Saturday, 14th December 2024

ಈ ಐದು ಸಂಸ್ಥೆಗಳ ಒಡೆಯ ಒಬ್ಬನೇ !

ಚೀನಾದ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಸರು ಮಾಡಿರುವ ಕೆಲವು ಮಾದರಿಗಳು ಒಂದೇ ಸಂಸ್ಥೆೆಯ ಒಡೆತನದಲ್ಲಿದೆ ಮಾತ್ರವಲ್ಲ, ಅವು ಪರಸ್ಪರ ಸ್ಪರ್ಧೆಗೆ ಇಳಿದು, ತಮ್ಮಲ್ಲೇ ಪೈಪೋಟಿ ಇರುವುದನ್ನು ಬಿಂಬಿಸಿದರೂ, ಅವುಗಳಲ್ಲಿ ಯಾವುದನ್ನು  ಖರೀದಿಸಿ ದರೂ, ಲಾಭ ಒಂದೇ ಮಾತೃ ಸಂಸ್ಥೆಗೆ! ಯಾವುದು ಆ ಮಾತೃ ಸಂಸ್ಥೆ? ಓದಿ ನೋಡಿ.

ದೇಶದಲ್ಲಿ, ಅಷ್ಟೇ ಏಕೆ, ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿರುವ ಕೆಲವೇ ಕೆಲವು ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಗಳ ಹೆಸರು ಹೇಳುತ್ತಾ ಸಾಗಿದರೆ, ಇವು ಇದೇ ಕಂಪೆನಿಯದು ಎನ್ನುವುದು ನಮಗೆಲ್ಲಾ ಸಹಜವಾಗಿಯೇ ತಿಳಿದಿರುತ್ತದೆ.

ಐಫೋನ್ ಅಂದಾಗ ಅದು ತನ್ನದೆಂದು ಆಪಲ್ ಘಂಟಾಘೋವಾಗಿ ಹೇಳಿಕೊಳ್ಳುತ್ತದೆ. ಇನ್ನು ಸ್ಯಾಮ್‌ಸಂಗ್‌ನ ಸಾಲು ಸಾಲು ಗ್ಯಾಲಕ್ಸಿ ಸರಣಿಯ ಫೋನ್‌ಗಳು, ಹುವಾವೇಯ ಫೋನ್‌ಗಳು, ಹೀಗೆ ಕಂಪೆನಿಗಳ ಹೆಸರಿನಡಿಯಲ್ಲಿ ಬೇರೆ ಬೇರೆ ಫೋನ್‌ಗಳು ಇರುವುದು ಸಹಜವೇ ಬಿಡಿ.

ಆದರೆ ಚೀನಾದ ಈ ಕಂಪೆನಿಯ ಫೋನ್‌ಗಳು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತಯಾರಾಗುವುದೂ ಅಲ್ಲದೇ, ಅವುಗಳೇ ಒಂದಕ್ಕೊಂದು ಕಾಂಪಿಟೀಶನ್ ಕೊಟ್ಟುಕೊಂಡು ತಮ್ಮೊಳಗೇ ಯಾರು ನಂಬರ್ ವನ್ ಆಗುತ್ತಾರೆ ಎನ್ನುವ ಕಾದಾಟಕ್ಕೇ
ಇಳಿಯುವುದು ನೋಡಿದರೆ ಇವೆಲ್ಲಕ್ಕೂ ಒಂದೇ ಒಡೆಯ ಅನ್ನುವುದನ್ನು ನಾವು ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲ.

ಬಿಬಿಕೆ ಎಲೆಕ್ಟ್ರಾನಿಕ್ಸ್‌. ಹೆಸರು ಕೇಳಿದವರು ವಿರಳ. ಆದರೆ ಓಪೋ-ವೀವೋ ನಡುವಿನ ಕಾದಾಟ ನೆನಪಿಸಿಕೊಂಡ್ರೆ, ಜೊತೆಗೆ ಪ್ರೀಮಿಯಂ ಫೋನ್‌ಗಳ ರಾಜ ತಾನಾಗಬಯಸಿ ಆ ಸ್ಥಾನವನ್ನು ಗಳಿಸಿದ ವನ್ ಪ್ಲಸ್ ಇರಬಹುದು, ಹಾಗೂ ಜತೆಗೆ ಇರುವ ಇನ್ನೊಂದು ಬ್ರ್ಯಾಂಡ್ ರಿಯಲ್ ಮಿ, ಇವೆಲ್ಲಕ್ಕೂ ಯಜಮಾನ ಈ ಬಿಬಿಕೆ ಇಲೆಕ್ಟ್ರಾನಿಕ್ಸ್‌ ಅನ್ನುವುದನ್ನು ಹೇಳಿದರೆ, ಹೌದಾ! ಅನ್ನುವ ಉದ್ಗಾರ ಬರುವುದು ಸಹಜ.

ಓಪೋದ ಆರಂಭ: 2004
ಎಂಪಿ3 ಹಾಗೂ ಡಿವಿಡಿ ಪ್ಲೇಯರ್‌ಗಳಂತಹ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವ ಉದ್ದೇಶದಿಂದ ಹುಟ್ಟಿಕೊಂಡ
ಓಪೋ ಬ್ಲೂ ರೇ ಪ್ಲೇಯರ್‌ಗಳು, ಹೆಡ್‌ಫೋನ್, ಆಂಪ್ಲಿ ಫೈಯರ್‌ಗಳನ್ನೂ ತಯಾರಿಸುತ್ತಿತ್ತು. ಆದರೆ 2008ರಲ್ಲಿ ಮೊದಲ ಬಾರಿಗೆ ಸ್ಮೈಲ್ ಅನ್ನುವ ಮೊದಲ ಫೀಚರ್ ಫೋನನ್ನು ಬಿಡುಗಡೆ ಮಾಡಿತು. ನಂತರ 2012ರಲ್ಲಿ ಮೊದಲ ಸ್ಮಾರ್ಟ್‌ಫೋನ್ ತಯಾರಿಸಿ ಮಾರಾಟ ಮಾಡಿದ ಈ ಕಂಪೆನಿ ಇದೀಗ ಭಾರತ, ಚೀನಾದಂತಹ ದೇಶಗಳಲ್ಲಿ ಉತ್ತಮ ಮಾರುಕಟ್ಟೆಯನ್ನು ಹೊಂದಿದ್ದು ಉನ್ನತ ಸ್ಥಾನದಲ್ಲಿದೆ.

ವೀವೋದ ಹುಟ್ಟು 2009
ಹಾಗೆ ನೋಡಿದರೆ ಎಲ್ಲರಿಗೂ ಓಪೋ ಹಾಗೂ ವೀವೋ ಅಣ್ಣ ತಮ್ಮ ನಡೆಸುವ ಕಂಪೆನಿಗಳೆಂದೋ, ಒಂದಕ್ಕೊಂದು ಆಗದೇ ಇರುವ ರೀತಿ ಸ್ಪರ್ಧೆಯಲ್ಲಿದ್ದಾರೆಂದೋ ಈ ಹಿಂದೆ ಕೇಳಿದ ನೆನಪಿರಬಹುದೋ ಏನೋ. ಆದರೆ ಇದು ಬಿಬಿಕೆ ಇಲೆಕ್ಟ್ರಾನಿಕ್ಸ್‌‌ನ ಇನ್ನೊಂದು ಅಂಗ ಸಂಸ್ಥೆಯಾಗಿ 2009ರಲ್ಲಿ ಆರಂಭವಾಗಿ ಈಗ ಬೆಳೆದು, ತನಗಿಂತ ಮೊದಲೇ ಆರಂಭ ಗೊಂಡಿದ್ದ ಓಪೋಗಿಂತ ಒಂದು ಕೈ ಮೇಲೆ, ಹಾಗೂ ಹೆಚ್ಚಿನೆಲ್ಲ ಸ್ತರಗಳಲ್ಲಿ ಓಪೋಗೇ ಸೆಡ್ಡು ಹೊಡೆಯುವ ಮಾಡೆಲ್‌ಗಳ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತ ದೊಡ್ಡ ದೊಡ್ಡ ಸ್ಪಾನ್ಸರ್‌ಶಿಪ್‌ಗಳನ್ನು ಕೊಡುತ್ತಾ ಬಂದಿದೆ.

ಸಂವಹನದ ಡಿವೈಸ್‌ಗಳನ್ನು ತಯಾರಿಸಲೆಂದೇ ಶುರುವಾದ ಈ ಬ್ರ್ಯಾಂಡ್ ಇದೀಗ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯವ್ಯಾಪ್ತಿ ಯನ್ನು ಹೊಂದಿದ್ದು ಸುಮಾರು ಹಲವೊಂದು ವಿಭಾಗಗಳಲ್ಲಿ ಮುಂಚೂಣಿಯಲ್ಲಿದ್ದರೂ 2012 ರಿಂದ ಶುರುವಾದ ಸ್ಮಾರ್ಟ್ ‌ಫೋನ್ ವ್ಯವಹಾರದಲ್ಲಿ ತನ್ನ ಹೈಫೈ ಆಡಿಯೋಗಾಗಿ ಮಾರ್ಕೆಟ್‌ನಲ್ಲಿ ಹೆಸರುವಾಸಿ.

ಹಾಗೇ ಇನ್ ಡಿಸ್‌ಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಪಾಪ್ ಅಪ್ ಕ್ಯಾಮರಾ, ಇನ್ ಸ್ಕ್ರೀನ್ ಕ್ಯಾಮರಾ, ಹೀಗೆ ಹಲವಾರು ಹೊಸತನದ ರೂವಾರಿ ಅನ್ನಬಹುದು.

ವನ್‌ಪ್ಲಸ್
ಉಳಿದ ಬಿಬಿಕೆ ಫೋನ್ ತಯಾರಕ ಸಂಸ್ಥೆಗಳಿಗೆ ಹೋಲಿಸಿದರೆ ಇದರ ಸ್ಟೈಲೇ ಬೇರೆ. ಉಳಿದವೆಲ್ಲಾ ಎಲ್ಲಾ ಸ್ತರದ ಫೋನ್‌ಗಳನ್ನು ತಯಾರಿಸುವವಾದರೆ, ವನ್ ಪ್ಲಸ್ ಮೊದಲಿನಿಂದಲೂ ಒಂದೋ ಎರಡೋ ಮಾಡೆಲ್‌ಗಳನ್ನು ವರ್ಷದಲ್ಲಿ ಲಾಂಚ್ ಮಾಡಿ ಅದನ್ನೇ ಮಾರಾಟ ಮಾಡುವ ಸ್ಟೈಲೇ‌ಗೇ ಹೆಸರುವಾಸಿ. ಇದರ ವಿಶೇಷವೆಂದರೆ ಅಮೆರಿಕದ ಪ್ರತಿಷ್ಠಿತ ಆಪಲ್ ಸಂಸ್ಥೆಯ ಐಫೋನ್‌ಗೆ ಪರ್ಯಾಯ ಎನಿಸುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ, ಜನಪ್ರಿಯಗೊಳಿಸಿದ್ದು. ಜತೆಯಲ್ಲೇ, ಈಚಿನ ವರ್ಷಗಳಲ್ಲಿ ಐಫೋನನ್ನು ಹಿಂದಿಕ್ಕಿ ಭಾರತದ ಅತ್ಯಧಿಕ ಮಾರಾಟವಾಗುವ ಪ್ರೀಮಿಯಂ ಫೋನ್ ಅನಿಸಿಕೊಳ್ಳಲು ಕಾರಣಗಳು ಹಲವಿದೆ.

ಕೈಗೆಟುಕುವ ಬೆಲೆಯಲ್ಲಿ, ಶುದ್ಧ ಆಂಡ್ರಾಯ್ಡ್‌ ಅನುಭವ ನೀಡುವ ವನ್‌ಪ್ಲಸ್ ಅನ್ನು ಬಳಸಿದವರಿಗೆ ಅದರ ವೇಗ ಹಾಗೂ
ಕಾರ್ಯಕ್ಷಮತೆ ಹಿಡಿಸಿ, ಬೇರೆ ಯಾವ ಸ್ಮಾರ್ಟ್ ಫೋನ್ ರುಚಿಸುವುದು ಕಷ್ಟ. ಆರಂಭದಲ್ಲಿ ಆಹ್ವಾನ ಪದ್ಧತಿಯಲ್ಲಿ ಮಾರಾಟ
ಶುರುವಿಟ್ಟುಕೊಂಡ ವನ್‌ಪ್ಲಸ್ ಮೊದಲಿಗೆ ಚೀನಾವನ್ನೋ ಇತರ ಏಶ್ಯಾದ ರಾಷ್ಟ್ರಗಳತ್ತವೋ ಗಮನಹರಿಸದೇ, ಅಮೆರಿಕ, ಯುಕೆ, ಭಾರತದಂತಹ ದೇಶಗಳತ್ತ ಗಮನ ಇಟ್ಟಿತು. ಓಪೋ-ವೀವೋ ಹೊರಗಿನ ಸೌಂದರ್ಯಕ್ಕೆ ಹೆಚ್ಚು ಗಮನ ಕೊಟ್ಟರೆ, ವನ್‌ಪ್ಲಸ್ ಅದರಲ್ಲೂ ಹಿಂದೆ ಬೀಳದಿದ್ದರೂ, ತನ್ನ ಸಾಫ್ಟ್‌‌ವೇರ್‌ನ ಅನುಭವಕ್ಕೇ ಗೆದ್ದು ಬೀಗಿತು.

ರಿಯಲ್‌ಮಿ 2018
ಶವೋಮಿಗೆ ಸೆಡ್ಡು ಹೊಡೆಯಲೆಂದೇ ಭಾರತದಲ್ಲಿ ಬೇರು ಬಿಟ್ಟಿರುವ ಹೊಸ ಬ್ರ್ಯಾಂಡ್ ರಿಯಲ್‌ಮಿ. ಬ್ಯಾಕ್ ಟುಬ್ಯಾಕ್ ಫೋನ್‌ಗಳನ್ನು ಲಾಂಚ್ ಮಾಡಿದ ಈ ಬ್ರ್ಯಾಂಡ್ ಬಂದ ಎರಡೇ ವರ್ಷಗಳಲ್ಲಿ ಬರೋಬ್ಬರಿ 27 ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದೂ ಅಲ್ಲದೇ 16.2 ಶೇಕಡಾ ಮಾರುಕಟ್ಟೆ ಪಾಲನ್ನೂ ಪಡೆದುಕೊಂಡಿರುವುದು ಷೌಮಿಗಷ್ಟೇ ಅಲ್ಲ, ಎಲ್ಲರಿಗೂ ಅಚ್ಚರಿಯೇ ಸರಿ.

ಯಾವುದು ಈ ಬಿಬಿಕೆ ಇಲೆಕ್ಟ್ರಾನಿಕ್ಸ್‌?
ಕಳೆದ 25 ವರ್ಷಗಳಲ್ಲಿ, ಸೊನ್ನೆಯಿಂದ ಶುರುವಾದ ಈ ಕಂಪೆನಿ ಇದೀಗ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕ ಸಂಸ್ಥೆಯಾಗಿ, ಹಲವಾರು ಬ್ರ್ಯಾಂಡ್‌ಗಳನ್ನು, ಅದರಲ್ಲೂ ಅವವೇ ವೈಯಕ್ತಿಕ ವ್ಯಕ್ತಿತ್ವಗಳನ್ನು ಹೊಂದಿರುವ ವಿಭಿನ್ನ ಬ್ರ್ಯಾಂಡ್‌ಗಳನ್ನು ಹುಟ್ಟು ಹಾಕಿರುವ ಈ ಸಂಸ್ಥೆಯ ಕಥೆಯೇ ರೋಚಕ. ಡುವಾನ್ ಯೋಂಗ್‌ಪಿಂಗ್ ಎನ್ನುವ ವ್ಯಕ್ತಿಯಿಂದ ಆರಂಭಿಸಲ್ಪಟ್ಟ ಈ ಸಂಸ್ಥೆಯ ಒಡೆಯ, ಸಾರ್ವಜನಿಕವಾಗಿ, ಮಾಧ್ಯಮದ ಮುಂದೆ ಬರುವುದು ಮಾತ್ರ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಶಾಲೆಯೊಂದರಲ್ಲಿ ಶಿಕ್ಷಕನಾಗಿ ವೃತ್ತಿಯಲ್ಲಿದ್ದ ಯೋಂಗ್‌ಪಿಂಗ್ 70 ಶೇಕಡಾ ಪಾಲನ್ನು ಹೊಂದಿರುವ ಬಿಬಿಕೆ ಇಲೆಕ್ಟ್ರಾನಿಕ್ಸ್‌ ಶುರು ಮಾಡಿದ್ದರು. ಇಂದು ಅವರ ಈ ಸಂಸ್ಥೆಯಲ್ಲಿ ಕೇವಲ 17 ಶೇಕಡಾ ಪಾಲನ್ನು ಹೊಂದಿದ್ದಾರೆ.

1995ರಲ್ಲಿ ಆರಂಭವಾದ ಈ ಸಂಸ್ಥೆಯನ್ನು ಮೊದಲ ಬಾರಿಗೆ 1999ರಲ್ಲಿ ವಿಭಾಗ ಮಾಡಲು ಶುರು ಮಾಡಿದ ಯೋಂಗ್‌ಪಿಂಗ್
ಅದಾಗಲೇ ಪ್ರತಿಯೊಂದು ವಿಭಾಗವನ್ನೂ ಪ್ರತ್ಯೇಕ ಸಂಸ್ಥೆಯಾಗಿ ಕೆಲಸ ಮಾಡುವಂತೆ ತಯಾರು ಮಾಡಿರುವುದೇ ಇದರ
ವಿಶೇಷ. ಪ್ರತಿ ಸಂಸ್ಥೆಗೂ ಅದರದೇ ಆದ ಧ್ಯೇಯೋದ್ದೇಶಗಳನ್ನು ನೀಡಿ ಅವುಗಳನ್ನು ಅವವೇ ಆಗಿ ಬೆಳೆಯುವ ರೀತಿಯಲ್ಲಿ
ಸಲಹಿರುವುದಕ್ಕೇ ಈ ರೀತಿಯ ಬೃಹತ್ ಸಂಸ್ಥೆಗಳಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ ಅನ್ನೋಣ.

ಹೊರನೋಟಕ್ಕೆ ಮಾತ್ರ ಪ್ರತಿಸ್ಪರ್ಧಿ
ಇದೊಂದು ಮಾರುಕಟ್ಟೆ ತಂತ್ರ ಎಂದೇ ಹೇಳಬಹುದು. ಒಂದೇ ಸಂಸ್ಥೆಯು ತನ್ನ ಒಡೆತನದಲ್ಲಿ ನಾಲ್ಕು ಸಹ ಸಂಸ್ಥೆಗಳನ್ನು ಆರಂಭಿಸುವುದು. ಆ ಸಹ ಸಂಸ್ಥೆಗಳು ಒಂದಕ್ಕಿಂತ ಒಂದು ಉತ್ತಮ ಎನ್ನುವ ಸ್ಮಾರ್ಟ್‌ಫೋನ್ ತಯಾರಿಸುವುದು. ಮೂರು ಸಂಸ್ಥೆಗಳು ಇಕಾನಮಿ ಮಾದರಿಯ ಸ್ಮಾರ್ಟ್‌ಫೋನ್ ತಯಾರಿಸಿದರೆ, ಒಂದು ಸಂಸ್ಥೆಯು ಅಮೆರಿಕದ ಪ್ರತಿಷ್ಠಿತ ಬ್ರಾಂಡ್‌ಗೆ ಸ್ಪರ್ಧೆ
ಒಡ್ಡುವುದು!

ಗ್ರಾಹಕರು ಅದು ಬೇಡ, ಇದು ಪರವಾಗಿಲ್ಲ ಎಂದು ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ, ಲಾಭ ಸೇರುವುದು ಒಂದೇ ಸಂಸ್ಥೆಗೆ! ಇಂತಹ ಮಾರುಕಟ್ಟೆ ತಂತ್ರವನ್ನು ಭಾರತದಲ್ಲಿ ಯಶಸ್ವಿಯಾಗಿ ಚಲಾಯಿಸಲು ಚೀನಾದವರಿಗೆ ಮಾತ್ರ ಸಾಧ್ಯವೇನೊ!

ಐಕ್ಯೂ00
ಬಿಬಿಕೆ ಸಂಸ್ಥೆಯು 2019ರಲ್ಲಿ ಐಕ್ಯೂ00 ಎಂಬ ಮೊಬೈಲ್ ಸರಣಿಯನ್ನು ಸಹ ಬಿಡುಗಡೆ ಮಾಡಿದೆ. ಹಿಂದಿ ಸಿನಿಮಾ ತಾರೆಯರ ಮೂಲಕ ಅದಕ್ಕೆ ಸಾಕಷ್ಟು ಪ್ರಚಾರ ನೀಡಿದ್ದರೂ, ಅದು ಭಾರತದಲ್ಲಿ ಇನ್ನೂ ಅಷ್ಟೊಂದು ಜನಪ್ರಿಯತೆ ಗಳಿಸಿಲ್ಲ. ಇದು ಬಿಬಿಕೆಯ ಐದನೆಯ ಪ್ರಮುಖ ಸಹಸಂಸ್ಥೆ. ಬಿಬಿಕೆಯ ಮಾರುಕಟ್ಟೆ ಸ್ಟ್ರಾಟೆಜಿಯನ್ನು ಅನುಕರಿಸಲು ಇತರ ಕೆಲವು ಸಂಸ್ಥೆಗಳು
ಪ್ರಯತ್ನಿಸಿದ್ದುಂಟು. ಈಗ ಬಿಬಿಕೆ ಸಂಸ್ಥೆಯಲ್ಲಿ ಸುಮಾರು 17000 ಉದ್ಯೋಗಿಗಳಿದ್ದು, ಚೀನಾದ ಡೋಂಗನ್ ಪ್ರಾಂತ್ಯದಲ್ಲಿ ಹತ್ತು ಹೆಕ್ಟೇರಿನಷ್ಟು ವಿಸ್ತೀರ್ಣದ ಕಾರ್ಖಾನೆಯನ್ನು ಹೊಂದಿದೆ. ಮೊಬೈಲ್ ಸರಣಿಯ ಜತೆಯಲ್ಲೇ, ಬ್ಲೂ ರೇ ಆಂಪ್ಲಿಫೈಯರ್, ಹೆಡ್‌ಫೋನ್, ಸ್ಮಾರ್ಟ್‌ವಾಚ್‌ಗಳನ್ನು ಸಹ ಇದು ತಯಾರಿಸುತ್ತದೆ.