Thursday, 12th December 2024

ಓಂಕಾರ ಎಂಬ ವಾಹನ

ಕುಮಾರ್ ಕೆ.ಎಸ್.

ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮನನ್ನು ಪರಂಧಾಮವೆಂಬುದಾಗಿ ಸಂಬೋಧಿಸಲ್ಪಟ್ಟಿದೆ. ಶ್ರೀ ಕೃಷ್ಣನು ಜಗದ್ಗುರು. ಮೂಲನೆಲೆಯಾದ ಮನೆಗೆ ದಾರಿ ತೋರಬಲ್ಲವನಾಗಿದ್ದಾನೆ

ಇಂದು ಜಗತ್ತಿನಾದ್ಯಂತ ಕರೋನಾದಿಂದ ಜೀವರಾಶಿ ಜೀವಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂಕಷ್ಟ ಪರಿಸ್ಥಿತಿ  ಎದುರಾಗಿದೆ. ಕರೋನಾ ಹರಡುವಿಕೆಯನ್ನು ತಡೆಗಟ್ಟಲು ಇರುವ ಏಕೈಕ ಪರಿಹಾರೋಪಾಯ ಮನೆಯಲ್ಲೇ ಇರುವುದು. ಮನೆಯಲ್ಲಿರಿ ಕ್ಷೇಮವಾಗಿರಿ ಸ್ಟೇ ಹೋಮ್ ಸ್ಟೇ ಸೇಸ್ ಎಂಬ ಘೋಷಣೆ ಎಲ್ಲರಿಗೂ ಚಿರಪರಿಚಿತವೇ ಆಗಿದೆ. ಕೊರೊನಾ ಭಾರತೀಯ ಸಂಸ್ಕೃತಿಯ ‘ಕರೋ ನಮಸ್ತೇ’ಯನ್ನು ಕಲಿಸಿದೆ.

ಮನೆಯಲ್ಲಿರುವುದರಿಂದ ಕರೋನಾ ಹರಡುವುದನ್ನು ತಡೆಯಬಹುದು, ಆದರೆ ಭಾರತೀಯ ಜ್ಞಾನಿಗಳ ಮತ್ತು ಮಹರ್ಷಿಗಳ ಜೀವನದ ಆಮೂಲಾಗ್ರ ದೃಷ್ಟಿಯ ಪ್ರಕಾರ ಜೀವಿಗಳು ಪರಮಾತ್ಮನೆಲೆಯಿಂದ ವಿಕಾಸವಾಗಿ ಕರ್ಮಾನುಸಾರ ಪ್ರಾಪಂಚಿಕ
ಸಂಸಾರ ತಾಪತ್ರಯದಲ್ಲಿ ಸಿಲುಕಿರುತ್ತವೆ. ಇದರ ಪರಿಣಾಮ ನಾವುಗಳು ನಮ್ಮ ಸ್ವಂತ ಮನೆಯಾದ ಪರಮಾತ್ಮನ ನೆಲೆಯಿಂದ ದೂರ ಸಾಗಿ ಸ್ವಂತ ಮನೆಯನ್ನು ಮರೆತಿದ್ದೇವೆ. ಹಿಂತಿರುಗಿ ಪರಮಾತ್ಮನ ನೆಲೆಯನ್ನು ತಲುಪುವುದೇ ಜೀವನದ ಗುರಿಯಾಗಿದೆ. ಆ ಮೂಲನೆಲೆಯು ನಮ್ಮೆಲ್ಲರ ತಾಪತ್ರಯಗಳನ್ನು, ಅಂದರೆ ಆಧ್ಯಾತ್ಮಿಕ, ಆದಿ ದೈವಿಕ ಮತ್ತು ಆದಿ ಭೌತಿಕ ದುಃಖಗಳನ್ನು ಹೋಗಲಾಡಿಸಿ, ಪರಮ ಶಾಂತಿ ನೆಮ್ಮದಿಯನ್ನು ಕೊಡುವ ನಮ್ಮ ಮನೆಯಾಗಿದೆ.

ಕರಗಳ ಶುದ್ಧಿ ಕರೋನಾವನ್ನು ಸೋಂಕನ್ನು ತಡೆಯುತ್ತದೆ. ಕರಣಗಳ ಶುದ್ಧಿ ಅಥವಾ ಇಂದ್ರಿಯಗಳು ಲಾಕ್‌ಡೌನ್ ಆದಾಗ ಪರಮಾತ್ಮನೆಲೆಗೆ ತಲುಪಿಸುವ ಮಾರ್ಗವು ಗೋಚರಿಸುತ್ತದೆ. ಅದನ್ನು ಅನುಸರಿಸಿ ಮೂಲ ನೆಲೆ ತಲುಪಿದಾಗ ಸ್ವಸ್ಥಜೀವನ
ನಮ್ಮದಾಗುತ್ತದೆ. ಮಹಾಗುರುಗಳ ಅಮೃತ ವಚನದಂತೆ ‘ಸಂತೆ ವ್ಯಾಪಾರ’ಕ್ಕೆ ಬಂದಿರುವುದು ಸರಿಯೇ, ಹಾಗೆಂದು ವ್ಯಾಪಾರ ದಲ್ಲಿ ನಿರುತ್ಸಾಹ ಪಡಬೇಕಾಗಿಲ್ಲ.

ಆದರೆ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ ಸೇರಬೇಕಾದ್ದನ್ನು ಮಾತ್ರ ಮರೆಯಬಾರದು. ಮರೆವು ಎಂಬುದು ಅಜ್ಞಾನ. ಅದು ಕಳೆದಾಗ ಜ್ಞಾನ ಉಂಟಾಗುತ್ತದೆ.ಆಗ ನಮ್ಮನೆ ಅಡ್ರೆಸ್ ಅಡ್ಡರಸ್ತೆಯಲ್ಲಿಲ್ಲ, ದೊಡ್ಡರಸ್ತೆೆಯಲ್ಲಿದೆ ಎಂದು ತಿಳಿಯುತ್ತದೆ. ಆಗ
ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮನೆ ಎಂಬ ತಿಳುವಳಿಕೆ ಮೂಡುತ್ತದೆ. ಈ ದೇಹ ಒಂದು ಬಾಡಿಗೆ ಮನೆ, ಅಲ್ಲಿರುವುದು ಪರಮನೆಂಟನಾದ ಪರಮಾತ್ಮನ ನಮ್ಮ ಪರ್ಮನೆಂಟ್ ಮನೆ ಎಂಬ ಅರಿವು ಉಂಟಾಗುತ್ತದೆ.

ಕನಕದಾಸರು ಹೇಳಿರುವಂತೆ- ಊರು ತನಗೊಂದಿಲ್ಲ ಹೊತ್ತ ಶರೀರಗಳ ಮಿತಿಯಿಲ್ಲ ಸಂಚರಿಸದ ಸ್ಥಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ ಉಣದ ಆಹಾರ ವಸ್ತುಗಳಿಲ್ಲ ತನು ಸಂಚಾರ ಈ ಬಗೆಯಾಯ್ತು ರಕ್ಷಿಸು ನಮ್ಮನನವರತ ಹಾಗಾಗಿ ಪರಮಾತ್ಮನೇ ನಮಗೆಲ್ಲರಿಗೂ ಗಮ್ಯಸ್ಥಾನವಾದ ಮನೆ. ಅದೇ ನಮ್ಮ ಗೂಡು, ಬೀಡು, ವೀಡು (ಮೋಕ್ಷ). ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮ ನನ್ನು ಪರಂಧಾಮವೆಂಬುದಾಗಿ ಸಂಬೋಧಿಸಲ್ಪಟ್ಟಿದೆ.

ಶ್ರೀ ಕೃಷ್ಣನು ಜಗದ್ಗುರು. ಮೂಲನೆಲೆಯಾದ ಮನೆಗೆ ದಾರಿ ತೋರಬಲ್ಲವನಾಗಿದ್ದಾನೆ. ಗುರುವಿನ ಮಾರ್ಗದರ್ಶನವಿಲ್ಲದೇ ಅಲ್ಲಿಗೆ
ತಲುಪುವುದು ಅಸಾಧ್ಯ, ಕಾರಣ, ಆ ಮಾರ್ಗವು ಕ್ಷುರಸ್ಯಧಾರಾ-ಕತ್ತಿಯ ಅಲುಗಿನ ಮೇಲೆ ನಡೆಯುವ ಹಾಗಿದೆ. ಆದ್ದರಿಂದ ಗುರುವಿನ ಮಾರ್ಗದರ್ಶನವನ್ನು ಅನುಸರಿಸಿ ಗುರಿ ತಲುಪಬಹುದಾಗಿದೆ. ಅದಕ್ಕೆ ವಾಹನ ಯಾವುದು ಎಂದಾಗ ರಂಗಪ್ರಿಯ
ಮಹಾಸ್ವಾಮಿಗಳ ಒಂದು ಘಟನೆ ನೆನಪಿಗೆ ಬರುತ್ತದೆ.

ಗುರಿ ತಲುಪಿಸುವ ಈ ಕಾರ್
ಸ್ವಾಮಿಗಳನ್ನು ಒಬ್ಬರು ಕೇಳಿದರಂತೆ- ‘ನೀವು ಇಷ್ಟು ಪ್ರಸಿದ್ಧರಾದವರು. ನಿಮ್ಮ ಬಳಿ ಓಡಾಡಲು ಕಾರ್ ಇಲ್ವೆ’ ಎಂದು. ಅದಕ್ಕೆ ತಕ್ಷಣ ಸ್ವಾಮಿಗಳು ‘ಕಾರ್ ಇದೆ’ ಎಂದರು. ಅದಕ್ಕೆ ಪ್ರಶ್ನೆ ಕೇಳಿದವರು ‘ಯಾವುದು ಕಾರ್’ ಎಂದರು. ಅದಕ್ಕೆ ಸ್ವಾಮಿಗಳು ‘ಓಂಕಾರ್’ ಎಂದರು. ಅಂದರೆ ಪ್ರಣವವೇ ನಮ್ಮನ್ನು ನಮ್ಮ ಮನೆಗೆ ಸೇರಿಸುವ ಕಾರ್. ಗುರುವಿನ ಮಾರ್ಗದರ್ಶನ ಪಡೆದು ಓಂಕಾರ್‌ನ ಸಹಾಯದಿಂದ ಮನುಷ್ಯನ ಜೀವನದ ಗುರಿ ತಲುಪೋಣ.