುವ ಯತಿಕುಲ ಸಾರ್ವಭೌಮ ಶ್ರೀರಾಮಾನುಜರಿಂದ. ಈ ಕಾರಣದಿಂದ ಮೇಲುಕೋಟೆ ಯತಿಶೈಲ ಎಂದೂ ಪ್ರಸಿದ್ಧಿ ಪಡೆದಿದೆ.
ಬೆಟ್ಟದ ಮೇಲೆ ಚೆಲುವ ದೇವ
ಹಸಿರಿನ ಪ್ರಭಾವಳಿಯೊಡನೆ ಅಂದ ಚೆಂದದ ಬೃಹತ್ ಕಲ್ಲುಬಂಡೆಗಳಿಂದ ಕಣ್ಸೆಳೆವ ಮೇಲುಕೋಟೆ ಸಮುದ್ರ ಮಟ್ಟದಿಂದ 3589 ಅಡಿ ಎತ್ತರದಲ್ಲಿರುವ ಒಂದು ಚೆಲುವಾದ ಬೆಟ್ಟ. ಇದರ ತುದಿಯಲ್ಲಿ ಯೋಗಾ ನರಸಿಂಹಸ್ವಾಮಿ ದೇವಾಲಯವಿದೆ. ಇದನ್ನು ವಿಷುಭಕ್ತ ಪ್ರಹ್ಲಾದನು ನಿರ್ಮಿಸಿದನೆಂಬುದು ಇಲ್ಲಿನ ನಂಬಿಕೆ. ಇಲ್ಲಿನ ಚೆಲುವರಾಯಸ್ವಮಿ ಬೆಟ್ಟದ ಕೆಳಗೆ ಮೇಲುಕೋಟೆ ಗ್ರಾಮದಲ್ಲಿ ನೆಲೆಸಿದ್ದು ಈ ದೇವಾಲಯ ಸುಂದರವಾಗಿದೆ. ಮೇಲುಕೋಟೆಯಲ್ಲಿ ವರ್ಷವಿಡೀ ಒಂದಿಲ್ಲೊಂದು ಪೂಜೆ, ಪುನಸ್ಕಾರ, ಉತ್ಸವ, ಜಾತ್ರೆಗಳು ಆಚರಿಸಲ್ಪಟ್ಟರೂ, ವೈರಮುಡಿ ಉತ್ಸವದ ವೈಭವವೇ ಬೇರೆ.
ವೈರಮುಡಿ ಬ್ರಹ್ಮೋತ್ಸವ
ವೈರಮುಡಿ ಎಂಬುದು ಹೆಸರೇ ಹೇಳುವಂತೆ ವಜ್ರಾಭರಣದ ಒಂದು ಕಿರೀಟ. ದೈವಶಕ್ತಿಯ ಮಹಾಮಹಿಮಾ ಪೂರ್ಣ ಕಿರೀವಿದು. ಈ ವೈರಮುಡಿ ಕಿರೀಟದ ಹಿಂದೊಂದು ಪೌರಾಣಿಕ ಕಥೆಯುಂಟು. ಒಮ್ಮೆ ಪ್ರಹ್ಲಾದನ ಮಗ ವಿರೋಚನ ಈ ವೈರಮುಡಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿಸಿಟ್ಟುಕೊಳ್ಳುತ್ತಾನೆ.
ವಿಷಯ ತಿಳಿದ ವಿಷ್ಣುವಿನ ವಾಹನವಾದ ವೈನತೇಯ (ಗರುಡ) ನು ವೀರೋಚನನೊಡನೆ ಯುದ್ಧ ಮಾಡಿ ಗೆದ್ದು ವೈರಮುಡಿ ಯೊಡನೆ ಶರವೇಗದಲ್ಲಿ ಆಕಾಶ ಮಾರ್ಗವಾಗಿ ಬರುವಾಗ ಇದ್ದಕ್ಕಿದ್ದಂತೆ ವೇಗ ಕಡಿಮೆಯಾಗುತ್ತದೆ. ಆಗ ಈ ಸ್ಥಳ ಯಾವುದಿರ ಬಹುದೆಂದು ವೈನತೇಯ ಗಮನಿಸಿದಾಗ ಅದು ಮಥುರಾ ನಗರ. ಅಲ್ಲಿ ಕೃಷ್ಣಾವತಾರ ಕಂಡು ಭಗವಾನ್ ಕೃಷ್ಣನಿಗೆ ವೈನತೇಯ ವೈರಮುಡಿಯನ್ನು ಅರ್ಪಿಸುತ್ತಾನೆ. ಆದರೆ ಶ್ರೀ ಕೃಷ್ಣನ ಶಿರದಲ್ಲಿ ವೈರಮುಡಿ ಸರಿಯಾಗಿ ಕೂರಲಿಲ್ಲವಾದ್ದರಿಂದ ಕೃಷ್ಣನೇ ಇದನ್ನು ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಒಪ್ಪಿಸಬೇಕೆಂದು ವೈನತೇಯನಿಗೆ ಹೇಳುತ್ತಾನೆ.
ಅದರಂತೆ ವೈನತೇಯನು ವೈರಮುಡಿಯನ್ನು ಚೆಲುವನಾರಾಯಣಸ್ವಾಮಿಯ ಶಿರಕ್ಕೆ ಸಮರ್ಪಿಸಿದಾಗ ಅದು ಸೂಕ್ತವಾಗಿ ಅಲಂಕೃತಗೊಳ್ಳುತ್ತದೆ. ಇದರಿಂದ ಖುಷಿಗೊಂಡ ವೈನತೇಯ (ಗರುಡ) ನು ಇದು ಭೂಲೋಕದ ಜನರಿಗೆ ಈ ರೀತಿ ಭಗವಂತನ ಸಂಕಲ್ಪವಾಯಿತೆಂದು ಹೇಳಿ ಪರಮಾನಂದದಿಂದ ಚೆಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತಲೂ ಮೆರವಣಿಗೆ ಮಾಡಿ ಭಕ್ತರಿಗೆ ಪರಮಾತ್ಮನ ದರ್ಶನವನ್ನು ಮಾಡಿಸುತ್ತಾನೆ. ಮತ್ತೊಂದು ಐತಿಹ್ಯದ ಪ್ರಕಾರ ದ್ವಾರಕೆಯಿಂದ ತಿರುನಾರಾಯಣಪುರಕ್ಕೆ ಸ್ವತಃ ಕೃಷ್ಣನೇ ಬಂದು ತನಗೆ ಅರ್ಪಿತವಾದ ವೈರಮುಡಿಯನ್ನು ಚೆಲುವರಾಯನಿಗೆ ಅರ್ಪಿಸುತ್ತಾನೆ.
ಉತ್ಸವಾಚರಣೆಯ ವಿಧಾನ
ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಸಾಮಾನ್ಯವಾಗಿ ಫಾಲ್ಗುಣ, ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಉತ್ಸವ ಪ್ರಾರಂಭವಾಗುತ್ತದೆ. ಇದನ್ನು ಕೈಗೊಳ್ಳುವ ಪ್ರಧಾನ ಅರ್ಚಕರು ತಮಗೆ ಯಾವುದೇ ಪ್ರದೂಷಣೆ ಆಗದಂತೆ ಕುಶದರ್ಬೆ ಸಹಿತ ಕೈಗೆ ಚಿನ್ನದ ಕಂಕಣವನ್ನು ತೊಡುತ್ತಾರೆ.
ಅಂಕುರಾರ್ಪಣವಾದ ನಂತರ ಉತ್ಸವದ ಆರಂಭ ಸೂಚಿಸುವ ಧ್ವಜಾರೋಹಣದ ಧ್ಯೋತಕವಾಗಿ ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮಂಟಪ ಮತ್ತಿತರೇ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ.
ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿಯೊಡನೆ ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಅತ್ಯಪೂರ್ವ ಇಪ್ಪತ್ನಾಲ್ಕು ಆಭರಣಗಳನ್ನು ಬಹುಕಟ್ಟು ನಿಟ್ಟಿನ ಭದ್ರತೆಯೊಡನೆ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತರಲಾಗುತ್ತದೆ.
ಇದನ್ನು ಮೇಲುಕೋಟೆಯ ಊರಗಡಿಯಲ್ಲಿ ಬರಮಾಡಿಕೊಂಡು, ರಾಮಾನುಜರ ಗುಡಿಯಲ್ಲಿ ಇರಿಸಲಾಗುತ್ತದೆ. ಆನಂತರ ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆ ಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಡುತ್ತಾರೆ.
ಇತರ ಆಭರಣಗಳಿಂದಲೂ ಅಲಂಕರಿಸಲಾಗುತ್ತದೆ. ನಂತರ ವೈರಮುಡಿ ಉತ್ಸವ ಹೊರಡುತ್ತದೆ. ಹೀಗೆ ಆರಂಭವಾಗುವ ವೈರ ಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೂ ಜರುಗುತ್ತದೆ. ವೈರಮುಡಿಯ ಈ ಭವ್ಯ ಮೆರವಣಿಗೆಯನ್ನು ನೋಡಲೆಂದೇ ದೇಶವಿದೇಶಗಳ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಬ್ರಹ್ಮೋತ್ಸವ
ವಿಷ್ಣುವಿನ ವಾಹನನಾದ ವೈನತೇಯ (ಗರುಡ)ನು ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯನ್ನು ತನ್ನ ಹೆಗಲ ಮೇಲಿರಿಸಿಕೊಂಡು ಉತ್ಸವ ಮಾಡಿದ ಕಾರಣ ಇಂದಿಗೂ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಗರುಡ ವಾಹನದ ಮೇಲೆಯೇ ಜರುಗುತ್ತದೆ. ಇದನ್ನು ಬ್ರಹ್ಮೋತ್ಸವವೆಂದೂ ಕರೆಯುತ್ತಾರೆ. ಇದು ಈ ಭಾಗದ ಜನರ ಬಹುದೊಡ್ಡ ಹಬ್ಬವೂ ಹೌದು.
ವಜ್ರಖಚಿತ ವೈರಮುಡಿ
ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕಣ್ಣಿ ನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈನಲ್ಲಿ ಮುಟ್ಟಬಾರದೆಂಬ ನಂಬಿಕೆ. ಸಾಕ್ಷಾತ್ ಆದಿಶೇಷನೇ ವೈರಮುಡಿಯಾಗಿರುವುದರಿಂದ ಇದನ್ನು ಕೈನಿಂದ ಮುಟ್ಟಿದರೆ ಸರ್ಪವಾಗಿ ಬಿಡುತ್ತದೆಂಬ ನಂಬಿಕೆ ಇವತ್ತಿಗೂ ಇಲ್ಲಿ ಜೀವಂತವಾಗಿದೆ. ಒಂದು ಕಾಲದಲ್ಲಿ ಈ ವಜ್ರಮಯ ವೈರಮುಡಿ ದೆಹಲಿ ಸುಲ್ತಾನರ
ಕೈವಶ ದಲ್ಲಿ ಸೇರಿ ಹೋಗಿತ್ತು. ಆಚಾರ್ಯ ಶ್ರೀರಾಮಾನುಜರೇ ಇದನ್ನು ದೆಹಲಿಯಿಂದ ಮೂಲ ವಿಗ್ರಹದೊಂದಿಗೆ ಇಲ್ಲಿಗೆ ತಂದರೆಂದು ಹೇಳಲಾಗುತ್ತದೆ.
ನಂತರ ವೈರಮು ಡಿಯನ್ನು ಮೈಸೂರು ಅರಸರ ವಶಕ್ಕೆ ಒಪ್ಪಿಸಲಾಗಿತ್ತು. 1976ರಿಂದ ಇದರ ಸುರಕ್ಷತೆಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದ್ದು ಮಂಡ್ಯ ಜಿಲ್ಲಾ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇದನ್ನು ಇಡಲಾಗಿದೆ.
‘‘ಶ್ರೀರಂಗ ಮಂಗಳ ಮಣಿಂ ಕರುಣಾನಿವಾಸಂ
ಶ್ರೀ ವೆಂಕಟಾದ್ರಿ ಶಿಖರಾಲಯ ಕಾಳಮೇಘಂ
ಶ್ರೀ ಹಸ್ತಿಶೈಲ ಶಿಖರೋಜ್ವಲ ಪಾರಿಜಾತಂ
ಶ್ರೀಶಂ ನಮಾಮಿ ಶಿರಸಾ ಯದುಶೈಲ ದೀಪಂ’’
-ಆಚಾರ್ಯ ರಾಮಾನುಜರು ಪಠಿಸಿರುವ ಮಂಗಳ
ಶ್ಲೋಕ.