Thursday, 12th December 2024

ತಾನಾರೆಂದು ತಿಳಿದೊಡೆ – 40

ಕ್ಷಿತಿಜ್ ಬೀದರ್

ಬಯಲು ಪ್ರದೇಶದಲ್ಲಿ ಮಲಗಿದ ನಾನು ಸ್ಥೂಲ ಶರೀರೀ ಅಲ್ಲವೇ! ಕಪ್ಪು ಛಾಯೆ ಜೀವಾತ್ಮ. ಅದು ಸೂಕ್ಷ್ಮ ಶರೀರವಾಗಿದೆ. ರೂಮಿನೊಳಗೆ ಮಲಗಿದ್ದು ನನ್ನದೇ ಕಾರಣ ಶರೀರ! ಅಭ್ಯಾಸ ಬಲದಂತೆ ಅದು ನನ್ನಿಂದ ಬೇರ್ಪಟ್ಟು ತನ್ನ ಮಾಮೂಲು ಸ್ಥಳದಲ್ಲಿಯೇ ವಿರಮಿಸಿದೆ.

ಕಾಯಂ ಸ್ಥಳಕ್ಕೆ ಬೇರ್ಪಟ್ಟ ಸೂಕ್ಷ್ಮ ಶರೀರ ಬಂದಿದೆ. ನನ್ನ ಸ್ಥೂಲ ಶರೀರ ಕಾಣದೆ ದಿಗಿಲುಗೊಂಡಿದೆ. ಅದರ ಇಂಗಿತ ಅರಿತ ಕಾರಣ ಶರೀರ ಹೊರಗೆ ಬಯಲಲ್ಲಿ ಮಲಗಿದ್ದ ನನ್ನೆೆಡೆಗೆ ಹೋಗಲು ನಿರ್ದೇಶನ ನೀಡಿದೆ. ಮೂರು ಶರೀರಗಳು ಒಂದು ಕ್ಷಣ ಮಾತ್ರ ಪ್ರತ್ಯೇಕಗೊಂಡು ಮತ್ತೆ ಕೂಡಿಕೊಂಡಿರಬೇಕು ಎಂದೆನಿಸಿತು. ಈ ಅನುಭವ ಅಂತರಾತ್ಮನಿಗೆ ಸಿಕ್ಕಾಗ ಭೌತಿಕ ಶರೀರಕ್ಕೆ (ಶುದ್ಧ ಮನಸ್ಸಿನ ಅರೆಪ್ರಜ್ಞೆಗೆ) ವರ್ಗಾಯಿಸಿದಂತೆ ತೋರುತ್ತದೆ. ಅಂತರಾತ್ಮ ಅಂದರೆ ಸಾಕ್ಷಿ ಭೂತ ಪ್ರಜ್ಞೆ ಅಲ್ಲವೇ? ಧ್ಯಾನ ಸಮಾಧಿಯಲ್ಲಿ ಶರೀರದ ಅನುಭವಗಳು ಸಾಧಕರಿಗೆ ಬೇಕಾದಷ್ಟು ಸಿದ್ಧಿಸಿರುತ್ತವೆ. ನನಗಾದದ್ದು ಆಕಸ್ಮಿಕವಷ್ಟೆ!

ಜ್ಞಾನಿಗಳು ಈ ವಿದ್ಯಮಾನವನ್ನು ಬೇರೆ ದೃಷ್ಟಿಕೋನದಲ್ಲಿಯೂ ವಿವರಿಸಬಹುದು. ಮನ ತುಂಬಿ ಮತ್ತು ಏಕಾಗ್ರತೆ ಎರಡು ಪ್ರತ್ಯೇಕ ವಿಧಿಗಳಾಗಿದ್ದರೂ ಅವುಗಳಲ್ಲಿ ಸಮತೋಲನ ಸಾಧಿಸುವುದು ಅತಿ ಮುಖ್ಯವಾಗುತ್ತದೆ. ಒಂದು ಪ್ರಬಲವಾದರೆ ಮನಸ್ಸಿನ ಸ್ಥಿತಿ ದುರ್ಬಲವಾಗಿ ಧ್ಯಾನವು ಸಾಧ್ಯವಾಗದೇ ಹೋಗಬಹುದು. ಏಕಾಗ್ರತೆ ಅಂದರೆ ಏಕಬಿಂದುವಿನಲ್ಲಿ ಮನಸ್ಸನ್ನು ಕೇಂದ್ರೀ ಕರಿಸುವುದು. ಅಲ್ಲಿಯೇ ಸ್ಥಿರವಾಗಿರಲು ಶಕ್ತಿ ಪ್ರಯೋಗಿಸುವುದು. ಹೀಗಾಗಿ ಏಕಾಗ್ರತೆ ಶಕ್ತಿಯ ಚಟುವಟಿಕೆಯಾಗಿರುತ್ತದೆ. ಮನ ತುಂಬಿ ಸಂವೇದನೆಯ ಕಾರ್ಯಚಟುಟಿಕೆಯಾಗಿರುತ್ತದೆ.

ಕಾಂಟ್‌ನ ತತ್ವದಂತೆ ಸಮಯ ಮತ್ತು ಸ್ಥಳದಲ್ಲಿ ನಡೆಯುವ ಘಟನೆ ತಾತ್ಕಾಲಿಕ. ಕ್ಷಣಿಕವಾದದ್ದು. ಆ ಸಮಯದಲ್ಲಿ ಆ ಸ್ಥಳದಲ್ಲಿ ನಡೆಯುವ ವಿದ್ಯಮಾನವು ಸ್ಥಳ ಬದಲಾದಂತೆ ಬೇರೆಯಾಗಿ ಬಿಡುತ್ತದೆ. ವಸ್ತುಸ್ಥಿತಿಯ ಬಣ್ಣವೇ ಬದಲಾಗಿ ಬಿಡುತ್ತದೆ. ನಿರ್ದಿಷ್ಟ ಸ್ಥಳದ ಆ ಸಮಯದಲ್ಲಾಗುವ ಶಕ್ತಿ ಪ್ರವಾಹವನ್ನು ಮನಸ್ಸಿಗೆ ಉಣಿಸಿದಾಗ ಪ್ರಶಾಂತತೆ ನೆಲೆಸಿ ಮನಸ್ಸಿನ ವಿಕಾರಗಳು ಮರೆಯಾಗಿ ಸತ್ಯಂ ಶಿವಂ ಸುಂದರಂ ಎಂಬಂಥ ಸ್ಥಿತಿ ಧ್ಯಾನದಲ್ಲಿ ಕಾಣುತ್ತೇವೆ.

ನಿರ್ಮೋಹ ಭಾವ ಮೂಡಿದಾಗ ದೌರ್ಬಲ್ಯಗಳಿಂದ ಬಿಡುಗಡೆ ಸಾಧ್ಯವಾಗುತ್ತದೆ. ಮನ ತುಂಬಿ ಭಾವ ಪ್ರಜ್ಞೆಯಿಂದ ಯಾವುದೇ ಗೊಂದಲಗಳಿಗೆ ಅವಕಾಶವಾಗುವುದಿಲ್ಲ. ಉದಾಹರಣೆಗೆ ಮನತುಂಬಿ ಭಾವವು ವಸ್ತುವನ್ನು ಆರಿಸಿದರೆ ಏಕಾಗ್ರತೆಯೂ ಏಕ ಬಿಂದು ಕೇಂದ್ರಿತವಾಗಿ ಕಾರ್ಯ ನಿರ್ವಹಿಸುತ್ತದೆ; ಹಾಳೆ ಮೇಲೆ ಮಸೂರ ಮೂಲಕ ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸಿದಂತೆ. ಬಿಸಿಲಿನ ಕಿರಣಗಳಿಗೆ ಹಾಳೆ ಬಿಸಿ ಆಗಬಹುದೇ ಹೊರತು ಸುಡುವುದಿಲ್ಲ. ಅದೇ ಮಸೂರ ಮೂಲಕ ಕಿರಣಗಳು ಹಾದು ಬಿಂದು ವಿನಂತೆ ಕೇಂದ್ರೀಕರಣಗೊಂಡರೆ ಹಾಳೆ ಸುಟ್ಟು ಬಿಡುತ್ತದೆ. ಏಕಾಗ್ರತೆ ಮಸೂರಿನಂತೆ ಕೆಲಸ ಮಾಡುತ್ತದೆ. ಮನಸ್ಸಿನ ಆಳಕ್ಕೆ ಇಳಿದು ಜ್ವಾಲಾಶಕ್ತಿ ಉದಯಿಸುವಂತೆ ಮಾಡುತ್ತದೆ. ಇದಕ್ಕೆ ಮನ ತುಂಬಿ ಭಾವ ಪ್ರಜ್ಞೆ ಸಾಕ್ಷಿಯಾಗುತ್ತದೆ.

‘ಮನತುಂಬಿ’ ಕ್ರಿಯೆ ಶುದ್ಧ ವೀಕ್ಷಣೆ ಮಾತ್ರ! ಮನದ ಮುಂದೆ ಹಾದು ಹೋಗುವ ಕಾಮ, ಕ್ರೋಧ, ಗಲಾಟೆ, ತಿರಸ್ಕಾರ ಮುಂತಾದ ಎಲ್ಲಾ ಘಟನೆಗಳ ಅವಲೋಕನ ಮಾಡುತ್ತದೆ. ಒಂದಾದ ನಂತರ ಇನ್ನೊಂದನ್ನು ವೀಕ್ಷಣೆ ಮಾಡುತ್ತಾ ಹೋಗುವುದೇ ಸಾಕ್ಷಿ ಭಾವ. ವರ್ತಮಾನ ಕಾಲದ ವಿದ್ಯಮಾನಗಳನ್ನು ಜಾಗ್ರತೆಯಲ್ಲಿ ಪರಕೀಯನಾಗಿ ಗಮನಿಸಲು ನಮ್ಮನ್ನು ನಾವೇ  ಎಚ್ಚರಿಸಿ ಕೊಳ್ಳಬೇಕು. ಮೈ ಮರೆತರೆ ‘ಮನತುಂಬಿ’ ಭಾವ ಪ್ರಜ್ಞೆ ಹಾರಿಹೋಗುತ್ತದೆ. ಇದರಲ್ಲಿ ಸ್ವಾರ್ಥಭಾವನೆ ಇರಬಾರದು. ‘ನನ್ನದು’ ’ನಾನು’ ಎಂಬ ಅಹಂಕಾರ ತೋರಬಾರದು. ಕನ್ನಡಿಯಲ್ಲಿ ನೋಡಿಕೊಳ್ಳುವಂತೆ ನಿರ್ಲಿಪ್ತ ಭಾವ ಮೈಗೂಡಿಸಿಕೊಳ್ಳಬೇಕು. ನಟಿಸಿದ ನಂತರ ನಟನೊಬ್ಬ ತನ್ನ ಪಾತ್ರವನ್ನು ಪರದೆ ಮೇಲೆ ನೋಡುವ ಮನಸ್ಥಿತಿಯೇ ‘ಮನತುಂಬಿ’ ಭಾವ ಪ್ರಜ್ಞೆಯಾಗಿರು ತ್ತದೆ.

‘ಓ… ನಾನು ಹೀಗಿದ್ದೀನಾ?’ ಎಂದು ಅಚ್ಚರಿ ಪಡುವುದಿಲ್ಲ ನಮ್ಮ ನೋವು ಕಷ್ಟಗಳನ್ನು ಸೃಷ್ಟಿಯಾಗುವ ಬಗೆಯನ್ನು ನಾವು ಗಮನಿಸಬೇಕು ಇತರರಿಗೆ ನಾವೆಷ್ಟು ತೊಂದರೆ ಕೊಡುತ್ತಿದ್ದೇವೆ ಎಂಬ ಸ್ವ ವೀಕ್ಷಣೆಯೂ ‘ಮನತುಂಬಿ’ ಭಾವದ ಅರಿವು ಮೂಡಲು ಸಾಧ್ಯವಾಗುತ್ತದೆ. ಇದರಿಂದ ಸಾಧಿಸಬೇಕಾದ್ದು ಏನೂ ಇಲ್ಲ. ಇರುವುದನ್ನೇ ತಿಳಿದುಕೊಳ್ಳುವುದಷ್ಟೇ ಇದರ ಕೆಲಸ!
ಏಕಾಗ್ರತೆಯೂ ವಸ್ತುವಿನ ಮೇಲೆ ಬೆಳಕು ಚೆಲ್ಲಿದರೆ ಅದರ ಹಿಂದೆ ಮನತುಂಬಿ ಭಾವ ಪ್ರಜ್ಞೆ ನಿಂತಿರುತ್ತದೆ. ಏಕಾಗ್ರತೆಯ ಚಂಚ ಲತೆಯನ್ನು ಮನತುಂಬಿ ಭಾವ ಪ್ರಜ್ಞೆ ಗುರುತಿಸಿ ಸರಿದಾರಿಗೆ ಹಚ್ಚುತ್ತದೆ. ಸಹನಶಕ್ತಿ ಇಲ್ಲಿ ಹೆಚ್ಚು ಕಾರ್ಯೋನ್ಮುಖ ವಾಗುತ್ತದೆ. ಪ್ರತಿಯೊಂದು ಘಟನೆಯನ್ನು ಪ್ರತಿಕ್ರಿಯೆ ಇಲ್ಲದೆ ಸಾಕ್ಷಿಭೂತರಾಗಿ ನೋಡುವುದು ಕಷ್ಟಕರವೇ.

ಸ್ವಾರ್ಥಪರರಾಗಿ ದುರಾಸೆ ಕಾಮನೆ ಅಟ್ಟಹಾಸದಲ್ಲಿ ಸುಳ್ಳು ಹೇಳಿ ಪಲಾಯನಗೈಯಲು ನೋಡುತ್ತೇವಲ್ಲಾ! ಇದು ಮನತುಂಬಿ ತತ್ವದಲ್ಲಿ ನಡೆಯುವುದಿಲ್ಲ. ನಮ್ಮನ್ನೇ ನಾವು ಶುದ್ಧ ರೀತಿಯಲ್ಲಿ ನಿರ್ವಂಚನೆಯಾಗಿ ಪ್ರಾಮಾಣಿಕರಾಗಿ ಅಭಿವ್ಯಕ್ತಗೊಳಿಸುವುದೇ ಇದರ ಉದ್ದೇಶ. ಆತಂಕ, ಭಯ, ಸೋಮಾರಿತನ ಯಾವುದೇ ದೌರ್ಬಲ್ಯಗಳಿರಲಿ ಸ್ವೀಕರಿಸುವ ಮನೋಭಾವನೆ ಇರಬೇಕು.

‘‘ವಾಸ್ತವವಾಗಿ ನಾನು ಯಾರು? ಏನಾಗಿದ್ದೇನೆ?’’ ಎನ್ನುವುದನ್ನೇ ಮನತುಂಬಿ ಭಾವ ಪ್ರಜ್ಞೆಯಲ್ಲಿ ಸಾಕ್ಷಾತ್ಕರಿಸಿಕೊಳ್ಳಬೇಕು. ಇದು ಶಿವಯೋಗ ಧ್ಯಾನದಲ್ಲಿ ತೆರೆದುಕೊಳ್ಳುತ್ತದೆ.

(ಮುಂದುವರಿಯುವುದು)