Sunday, 15th December 2024

ನಟ್ವರ್‌ಲಾಲ್‌ನ ರೋಚಕತೆ – ತನುಷ್ ಹೇಳಿದ ರಿಯಲ್‌ ಕಥೆ

ಪ್ರಶಾಂತ್‌ ಟಿ.ಆರ್‌

ಕನ್ನಡ ಚಿತ್ರರಂಗದಲ್ಲಿ ದಿನಕ್ಕೊಂದರಂತೆ ಟೀಸರ್‌ಗಳು ರಿಲೀಸ್ ಆಗುತ್ತಿವೆ. ನಿರೀಕ್ಷೆ ಮೂಡಿಸಿ, ಸದ್ದು ಮಾಡುತ್ತಿವೆ. ಹೀಗೆ ಟೀಸರ್ ಮೂಲಕವೇ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಮಿ.ನಟ್ವರ್‌ಲಾಲ್ ಚಿತ್ರವೂ ಒಂದು. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಟೀಸರ್ ಲಕ್ಷಾಂತರ ವೀಕ್ಷಣೆ ಕಂಡಿದೆ. ಇದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈಗಾಗಲೇ ಚಿತ್ರೀಕರಣವೂ ಮುಗಿದಿದ್ದು, ಸದ್ಯದಲ್ಲಿಯೇ ತೆರೆಗೂ ಬರಲಿದೆ. ಮಿ.ನಟ್ವರ್‌ಲಾಲ್ ಕುರಿತ ರೋಚಕ ಸಂಗತಿಗಳನ್ನು ನಾಯಕ ತನುಷ್ ವಿ.ಸಿನಿಮಾಸ್‌ನೊಂದಿಗೆ ಹಂಚಿಕೊಂಡಿದ್ದಾರೆ. 

ವಿ.ಸಿನಿಮಾಸ್ : ಮಿ.ನಟ್ವರ್‌ಲಾಲ್ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆಯಲ್ಲ? 
ತನುಷ್ : ಮಿ.ನಟ್ವರ್‌ಲಾಲ್ ಟೈಟಲ್ ನಲ್ಲಿಯೇ ಪಂಚಿಂಗ್ ಇದೆ. ಅದಕ್ಕಾಗಿಯೇ ಇದೇ ಶೀರ್ಷಿಕೆಯನ್ನು ಆಯ್ಕೆ ಮಾಡಿದೆವು. ಇದು ನೈಜ ಕಥೆಯಾಧಾರಿತ ಚಿತ್ರ. ೧೯೬೦ರ ಆಸುಪಾಸಿನಲ್ಲಿ ಬಿಹಾರದಲ್ಲಿದ್ದ ನಟ್ವರ್ ಲಾಲ್ ಎಂಬ ಕ್ರಿಮಿನಲ್ ಒಬ್ಬನ ಕುರಿತ ಕಥೆ ಯಿದು. ಆತನನ್ನು ಕ್ರಿಮಿನಲ್ ಎನ್ನುವುದಕ್ಕಿಂತ, ಅತಿ ಬುದ್ದಿವಂತ ಅನ್ನುವುದು ಸೂಕ್ತ. ಇದು ನಾಯಕ ಪ್ರಧಾನ ಚಿತ್ರ ಅನ್ನುವು ದಕ್ಕಿಂತ ಇಲ್ಲಿ ಕಥೆಯೇ ನಾಯಕ ಅನ್ನಬಹುದು.

ವಿ.ಸಿ : ನಟ್ವರ್‌ಲಾಲ್ ಕಥೆ ಹುಟ್ಟಿದ್ದು ಹೇಗೆ?
ತನುಷ್ : ಹೊಸತನದ ಸಿನಿಮಾ ಮಾಡಬೇಕು ಎಂದು ಹೊರಟಾಗ ನಮಗೆ ಸಿಕ್ಕಿದ್ದು ನಟ್ವರ್‌ಲಾಲ್‌ನ ಕಥೆ. ಆತನ ಚರಿತ್ರೆ ರೋಚಕವಾಗಿತ್ತು. ಆತನ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಿದೆವು. ಅವನೊಬ್ಬ ಅಪರಾಧಿ ಎಂದು ಕಂಡುಬಂದರು, ಅವನ ಬುದ್ಧಿವಂತಿಕೆ ಮೆಚ್ಚುವಂತಹದ್ದು. ವಿದೇಶಿಗರಿಗೆ ಸಂಸತ್ ಭವನವನ್ನೇ ಮಾರಿದ ಭೂಪ ಅವನು. ನಟ್ವರ್ ಲಾಲ್‌ನ ಸಂಪೂರ್ಣ ಚರಿತ್ರೆಯನ್ನು ಕಲೆ ಹಾಕಿದೆವು. ಇದನ್ನೇ ಆಧರಿಸಿ ಯಾಕೆ ಕಥೆ ಹೆಣೆಯಬಾರದು ಅನ್ನಿಸಿತು. ಅಂತು ಕಥೆಯೂ ರೆಡಿಯಾಯಿತು. ಹಾಗಂತ ಸಂಪೂರ್ಣವಾಗಿ ರಿಯಲ್ ನಟ್ವರ್ ಲಾಲ್‌ನ ಕಥೆಯೇ ಇಲ್ಲಿಲ್ಲ. ಇಂದಿನ ನೇಟಿವಿಟಿಗೆ ತಕ್ಕಂತೆ ಅದನ್ನು ಬದಲಾಯಿಸಿ ಕೊಂಡಿದ್ದೇವೆ. ಒಂದಷ್ಟು ಕಾಲ್ಪನಿಕ ಕಥೆಯನ್ನು ಸೇರಿಸಿದೆವು. ಚಿತ್ರದಲ್ಲಿ ಕ್ರಿಮಿನಲ್ ಕಥೆಯ ಜತೆಗೆ ಪ್ರೇಮಕಥೆಯೂ ಸಾಗಲಿದೆ.

ವಿ.ಸಿ : ನಟ್ವರ್‌ಲಾಲ್‌ಗಾಗಿ ನಿಮ್ಮ ತಯಾರಿ ಹೇಗಿತ್ತು?
ತನುಷ್ : ನಟ್ವರ್ ಲಾಲ್ ನನ್ನ ಕನಸಿನ ಸಿನಿಮಾ. ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇದೆ. ನಿರ್ದೇಶಕ ಲವ ಕಥೆ ಸಿದ್ಧಪಡಿಸುವಾಗಲೇ ಅದಕ್ಕೆ ತಕ್ಕಂತೆ ತಯಾರಿ ಆರಂಭಿಸಿದೆ. ಈ ಚಿತ್ರದಲ್ಲಿ ನಾನು ಐದು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ತಿಂಗಳುಗಟ್ಟಲೆ ಶ್ರಮಿಸಿದ್ದೇನೆ. ಚಿತ್ರದ ಪ್ರತಿ ದೃಶ್ಯವನ್ನು ಶೂಟ್ ಮಾಡು ವಾಗಲೂ ನಾನು ಅದನ್ನು ಎಂಜಾಯ್ ಮಾಡುತ್ತಿದ್ದೆ. ನಿಜವಾದ ನಟ್ವರ್‌ಲಾಲ್ ಹೇಗಿರುತ್ತಿದ್ದ ಎಂಬುದನ್ನು ಮನಸಿನಲ್ಲಿಯೇ ಕಲ್ಪಿಸಿಕೊಂಡು ನಟಿಸುತ್ತಿದ್ದೆ. ಒಟ್ಟಿನಲ್ಲಿ ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ ಎಂಬ ತೃಪ್ತಿ ನನಗಿದೆ. ಇನ್ನೇನು ಚಿತ್ರ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.

ವಿ.ಸಿ : ಎಲ್ಲೆಲ್ಲಿ ಚಿತ್ರೀಕರಣ ನಡೆಸಿದ್ದೀರಿ?
ತನುಷ್ : ನಟ್ವರ್‌ಲಾಲ್‌ನ ಕಥೆಗೆ ಲೊಕೇಶನ್ ಬಹುಮುಖ್ಯ. ಕಥೆಗೆ ಪೂರಕವಾಗುವ ಸ್ಥಳಕ್ಕಾಗಿ ಎಲ್ಲೆಡೆ ಹುಡುಕಿದೆವು. ದೂರದ ಬಿಹಾರಕ್ಕೆ ತೆರಳುವುದು ಸ್ವಲ್ಪ ರಿಸ್ಕ್ ಅನ್ನಿಸಿತು. ಅದಕ್ಕಾಗಿಯೇ ಬೆಂಗಳೂರಿನಲ್ಲಿಯೇ ಸೆಟ್ ಹಾಕಿ ಚಿತ್ರೀಕರಿಸಿದೆವು. ಅಂದುಕೊಂಡಂತೆ ಚಿತ್ರೀಕರಣವನ್ನು ಮುಗಿಸಿದೆವು. ನಟ್ವರ್‌ಲಾಲ್ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲೂ ತೆರೆಗೆ ಬರಲಿದೆ. ತೆರೆಯಲ್ಲಿ ಸಿನಿಮಾ ಪ್ರೇಕ್ಷಕರ ಮನಕ್ಕೆ ಮೆಚ್ಚು ವಂತೆ ಮೂಡಿಬರಬೇಕು ಎಂಬ ಉದ್ದೇಶದಿಂದ ಸಿಜಿ ಹೆಚ್ಚಾಗಿ ಬಳಸಿದ್ದೇವೆ.

ವಿ.ಸಿ : ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ ?
ತನುಷ್ : ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಸೋನಾಲ್ ಮಂತೆರೋ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಸುಂದರ್‌ರಾಜ್, ಸುಧಿ ಮತ್ತಿತರರು ನಟಿಸಿದ್ದಾರೆ.