Sunday, 15th December 2024

ಆನ್‌ಲೈನ್‌ ರೇಟಿಂಗ್‌ ಎಷ್ಟು ಸಾಚಾ ?

ವಸಂತ ಗ ಭಟ್‌

ಟೆಕ್‌ ಫ್ಯೂಚರ್‌

ಅಂತರ್ಜಾಲಾಧಾರಿತ ದಿನಚರಿಯ ಇಂದಿನ ಯುಗದಲ್ಲಿ, ವಸ್ತುಗಳ ಖರೀದಿಯನ್ನು ಮಾಡುವ ಮುಂಚೆ, ಅವುಗಳ ರೇಟಿಂಗ್‌ನ್ನು ಹುಡುಕುವುದು ಒಂದು ಗಂಭೀರ ಹವ್ಯಾಸ ಎನಿಸಿದೆ. ವಿವಿಧ ಜಾಲತಾಣಗಳಲ್ಲಿ ಲಭ್ಯವಿರುವ ರೇಟಿಂಗ್‌ನ್ನು ನೋಡಿಯೇ ವಸ್ತುಗಳನ್ನು ಬಹಳಷ್ಟು ಜನರು ಖರೀದಿಸುತ್ತಾರೆ. ರೇಟಿಂಗ್ ಉತ್ತಮವಾಗಿದ್ದರೆ ವ್ಯಾಪಾರ ಹೆಚ್ಚು ಎಂದು ಗುರುತಿಸಿದ ಕೆಲವು ಸಂಸ್ಥೆಗಳು ಮತ್ತು ಮಾರಾಟಗಾರರು, ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ರೇಟಿಂಗ್ ಬರುವಂತೆ ಮೋಸದ ಹಾದಿಯನ್ನೂ ತುಳಿಯುತ್ತಿದ್ದಾರೆ ಎಂದರೆ ಅಚ್ಚರಿಯೆ?

ಇತ್ತೀಚಿನ ದಿನಗಳಲ್ಲಿ ಯಾವುದೇ ಉತ್ಪನ್ನ ಖರೀದಿಸುವ ಮುನ್ನ ಅಥವಾ ಹೊಟೇಲ್, ರೆಸಾರ್ಟ್ ಇತ್ಯಾದಿ ಸ್ಥಳಗಳಿಗೆ ಹೋಗುವ
ಮುನ್ನ ಆ ಸ್ಥಳ ಅಥವಾ ಉತ್ಪನ್ನದ ಬಗ್ಗೆ ಇತರರು ಏನು ಹೇಳಿದ್ದಾರೆ ಎಂದು ಅಂತರ್ಜಾಲದಲ್ಲಿ ಹುಡುಕುವುದು ಮತ್ತು ಅದರ ಮೂಲಕ ನಾವು ವಸ್ತುವನ್ನು ಖರೀದಿಸಬೇಕೋ, ಇಲ್ಲವೇ ಸ್ಥಳಕ್ಕೆೆ ಬೇಟಿ ನೀಡಬೇಕೋ ಎಂದು ನಿರ್ಧರಿಸುವುದು ತೀರಾ ಸಾಮಾನ್ಯ ಎನಿಸಿದೆ.

ನಮಗೆ ಒಂದು ಉತ್ಪನ್ನ ಇಷ್ಟವಾಗಿದ್ದು ಅದನ್ನು ನಮಗೆ ಗೊತ್ತಿರುವ ವ್ಯಕ್ತಿ ಬಳಸುತ್ತಿದ್ದರೂ ಇ-ಕಾಮರ್ಸ್ ಜಾಲತಾಣಗಳಲ್ಲಿ ಅದರ ಬಗ್ಗೆ ಉತ್ತಮ ರಿವ್ಯೂ ಮತ್ತು ರೇಟಿಂಗ್ ಇಲ್ಲವೆಂದಾದರೆ ನಾವು ಅದನ್ನು ಖರೀದಿಸಲು ಹಲವು ಬಾರಿ ಯೋಚಿಸುತ್ತೇವೆ. ಅದರಲ್ಲೂ ಆ ಉತ್ಪನ್ನ ನಮಗೆ ಇಷ್ಟವಾಗದಿದ್ದರೆ ವಾಪಸ್ಸು ಕಳುಹಿಸುವ ಆಯ್ಕೆ ಇಲ್ಲದಿದ್ದರೆ ಅಂತಹ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆ ಅತ್ಯಂತ ಕಡಿಮೆ.

ಜನರ ಖರೀದಿ ಆಯ್ಕೆಯನ್ನು ಇಷ್ಟರ ಮಟ್ಟಿಗೆ ನಿರ್ಧರಿಸುವ ಈ ರಿವ್ಯೂ ಮತ್ತು ರೇಟಿಂಗ್‌ಗಳು ನಿಜಕ್ಕೂ ಅಸಲಿಯೇ? ಎಷ್ಟೋ ವರ್ಷಗಳಿಂದ ಇ-ಕಾಮರ್ಸ್ ಜಾಲತಾಣಗಳಲ್ಲಿರುವ ಉತ್ಪನ್ನಕ್ಕಿಂತ ಇತ್ತೀಚೆಗೆ ಬಂದ ಉತ್ಪನ್ನಗಳು ಹೇಗೆ ಹೆಚ್ಚು ರಿವ್ಯೂ ಮತ್ತು ರೇಟಿಂಗ್ ಗಳನ್ನು ಪಡೆದುಕೊಳ್ಳುತ್ತವೆ? ಅಷ್ಟಕ್ಕೂ ಒಬ್ಬ ವ್ಯಕ್ತಿ ತಾನು ಒಂದು ವಸ್ತುವನ್ನು ಖರೀದಿಸಿದ ನಂತರ ಅದರ ಬಗ್ಗೆ ಏಕೆ ರಿವ್ಯೂ ಮತ್ತು ರೇಟಿಂಗ್‌ಅನ್ನು ನೀಡುತ್ತಾನೆ? ಅದರಿಂದ ಆತನಿಗಾಗುವ ಲಾಭವೇನು? ನೋಡೋಣ.

ನಕಲಿ ರಿವ್ಯೂ ಮತ್ತು ರೇಟಿಂಗ್
ಹೆಚ್ಚಿನ ಇ-ಕಾಮರ್ಸ್ ಜಾಲತಾಣಗಳಲ್ಲಿ ಒಂದು ನಿಯಮವಿದೆ. ಯಾವ ಉತ್ಪನ್ನ ಒಂದು ವರ್ಗದಲ್ಲಿ ಅತೀ ಹೆಚ್ಚು ರಿವ್ಯೂ ಮತ್ತು ರೇಟಿಂಗ್‌ಗಳು ಪಡೆಯುತ್ತದೆಯೋ ಅಂತಹ ವಸ್ತುಗಳನ್ನು ಆ ವರ್ಗದ ಅತ್ಯಂತ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ. ಬಹಳಷ್ಟು ಸಲ ಬಳಕೆದಾರ ಆ ಉತ್ಪನ್ನದ ರಿವ್ಯೂ ಮತ್ತು ರೇಟಿಂಗ್‌ಗಳನ್ನು ನೋಡಿ ಅದು ಉತ್ತಮ ಎನ್ನಿಸಿದರೆ ಅದನ್ನೇ ಖರೀದಿ ಮಾಡು ತ್ತಾನೆ.

ಅದಕ್ಕಿಂತ ಉತ್ತಮ ಉತ್ಪನ್ನಗಳು ಇದ್ದರೂ, ಇತ್ತೀಚೆಗೆ ಇ- ಕಾಮರ್ಸ್ ಜಾಲತಾಣದಲ್ಲಿ ಅದರ ಬಗ್ಗೆ ಯಾರೂ ರಿವ್ಯೂ ಮತ್ತು ರೇಟಿಂಗ್ ಕೊಟ್ಟಿರದಿದ್ದರೆ, ಅದು ಆ ವರ್ಗದ ಕೊನೆಯ ಪುಟದಲ್ಲಿದ್ದು ಹೆಚ್ಚಿನ ಬಾರಿ ಹೊಸ ಗ್ರಾಹಕ ಅಂತಹ ಉತ್ಪನ್ನವನ್ನು ನೋಡುವುದಕ್ಕೂ ಆಗುವುದಿಲ್ಲ. ಇಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ, ಇಂದು ಹೆಚ್ಚು ರಿವ್ಯೂ ಮತ್ತು ರೇಟಿಂಗ್‌ಗಳು ಹೊಂದಿರುವ ಉತ್ಪನ್ನಗಳು ಒಂದು ಕಾಲದಲ್ಲಿ ಕೊನೆಯ ಪುಟದಲ್ಲೇ ಇದ್ದವು, ಕಾಲಾನುಕಾಲ ಜನಕ್ಕೆ ಇಷ್ಟವಾಗಿ ಮುಂದಿನ ಪುಟಕ್ಕೆ ಬಂದು ನಿಂತಿವೆ!

ಅದರಲ್ಲೇನು ತಪ್ಪು ? ಎಂದು ನಿಮಗೆ ಅನಿಸುವುದು ಸಹಜ. ಇಲ್ಲೇ ಇರುವುದು ಸಮಸ್ಯೆ. ಒಂದು ಉತ್ಪನ್ನ ಸಹಜವಾಗಿ ಉತ್ತಮ ರಿವ್ಯೂ ಮತ್ತು ರೇಟಿಂಗ್ ಹೊಂದಿ ಮೊದಲ ಪುಟಕ್ಕೆ ಬಂದರೆ ಅದರಲ್ಲೇನು ತಪ್ಪಿಲ್ಲ. ಆದರೆ ತಪ್ಪು ಎನಿಸುವ ವಿಷಯವೆಂದರೆ, ಇಂದು ಹೆಚ್ಚಿನ ಉತ್ಪನ್ನಗಳು ನಕಲಿ ರಿವ್ಯೂ ಮತ್ತು ರೇಟಿಂಗ್‌ಗಳನ್ನು ಪಡೆದು ಮೋಸದ ಮಾರ್ಗದಿಂದ ಮೇಲ್ಭಾಗದಲ್ಲಿ ಕಾಣಿಸಿ ಕೊಂಡು, ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿವೆ.

ನಕಲಿ ರೇಟಿಂಗ್ ಕುರಿತು ದಾಖಲೆಯ ಸಮೇತ ಹೇಳಬೇಕೆಂದರೆ ಕಳೆದ ವರ್ಷ ಇ-ಕಾಮರ್ಸ್ ಕ್ಷೇತ್ರದಲ್ಲಿ ಇದ್ದ ರಿವ್ಯೂ ಮತ್ತು ರೇಟಿಂಗ್‌ಗಳಲ್ಲಿ 30 ಪ್ರತಿಶತ ನಕಲಿಯಾಗಿದ್ದರೆ, ಈ ವರ್ಷ ಅದು 5 ಪ್ರತಿಶತ ಹೆಚ್ಚಾಗಿ 35 ಪ್ರತಿಶತಕ್ಕೆ ಬಂದು ನಿಂತಿದೆ. ಇದೇ ಅವಧಿಯಲ್ಲಿ ಇ-ಕಾಮರ್ಸ್‌ ಕ್ಷೇತ್ರದ ಮಾರಾಟ ಸುಮಾರು 57 ಪ್ರತಿಶತ ಹೆಚ್ಚಾದರೆ ರಿವ್ಯೂ ಮತ್ತು ರೇಟಿಂಗ್ ಕೊಡುವವರ ಸಂಖ್ಯೆ 76 ಪ್ರತಿಶತ ಹೆಚ್ಚಾಗಿದೆ. ಅಂದರೆ ಖರೀದಿಸುವ ಜನರ ಏರಿಕೆಯ ಪ್ರಮಾಣಕ್ಕಿಂತ, ಹೆಚ್ಚು ಜನ ರಿವ್ಯೂ ಮತ್ತು ರೇಟಿಂಗ್‌ಗಳನ್ನು
ಕೊಡುತ್ತಿದ್ದಾರೆ.

ಯಾವಾಗ ನಕಲಿ ರಿವ್ಯೂ ಮತ್ತು ರೇಟಿಂಗ್ 35 ಪ್ರತಿಶತಕ್ಕೆ ಬಂದು ನಿಂತಿದೆಯೋ ಅದರಲ್ಲಿ ನಕಲಿ ಮತ್ತು ಅಸಲಿ ಯಾವುದೆಂದು ಹೇಗೆ ನಿರ್ಧರಿಸುವುದು? 10 ರೇಟಿಂಗ್ ಗಳಲ್ಲಿ 3 ನಕಲಿಯಾದರೆ ಅವುಗಳನ್ನು ನಂಬಿ ಒಂದು ವಸ್ತುವನ್ನು ಖರೀದಿಸುವುದು ಅಥವಾ ಖರಿದಿಸದೇ ಇರುವುದು ಎರಡು ಸಹ ತಪ್ಪಾಗುತ್ತದೆ.

ನಕಲಿ ರಿವ್ಯೂ ಮರ್ಮವೇನು?
ನ್ಯಾಯ ಮಾರ್ಗದಿಂದ ಉತ್ತಮ ರಿವ್ಯೂ ಮತ್ತು ರೇಟಿಂಗ್ ಅನ್ನು ಪಡೆದುಕೊಂಡು ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಬಹಷ್ಟು ಸಮಯ ಹಿಡಿಯುವುದರಿಂದ, ಕೃತಕವಾಗಿ ನಕಲಿ ರಿವ್ಯೂ ಮತ್ತು ರೇಟಿಂಗ್‌ಗಳನ್ನು ಸಂಸ್ಥೆಗಳು ಸೃಷ್ಟಿಸಿಕೊಂಡು ವೇಗವಾಗಿ
ದಾಳಿಯ ಮಾರ್ಗವನ್ನು ಹಲವು ಸಂಸ್ಥೆಗಳು ಕಂಡುಕೊಂಡಿವೆ. ನಕಲಿ ರೇಟಿಂಗ್‌ಗಳನ್ನು ಕೊಂಡೊಯ್ಯಲು ಹಲವಾರು ವಿಧಾನ ಗಳಿವೆ. ಮೊದಲನೆಯದು ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವ ಸಂಸ್ಥೆ ತನ್ನದೇ ಆದ ಸಾಮಾಜಿಕ ಜಾಲತಾಣ ಗಳ ಪುಟಗಳನ್ನು ಹೊಂದಿರುತ್ತದೆ.

ಅಲ್ಲಿರುವ ಸದಸ್ಯರಿಗೆ ಹಣದ ಮತ್ತು ರಿಯಾಯತಿಯ ಆಮಿಷವೊಡ್ಡಿ ಉತ್ತಮ ರಿವ್ಯೂ ಮತ್ತು ರೇಟಿಂಗ್‌ಗಳನ್ನು ಪಡೆದು ಕೊಳ್ಳುತ್ತವೆ. ಜೊತೆಗೆ ಪ್ರತಿಸ್ಪರ್ಧಿ ಸಂಸ್ಥೆಯ ಉತ್ಪನ್ನಗಳಿಗೆ ಕೆಳಮಟ್ಟದ ರಿವ್ಯೂ ಮತ್ತು ರೇಟಿಂಗ್‌ಅನ್ನು ಇವರುಗಳ ಮೂಲಕ ಕೊಡಿಸಿ ತನ್ನ ಉತ್ಪನ್ನ ಹೆಚ್ಚು ಮಾರಾಟವಾಗುವಂತೆ ನೋಡಿಕೊಳ್ಳುತ್ತವೆ. ಇನ್ನು ಎರಡನೆಯ ವಿಧಾನದಲ್ಲಿ ನೇರವಾಗಿ ಮೋಸ
ಎನ್ನಬಹುದಾದ ತಂತ್ರವನ್ನು ಅನುಸರಿಸಲಾಗುತ್ತದೆ.

ಚೀನಾ ಮತ್ತಿತರ ಕೆಲವು ದೇಶಗಳಲ್ಲಿ ನಕಲಿ ರಿವ್ಯೂ ಮತ್ತು ರೇಟಿಂಗ್ ಗಳನ್ನು ನೀಡುವುದಕ್ಕಾಗಿಯೇ ಹಲವಾರು ಜಾಲತಾಣಗಳು
ಮತ್ತು ಸಂಸ್ಥೆಗಳಿವೆ. ಅವು ಕೆಲವೊಂದು ತಂತ್ರಾಂಶಗಳನ್ನು ಬಳಕೆ ಮಾಡಿ ಮಾನವನ ಹಸ್ತ ಕ್ಷೇಪವಿಲ್ಲದೆ ಯಾವುದೇ ಉತ್ಪನ್ನಕ್ಕೆ ಒಳ್ಳೆಯ ಅಥವಾ ಕೆಟ್ಟ ರಿವ್ಯೂ ಮತ್ತು ರೇಟಿಂಗ್ ಗಳನ್ನು ನೀಡುತ್ತವೆ. ಮೂರನೆಯ ವಿಧಾನವೆಂದರೆ, ಸ್ವಯಂ ಉತ್ಪನ್ನವನ್ನು ಮಾರಾಟ ಮಾಡುವ ಸಂಸ್ಥೆ ತನ್ನ ಸಿಬ್ಬಂದಿಯನ್ನು ಬಳಸಿಕೊಂಡು, ತಮ್ಮ ಉತ್ಪನ್ನಕ್ಕೆ ಉತ್ತಮ ರಿವ್ಯೂ ಮತ್ತು ರೇಟಿಂಗ್‌ಗಳನ್ನು ಕೊಟ್ಟುಕೊಳ್ಳುತ್ತವೆ.

ಇ-ಕಾಮರ್ಸ್ ಕ್ಷೇತ್ರದ ಸಮಸ್ಯೆಗಳು
ಈ ನಕಲಿ ರಿವ್ಯೂ ಮತ್ತು ರೇಟಿಂಗ್ ನಿಂದಾಗಿ ಇಷ್ಟೆಲ್ಲ ಸಮಸ್ಯೆಗಳಾಗುತ್ತಿದ್ದರೂ, ಕೋಟ್ಯಂತರ ರೂಪಾಯಿ ಲಾಭ ಗಳಿಸುವ ಇ-ಕಾಮರ್ಸ್ ಸಂಸ್ಥೆಗಳು ಬುದ್ಧಿವಂತ ಎಂಜಿನೀಯರ್‌ಗಳನ್ನು ಹೊಂದಿದ್ದರೂ, ಏಕೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ? ಇಲ್ಲಿ ಮುಖ್ಯವಾದ ಸಮಸ್ಯೆಯೆಂದರೆ ಒಂದು ರಿವ್ಯೂ ಅಥವಾ ರೇಟಿಂಗ್‌ಅನ್ನು ನಕಲಿ ಅಥವಾ ಅಸಲಿ ಎಂದು ಹೇಗೆ ಕಂಡು ಹಿಡಿಯುವುದು? ತಂತ್ರಾಂಶಗಳು ಎಷ್ಟೇ ಬುದ್ಧಿವಂತವಾಗಿದ್ದರು ಮನುಷ್ಯನಿಗೆ ಕಂಡು ಹಿಡಿಯಲು ಅಸಾಧ್ಯವಾದ ವಿಷಯಗಳನ್ನು ನಿಖರವಾಗಿ ಕಂಡು ಹಿಡಿಯುವುದು ಅತ್ಯಂತ ಕಷ್ಟಕರ.

ಕೇವಲ ಅಮಜೋನ್‌ನಲ್ಲಿ ಸುಮಾರು 5 ಮಿಲಿಯನ್ ಮಾರಾಟಗಾರರಿದ್ದು 600 ಮಿಲಿಯನ್‌ಗಿಂತಲೂ ಹೆಚ್ಚಿನ ಉತ್ಪನ್ನಗಳಿವೆ,
ಇಂತಹ ದೈತ್ಯ ಸಂಖ್ಯೆಯ ಉತ್ಪನ್ನಗಳ ನಕಲಿ ರಿವ್ಯೂೆ ಅಥವಾ ರೇಟಿಂಗ್ ಅನ್ನು ವಿವರವಾಗಿ ಕಂಡು ಹಿಡಿಯುವುದು ಅತ್ಯಂತ ಕಷ್ಟದ ಕೆಲಸ. ಜತೆಗೆ ಹೆಚ್ಚಿನ ಇ-ಕಾಮರ್ಸ್ ತಾಣಗಳಲ್ಲಿ ಒಂದು ಉತ್ಪನ್ನವನ್ನು ಖರೀದಿ ಮಾಡದ ವ್ಯಕ್ತಿಗಳು ಸಹ ಆ ಉತ್ಪನ್ನಕ್ಕೆ ರಿವ್ಯೂ ಮತ್ತು ರೇಟಿಂಗ್ ಅನ್ನು ಕೊಡಬಹುದು. ಇದರಿಂದಲೂ ಸಹ ನಕಲಿ ರಿವ್ಯೂಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೆಲ ಸಂಸ್ಥೆಗಳು ನಕಲಿ ರಿವ್ಯೂ ಮತ್ತು ರೇಟಿಂಗ್ ಅನ್ನು ತಡೆಯುವ ಉದ್ದೇಶದಿಂದ ಈ ಅವಕಾಶವನ್ನು ತೆಗೆಯುತ್ತಿವೆ.

ಪರಿಹಾರವೇನು?
ನಕಲಿ ರಿವ್ಯೂ ಮತ್ತು ರೇಟಿಂಗ್‌ಗೆ ನೂರಕ್ಕೆ ನೂರು ಎನ್ನುವ ಪರಿಹಾರ ಇಲ್ಲದಿದ್ದರೂ ಕೆಲವೊಂದು ಸ್ಟಾರ್ಟ್‌ಅಪ್‌ಗಳು
ಈ ಸಮಸ್ಯೆಗೆ ತಮ್ಮದೇ ರೀತಿಯಲ್ಲಿ, ವಿನೂತನವಾಗಿ ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿವೆ. ಫೇಕ್ ಸ್ಪಾಟ್ ತರಹದ ಸಂಸ್ಥೆಗಳು ವೆಬ್‌ಸೈಟ್‌ಅನ್ನು ಸ್ಕ್ಯಾನ್ ಮಾಡಿ ಯಾವ ರಿವ್ಯೂ ಮತ್ತು ರೇಟಿಂಗ್‌ಗಳು ನಕಲಿ ಎಂದು ತೋರಿಸುತ್ತಿವೆ. ರಿವ್ಯೂ ಸ್ಕೆಪ್ಟಿಕ್, ರಿವ್ಯೂ ಇಂಡೆಕ್ಸ್‌, ರಿವ್ಯೂ ಮೆಟಾ ಇನ್ನಿತರ ಸಂಸ್ಥೆಗಳು ಸಹ ಇದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿವೆ.

ಆದರೆ, ಇಂದಿನ ಸ್ಪರ್ಧಾಯುಗದಲ್ಲಿ, ಮಾರಾಟವನ್ನು ಮತ್ತು ಲಾಭವನ್ನು ಹೆಚ್ಚಿಸಿಕೊಳ್ಳುವುದೇ ಮುಖ್ಯ ಗುರಿಯಾಗಿರುವ ವಾತಾವರಣದಲ್ಲಿ, ಈ ರೀತಿಯ ಕೃತಕ ಅಥವಾ ನಕಲಿ ರೇಟಿಂಗ್ ಸಮಸ್ಯೆಗೆ ಪರಿಪೂರ್ಣ ಪರಿಹಾರ ಹುಡುಕುವುದು ಅಸಾಧ್ಯವೇ ಸರಿ.