Thursday, 12th December 2024

ಮಾನವನ ಹೊಸ ಕನಸು ಅಂತರಿಕ್ಷ ಪ್ರವಾಸ

ಟೆಕ್ ಫ್ಯೂಚರ್‌

ವಸಂತ ಗ ಭಟ್‌

ಪ್ರಿನ್ಸ್‌ಟನ್ ವಿಶ್ವ ವಿದ್ಯಾಲಯದ ಭೌತಶಾಸ್ತ್ರಜ್ಞ ಜೆರಾಲ್ಡ್ ಕೆ ಒನಿಯಲ್ 1970 ರಲ್ಲಿ ಮೊದಲ ಬಾರಿಗೆ ಅಂತರಿಕ್ಷದಲ್ಲಿ ಮನುಷ್ಯರು ಕಾಲೋನಿ ಮಾಡಿ ಬದುಕುವ ಕಲ್ಪನೆಯನ್ನು ವ್ಯಕ್ತಪಡಿಸಿದ್ದರು. ಅದಾಗಿ 50 ವರ್ಷ ಕಳೆದರೂ ಇಲ್ಲಿಯವರೆಗೂ ಮನುಷ್ಯರನ್ನು ಅನ್ಯ ಗ್ರಹಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಉಳಿಯುವಂತಹ ಯಾವುದೇ ಯಶಸ್ವಿ ಯೋಜನೆ ಪೂರ್ಣಗೊಂಡಿಲ್ಲ.

ಟೆಸ್ಲಾ ಸಂಸ್ಥೆಯ ಸ್ಪೇಸ್ ಎಕ್ಸ್ ವಿಭಾಗ ಅಂತರಿಕ್ಷದಲ್ಲಿ ಮಾನವನು ಪ್ರವಾಸ ಮಾಡುವಂತಹ ಮಹತ್ವದ ಯೋಜನೆಯನ್ನು ಕೆಲವು ವರ್ಷಗಳ ಹಿಂದೆ ಘೋಷಿಸಿತ್ತು, ಅದರ ಜೊತೆಗೆ ಅಮೆಜಾನ್‌ನ ಬ್ಲ್ಯೂ ಆರಿಜಿನ್ ಮತ್ತು ವರ್ಜಿನ್ ಸಂಸ್ಥೆಯ ಗ್ಯಾಲಕ್ಟಿಕ್ ಸಹ ಸದ್ಯ ಅದೇ ಮಾರ್ಗದಲ್ಲಿ ಮುನ್ನಡೆಯುತ್ತಿವೆ. ಆದರೆ ಅಂತರಿಕ್ಷದಲ್ಲಿ ಪ್ರವಾಸವನ್ನು ಆಯೋಜಿಸುವುದು ಸಂಸ್ಥೆಗಳಿಗೆ ಸುಲಭದ ಕೆಲಸವಲ್ಲ. ಪ್ರವಾಸೋದ್ಯಕ್ಕೋಸ್ಕರ ಶಕ್ತಿ ಶಾಲಿ ಉಪಗ್ರಹಗಳನ್ನು ಖಾಸಗಿ ಸಂಸ್ಥೆಗಳು ಸಿದ್ಧಪಡಿಸುವುದು ದುಬಾರಿಯ ಕೆಲಸ.

ಸರಕಾರಗಳು ಒಂದು ರಾಕೆಟ್‌ನ ಮೂಲಕ ಹಲವಾರು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸುತ್ತವೆ ಮತ್ತು ಆ ಉಪಗ್ರಹಗಳು ಹಲವು ವರ್ಷಗಳ ಕಾಲ ಭೂಮಿಯನ್ನು ಸುತ್ತಿ, ಸರಕಾರ ಖರ್ಚು ಮಾಡಿದ ಹಣವನ್ನು ಹಿಂತಿರುಗಿಸುತ್ತವೆ. ಆದರೆ ಈ ರೀತಿಯ ರಾಕೆಟ್‌ಗಳನ್ನು ಪ್ರವಾಸೋದ್ಯಮದ ಉದ್ದೇಶಕ್ಕೆ ಸಿದ್ಧಪಡಿಸಲು ಹೇರಳ ಹಣ ಖರ್ಚಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮೇಲಿನ
ಎಲ್ಲ ಸಂಸ್ಥೆಗಳು ಈ ಕ್ಷೇತ್ರದಲ್ಲಿ ನಷ್ಟ ಅನುಭವಿಸುತ್ತಿವೆ.

ಅಷ್ಟಾಗಿಯೂ ಈ ಯೋಜನೆ ಯಶಸ್ವಿಯಾದರೆ ಇವುಗಳಲ್ಲಿ ಹಾರಾಟ ಮಾಡಲು ಕನಿಷ್ಠ 250000 ಅಮೆರಿಕನ್ ಡಾಲರ್‌ನಿಂದ ಕೆಲವು ಮಿಲಿಯನ್ ಡಾಲರ್ ನಷ್ಟು ಹಣ ತೆರೆಬೇಕಾಗುತ್ತದೆ. ಇಷ್ಟೆಲ್ಲ ಸವಾಲುಗಳಿದ್ದರೂ ಜಗತ್ತಿನ ಶ್ರೀಮಂತ ಉದ್ಯಮಿಗಳೆಲ್ಲ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿರುವುದೇಕೆ? ಅಂತರಿಕ್ಷ ಪ್ರವಾಸ ಹೇಗೆ ಲಾಭದಾಯಕ ಸಮೀಕ್ಷೆಯ ಪ್ರಕಾರ 5 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಸಂಪತ್ತಿರುವ 39 ಪ್ರತಿಶತಕ್ಕಿಂತಲೂ ಹೆಚ್ಚಿನ ಶ್ರೀಮಂತರು ಅಂತರಿಕ್ಷ ಪ್ರವಾಸಕ್ಕೆ 250000 ಡಾಲರ್‌ ನಿಂದ ಕೆಲವು ಮಿಲಿಯನ್ ಡಾಲರ್ ವೆಚ್ಚಮಾಡಲು ಸಿದ್ಧವಿದ್ದಾರೆ.

ಸದ್ಯ ಟೆಸ್ಲಾ ಸಂಸ್ಥೆ ಅಂತರಿಕ್ಷಕ್ಕೆ ಉಪಗ್ರಹಗಳನ್ನು ರವಾನಿಸಿ ರಾಕೆಟ್‌ಅನ್ನು ಮತ್ತೆ ಭೂಮಿಗೆ ಮರಳಿಸುವ ತಂತ್ರಜ್ಞಾನವನ್ನು
ಕರಗತಮಾಡಿಕೊಂಡಿದ್ದರೂ, ಅದು ಎಲ್ಲಾ ಸಂಸ್ಥೆಗಳ ಬಳಿ ಲಭ್ಯವಿಲ್ಲ. ಈ ತಂತ್ರಜ್ಞಾನ ಬಳಸಿದರೂ, ಪ್ರತಿ ರಾಕೆಟ್ ನಿಗದಿತ ಸಂಖ್ಯೆಯ ಪ್ರಯಾಣವನ್ನು ಮಾತ್ರ ಮಾಡಬಹುದು. ಮೇಲೆ ಹೇಳಿದ ಮೂರೂ ಸಂಸ್ಥೆಗಳು ಒಂದು ತಿಂಗಳಿಗೆ ಗರಿಷ್ಠ ಐದು ಬಾರಿ ರಾಕೆಟ್‌ಅನ್ನು ಪ್ರವಾಸೋದ್ಯಮಕ್ಕೋಸ್ಕರ ಹಾರಿಸಬಹುದು. ಹಾಗಾಗಿ ಈ ಕ್ಷೇತ್ರದಲ್ಲಿ ಖರೀದಿಸುವವರು ಹೆಚ್ಚಿದ್ದು ಸರಕು
ಕಡಿಮೆಯಿದೆ. ಹಾಗಾಗಿ ಇದು ಲಾಭವಾಗುವ ಉದ್ಯಮ. ಜತೆಗೆ ಪ್ರವಾಸೋದ್ಯಮವೇ ಈ ಸಂಸ್ಥೆಗಳ ಮೂಲ ಉದ್ದೇಶವಲ್ಲ.

ಉಪಗ್ರಹ ಉಡಾವಣೆ ಮತ್ತು ನಾಸಾ ತರಹದ ಸಂಸ್ಥೆಗಳ ಗಗನ ಯಾತ್ರಿಗಳನ್ನು ಆಗಸಕ್ಕೆ ಸೇರಿಸುವುದು ಇತ್ಯಾದಿ ಈ ಸಂಸ್ಥೆಗಳ ಮಹತ್ವದ ಯೋಜನೆ. ಅವುಗಳನ್ನು ಸಾಕಾರಗೊಳಿಸಲು ಪ್ರವಾಸೋದ್ಯಮ ಈ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿಲಿದೆ ಮತ್ತು ಒಂದಿಷ್ಟು ಪ್ರಯೋಗಗಳನ್ನು ಮಾಡಲು ಸಹ ಸಹಕಾರಿಯಾಗಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಂತರಿಕ್ಷ ಪ್ರವಾಸ
ಮಾಡಲು ಕಡಿಮೆ ಜನ ಸಿದ್ಧವಿದ್ದರೂ, ಭವಿಷ್ಯದಲ್ಲಿ ಅವು ಸಂಸ್ಥೆಗಳಿಗೆ ಲಾಭದಾಯಕ ಉದ್ಯಮವಾಗಲಿದೆ.

ಹೇಗೆ ಸೊನ್ನೆ ಗುರುತ್ವಾಕರ್ಷಣೆ ಸಾಧ್ಯ ಅಮೆಜಾನ್, ಸ್ಪೇಸ್ ಎಕ್ಸ್ ಮತ್ತು ವರ್ಜಿನ್ ಸಂಸ್ಥೆಗಳ ಅಂತರಿಕ್ಷ ಪ್ರವಾಸ ಒಂದಕ್ಕಿಂತ ಒಂದು ಭಿನ್ನವಾಗಿದೆ. ಅಂತರಿಕ್ಷ ಪ್ರವಾಸವನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಭೂಮಿಯ ಗುರುತ್ವಾಕರ್ಷಣೆ ಪರಿಧಿಯ ಅಂತ್ಯಕ್ಕೆ ಹೋಗಿ ವಾಪಸ್ಸು ಬರುವುದು. ಆಂಗ್ಲ ಭಾಷೆಯಲ್ಲಿ ಇದನ್ನು ಸಬ್
ಅರ್ಬಿಟಲ್ ಎಂದು ಕರೆಯುತ್ತಾರೆ.

ಇನ್ನೊಂದು ಭೂಮಿಯ ಗುರುತ್ವಾಕರ್ಷಣೆ ಪರಿಽಯನ್ನು ದಾಟಿ ಹೋಗುವುದು. ಇದನ್ನು ಅರ್ಬಿಟಲ್ ಎಂದು ಕರೆಯುತ್ತಾರೆ.
ವರ್ಜಿನ್ ಸಂಸ್ಥೆ ಸಿದ್ಧಪಡಿಸುತ್ತಿರುವ ಪ್ರವಾಸ ಸಬ್ ಆರ್ಬಿಟಲ್ ಆಗಿರಲಿದೆ. ಈ ಯೋಜನೆಯಲ್ಲಿ ಒಂದು ಸ್ಪೇಸ್ ಏರ್‌ಕ್ರಾಫ್ಟನ್ನು

ಹಾರುವ ವಿಮಾನದ ಮಧ್ಯ ಜೋಡಿಸಿ ಅದನ್ನು ಒಂದು ನಿರ್ದಿಷ್ಟ ಎತ್ತರಕ್ಕೆ ಹಾರಿಸಿ ನಂತರ ಮಧ್ಯದ ಸ್ಪೇಸ್ ಏರ್ ಕ್ರಾಫ್ಟ್ನ್ನು ವಿಮಾನದಿಂದ ಬೇರ್ಪಡಿಸಲಾಗುತ್ತದೆ. ಬೇರ್ಪಟ್ಟ ಸ್ಪೇಸ್ ಏರ್ ಕ್ರಾಫ್ಟ್ ಭೂಮಿಯ ಗುರುತ್ವ ಪರಿಧಿಯ ಅತ್ಯಂತ ವರೆಗೂ ಸಾಗಿ,
ಕೆಲವು ನಿಮಿಷಗಳ ಕಾಲ ಸೊನ್ನೆ ಗುರುತ್ವ ಅನುಭವವನ್ನು ಪ್ರವಾಸಿಗನಿಗೆ ನೀಡಿ, ಸಾಮಾನ್ಯ ವಿಮಾನದಂತೆ ಭೂಮಿಗೆ
ಬರಲಿದೆ.

ಈ ಪ್ರಯಾಣ 90 ನಿಮಿಷದ್ದಾಗಿದ್ದು, ಇದರಲ್ಲಿ  ಪ್ರಯಾಣಿಸಲಿಚ್ಚಿಸುವರು ಮೂರು ದಿನಗಳ ಪೂರ್ವ ತಯಾರಿಕಾ ಕಾರ್ಯಾಗಾರ ದಲ್ಲಿ ಭಾಗವಹಿಸಬೇಕು. ವರ್ಜಿನ್ ಗಲಾಕ್ಟಿಕ್ ಅಂತರಿಕ್ಷ ಪ್ರವಾಸೋದ್ಯಕ್ಕೆ ಬೇಕಾದ ಎಲ್ಲಾ ಪರವಾನಿಗೆಗಳನ್ನು ಪಡೆದುಕೊಂಡಿ ದೆ. ಜತೆಗೆ ಮಾನವ ಸಹಿತ ಹಲವು ಬಾರಿ ಹಾರಾಟ ನಡೆಸಿದ್ದು, 2021 ರಲ್ಲಿ ಪ್ರವಾಸೋದ್ಯಮಕ್ಕೆ ಮುಕ್ತವಾಗುವ ನೀರಿಕ್ಷೆಯಿದೆ. ಇದರ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗಿದ್ದು ಒಂದು ಸೀಟಿನ ದರ ಸುಮಾರು 250000 ಅಮೆರಿಕನ್ ಡಾಲರ್. ಅಮೆ ಜಾನ್‌ನ ಬ್ಲ್ಯೂ ಆರಿಜಿನ್ ಕ್ಯಾಪ್ಸುಲ್ ಮಾದರಿಯ ರಾಕೆಟ್ ಆಗಿದ್ದು, ರಾಕೆಟ್‌ನ ಮುಂಭಾಗದಲ್ಲಿ ಪ್ರವಾಸಿಗರು ಕುಳಿತುಕೊಳ್ಳ ಬಹುದು.

ನಿರ್ದಿಷ್ಟ ಎತ್ತರ ಸಾಗಿದ ನಂತರ ಪ್ರವಾಸಿಗರು ಕುಳಿತ ಭಾಗ ರಾಕೆಟ್‌ನಿಂದ ಬೇರ್ಪಟ್ಟು ಭೂಮಿಯ ಗುರುತ್ವ ಪರಿಧಿಯವರೆಗೂ ಸಾಗಿ ಕೆಲ ನಿಮಿಷ ಸೊನ್ನೆ ಗುರುತ್ವದ ಅನುಭವ ಪಡೆದು ನಂತರ ಭೂಮಿಗೆ ಪ್ಯಾರಾಚುಟ್ ಮುಖಾಂತರ ವಾಪಸ್ಸು ಬರಲಿದೆ. ಈ ಪ್ರಯಾಣ 11 ನಿಮಿಷದ್ದಾಗಿದ್ದು, ಒಂದು ದಿನದ ಪೂರ್ವ ತಯಾರಿ ಕಾರ್ಯಾಗಾರದಲ್ಲಿ ಭಾಗಹಿಸುವುದು ಕಡ್ಡಾಯ. ಬ್ಲ್ಯೂ
ಆರಿಜಿನ್ ಇನ್ನೂ ಪರವಾನಿಗೆಗಳನ್ನು ಪಡೆಯದ ಕಾರಣ ಪ್ರಯಾಣದ ದರವನ್ನು ಬಹಿರಂಗಪಡಿಸಿಲ್ಲ.

ಬ್ಲ್ಯೂ ಆರಿಜಿನ್ ಸಹ ಸಬ್ ಅರ್ಬಿಟಲ್ ಆಗಲಿದೆ. ಸ್ಪೇಸ್ ಎಕ್ಸ್ ಸಿದ್ಧಪಡಿಸುತ್ತಿರುವ ಅಂತರಿಕ್ಷ ಪ್ರವಾಸ ತುಸು ವಿಭಿನ್ನ. ಇದು ಅರ್ಬಿಟಲ್ ಆಗಿದ್ದು ಭೂಮಿಯ ಗುರುತ್ವ ಪರಿಧಿಯಿಂದ ಹೊರಹೋಗಿ ಐದು ದಿನಗಳ ಕಾಲ ಅಂತರಿಕ್ಷ ನೌಕೆ ಭೂಮಿಯನ್ನು ಸುತ್ತಲಿದೆ. ಆಗಸದಿಂದ ಭೂಮಿಯನ್ನು ನೋಡುವ ಕನಸನ್ನು ಈ ಯೋಜನೆ ಸಾಕಾರಗೊಳಿಸಲಿದೆ. ಸ್ಪೇಸ್ ಎಕ್ಸ್‌ನ ಈ ಪ್ರವಾಸ ದಲ್ಲಿ ಪಾಲ್ಗೊಳ್ಳಲು ಒಬ್ಬರು 50 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚುಮಾಡಬೇಕು. ಅತಿ ಶ್ರೀಮಂತರಿಗೂ ಸಹ ಇದು ದುಬಾರಿ!