Sunday, 15th December 2024

ತಾಳೆಯಾಗಬೇಕಾದದ್ದು ಜಾತಕವಲ್ಲ ಜೀವನ !

ಮದುವೆ ಎಂಬ ವ್ಯವಸ್ಥೆೆ ಸುಗಮವಾಗಿ ಮುಂದುವರಿಯಲು ಅಗತ್ಯ ಪರಿಕರಗಳು ಹಲವು. ಜಾತಕ ತಾಳೆಯಾಗುವು ದಕ್ಕಿಂತ ಹೆಚ್ಚಾಗಿ ಇತರ ಹೊಂದಾಣಿಕೆಗಳು ಸರಿಹೋಗಬೇಕು, ಆಗಲೇ ದಾಂಪತ್ಯದಲ್ಲಿ ಸಾಮರಸ್ಯ.

ಮೋಹನದಾಸ ಕಿಣಿ ಕಾಪು

ಆಧುನಿಕ ಜಗತ್ತು ಅದೆಷ್ಟು ಬದಲಾಗಿದೆಯೆಂದರೆ, ಅನಾದಿಕಾಲದಿಂದ ವೇದದಷ್ಟೇ ಮಹತ್ವ ಪಡೆದಿದ್ದ ಗಾದೆಗಳೂ ರೂಪಾಂತರ ಗೊಳ್ಳುವಷ್ಟು! ಅದೇ; ‘ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು’ ಮತ್ತು ‘ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು’ ಗಾದೆಗಳು.

ಹಿಂದೆಲ್ಲಾ ಮನೆ ಕಟ್ಟಲು, ಮದುವೆ ಮಾಡಲು ಬಹಳಷ್ಟು ಶ್ರಮಪಡಬೇಕಾಗಿತ್ತು. ಅವುಗಳನ್ನು ಮುಗಿಸಿದ ನಂತರದಲ್ಲಿ ನೆಮ್ಮದಿಯಾದರೂ ಇರುತ್ತಿತ್ತು. ಆದರೆ ಈಗ? ಅವಶ್ಯಕತೆಗಿಂತ ಭರ್ಜರಿಯಾದ ಮನೆಯನ್ನು ಕಟ್ಟಿಸುವುದು, ಸಾಲಪಾವತಿಗಾಗಿ ಜೀವಮಾನವಿಡೀ ಶ್ರಮ ಪಡುವುದು ಒೆಂಡೆಯಾದರೆ, ನೂರೆಂಟು ಸುಳ್ಳು ಹೇಳಿ, ಅಳೆದೂ ಸುರಿದು, ನೆಂಟಸ್ಥಿಕೆ ಕುದುರಿಸಿ, ಮದುವೆ ಮಾಡಿ ಮುಗಿಸಿದರೂ, ನೆಮ್ಮದಿ ಹಿಂದಿನ ಕಾಲದಲ್ಲಿರುವಷ್ಟು ಸಲೀಸಲ್ಲ.

ವೈವಾಹಿಕ ಪ್ರಸ್ತಾವನೆಗಳಲ್ಲಿ ಹೆಣ್ಣು-ಗಂಡಿನ ಜಾತಕ ತಾಳೆ ನೋಡುವುದೊಂದು ಮುಖ್ಯವಾದ ಪ್ರಕ್ರಿಯೆ. ಆದರೂ ಜಾತಕಗಳು ಅದ್ಭುತವಾಗಿ ಹೊಂದಾಣಿಕೆಯಾದ ಮದುವೆಗಳು ಮುರಿದು ಬಿದ್ದದ್ದೂ ಇದೆ. ಇನ್ನೊಂದೆಡೆ ಪ್ರೀತಿಸಿ, ಜಾತಕ ನೋಡಲಿ ಬಿಡಲಿ ಮದುವೆಯಾಗಿ ಧೀರ್ಘಕಾಲ ಹೊಂದಿಕೊಂಡು ಹೋದವರು ಹಲವರು. ಪ್ರೇಮಿಸಿ ವಿವಾಹವಾದವರಲ್ಲಿ ಕೆಲವರು ಹಲವಾರು ವರ್ಷ ಕೇವಲ ಸ್ನೇಹಿತರಾಗಿರುತ್ತಾರೆ. ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ಸಿಕ್ಕಿದರೂ ನಂತರ ಒಡಕುಂಟಾದ ಉದಾಹರಣೆಗಳಿವೆ. ಹಾಗಾದರೆ ಜಾತಕ ಸುಳ್ಳೆ? ಸಿಕ್ಕ ಅವಕಾಶದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಲು ಕಾರಣಗಳೇನು? ಜಾತಕ ರಚನೆಯಲ್ಲೇ ದೋಷವಿರಬಹುದು.

ಜನನದ ಘಳಿಗೆಯನ್ನು ದಾಖಲಿಸುವಲ್ಲಿ ತಪ್ಪಾಗಿರಬಹುದು. ಜಾತಕದಲ್ಲಿರುವ ಸಣ್ಣ ದೋಷವೊಂದರ ಕಾರಣಕ್ಕೆ ನೆಂಟಸ್ಥಿಕೆ ಕಠಿಣವಾದರೆ, ಕೃತಕ ಜಾತಕವನ್ನೇ ಸೃಷ್ಟಿಸುವ ಭೂಪತಿಗಳಿದ್ದಾರೆ. ಈಗಂತೂ ಜಾತಕ ರಚನೆಗೂ ತತ್ರಾಂಶವಿದೆ! ಏನೇ ಇದ್ದರೂ,
ಆಧುನಿಕ ಕಾಲಘಟ್ಟದಲ್ಲಿ ಜಾತಕಕ್ಕಿಂತ, ಹೊಂದಾಣಿಕೆ ಆಗಬೇಕಾದ ಬಹಳಷ್ಟು ವಿಷಯಗಳಿವೆ.

ವಿವಾಹ ಮಂಟಪದಲ್ಲೂ ಗಂಡನ್ನು ಕಣ್ಣೆತ್ತಿ ನೋಡದೆ ಹಿರಿಯರು ತೋರಿಸಿದವನಿಂದ ತಾಳಿ ಕಟ್ಟಿಸಿಕೊಳ್ಳುತ್ತಿದ್ದ ಅಂದಿನ ಹುಡುಗಿಯರೆಲ್ಲಿ! ಸುಸ್ತು ಹೊಡೆಸುವಷ್ಟು ಪ್ರಶ್ನೆ ಮಾಡುವ ಇಂದಿನ ಹುಡುಗಿಯರೆಲ್ಲಿ? ಇತ್ತೀಚಿನ ದಿನಗಳಲ್ಲಿ ಲಿಂಗಾನುಪಾತದ ಅಂತರ ದಿಂದ ವೈವಾಹಿಕ ಜೀವನದ ಆಯ್ಕೆಗಳೇ ಬದಲಾಗಿದೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ವಿವಾಹವು ಕಠಿಣ
ಸವಾಲಾದರೆ ಈಗ ಆಯ್ಕೆಗಳಿಗಿಂತ ರಾಜಿ ಮತ್ತು ಹೊಂದಾಣಿಕೆಗಳೇ ಹೆಚ್ಚು ಮಹತ್ವ ಪಡೆಯುತ್ತಿದೆ.

* ಕೆಲವರಿಗೆ ಹಿರಿಯರೊಂದಿಗಿರುವುದು ಇಷ್ಟವಾದರೆ ಕೆಲವರಿಗೆ ಪ್ರತ್ಯೇಕವಾಗಿರುವುದು ಇಷ್ಟ. ಹಿರಿಯರು ನೀಡುವ ಸಲಹೆ ಕಿರಿಕಿರಿ ಎನಿಸುವಂತಿರದೆ, ಭವಿಷ್ಯದಲ್ಲಿ ಅವು ಎಷ್ಟು ಉಪಯುಕ್ತವೆಂದು ಮನವರಿಕೆ ಮಾಡಿಸುವಲ್ಲಿ ಹಿರಿಯರು ಯಶಸ್ವಿಯಾ
ದರೆ ಬಹುತೇಕ ಸಮಸ್ಯೆಗಳು ಉದ್ಭವಿಸುವ ಮೊದಲೇ ಅಸ್ತಮಿಸುತ್ತವೆ.

*ಗಂಡು ಹೆಣ್ಣುಗಳ ಸಂಖ್ಯೆಯಲ್ಲಿರುವ ಅಸಮಾನತೆಯ ಈ ಕಾಲದಲ್ಲಿ, ಹುಡುಗಿಯರ ನಿರೀಕ್ಷೆಗಳು ಉನ್ನತ. ಈಗಿನ ಹುಡುಗಿ ಯರ ನಿರೀಕ್ಷೆಗಳು ಎಷ್ಟೊಂದು ಬದಲಾಗಿವೆಯೆಂದರೆ, ಪೀಳಿಗೆಗಳ ಅಂತರ- ಸಂಪ್ರದಾಯ ಗಳ ನಡುವಿನ ಸಂಘರ್ಷಗಳ ಕಾರಣಕ್ಕೆ ಒಟ್ಟು ವ್ಯವಸ್ಥೆಯೇ ಕುಸಿಯುವಷ್ಟು. ಈ ಅಂಶಗಳ ಹೊಂದಾಣಿಕೆಯೇ ಇಂದಿನ ಅನಿವಾರ್ಯತೆಯಾಗಿದೆ.

*ಪ್ರೀತಿಸಿ ಮದುವೆಯಾಗುವವರಿಗೆ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯಯಾವಕಾಶ ಸಿಕ್ಕಿದರೆ, ಹಿರಿಯರು ನಿಶ್ಚಯಿಸಿದ ಮದುವೆಯಲ್ಲೂ ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ ಇರುವ ಸಮಯಾವಕಾಶವನ್ನು ಉಪಯೋಗಿಸಿ ಅರ್ಥ ಮಾಡಿಕೊಳ್ಳುವ ಅವಕಾಶವಿದೆ.

*ಪರಸ್ಪರರ ಆಹಾರ, ಅಭಿರುಚಿ, ಹವ್ಯಾಸಗಳ ಬಗ್ಗೆ ಚರ್ಚಿಸಿ, ಅವುಗಳು ಒಬ್ಬರಿಗೆ ಇಷ್ಟವಾಗದಿದ್ದಲ್ಲಿ ಮತ್ತೊಬ್ಬರು ಅನುಸರಿಸುವ ಅಥವಾ ತ್ಯಜಿಸುವ ಕುರಿತು ಸೂಕ್ತ ನಿರ್ಧಾರಕ್ಕೆ ಬರಬೇಕು. ನಾನು ನೋಡಿದ ಒಂದು ಪ್ರಕರಣದಲ್ಲಿ ಗಂಡನಿಗೆ ನಾಯಿಯೆಂದರೆ ಅತೀವ ಪ್ರೀತಿ. ಎಷ್ಟೆಂದರೆ, ನಾಯಿಯನ್ನು ಜತೆಯಲ್ಲಿ ಮಲಗುವ  ಕೋಣೆಯಲ್ಲಿ ಮಲಗಿಸಿಕೊಳ್ಳುವಷ್ಟು. ಇದೆಲ್ಲಾ ಮೊದಲೇ ಗೊತ್ತಿದ್ದರೂ ಮದುವೆ ಆಯ್ತು. ಹೆಂಡತಿಗೆ ಇದು ಇಷ್ಟವಿಲ್ಲ. ಅನತಿಕಾಲದಲ್ಲಿ ವಿಚ್ಚೇದನದೊಂದಿಗೆ
ದಾಂಪತ್ಯ ಮುಗಿಯಿತು.

*ಇಬ್ಬರೂ ಉದ್ಯೋಗಸ್ಥರಾದರೆ ಪರಸ್ಪರರ ಉದ್ಯೋಗ ಇನ್ನೊಬ್ಬರ ದೈನಂದಿನ ಬದುಕಿನಲ್ಲಿ ತೊಡಕು ಉಂಟಾಗದಂತೆ ಸೂಕ್ತ ವ್ಯವಸ್ಥೆ ಬೇಕು.

* ಆಸಕ್ತಿಯ ವಿಷಯದಲ್ಲಿ, ರಾಜಕೀಯ ಅಥವಾ ಚಿತ್ರ ಕಲಾವಿದ, ಹೀಗೆ ಸಾರ್ವಜನಿಕ ಸಂಪರ್ಕದಲ್ಲಿ ಹೆಚ್ಚಿನ ಸಮಯ ವ್ಯಯಿಸಬೇಕಾಗುವಂತಹ ಕ್ಷೇತ್ರದಲ್ಲಿದ್ದರೆ ಅವರ ಸಹವರ್ತಿಗೆ ನಂಬಿಕೆ ಮತ್ತು ತಾಳ್ಮೆ ಇರುವುದು ಮುಖ್ಯವಾಗುತ್ತದೆ.

*ಹವ್ಯಾಸ-ಅಭಿರುಚಿಗಳಂತೆ ಅಭ್ಯಾಸ-ದುರಭ್ಯಾಸಗಳಿಗೂ ಮುಖ್ಯ ಪಾತ್ರವಿದೆ. ಇಂತಹ ವಿಷಯಗಳನ್ನು ಮನಬಿಚ್ಚಿ ಚರ್ಚಿಸಿ ಸೂಕ್ತ ಒಪ್ಪಂದಕ್ಕೆ ಬರಬೇಕು. ಅತಿಯಾದ ಸ್ವೇಚ್ಛಾಚಾರ ಒಳ್ಳೆಯದಲ್ಲ. ಅದೇ ರೀತಿ ಅತಿ ಅಧ್ಯಾತ್ಮದ ಒಲವೂ ಒಳ್ಳೆಯದಲ್ಲ.

*ವಿವಾಹದ ನಂತರ ಎರಡೂ ಕುಟುಂಬದವರನ್ನು ಸಮಾನ ಮನಸ್ಸಿನಿಂದ ನೋಡುವ ಮನಸ್ಥಿತಿ ಗಂಡ ಹೆಂಡತಿ ಇಬ್ಬರಲ್ಲೂ ಇರಬೇಕು.

*ಒಬ್ಬನೇ ಮಗ ಅಥವಾ ಒಬ್ಬಳೇ ಹುಡುಗಿಯಿರುವ ಕುಟುಂಬಗಳ ನೆಂಟಸ್ಥಿಕೆಯಲ್ಲಿ ದಂಪತಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚು. ಏಕೆಂದರೆ ವೃದ್ಧಾಪ್ಯದಲ್ಲಿ ಇಬ್ಬರ ಹೆತ್ತವರ ಯೋಗಕ್ಷೇಮದ ಜವಾಬ್ದಾರಿ ಇರುತ್ತದೆ.

*ಗಂಡನಿಗಿಂತ ಹೆಣ್ಣಿನ ವಿದ್ಯಾರ್ಹತೆ, ವಯಸ್ಸು ಹೆಚ್ಚಿರುವ ಪ್ರಸಂಗದಲ್ಲಿ ಪರಸ್ಪರರಲ್ಲಿ ಹೊಂದಾಣಿಕೆ ಅಗತ್ಯ.

*ಉದ್ಯೋಗಸ್ಥ ಮಹಿಳೆಯರು ವಿವಾಹದ ನಂತರ ಉದ್ಯೋಗದಲ್ಲಿ ಮುಂದುವರಿಯುವ ಅಥವಾ ತ್ಯಜಿಸುವ ಬಗ್ಗೆ ಮೊದಲೇ
ನಿರ್ಧರಿಸುವುದು ಬಹಳ ಮುಖ್ಯ. ಮಾತ್ರವಲ್ಲ, ಹಾಗೆ ಮುಂದುವರಿದರೂ ಇಲ್ಲದಿದ್ದರೂ ಖರ್ಚು ವೆಚ್ಚಗಳ ಬಗ್ಗೆ ಸ್ಪಷ್ಟ ನಿರ್ಧಾರ ಅಗತ್ಯ.

*ಅತ್ತೆ-ಸೊಸೆಯ ನಡುವೆ ಸಮನ್ವಯ ಸಾಧಿಸುವಂತಹ ವಾತಾವರಣವನ್ನು ಚರ್ಚಿಸಿ ರೂಪಿಸುವುದು ಜಾಣ ನಡೆ.
* ಮದುವೆಗಿಂತ ಮೊದಲು ಧಾರಾಳವಾಗಿ ಖರ್ಚು ಮಾಡುತ್ತಿದ್ದ ಮನೆಯಿಂದ ಸೀಮಿತ ಆದಾಯದ ಮನೆಗೆ ಬಂದರೆ ಅಥವಾ
ಅದಕ್ಕೆ ವಿರುದ್ಧವಾಗಿ ಅಚ್ಚುಕಟ್ಟಾಗಿ ಖರ್ಚು ಮಾಡುವ ಮನೆಯಿಂದ ಸಿರಿವಂತ ಮನೆಗೆ ಬಂದಾಗ ಆಗುವ ವ್ಯತ್ಯಾಸಗಳೂ ಕೌಟುಂಬಿಕ ಅಶಾಂತಿಗೆ ಕಾರಣವಾಗಬಹುದು.

*ಹೆಣ್ಣಿಗಿಂತ ಗಂಡು ಹೆಚ್ಚಿನ ವಿದ್ಯಾಭ್ಯಾಸ ಪಡೆದಿರಬೇಕು ಎಂಬುದು ಸಾಮಾನ್ಯವಾಗಿ ಪಾಲಿಸಿಕೊಂಡು ಬಂದಿರುವ
ಪದ್ಧತಿಯಾದರೂ ಇದಕ್ಕೆ ವಿರುದ್ಧ ಸ್ಥಿತಿಯಲ್ಲೂ ಸುಗಮ ಸಂಸಾರ ಸಾಧ್ಯ.

*ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕೆ ಮಾಡಿರಬಹುದಾದ ಸಾಲದ ಬಗ್ಗೆ ಮೊದಲೇ ಚರ್ಚಿಸಿ ಅದನ್ನು ಪಾವತಿಸುವ ಜವಾಬ್ದಾರಿ ಯಾರದೆಂಬ ಬಗ್ಗೆ ನಿರ್ಧರಿಸುವುದು ಸೂಕ್ತ.

*ಸರಿ-ತಪ್ಪುಗಳ ವಿಶ್ಲೇಷಣೆಯೇನಿದ್ದರೂ, ಭಿನ್ನಮತವನ್ನು ವ್ಯಕ್ತಪಡಿಸುವುದು ಖಾಸಗಿಯಾಗಿರಲಿ. ಪ್ರೋತ್ಸಾಹ, ಹೊಗಳಿಕೆ ನಾಲ್ಕು ಜನರ ಎದುರಿಗಿರಲಿ. ಇದರ ಪರಿಣಾಮ ದೊಡ್ಡದಾಗಿಯೇ ಇರುತ್ತದೆ. ಏಕೆಂದರೆ ಕುಡುಕನಾಗಿರಲಿ, ಸಿಡುಕನಾಗಿರಲಿ, ಹೊಂದಿಕೊಂಡು ಹೋಗುವ ಕಾಲ ಈಗಿಲ್ಲ.

*ಹುಡುಗಿಯರ ನಿರೀಕ್ಷೆಗಳು ಎಷ್ಟೊಂದು ಆಳವಾಗಿದೆಯೆಂದರೆ, ವ್ಯಾಪಾರ, ಪೌರೋಹಿತ್ಯ, ಅಡುಗೆ ವೃತ್ತಿಯಲ್ಲಿರುವವರಿಗೆ ನೆಂಟಸ್ಥಿಕೆ ವಿರಳವಾಗುತ್ತಿದೆ..

ಹಿರಿಯರು ‘ಸಂಸಾರವೆಂದರೆ ಸಾಗರ’ವೆಂದು ಸುಮ್ಮನೆ ಹೇಳಿಲ್ಲ. ಇಂದು ಯುವಜನಾಂಗಕ್ಕೆ ಹಿರಿಯರ ಮಾತಿನಲ್ಲಿರುವ ನಂಬಿಕೆಗಿಂತ ಗೂಗಲಮ್ಮನ ಮೇಲೆ ಹೆಚ್ಚಿನ ನಂಬಿಕೆ. ಜಾಲತಾಣಗಳು ಮಾಹಿತಿಯ ಕಣಜ- ಒಪ್ಪುವಂತಾದ್ದೇ. ಆದರೂ ಅನುಭವಕ್ಕಿಂತ ಮಿಗಿಲಾದದ್ದಲ್ಲ. ಅನುಭವದ ಕುಲುಮೆಯಲ್ಲಿ ಸಿಗುವ ಪರಿಪಕ್ವತೆ, ಯಾವುದೇ ಪದವಿಯಲ್ಲಿ, ಅತ್ಯುನ್ನತ ಅಂಕ ಗಳಿಸಿ ತೇರ್ಗಡೆ ಹೊಂದಿದರೂ ಸಿಗದು. ಬದುಕಿನಲ್ಲಿ ಹೊಂದಾಣಿಕೆಯಿದ್ದರೆ ಎಲ್ಲವೂ ಚೊಕ್ಕ-ಚೆನ್ನ, ತಪ್ಪಿ ರೆ ಭಿನ್ನ- ವಿಚ್ಛಿನ್ನ. ಬಹಳಷ್ಟು ವಿಚ್ಛೇದನಗಳಿಗೆ ಕಾರಣ ಜಾತಕ ದೋಷವಲ್ಲ ಬೇರೆ ಏನೇನೋ.

ಜಾಲತಾಣದ ವಿವರಗಳು
ಅದ್ಧೂರಿ ಪ್ರಚಾರ ನೀಡುವ ವೈವಾಹಿಕ ಜಾಲತಾಣಗಳು ಒದಗಿಸುವ ಮಾಹಿತಿ ಸೀಮಿತ. ಅವರು ಜಾತಕ, ವಿದ್ಯಾರ್ಹತೆ ಮತ್ತು ಆರ್ಥಿಕ ಸ್ಥಿತಿಗತಿಯ ಮಾಹಿತಿಯಷ್ಟೇ ನೀಡುತ್ತಾರೆ ಹೊರತು ಗಂಡು-ಹೆಣ್ಣಿನ, ಉಭಯ ಕುಟುಂಬಗಳ ಹಿನ್ನಲೆ ತಿಳಿಸುವುದಿಲ್ಲ. ಮತ್ತು ನಕಾರಾತ್ಮಕ ವಿಷಯಗಳನ್ನು ತಿಳಿಸುವುದಿಲ್ಲ.

ರಿಯಲ್ ಬೇರೆ ರೀಲ್ ಬೇರೆ
ನಗರೀಕರಣದ ಹಿನ್ನೆಲೆಯಲ್ಲಿ, ಹಿರಿತೆರೆ-ಕಿರಿತೆರೆಯ ಪ್ರಭಾವದಿಂದ ಒಂದಿಷ್ಟು ಸಮಸ್ಯೆಗಳು ಆರಂಭವಾದರೆ, ಫೇಸ್ಬುಕ್ ಮತ್ತು ವಾಟ್ಸಾಪ್, ಯೂಟ್ಯೂಬ್ ಮೊದಲಾದ ಜಾಲತಾಣಗಳು ಸೃಷ್ಟಿಸುವ ಬಣ್ಣದ ಲೋಕ ಕುಟುಂಬ ವ್ಯವಸ್ಥೆಯನ್ನು ಸಂಪೂರ್ಣ ವಾಗಿ ಬದಲಾಯಿಸಿದೆ. ಇದೇ ಬಹಳಷ್ಟು ಸಮಸ್ಯೆಗಳಿಗೆ ಮೂಲ ಕಾರಣ. ರೀಲ್ ಮತ್ತು ರಿಯಲ್ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಂಡಾಗ ಸಮಸ್ಯೆ ನಿವಾರಣೆ ಸುಲಭ.

ಅತ್ತೆ ಸೊಸೆ ಬಾಂಧವ್ಯ
ಬಹುತೇಕ ಕುಟುಂಬದಲ್ಲಿ ಸೌಹಾರ್ದ ಅಥವಾ ಮನಸ್ಥಾಪಗಳ ಮೂಲಕಾರಣ ಅತ್ತೆ-ಸೊಸೆ ಸಂಬಂಧ. ಯಾವುದೇ ಭಿನ್ನಮತ ವನ್ನು ಚಿಗುರಿನಲ್ಲೇ ಸರಿಪಡಿಸುವ ಜಾಣತನ, ಹೊಂದಾಣಿಕೆ ಮನಸ್ಥಿತಿ ದಂಪತಿಗಳಿಬ್ಬರಲ್ಲೂ ಇರಬೇಕು.