Saturday, 23rd November 2024

ಓಝೋನ್‌ಗಿಂತ ಗ್ರೀನ್‌ ಝೋನ್‌ ಮುಖ್ಯ

ಮಣ್ಣೆ ಮೋಹನ್‌

ಹಲೋ!ಗೌಡ್ರೆ ಹೇಗಿದ್ದೀರಾ?’ ಫೋನ್ ರಿಂಗಣಿಸಿತು.
‘ಹೋ! ಶಾನುಭೋಗರಾ, ನಾನು ಚಂದ ಇದೀನಿ. ನೀವು?’
‘ಅಂದಹಾಗೆ ನಿಮ್ಮದು ಯಾವ ಗ್ರೂಪ್?’
‘ಇದೇನು ಶಾನುಭೋಗರೆ ಇಂಗೆ ಕೇಳ್ತೀರಾ, ನಿಮಗೆ ಗೊತ್ತಿಲ್ಲವೇ?’
‘ಹಂಗಲ್ಲ ಗೌಡ್ರೆ, ಗ್ರೂಪ್ ಅಂದ್ರೆ ಜನರಲ್, ಓಬಿಸಿ ಅದಲ್ಲ’
‘ಮತ್ತಿನ್ಯಾವುದೊ? ಎ+, ಬಿ+ ಅಂತಾರಲ್ಲ, ಆ ಬ್ಲಡ್ ಗ್ರೂಪಾ?’
‘ಅದೂ ಅಲ್ಲ ಗೌಡ್ರೆ, ಅವೆಲ್ಲಾ ಈಗ ಓಲ್ಡ್ ಆಗೋದೊ. ಹೀಗೆಲ್ಲಾ ರೆಡ್
ಜೋನ್ ಗ್ರೂಪ್, ಆರೆಂಜ್ ಜೋನ್ ಗ್ರೂಪ್, ಗ್ರೀನ್ ಜೋನ್ ಗ್ರೂಪ್
ಅಂತ ಹೊಸ ಗ್ರೂಪ್‌ಗಳು ಬಂದಿವೆ’.
‘ಓಹೋ! ಈಗ ಈ ಹೊಸ ಗ್ರೂಪ್‌ಗಳ ದರ್ಬಾರು, ಕಾರು ಬಾರು ನಡಿತಾ
ಇದೆ ಅನ್ನಿ’
‘ಹಿಂದೆ ಬಿಸಿ , ಎಡಿ ಅಂತಿದ್ರಲ್ಲ, ಈಗ ಬಿಸಿಸಿ, ಎಸಿಸಿ ಆಗಿದೆ’
‘ಹಂಗಂದ್ರೆ?’ ಈ ಇಂಗ್ಲಿಷ್ ಪದಗಳು ಅರ್ಥವಾಗದೆ ತಲೆ
ಕೆರೆದುಕೊಂಡ್ರು ಗೌಡ್ರು.
‘ಬಿಫೋರ್ ಕರೋನಾ ಕೋವಿಡ್, ಆಫ್ಟರ್ ಕರೋನಾ
ಕೋವಿಡ್ ಎಂದು. ಕರೋನಾ ಬರುವುದಕ್ಕೆೆ ಮುಂಚೆ ಇದ್ದ ವರ್ಣಾಶ್ರಮ
ಗ್ರೂಪ್‌ಗಳೆಲ್ಲ ಮಾಯವಾಗಿವೆ.’
‘ಈಗ ಗ್ರೀನ್ ಜೋನ್ ಅಂದ್ರೆ ಸಂಪೂರ್ಣ ಶುದ್ಧ ಅಂತ, ಗ್ರೀನ್ ಆರೆಂಜ್
ಮಧ್ಯೆ ಹೊಯ್ದಾಡ್ತಾ ಇರೋದೆಲ್ಲ ಮಿಶ್ರ ಗುಂಪು ಅಂತ, ಆರೆಂಜ್ ಅಂದ್ರೆ
ಕೋವಿಡ್ ಜಾಸ್ತಿ ಅಂತ, ಇನ್ನೂ ರೆಡ್ ಅಂದ್ರೆ ಪೂರ್ತಿ ಕೋವಿಡ್ ಅಂತ’ ಶಾನುಭೋಗರ ಗ್ರೂಪ್ ವಿಂಗಡಣೆಯಿಂದ ಕಕ್ಕಾಬಿಕ್ಕಿಯಾದ ಗೌಡರು ‘ರೆಡ್ ಆರೆಂಜ್ ಮಧ್ಯೆ ಹೊಯ್ದಾಡ್ತಾ ಇರೋರು?’ ಅಂದ್ರು.
‘ಕೆನೆಪದರದೋರು’. ಇದನ್ನು ಕೇಳಿ ಗೌಡರಿಗೆ ಇನ್ನಷ್ಟು ಕಕ್ಕಾಬಿಕ್ಕಿಯಾಯಿತು. ಎಲ್ಲಿಯ ರೆಡ್ ಜೋನ್, ಎಲ್ಲಿಯ ಕೆನೆಪದರ!
‘ಹಂಗಾದ್ರೆ ಈ ಜೋನ್‌ಗಳು ಅಷ್ಟೊಂದು ಮುಖ್ಯ ಅಂತೀರಾ?’
‘ಓಝೋನ್ ಗಿಂತಲೂ ಗ್ರೀನ್ ಜೋನ್ ಬಹಳ ಮುಖ್ಯ ಗೌಡ್ರೆ’
‘ಹಂಗಾದ್ರೆ ನಮ್ಮೂರಿನ ಬಡ್ಡಿ ಹೈಕಳಿಗೆ ಉಗಿದು ಬುದ್ಧಿ ಹೇಳಿ, ಗ್ರೀನ್
ಜೋನ್ ಇರೋ ಹಾಗೆ ನೋಡ್ಕೋತೀನಿ’
‘ಫಸ್ಟ್‌ ಆ ಕೆಲಸ ಮಾಡಿ, ಅಪ್ಪಿತಪ್ಪಿ ರೆಡ್ ಜೋನ್ ಆದ್ರೆ ಮುಗೀತು ಕತೆ,
1, 2, 3 ಎಲ್ಲಾ ಒಳಗಡೆನೆ‘
‘ಹಾಗಂದ್ರೆ ಏನ್ ಶಾನುಭೋಗರೆ?’ ಮತ್ತೆ ಗೌಡ್ರು ಶಾನುಭೋಗರ ವಿವರಣೆ ಕೇಳಿ ತಲೆ ಕೆರೆದುಕೊಂಡರು.

ಶಾನುಬೋಗರು ಚೊಂಬನ್ನು ಕೈಯಲ್ಲಿ ಹಿಡಿದಂತೆ ಹಾವಭಾವ ಮಾಡುತ್ತಾ, ‘ಅಷ್ಟೂ ಗೊತ್ತಾಗಲಿಲ್ಲವೆ! ಕೆರೆ ಕಡೆ ಕೂಡ ಹೋಗುವಂತಿಲ್ಲ. ಇಡೀ ಊರಿಗೆ ಊರೇ ಸೀಲ್ ಡೌನ್!’

ಫೋನ್‌ನ ಆ ತುದಿಯಲ್ಲಿ ಶಾನುಬೋಗರು ಕುಚೋದ್ಯಕ್ಕೆೆ ಮಾಡಿದ ಚೊಂಬು ಹಿಡಿದ ಕೈ ಭಂಗಿ ಗೌಡರಿಗೆ ಕಾಣಿಸಲಿಲ್ಲ. ಆದರೂ, ಗೌಡರು ಏನೋ ನೆನಪಾದಂತೆ, ತಕ್ಷಣ ಫೋನ್ ಕಟ್ ಮಾಡಿ, ಲಗುಬಗೆಯಿಂದ ಬಾತ್ ರೂಂ ಕಡೆ ಹೊರಟರು.