Friday, 22nd November 2024

ಪ್ರಕೃತಿಗಿಂತ ಪವಿತ್ರ ವಿಷಯ ಇನ್ನೊಂದಿಲ್ಲ

ಸೌರಭ ರಾವ್

ಬಿಗ್ ಕ್ಯಾಟ್ ಡೈರಿ ಎಂಬ ಬಿಬಿಸಿ ಟೆಲಿವಿಷನ್ ಸರಣಿಯು 1996ರಲ್ಲಿ ಮೊದಲ ಬಾರಿ ಪ್ರಸಾರಗೊಂಡಾಗ, ನಿರೂಪಕ ರಾಗಿ ಕಾರ್ಯ ನಿರ್ವಹಿಸಿದ ಜಾನಥನ್ ಸ್ಕಾಟ್ ಅವರು, ಪ್ರಸಿದ್ಧ ವನ್ಯ ಜೀವಿ ತಜ್ಞರು. 1974ರಿಂದ ಆಫ್ರಿಕಾದಲ್ಲಿ ನೆಲೆಸಿ ರುವ ಇವರು ವನ್ಯಜೀವಿ ಗಳ ಕುರಿತು ಅಪಾರ ಜ್ಞಾನ ಹೊಂದಿದ್ದಾರೆ. ಕಳೆದ ವಾರ ಜಾನಥನ್ ಸ್ಕಾಟ್ ಅವರ ಪರಿಚಯದ ಜತೆಗೆ ಅವರ ಸಂದರ್ಶನದ ಮೊದಲ ಭಾಗವನ್ನು ಓದಿದ್ದಿರಿ. ಆ ಸಂದರ್ಶನದ ಮುಂದುವರಿದ ಮತ್ತು ಕೊನೆಯ ಭಾಗ ಇಲ್ಲಿದೆ.

ಪ್ರಪಂಚದಾದ್ಯಂತ ಮಾಸಾಯ್ ಮಾರಾದ ದೊಡ್ಡ ಮಾರ್ಜಾಲಗಳ ಬಗ್ಗೆ ಜನರು ಒಲವು ಬೆಳೆಸಿಕೊಳ್ಳುವಂತೆ ಮಾಡಿದ ‘ಬಿಗ್ ಕ್ಯಾಟ್ ಡೈರಿ’ಯನ್ನು ಇಷ್ಟು ವರ್ಷಗಳ ನಂತರ ನೀವು ಹಿಂದಿರುಗಿ ನೋಡಿದರೆ ನಿಮ್ಮಲ್ಲುಂಟಾಗುವ ಭಾವನೆಗಳೇನು?
ಉ: ‘ಬಿಗ್ ಕ್ಯಾಟ್ ಡೈರಿ’ಯ ಮೂಲಕ ನಾವು ಮಾಸಾಯ್ ಮಾರಾದಲ್ಲಿ ವಾಸಿಸುವ ದೊಡ್ಡ ಮಾರ್ಜಾಲಗಳ ಜೀವನದ ವೈಖರಿ ಯನ್ನು ಆದಷ್ಟೂ ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ಮಾಡಿದೆವು. ನನ್ನ ಪ್ರಕಾರ, ಆ ಸರಣಿಯ ಯಶಸ್ಸಿಗೆ ಮತ್ತು ಅದು ಪದೇ ಪದೇ ರೀಕಮಿಷನ್ ಆಗಿ ಪ್ರಸಾರಗೊಳ್ಳಲು ಅದಕ್ಕಿಂತಲೂ ಮುಖ್ಯ ಕಾರಣ, ನಾವು ಆ ದೊಡ್ಡ ಮಾರ್ಜಾಲಗಳ ಜೊತೆ ದೂರದಿಂದಲೇ ಒಂದು ವೈಯಕ್ತಿಕ ಸಾಹಚರ್ಯ ಬೆಳೆಸಿಕೊಳ್ಳುವಂತೆ ಅವುಗಳ ಜೀವನವನ್ನು ತೋರಿಸಿದ್ದು. ಆ ಪ್ರದೇಶದಲ್ಲಿದ್ದ
ಸಿಂಹ, ಚೀತಾ ಮತ್ತು ಚಿರತೆಗಳಿಗೆ ನಾವು ಹೆಸರುಗಳನ್ನು ಕೊಟ್ಟು ಅವುಗಳನ್ನು ವಾರಗಟ್ಟಲೆ ಗಮನಿಸುತ್ತಿದ್ದೆವು. ಅವು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳುತ್ತವೆ ಎಂದು ತೋರಿಸಿಕೊಡುತ್ತಿದ್ದೆವು. ಹೀಗೆ ಪ್ರತ್ಯೇಕ ಪ್ರಾಣಿಗಳನ್ನು ಗುರುತಿಸುವಂತೆ ಮಾಡಿದ್ದು ಜನರು ಅವುಗಳ ಬಗ್ಗೆ ಅಪಾರ ಕುತೂಹಲ, ಒಲವು ಬೆಳೆಸಿಕೊಳ್ಳುವಂತೆ ಸಾಧ್ಯವಾಯಿತು.

ಬೇರೆ ಪ್ರಾಣಿಗಳಿಗೂ ಭಾವನೆಗಳಿವೆ ಎನ್ನುವುದನ್ನು ಕಡೆಗಣಿಸುವವರು ಕೆಲವರಿ ರುತ್ತಾರೆ. ಆದರೆ ಅವು ಮನುಷ್ಯನ ಸ್ವತ್ತು ಮಾತ್ರವಲ್ಲ. ಹಾಗಾಗಿ ನಾವು ಒಂದೊಂದು ದೊಡ್ಡ ಮಾರ್ಜಾಲವನ್ನೂ ಸ್ಯಾಂಪಲ್ ಏ, ಸ್ಯಾಂಪಲ್ ಬಿ ಎಂದು ಕರೆಯದೇ ಅವುಗಳಿಗೆ ಮನುಷ್ಯರಿಗೆ ಕೊಡುವಂತೆಯೇ ಹೆಸರುಗಳನ್ನೂ ಕೊಟ್ಟೆವು.

– ಸ್ಕಾರ್ ಫೇಸ್ ಸಿಂಹ, ಹನಿ ಚೀತಾ, ಸಾಬಾ ಚಿರತೆ, ಮಾರ್ಷ್ ಪ್ರೈಡ್ ಸಿಂಹಗಳು, ಹೀಗೆ. ಮತ್ತೊಂದು ವಿಷಯ. ಟೀವಿ ನಿರೂಪ ಕರು ನೋಡಲು ಸುಂದರವಾಗಿರಬೇಕು ಎಂದೆಲ್ಲಾ ಏನೇನೋ ಬೇಡದ ವಿಚಿತ್ರಗಳಿವೆ. ಆದರೆ ನಮ್ಮ ವನ್ಯಜೀವಿ ಕಾರ್ಯಕ್ರಮ ಗಳಲ್ಲಿ ಸದ್ಯ ಅದ್ಯಾವ ಗೊಡವೆ ಇಲ್ಲ. ಹಾಗೆ ನೋಡಿದರೆ, ಜನರಿಗೂ ಬೇಕಿರುವುದು ವನ್ಯಜೀವಿಗಳ ಬಗ್ಗೆ ಪರಿಣತಿ ಹೊಂದಿರು ವವರೇ ಕಾರ್ಯಕ್ರಮಗಳನ್ನೂ ನಿರೂಪಿಸುವುದು. ನನ್ನನ್ನು ಬಿಡಿ, 94ರ ವಯಸ್ಸಿ ನಲ್ಲೂ ಇನ್ನೂ ಕ್ರಿಯಾಶೀಲರಾಗಿರುವ ನಮ್ಮ ಸರ್ ಡೇವಿಡ್ ಆಟನ್ ಬರೋ ನೋಡಿ.

ಕೇವಲ ಪ್ರಾಣಿಗಳನ್ನು ತೋರಿಸುವುದು ಬೇರೆ, ಆದರೆ ಅದೇ ಪ್ರಾಣಿಗಳನ್ನು ನೋಡುತ್ತಾ ಒಬ್ಬ ಮನುಷ್ಯ ನಿರೂಪಕ ಬೆರಗು ಗೊಳ್ಳುವುದು, ಚಿಂತೆಗೀಡಾಗುವುದು ಇದನ್ನೆಲ್ಲಾ ನೋಡಿದರೆ ಜನರಿಗೆ ಬೇರೆ ಪ್ರಾಣಿಗಳ ಪ್ರಪಂಚ ಮತ್ತಷ್ಟು ಆಪ್ತವಾಗುತ್ತದೆ. ಇವತ್ತಿಗೂ ನಾವು ಬೇರೆ ಪ್ರಾಣಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವುಗಳ ಜೀವನದ ವಿವಿಧ ಘಟ್ಟಗಳನ್ನು ಪರಿಚಯ ಮಾಡಿ ಕೊಟ್ಟಿದ್ದನ್ನು ಜನರು ನೆನಪಿಸಿಕೊಂಡು, ಸ್ಪಂದಿಸುತ್ತಾರೆ. ಅದರಲ್ಲೂ ಲೈವ್ ಆಗಿ ನಾವು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ವಾದ್ದರಿಂದ ‘ಬಿಗ್ ಕ್ಯಾಟ್ ಡೈರಿ’ಗೆ ಕೆಲವು ಸವಾಲುಗಳೂ ಇದ್ದವು.

ನಾವು ಕಾಯುತ್ತಾ ಕೂತಿದ್ದಾಗ ಯಾವ ಪ್ರಾಣಿಯೂ ಬರದಿದ್ದ ರೇನು ಮಾಡುವುದು? ಹಾಗಾಗಿ ನಾನಿದ್ದ ಕಡೆ ಸಿಂಹಗಳು ಕಾಣಿಸಿಕೊಳ್ಳ ದಿದ್ದರೆ, ನಾನು ನನ್ನ ಸಹನಿರೂಪಕರಾದ ಸೈಮನ್ ಇನ್ನೆಲ್ಲೂ ಚೀತಾ ಗಳನ್ನು ಕಾಯುತ್ತಾ ಕೂತಿರು ತ್ತಿದ್ದ ಜಾಗಕ್ಕೆ ಹೋಗು ತ್ತಿದ್ದೆವು. ಹೀಗೆ ಆ ಕಾರ್ಯಕ್ರಮ ಸದಾ ರೋಚಕವಾಗಿರುತ್ತಿತ್ತು. ಸುಮಾರು 24 ವರ್ಷಗಳ ಹಿಂದಿನ ಮಾತು, ಆಗ ಯಾವ
ಸೋಶಿಯಲ್ ಮೀಡಿಯಾ, ಸಂವಹನ ತಂತ್ರಜ್ಞಾನ ಅಷ್ಟು ಮುಂದುರೆದಿರಲಿಲ್ಲ. ಆದರೆ ಜನ ನಮಗೆ ಸ್ಪಂದಿಸಿದ ಬಗೆ ಅನನ್ಯ! ನನಗಂತೂ ‘ಬಿಗ್ ಕ್ಯಾಟ್ ಡೈರಿ’ ಜೀವನವನ್ನೇ ಬದಲಿಸಿದ ಕಾರ್ಯಕ್ರಮ.

ಮಾರಾ ಪ್ರೆಡೇಟರ್ ಕಾನ್ಸರ್ವೇಷನ್ ಪ್ರೋಗ್ರಾಮ್ ಹಿಂದಿನ ಉದ್ದೇಶವೇನು? ಮುಂಬರುವ ದಿನಗಳಲ್ಲಿ ಈ ಯೋಜನೆಯ ಮೂಲಕ ಯಾವ ಕೆಲಸಗಳಾಗಲಿವೆ?
ಉ: ಮಾರಾ ಮುಂದಿನ ಪೀಳಿಗೆಗಳಿಗೂ ನಮಗೆ ಕೊಟ್ಟಷ್ಟೇ ಅಚ್ಚರಿ, ಕುತೂಹಲ, ಸೌಂದರ್ಯ ಕೊಡಬೇಕು ಎನ್ನುವ ಆಸೆ ಈ ಸಂರಕ್ಷಣಾ ಯೋಜನೆಯದ್ದು. ಕೆನ್ಯಾ ವೈಲ್ಡ್ ಲೈಫ್ ಟ್ರಸ್ಟ್‌‌ನ ‘ಮಾರಾ ಪ್ರೆಡೇಟರ್ ಕಾನ್ಸರ್ವೇಷನ್ ಪ್ರೋಗ್ರಾಮ್’ ನಂತಹ ಯೋಜನೆ ಮೊದಲಿಗೆ ತನ್ನ ಅಧ್ಯಯನಗಳಿಗೆ ವಿಜ್ಞಾನವನ್ನು ಬುನಾದಿಯಾಗಿಟ್ಟುಕೊಂಡಿದೆ. ಮಾರಾ ರಿಸರ್ವ್ ಒಳಗೆ ಮತ್ತು ಹೊರಗೆ ಇರುವ ಚೀತಾ, ಚಿರತೆ, ಸಿಂಹಗಳ ಸಂಖ್ಯೆ ಮತ್ತು ಅವುಗಳ ವ್ಯಾಪ್ತಿಯ ಬಗ್ಗೆ ಆಳವಾದ, ವಿಸ್ತಾರವಾದ ಅಧ್ಯಯನ; ವನ್ಯಜೀವಿ-ಮಾನವ ಸಂಘರ್ಷದ ಅಧ್ಯಯನ ಮತ್ತು ಸಂಘರ್ಷದಲ್ಲಿ ಒಳಗೊಳ್ಳುವ ಪ್ರಾಣಿಗಳ ವಯಸ್ಸಿನ ಬಗ್ಗೆ ಅಧ್ಯಯನ;
ಜೀವಪರಿಸರ ವಿಜ್ಞಾನದ ಆಧಾರದ ಮೇಲೆ ವನ್ಯಜೀವಿಗಳ ಮೇಲ್ವಿಚಾರಣೆ ಈ ಯೋಜನೆಯ ಮುಖ್ಯಾಂಶಗಳು. ಈ ರೀತಿಯ ಅಧ್ಯಯನದಿಂದ ಮುಂದೆ ಪ್ರಾಣಿಗಳ ಸಂಖ್ಯೆಯಲ್ಲಿ, ಅವುಗಳ ಸಂಖ್ಯೆಯ ಏರಿಳಿತಗಳ ಆಧಾರದ ಮೇಲೆ ಈ ಸಂಕೀರ್ಣ ಸಮತೋಲನದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಮೇಲೆ ಗಮನವಿಡಬಹುದು. ಸಂಶೋಧನೆ, ಅಧ್ಯಯನಗಳಿಗೆ ಸಿಗುವ ಧನಸಹಾಯವನ್ನು ನಾವು ವಿವೇಕದಿಂದ ಅತೀ ಅಗತ್ಯವಿರುವ ವಿಷಯಗಳನ್ನು ತಿಳಿದುಕೊಳ್ಳಲು ಬಂಡವಾಳ ಹೂಡಬೇಕು.

ಮತ್ತೊಂದು ಮುಖ್ಯವಾದ ವಿಷಯ – ಮಾರಾದ ಭೂಪ್ರದೇಶದ ಮೇಲೆ ಮತ್ತು ಪ್ರಾಣಿಗಳ ಜೀವನಕ್ರಮಗಳ ಮೇಲೆ ಪರಿಸರ ಪ್ರವಾಸೋದ್ಯಮದ ಪರಿಣಾಮಗಳನ್ನು ನಾವು ವೈಜ್ಞಾನಿಕವಾಗಿ, ಸಮಗ್ರವಾಗಿ ಅಧ್ಯಯಿಸಬೇಕಿದೆ. ಚೀತಾಗಳ ಬಗ್ಗೆ ನಡೆದ ಇತ್ತೀಚಿನ ಒಂದು ಅಧ್ಯಯನದಲ್ಲಿ, ಜನರು ಹೆಚ್ಚು ಭೇಟಿ ನೀಡುವ ಪ್ರವಾಸಿ ಜಾಗಗಳಲ್ಲಿರುವ ತಾಯಿ ಚಿರತೆಗಳು ಕಡಿಮೆ
ಮರಿಗಳನ್ನು ಪೋಷಿಸುತ್ತಿವೆ ಎಂದು ಕಂಡುಬಂದಿತು.

ಮರಿಗಳನ್ನು ಅವು ಅವಿತಿಟ್ಟಿರುವ ಜಾಗಗಳಿಗೆ ಸಫಾರಿ ಜೀಪುಗಳು ಹತ್ತಿರ ಹೋಗುವುದು, ತಾಯಿ ಚಿರತೆ ಮರಿಗಳನ್ನು ಸಾಗಿಸು ವಾಗ ಅವುಗಳ ಹತ್ತಿರ ಹಿಂದೆ ಹಿಂದೆ ಹೋಗುವುದು ಒಳ್ಳೆಯದಲ್ಲ. ಮರಿಗಳಿರುವಾಗ ಮಾರ್ಜಾಲಗಳು ಬಹಳ ತಳಮಳ ಗೊಳ್ಳುತ್ತವೆ. ಇದನ್ನು ನಿಮ್ಮ ಮನೆಯಲ್ಲೇ ಸಾಕುಬೆಕ್ಕಿದ್ದರೆ ನೋಡಬಹುದು. ಚೀತಾಗಳು ಬೆಳಗಿನ ಸಮಯದಲ್ಲಿ ಬೇಟೆಯಾಡುತ್ತವೆ. ಆಗ ಸಫಾರಿ ಜೀಪುಗಳು, ಅದರಲ್ಲಿರುವ ಛಾಯಾಗ್ರಾಹಕರು ಅವುಗಳ ಫೋಟೋ ತೆಗೆಯುವ ಆತುರದಲ್ಲಿ ಅವುಗಳ ನೈಸರ್ಗಿಕ ಚಲನವಲನಗಳನ್ನು ಗೊಂದಲಗೊಳಿಸುವುದೂ ಒಳ್ಳೆಯದಲ್ಲ.

ವಿಜ್ಞಾನ, ಪರಿಸರ ವಿಜ್ಞಾನ ಮೇಲ್ವಿಚಾರಣೆ, ನಿರ್ವಹಣಾ ಅಭಿಮುಖವಾದ ಸಂಶೋಧನೆ, ಪರಿಸರ ಪ್ರವಾಸೋದ್ಯಮದ ಪರಿಣಾಮದ ಮೇಲ್ವಿಚಾರಣೆ ಅತೀ ಮುಖ್ಯ. ಮತ್ತೊಂದು ಮುಖ್ಯ ಅಂಶ – ಸ್ಥಳೀಯ ಸಮುದಾಯಗಳ ಅಭಿವೃದ್ಧಿ. ವನ್ಯಜೀವಿಗಳ ಹತ್ತಿರ ಬದುಕುವುದು, ದುಡ್ಡು ಕೊಟ್ಟು ಸಫಾರಿ ಜೀಪಿನಲ್ಲಿ ಪ್ರಾಣಿಗಳನ್ನು ನೋಡಿ ಖುಷಿಪಡುವುದಕ್ಕಿಂತಾ ಬಹಳ ಭಿನ್ನವಾದ ಜೀವನ. ರಾತ್ರಿ ಅವರು ಮಲಗಿದ್ದಾಗ ಒಂದು ಸಿಂಹ ಅವರ ಮನೆಯ ಬಳಿ ಬಂದರೆ ಅದನ್ನು ಅಚ್ಚರಿಯಿಂದ ನೋಡುವ ಯಾವ ಸ್ಥಿತಿಯಲ್ಲೂ ಅವರಿರುವುದಿಲ್ಲ. ಅವರಿಗೆ ನಿಷ್ಪಕ್ಷಪಾತವಾಗಿ ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಬೆಂಬಲ
ಸಿಗಬೇಕು. ಅವರನ್ನು ಈ ಪ್ರದೇಶದ ಅಭಿವೃದ್ಧಿ ಯೋಜನೆಗಳ ಎಲ್ಲ ಸಂಭಾಷಣೆಗಳಲ್ಲೂ ಸೇರಿಸಿಕೊಳ್ಳಲೇಬೇಕು.

ಪ್ರಪಂಚದಲ್ಲೇ ಎರಡನೇ ಅತೀ ಹೆಚ್ಚು ಜನಸಂಖ್ಯೆೆಯಿರುವ ಭಾರತದಲ್ಲೂ ವನ್ಯಜೀವಿ-ಮಾನವ ಸಂಘರ್ಷ ಒಂದು ದೊಡ್ಡ ಸಮಸ್ಯೆೆ. ಆಫ್ರಿಕಾದಲ್ಲೂ ಈ ಸಮಸ್ಯೆೆ ಇದ್ದರೂ ಅದು ಬಹಳ ವಿಭಿನ್ನವಾದದ್ದು. ಆದರೂ ಈ ಎರಡು
ದೇಶಗಳು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅನುಕರಿಸಬಹುದಾದ ವಿಷಯಗಳಿವೆಯೇ?

ಉ: ಭಾರತಕ್ಕೂ ಆಫ್ರಿಕಾಗೂ ಒಟ್ಟಾರೆಯಾಗಿ ನೋಡಿದರೆ ಇರುವ ಬಹುದೊಡ್ಡ ವ್ಯತ್ಯಾಸವೆಂದರೆ ಸಂರಕ್ಷಿತ ಪ್ರದೇಶಗಳ ಗಾತ್ರ. ಆಫ್ರಿಕಾದ ದೊಡ್ಡ ದೊಡ್ಡ ಸಂರಕ್ಷಿತ ಪ್ರದೇಶಗಳಿಗೆ ಹೋಲಿಸಿದರೆ ಭಾರತದ ಅಭಯಾರಣ್ಯಗಳು ಬಹಳ ಚಿಕ್ಕವು. ಇದೇ ಒಂದು ಹಿನ್ನಡೆಯಾಗಿಬಿಡುತ್ತದೆ. ಏಕೆಂದರೆ ವನ್ಯಜೀವಿಗಳಿಗೆ ಕಾದಿರಿಸಿರುವ ಜಾಗಗಳು ದ್ವೀಪಗಳಂತೆ ಇರುತ್ತವೆ ಮತ್ತು ಸುತ್ತ ಜನಸಾಗರ,
ಅದರಲ್ಲೂ ಆಫ್ರಿಕಾಗಿಂತಲೂ ಬಹಳ ಹೆಚ್ಚಿನ ಜನಸಂಖ್ಯೆ. ಆಫ್ರಿಕಾದಲ್ಲೂ ಇಂಥ ಪರಿಸ್ಥಿತಿ ಇದೆ, ಆದರೆ ಇಂತಹ ಸಣ್ಣ ವನ್ಯಜೀವಿ ಪ್ರದೇಶಗಳು ಬಹಳ ಕಡಿಮೆ. ಮಿಕ್ಕೆಲ್ಲವೂ ಬಹುದೊಡ್ಡ ಪ್ರದೇಶಗಳೇ. ಆದರೆ ನಾನು ಮುಂಚೆಯೇ ಕೇಳಿರುವಂತೆ
ಭಾರತದ ಸಂರಕ್ಷಿತ ಪ್ರದೇಶಗಳ ಒಳಗೆ ಯಾವ ಕ್ಯಾಂಪ್ ಅಥವಾ ಲಾಡ್ಜ್‌‌ಗಳು ಇಲ್ಲದಿರುವುದು ಬಹಳ ಒಳ್ಳೆಯ ವಿಷಯ. ಅವು ಯಾವಾಗಲೂ ಹೊರಗೆ ಇರಬೇಕು. ಇದು ಭವಿಷ್ಯದಲ್ಲೂ ಹೀಗೆಯೇ ಇರಬೇಕು.

ನಿಮ್ಮ ಯೂಟ್ಯೂಬ್ ಚಾನೆಲ್ ವಿಡಿಯೋಗಳಾಗಲೀ, ನಿಮ್ಮ ಪುಸ್ತಕಗಳಲ್ಲಾಗಲೀ ಅಥವಾ ಇತರ ಬರಹಗಳಲ್ಲಾಗಲೀ, ನಿಮ್ಮ ಚಿಂತನೆಗೆ ಒಂದು ಅಪರೂಪದ ನಿರುದ್ವೇಗ, ತಾಳ್ಮೆೆ, ಅಧ್ಯಾಾತ್ಮದ ಲೇಪ ಇರುತ್ತದೆ. ನಿಮ್ಮ ‘ಸೇಕ್ರೆಡ್ ನೇಚರ್’ ಯೋಜನೆಯ ಹಿಂದೆಯೂ ಪ್ರಕೃತಿಯಲ್ಲಿ ನಮ್ಮದೇ ಸ್ಥಾನವನ್ನು ಅರಿಯುವ ಒಂದು ನಮ್ರ ಪ್ರಯತ್ನವಿದೆ. ಸೇಕ್ರೆಡ್ ನೇಚರ್ ಬಗ್ಗೆೆ ನಮಗೆ ವಿವರವಾಗಿ ಹೇಳುತ್ತೀರಾ?

ಉ : ನೀವು ಹೇಳುತ್ತಿರುವ ಅಧ್ಯಾತ್ಮದ ಯಾವುದೇ ಛಾಯೆಯಿದ್ದರೂ ಅದೆಲ್ಲವೂ ನನ್ನ ಹೆಂಡತಿ ಆಂಜೆಲಾಳ ದೃಷ್ಟಿಕೋನ, ಅವಳ ಗ್ರಹಿಕೆ. ನಾನು ವಿಜ್ಞಾನದ ಹಿನ್ನೆಲೆಯಿಂದ ಬಂದವನು. ಆದರೆ ನಮ್ಮಿಬ್ಬರಿಗೂ ಬೌದ್ಧ ಧರ್ಮದ ಕೆಲವು ಚಿಂತನೆಗಳು ಬಹಳ ಆಪ್ತವೆನಿಸುತ್ತವೆ. ಸೃಷ್ಟಿಯ ಎಲ್ಲಾ ಜೀವಿಗಳಿಗೂ ಸಮಾನವಾದ ಗೌರವ, ಅಸ್ತಿತ್ವದಲ್ಲಿರುವ ಎಲ್ಲ ಜೀವಿಗಳೂ ಸೃಷ್ಟಿಯ ಬಲೆಯಲ್ಲಿ ಒಂದೊಂದು ಎಲೆಗಳಾಗಿ ಒಂದಕ್ಕೊಂದು ಸಂಬಂಧವಿದ್ದೇ ಬದುಕುತ್ತಿರುವುದು ಎಂಬ ವೈಜ್ಞಾನಿಕವಾಗಿ ದೃಢಪಟ್ಟಿ ರುವ ಸತ್ಯ, ಇವೆಲ್ಲವೂ ‘ಸೇಕ್ರೆಡ್ ನೇಚರ್ – ಲೈಫ್ಸ್‌ ಇಟರ್ನಲ್ ಡಾನ್ಸ್‌’ ಹಿಂದಿನ ಚಿಂತನೆ. ವಿಜ್ಞಾನದಲ್ಲೇ ಇರುವ ಸೌಂದರ್ಯ ಮತ್ತು ಸತ್ಯಗಳನ್ನು ನಾವೇಕೆ ಕಡೆಗಣಿಸುತ್ತೇವೋ ತಿಳಿಯುವುದಿಲ್ಲ. ಬಹುಷಃ ನಮಗೆ ಶಾಲೆ-ಕಾಲೇಜುಗಳಲ್ಲಿ ಪಾಠ ಮಾಡುವ ರೀತಿ ನಮಗೆ ಆಸಕ್ತಿ ಹುಟ್ಟಿಸುವುದಿಲ್ಲವೇನೋ, ಆದರೆ ಮುಕ್ತ ಮನಸ್ಸಿನಿಂದ, ಕುತೂಹಲದಿಂದ ನಮ್ಮ ಜಗತ್ತನ್ನು ನೋಡಿದರೆ, ವೈಜ್ಞಾನಿಕ ಸತ್ಯಗಳೇ ಆಧ್ಯಾತ್ಮಿಕ ವಿವರಗಳಂತೆ ಕಾಣುತ್ತವೆ.

ಸೇಕ್ರೆಡ್ ನೇಚರ್ ಭಾಗ ಎರಡು ಪುಸ್ತಕದ ಶೀರ್ಷಿಕೆ – ರೀಕನೆಕ್ಟಿಂಗ್ ಪೀಪಲ್ ಟು ಅವರ್ ಪ್ಲ್ಯಾನೆಟ್. ಇದರಲ್ಲಿ ಜಾಗತಿಕ ಅವಲೋಕನವಿದೆ – ಸವಾನಾಗಳು, ಅರಣ್ಯಗಳು, ಗಿರಿ-ಪರ್ವತಗಳು, ಮರುಭೂಮಿಗಳು, ಸಾಗರಗಳು ಮತ್ತು ಧ್ರುವ ಪ್ರದೇಶಗಳು. ಇದೆಲ್ಲದರಿಂದ ನಾವು ಮೂಕವಿಸ್ಮಿತರಾಗಿ ವಿವಿಧ ಪ್ರದೇಶಗಳ, ಅಲ್ಲಿಯ ವನ್ಯಜೀವಿಗಳ ಸಂರಕ್ಷಣೆಗೆ ನಮ್ಮ ಕರ್ತವ್ಯವನ್ನು ಮಾಡಲು ಸ್ಫೂರ್ತಿ ನೀಡುವ ಪ್ರಯತ್ನ. ಮೂರು ಹಂತಗಳಲ್ಲಿ ಈ ಪ್ರಯತ್ನ ನಡೆಯುತ್ತಿದೆ – (1) ಪ್ರಕೃತಿಯ ಬಗ್ಗೆ, ವನ್ಯಜೀವಿಗಳ ಬಗ್ಗೆ ಸ್ಫೂರ್ತಿ ನೀಡುವುದು. (2) ಸ್ಫೂರ್ತಿಗೊಂಡ ಜನರ ಗಮನ ಸಿಕ್ಕ ನಂತರ ಅವರನ್ನು ಸಂರಕ್ಷಣೆಯ ಕಡೆಗೆ ಗಮನ ಹರಿಸು ವಂತೆ ಸಂಸ್ಕಾರಗೊಳಿಸುವುದು.

ಪ್ರಕೃತಿ ನಿರಂತರ, ನಮ್ಮ ಜೀವನವಲ್ಲ.  ನಾವು ಅಳಿದರೂ ಪ್ರಕೃತಿ ಇರುತ್ತದೆ. ಹಾಗಾಗಿ ನಮ್ಮ ಅಸ್ತಿತ್ವವನ್ನೇ ಇಲ್ಲಿ ಉಳಿಸಿ ಕೊಳ್ಳಲು ನಾವು ಇತರ ಜೀವಿಗಳ ಅಸ್ತಿತ್ವಕ್ಕೆ ಗೌರವ ಕೊಟ್ಟು ಅವುಗಳ ರಕ್ಷಣೆಗೆ ಮುಂದಾಗಬೇಕಿದೆ ಎನ್ನುವ ಸಂದೇಶ. (3) ಸಂರಕ್ಷಣೆಗೆ ನಿಮ್ಮ ಕೈಲಾದ ಪ್ರಯತ್ನ ಮಾಡುವಂತೆ ಪ್ರೇರೇಪಿಸುವುದು.

ಸೃಷ್ಟಿ ಸೌಂದರ್ಯದ ವೈವಿಧ್ಯತೆಯ ಅಪಾರ ಆನಂದ, ಮತ್ತು ಅದರೆಡೆಗೆ ಅದಮ್ಯ ಗೌರವ, ಆಸಕ್ತಿ ಮತ್ತು ಬೆರಗು ನಾವು ‘ಸೇಕ್ರೆಡ್’ ಎನ್ನುವ ಪದದಲ್ಲಿ ನಾವು ಕಾಣುತ್ತಿರುವ ಅರ್ಥ. ಏಕಕೋಶ ಜೀವಿಗಳಿಂದ ಹಿಡಿದು ಇಂದು ಇಷ್ಟು ಸಂಕೀರ್ಣವಾದ ಜೀವಜಾಲ ನಮ್ಮ ಕಣ್ಣೆದುರಿಗಿರುವುದು, ನಾವೂ ಅದರ ಒಂದು ಭಾಗವಾಗಿ ಅದನ್ನು ಕುರಿತೇ ಚಿಂತಿಸುವುದು ಮತ್ತು ಬೆರಗು ಗೊಳ್ಳುವುದು, ಇದೇ ಎಲ್ಲಕ್ಕಿಂತ ಶ್ರೇಷ್ಠವಾದ ಧರ್ಮ. ಇಂತಹ ಪ್ರಕೃತಿಯನ್ನು ನಾವು ಉಳಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಬೇಕು. ನಮಗೆ ಜೀವ ಕೊಟ್ಟ ಈ ಪ್ರಕೃತಿಗಿಂತ ಮಿಗಿಲಾದ ‘ಸೇಕ್ರೆಡ್’ ಅಥವಾ ಪವಿತ್ರ ವಿಷಯ ಬೇರೇನಿದೆ? ಸೇಕ್ರೆಡ್ ನೇಚರ್‌ನ ಇನ್ನೊಂದು ಉದ್ದೇಶ ನಮ್ಮ ಹೊಸ ವೆಬ್‌ಸೈಟ್ ಮೂಲಕ ನೆರವೇರಲಿದೆ. ನಾವು ಒಂದು ಚೆಕ್ ಲಿಸ್ಟ್‌ ತಯಾರು ಮಾಡುತ್ತಿದ್ದೇವೆ. ಭೂಮಿಗೆ, ನಿಸರ್ಗಕ್ಕೆ ಮಾರಕವಾಗದಂತೆ ದಿನನಿತ್ಯ ನಾವು ಇರುವ ಜಾಗದಲ್ಲೇ, ಬದುಕುವ ರೀತಿಯಲ್ಲೇ ಏನು ಮಾಡುತ್ತಿದ್ದೇವೆ, ಏನು ಮಾಡಬಹುದು ಎಂದು ಆತ್ಮಾವಲೋಕನ ಮಾಡಿಕೊಂಡು ಬದಲಾವಣೆಗಳನ್ನು ತರಲು ಇದು ಸಹಾಯ ಮಾಡುತ್ತದೆ.

ಉದಾಹರಣೆಗೆ, ನೀರನ್ನು ಎಷ್ಟು ಜಾಗರೂಕರಾಗಿ ಬಳಸುತ್ತೀರಿ, ಕಸದ ವಿಲೇವಾರಿ ಹೇಗೆ ಮಾಡುತ್ತೀರಿ, ನಿಮ್ಮ ಮನೆಯಲ್ಲಿ ಅಥವಾ ಆಫೀಸಿನಲ್ಲಿ ಅನೇಕ ಕೋಣೆಗಳಿದ್ದು ಒಂದೆರಡರಲ್ಲಿ ಯಾರೂ ಇಲ್ಲದಾಗ ಅಲ್ಲಿನ ಲೈಟ್ ಅಥವಾ ಫ್ಯಾನ್ ಅಥವಾ ಏಸಿ ಆಫ್ ಮಾಡುತ್ತೀರಾ? ಇವು ತೀರಾ ಚಿಕ್ಕ ವಿಷಯಗಳೆನಿಸಬಹುದು, ಆದರೆ ನಾವು ಎಷ್ಟು ಜನರಿದ್ದೇವೆ, ಒಂದೊಂದು ಮನೆ ಯಲ್ಲೂ ಹೀಗೆ ಒಬ್ಬೊಬ್ಬರೂ ಜವಾಬ್ದಾರಿ ತೆಗೆದುಕೊಂಡರೆ ಎಷ್ಟು ಸುಧಾರಣೆ ತರಬಹುದು ಯೋಚಿಸಿ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ, ನೀವು ನಿಮ್ಮ ಪ್ರದೇಶದ, ರಾಜ್ಯದ, ದೇಶದ ಯಾವುದಾದರೂ ಸಂರಕ್ಷಣಾ ಸಂಸ್ಥೆಯ ಜೊತೆ ಯಾವ ರೀತಿಯಲ್ಲಾದರೂ ಕೈಜೋಡಿಸಿದ್ದೀರಾ? ನಾವು ಎಲ್ಲರೂ ನಮ್ಮ ಕೆಲಸಗಳನ್ನು ಬಿಟ್ಟು ಕ್ಷೇತ್ರಕಾರ್ಯ ಮಾಡಬೇಕಿಲ್ಲ.

ನಾವು ಕುಳಿತಲ್ಲೇ ಇಂದು ಅನೇಕ ರೀತಿಗಳಲ್ಲಿ ಸಂರಕ್ಷಣಾ ಕೆಲಸಗಳಲ್ಲಿ ಭಾಗಿಯಾಗಬಹುದು. ನಿಮ್ಮ ನಿಮ್ಮ ಹತ್ತಿರದ ಸಂರಕ್ಷಣಾ ಸಂಸ್ಥೆಗಳ ಜೊತೆ ಮಾತನಾಡಿ, ನೀವು ಯಾವ ರೀತಿ ನಿಮ್ಮ ಕೊಡುಗೆ ನೀಡಬಹುದು ಎಂದು ಚರ್ಚಿಸಿ. ಪ್ರಕೃತಿಯನ್ನು, ವನ್ಯಜೀವಿ ಗಳನ್ನು ರಕ್ಷಿಸುವುದು ರಾಜಕೀಯ ನಾಯಕರ, ಸರ್ಕಾರಗಳ, ವಿಜ್ಞಾನಿಗಳ, ಸಂರಕ್ಷಣಾವಾದಿಗಳ, ಏನ್.ಜಿ.ಓ.ಗಳ ಕೆಲಸ ಎಂದು ನಾವು ಕೈಕಟ್ಟಿ ಕೂರುವಂತಿಲ್ಲ. ಅಥವಾ ನಾವು ಏನು ಮಾಡಲು ತಾನೇ ಸಾಧ್ಯ ಎಂಬ ವಿನಯತೆಯೂ ಕೆಲಸಕ್ಕೆ ಬಾರದ್ದು.

ವನ್ಯಜೀವಿ ಕಾರಿಡಾರ್
ಸಂರಕ್ಷಣಾ ವಲಯದಲ್ಲಿ ಇನ್ನೊಂದು ಪದವನ್ನು ಇತ್ತೀಚಿಗೆ ಜಾಸ್ತಿ ಬಳಸಲಾಗುತ್ತಿದೆ – ವನ್ಯಜೀವಿ ಕಾರಿಡಾರ್. ಒಂದು ಚಿಕ್ಕ
ದ್ವೀಪದಂತಿರುವ ಅರಣ್ಯಪ್ರದೇಶದಲ್ಲಿರುವ ದೊಡ್ಡ ಮಾರ್ಜಾಲಗಳು (ಭಾರತದಲ್ಲಿ ಹುಲಿ, ಚಿರತೆ ಮತ್ತು ಗಿರ್‌ನಲ್ಲಿರುವ ಸಿಂಹ ಗಳು) ಇನ್ ಬ್ರೀಡಿಂಗ್ ತೊಂದರೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಅಂದರೆ ವಿಸ್ತಾರವಾದ ಅರಣ್ಯಪ್ರದೇಶಗಳ ನಡುವೆ ಸಂಪರ್ಕವೇ ಇಲ್ಲದೇ ಆನುವಂಶಿಕವಾಗಿ ಹೊಸ ರಕ್ತದ, ಹೊಸ ವಂಶವಾಹಿಯ (ಜೀನ್) ಹರಿವಿಲ್ಲದೇ ಬೇಟೆಪ್ರಾಣಿಗಳ ಸಂಖ್ಯೆ ಬಳಲುತ್ತದೆ.

ಹೀಗಾಗಿ ವನ್ಯಜೀವಿ ಕಾರಿಡಾರ್ ಯೋಜನೆಗಳು ಸಫಲವಾದರೆ, ದೀರ್ಘಾವಧಿಯಲ್ಲಿ ಈ ಪ್ರಾಣಿಗಳ ಸಂಚಾರ ಹೆಚ್ಚಾಗಿ ವಂಶ ವಾಹಿಯ ಹರಿವಿಗೂ ಅನುವು ಮಾಡಿಕೊಡುತ್ತದೆ. ಆದರೆ ಸಮಸ್ಯೆಯಿರುವುದು ಇದನ್ನು ಕಾರ್ಯಗತಗೊಳಿಸುವುದರಲ್ಲಿ. ಈ
ಕಾರಿಡಾರುಗಳ ದಾರಿಯಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಜನಸಂಖ್ಯೆ ಸದ್ಯಕ್ಕಂತೂ ಕಡಿಮೆಯಾಗುವ ಸಾಧ್ಯತೆ ಕಾಣುತ್ತಿಲ್ಲ, ಹೀಗಾಗಿ ಬೇರೆ ಪ್ರಾಣಿಗಳ ಸಂಖ್ಯೆ ಕ್ಷೀಣಿಸದಂತೆ ನೋಡಿ ಕೊಳ್ಳುವುದು ನಮ್ಮ ಕಾಲದ ಅತ್ಯಂತ ದೊಡ್ಡ ಸವಾಲುಗಳಲ್ಲೊಂದು.