Thursday, 12th December 2024

ಮುಂಡಳ್ಳಿ ಸಾಹಿತ್ಯಗಾನ ಯಾನ

ಎಂ.ಎಸ್.ಶೋಭಿತ್ ಹೊನ್ನಾವರ

ಪ್ರಶಸ್ತಿ ಮತ್ತು ಸನ್ಮಾನ
ಉಮೇಶ ಮುಂಡಳ್ಳಿಯವರ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿನ ಸೇವೆ, ಸಾಧನೆಗಳನ್ನು ಗುರುತಿಸಿ ನಾಡಿನ ಹಲವು ಸಂಘ ಸಂಸ್ಥೆಗಳು ಗೌರವಿಸಿದೆ. ಸುವರ್ಣ ಕರ್ನಾಟಕ ಸೇವಾಪ್ರಶಸ್ತಿ, ಭಾವಗೀತೆ ಗಾಯನಕ್ಕೆ ರಾಜ್ಯ ಪ್ರಶಸ್ತಿ, ಭಟ್ಕಳ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಬಸವಚೇತನ ಪ್ರಶಸ್ತಿ ಉತ್ತರಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾ ಯುವ ಪ್ರಶಸ್ತಿಗಳಿಗೂ
ಭಾಜನರಾಗಿದ್ದಾರೆ.

ಈ ಸಮಾಜದಲ್ಲಿ ಹಲವರ ಜೀವನವು ಸುಖದ ದಾರಿಯಲ್ಲ, ಸಾಕಷ್ಟು ಕಷ್ಟಗಳಿಂದ ತುಂಬಿದ ಒರಟು ಹಾದಿ. ಕೆಲವರಲ್ಲಿ ಸಾಕಷ್ಟು ಉತ್ಸಾಹ ತುಂಬಿರುತ್ತದೆ. ಆದರೆ ಸೂಕ್ತ ಅನುಕೂಲಗಳಿಲ್ಲದೇ ಬಹುತೇಕರ ಉತ್ಸಾಹ ಪ್ರಾರಂಭದಲ್ಲೇ ಕುಗ್ಗುತ್ತದೆ. ಸಾಕಷ್ಟು ಅನಾನುಕೂಲವಿದ್ದರೂ, ಅದನ್ನು ಮೀರಿ ಪರಿಶ್ರಮ ಹಾಕಿದರೆ ಒಳ್ಳೆಯದನ್ನು ಸಾಧಿಸಬಹುದು ಎಂದು ನಿರೂಪಿಸಿ ಗಮನ ಸೆಳೆದವರು ಭಟ್ಕಳದ ಉಮೇಶ ಮುಂಡಳ್ಳಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಂಡಳ್ಳಿಯ ಉಮೇಶ ಮುಂಡಳ್ಳಿ, ತಮ್ಮ ಅವಿರತ ಪರಿಶ್ರಮದಿಂದ ಸಾಹಿತ್ಯ, ಸಂಗೀತ,
ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡವರು. ಊರಿನಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪಡೆದು, ವಿವಿಧ ಸಂಸ್ಥೆಗಳಲ್ಲಿ ಅರೆಕಾಲಿಕ ಕೆಲಸಗಳನ್ನು ನಿರ್ವಹಿಸುತ್ತಲೇ ಧಾರವಾಡ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆ, ಕುಮಟಾದ ಅನ್ವೇಷಣಾ ಸಂಸ್ಥೆ, ಕಾರವಾರದ ಕೂರ್ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಕಾಲ ಸೇವೆ ಸಲ್ಲಿಸಿದ್ದ ಉಮೇಶ್ ಮುಂಡಳ್ಳಿ ಸದ್ಯ ಹೊನ್ನಾವರ ತಾಲೂಕು ಪಂಚಾಯತಿಯಲ್ಲಿ ಸಾಮಾಜಿಕ ಲೆಕ್ಕಪರಿ ಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಗೀತ ಯಾನ
ಚಿಕ್ಕಂದಿನಿಂದಲೂ ಸಂಗೀತದ ಕುರಿತು ಅಪಾರ ಒಲವನ್ನು ಹೊಂದಿದ್ದ ಉಮೇಶ್ ಮುಂಡಳ್ಳಿ, ತಮ್ಮ ಊರಿನಲ್ಲಿ ಆಗಾಗ
ನಡೆಯುತ್ತಿದ್ದ ಭಜನೆ ಕಾರ್ಯಕ್ರಮ, ಯುವಜನ ಮೇಳ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ‘ಊರಿನ ಸಾಂಸ್ಕೃತಿಕ ಪರಿಸರ, ಇಲ್ಲಿ ಆಗಾಗ ನಡೆಯುತ್ತಿದ್ದ ಕಾರ್ಯಕ್ರಮಗಳೇ ನನ್ನನ್ನು ಸಂಗೀತಗಾರನನ್ನಾಗಿ ರೂಪಿಸಿತು’ ಎನ್ನುತ್ತಾರೆ ಮುಂಡಳ್ಳಿ.

ಉತ್ತರಕನ್ನಡ ಜಿಲ್ಲೆಯಾದ್ಯಂತ ನಡೆದ ಯುವಜನ ಮೇಳ, ಯುವಜನ ಉತ್ಸವ, ರಾಜ್ಯಮಟ್ಟದ ಯುವಜನೋತ್ಸವ, ಸಂಗೀತ ರಸಮಂಜರಿ, ದೂರದರ್ಶನ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ…. ಹೀಗೆ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2011 ರಲ್ಲಿ ಭರವಸೆಯ ಛಾಯೆ ಎಂಬ ಧ್ವನಿಸುರುಳಿಯನ್ನು ಹೊರತಂದ ಉಮೇಶ್ ಅವರು ಸಂಗೀತ ಪ್ರಿಯರಿಗೆ ಗಾನಸುಧೆಯನ್ನು ಉಣಬಡಿಸಿದ್ದಾರೆ.

ಸಂಗೀತದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಉಮೇಶ ಮುಂಡಳ್ಳಿ ಉತ್ತಮ ಕವಿ, ಕಥೆಗಾರರಾಗಿಯೂ
ಗುರುತಿಸಿಕೊಂಡಿದ್ದಾರೆ. ತಮ್ಮದೇ ಸ್ವಂತ ಪ್ರಕಾಶನವನ್ನು ಹುಟ್ಟುಹಾಕಿ ‘ಮೌನಗೀತೆ, ‘ಭಾವಸುಮ, ‘ನಾನೂ ಶಿಲ್ಪವಾಗಬೇಕು’ (ಕವನ ಸಂಕಲನಗಳು), ‘ಕರುನಾಡು ಕುಡಿ ಗಳು’ (ಸಂಪಾದಿತ ಕೃತಿ), ‘ಬೆಂಕಿ ಬಿದ್ದಿದೆ ಹೊಳೆಗೆ ಮತ್ತು ಇತರ ಕಥೆಗಳು’ (ಕಥಾ ಸಂಕಲನ) ಮತ್ತು ‘ಉತ್ತರಕನ್ನಡಕ್ಕೆ ಒಂದು ಸುತ್ತು’ (ಪ್ರವಾಸಿ ಸಂಗ್ರಹ) ಎಂಬ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇತ್ತೀಚೆಗೆ ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡ ‘ಕರ್ನಾಟಕ ಗ್ರಾಮ ಚರಿತ್ರ ಕೋಶ’ ಬೃಹತ್
ಸಂಪುಟ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡು, ಹಳಿಯಾಳ ತಾಲೂಕಿನ ಗ್ರಾಮ ಚರಿತ್ರೆ ಬರೆದು ವಿಶ್ವವಿದ್ಯಾನಿಲಯಕ್ಕೆ
ಸಲ್ಲಿಸುವ ಮೂಲಕ ಜಾನಪದ ಅಧ್ಯಯನಕಾರರಾಗಿಯೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆ
ಇವರದ್ದು.

ಹತ್ತು ವರ್ಷಗಳ ಕಾಲ ಭಟ್ಕಳ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2001 ರಲ್ಲಿ ಕನ್ನಡ
ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯತ್ವವನ್ನು ಪಡೆದ ಉಮೇಶ ಮುಂಡಳ್ಳಿಯವರು, ಪ್ರಸ್ತುತ ಜಿಲ್ಲಾ ಸಾಹಿತ್ಯ ಪರಿಷತ್‌ನ
ಕೋಶಾಧ್ಯಕ್ಷರಾಗಿ ಆಯ್ಕೆಗೊಂಡು ನಿರಂತರವಾಗಿ ಎರಡು ದಶಕಗಳ ಕಾಲ ತಮ್ಮ ಸಾಹಿತ್ಯ ಸೇವೆ ನೀಡುತ್ತಿದ್ದಾರೆ.

2016 ರಲ್ಲಿ ನಿನಾದ ಸಾಹಿತ್ಯ, ಸಂಚಯ ಸಂಸ್ಥೆಯನ್ನು ಹುಟ್ಟುಹಾಕಿ ಕಲಾಪೋಷಕರಾಗಿಯೂ, ಕಲಾಸೇವೆ ಮಾಡುತ್ತಿದ್ದಾರೆ.