Thursday, 12th December 2024

ಮೌಂಟ್‌ ರೇನಿಯರ್‌ ನ್ಯಾಷನಲ್‌ ಪಾರ್ಕ್‌

ಮಂಜುನಾಥ್‌ ಡಿ.ಎಸ್‌.

ಅಮೆರಿಕವು ವಿಶಾಲವಾದ ದೇಶ. ಇಲ್ಲಿ ಹಲವು ಕಾಡು ಪ್ರದೇಶಗಳು, ಪರ್ವತ ಕಮರಿಗಳಿವೆ. ಅಂತಹ ಕೆಲವು ಜಾಗಗ ಳನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಿ, ಸಂರಕ್ಷಿಸಿದ್ದಾರೆ. ಅಂತಹ ಒಂದು ನ್ಯಾಷನಲ್ ಪಾರ್ಕ್‌ನಲ್ಲಿ ಚಾರಣ ಮಾಡಿ, ಅಲ್ಲಿನ ಮರ ಗಿಡಗಳನ್ನು, ಬೆಟ್ಟ ಗುಡ್ಡಗಳನ್ನು, ಹಿಮಭರಿತ ಪರ್ವತ ಭಿತ್ತಿಗಳನ್ನು ನೋಡಿದ ಅನುಭವವನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ.

ರೇನಿಯರ್ ಪರ್ವತವು ಅಮೆರಿಕದ ವಾಷಿಂಗ್ಟನ್ ರಾಜ್ಯದ ಭೂದೃಶ್ಯ ಪ್ರತೀಕವೆನಿಸಿ ಜನಪ್ರಿಯತೆ ಗಳಿಸಿದೆ. ಮೋಡರಹಿತ ದಿನಗಳಲ್ಲಿ ಸುಮಾರು 60 ಮೈಲಿ ದೂರದ ಸಿಯಾಟೆಲ್ ನಗರದಿಂದಲೂ ಇದು ಗೋಚರಿಸುತ್ತದೆ. ಇದಕ್ಕೆ ಟಹೋಮ, ಟಕೋಮ, ಮೊದಲಾದ ಇತರ ಹೆಸರುಗಳೂ ಇವೆ. 1792ರ ಮೇ ತಿಂಗಳ ಆರಂಭದಲ್ಲಿ ಪುಗೆಟ್ ಸೌಂಡ್ ಸ್ಥಳದಿಂದ ಈ ಪರ್ವತವನ್ನು ಮೊತ್ತಮೊದಲು ದರ್ಶಿಸಿದ ಯೂರೋಪಿಯನ್‌ನೆಂದರೆ ಕ್ಯಾಪ್ಟನ್ ಜಾರ್ಜ್ ವ್ಯಾಂಕೂವರ್. ಇವನು ತಮ್ಮ ನೆಚ್ಚಿನ ಗೆಳೆಯ
ರಿಯರ್ ಅಡ್ಮಿರಲ್ ಪೀಟರ್ ರೇನಿಯರ್ ಗೌರವಾರ್ಥ ಇದಕ್ಕೆ ರೇನಿಯರ್ ಪರ್ವತ ಎಂದು ನಾಮಕರಣ ಮಾಡಿದ. 1890ರಲ್ಲಿ ಈ ಹೆಸರನ್ನು ಅಧಿಕೃತಗೊಳಿಸಲಾಯಿತು.

ಇದೊಂದು ಜ್ವಾಲಾಮುಖಿ ಇರುವ ಪ್ರದೇಶ. ಸುತ್ತಲೂ ಕಾಡು, ಬೆಟ್ಟ, ಪರ್ವತ. ಈ ಸುಪ್ತ ಜ್ವಾಲಾಮುಖಿಯು ಸಾಮಾನ್ಯವಾಗಿ ಮೋಡಗಳಿಂದ ಮುಚ್ಚಲ್ಪಟ್ಟಿದ್ದು, ಆಗಾಗ ನೋಟಕ್ಕೆ ದಕ್ಕುತ್ತದೆ. ಈ ಪ್ರದೇಶವು ಯಥೇಚ್ಛ ಮಳೆಯಾಗುವ ಪ್ರದೇಶವಾಗಿದೆ. ಇಪ್ಪತ್ತೈದಕ್ಕೂ ಹೆಚ್ಚು ನೀರ್ಗಲ್ಲ ನದಿಗಳು ಈ ಪರ್ವತದಲ್ಲಿವೆ. ಇದರ ಸುತ್ತಲೂ ಅನೇಕ ಕಣಿವೆಗಳು, ಜಲಪಾತಗಳು,
ತೊರೆ ಗಳು, ಝರಿಗಳು ಕಂಡುಬರುತ್ತವೆ. ಪರ್ವತದ ಇಳಿಜಾರಿನಲ್ಲಿನಲ್ಲಿ ಮಾಳಗಳು ಮತ್ತು ನೂರರಿಂದ ಸಾವಿರ ವರ್ಷಗಳಷ್ಟು ಹಳೆಯದಾದ ಮರಗಳಿಂದ ಕೂಡಿದ ಅರಣ್ಯವಿದೆ.

ದಟ್ಟವಾದ ಕಾಡು ಮತ್ತು ದುರ್ಗಮ ಪ್ರದೇಶವಾಗಿರುವುದರಿಂದಾಗಿ, ಈ ಪರ್ವತ ಮತ್ತು ಆ ಸುತ್ತಲಿನ ಕಣಿವೆ ಪ್ರದೇಶವು ನಾನಾ ರೀತಿಯ ವನ್ಯ ಸಸ್ಯಗಳ ತವರು. ಜತೆಯಲ್ಲೇ ಇಲ್ಲಿನ ಕಾಡು, ಇಳಿಜಾರು, ಹುಲ್ಲುಗಾವಲುಗಳಲ್ಲಿ ವೈವಿಧ್ಯಮಯ ವನ್ಯಜೀವಿಗಳು ಆಶ್ರಯ ಪಡೆದಿವೆ.

ಸರಕಾರದಿಂದ ರಕ್ಷಣೆ
ಇಂತಹ ಸಮೃದ್ಧ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ 1899ರ ಮಾರ್ಚ್ ಎರಡನೆಯ ದಿನಾಂಕ ಮೌಂಟ್ ರೇನಿಯರ್ ನ್ಯಾಷನಲ್ ಪಾರ್ಕ್ ಅಸ್ತಿತ್ವಕ್ಕೆ ಬಂದಿತು. ರೇನಿಯರ್ ಪರ್ವತವೂ ಸೇರಿದಂತೆ 956.6 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ಉದ್ಯಾನವು ಅಮೆರಿಕದ ಐದನೆಯ ರಾಷ್ಟ್ರೀಯ ಉದ್ಯಾನವಾಗಿದೆ. ರಾಷ್ಟ್ರೀಯ ಅರಣ್ಯದಿಂದ
ರೂಪಿಸಿದ ಮೊದಲ ಉದ್ಯಾನ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

1997ರ ಫೆಬ್ರವರಿ 18ರಂದು ಇದನ್ನು ನ್ಯಾಷನಲ್ ಹಿಸ್ಟಾರಿಕ್ ಲ್ಯಾಂಡ್‌ಮಾರ್ಕ್ ಎಂದು ಘೋಷಿಸಲಾಯಿತು. ಅಮೆರಿಕದ ಚಾರಿತ್ರಿಕ ಸ್ಥಳಗಳ ನ್ಯಾಷನಲ್ ರಿಜಿಸ್ಟರ್‌ನಲ್ಲಿ ಹೆಸರಿಸಿರುವ 42 ತಾಣಗಳು ಈ ಉದ್ಯಾನದಲ್ಲಿವೆ. ಈ ನ್ಯಾಷನಲ್ ಪಾರ್ಕ್
ಚಳಿಗಾಲದಲ್ಲಿ ಹಿಮಕ್ರೀಡೆಗಳಿಗೆ ವಿಪುಲ ಅವಕಾಶ ಕಲ್ಪಿಸುತ್ತದೆ. ಈ ಉದ್ಯಾನಕ್ಕೆ ನಾಲ್ಕು ಪ್ರವೇಶ ದ್ವಾರಗಳಿವೆ.

ಸಿಯಾಟೆಲ್ ನಗರದಿಂದ ಬರುವ ಪ್ರವಾಸಿಗರು ಸಾಮಾನ್ಯವಾಗಿ ನಿಸ್ಕುಲೆ ದ್ವಾರವನ್ನು ಬಳಸುತ್ತಾರೆ. ವರ್ಷವಿಡೀ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದು ಈ ದ್ವಾರದ ಮೂಲಕ ಮಾತ್ರ. ನಾವು ಈ ನ್ಯಾಷನಲ್ ಪಾರ್ಕ್‌ನ್ನು ನೋಡಲು ಸಿಯಾಟೆಲ್ ‌ನಿಂದ ಪಯಣಿಸಿದೆವು. ಸಿಯಾಟೆಲ್ ನಿಂದ ಕಾರಿನಲ್ಲಿ ಸುಮಾರು ಎರಡು ಘಂಟೆ ಪಯಣಿಸಿ ನ್ಯಾಷನಲ್ ಪಾರ್ಕ್ ತಲುಪಿದೆವು.
ಈ ಉದ್ಯಾನದಲ್ಲಿ ಚಾರಣಕ್ಕೆ ಅನುಕೂಲವಾಗುವಂತೆ ಅನೇಕ ಜಾಡುಗಳನ್ನು ನಿರ್ಮಿಸಲಾಗಿದೆ.

ಆದ್ದರಿಂದ ಇದು ಚಾರಣಿಗರ ಸ್ವರ್ಗ ಎಂದರೂ ತಪ್ಪಿಲ್ಲ. ಮುಂಚಿತವಾಗಿ ನೋಂದಾಯಿಸಿ, ಚಾರಣ ಮಾಡಬಹುದು, ನಿಗದಿತ ದಾರಿಯಲ್ಲಿ ನಡೆಯುತ್ತಾ ಸಾಗಬಹುದು. ಈ ಪ್ರದೇಶದಲ್ಲಿ ಅವಲಾಂಚ್ ಲಿಲಿ, ಡೆಡ್‌ಹಾರ್ಸ್ ಕ್ರೀಕ್, ಹಾಗು ಪ್ಯಾರಡೈಸ್ ಜಾಡುಗಳು ನಮಗೆ ಕಂಡುಬಂದವು. ಇವುಗಳ ನಕ್ಷೆಗಳು ಹಾಗು ಮಾರ್ಗಸೂಚಿ ಫಲಕಗಳೂ ಇಲ್ಲಿದ್ದವು. ಇಂತಹ ಒಂದು ಜಾಡು ಹಿಡಿದು ನಡೆದು 14,410 ಅಡಿ ಎತ್ತರದ ಪರ್ವತದ ಹಿಮಾಚ್ಛಾದಿತ ಶಿಖರಗಳನ್ನು ಸಮೀಪದಿಂದ ವೀಕ್ಷಿಸಿ ಅಪೂರ್ವ ಅನುಭವ
ಪಡೆದೆವು.

ಅಲ್ಲಿನ ಚಾರಣದ ಹಾದಿಯಲ್ಲಿ ಸಾಗುವಾಗ ನಮಗೆ ವಿವಿಧ ರೀತಿಯ ಅನುಭವಗಳು ಆದವು. ದಾರಿಯುದ್ದಕ್ಕೂ ವೈವಿಧ್ಯಮಯ ಗಿಡ ಮರಗಳನ್ನು ಕಾಣಬಹುದು. ನಮ್ಮ ಚಾರಣದ ಹಾದಿಯಲ್ಲಿ ಎತ್ತರದ ಕಾನಿಫೆರಸ್ ವೃಕ್ಷಗಳು, ವರ್ಣಮಯ ವನಸುಮಗಳು, ತೊರೆಗಳನ್ನೂ ಕಂಡು ಆನಂದಿಸಿದೆವು. ಮರದ ನೆರಳಿನಲ್ಲಿ ಪ್ರವಾಸಿಗರ ಅನುಕೂಲಕ್ಕೆಂದು ಹಲಗೆಗಳಿಂದ ನಿರ್ಮಿಸಿದ್ದ ಪರಿಸರ ಸ್ನೇಹಿ ಬೆಂಚುಗಳ ಮೇಲೆ ಕುಳಿತು ವಿರಮಿಸಿಕೊಂಡೆವು.

ಮನೆಯಿಂದಲೇ ಕೊಂಡೊಯ್ದಿದ್ದ ಚಿತ್ರಾಾನ್ನ ಹಸಿದ ಹೊಟ್ಟೆಗೆ ಆಹಾರವಾಯಿತು. ರೇನಿಯರ್ ಪಾರ್ಕ್‌ನಲ್ಲಿ ಇನ್ನಷ್ಟು ಹೊತ್ತು ಸುತ್ತಾಡಿ ನಿಸರ್ಗ ಸೌಂದರ್ಯ ಸವಿದು ಸಿಯಾಟೆಲ್‌ಗೆ ಮರಳಿದೆವು.