ನಮ್ಮ ಆಹಾರದಲ್ಲಿ ಸಾಕಷ್ಟು ಬಳಕೆಯಾಗುವ ಈರುಳ್ಳಿಯು ಉತ್ತಮ ರುಚಿ ನೀಡುವುದು ಒಂದೆಡೆಯಾದರೆ, ಜತೆ ಜತೆಗೇ ಸಾಕಷ್ಟು ಔಷಧಿಯ ಗುಣಗಳನ್ನೂ ಹೊಂದಿರುವುದು ವಿಶೇಷ.
ಹಸಿ ಈರುಳ್ಳಿಯ ವಾಸನೆಯನ್ನು ಕೆಲವರಿಂದ ಸಹಿಸಲು ಅಸಾಧ್ಯ. ಆದರೆ, ಶುದ್ಧವಾದ ಈರುಳ್ಳಿಯು ನಮ್ಮ ದೇಹದ ಆರೋಗ್ಯಕ್ಕೆ ನಾನಾ ರೀತಿಯ ಕೊಡುಗೆಗಳನ್ನು ನೀಡಬಲ್ಲದು. ಈರುಳ್ಳಿಯ ಔಷಧಿಯ ಗುಣಗಳ ಕುರಿತಾಗಿ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಈ ರುಚಿಕರ ತರಕಾರಿಯು ನಮ್ಮ ದೇಹದ ಆರೋಗ್ಯ ಕಾಪಾಡಲು ಸಾಕಷ್ಟು ಕೊಡುಗೆ ನೀಡುವುದು ಪತ್ತೆಯಾಗಿದೆ.
*ಈರುಳ್ಳಿಯಲ್ಲಿ ಸಿ ಮತ್ತು ಬಿ ವಿಟಮಿನ್, ಪೊಟಾಶಿಯಂ ಮತ್ತು ಇತರ ಖನಿಜಾಂಶಗಳು ಮತ್ತು ರಸಾಯನಿಕಗಳು ಇದ್ದು, ಇದರ
ಸೇವನೆಯಿಂದ ಸಾಕಷ್ಟು ಲಾಭವಿದೆ.
*ಈರುಳ್ಳಿಯ ಸೇವನೆಯು ಹೃದಯದ ಆರೋಗ್ಯ ಕಾಪಾಡಲು ಸಹಕಾರಿ. ಕೊಲೆಸ್ಟರಾಲ್ ಮಟ್ಟದ ನಿಯಂತ್ರಣ ಮತ್ತು ರಕ್ತ ದೊತ್ತಡದ ಸಮತೋಲನ ಸಾಧಿಸಲು ಈರುಳ್ಳಿ ಸೇವನೆಯಿಂದ ಸಾಧ್ಯ.
*ಈರುಳ್ಳಿಯು ಆಂಟಿ ಆಕ್ಸಿಡೆಂಟ್‌ಗಳ ಆಗರ ಎಂದೇ ಹೇಳಲಾಗಿದೆ. ಇದರಲ್ಲಿ 25 ವಿವಿಧ ರೀತಿಯ ಆಂಟಿಆಕ್ಸಿಡೆಂಟ್‌ಗಳು ಇದ್ದು, ಇವು ಆಕ್ಸಿಡೇಶನ್ ನಿಂದ ದೇಹಕ್ಕೆ ಆಗುವ ಘಾಸಿಯನ್ನು ಕಡಿಮೆಗೊಳಿಸಬಲ್ಲವು. ವಯಸ್ಸಾಗುವ ಪ್ರಕ್ರಿಯೆ, ಮಧುಮೇಹ ಮತ್ತು ಕ್ಯಾನ್ಸರ್‌ಕಾರಕಗಳನ್ನು ಈರುಳ್ಳಿ ತಡೆಯಬಲ್ಲದು.
*ಆರಂಭಿಕ ಹಂತದ ಮಧುಮೇಹವನ್ನು ತಡೆಯುವಲ್ಲಿ ಈರುಳ್ಳಿ ಸಹಕಾರಿ ಎಂಬ ವಿಚಾರ ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
*ಮೂಳೆಗಳನ್ನು ಬಲಪಡಿಸುವಲ್ಲಿ ಈರುಳ್ಳಿಯ ಕೊಡುಗೆ ಸಾಕಷ್ಟಿದೆ. ಮುಖ್ಯವಾಗಿ ಮೆನೋಪಾಸ್ ಹಂತ ತಲುಪಿದ ಮಹಿಳೆಯರ ಮೂಳೆ ಸಾಂದ್ರತೆ ಹೆಚ್ಚಿಸುವಲ್ಲಿ ಈರುಲ್ಲಿ ಸಹಕಾರಿ ಎಂದು ಅಧ್ಯಯನಗಳು ತಿಳಿಸಿವೆ.
* ಈ ಕೋಲಿ ಮೊದಲಾದ ಅಪಾಯಕಾರಿ ಬ್ಯಾಕ್ಟೀರಿಯಾ ವಿರುದ್ಧ ಈರುಳ್ಳಿ ಪರಿಣಾಮಕಾರಿ.
*ಜೀರ್ಣಾಂಗ ವ್ಯೂಹ ಮತ್ತು ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈರುಳ್ಳಿ ಉತ್ತಮ ಕೊಡುಗೆ ನೀಡುತ್ತದೆ. ಈರುಳ್ಳಿ ಯಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ.
*ಈರುಳ್ಳಿಯನ್ನು ಸಲಾದ್ ರೂಪದಲ್ಲಿ ಸೇವಿಸಬಹುದು. ಇತರ ವ್ಯಂಜನಗಳೊಂದಿಗೆ ಈರುಳ್ಳಿಯನ್ನು ಬೆರೆಸಿ ಸೇವಿಸುವ ಕ್ರಮ ನಮ್ಮ ದೇಶದಲ್ಲಿ ರೂಢಿಯಲ್ಲಿದೆ.