Saturday, 14th December 2024

ನಿರ್ದೇಶನದತ್ತ ಚಿದಾನಂದ ಚಿತ್ತ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ, ಪಾ..ಪ ಪಾಂಡು ಧಾರಾವಾಹಿ ಪ್ರೇಕ್ಷಕರ ಅಚ್ಚುಮೆಚ್ಚಾಗಿತ್ತು. ಆ ಧಾರಾಹಿಯ ಪಾಂಡು ಪಾತ್ರಧಾರಿ ಪ್ರೇಕ್ಷಕರಿಗೆ ಮಾತ್ರವಲ್ಲ ಮಕ್ಕಳಿಗೂ ಫೇವರಿಟ್ ಆಗಿದ್ದರು.

ಪೇಚಿಗೆ ಸಿಲುಕಿ ಹೆಂಡತಿಯಿಂದ ಪೆಟ್ಟುತಿಂದ ಪಾಂಡುವಿನ ಸ್ಥಿತಿ ನೋಡಿ ಮಕ್ಕಳು ಕೂಡ ಅಯ್ಯೋ ಪಾ..ಪ ಪಾಂಡು ಎಂದು ನಗುತ್ತಿದ್ದರು. ದಶಕಗಳ ಹಿಂದೆಯೇ ಜನಪ್ರಿಯತೆ ಪಡೆದಿದ್ದ ಪಾ..ಪ ಪಾಂಡು ಧಾರಾವಾಹಿ ಎರಡು ಭಾಗದಲ್ಲಿ ಮೂಡಿಬಂದಿತ್ತು. ಈ ಎರಡೂ ಭಾಗದಲ್ಲೂ ನಟ ಚಿದಾನಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ನೋಡುಗರನ್ನು ನಗೆಗಡಲಲ್ಲಿ ತೇಲಿಸಿದರು. ಈ ನಡುವೆಯೇ ಬೆಳ್ಳಿತೆಳ್ಳೆರೆಯಲ್ಲು ಚಿದಾನಂದ್ ಮಿಂಚಿದರು. ಬಹುತೇಕ
ಚಿತ್ರಗಳಲ್ಲಿ ಹಾಸ್ಯ ನಟನಾಗಿಯೇ ಗಮನಸೆಳೆದರು. ಒಂದಷ್ಟು ಚಿತ್ರಗಳಲ್ಲಿ ಸೆಂಟಿಮೆಂಟ್ ಪಾತ್ರಗಳಲ್ಲೂ ನಟಿಸಿದರು. ಜತೆಗೆ ಮೈಮಾ ಮೂಲಕವೂ ಮನೆಮಾತಾದರು. ಈಗ ಅದೇ ಚಿದಾನಂದ್ ನಿರ್ದೇಶನದತ್ತ ಒಲವು ತಾಳಿದ್ದಾರೆ. ಹೌದು, ನಟನೆಗೆ ಮರಳುವ ಮೊದಲೇ ಚಿದಾನಂದ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿವಹಿಸುತ್ತಿದ್ದರು.

ಕೂಡ್ಲು ರಾಮಕೃಷ್ಣ ನಿರ್ದೇಶಿಸಿದ್ದ ಯಾರಿಗೂ ಹೇಳ್ಬೇಡಿ ಚಿತ್ರದಲ್ಲಿ ಸಹಾಯಕರಾಗಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಚಿದಾನಂದ್ ಅವರಿಗಿದೆ. ಈ ಅನುಭವದಿಂದಲೇ ಅವರು ನಿರ್ದೇಶನದತ್ತ ಒಲವು ತಾಳಿದ್ದಾರೆ. ತಮ್ಮ ಸ್ನೇಹಿತ ರೊಂದಿಗೆ ಸೇರಿ ಕಥೆಯನ್ನು ರಚಿಸಿದ್ದು, ಕರೋನಾ ಮುಗಿದ ಬಳಿಕ ಚಿತ್ರ ಸೆಟ್ಟೇರಲಿದೆ. ಈ ಚಿತ್ರವೂ ಕೂಡ ಹಾಸ್ಯಮಯ
ಚಿತ್ರವಾಗಿರುವುದರಲ್ಲಿ ಅನುಮಾನವೇ ಇಲ್ಲ. ವಿಶೇಷ ಎಂದರೆ ಹೊಸ ಸಿನಿಮಾದಲ್ಲಿ ಚಿದಾನಂದ್ ಅವರೇ ನಾಯಕರಾಗಿ ಬಣ್ಣಹಚ್ಚಲಿದ್ದಾರೆ.

ಪಾಂಡು ಧಾರಾವಾಹಿಯಲ್ಲಿ ಕೆಲಸ ಮಾಡಿದ ಕೆಲವು ಸ್ನೇಹಿತರು ಸೇರಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪಾಂಡುವಿನ ಜತೆಯಾಗಿ ನಟಿಸುವ ನಾಯಕಿ ಯಾರು ಎಂಬ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ತೆರೆಬೀಳಲಿದೆ. ಇನ್ನುಳಿದಂತೆ ಹಿರಿಯ ಕಿರಿಯ ಹಾಸ್ಯ ಕಲಾವಿದರೂ ಚಿತ್ರದಲ್ಲಿ ನಟಿಸಲಿದ್ದಾರೆ.