Sunday, 15th December 2024

ನಮ್ಮೂರು ಮೈಸೂರು

ಡಾ.ಕೆ.ಎಸ್‌.ಪವಿತ್ರ

ಒಮ್ಮೆ ಮೈಸೂರನ್ನು ನೋಡಿದ ತಕ್ಷಣ, ಅಲ್ಲಿನ ಪಾರಂಪರಿಕ ಕಟ್ಟಡಗಳ ನೋಟವನ್ನು ಕಂಡ ತಕ್ಷಣ, ಮೈಸೂರು ನಿಮ್ಮೂರು ಆಗಿಬಿಡುತ್ತದೆ! ಅದೇ ಮೈಸೂರಿನ ಮ್ಯಾಜಿಕ್.

ನನ್ನ ಸ್ವಂತ ಊರು ಶಿವಮೊಗ್ಗೆಯಾದರೂ, ಮೈಸೂರು ಮನಸ್ಸಿಗೆ ಹಿತ ತರುವ “ನಮ್ಮ” ಊರುಗಳಲ್ಲಿ ಬರುವಂತಹದ್ದೇ. ಅದಕ್ಕೆ ಕಾರಣಗಳೂ ಉಂಟು. ನಮಗೆ ಶಿವಮೊಗ್ಗದವರಿಗೆ, ಮೈಸೂರು ಎಂದರೆ “ದೊಡ್ಡ ಶಿವಮೊಗ್ಗ”.

ಬೆಂಗಳೂರೆಂದರೆ ಸ್ವಲ್ಪ ಹೆದರುವ ನಮಗೆ ಮೈಸೂರಿಗೆ ಹೋಗುವುದೆಂದರೆ ಒಂಥರಾ ಖುಷಿ. ಹಾಗಾಗಿಯೇ ಎಂ.ಬಿ.ಬಿ.ಎಸ್.ಗೆ ಎಲ್ಲಿ ಸೇರುವುದು ಎಂಬ ಆಯ್ಕೆಯಲ್ಲಿ ನಾನು ಮೊದಲು ಮತ ಹಾಕಿದ್ದು ಮೈಸೂರು ಮೆಡಿಕಲ್ ಕಾಲೇಜು. ಅದು ನಮ್ಮ ರಾಜ್ಯದ ಮೊಟ್ಟ ಮೊದಲ ವೈದ್ಯಕೀಯ ಮಹಾ ವಿದ್ಯಾಲಯ. ಐದೂವರೆ ವರ್ಷಗಳ ಕಾಲ ಓದಿದ, ಜೀವನದ ಬಹು ಮುಖ್ಯ ಘಟ್ಟವನ್ನು ಕಳೆದ ಊರು ‘ನಮ್ಮೂರು’ ಎನಿಸದೆ ಇದ್ದೀತೆ!

ಅದಕ್ಕೆ ಹೊಂದಿಕೊಂಡಂತೆ ನನ್ನ ಪತಿದೇವರ ಊರು ಮೈಸೂರು! ಹಾಗಾಗಿ ಮೈಸೂರು ಸುತ್ತುವುದೆಂದರೆ ಖುಷಿ-ಉತ್ಸಾಹ ಎರಡೂ.  ನೋಡಲು ಹಲವು ಪ್ರೇಕ್ಷಣೀಯ ಸ್ಥಳಗಳಿರುವ ಮೈಸೂರು, ಸಂಪ್ರದಾಯ-ಆಧುನಿಕತೆಗಳೆರಡೂ ಮೈಳೈವಿಸಿರುವ ಊರು. ಇಲ್ಲಿಯ ಒಂದೊಂದು ಕಟ್ಟಡಕ್ಕೂ, ದಾರಿಗೂ ಇರುವ ಹೆಸರುಗಳು ಇತಿಹಾಸ-ಕಲೆಗಳ ನೆನಪನ್ನು ತರುತ್ತವೆ. ಕಟ್ಟಡಗಳ ಶೈಲಿಯಾದರೂ ಅಷ್ಟೆ. ವಾಸ್ತುಶೈಲಿಯಲ್ಲಿ ಅರಮನೆಯನ್ನೇ ಹೋಲುತ್ತವೆ!

ಕೋವಿಡ್ ಸಮಯದಲ್ಲಿ ಹೊರ ರಾಜ್ಯ- ಹೊರದೇಶ ಪ್ರವಾಸಗಳು ಸಾಧ್ಯವಿರಲಿಲ್ಲ. ಸರಿ, ಮಕ್ಕಳು ಮೈಸೂರಿಗಾದರೂ ಹೋಗಿ ಬರೋಣ ಎಂದರು. ಅಲ್ಲಿ ಅರಮನೆ-ಪಕ್ಷಿಧಾಮ ನೋಡಲೇ ಬೇಕು ಎಂಬ ಹಠ. ಸರಿ, ಹಾಗಿದ್ದರೆ ನಾವೂ ಒಂದು ಬಾರಿ ನೋಡೇ ಬಿಡೋಣ ಎಂದು ಹೊರಟೆವು. ನಾವಿಬ್ಬರೂ ವರುಷಗಟ್ಟಲೆ ಮೈಸೂರಿನಲ್ಲಿ ಕಳೆದಿದ್ದರೂ, ಅರಮನೆ-ರಂಗನತಿಟ್ಟು ಕಡೆ ಹೋಗಿರಲೇ ಇಲ್ಲ!

ಅರಮನೆಯ ಆವರಣದಲ್ಲಿಯೇ ಕೋವಿಡ್ ಎಚ್ಚರಿಕೆಗಳನ್ನೆಲ್ಲಾ ಪಾಲಿಸಿ ಟಿಕೆಟ್ ಖರೀದಿಸಿದೆವು. ‘ಓ ಹೊರದೇಶದವರಿಗೆ ದುಡ್ಡು ಜಾಸ್ತಿ ಇಟ್ಟಿದ್ದಾರೆ’ ಎಂದು ಅಚ್ಚರಿ ಪಟ್ಟೆವು. ಆವರಣದ ಒಳಗೆ ಹೋಗುತ್ತಲೇ ಒಂದು ಇಲೆಕ್ಟ್ರಾನಿಕ್ ‘ಬಗ್ಗಿ’. ‘ಅರೆರೆ!’ ಎಂದು ಅಚ್ಚರಿ ಪಟ್ಟೆವು. ಒಂದು ಸೀಟಿಗೆ 50ರೂ ಕೊಡಲು ಹಿಂಜರಿಯುವವರು ನೀವಲ್ಲ, ಎಂದಾದರೆ ಇದನ್ನು ಹತ್ತಬಹುದು. 4 ಕಿ.ಮೀ. ಆವರಣದ ಪೂರ್ತಿ ಒಂದು ದೊಡ್ಡ ರೌಂಡ್ ಹೊಡೆದು ಅರಮನೆ ಪ್ರವೇಶ ದ್ವಾರದ ಬಳಿ ಬಿಡು ತ್ತಾರೆ. ಅರಮನೆಯನ್ನು ಭಾನು ವಾರ, ರಜಾದಿನಗಳಂದು ಝಗಮಗನೆ ಬೆಳಗಿಸುವ 97000 ಎಲೆಕ್ಟ್ರಿಕ್ ಬಲ್ಬ್‌ಗಳ ಬಗ್ಗೆ, ಅದರ ಒಂದು ಬಾರಿ ಇಲೆಕ್ಟ್ರಿಸಿಟಿ ಖರ್ಚಿನ ಬಗ್ಗೆ ಚಾಲಕ ನಿಮ್ಮ ಗಮನ ಸೆಳೆಯುತ್ತಾನೆ. ಅರಮನೆಯ ಹಿನ್ನೆಲೆಯ ಫೋಟೋಗಾಗಿ ಐದು ನಿಮಿಷ ಬ್ರೇಕ್ ಕೊಡುತ್ತಾನೆ.

ಕಲೆಯ ಉತ್ಕರ್ಷ  
ಅರಮನೆ ಒಳಹೊಕ್ಕ ತಕ್ಷಣ ನಿಮ್ಮನ್ನು ಮಾತನಾಡಿಸುವ ಗೈಡ್ ಗಳು ಇತಿಹಾಸ ಪ್ರೀತಿಯಿಂದ ನಿಮ್ಮನ್ನು ‘ಬೇಕೆ’ ಎಂದು
ಕೇಳುತ್ತಾರೆ. ಕಾಡುವುದಿಲ್ಲ ಎನ್ನುವುದು ವಿಶೇಷ! ‘ಗೈಡ್’ ತೆಗೆದುಕೊಂಡರೆ ನಮಗೆ ಗೊತ್ತಿರದ ಹಲವು ವಿಷಯಗಳು ತಿಳಿಯುತ್ತವೆ. ಜೊತೆಗೆ ಅಲ್ಲಿ ಪ್ರದರ್ಶಿತವಾದ ವಸ್ತುಗಳು, ಬಾಗಿಲು, ಛಾವಣಿ, ಚಿತ್ರ ಒಂದೊಂದರಲ್ಲಿಯೂ ಹಲವು ವಿಶೇಷಗಳು ಇದ್ದಕ್ಕಿದ್ದಂತೆ ಗೋಚರವಾಗತೊಡಗುತ್ತವೆ!

ಬುದ್ಧಿಗೆ ಗೊತ್ತಿಲ್ಲ ಎಂದ ಮೇಲೆ ಕಣ್ಣಿಗೆ ಹೇಗೆ ಗೋಚರಿಸಲು ಸಾಧ್ಯ! ಹಾಗಾಗಿ ಒಮ್ಮೆಯಾದರೂ ಗೈಡ್ ಜೊತೆ ಅರಮನೆ ವೀಕ್ಷಣೆ ಮಾಡುವುದು ವಿಶೇಷವಾಗಿ ಮಕ್ಕಳಿಗೆ ಉಪಯುಕ್ತ. 3ಡಿ ಚಿತ್ರಗಳು (ಯಾವ ಕಡೆ ತಿರುಗಿದರೂ ನಮ್ಮೆಡೆಗೆ ನೋಡುವಂತಹ ಕಲೆಗಾರಿಕೆ), ದಸರಾ ಮೆರವಣಿಗೆಯ ಚಿತ್ರಗಳು, ದರ್ಬಾರ್ ಪೋಷಾಕಿನಲ್ಲಿ ನಿಂತಿದ್ದ ಹಿರಿಯ ಸಂಗೀತಗಾರರ ಚಿತ್ರಗಳು ಇವೆಲ್ಲ ಮೈಸೂರಿನ ಇತಿಹಾಸ-ವೈಭವದ ಚಿತ್ರಣ ವನ್ನು ಮೂಡಿಸಲು ಸಫಲವಾಗುತ್ತವೆ. ಹಿಂದಿನ ಕಾಲದ ಟೈಲುಗಳು, ಲಿಫ್ಟ್, ಫ್ಯಾನು, ಆನೆ ದಂತಗಳು, ಕಾಡುಕೋಣದ ಗೊರಸು, ಕೊಂಬು, ಎಲ್ಲವನ್ನೂ ಗೈಡ್ ವಿವರಣೆಯಿಂದ ಹೊಸ ಬೆಳಕಿನಲ್ಲಿ ನಾವು ನೋಡಿದೆವು. ಸಂಗ್ರಹಾಲಯದ ಒಳಹೊಕ್ಕು, ಒಂದು ಸುತ್ತು ತಿರುಗಿ, ಹಾಗೇ ಹೊರಬರುವ ‘ಚಟ’ದವಳಾದ ನಾನು ಮೊಟ್ಟ ಮೊದಲ ಬಾರಿಗೆ ಮಕ್ಕಳ ಆಗ್ರಹಕ್ಕೆ, ಗೈಡ್ ವಿವರಣೆ ಆಲಿಸಿ, ನಮ್ಮ ಮೈಸೂರು ಅರಮನೆ ಯನ್ನು ಪೂರ್ಣವಾಗಿ ಸವಿದೆ. ಅಲ್ಲಿ ನಡೆಯುತಿದ್ದಿರಬಹುದಾದ ಅರಸೊತ್ತಿಗೆಯ ವೈಭವ ಮತ್ತು ಕಲೆಯ ಉತ್ಕರ್ಷವನ್ನು ಕಲ್ಪಿಸಿಕೊಂಡೆ.

ಹಕ್ಕಿಗಳ ಸಾಂಗತ್ಯ
ಅರಮನೆಯ ನಂತರ ನಾವು ಹೋದದ್ದು ರಂಗನತಿಟ್ಟು ಪಕ್ಷಿಧಾಮಕ್ಕೆ. ಕ್ರಿ.ಶ. 1600ರ ಸುಮಾರಿಗೆ ಸಣ್ಣ ಆಣೆಕಟ್ಟುನಿಂದ ರೂಪುಗೊಂಡ ರಂಗನ ತಿಟ್ಟು, ಆರು ಚಿಕ್ಕ ದ್ವೀಪಗಳಿಂದ ಕೂಡಿದ್ದು, 1940ರಲ್ಲಿ ಪಕ್ಷಿಧಾಮವೆಂದೂ, ರಕ್ಷಿತ ಪ್ರದೇಶವೆಂದೂ
ಘೋಷಿಸಲ್ಪಟ್ಟಿತು. ಇದನ್ನು ಪಕ್ಷಿತಾಣವಾಗಿ ಮಾಡಲು ಖ್ಯಾತ ಪಕ್ಷಿತಜ್ಞ ಡಾ| ಸಲೀಂ ಆಲಿ ಅವರು ಮೈಸೂರು ಅರಸರಿಗೆ
ಶಿಫಾರಸು ಮಾಡಿದ್ದರಂತೆ. ಅವರ ಸೂಕ್ಷ್ಮ ಅವಲೋಕನ, ಅಲ್ಲಿ ಹಲವು ಜಾತಿಯ ಅಪರೂಪದ ಪಕ್ಷಿಗಳು ನೆಲೆಸಿದ್ದ, ವಲಸೆ
ಬರುತ್ತಿದ್ದ ಸಂಗತಿ, ಇದನ್ನು ‘ಪಕ್ಷಿಧಾಮ’ವಾಗಿ ಘೋಷಿಸಲೇಬೇಕೆಂದು ಅಂದಿನ ಮೈಸೂರು ಮಹಾರಾಜರನ್ನು
ಒತ್ತಾಯಿಸಲು, ಮನವೊಲಿಸಲು ಕಾರಣವಾಯಿತು.

ಇಂದು ಸರ್ಕಾರದ ಹಲವು ಕ್ರಮಗಳಿಂದ ರಂಗನತಿಟ್ಟು, ಸುಂದರ, ಸ್ವಚ್ಛ ಎನಿಸುತ್ತದೆ ಅಪರೂಪದ ಪಕ್ಷಿಗಳು, ಮೊಸಳೆಗಳು ಸಾಕಷ್ಟು ಸಂಖ್ಯೆಯಲ್ಲಿ ಮನಸ್ಸಿಗೆ ಮುದ ನೀಡುತ್ತವೆ. ಹಕ್ಕಿಗಳ ಕಲರವವೇ ರಂಗನತಿಟ್ಟಿನ ಭಾಷೆ ಎನಿಸುತ್ತದೆ. ತಾಯಿ ಹಕ್ಕಿ
ಮರಿ ಹಕ್ಕಿಗೆ ತುತ್ತು ನೀಡುವುದು, ಅಪ್ಪ-ಅಮ್ಮ ಹಕ್ಕಿ ಒಟ್ಟಿಗೇ ಕುಳಿತಿರುವುದು, ಮೊಸಳೆ ಬಿಸಿಲು ಕಾಯಿಸುವುದು ಎಲ್ಲವನ್ನೂ
ಮಕ್ಕಳ ಜೊತೆಗೆ ನಾವೂ ಬಾಯಿ ತೆರೆದೇ ನೋಡಿದೆವು!

ಮೈಸೂರಿನ ತುಂಬ ಇಂತಹ ನೋಡಬಹುದಾದ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ರೈಲ್ವೆ ಮ್ಯೂಸಿಯಂನಲ್ಲಿ ಮಹಾರಾಣಿ ಪಯಣಿಸುತ್ತಿದ್ದ ರೈಲು, ಹಳೇ ಕಾಲದ ರೈಲುಗಳು, ಮಕ್ಕಳಿಗೆ ನಮ್ಮ ರೈಲುಗಳ ಇತಿಹಾಸವನ್ನೂ ಕಲಿಸಬಲ್ಲದು. ಇತ್ತೀಚಿನ ‘ಶುಕವನ’ದ ಗಿಳಿಗಳು, ‘ಅರೆರೆ, ಈ ಗಿಳಿಗಳನ್ನೇ ನೋಡಲು ಡಾಲರ್‌ಗಟ್ಟಲೆ ದುಡ್ಡು ಕೊಟ್ಟು ಸಿಂಗಪುರಕ್ಕೆ ಅಷ್ಟು ದೂರ ಹೋಗಿದ್ದೇವಲ್ಲ’ ಅನ್ನಿಸುವಂತೆ ಮಾಡಬಹುದು.

‘ಶುಕವನ’ದ ಎದುರಲ್ಲಿರುವ ‘ಬೋನ್ಸಾಯ್ ಪಾರ್ಕ್’ ಜಪಾನಿನ ಪಾರ್ಕುಗಳನ್ನು ನೆನಪಿಸಬಹುದು. ಕಾರಂಜಿ ಕೆರೆ -ಕುಕ್ಕರಹಳ್ಳಿ ಕೆರೆಗಳಲ್ಲಿ ವಾಕಿಂಗ್ -ದೋಣಿ ವಿಹಾರ ಸಂಜೆಗೆ ತಂಪು ತರುವ ವಿಶೇಷಗಳು. ಚಾಮುಂಡೇಶ್ವರಿಗೆ ಕೈಮುಗಿದು ಚಾಮುಂಡಿ ಬೆಟ್ಟ ಸುತ್ತಾಡಿ, ನಂದಿ ನೋಡಿ ಬರಬಹುದು.

ಮೈಸೂರಿನ ಕವಿಗಳು – ಚಿತ್ರಕಲಾವಿದರು – ಕಾದಂಬರಿಕಾರರು – ಲೇಖಕರು ಮೈಸೂರಿನ ಬೀದಿ-ಅರಮನೆ-ಕಟ್ಟಡ- ಕೆರೆ ಪ್ರತಿ ಯೊಂದನ್ನೂ ಚಿತ್ರ -ಕವನ-ಸಾಹಿತ್ಯಗಳಲ್ಲಿ ತೆರೆದಿಟ್ಟಿರುವುದೂ ಮೈಸೂರು ನನ್ನಲ್ಲಿರುವ ಕಲಾವಿದೆಗೆ ಅದನ್ನು ಹೆಚ್ಚು ಆಪ್ತ ವಾಗಿಸುತ್ತದೆ. ಡಿ.ವಿ.ಜಿ. – ಬಿ.ಜಿ.ಎಲ್. ಸ್ವಾಮಿ -ಕುವೆಂಪು- ತೇಜಸ್ವಿ – ಭೈರಪ್ಪ ಮೊದಲಾಗಿ ಎಲ್ಲರನ್ನೂ ಮೈಸೂರು ನನಗೆ ಮತ್ತೆ ಮತ್ತೆ ನೆನಪಿಸುತ್ತದೆ. ಅವರ ಕಾದಂಬರಿ-ಕಥೆ-ನೆನಪುಗಳ ಪಾತ್ರಗಳನ್ನು ಮತ್ತೆ ಮತ್ತೆ ಮೈಸೂರಿನಲ್ಲಿ ಹುಡುಕಲು ಮನಸ್ಸು ತೊಡಗುತ್ತದೆ. ಆ ನೆನಪುಗಳ ಜೊತೆಗೆ ನಮ್ಮದೇ ಸ್ವಂತ ನೆನಪುಗಳೂ ಜೊತೆಯಾಗುತ್ತವೆ!

ನಾವು ಪ್ರೀತಿಸುತ್ತಿದ್ದ ಮೈಸೂರು ಈ ಬಾರಿ ಮತ್ತಷ್ಟು ಪ್ರಿಯವಾಯಿತು! ಕೋವಿಡ್ ನೆಪದಿಂದಲಾದರೂ, ನಾವು ಬೇರೆಡೆ
ಹೋಗುವುದರ ಬದಲು, ಮಕ್ಕಳ ಒತ್ತಾಯದಿಂದ ಅರಮನೆ- ಪಕ್ಷಿಧಾಮ-ಇತರ ಸ್ಥಳಗಳನ್ನು ನೋಡಿದ ಅನುಭವ ಆಹ್ಲಾ
ದಕರವಾಗಿತ್ತು. ‘ಮತ್ತೆ ಮೈಸೂರಿಗೆ ಬರೋಣ, ಸುತ್ತಾಡೋಣ, ಮತ್ತಷ್ಟು ನೋಡೋಣ’ ಎನ್ನುತ್ತಾ ಮರಳಿದೆವು.