ಡಾ.ಶುಭಶ್ರೀ ಪ್ರಸಾದ್ ಮಂಡ್ಯ
ತಾಯ್ತಂದೆ ಗುರುಹಿರಿಯರು ಬೇರಿನ ಥರ. ಅವರು ಮಕ್ಕಳಿಗೆ, ಕಿರಿಯರಿಗೆ ಉತ್ತಮ ಸಂಸ್ಕಾರವನ್ನು ಊಡಿ ಗಿಡ ಮರ ವಾಗಿ ಊರಿ ನಾಲ್ಕಾರು ಜನರಿಗೆ ಉಪಯೋಗುವ ಹಾಗೆ ಮಾಡುವ ಜವಾಬ್ದಾರಿ ಇದೆ. ಅದನ್ನು ಮರೆತು ಹಾದಿ ತಪ್ಪು ವವರನ್ನು ನೋಡಿಯೂ ನಮಗೇನಾಗಬೇಕು ಎಂದು ಮೌನವಾಗಿ ಕುಳಿತರೆ ನಾವು ಸಮಾಜದಿಂದ ಪಡೆದದ್ದನ್ನು ಮತ್ತೆ ಮರಳಿ ಸಮಾಜಕ್ಕೆ ಕೊಟ್ಟು ಋಣ ತೀರಿಸುವುದು ಅಸಾಧ್ಯ. ಅನುಕರಣೆ ಸಹಜ ಮತ್ತು ಸುಲಭ. ಮಕ್ಕಳು ಅನುಕರಣೆಯ ಗೊಂಬೆಗಳು. ಕಿರಿಯರು ಕೇಳುವುದಕ್ಕಿಂತ ನೋಡಿ ಕಲಿಯುತ್ತಾರೆ. ಹಿರಿಯರು ಆದರ್ಶಗಳ ಉಪದೇಶ ಮಾಡುವ ಬದಲು ತಾವೇ ಆದರ್ಶವಾಗಿ ಬದುಕಬೇಕು. ತಮ್ಮ ದೀರ್ಘ ಜೀವನದ ಅನುಭವವನ್ನು ಕಿರಿಯರಿಗೆ ಹಂಚಬೇಕು, ವಯಸ್ಸಾಯಿತು ಎಂದು ಸುಮ್ಮನಾಗುವುದಲ್ಲ, ಬದಲಿಗೆ ಮುಂದಿನ ಜನಾಂಗಕ್ಕೆ ದೀಪ ಬೆಳಗಿ ದಾರಿ ತೋರುವ ಕೆಲಸ ಮಾಡಬೇಕು.
ಆಂಟಿ, ದುಡ್ಡು ತೊಗೊಳೋಕೆ ಒಂದು ಚಲನ್ ಕೊಡಿ’ ಬ್ಯಾಂಕಿನಲ್ಲಿ ನನ್ನೆದುರು ನಿಂತ ಆರು ಅಡಿ ಎತ್ತರದ ಸುಮಾರು ಇಪ್ಪತ್ತರ ಹುಡುಗ ಕೇಳಿದಾಗ ಒಂದು ಕ್ಷಣ ಅವಾಕ್ಕಾದೆ. ಇಷ್ಟು ದಿನ ಹೊರಗೆ ಎಲ್ಲರೂ ಅಕ್ಕ ಎನ್ನುತ್ತಿದ್ದರು, ಕೆಲಸದ ಸ್ಥಳದಲ್ಲಿ
ಮೇಡಂ ಎನ್ನುತ್ತಿದ್ದರು. ನಾನು ಅದ್ಯಾಾವ ಮಾಯದಲ್ಲಿ ಆಂಟಿ ಆಗಿಬಿಟ್ಟೆ ಎಂದು ಯೋಚಿಸುವಂತಾಯಿತು.
ಮತ್ತೊಂದು ದಿನ ಅಜ್ಜಿ ಎಂದರೂ ಅಚ್ಚರಿಯಲ್ಲ. ಅದೂ ಸಹಜವೇ. ಆಂಟಿ, ಅಂಕಲ್, ಅಜ್ಜಿ, ತಾತ ಎನ್ನುವ ಪದಗಳು ಸಂಬಂಧ ಸೂಚಕ ಮಾತ್ರವಲ್ಲದೆ ವಯೋಸೂಚಕವೂ ಹೌದು. ಮಂದಬೆಳಕಿನಲ್ಲಿ ಓದುತ್ತಿದ್ದವರಿಗೆ ಬೆಳಗಿನ ದಿನಪತ್ರಿಕೆ ಓದಲು ತುಸು ಹೆಚ್ಚು ಬೆಳಕು ಬೇಕು ಎನಿಸುತ್ತದೆ. ಮೆಲ್ಲಗೆ ಕೂದಲು ಹಣ್ಣಾಗುತ್ತದೆ, ಕಣ್ಣು ಮಬ್ಬಾಗುತ್ತದೆ. ಎರಡು ಮೂರು ಕೆಲಸಗಳನ್ನು ಸಲೀಸಾಗಿ ಮಾಡುತ್ತಿದ್ದವರಿಗೆ ಈಚೆಗೆ ಕೆಲವೊಮ್ಮೆ ಮಲ್ಟಿ ಟಾಸ್ಕಿಂಗ್ ಕಷ್ಟ ಎನಿಸುತ್ತದೆ.
ಹೆಣ್ಣುಮಕ್ಕಳಿಗಂತೂ ಅಡುಗೆಗೆ ಉಪ್ಪು ಹಾಕಿದೆನೋ ಇಲ್ಲವೋ, ಸ್ವಲ್ಪ ಏಕಾಗ್ರತೆ ಕಡಿಮೆಯಾದರೂ ಇದಕ್ಕೆ ಏನೋ ಮಿಸ್ ಮಾಡಿದೆ ಎಂದು ಅನುಮಾನ ಮೂಡಿಸುತ್ತದೆ. ಆಫೀಸಿನಲ್ಲಿ ಕೆಲಸ ಮಾಡುವವರಿಗೆ ಕಂಪ್ಯೂಟರಿನ ಮಾನಿಟರ್ ಸ್ವಲ್ಪ ಹತ್ತಿರ ಬಂದರೆ ವಾಸಿ ಎನಿಸಬಹುದು. ಮತ್ತೂ ಕೆಲವರಿಗೆ ಮಾತಾಡಿದ್ದು, ಕೂಗಿದ್ದು ನಿಧಾನ ವಾಗಿ ಅರಿವಾಗಬಹುದು. ಇವೆಲ್ಲ ಪ್ರಕೃತಿ ನಿಯಮ. ಹಣ್ಣೆಲೆಯನ್ನು ಕಂಡು ಹಸಿರೆಲೆ ನಕ್ಕು ಅಪಹಾಸ್ಯ ಮಾಡಿದರೆ ಮಾತ್ರ ಹಣ್ಣೆಲೆಗೆ ನೋವು. ಮತ್ತೊಂದು ದಿನ ಹಸಿರೆಲೆಯೂ ಹಣ್ಣಾಗುತ್ತದೆ, ಮಣ್ಣಾಗುತ್ತದೆ.
‘ಭೂಮಿಗೆ ಭಾರವಾಗಿ, ಅನ್ನಕ್ಕೆ ದಂಡವಾಗಿ ಯಾಕಾದ್ರೂ ಬದುಕಿದ್ದೇನೋ. ದೇವರು ಯಾಕಿಷ್ಟು ಆಯಸ್ಸು ಕೊಟ್ಟಿದಾನೋ? ಇಷ್ಟು ವರ್ಷ ರುಚಿಯಾಗಿ ತಿಂದಿದ್ದುಸಾಕು, ಇನ್ಮೇಲೆ ಏನೋ ಒಂದು ತಿಂದರೆ ಸಾಕು. ಬದುಕಲಿಕ್ಕೆ ಒಂದಿಷ್ಟು ಹೊಟ್ಟೆಗೆ ಬಿದ್ದರೆ ಸಾಕಲ್ವಾ? ಕಾಲ ಕೆಟ್ಟುಹೋಯ್ತು, ಇನ್ನೂ ಈ ಕಣ್ಣಲ್ಲಿ ಏನೇನು ನೋಡ್ಬೇಕೋ? ನಮ್ಮಂಥ ವಯಸ್ಸಾದವರನ್ನು ದೇವ್ರ ಕರೆಸಿ ಕೊಂಡಿಬಿಡಬಾರ್ದಾ?’ ಇಂಥ ಮಾತುಗಳನ್ನು ನಾವುಗಳು ವೃದ್ಧರ ಬಾಯಲ್ಲಿ ಕೇಳುತ್ತಲೇ ಇರುತ್ತೇವೆ. ಇಂಥ ನೇತ್ಯಾತ್ಮಕ ಭಾವನೆ ಗಳನ್ನು ತೊಡೆದುಕೊಂಡು ಬದುಕಿರುವಷ್ಟು ಕಾಲ ನಾವೂ ನೆಮ್ಮದಿಯಾಗಿ, ನಮ್ಮೊಡನೆ ಇರುವವ ರನ್ನೂ ನೆಮ್ಮದಿ ಯಾಗಿ ಬದುಕಿಸುವುದು ಹಿರಿಯರ ಕರ್ತವ್ಯ.
ಪುರಾಣಗಳು ಕಲಿಸಿದ್ದೇನು
ರಾಮಾ ಕೃಷ್ಣಾ ಅಂತ ಹಾಯಾಗಿ ಇರ್ಬಾರ್ದಾ? ಎನ್ನುವ ಕಿರಿಯರ ಕುಹುಕ, ನಮಗಿ ನ್ನೇನು ಆಗಬೇಕು? ಸುಮ್ನೆ ರಾಮಾ ಕೃಷ್ಣಾ ಅಂತ ಇರ್ತೀವಿ ಎನ್ನುವ ಹಿರಿಯರ ವೈರಾಗ್ಯ ಸಮಂಜಸವಲ್ಲ. ರಾಮ ಕೃಷ್ಣರ ಧರ್ಮ ಕಾಪಾಡುವ ಜಾಣತನವನ್ನು ನೆನೆದು, ಕಲಿಸುವ ಕಾಲವೆಂಬುದನ್ನು ಹಿರಿಯರು ಮರೆಯಬಾರದು.
*ರಾಮಾಯಣದ ಒಂದು ಪ್ರಸಂಗ. ವಿಶ್ವಾಮಿತ್ರ ದಶರಥನಲ್ಲಿ ಬಂದು ರಾಮ ಮತ್ತು ಲಕ್ಷ್ಮಣರನ್ನು ತನ್ನೊಟ್ಟಿಗೆ ಯಜ್ಞ ಸುರಕ್ಷತೆಗೆ ಕಳುಹಿಸಿ ಎಂದು ಕೇಳುತ್ತಾನೆ. ಮಕ್ಕಳಿನ್ನೂ ತುಂಬ ಚಿಕ್ಕವರು, ರಾಕ್ಷಸರನ್ನು ಎದುರಿಸಲಾರರು, ನಾನೇ ಬರುತ್ತೇನೆನ್ನುತ್ತಾನೆ. ಆದರೆ ವಿಶ್ವಾಮಿತ್ರರು ಅವರ ಸಾಮರ್ಥ್ಯ ಗುರುತಿಸಿ ಹಠದಿಂದ ರಾಮಲಕ್ಷ್ಮಣರನ್ನು ಜೊತೆ ಯಲ್ಲೇ ಕಾಡಿಗೆ ಕರೆಯೊಯ್ಯುತ್ತಾರೆ. ವಿಶ್ವಾಮಿತ್ರರೇ ಕರುಣಿಸಿದ ಅಸ್ತ್ರಗಳ ವರ ಮತ್ತು ತಪಶ್ಶಕ್ತಿ ಪಡೆದು ರಾಕ್ಷಸರನ್ನು ಕೊಂದು ವಿಖ್ಯಾತರಾಗುತ್ತಾರೆ. ಮುಂದಿನ ರಾವಣ ವಧೆಗೆ ಆತ್ಮವಿಶ್ವಾಸದ ಚಿಗುರು ಪಲ್ಲವಿಸಿದ್ದು ಇಲ್ಲಿಯೇ. ಇದು ಒಂದು ಉದಾಹರಣೆ. ಹಿರಿಯರ ಬಹುಮುಖ್ಯ ಗುಣ ಕಿರಿಯರ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸುವುದು.
*ತಾನು ಶಸ್ತ್ರ ಹಿಡಿದು ಯುದ್ಧ ಮಾಡದಿದ್ದರೂ ಕೃಷ್ಣ ಕುರುಕ್ಷೇತ್ರದಲ್ಲಿ ಪಾಂಡವರ ಪರ ಧರ್ಮಯುದ್ಧಕ್ಕೆ ಸಲಹೆ ಸೂಚನೆ ಕೊಡುತ್ತಾ ಗೆಲ್ಲಿಸಿದ್ದು ಪುರಾಣ. ಇದೂ ಒಂದು ಉದಾಹರಣೆ. ಹಿರಿಯರಾದವರು ನೇರವಾಗಿ ಕಾರ್ಯಕ್ಷೇತ್ರಕ್ಕೆ ಧುಮುಕಲಾಗ ದಿದ್ದರೂ ತಮ್ಮ ಬದುಕು ಕಲಿಸಿದ ಪಾಠ ಮತ್ತು ಅನುಭವವನ್ನು ಕಿರಿಯರು ನಡೆವ ಹಾದಿಯ ಮುಳ್ಳನ್ನು ಕಿತ್ತು ಸುಗಮ ಮಾಡಲು ಬಳಸಬಹುದು.
ಯಾವಾಗ ಎಲ್ಲಿ ಹೇಗೆ ಮಾತನಾಡಬೇಕು, ಯಾವಾಗ ಮಾತನಾಡಬಾರದು ಎಂಬ ಅರಿವು ಸಾಮಾನ್ಯವಾಗಿ ಹಿರಿಯರಿಗೆ ಅನುಭವ ವೇದ್ಯ. ಕೆಲವೊಮ್ಮೆ ಕೇಳಿದಾಗ ಮಾತ್ರ ಉಪದೇಶ ಮಾಡಬೇಕು. ಮತ್ತೆ ಕೆಲವೊಮ್ಮೆ ಕೇಳದೆಯೂ ತಿಳಿಸಬೇಕು. ಅಂಥ ಸೂಕ್ಷ್ಮತೆ ಯನ್ನು ಹಿರಿಯರಾದವರು ಕಿರಿಯರಿಗೆ ಕಲಿಸಬೇಕು.
ವೃದ್ಧಾಪ್ಯಕ್ಕೂ ನೋವಿದೆ
ವೃದ್ಧಾಪ್ಯದಲ್ಲಿ ದೇಹದ ಕಸುವು ಕಡಿಮೆ. ಜತೆಗೆ ವಯೋಸಹಜ ನೋವುಗಳು, ಖಾಯಿಲೆಗಳು. ತಮ್ಮ ಎಲ್ಲ ಕೆಲಸಗಳನ್ನು ತಮಗೆ ತಾವೇ ಮಾಡಿಕೊಳ್ಳಲು ಶಕ್ತಿಯ ಕೊರತೆ ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಅವಲಂಬನೆ ಸಹಜ. ಆದರೆ ಪರಾವಲಂಬನೆ ತರುವ ಮಾನಸಿಕ ಹಿಂಸೆ ಅತೀವ. ಆರ್ಥಿಕಾವಲಂಬನೆ ಮತ್ತಷ್ಟು ಘೋರ. ಎಲ್ಲ ಮಕ್ಕಳೂ ಒಂದೇ ಸಮನಲ್ಲ. ಪ್ರೀತಿ, ಸ್ನೇಹ, ಅನುಕಂಪ ಸಹಾನುಭೂತಿಗಳಿಂದ ನೋಡಿಕೊಳ್ಳುವ ಮಕ್ಕಳಿದ್ದರೆ ವೃದ್ಧಾಪ್ಯ ಅಷ್ಟೇನೂ ಅಸಹನೀಯವಲ್ಲ. ಆದರೆ ಈ ಮುದುಕರು ಇನ್ನೂ ಎಷ್ಟು ದಿನ ಬದುಕುತ್ತಾರೋ, ಇನ್ನೂ ನಾವು ಎಷ್ಟು ಸೇವೆ ಮಾಡಬೇಕೋ ನಿಮಗೇನು ಗೊತ್ತಾಗುತ್ತೆ, ಸುಮ್ಮನೆ ಕೂತ್ಕೊಳಿ ಎಂದು ಮುಖದ ಮುಂದೆಯೇ ಹೀಗಳೆವವರೆದುರು ವೃದ್ಧರು ಮತ್ತಷ್ಟು ಕುಗ್ಗಿ ಹೋಗುತ್ತಾರೆ.
ತಮಗೂ ಮುಂದೊಂದು ದಿನ ವೃದ್ಧಾಪ್ಯ ಬರುತ್ತದೆ ಎನ್ನುವುದನ್ನು ಮರೆತ ಮಕ್ಕಳು, ಕಿರಿಯರು ಮುದಿತನದ ಮತ್ತು ಅಶಕ್ತತೆಯ ಕುರಿತಾಗಿ ಕೀಳಾಗಿ ಮಾತನಾಡುವುದು ಸರ್ವಥಾ ಸಮ್ಮತವಲ್ಲ. ಮಾನಸಿಕವಾಗಿ ಆಸರೆಯಿರದ ವೃದ್ಧಾಪ್ಯ ನಿಜಕ್ಕೂ ಕಷ್ಟಕರ. ಆದರೆ ತಮ್ಮ ಬದುಕು ಎರೆದ ಅನುಭವದಿಂದಾಗಿ ಮಾನಸಿಕವಾಗಿ ತಮಗೆ ತಾವೇ ಎನರ್ಜಿ ಬೂಸ್ಟರ್ ಆಗಿ ಫೀನಿಕ್ಸ್‌ಗಳಾಗುವ
ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಭವಿಷ್ಯದ ದುಃಖ ಇಂದಿನ ಸುಖವನ್ನು ಕಸಿಯುತ್ತದೆ.
ನಾವು ಇಂದನ್ನು ಬದುಕಬೇಕು. ವೃದ್ಧಾಪ್ಯ ಬಂದಾಗ ಕುಸಿ ಯದೆ ಏಳುವ ಮನೋಸ್ಥೈರ್ಯವನ್ನು ವೃದ್ಧಿಸಿಕೊಳ್ಳಬೇಕು. ವೃದ್ಧತೆ ಎನ್ನುವುದು ವೃದ್ಧಿಯ ಮತ್ತೊಂದು ರೂಪವೆಂಬ ಧನಾತ್ಮಕ ಭಾವನೆ ವೃದ್ಧಾಪ್ಯ ತಾಳಿದರೆ ಬದುಕು ಸಹನೀಯವಾಗುತ್ತದೆ.
ತೊಂಬತ್ತು ವರ್ಷದ ವೃದ್ಧ ವೈದ್ಯರೊಬ್ಬರು ರೇವಣಿ ಇಡಲು ನಮ್ಮ ಬ್ಯಾಂಕಿಗೆ ಬಂದಿದ್ದರು. ಎಷ್ಟು ವರ್ಷಕ್ಕೆ ಎಫ್.ಡಿ. ಮಾಡ ಬೇಕು ಎಂದು ಕೇಳಿದೆ. ಐದು ವರ್ಷಕ್ಕಿಡಿ ಎಂದರು. ಸಾಮಾನ್ಯವಾಗಿ ಹಿರಿಯರು ಒಂದು ವರ್ಷಕ್ಕೆ ಎನ್ನುತ್ತಾರೆ. ಅವರ ಮುಖ ವನ್ನು ನೋಡಿದೆ. ಅತ್ಯಂತ ಸೌಮ್ಯ ಕಳೆಯ ಹಸನ್ಮುಖಿ ವೃದ್ಧರು ನಾನು ಇನ್ನೂ ಐದು ವರ್ಷ ಬದುಕುತ್ತೇನೆ. ನನಗೆ ಭರವಸೆ ಇದೆ. ಅಲ್ಲಿಯ ತನಕ ನಾನು ಜನರ ಆರೋಗ್ಯ ಸೇವೆ ಮಾಡುತ್ತೇನೆ ಎಂದರು. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ, ಖಿನ್ನತೆಯಿಂದ ನರಳಿ ಸಮಾಜಕ್ಕೆ ಶಾಪವಾಗುವ ಮಂದಿ ಇಂಥವರನ್ನು ನೋಡಿ ಕಲಿಯಬೇಕೆನಿಸಿತು.
ಆತ್ಮವಿಶ್ವಾಸ, ನಂಬಿಕೆಗಳೇ ಬದುಕಿಗೆ ಊರಿಗೋಲು. ಪ್ರತಿ ಹಂತವೂ ಹೊಸತೇ ಹತ್ತು ವರ್ಷ, ಹದಿನಾರು, ಇಪ್ಪತ್ತು, ಮುವ್ವತ್ತು, ಐವತ್ತು, ಅರವತ್ತು, ಎಪ್ಪತ್ತು, ಎಂಬತ್ತು ಎಂಬುವುಗಳು ದೇಹದ ವಯಸ್ಸಿನ ಅಳತೆಗೋಲು. ಮನಸ್ಸಿನ ಮಾಪನವಲ್ಲ.
ಪ್ರತಿ ಹಂತವೂ ಅದು ಹೊಸತೇ
ಈ ಹಂತವನ್ನು ನಾನು ಇದೇ ಮೊದಲ ಬಾರಿ ಅನುಭವಿಸುತ್ತಿರುವುದು ಎಂದುಕೊಂಡರೆ ಅಚ್ಚರಿಯ ಕಣ್ಣನ್ನು ತೆರೆದು ಬದುಕ ಬಹುದು. ಇದೂ ಒಂಥರಾ ಚಂದವೇ ಎಂದುಕೊಂಡು ಅನುಭವಿಸಿದರೆ ಬಾಳು ಮತ್ತೂ ಹಸನು. ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವೇಂದ್ರಿಯ ಪ್ರತಿತಿಷ್ಠತಿ ಎಂದು ಶತಶತಮಾನಗಳಿಂದ ಆಶೀರ್ವಚನವನ್ನು ನೀಡುವುದು ಕೆಡುಕಾಗಲೆಂದೇ? ನೂರು ವರ್ಷ ಆಯುಷ್ಯ ನಿನಗೆ ನಿನ್ನೇ ನೆನೀತಿದ್ದೆ ಎನ್ನುವ ಹಾರೈಕೆಗಳು ಪೊಳ್ಳೂ ಆಶಯವೇ? ಅವು ಒಳಿತಲ್ಲದಿದ್ದರೆ ಹಾಗೆ ಹಾರೈಸುತ್ತಿದ್ದರೇ? ಇದರರ್ಥ ವಯೋವೃದ್ಧತೆ ಬಹೂಪಯೋಗಿ.
ಜ್ಯೇಷ್ಠ ಶ್ರೇಷ್ಠ ಆಗಬೇಕು, ಅದಕ್ಕೆ ಜ್ಯೇಷ್ಠರು ಕಿರಿಯರಿಗೆ ಸಾಮಾಜಿಕ ಜವಾಬ್ದಾರಿ ಮತ್ತು ವೈಯಕ್ತಿಕ ಜವಾಬ್ದಾರಿಗಳ ಬಗೆಗೆ ಅರಿವನ್ನು ಮೂಡಿಸಬೇಕು. ಸಾಮೂಹಿಕ ನಂಬಿಕೆ ಮತ್ತು ವೈಯಕ್ತಿಕ ನಂಬಿಕೆಗಳ ನಡುವಿನ ವ್ಯತ್ಯಾಸದ ಸೂಕ್ಷ್ಮತೆಯನ್ನು ಕಲಿಸಬೇಕು. ಕಳೆ ಕಿತ್ತು, ಊನ ತೆಗೆದು ಪರಿಪೂರ್ಣತೆಯತ್ತ ಕರೆದೊಯ್ಯುವ ಜವಾಬ್ದಾರಿ ವೃದ್ಧಾಪ್ಯಕ್ಕಿದೆ. ಸರ್ವಜ್ಞ ಅಂದಂತೆ ಹಸಿದವರಿಗೆ ಅನ್ನವನಿಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆಯುವುದನ್ನು ಹಿರಿಯರು ತಾವು ನಡೆದು ತೋರಿಸಬೇಕು.
ವೃದ್ಧಾಪ್ಯದ ಸಾರ್ಥಕತೆ
ವಯಸ್ಸು ಯಾರನ್ನು ಕೇಳಿಯೂ ಆವರಿಸಿಕೊಳ್ಳುವುದಿಲ್ಲ. ಹುಟ್ಟಿದಂದಿನಿಂದ ಪ್ರತಿದಿನವೂ ಹೊಸ ದಿನ, ಹೊಸ ಬದುಕು,
ಹೊಸ ವಯಸ್ಸು, ಹೊಸ ಆಯುಷ್ಯ. ‘ನಿದ್ದೆೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ’ ಎಂದುಕೊಳ್ಳುವುದೇ ಬದುಕಿಗೆ ಚೈತ್ಯನ್ಯ.
ವೃದ್ಧಾಪ್ಯ ಶಾಪವಲ್ಲ. ಅದು ಬೆಳಗು ದೀಪ. ಆರುವ ತನಕ ಕತ್ತಲ ಹೊಡೆದೋಡಿಸಬಲ್ಲ ಶಕ್ತಿ. ಬೆಳಕನ್ನು ನೀಡಬೇಕೆನ್ನುವ
ಆತ್ಮಬಲ ಹಿರಿಯರಿಗಿರಬೇಕಷ್ಟೇ. ಬಾಲ್ಯದಲ್ಲಿ ಮೊದಲು ಬರೀ ಮಲಗು, ಮತ್ತೆ ಅಂಬೆಗಾಲು, ನಿಧಾನ ನಡಿಗೆ, ಓಟ. ಹರಯದಲ್ಲಿ ಓಡುತ್ತಿದ್ದ ನಾವು ಕಾಲಕ್ರಮೇಣ ನಲವತ್ತರ ಆಸುಪಾಸಿನಲ್ಲಿ ನಡೆಯುತ್ತೇವೆ.
ಅರವತ್ತರ ಆಸುಪಾಸಿನಲ್ಲಿ ನಿಧಾನಗತಿಯ ನಡಿಗೆ, ಎಪ್ಪತ್ತು ಎಂಬತ್ತರ ಹೊತ್ತಿಗೆ ಕುಂಟು ನಡಿಗೆ. ಮತ್ತೂ ಆಯುಷ್ಯವಿದ್ದರೆ
ಅಂಬೆಗಾಲಿನಂಥ ನಡೆ ಮತ್ತು ಮಲಗಿದಲ್ಲೇ. ವೃದ್ಧಾಪ್ಯ ಮತ್ತೆ ಬಾಲ್ಯಕ್ಕೆ ಮರಳಿಸುತ್ತದೆ. ವೃದ್ಧಾಪದಲ್ಲಿ ಬಾಲ್ಯದ ಮುಗ್ಧತೆ
ಮಾತ್ರ ಮರಳುವುದಿಲ್ಲ. ಕಾರಣ ಬುದ್ಧಿ ಮತ್ತು ಮನಸ್ಸು. ಜೀವನವಿಡೀ ಕಲಿತದ್ದನ್ನು ಮಸ್ತಕ ಉಳಿಸಿಕೊಂಡಿರುತ್ತದೆ. ಆ ಪಾಠ ವನ್ನು ಕಿರಿಯರ ಶ್ರೇಯೋಭಿವೃದ್ಧಿಗೆ ಬಳಸಬೇಕಾದುದೇ ವೃದ್ಧಾಪ್ಯದ ಸಾರ್ಥ್ಯಕ್ಯ.
Seed is the potential tree. ಆ ಅಗಾಧ ಶಕ್ತಿಯನ್ನು ಅರ್ಥಮಾಡಿಸುವ ಹೊಣೆ ಹಿರಿಯರದ್ದು. ತಾಯ್ತಂದೆ ಗುರುಹಿರಿಯರು ಬೇರಿನ ಥರ. ಅವರು ಮಕ್ಕಳಿಗೆ, ಕಿರಿಯರಿಗೆ ಉತ್ತಮ ಸಂಸ್ಕಾರವನ್ನು ಊಡಿ ಗಿಡ ಮರವಾಗಿ ಊರಿ ನಾಲ್ಕಾರು ಜನರಿಗೆ ಉಪಯೋಗುವ ಹಾಗೆ ಮಾಡುವ ಜವಾಬ್ದಾರಿ ಇದೆ. ಅದನ್ನು ಮರೆತು ಹಾದಿತಪ್ಪುವವರನ್ನು ನೋಡಿಯೂ ನಮಗೇನಾಗಬೇಕು ಎಂದು ಮೌನವಾಗಿ ಕುಳಿತರೆ ನಾವು ಸಮಾಜದಿಂದ ಪಡೆದದ್ದನ್ನು ಮತ್ತೆ ಮರಳಿ ಸಮಾಜಕ್ಕೆ ಕೊಟ್ಟು ಋಣ ತೀರಿಸುವುದು ಅಸಾಧ್ಯ.
ಅನುಕರಣೆ ಸಹಜ ಮತ್ತು ಸುಲಭ. ಮಕ್ಕಳು ಅನುಕರಣೆಯ ಗೊಂಬೆಗಳು. ಕಿರಿಯರು ಕೇಳುವುದಕ್ಕಿಂತ ನೋಡಿ ಕಲಿಯುತ್ತಾರೆ. ಹಿರಿಯರು ಆದರ್ಶಗಳ ಉಪದೇಶ ಮಾಡುವ ಬದಲು ತಾವೇ ಆದರ್ಶವಾಗಿ ಬದುಕಬೇಕು. ದೇಹದಲ್ಲಿ ಉಸಿರಿರುವುದು ಬದುಕಲ್ಲ. ಹೃದಯದಲ್ಲಿ ಸಂತೋಷ, ಶಾಂತಿ ಇಲ್ಲದಿದ್ದರೆ ಅದೇ ಮೃತ್ಯು. ಬದುಕಿರುವಾಗಲೇ ಸಾಯಬಾರದು-ಸತ್ತಂತಿರಬಾರದು;
ಸಾಯುವ ತನಕ ಬದುಕಿರಬೇಕು-ಜೀವಂತಿಕೆಯಿರಬೇಕು. ಹಣತೆ ಹಳತಾದರೂ ಅದರ ಜ್ಯೋತಿಗೆ ಮುಕ್ಕಿಲ್ಲ. ವೃದ್ಧಾಪ್ಯ ಶಾಪವಲ್ಲ , ಅದು ಹಣತೆ ಬೆಳಕು.
ಆತ್ಮವಿಶ್ವಾಸವೇ ಊರುಗೋಲು
ವೃದ್ಧರಲ್ಲಿ ಬಲ ಇಲ್ಲವೆಂದುಕೊಂಡರೆ ಬದುಕು ನಿಷ್ಫಲವಾಗುತ್ತದೆ. ದೈಹಿಕ ಬಲ ಇಲ್ಲದಿರೇನು? ಮನೋಬಲ ಇದ್ದರೆ ಸಾಕು. ಸಾಧಿಸಿದರೂ, ಸಾಧಿಸದಿದ್ದರೂ, ಉಪಯೋಗಿಸಿದರೂ, ನಿರುಪಯೋಗವಾದರೂ ಸಾವು ಎಲ್ಲರಿಗೂ ನಿಶ್ಚಿತ. ವಸಂತದಲ್ಲಿ ಚಿಗುರುವ ಎಲೆಗಳು ಶಿಶಿರದಲ್ಲಿ ಉದುರುವುದು ಪ್ರಕೃತಿ ನಿಯಮ. ಹಾಗೆಯೇ ಮಾನವನ ಬದುಕೂ. ಉದುರುವ ಮುನ್ನ ಚಿಗುರುಗಳಿಗೆ ನಗುವ ಶಕ್ತಿಯನ್ನು ಧಾರೆಯೆರೆಯಬೇಕು.
ಬೇರುಗಳನ್ನು ಗಟ್ಟಿ ಮಾಡುವ ಮತ್ತು ಹೊಸತಕ್ಕೆ ಶಕ್ತಿ ನೀಡುವ ಕೆಲಸ ಹಳತರದ್ದೇ. ಅದನ್ನು ಹಳತು ಮರೆಯಬಾರದು. ಅಧಿಕಾರ ಸಂಪತ್ತಲ್ಲ; ಕರ್ತವ್ಯ ಸಂಪತ್ತು ಎನ್ನುವ ಸಂಸ್ಕಾರವನ್ನೂ; ಉತ್ತುಂಗದಲ್ಲಿದ್ದಾಗ, ಅಧಿಕಾರದಲ್ಲಿದ್ದಾಗ ಮಾನವತೆ ಯನ್ನು ಮರೆಯದ ಅಂತಃಕರಣವನ್ನೂ ಹಿರಿಯರು ಮಕ್ಕಳಿಗೆ ಕಲಿಸಬೇಕು.