Sunday, 24th November 2024

ನಮ್ಮೆದೆಯ ದನಿ ನಮಗೆ ಋಷಿಯಾಗಲಿ

ಮಹಾದೇವ ಬಸರಕೋಡ

ನಾವೆಲ್ಲ ಅನೇಕ ಜನಪ್ರಿಯ ದೃಷ್ಟಿಕೋನಗಳನ್ನು ಒಪ್ಪಿಕೊಂಡು ಅದಕ್ಕೆೆ ಬದ್ಧರಾಗಿರುತ್ತೇವೆ. ಇವುಗಳು ಮೌಲ್ಯಗಳ ಬುದ್ಧಿವಂತಿಕೆ ಉಡುಪಿನಿಂದ ಅಲಂಕೃತವಾಗಿರುತ್ತವೆ. ಸಾಮಾಜಿಕವಾಗಿ, ಸಾಂಸ್ಥಿಕವಾಗಿ ಇದ್ದ ಸ್ಥಿತಿಯನ್ನು ಕಾಪಿಟ್ಟುಕೊಳ್ಳು ವಲ್ಲಿ ನಿರತವಾಗಿರುತ್ತವೆ.

ಸಾಮಾಜಿಕವಾಗಿ, ಪಾರಂಪರಿಕವಾಗಿ ನಾವು ಕಲಿತ ಇಂತಹ ಅನೇಕ ನಂಬಿಕೆಗಳು ಹಲವು ಬಾರಿ ಅಸಂಗತವಾಗಿರುತ್ತವೆ. ಯಾರದೋ ಅಜ್ಞಾನದ ಬೋಧನೆಯಿಂದ, ನಡೆದ ಅಕಸ್ಮಿಕ ಘಟನೆಗಳಿಂದ ಇಲ್ಲವೇ ನಮ್ಮದೇ ಬೇಜವಾಬ್ದಾರಿತನದಿಂದ ನಮ್ಮ ಜೊತೆ ಸಂಗಡಿಸಿಕೊಂಡ ಇಂತಹ ಹತ್ತು ಹಲವು ನಂಬಿಕೆಗಳು ನಮ್ಮ ಮನಸ್ಸಿನಲ್ಲಿ ಮೊದಮೊದಲು ಮೊಳಕೆಯೊಡೆದು ನಂತರ
ದಲ್ಲಿ ಹೆಮ್ಮರವಾಗಿ ಬಿಡುತ್ತವೆ.

ಒಂದೊಮ್ಮೆ ಅವುಗಳೇ ನಮ್ಮ ಬದುಕಿನ ದೃಷ್ಟಿಕೋನಗಳಾಗಿ ರೂಪಾಂತರವಾಗುತ್ತವೆ. ನಮ್ಮನ್ನು ತಮ್ಮದೇ ತೆಕ್ಕೆಯಲ್ಲಿ
ಬಂಧಿಸಿ ಬಿಡುತ್ತವೆ. ಮತ್ತೆ ಮತ್ತೆ ನಮ್ಮ ಬದುಕನ್ನು ನಿರ್ದೇಶಿಸುತ್ತಲೇ ಇರುತ್ತವೆ. ವಾಸ್ತವದಲ್ಲಿ ಪ್ರಚಲಿತದಲ್ಲಿರುವ ಅತ್ಯುತ್ತಮ ಜೀವನ ವಿಧಾನಗಳನ್ನು, ಇನ್ನಿತರ ಹೊಸ ಆಚಾರ ವಿಚಾರಗಳನ್ನು ಸರಾಸಗಟಾಗಿ ತಿರಸ್ಕರಿಸುತ್ತವೆ. ಇವುಗಳಿಂದ ಪ್ರಭಾವಿತರಾದ
ನಾವು ಆಂತರಿಕ ಐಕ್ಯತೆಗೆ, ಪ್ರಾಮಾಣಿಕತೆಗೆ ಬದ್ಧರಾಗಿದ್ದೇವೆ ಎಂಬ ಭ್ರಮೆಯಲ್ಲಿ ವಿವೇಚನೆಯಿಂದ ದೂರವೇ ಉಳಿದು ಬಿಡುತ್ತೇವೆ.

ಬುದ್ಧನ ಪ್ರವಚನದಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬ ಪ್ರವಚನದ ಕೊನೆಯಲ್ಲಿ ಗುರುಗಳೇ ನೀವು ಬೋಧಿಸುವ ವಿಷಯಗಳು ನಮ್ಮ ಸನಾತನ ಗ್ರಂಥಗಳಲ್ಲಿ ಉಲ್ಲೇಖಿತವಾಗಿಯೇ ಇಲ್ಲ ಎಂದು ಹೇಳಿದ. ಬುದ್ಧ ಅವನ ಮಾತನ್ನು ಶಾಂತಚಿತ್ತತೆಯಿಂದ ಆಲಿಸಿ, ಮಂದಹಾಸ ಬೀರಿದ. ‘‘ಹಾಗಾದರೆ ಅವುಗಳನ್ನು ಅಲ್ಲಿ ಸೇರಿಸು’’ ಎಂದುತ್ತರಿಸಿದ ಬುದ್ಧ. ಒಂದಷ್ಟು ಗೊಂದಲಕ್ಕೆ ಒಳಗಾದ
ವ್ಯಕ್ತಿ ಕ್ಷಣಕಾಲ ಸುಧಾರಿಸಿಕೊಂಡು ಮತ್ತೆ ಕೇಳಿದ.

‘‘ಗುರುಗಳೇ ನೀವು ಹೇಳಿದ ಕೆಲವು ವಿಚಾರಗಳು ಸನಾತನ ಗ್ರಂಥಗಳ ಉಲ್ಲೇಖಗಳಿಗೆ ತುಂಬ ವಿರುದ್ಧವಾಗಿವೆ’’ ಎಂದ. ಮತ್ತದೇ ಮಂದಹಾಸ ಬೀರಿದ ಬುದ್ಧ ‘‘ಹಾಗಾದರೆ ಸನಾತನ ಗ್ರಂಥಗಳಿಗೆ ಒಂದಷ್ಟು ತಿದ್ದುಪಡಿ ಅಗತ್ಯ’’ ಎಂದ. ಮತ್ತೆ ವ್ಯಕ್ತಿ ಹೇಳಿದ ‘‘ಕೆಲವು ವಿಷಯಗಳು ನೀವು ಹೇಳಿದಂತೆ ಸನಾತನ ಗ್ರಂಥಗಳಲ್ಲಿ ಉಲ್ಲೇಖಗಳಾಗಿವೆ’’.

‘‘ಹಾಗಾದರೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೋ’’. ಬುದ್ಧ ಮುಂದುವರೆದು ಹೇಳಿದ ‘‘ಯಾವುದೇ ಧರ್ಮದ ಎಲ್ಲ ವಿಷಯಗಳು ಯಾವಾಗಲೂ ಪ್ರಸ್ತುತವಾಗಿರಲು ಸಾಧ್ಯವೇ ಇಲ್ಲ. ಮತ್ತೆ ಮತ್ತೆ ಅವು ಸ್ಥಗಿತಗೊಳ್ಳುತ್ತಲೇ ಇರುತ್ತವೆ. ಅವುಗಳನ್ನು ಕಾಲಕಾಲಕ್ಕೆ ಚಲನಶೀಲಗೊಳಿಸುವುದರಿಂದಲೇ ಮಾತ್ರ ಪಾವಿತ್ಯ್ರತೆಯನ್ನು ಪಡೆದುಕೊಳ್ಳಲು ಸಾಧ್ಯ. ಸನಾತನ ಗ್ರಂಥಗಳು
ಇರುವುದು ಮಾನವರಿಗಾಗಿಯೇ ಹೊರತು ಮಾನವರಿರುವುದು ಸನಾತನ ಗ್ರಂಥಗಳಿಗಾಗಿ ಅಲ್ಲ’’.
ಸಂಪ್ರದಾಯಗಳೆನ್ನುವ ಕಾರಣಕ್ಕೆ ಅವುಗಳನ್ನು ಯಾವಾಗಲೂ ಸುಮ್ಮನೇ ಒಪ್ಪಿಕೊಳ್ಳುವುದು ಸಮ್ಮತವಾದ ಸಂಗತಿಯಲ್ಲ. ಕೆಲವು ಬಾರಿ ಅವುಗಳನ್ನು ಸಂಶಯಿಸಬೇಕು, ಚರ್ಚೆಗೆ ಒಳಪಡಿಸಬೇಕು. ನಮ್ಮ ವಿವೇಚನೆಯ ಮೂಸೆಯಲ್ಲಿ ಪುಟಕ್ಕಿಕ್ಕಬೇಕು. ಪರಿಶುದ್ಧಗೊಳಿಸಬೇಕು. ಹಳೆಯ ಚಿಂತನೆಗಳಿಗೆ ಹೊಸ ಹೊಳಹು ಕೊಡಬೇಕು. ಅವುಗಳ ಮೇಲೆ ಹಬ್ಬಿದ ಕುರಡು ನಂಬಿಕೆಗಳ ಹಾವಸೆಯನ್ನು ಕಿತ್ತೊಗೆಯಬೇಕು.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ಎಂದೋ ಮನು  ಬರೆದಿಟ್ಟುದಿಂದೆ ಮಗೆ ಕಟ್ಟೇನು ನಿನ್ನದೆಯ ದನಿಯ ಋಷಿ ! ಮನು ನಿನಗೆ ನೀನು! -ಕುವೆಂಪು

ಮಾತಿನಂತೆ ದಿಸೆಯಲ್ಲಿ ನಾವು ಯಾವುದಾದರನ್ನು ನಂಬುದಕ್ಕಿಂತ ಮೊದಲು ನಮ್ಮ ಅಂತರಾಳದ ಮಾತಿಗೆ ಕಿವಿಗೊಡುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಸತ್ಯದ ಪ್ರಜ್ಞೆಯನ್ನು ಜಾಗ್ರತಗೊಳಿಸುವ ದಿಸೆಯತ್ತ ನಮ್ಮ ಒಲವಿರಬೇಕು. ನಮ್ಮ ವಿಚಾರಗಳನ್ನು ಜೀವಕೇಂದ್ರಿತ ನೆಲೆಯಲ್ಲಿ ಅವಲೋಕನಕ್ಕೆ ಒಳಗು ಮಾಡಬೇಕು. ನಮ್ಮ ನಂಬಿಕೆಗಳ ಮಿಡಿತಗಳನ್ನು ನಾವು ಪರೀಕ್ಷಿಸಿ ಅವುಗಳನ್ನು ಅರಿತುಕೊಳ್ಳುವದರಲ್ಲಿ ಬದುಕಿನ ಔನತ್ಯ ಅಡಗಿದೆ.