Sunday, 15th December 2024

ನೌಕಾಪಡೆಯ ಸಂಪತ್ತು

ಉಮಾಮಹೇಶ್ವರಿ ಎನ್‌.

ನೌಕಾಯಾನದಲ್ಲಿ ಸಾಕಷ್ಟು ಸಾಹಸ ನಡೆಸಿರುವ ನೆದರ್ಲೆಂಡ್ಸ್ ದೇಶದ ನೌಕಾ ಇತಿಹಾಸವನ್ನು ನೋಡುವುದೇ ಒಂದು
ಮುದ ನೀಡುವ ಸಂಗತಿ. ಹದಿನಾರು ಮತ್ತು ಹದಿನೇಳನೆಯ ಶತಮಾನದಲ್ಲಿ ಈ ದೇಶದ ನೌಕೆಗಳು ಭಾರತಕ್ಕೂ ಬಂದು, ವ್ಯಾಪಾರದಲ್ಲಿ ತೊಡಗಿದ್ದವು.

ನೆದರ್ಲೆಂಡ್ಸ್ ದೇಶದ ರಾಜಧಾನಿ ಆಮ್‌ಸ್ಟರ್‌ಡಾಮ್ ನಲ್ಲಿರುವ ಬಂದರು ಯುರೋಪಿನ ಪ್ರಮುಖ ಬಂದರುಗಳಲ್ಲಿ ಒಂದು. ಎಲ್ಲಾ ತರಹದ ಸರಕುಗಳ ಸಾಗಣೆಯ ಕೇಂದ್ರಬಿಂದು ಈ ಸಮುದ್ರ ಬಂದರು.

ಗಡಿಬಿಡಿಯಲ್ಲಿ ಸರಕುಗಳನ್ನು ಹೊತ್ತು ಓಡುವ ನೌಕರರ ದಟ್ಟಣೆ ಹಳೆಯ ಕಾಲದ ದೃಶ್ಯವಾಗಿತ್ತು. ಈಗ ಹೆಚ್ಚಿನ ಕೆಲಸಗಳು ಯಾಂತ್ರೀಕೃತವಾಗಿವೆ. ಯುರೋಪಿನ ಅತಿ ದೊಡ್ಡ ಬಂದರುಗಳaಲ್ಲಿ ಇದು ನಾಲ್ಕನೇ ಸ್ಥಾನದಲ್ಲಿದೆ. ವರ್ಷದಲ್ಲಿ 8 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಂದ ಜಲಯಾನ ಕೈಗೊಳ್ಳು ತ್ತಾರೆ.

ಕೋಕೋ, ಆಲೂಗಡ್ಡೆ, ಪೆಟ್ರೋಲ್ ಇಲ್ಲಿ ಸಾಗಣೆಗೊಳ್ಳುವ ವಸ್ತುಗಳಲ್ಲಿ ಪ್ರಮುಖವಾದವುಗಳು. ಪ್ರತ್ಯಕ್ಷ-ಪರೋಕ್ಷವಾಗಿ 70,000 ನೌಕರರಿಗೆ ಈ ಬಂದರು ಉದ್ಯೋಗ ನೀಡುತ್ತದೆ. ಇಲ್ಲಿರುವ ನೌಕಾ ವಸ್ತುಸಂಗ್ರಹಾಲಯ ಅಥವಾ ಮಾರಿಟೈಮ್ ಮ್ಯೂಸಿಯಂ ತನ್ನದೇ ವೈಶಿಷ್ಟ್ಯಗಳಿಂದಾಗಿ ಜನರನ್ನು ಆಕರ್ಷಿಸುತ್ತದೆ. 1656ರಲ್ಲಿ ನಿರ್ಮಾಣವಾದ ಭವ್ಯ ಕಟ್ಟಡ ನೌಕಾಪಡೆಯ ಕಾರ್ಯ ಗಳಿಗೋಸ್ಕರ ಉಪಯೋಗಿಸಲ್ಪಡುತ್ತಿತ್ತು.

ಡೇನಿಯಲ್ ಸ್ಟಾಲ್ ವೆರ್ಟ್ ಇದರ ವಿನ್ಯಾಸಗಾರ. 1973ರ ವರೆಗೆ ನೆದರ್ಲೆಂಡ್‌ಸ್‌‌ನ ನೌಕಾಪಡೆಯ ಸುಪರ್ದಿಯಲ್ಲಿದ್ದ ಇದು ನಂತರ ರಾಷ್ಟ್ರೀಯ ನೌಕಾವಸ್ತುಸಂಗ್ರಹಾಲಯವಾಗಿ ಮಾರ್ಪಾಟು ಹೊಂದಿತು.

ಗಾಜಿನ ಹೊದಿಕೆಯ ಒಳಾಂಗಣ
2007ರಿಂದ 2011ರ ಮಧ್ಯದಲ್ಲಿ ನವೀಕರಣಗೊಂಡ ಈ ಕಟ್ಟಡದ ಈಗಿನ ಪ್ರಮುಖ ಆಕರ್ಷಣೆ ಒಳಾಂಗಣದ ಗಾಜಿನ ಹೊದಿಕೆ. 1200 ಗಾಜಿನ ತುಂಡುಗಳನ್ನು ಕಬ್ಬಿಣದ ಆಧಾರದ ಮೇಲೆ ಹೊಂದಿಸಿ ತಯಾ ರಿಸಿದ ಒಳಾಂಗಣದಲ್ಲಿ ಸಮಯ ಕಳೆಯುವುದು ಮಕ್ಕಳಿಗೆ ಪ್ರಿಯ. ಇದರ ಆಸುಪಾಸಿನಲ್ಲೇ ಪ್ರವೇಶಪತ್ರಗಳು ಹಾಗೂ ಶ್ರವಣಸಾಧನಗಳು ದೊರೆಯುವ ಸ್ಥಳ, ಸ್ಮರಣಿಕೆಗಳ ಅಂಗಡಿ ಹಾಗೂ ಸ್ಟಾಲ್ ವೆರ್ಟ್ ರೆಸ್ಟೋರೆಂಟ್ ಇವೆ.

ಪೂರ್ವ, ಪಶ್ಚಿಮ ಹಾಗೂ ಉತ್ತರ ಭಾಗಗಳೆಂಬ ಮೂರು ವಿಭಾಗಗಳ ಪ್ರದರ್ಶನದ ಪ್ರತಿಯೊಂದು ಅಂಶವೂ ಪ್ರಶಂಸನೀಯ. ಜಗತ್ತಿನಲ್ಲೇ ಅತಿ ದೊಡ್ಡ ನೌಕಾ ಸಂಗ್ರಹಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಇದರ ಸಂಗ್ರಹ ಸುಮಾರು 40,000 ವಸ್ತುಗಳು. ನೌಕಾಸಂಬಂಧಿ ಚಿತ್ರಗಳು, ಹಡಗುಗಳ ವಿವಿಧ ನಮೂನೆಗಳು, ನಾವಿಕರು ಬಳಸುವ ವಿವಿಧ ತರಹದ ದಿಕ್ಸೂಚಿಗಳು ಹಾಗೂ ಇತರ ವಸ್ತುಗಳು, ಭೂಪಟಗಳು, ನೌಕೆಗಳ ಅಲಂಕಾರಕ್ಕೆ ಬಳಸುತ್ತಿದ್ದ ವಸ್ತು ಗಳು ಸಂಗ್ರಹದಲ್ಲಿವೆ. 500 ವರ್ಷಗಳ ಕಾಯಾನದ ಚರಿತ್ರೆ ಯನ್ನು ವಿವಿಧ ಹಂತಗಳಲ್ಲಿ ವಿವರಿಸುತ್ತದೆ.

ಆಮ್‌ಸ್ಟರ್‌ಡಾಮ್ ನಾವೆ
ಈ ನಾವೆಯು 1748ರಲ್ಲಿ ಡಚ್ ಈಸ್ಟ್‌ ಇಂಡಿಯಾ ಕಂಪೆನಿಗೋಸ್ಕರ ನಿರ್ಮಿತವಾಯಿತು. ಏಷಿಯಾದ ಕಡೆ ಪ್ರಯಾಣ ಆರಂಭಿ ಸಿದ ಇದು ಕೆಲವೇ ದಿವಸಗಳೊಳಗೆ ಹೇಸ್ಟಿಂಗ್ಸ್‌‌ನ ಸಮುದ್ರ ತೀರದ ಬಳಿ ನೀರಪಾಲಾಯಿತು. ಇದರ ಅವಶೇಷಗಳು ಇನ್ನೂ
ಸಮುದ್ರಗರ್ಭದಲ್ಲೇ ಇವೆ. ಅದರ ಪ್ರತಿಕೃತಿಯನ್ನು ತಯಾರಿಸಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಪ್ರತಿಕೃತಿಯ ತಯಾರಿ 1985-1990ರ ನಡುವೆ ನಡೆಯಿತು. ಇದರೊಳಗೆ ಹೋಗಿ ಹಡಗಿನ ಒಳಗಿನ ಜೀವನ ಹೇಗಿರುತ್ತದೆ ಎಂದು ವಿವರವಾಗಿ ತಿಳಿಯಬಹುದು. ಪ್ರತ್ಯೇಕ ಶುಲ್ಕ ಪಾವತಿಸಿ ಗೈಡೆಡ್ ಟೂರ್ ಆಯ್ದುಕೊಂಡರೆ 50 ನಿಮಿಷಗಳ ಅವಧಿಯಲ್ಲಿ ಹಡಗಿನ ಮುಖ್ಯ ಭಾಗಗಳನ್ನು ವಿವರವಾಗಿ ನೋಡಬಹುದು. ಇದಲ್ಲದೆ 15 ನಿಮಿಷಗಳ 3 ಡಿ ಚಿತ್ರದಲ್ಲಿ ಆಮ್‌ಸ್ಟರ್‌ಡಾಮ್ ನ 500ವರ್ಷಗಳ ಇತಿಹಾಸವನ್ನು ನೌಕೆಯ ಒಳಗೆ ಕುಳಿತು ನಗರ ಪ್ರದಕ್ಷಿಣೆ ಮಾಡುವಂತೆ ಅನುಭವ ಹೊಂದುತ್ತಾ ತಿಳಿದುಕೊಳ್ಳಬಹುದು.

ಅರಸೊತ್ತಿಗೆಯ ನಾವೆ
ಒಂದನೇ ವಿಲಿಯಂ ರಾಜನ ಉಪಯೋಗಕ್ಕೋಸ್ಕರ 1816-1818ರಲ್ಲಿ ನಿರ್ಮಿತವಾಯಿತು. ಆಗಿನ ಕಾಲದಲ್ಲಿ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ವಾಹನಗಳು ಬೆಲೆಬಾಳುವ ವಸ್ತುಗಳಿಂದ ಅಲಂಕೃತವಾಗಿ ಐಷಾರಾಮಿಯಾಗಿರುತ್ತಿದ್ದವು. ರಾಜಕುಟುಂಬದ
ಘನತೆಗೆ ತಕ್ಕಂತೆ ನಿರ್ಮಾಣವಾದ ಇದನ್ನು ವಿಲಿಯಂ ರಾಜನಿಗೆ ಉಪಯೋಗಿಸಲು ಅವಕಾಶವಾಗದಿದ್ದರೂ ಆತನ ನಂತರದ ಪೀಳಿಗೆಯವರು ವಿಶೇಷ ಸಂದರ್ಭಗಳಲ್ಲಿ ಉಪಯೋಗಿಸಿದರು. 1961ರಲ್ಲಿ ರಾಜ ದಂಪತಿ ಜೂಲಿಯಾನ ಮತ್ತು ಬೆರ್ನ್ ಹಾರ್ಟ್ ಅವರ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇದು ಕೊನೆಯ ಸಲ ಜಲಯಾನ ಕೈಗೊಂಡಿ ತು. 1983ರಲ್ಲಿ ಇದು ಮ್ಯೂಸಿಯಂನ ಸೊತ್ತಾಯಿತು. 2015ರಿಂದ ತನಗೋಸ್ಕರ ಇರುವ ಕೋಣೆಯಲ್ಲಿ ವೀಕ್ಷಕರನ್ನು ರಂಜಿಸುತ್ತಾ ನಿಂತಿರುವ ಇದರ ಸೌಂದರ್ಯ ಅನುಪಮ.

ತಿಮಿಂಗಿಲ ಬೇಟೆ
ತಿಮಿಂಗಿಲಗಳ ಬಗೆಗೆ ಪೂರ್ತಿ ವಿವರಗಳನ್ನು ನೀಡುವ ಮಕ್ಕಳ ವಿಭಾಗವೂ ಸೂಕ್ತ ವಿವರಗಳನ್ನೊಳಗೊಂಡಿದ್ದು ಆಕರ್ಷಕ ವಾಗಿದೆ. ಕೃತಕತಿಮಿಂಗಿಲದ ಹೊಟ್ಟೆಯೊಳಗೇ ಸೇರಿಕೊಂಡು ಅವುಗಳ ಬಗೆಗಿನ ವ್ಯಾಖ್ಯಾನಗಳನ್ನು ಅರಿ ಯುವುದು ಮುದ ನೀಡಿತು. ತಿಮಿಂಗಿಲಗಳ ಬೇಟೆಯನ್ನು ಯಾವ ತರಹ ನಾವಿಕರು ಕೈಗೊಳ್ಳುತ್ತಿದ್ದರು, ಅವುಗಳ ದೇಹಗಳಿಂದ ತಯಾರಾಗುತ್ತಿದ್ದ ವಸ್ತುಗಳ ವಿವರಣೆ, ಸಂಬಂಧಪಟ್ಟ ಲಾಭಗಳ ವಿವರಣೆ, ತಿಮಿಂಗಿಲದ ಪರಿಮಳಯುಕ್ತ ವಾಂತಿಯಿಂದ ತಯಾರಾದ ಪರ್ಫ್ಯೂಮ್, ತಿಮಿಂಗಿಲಗಳ ಸಂಖ್ಯೆ ಬಹಳಷ್ಟು ಇಳಿಮುಖವಾದಾಗ ಅವುಗಳ ಬೇಟೆಯ ಮೇಲೆ ನಿಷೇಧ ಹೇರಿದ್ದು ಎಲ್ಲಾ ವಿವರಗಳೂ ಮನಮುಟ್ಟುವಂತೆ ಇವೆ.

ಈಗ ಸಮುದ್ರದ ವಾತಾವರಣ ಕಲುಷಿತಗೊಂಡು ಹೇಗೆ ತಿಮಿಂಗಿಲಗಳ ಜೀವನ ಕ್ಲಿಷ್ಟವಾಗಿದ್ದು, ಕೆಲವೇ ತಿಮಿಂಗಿಲಗಳು ಬದುಕಿ ಉಳಿದಿವೆ ಮತ್ತು ಅವುಗಳ ಸಂರಕ್ಷಣೆಗಾಗಿ ನಾವೆಲ್ಲರೂ ಶ್ರಮಿಸಬೇಕೆಂಬ ಪಾಠವನ್ನು ಮಕ್ಕಳಿಗೆ ತಿಳಿಸುವುದು ಇದರ ಮುಖ್ಯ ಉದ್ದೇಶ.