Sunday, 15th December 2024

ಮೈನ್‌ ನದಿಯಲ್ಲಿ ದೋಣಿ ವಿಹಾರ

ಡಾ.ಉಮಾಮಹೇಶ್ವರಿ ಎನ್.

ನಗರದ ಮಧ್ಯೆ ಸಾಗಿರುವ ನದಿಯ ಇಕ್ಕೆಲದಲ್ಲಿರುವ ಕಟ್ಟಡಗಳನ್ನು ತೋರಿಸುವ ಪ್ರವಾಸಿ ಯಾನ ಫ್ರಾಂಕ್‌ಫರ್ಟ್‌ನಲ್ಲಿ ಲಭ್ಯ.

ಫ್ರಾಂಕ್‌ಫರ್ಟ್ ನಗರದ ಜೀವನಾಡಿಯಾಗಿರುವ ಮೈನ್ ನದಿ ತನ್ನ ಇಕ್ಕೆಲಗಳಲ್ಲೂ ಪ್ರಮುಖ ಸ್ಥಳಗಳನ್ನು ಹೊಂದಿದೆ. ಈ ನದಿ ಕಿನಾರೆಯನ್ನೇ ಪ್ರವಾಸಕ್ಕೆ ಉಪಯೋಗಿಸಿಕೊಂಡ ಉದಾಹರಣೆ ಗಮನ ಸೆಳೆಯುತ್ತದೆ.

ನದಿಯನ್ನು ವೀಕ್ಷಿಸಲು ಹಲವಾರು ಬೋಟಿಂಗ್ ಸಂಸ್ಥೆಗಳು ವಿವಿಧ ಸಮಯಾ ಕಾಶಗಳ ಕಿರು ಪ್ರಯಾಣಕ್ಕೆ ಅನುವು ಮಾಡಿ ಕೊಡುತ್ತವೆ. ಈ ತರಹದ ಯಾನ ಗಳು 1880 ನೇ ಇಸವಿಯಿಂದಲೇ ಪ್ರಚಲಿತವಂತೆ! ಪ್ರಸಿದ್ಧ ಉಕ್ಕಿನ ಸೇತುವೆ ಅಥವಾ ಲವ್ ಬ್ರಿಜ್‌ನ ಬುಡದಲ್ಲಿರುವ ಸ್ಥಾನದಿಂದ ಆರಂಭವಾಗು ತ್ತದೆ ಯಾನ. 50 ನಿಮಿಷಗಳ ಎರಡು ಆಯ್ಕೆ ಹಾಗೂ 100 ನಿಮಿಷಗಳ ಒಂದು ಆಯ್ಕೆಯ ಟಿಕೆಟ್ ಲಭ್ಯ. ಈ ನಾವೆ ನಿಲ್ದಾಣದ ಬಲಕ್ಕೆ ಸ್ವಲ್ಪದೂರ ಪ್ರಯಾ ಣಿಸಿ ತಿರುಗಿ ಬಂದು ಮತ್ತೆ ಎಡಕ್ಕೆ ಚಲಿಸಿ ವಾಪಾಸು ಬರುತ್ತಿತ್ತು.

ಬಲ ಅಥವಾ ಎಡಬದಿಗೆ ಮಾತ್ರ ಪ್ರಯಾಣಿಸಿದರೆ 50 ನಿಮಿಷಗಳ ಟಿಕೆಟ್, ಎರಡೂ ಭಾಗಗಳನ್ನು ವೀಕ್ಷಿಸಲು 100 ನಿಮಿಷಗಳ ಟಿಕೆಟ್. ಟಿಕೆಟ್ ಖರೀದಿಸಿ ಸ್ವಲ್ಪ ಹೊತ್ತು ಕಾದ ನಂತರ ಎರಡು ಅಂತಸ್ತುಗಳ ಐಷಾರಾಮಿ ನಾವೆ ಎದುರು ನಿಂತಿತು. ಕಾಯು ವವರ ಅನುಕೂಲಕ್ಕೆಂದು ಒಂದು ಕೆಫೆ ಟಿಕೆಟ್ ಕೌಂಟರ್‌ನ ಹತ್ತಿರವೇ ಇತ್ತು. ನಮ್ಮ ಸರದಿ ಬಂದಾಗ ಸ್ವಾಗತಿಸುತ್ತಿದ್ದ ಸಿಬ್ಬಂದಿಗೆ ‘ಗೂಟೆನ್ ಟಾಗ್’ ಎಂದು ಹಾರೈಸಿ ಮೇಲಂತಸ್ತಿಗೆ ಹೋಗಿ ಹೊರಭಾಗದಲ್ಲಿದ್ದ ಕುರ್ಚಿಯಲ್ಲಿ ಕುಳಿತೆವು.

ಯಾನ ಆರಂಭವಾಗು ತ್ತಲೇ ಸಿಬ್ಬಂದಿ ಮೆನು ಹಿಡಿದುಕೊಂಡು ಹಾಜರಾಗುತ್ತಾರೆ. ಬಿಯರ್, ಕಾಫಿ, ಚಹಾ, ಕೆಲವು ತಂಪು ಪೇಯಗಳು, ಐಸ್ ಕ್ರೀಮ್ , ನಿಗದಿತ ತಿಂಡಿ ಅಥವಾ ಊಟ ದಿನದ ಸಮಯಕ್ಕೆ ಅನುಗುಣವಾಗಿ ಲಭ್ಯವಿರುತ್ತವೆ. ಯಾನ ಮುಂದುವರಿದಂತೆ ಇಕ್ಕೆಲಗಳಲ್ಲಿ ರುವ ಪ್ರಮುಖವಾಗಿ ಕಾಣಿಸುವ ಜಾಗಗಳ ಬಗ್ಗೆ ಇಂಗ್ಲಿಷ್ ಹಾಗೂ ಜರ್ಮನ್ ಭಾಷೆಗಳಲ್ಲಿ ವಿವರಗಳನ್ನು ನೀಡುತ್ತಾರೆ.

ಲವ್ ಬ್ರಿಜ್

ಮೊತ್ತ ಮೊದಲು ವಿವರಿಸಿದ್ದು ಲವ್ ಬ್ರಿಜ್‌ನ ಬಗ್ಗೆ. ಉಕ್ಕಿನ ನಿರ್ಮಿತಿಯಾದ ಇದು ನಿರ್ಮಾಣವಾದದ್ದು ನೂರು ವರ್ಷಗಳಿಗೂ ಹಿಂದೆ. ಪಾದಚಾರಿಗಳು ಸಂಚರಿಸುವ ಸೇತುವೆಯ ಎರಡೂ ಬದಿಗಳಲ್ಲಿರುವ ಕಂಬಿಗಳಲ್ಲೂ ಸಾಕಷ್ಟು ಬೀಗಗಳು ನೇತಾಡು ತ್ತಿದ್ದವು. ಪ್ರೇಮಿಗಳು ತಮ್ಮ ಪ್ರೇಮ ಅಮರವಾಗಿರಲೆಂದು ಹಾರೈಸಿ ಬೀಗ ಜಡಿದು ಬೀಗದ ಕೈಯನ್ನು ನದಿಯ ನೀರಿಗೆ ಎಸೆಯು ತ್ತಾರಂತೆ. ಬೀಗದ ಕೈ ಇಲ್ಲದೆ ಹೇಗೆ ಬೀಗ ತೆರೆಯಲಾಗು ವುದಿಲ್ಲವೋ ಹಾಗೆಯೇ ಅವರ ಪ್ರೇಮವೂ ಶಾಶ್ವತ ವಾಗಿರುತ್ತದೆಂಬ ನಂಬಿಕೆ.

ಮೈನ್ ನದಿಯ ದಂಡೆಯ ಸಾಕ್ಸೆನ್ ಹೌಸೆನ್ ಎಂಬ ಸ್ಥಳದಲ್ಲಿ 15 ಮ್ಯೂಸಿಯಂಗಳಿವೆ. 1980-90ರಲ್ಲಿ ನಿರ್ಮಾಣವಾದ ಈ ಮ್ಯೂಸಿಯಂಗಳು ಪ್ರಸಿದ್ಧ. ಸಿನೆಮಾ, ಕಲೆಗಳಿಗೆ ಸಂಬಂಧಿತ ಮ್ಯೂಸಿಯಂಗಳು ಪ್ರಮುಖ. ನಂತರ ಕಾಣುವುದು ಫ್ರಾಂಕ್‌ಫರ್ಟ್ ನ ಪ್ರಸಿದ್ಧ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ. ತದನಂತರ ಫ್ರಾಂಕ್‌ಫರ್ಟ್‌ನ ಗಗನಚುಂಬಿ ಕಟ್ಟಡಗಳ ಸಾಲನ್ನು ವಿವಿಧ ಕೋನಗಳಿಂದ ನೋಡುವ ಅವಕಾಶ. ಎಲ್ಲಕ್ಕಿಂತ ಎತ್ತರದ ಕಾಮರ್ಸ್ ಬ್ಯಾಂಕ್‌ನ 250 ಮೀ.ಎತ್ತರದ ಕಟ್ಟಡ, ಡಾಯ್ಚೆ ಬ್ಯಾಂಕ್, ಹೋಟೆಲ್‌ಗಳನ್ನು ತೋರಿಸುತ್ತಾ ಮುನ್ನಡೆಯಿತು ನಾವು ಆಸೀನರಾಗಿದ್ದ ಜಲಸುಂದರಿ.

ನದಿ ಪಕ್ಕದಲ್ಲೇ ಆಫೀಸು
ವೆಸ್ಟ್‌ ಹಾಫೆನ್ ಟವರ್ ಎಂಬ ಸಿಲಿಂಡರ್ ಆಕೃತಿಯ ನಿರ್ಮಿತಿ ಹಲವಾರು ಕಚೇರಿಗಳ ಸ್ಥಾನ. ಮೈನ್ ನದಿಗೆ ಹತ್ತಿರದಲ್ಲಿ ನಿರ್ಮಿಸಲಾದ ಇದು ಆಫೀಸು ಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ವಾತಾವರಣವನ್ನು ಒದಗಿಸುತ್ತದೆ. ವಿವಿಧ ಬಣ್ಣಗಳ 6-7 ಅಂತಸ್ತುಗಳ ಅಪಾರ್ಟ್‌ಮೆಂಟ್ ಕಟ್ಟಡಗಳೂ ಕಣ್ಣಿಗೆ ಹಬ್ಬ.

ಮೈನೋವಾ ಎಂಬ ಇದ್ದಲಿನಿಂದ ವಿದ್ಯುಚ್ಚಕ್ತಿ ಉತ್ಪಾದಿಸುವ ಕೇಂದ್ರ ಮುಂದೆ ಕಾಣಿಸಿತು. ರೈಲುಸೇತುವೆಯ ಕೆಳಗೆ ಪ್ರಯಾಣಿಸಿ ಮುಂದುವರಿದಾಗ ಒಂದೆಡೆ ಹಸಿರು ಉದ್ಯಾನವನ, ಇನ್ನೊಂದೆಡೆ ಚಿಕ್ಕ ಬಂದರು. ಆಟೊಬಾನ್ ಸೇತುವೆ ಯವರೆಗೆ ಹೋದ ನಾವೆ ಹೊರಟಲ್ಲಿಗೇ ವಾಪಸು ಬಂತು.

ಕೆಲವು ಪ್ರಯಾಣಿಕರನ್ನು ಇಳಿಸಿ, ಮತ್ತೆ ಕೆಲವರನ್ನು ಹತ್ತಿಸಿಕೊಂಡ ಬೋಟ್ ಈಗ ವಿರುದ್ಧ ದಿಕ್ಕಿನಲ್ಲಿ ಚಲಿಸಿತು. ಫ್ರಾಂಕ್
ಫರ್ಟ್ ಡೋಮ್, ನಿಕೊಲಸ್ ಚರ್ಚಿನ ಗೋಪುರ, ರೋರ್ಮ ಕಟ್ಟಡದ ಸಣ್ಣ ಭಾಗ ಗೋಚರಿಸಿತು. ನದಿಯ ಇನ್ನೊಂದು ದಡ ದಲ್ಲಿರುವ ಚರ್ಚುಗಳ ಭವ್ಯ ನೋಟವೂ ವಿಶಿಷ್ಟ.

ಮುಂದುವರಿದಂತೆ ಮೈನ್ ಪ್ಲಾಝಾ ಎಂಬ ತಾರಾಹೋಟೆಲ್ ಕಾಣಿಸಿತು. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಗಗನಚುಂಬಿ ಸೌಧ ಇನ್ನೊಂದೆಡೆ ತಲೆ ಎತ್ತಿ ನಿಂತಿತ್ತು. ಯಾನದುದ್ದಕ್ಕೂ ಎರಡೂ ಕಡೆಗಳಲ್ಲಿ ಚಲಿಸುತ್ತಿದ್ದ ಇತರ ಬೋಟ್‌ಗಳು, ವಿವಿಧ ಜಲ ಕ್ರೀಡೆಗಳಲ್ಲಿ ನಿರತರಾದ ಕ್ರೀಡಾಸಕ್ತರು, ವಿವಿಧ ಜಲಪಕ್ಷಿಗಳು ಯಾನದ ಆನಂದವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದವು.

ಈ ಬದಿಯ ಯಾನದ ಕೊನೆಯ ನೋಟ ಪೂರ್ವಬಂದರು ಅಥವಾ ಓಸ್ಟ್‌ ಹಾಫೆನ್. ನೂರು ವರ್ಷಗಳಿಗಿಂತಲೂ ಹಿಂದೆ ನಿರ್ಮಿಸಲ್ಪಟ್ಟ ಈ ಬಂದರು ಫ್ರಾಂಕ್ ಫರ್ಟ್ ನ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಇದು ಅತಿದೊಡ್ಡ ನದೀತೀರದ ಬಂದರೆಂದು ಪ್ರಸಿದ್ಧವಾಗಿದೆ. ಪ್ರತಿದಿನ ಸುಮಾರು 2500 ಹಡಗುಗಳು ಈ ಬಂದರಿಗೆ ಸರಕುಗಳ ಸಾಗಾಟಕ್ಕಾಗಿ ಭೇಟಿ ನೀಡುತ್ತವೆ. ಈ ಭಾಗದಲ್ಲಿ ನದಿಗೆ ಅಡ್ಡಲಾಗಿರುವ ಓಸ್ಟ್ ಹಾಫೆನ್ ಸೇತುವೆಯೂ ಪ್ರಸಿದ್ಧವೇ. ರಾತ್ರಿ ಊಟದ ಸಮಯದಲ್ಲಿ ಮೂರು ಗಂಟೆಗಳ ಯಾನ ಊಟ, ಮನರಂಜನೆಯ ಜೊತೆಗೆ ದೀಪಾಲಂಕೃತ ನಗರದ ನೋಟವನ್ನು ವೀಕ್ಷಕರಿಗೆ ಲಭ್ಯವಾಗಿಸು ತ್ತದೆ.

ಹೊಸ ಹಳೆಯ ಸೇತುವೆ
ಯಾನದುದ್ದಕ್ಕೂ ಕಾಣಿಸುವ ಹಲವಾರು ಸೇತುವೆಗಳಲ್ಲಿ ಅತಿ ಪುರಾತನವಾದದ್ದು ಹಳೆಯ ಸೇತುವೆ ಅಥವಾ ಆಲ್ಟೆಬ್ರುಕೆ. 11-12 ನೇ ಶತಮಾನಗಳಿಂದಲೇ ನದಿಯ ಇಕ್ಕೆಲಗಳನ್ನು ಬೆಸೆಯುತ್ತಿದ್ದ ಈ ಕಲ್ಲಿನ ಸೇತುವೆ ಪುರಾತನಕಾಲದಿಂದಲೇ ಫ್ರಾಂಕ್‌ಫರ್ಟ್ ನಗರದ ಆರ್ಥಿಕತೆಯ ಆಧಾರವಾಗಿತ್ತು. ಹಲವಾರು ಬಾರಿ ನವೀಕರಣಗೊಂಡಿದ್ದ ಇದು ಎರಡನೇ ಮಹಾಯುದ್ಧದಲ್ಲಿ ಪೂರ್ತಿ ಯಾಗಿ ನಾಶವಾಗಿದ್ದರೂ ಮತ್ತೆ ಹಿಂದಿನಂತೆಯೇ ನಿರ್ಮಾಣಗೊಂಡಿತು. ಹಾಗಾಗಿ ‘ಹೊಸ ಹಳೆಯ ಸೇತುವೆ’ ಎಂಬ ನಾಮಧೇಯ ವನ್ನೂ ಹೊಂದಿದೆ.