Sunday, 15th December 2024

ವಯಸ್ಸಿನ ಮಿತಿಯಿಲ್ಲ ವಿದ್ಯೆ ಕಲಿಯಲು

ಡಾ.ಕೆ.ಎಸ್.ಪವಿತ್ರ

ಬೆಳಿಗ್ಗೆ ಸೈಕಲ್ ಹೊಡೆಯುವಾಗ ಸಂಗೀತ, ಕಾರು ಓಡಿಸುವಾಗ ಸಂಗೀತ, ಕೊನೆಗೆ ರಾತ್ರಿ ಮಲಗಿದಾಗ ಸಂಗೀತ ಸಾಹಿತ್ಯ – ಸ್ವರಗಳನ್ನು ನೆನಪಿಸಿಕೊಳ್ಳುತ್ತಾ ಮಲಗುವುದು – ಹೀಗೆ ಹಲವು ರೀತಿಯಲ್ಲಿ ಸಂಗೀತ ಕಲಿಯುವ ಆನಂದ. ನಂತರ ಪರೀಕ್ಷೆ. ಅದರ ಫಲಿತಾಂಶ? ಅದು ಆನುಷಂಗಿಕ.

ಸಂಗೀತ – ನೃತ್ಯಗಳಿಗೆ ಈಗ ನಿಜವಾದ ಪರೀಕ್ಷೆಯ ಸಮಯ. ಕೋವಿಡ್ ಪರೀಕ್ಷೆ ಎದುರಿಸಿ, ವಿವಿಧ ಸವಾಲುಗಳನ್ನು ಸ್ವೀಕರಿಸಿ, ಸೋಂಕಿನ ಭಯದಿಂದ ಕಾರ್ಯಕ್ರಮ-ತರಗತಿಗಳಿಲ್ಲದ ಪರಿಸ್ಥಿತಿಗೆ ವಿವಿಧೋಪಾಯಗಳನ್ನು ಕಂಡುಕೊಂಡ ನೃತ್ಯ-ಸಂಗೀತ ಜಗತ್ತು ಮೇನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಗಳು ನವೆಂಬರ್ ಡಿಸಂಬರ್‌ನಲ್ಲಿ ನಡೆದವು!

ದ್ವಿತೀಯ ಪಿ.ಯು.ಸಿ. ಯೊಂದಿಗೇ ಭರತನಾಟ್ಯ ವಿದ್ವತ್ ಪರೀಕ್ಷೆ ತೆಗೆದುಕೊಂಡಿದ್ದ ‘ಧೈರ್ಯವಂತ’, ‘ಭಂಡ’ ವಿದ್ಯಾರ್ಥಿ
ನಾನು! ಆಗ ವಿದ್ವತ್ ಪರೀಕ್ಷೆಗೆ ಬೆಂಗಳೂರು, ಮೈಸೂರುಗಳಿಗೇ ಹೋಗಿ ‘ವಿದ್ವತ್’ ಪಡೆಯಬೇಕಿತ್ತು. ಇದು ಸುಮಾರು 22
ವರ್ಷಗಳ ಹಿಂದಿನ ಮಾತು. ಅದಾದ ಮೇಲೆ ಎಂಬಿಬಿಎಸ್ – ಎಂ.ಡಿ. ಪರೀಕ್ಷೆಗಳು, ಆಮೇಲೆ ಮತ್ತೆ ‘ಎಂ.ಎ.’ ಎರಡು ಬೇರೆ
ಬೇರೆ ವಿಷಯಗಳ ಪರೀಕ್ಷೆಗಳು, ಗುರುವಾಗಿ ಕಳೆದ 15 ವರ್ಷಗಳಿಂದ ಮಕ್ಕಳಿಗೆ ನೃತ್ಯ ಪರೀಕ್ಷೆಗಳು, ವೈದ್ಯಕೀಯ ಸ್ನಾತಕೋತ್ತರ – ನೃತ್ಯ ಪರೀಕ್ಷಕಳಾಗಿ, ಹೀಗೆ ಪರೀಕ್ಷೆಗಳೊಡನೆ ನನ್ನ ನಂಟು ಹತ್ತಿರದ್ದೇ.

ಆದರೆ ಸಂಗೀತದ ಪರೀಕ್ಷೆಯ ಕನಸು ಮಾತ್ರ ಅದೇಕೋ ಹಾಗೆಯೇ ಉಳಿದಿತ್ತು. ಸಂಗೀತವನ್ನು ಚಿಕ್ಕವಳಿದ್ದಾಗಿನಿಂದಲೂ
ಅಭ್ಯಾಸ ಮಾಡಿದರೂ, ಜ್ಯೂನಿಯರ್ ನಂತರ ಮುಂದುವರಿಸುವುದು ಕಷ್ಟವೆನಿಸಿತ್ತು. ಸಂಗೀತ ಕಲಿಯುತ್ತಿದ್ದದ್ದು ಮುಖ್ಯವಾಗಿ
ನೃತ್ಯಕ್ಕೆ ಬೇಕೆಂದೇ. ಹಾಗಾಗಿ ಸಂಗೀತದ ಪರೀಕ್ಷೆ ಪಾಸು ಮಾಡುವ ಅವಶ್ಯಕತೆ ನನಗಿರಲಿಲ್ಲ. ಆದರೂ ಒಬ್ಬ ವಿದ್ಯಾಾರ್ಥಿಯಾಗಿ
ಪರೀಕ್ಷೆಗಳ ಬಗೆಗೆ ನನಗೆ ಅಪಾರವಾದ ನಂಬಿಕೆ. ಹಾಗಾಗಿ ಸಂಗೀತ ಪರೀಕ್ಷೆಯಾಗದೆ ಹಾಡುವುದರಲ್ಲಿ ಆತ್ಮವಿಶ್ವಾಸ ಏರುವುದು
ಸಾಧ್ಯವಿರಲಿಲ್ಲ.

ನೃತ್ಯದಲ್ಲಿ ಪರಿಶ್ರಮವಿದ್ದದ್ದರಿಂದ ಯಾವುದೇ ಸಂಗೀತ ಕೇಳಿದಾಗಲೂ ಮೊದಲು ನನ್ನ ಮನಸ್ಸು ಓಡುತ್ತಿದ್ದದ್ದು, ಅದರ
ಲಯ, ನನಗೆ ಅಭಿನಯಕ್ಕೆ ಮುಖ್ಯವಾದ ಸಾಹಿತ್ಯದ ಕಡೆಗೆ. ರಾಗಗಳ ಬಗ್ಗೆ, ಧಾಟಿಯ ಬಗೆಗೆ ನಾನು ಗಮನಿಸಲು ಆರಂಭಿಸಿದ್ದು, ಕಾವ್ಯಗಳನ್ನು ನೃತ್ಯಕ್ಕೆ ಸಂಯೋಜಿಸುವ ಕೆಲಸಕ್ಕೆ ಕೈ ಹಾಕಿದಾಗ. ಪ್ರಸಿದ್ಧ ವೇಣುವಾದಕ ವಿದ್ವಾನ್ ಮಹೇಶ್ ಸ್ವಾಮಿಯವರೇ ಈ ವಿಷಯಕ್ಕೆ ನನ್ನ ಗುರು. ನೃತ್ಯ ಸಂಯೋಜನೆಗೆ, ಭಾವ ಸ್ಫುರಿಸಲು ರಾಗದ ಅವಶ್ಯಕತೆ -ಪೂರಕತ್ವಗಳ ಬಗೆಗೆ ಮಹೇಶ್‌ರವರು ನಾನು ಆರಿಸಿದ ಸಾಹಿತ್ಯ ಭಾಗಗಳಿಗೆ ಯೋಜಿಸಿದ್ದ ವಿವಿಧ ರಾಗಗಳು, ‘ನೀರಿನ ಅಲೆಗಳಿಗೆ ಹೇಗೆ ಧ್ವನಿಯ ಏರಿಳಿತವೂ ಸಾಗಬೇಕು, ಎಲ್ಲಿ ಧ್ವನಿ ಕೆಳಗಿಳಿಯಬೇಕು, ಗಂಭೀರತೆ, ಕುಣಿಯುವಂತೆ ಮಾಡುವ ‘ಟ್ಯೂನ್’ಗಳು ಇವು ನನಗೆ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿಸಿದ್ದು ಅಪಾರ.

ಅಲ್ಲಿಯವರೆಗೆ ನೃತ್ಯಕ್ಕೆ ಬೇಕೆಂದು ಮಾತ್ರ ಸಂಗೀತವನ್ನು ‘ಬಳಸುತ್ತಿದ್ದ’ ನಾನು, ಸಂಗೀತಕ್ಕೆಂದೇ ಸಂಗೀತದ ಬಗ್ಗ ಲಕ್ಷ್ಯ ಹರಿಸಿದ್ದು ಆಗಲೇ. ಆದರೆ ಬಿಟ್ಟುಹೋಗಿದ್ದ ಸಂಗೀತ ಕಲಿಕೆಯನ್ನು ಮತ್ತೆ ಕ್ರಮವಾಗಿ ನನ್ನ ಕಾರ್ಯ ಒತ್ತಡದ ಮಧ್ಯೆೆ ಕಲಿಯುವುದು ಸುಲಭ ವಾಗಿರಲಿಲ್ಲ. ಅದಕ್ಕೆ ಬೇಕಾದ ಮನಸ್ಸೂ ಪೂರ್ತಿಯಾಗಿ ಇರಲಿಲ್ಲ ಎನಿಸುತ್ತದೆ. ಅಪ್ಪ -ಅಮ್ಮಂದಿರಿಗೆ ತಮಗೆ ಮಾಡಲಾ ಗದ್ದನ್ನು ಮಕ್ಕಳು ಮಾಡಬೇಕೆಂಬ ಆಸೆ ಬಲವಾಗಿರುತ್ತದೆ.

ಎಷ್ಟೋ ಬಾರಿ ಅದು ಮಕ್ಕಳ ಮೇಲೆ ಒತ್ತಡವಾಗಿ ಪರಿಣಮಿಸುತ್ತದೆ. ಮನೋವೈದ್ಯೆೆಯಾಗಿ ನಾನು ಅಪ್ಪ-ಅಮ್ಮಂದಿರಿಗೆ ಎಷ್ಟೋ ಬಾರಿ ಹೇಳುವುದಿದೆ, ‘ನಿಮಗೆ ಬಾಲ್ಯದಲ್ಲಿ ಮಾಡಲಾಗಲಿಲ್ಲ ಎಂದಿದ್ದರೆ, ಈಗಲೂ ಅದನ್ನು ಕಲಿಯಿರಿ, ಮಾಡಿ. ಅದರ ಬದಲು ಮಗ, ಮಗಳ ಮೇಲೆ ಒತ್ತಡ ಹೇರಬೇಡಿ’. ಸಂಗೀತದ ವಿಷಯದಲ್ಲಿ ನನಗೆ ಎದುರಾದದ್ದೂ ಅದೇ ಸವಾಲು. ಮನೋವೈದ್ಯೆೆ ಯಾದರೇನಂತೆ, ನಾನೂ ತಾಯಿಯಷ್ಟೆೆ!

ಮಗಳು ‘ಭೂಮಿ’ ಸಂಗೀತ ಕಲಿಯುವ ಬಗೆಗೆ ನನ್ನದು ‘ಹೇಗಾದರೂ ಅವಳ ಸಂಗೀತ ಚೆನ್ನಾಗಿ ಕಲಿಯಬೇಕು’ ಎನ್ನುವ ‘ಮಹದಾಸೆ’! ಹೀಗೆ ಅವಳನ್ನು ಮತ್ತೆ ಮತ್ತೆ ‘ಪ್ರಾಕ್ಟೀಸ್’ ಮಾಡು ಎಂದು ಪೀಡಿಸುವಾಗ ನನ್ನೊಳಗಿನ ಮನೋವೈದ್ಯೆೆ ಸವಾಲೆಸೆ ದದ್ದೇ, ಒಳಗಿದ್ದ ಸಂಗೀತ ಕಲಿಯುವ ಆಸೆಗೆ ಜೀವ ಬಂತು. ಸುಲಭವಲ್ಲದಿದ್ದರೂ, ಸಮಯವಿರದಿದ್ದರೂ, ನಮಗೆ ‘ಬೇಕೇ ಬೇಕೆನಿಸುವ’ ಹಲವು ವಿಷಯಗಳನ್ನು ನಾವು ಮಾಡಿಯೇ ತೀರುತ್ತೇವಷ್ಟೆೆ.

ಹಾಗೆಯೇ ಮಧ್ಯಾಹ್ನದ 2  ರಿಂದ 3ರ ನನ್ನ ‘ಸುಮ್ಮನೇ ಏನಾದರೂ ಮಾಡುವ’ ಸಮಯವೇ ‘ಸಂಗೀತ ಸಮಯ’ ವಾಗಿ ವಾರಕ್ಕೆ ರಡು ದಿನ ಮಾರ್ಪಾಡು. ಆ ಸಮಯಕ್ಕೆ ಕಲಿಸುವವರು ಸಿಗುವುದು ಹೇಗೆ? ಪ್ರಸಿದ್ಧ ಕಲಾವಿದೆ ಡಾ ಸುಕನ್ಯಾ ಪ್ರಭಾಕರ್ ನನ್ನ ಫೆಲೋಶಿಪ್ ಒಂದಕ್ಕೆ ಮಾರ್ಗದರ್ಶನ ಮಾಡಿ ನನಗೆ ಗುರುಗಳಾಗಿದ್ದವರು. ಅವರಿಗೆ ಫೋನ್ ಮಾಡಿ ನಾನೆಂದೆ ‘ಮೇಡಂ ನನಗೆ ಈಗ ಮತ್ತೆ ಸಂಗೀತ ಕಲಿಯಬೇಕು, ನಿಮ್ಮ ಕಾರ್ಯಕ್ರಮದ ಒತ್ತಡ ನನಗೆ ಗೊತ್ತು. ಆದ ನಿಮ್ಮ ಹಿರಿಯ ಶಿಷ್ಯರು ಇರ ಬೇಕಲ್ಲ, ಯಾರಿಗಾದ್ರೂ, ನನಗೆ ಆದಷ್ಟು ಬೇಗ ಸಾಧ್ಯವಾದರೆ ನಾಳೆಯಿಂದ ಪಾಠ ಆರಂಭಿಸಲು ಹೇಳ್ತೀರಾ? ನನಗೆ ಈಗ ಮನಸ್ಸು ಬಂದಿದೆ, ಅದು ಬದಲಾಗುವ ಮೊದಲು ‘ಕಮಿಟ್’ ಆಗಿ ಬಿಡಬೇಕು’.

ಅವರು ಗೊತ್ತು ಮಾಡಿಕೊಟ್ಟಿದ್ದು ತಮ್ಮಂತದ್ದೇ ಮೃದು ಭಾಷಿಯಾದ, ಹಸನ್ಮುಖಿ, ಹತ್ತು ಸಾರಿ ತಪ್ಪು ಮಾಡಿದರೂ ಬೇಸರಿಸದೆ ತಿದ್ದುವ, ವಿದುಷಿ ಮೀರಾ ಮಂಜುನಾಥ್. ಮೈಸೂರಿನಲ್ಲಿರುವ ಮೀರಾ ಮೇಡಂ ನನಗೆ ಕಲಿಸಲಾರಂಭಿಸಿದ್ದು ಸ್ಕೈಪ್ ತರಗತಿಯ ಮೂಲಕ.

ಪರೀಕ್ಷೆೆಯ ಆತಂಕ
ಸಂಗೀತವನ್ನೇನೋ ಕಲಿಯಲಾರಂಭಿಸಿದೆ. ಆದರೆ ಪರೀಕ್ಷೆ ತೆಗೆದುಕೊಳ್ಳಲು? ಆತಂಕ, ದ್ವಂದ್ವ, ಮುಜುಗರ, ಉತ್ಸಾಹ ಎಲ್ಲವೂ
ಕಾಡತೊಡಗಿದ್ದವು. ಮಾರ್ಚ್‌ನಲ್ಲಿ ಪರೀಕ್ಷೆಯ ಅರ್ಜಿ ಕರೆಯುತ್ತಿದ್ದಂತೆ ಮೀರಾ ಮೇಡಂ ಹೇಳಿದ್ದರು ‘ನೀವೂ ಪರೀಕ್ಷೆೆ ಕಟ್ಟಿಬಿಡಿ’. ಒಂದು ಕಲೆಯನ್ನು ಸಂತೋಷಕ್ಕಾಗಿ ಕಲಿಯುವುದಕ್ಕೂ, ಪರೀಕ್ಷೆ ಕಟ್ಟುವುದಕ್ಕೂ ವ್ಯತ್ಯಾಸವಿದೆ.

ನನ್ನ ಸುತ್ತಮುತ್ತಲಲ್ಲಿ ಸಂಗೀತದಲ್ಲಿ ಆಸಕ್ತಿಯಿರುವ ಹಲವರನ್ನು ನಾನು ಬಲ್ಲೆೆ. ಅವರೆಲ್ಲರೂ ನನಗೆ ಹೇಳಿದ ಕಿವಿಮಾತು ‘ಈಗ ಪರೀಕ್ಷೆ ಕಟ್ಟುವುದೆಲ್ಲಾ ಏಕೆ? ಹಾಗೇ ಸಂತೋಷಕ್ಕಾಗಿ ಸಂಗೀತ ಕಲಿಯಲು ನಿನಗಿರುವ ಅಡ್ಡಿಯಾದರೂ ಏನು? ಇಷ್ಟೆೆಲ್ಲಾ ಕಷ್ಟ ಪಡಬೇಕಾದ ಅಗತ್ಯವಿದೆಯೇ?’ ಆದರೆ ನೃತ್ಯ -ಸಂಗೀತ ಕಲೆಗಳಲ್ಲಿ ನನಗಿರುವ ದೀರ್ಘ ಅನುಭವದಿಂದ ನೃತ್ಯ-ಸಂಗೀತ ಕಲಿಕೆಯಲ್ಲಿ ಪರೀಕ್ಷೆಗಳಿಂದ ಆಗುವ ನಿಜವಾದ ಲಾಭದ ಬಗೆಗೆ ನನಗೆ ಅರಿವಿತ್ತು.

ನೃತ್ಯ -ಸಂಗೀತಗಳ ಪರೀಕ್ಷೆಗಳಿಗೆ ತಯಾರಿ ಆರಂಭವಾಗುವುದು ಪರೀಕ್ಷೆಗಳಿಗೆ ಇನ್ನು ಕೆಲ ತಿಂಗಳಿದೆ ಎನ್ನುವಾಗ. ಅಲ್ಲಿಯ ವರೆಗಿನ ಅಧ್ಯಯನ ಎಷ್ಟೇ ಆಗಿರಲಿ, ಅದು ಗಟ್ಟಿಯಾಗುವುದು ಈ ಹಂತದಲ್ಲಿಯೇ. ಅಲ್ಲಿಯವರೆಗೆ ಬಾಯಿಪಾಠ ಮಾಡದೆ, ಪುಸ್ತಕ
ನೋಡಿ ಹಾಡುವ ವಿದ್ಯಾರ್ಥಿ, ಇದ್ದಕ್ಕಿದ್ದಂತೆ ಮತ್ತೆ ಮತ್ತೆ ಗುನುಗಿಕೊಂಡು ಕಂಠಪಾಠ ಮಾಡುವುದು, ಶಾಸ್ತ್ರದಲ್ಲಿರುವ
ವಿಷಯವನ್ನು ನೋಡಿ ‘ಓ ಇದು ಪ್ರಯೋಗದಲ್ಲಿ ಹೀಗೆ ಬಂದಿದೆಯಲ್ಲಾ’ ಎಂದು ಅಚ್ಚರಿ ಪಡುವುದು ಇವೆಲ್ಲಾ ‘ಪರೀಕ್ಷೆ’
ಗಾಗಿಯೇ ಹೊರತು, ಸಂತಸಕ್ಕಲ್ಲ!

ಪರೀಕ್ಷೆ ಎದುರಿಸಿ ಹೊರಬರುವಾಗ ಏರುವ ಆತ್ಮವಿಶ್ವಾಸದ ಮಟ್ಟ, ತರಬೇತಿಯಭದ್ರತೆಯ ಅರಿವು ಪರೀಕ್ಷೆಯ ಮುಖ್ಯ ಲಾಭ ಗಳು. ಅಧ್ಯಯನದ ಒತ್ತಡಇದೇ ವೇಳೆಗೆ ಎದುರಾದ ಕೋವಿಡ್ ಸಂಕಷ್ಟ ನೃತ್ಯ ತರಗತಿ ಕಾರ್ಯಕ್ರಮಗಳ ಒತ್ತಡವನ್ನು  ದಿಗಿರಿಸಿ, ಸಂಗೀತ ಪರೀಕ್ಷೆಯ

ಗುರಿಯನ್ನು ಸ್ಪಷ್ಟವಾಗಿಸಿತ್ತು. ಆದರೆ ಕೋವಿಡ್ ವೈದ್ಯಕೀಯ ಕಾರ್ಯ ಒತ್ತಡ ಹೆಚ್ಚಿಸಿತ್ತು. ಮೂರು ತಿಂಗಳಲ್ಲಿ ನಾನು ಸುಮಾರು 68 ವಿವಿಧ ಸಂಗೀತ ಬಂಧಗಳನ್ನು ಬಾಯಿಪಾಠ ಮಾಡಬೇಕಿತ್ತು. ಮನೋಧರ್ಮ ಸಂಗೀತದ ಆಲಾಪನೆ-ಸ್ವರ ಕಲ್ಪನೆಗಳನ್ನು ಮನಸ್ಸು ಸೃಜಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿತ್ತು. ಭೂಮಿಯ ಎಳೇ ಮಿದುಳಿಗೆ ಇದು ಸುಲಭ ವಾದಷ್ಟು ನನಗೆ ಸುಲಭವಾಗಿರಲಿಲ್ಲ. ಅದಕ್ಕೆ ನಾನು ಕಂಡುಕೊಂಡಿದ್ದು ಹಲವು ದಾರಿಗಳು. ಬೆಳಿಗ್ಗೆೆ ಸೈಕಲ್ ಹೊಡೆಯುವಾಗ ಸಂಗೀತ, ಕಾರು ಓಡಿಸುವಾಗ ಸಂಗೀತ, ಕೊನೆಗೆ ರಾತ್ರಿ ಮಲಗಿದಾಗ ಸಂಗೀತ ಸಾಹಿತ್ಯ – ಸ್ವರಗಳನ್ನು ನೆನಪಿಸಿಕೊಳ್ಳುತ್ತಾ ಮಲಗುವುದು – ಹೀಗೆ ಹಲವು ರೀತಿಯಲ್ಲಿ ಕಲಿಯುವ ಆನಂದ. ನನ್ನ ಹಳೆಯ ಗುರು ವಿದುಷಿ ವಿಜಯಾ ಕಾಂತೇಶ್ ಅವರೆದುರು ಹಾಡಿ ತೋರಿಸುವುದು, ಒಂದೊಂದು ರಾಗಕ್ಕೆ ಒಂದೊಂದು ದೇವರನ್ನು ಕಲ್ಪಿಸಿಕೊಂಡು ಹಾಡುವುದು, ಸಹನಶೀಲೆ ಮೀರಾ ಮೇಡಂರಿಂದ ಬಾಯಿಪಾಠ ಮಾಡುವ ವಿವಿಧ ವಿಧಾನಗಳನ್ನು ಕಲಿಯುವುದು ಇವೆಲ್ಲ ಇದು ಮಗಳಿಗೆ ‘ನಿನ್ನೊಡನೆ ನಾನೂ ಕಷ್ಟಪಡಲು ಸಿದ್ಧ’ ಎಂಬ ಸಂದೇಶ ನೀಡಿತ್ತು ಎನಿಸುತ್ತದೆ!

‘ಭೂಮಿ’ಯ ಕಲಿಕೆಯೂ ಬಲವಾಗತೊಡಗಿತ್ತು. ಅಮ್ಮನನ್ನು ಸೋಲಿಸಬೇಕೆಂಬ ‘ಸ್ಪರ್ಧೆ’ಗೆ ಸಿದ್ಧವಾಗುತ್ತಿದ್ದಂತೆ ‘ಭಯಂಕರ’ ಪ್ರಾಕ್ಟೀಸು!  ಇತರರಿಗೆ ಅಸೂಯೆಯೆ? ಅಂತೂ ಸೀನಿಯರ್ ಪರೀಕ್ಷೆ ಬಂದೇ ಬಂತು. ‘ವಿಚಿತ್ರ’ ವೆಂಬಂತೆ, ಅಚ್ಚರಿ, ಅಸೂಯೆ, ಮೆಚ್ಚುಗೆ, ‘ಇವರಿಗ್ಯಾಕೆ’ ಎಂಬ ಮಿಶ್ರಣಗಳ ನಡುವೆ ನಾನು ಪರೀಕ್ಷೆ ಎದುರಿಸಿದೆ. ನೃತ್ಯ – ಮನೋವೈದ್ಯಕೀಯ -ಬರಹಗಳ ಪರಿಶ್ರಮ-ಪರಿಣತಿ ನನಗೆ ಸಾಧ್ಯವಾದಂತೆ, ಸಂಗೀತವನ್ನು ಅಧ್ಯಯನ ಮಾಡುವ, ಅದರಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಧೈರ್ಯವಿಲ್ಲದಂತೆ ಮಾಡಿ ಬಿಡಬಹುದು ಎಂಬ ಭಯವನ್ನು ಕಿತ್ತೊಗೆದು, ಯಾರನ್ನೂ ಲೆಕ್ಕಿಸದೆ ಪರೀಕ್ಷೆಗೆ ಹೋದೆ. ಈ ಮೊದಲೇ ನನಗಿದ್ದ ಸಂಗೀತ ಜ್ಞಾನವನ್ನೇ ಸಂಶಯಿಸಿ ‘ಅಯ್ಯೋ ಇಷ್ಟು ದಿನ ಇವರಿಗೆ ಸಂಗೀತ ಗೊತ್ತೇ ಇರಲಿಲ್ಲವೆ? ಈಗೇಕೆ ಬೇಕು ಪರೀಕ್ಷೆ’ ಎಂದು ನನ್ನ ಕಲಿಯುವ ಉತ್ಸಾಹವನ್ನೇ ಪ್ರಶ್ನಿಸಿದವರೂ ಇದ್ದಾರೆ.

ಅಂಥವರಿಗೆ ಸಂಗೀತ ಎಂದರೆ ಅದು ಕೇವಲ ಸಂಗೀತವಲ್ಲ, ವಿದ್ಯೆಯನ್ನು ಹಲವು ರೂಪಗಳಲ್ಲಿ, ಮತ್ತಷ್ಟು ಗಟ್ಟಿಯಾಗಿ
ಕಲಿಯುವ ಸಂತೋಷ ಎಂಬುದನ್ನು ವಿವರಿಸುವುದು ಹೇಗೆ? ಅದು ಕೇವಲ ಒಂದು ಪರೀಕ್ಷೆಗೆ ಸೀಮಿತವೂ ಅಲ್ಲ! ನನ್ನಲ್ಲಿ
ಅಡಗಿರುವ ಸಾಮರ್ಥ್ಯಗಳನ್ನು ಮತ್ತಷ್ಟು ಹುಡುಕಿಕೊಳ್ಳುವ, ಮಕ್ಕಳನ್ನು ನಿಭಾಯಿಸುವ, ಕಲಿತ ಹೊಸತರಿಂದ ಮತ್ತಷ್ಟು
ವಿಷಯಗಳಿಗೆ ಕೊಂಡಿ ಹಾಕುವ ದಾರಿಯದು. ನೃತ್ಯಕ್ಕೆ ಸಂಗೀತ ಸಂಯೋಜನೆ, ಸಂಗೀತವನ್ನು ನಾನು ಅರ್ಥ ಮಾಡಿಕೊಂಡ
ಬಗೆಯನ್ನು ಇತರರೊಂದಿಗೆ ಬರೆಹಗಳ ಮೂಲಕ ಹಂಚುವ, ಮನೋವೈದ್ಯಕೀಯ ಜಗತ್ತಿನಲ್ಲಿ ಸಂಗೀತ-ಮಿದುಳು- ಮನಸ್ಸು ಗಳಿಗಿರುವ ಸಂಬಂಧದ ಸಂಶೋಧನೆಗಳು – ಹೀಗೆ ವಿವಿಧ ರೀತಿಗಳಲ್ಲಿ ಉಪಯೋಗಿಸುವ ಮತ್ತಷ್ಟು ಸಾಧ್ಯತೆಗಳು ನನಗೀಗ ಹೊಳೆಯುತ್ತಿವೆ.

ನನ್ನ ಮಟ್ಟಿಗೆ ಈ ಚಿಂತನೆ, ಅರಿವು, ಕಲಿಕೆಗಳೇ ಪರೀಕ್ಷೆಯ ನಿಜವಾದ ಪರಿಣತಿ ! ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದಾಯಿತು.  ಫಲಿತಾಂಶ? ಅದು ಆನುಷಂಗಿಕ! ಅಂದರೆ ರಾಸಾಯನಿಕ ಕ್ರಿಯೆಯಲ್ಲಿ ಬರುವ ಬೈಪ್ರಾಡಕ್ಟ್‌ ಮಾತ್ರ!