Thursday, 12th December 2024

ಮರುಭೂಮಿಯ ನೀರ ಝರಿ

ಮಂಜುನಾಥ್‌ ಡಿ.ಎಸ್‌

ಜೈಸಲ್ಮೇರ್ ನಗರದ ದಕ್ಷಿಣ ದಿಕ್ಕಿನಲ್ಲಿರುವ ಗಡೀಸರ್ ಲೇಕ್ ಮರುಭೂಮಿಯ ಮೋಹಕ ಜಲಾಶಯ. ಇದರ ಪ್ರವೇಶ ದ್ವಾರ ತಿಲೋನ್ ಕಿ ಪೋಲ್ ಭವ್ಯ ಭವನದ ಮುಖ್ಯದ್ವಾರವನ್ನು ನೆನಪಿಸುತ್ತದೆ.

ಪೋಲ್ ಎಂದರೆ ಬಾಗಿಲು ಎಂದರ್ಥ. ಮರಳುಗಲ್ಲಿನ ಕಲಾತ್ಮಕ ಕಮಾನುಗಳ ಪಾರಂಪರಿಕ ರಚನೆ ಕಮನೀಯವಾಗಿದೆ. ಹೊರ ಚಾಚಿದ ಕಿಟಕಿಗಳು, ಕಟಕಟೆ, ಗೋಪುರ, ಗುಮ್ಮಟಗಳು ಕುಸುರಿ ಕೆಲಸದಿಂದ ಅಂದವಾಗಿ ಅಲಂಕರಿಸಲ್ಪಟ್ಟಿವೆ. ದ್ವಾರದ
ಎರಡೂ ಬದಿಯಲ್ಲಿ ಮೊದಲ ಹಂತಕ್ಕೆ ಹೋಗಲು ಮೆಟ್ಟಿಲುಗಳಿವೆ.

ತಿಲೋನ್ ಕಿ ಪೋಲ್ ಹಾದು ಒಳಗೆ ಹೋಗುತ್ತಿದ್ದಂತೆ ವಿಶಾಲ ಸರೋವರ, ಅದರ ದಡದುದ್ದಕ್ಕೂ ಇರುವ ಸೋಪಾನ ಪಂಕ್ತಿಗಳು, ಹಲವಾರು ಪುರಾತನ ಮಂದಿರಗಳು, ನಡುನೀರಿನಲ್ಲಿ ವಿರಾಜಮಾನವಾಗಿರುವ ನವಿರಾದ ಕೆತ್ತನೆಗಳಿಂದ ಕೂಡಿದ ಆಕರ್ಷಕ ಛತ್ರಿಗಳು (ಸ್ಮಾರಕ ಮಂಟಪಗಳು), ಶಿಥಿಲಗೊಂಡ ಹಳೆಯ ಕಟ್ಟಡಗಳು, ಹಾಗು ನಡುಗಡ್ಡೆ ಇವುಗಳ ದರ್ಶನವಾಗುತ್ತದೆ.

ಇಲ್ಲಿರುವ ಕೃಷ್ಣ ದೇವಾಲಯ ಜನಪ್ರಿಯತೆ ಗಳಿಸಿದೆ. 1908ರಲ್ಲಿ ಪ್ರತಿಷ್ಠಾಪನೆಗೊಂಡ ವಿಷ್ಣುವಿನ ಮೂರ್ತಿಯನ್ನು ಈ ಆಲಯ ದಲ್ಲಿ ಕಾಣಬಹುದಾಗಿದೆ.

ಮೋಹಕ ದೋಣಿವಿಹಾರ
ಈ ವಿಶಾಲ ಜಲಾಶಯದಲ್ಲಿ ದೋಣಿವಿಹಾರಕ್ಕೆೆ ಅವಕಾಶವಿದೆ. ಅರ್ಧ ಘಂಟೆ ಅವಧಿಯ ಈ ವಿಹಾರ ಪ್ರವಾಸಿಗರನ್ನು ಪ್ರಸನ್ನ
ಚಿತ್ತರನ್ನಾಗಿಸುತ್ತದೆ. ಜೊತೆಯಲ್ಲಿಯೇ, ಮೇಲ್ಗಾಣಿಸಿದ ಪುರಾತನ ರಚನೆಗಳನ್ನು ಸಮೀಪದಿಂದ ದರ್ಶಿಸುವ ಅವಕಾಶವನ್ನೂ ಕರುಣಿಸುತ್ತದೆ. ಜೈಸಲ್ಮೇರ್ ಕೋಟೆಯ ಸಮಗ್ರ ನೋಟ ಸಹ ಇಲ್ಲಿಂದ ಕಾಣಸಿಗುತ್ತದೆ. ಚಳಿಗಾಲದಲ್ಲಿ ಅನೇಕ ಪ್ರಭೇದಗಳ ಪಕ್ಷಿ ಗಳು ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬರುತ್ತವೆ.

ಹಾಗಾಗಿ ಇದು ಪಕ್ಷಿಪ್ರಿಯರನ್ನು ವಿಶೇಷವಾಗಿ ಆಕರ್ಷಿಸುವ ಸ್ಥಳವಾಗಿದೆ. ಜೈಸಲ್ಮೇರ್‌ನ ಮೊದಲ ದೊರೆ ರಾಜ ರಾವಲ್ ಸಿಂಘ್ ಈ ಸರೋವರವನ್ನು ನಿರ್ಮಿಸಿದರು. ಮಹಾರಾವಲ್ ಗಡೀ ಸಿಂಘ್ ಇದನ್ನು 1367ರಲ್ಲಿ ಮರುನಿರ್ಮಾಣ ಮಾಡಿದರು. ಹಾಗಾಗಿ ದಕ್ಕೆ ಗಡೀಸರ್ ಲೇಕ್ ಎಂಬ ಹೆಸರು ಬಂದಿದೆ.

ಮಳೆ ನೀರನ್ನು ಅವಲಂಬಿಸಿದ್ದ ಈ ಜಲಾಶಯ ಹಿಂದೆ ಇಡೀ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿತ್ತು. ಈಗ ಇಂದಿರಾ
ಗಾಂಧಿ ಕಾಲುವೆಯಿಂದ ಈ ಸರೋವರಕ್ಕೆ ನೀರು ಹರಿಸಲಾಗುತ್ತದೆ. ಗಡೀಸರ್ ಲೇಕ್‌ನ ದ್ವಾರಕ್ಕೂ ಮೊದಲೇ ಇಕ್ಕೆಲಗಳಲ್ಲಿ
ಸ್ಮರಣಿಕೆಗಳನ್ನು ವಿಕ್ರಯಿಸುವ ಮಳಿಗೆಗಳಿವೆ. ಸಾಂಪ್ರದಾಯಿಕ ರಾಜಾಸ್ಥಾನಿ ಶೈಲಿಯಲ್ಲಿ ವಸ್ತ್ರಾಲಂಕಾರ ಮಾಡಿ, ಗತಕಾಲದ ಕಟ್ಟಡಗಳ ಹಿನ್ನೆಲೆಯಲ್ಲಿ ಛಾಯಾಚಿತ್ರಗಳನ್ನು ಸೆರೆಹಿಡಿದು, ಕೆಲವೇ ನಿಮಿಷಗಳಲ್ಲಿ ವರ್ಣರಂಜಿತ ಚಿತ್ರಗಳನ್ನು ಪ್ರವಾಸಿಗರಿಗೆ
ಒದಗಿಸಲು ಅನೇಕ ವೃತ್ತಿಪರ ಛಾಯಾಗ್ರಾಹಕರ ತಂಡಗಳು ಇಲ್ಲಿ ಕಾರ್ಯನಿರತವಾಗಿರುತ್ತವೆ.

ಜೈಸಲ್ಮೇರ್‌ನ ಜೀವಾಳ ಎನಿಸಿಕೊಂಡಿರುವ ಗಡೀಸರ್ ಲೇಕ್ ರಾಜಾಸ್ಥಾನದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ. ಈ ಸರೋವರವನ್ನು ವೀಕ್ಷಿಸಲು ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿ ಪ್ರಶಸ್ತ. ಬೆಳಗಿನ ಅಥವ ಸಂಜೆಯ ಸಮಯ ಉತ್ತಮ. ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರ ಅನುಕೂಲಕ್ಕೆೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಶುಚಿತ್ವ ಹಾಗು
ಸಮರ್ಪಕ ನಿರ್ವಹಣೆಯತ್ತ ಚಿತ್ತ ಹರಿಸಿದರೆ ಈ ಚಾರಿತ್ರಿಕ ಜಲಾಶಯದ ಭೇಟಿಯನ್ನು ಮತ್ತಷ್ಟು ಆನಂದದಾಯಕವಾಗಿಸ ಬಹುದು.