Saturday, 14th December 2024

ಆತ್ಮತೃಪ್ತಿಯ ಬದುಕು ಶ್ರೇಷ್ಠ

ಚಂದ್ರಶೇಖರ ಸ್ವಾಮೀಜಿ

ಒಳ್ಳೆ ಮಾತನ್ನು ಇಷ್ಟ ಪಡುವುದು ಕಷ್ಟ. ಒಳ್ಳೆ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವೆರಡನ್ನೂ ಅರ್ಥ ಮಾಡಿಕೊಂಡರೆ ಜೀವನ ಸುಂದರವಾಗುವುದು. ನಮ್ಮಲ್ಲಿರುವ ಒಳ್ಳೆಯದನ್ನು ಹುಡುಕು. ಯಾಕೆಂದರೆ ನಮ್ಮಲ್ಲಿರುವ ಕೆಟ್ಟದ್ದನ್ನೆಲ್ಲ ಹುಡುಕಿ, ಕೆದಕಿ ತೋರಿಸಲು ಜನರಿದ್ದಾರೆ.

ಜಗತ್ತಿನ ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ ಅಥವಾ ನಾನು ಮಾತ್ರ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇರಲಿ. ಆ ಆತ್ಮ ವಿಶ್ವಾಸವು ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಬಹುದು. ದಾರಿದೀಪವಾಗಬಹುದು. ದಾರಿದೀಪ ಕೇವಲ ಬದುಕಿಗೆ ಅಥವಾ ಸಮಾಜಕ್ಕೆ ಬೆಳಕಾಗಿರಬೇಕು. ಹೊರತು ಅದು ನಾಡು ಸುಡುವ ಕಾಡ್ಗಿಚ್ಚಾಗಬಾರದು. ಮಾತ್ರವಲ್ಲ ಎಲ್ಲವೂ ತನ್ನಿಂದಲೇ ಆಗಿದ್ದು ಎಂಬ ಅಹಂಕಾರ ಬೇಡ ಅಷ್ಟೆೆ!

ಸ್ವಾರ್ಥ ಇಲ್ಲದೆ ಮನುಷ್ಯನ ಬದುಕು ಇಲ್ಲ. ಆದರೆ ಸ್ವಾರ್ಥದಲ್ಲಿ ಮತ್ತೊಬ್ಬರ, ಸಮಾಜದ ಉದ್ಧಾರದೊಂದಿಗೆ ತನ್ನ ಶ್ರೇಯಸ್ಸು ಸೇರಿದ್ದರೆ ಖಂಡಿತ ತಪ್ಪಿಲ್ಲ. ಮತ್ತೊಬ್ಬರಿಗೆ ನ್ಯಾಯವಾಗಿ ಸಂದಾಯ ಆಗ ಬೇಕಾದುದನ್ನು ಮೋಸದಿಂದ, ವಂಚನೆಯಿಂದ, ಸುಳ್ಳು ಹೇಳುವುದರಿಂದ ಗಳಿಸಿಕೊಂಡರೆ ಅದು ಒಂದಲ್ಲ ಒಂದು ದಿನ ತನ್ನವರನ್ನು ಸುಡುವಂತಹ ಬೆಂಕಿಯಾಗುತ್ತದೆ. ಮಡಿ ಲಲ್ಲಿ ಕಟ್ಟಿಕೊಂಡ ಕೆಂಡದ ಹಾಗೆ ಆಗುತ್ತದೆ. ಒಂದಲ್ಲ ಒಂದು ದಿನ ನಾವು ನಮ್ಮ ಕುಟುಂಬದವರು ಅನುಭವಿಸುವ ಸಂಕಟಕ್ಕೆ, ತೊಂದರೆಗೆ ಕಾರಣರಾಗುತ್ತೇವೆ. ಆಗ ಅನುಭವಿಸುವವರಿಗೆ ಏನು ತಿಳಿಯದೆ ಅಬ್ಬ ಏನು ಗ್ರಹಚಾರ ನನಗೆ ಯಾಕೆ ಹೀಗಾಯ್ತು ಎಂಬುದಾಗಿ ಸಂಕಟ ಪಡುವುದಕ್ಕೆ ಕಾರಣವಾಗುತ್ತದೆ. ಇದು ಪ್ರಪಂಚ. ನಮಗೆ ಅರ್ಥವಾಗುವಾಗ ಕಾಲ ಮೀರಿರುತ್ತದೆ. ಮೀರಿದ ಕಾಲವನ್ನು ಕಟ್ಟಿಹಾಕಲು ಕಾಲನಿಂದ ಮಾತ್ರ ಸಾಧ್ಯ.

ದೀಪಕ್ಕೆ ಎಲ್ಲರೂ ಸಮಾನ

ದೀಪವು ಅರಸನ ಅರಮನೆಯಲ್ಲೂ, ಆಳಿನ ಗುಡಿಸಲಿನಲ್ಲೂ ಸಮಾನವಾಗಿ ಬೆಳಕು ನೀಡುತ್ತದೆ. ಯಾರ ಮನೆ ಎಂದು
ತೀರ್ಮಾನಿಸಿ ತನ್ನ ಪ್ರಖರತೆಯನ್ನು ನಿರ್ಧರಿಸುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹಾಗೆಯೇ
ನಾವೂ ದೀಪದಂತೆ ಎಲ್ಲರಿಗೂ ಸಮಾನವಾದ ಬೆಳಕಾಗಬೇಕು. ಒಳ್ಳೆ ಮಾತನ್ನು ಇಷ್ಟ ಪಡುವುದು ಕಷ್ಟ. ಒಳ್ಳೆ ಮನಸ್ಸನ್ನು
ಅರ್ಥ ಮಾಡಿಕೊಳ್ಳುವುದು ಕಷ್ಟ. ಇವೆರಡನ್ನೂ ಅರ್ಥ ಮಾಡಿಕೊಂಡರೆ ಜೀವನ ಸುಂದರವಾಗುವುದು. ನಮ್ಮಲ್ಲಿರುವ ಒಳ್ಳೆಯ ದನ್ನು ಹುಡುಕು. ಯಾಕೆಂದರೆ ನಮ್ಮಲ್ಲಿರುವ ಕೆಟ್ಟದ್ದನ್ನೆಲ್ಲ ಹುಡುಕಿ, ಕೆದಕಿ ತೋರಿಸಲು ಜನರಿದ್ದಾರೆ.

ಅದೇ ರೀತಿ ನಾವು ಹೆಜ್ಜೆಯನ್ನು ಇಡುವುದಾದರೆ ಮುಂದೆ ಇಡಬೇಕು. ಯಾಕೆಂದರೆ ನಮ್ಮನ್ನು ಹಿಂದಕ್ಕೆ ಎಳೆಯಲು  ಜನರಿದ್ದಾರೆ. ಕೆಟ್ಟವರ ಮೇಲೆ ನಂಬಿಕೆ ಇಡುವುದು ಮತ್ತು ಒಳ್ಳೆಯವರ ಮೇಲೆ ಸಂಶಯಪಡುವುದು ತೊಂದರೆಗಳಿಗೆ ಎಡೆ ಮಾಡಿಕೊಡುತ್ತದೆ. ನಾವೆಲ್ಲರೂ ಸುಖದ ಬಯಕೆಯಿಂದಲೇ, ಸುಖವನ್ನು ಬೆನ್ನತ್ತಿಕೊಂಡು ಪ್ರತೀ ಕ್ಷಣ ಹೋರಾಟ ಮಾಡುತ್ತಿರುತ್ತೇವೆ. ಸುಖದ ಪ್ರಾಪ್ತಿಗಾಗಿಯೇ ಎಲ್ಲವನ್ನೂ ಮಾಡುತ್ತೇವೆ.

ಸುಖಕ್ಕೂ ಆನಂದಕ್ಕೂ ಬಹಳ ವ್ಯತ್ಯಾಸವಿದೆ. ಅ ವ್ಯತ್ಯಾಸವನ್ನು ಅರಿತುಕೊಳ್ಳುವಲ್ಲಿ, ವ್ಯಾಖ್ಯಾನಿಸುವಲ್ಲಿ ವಿಫಲವಾಗಿ
ಬದುಕಿನ ಹಾದಿಯೇ ಬದಲಾಗಿದೆ. ಸುಖವು ಎಂದೆಂದಿಗೂ ಅಹಂಕಾರದ ಸಂಕೇತವಾದರೆ ಆನಂದವು ಪ್ರೀತಿಯ ಸಮ್ಮಿಶ್ರಣದ ತ್ಯಾಗದ ಸಂಕೇತ. ದುಃಖವೇ ಇಲ್ಲದ, ನಿರಂತರವಾಗಿ ಸಿಗುವ ಉನ್ನತ ಮಟ್ಟದ ಸುಖ(ಶಾಶ್ವತಸುಖ)ವೇ ಆನಂದ. ಆನಂದ ಅಂದರೆ ಅಕ್ಷರಶಃ ಪರಮಸುಖ ಅಥವಾ ಸಂತೋಷ. ಆದರೆ ಮನುಷ್ಯರು ಕ್ಷಣಿಕ ಸುಖವನ್ನೇ ಆನಂದವೆಂದು ಭ್ರಮಿಸಿ ರಮಿಸುತ್ತಾರೆ.

ಆನಂದ ಶಬ್ದವು ಶಾಶ್ವತ ಸುಖವನ್ನು ಸೂಚಿಸುತ್ತದೆ ಮತ್ತು ಇದು ಸಂಸಾರದ ಅಂತ್ಯದ ಜೊತೆಗಿರುತ್ತದೆ. ಮಾನವರು ಪರಸ್ಪರ ಭಿನ್ನವಾಗಿರುತ್ತಾರೆ ಮತ್ತು ಪ್ರತಿಯೊಬ್ಬರೂ ಆನಂದಕ್ಕೆ ತಮಗೆ ಅತ್ಯಂತ ಸೂಕ್ತವಾದ ಹಾದಿಯನ್ನು ಆರಿಸಿಕೊಳ್ಳುತ್ತಾರೆ.

ಹಿತವಾದ ಮಾತು

ಮೃದುವಾದ ಮಾತಿನೊಂದಿಗೆ ನಡೆ ಮತ್ತು ಭಾವವೂ ಹಿತವಾಗಿದ್ದರೆ ಮಾತ್ರ ಪರಿಪೂರ್ಣತೆ ಕಾಣಬಹುದು. ಇಲ್ಲದಿದ್ದರೆ ಮೃದು ವಾದ ಮಾತು ಮಾತ್ರ ಇದ್ದು ಕೃತಿ ವಿಕೃತವಾಗಿದ್ದರೆ ಅದು ಅಪಾಯಕಾರಿ. ಇದರಿಂದಾಗಿಯೇ ಸುಖದೊಂದಿಗೆ ದುಃಖ ಸದಾ ಒಟ್ಟಿಗೆ ಇರುತ್ತದೆ. ಆದರೆ ಆನಂದದೊಂದಿಗೆ ಯಾರೂ ಇರುವುದಿಲ್ಲ. ಸುಖವು ಒಂದು ಭಾಗದಷ್ಟಿದ್ದರೆ, ದುಃಖವು ಅದರ ಮೂರು ಭಾಗ ಕ್ಕಿಂತಲೂ ಹೆಚ್ಚಾಗಿರುತ್ತದೆ.

ಒಂದನ್ನು ಬಿಟ್ಟು ಇನ್ನೊಂದಿಲ್ಲ. ಸುಖದ ಅನುಭವ ಕ್ಷಣಿಕ, ದುಃಖದ ಅನುಭವ ಅಧಿಕ. ಆದರೆ ಆನಂದ ಎಂಬುದು ಶಾಶ್ವತ.
ವಿಶ್ವದಲ್ಲಿ ಎಲ್ಲರ ದುಡಿತವೂ ಕೀರ್ತಿಯ ಉದ್ದೇಶದಿಂದ ಕೂಡಿರುತ್ತದೆ. ದುಡಿತದ ಮೂಲ ಉದ್ದೇಶವೇ ಕೀರ್ತಿ, ಐಶ್ವರ‌್ಯ. ಕೀರ್ತಿ
ದೇಹ ಸಂತೃಪ್ತಿಗೆ ಅಂದರೆ ಸುಖಕ್ಕಾಗಿ ಮೀಸಲಾಗಿರುತ್ತದೆ. ಆತ್ಮಶಕ್ತಿ ವೃದ್ಧಿಯೊಂದಿಗೆ, ಆತ್ಮತೃಪ್ತಿಯ ಬದುಕೇ ಆನಂದ. ಆನಂದ ದೊರೆತರೆ, ಪರಮಾನಂದಕ್ಕಾಗಿ ಹೋರಾಟ. ಪರಮಾನಂದ ದೊರೆತರೆ ಬ್ರಹ್ಮಾನಂದಕ್ಕಾಗಿ ಶ್ರಮ. ಬ್ರಹ್ಮಾನಂದ ಎಂಬುದು ಬದುಕಿನ ಶ್ರೇಷ್ಠ ಘಟ್ಟ. ಬ್ರಹ್ಮಾನಂದದ ಬದುಕು ಇಂದಿನ ದಿನದಲ್ಲಿ ನಮಗೆ ಸಾಧ್ಯವಿಲ್ಲ. ಆದರೆ ಕನಿಷ್ಠ ಆನಂದದ ಬದುಕು ಕಾಣುವ ಕನಸು ನಾವು ಕಾಣಬೇಕು.

ಬದುಕಿನಲ್ಲಿ ಆನಂದ ಹಂತಕ್ಕೆ ತಲುಪಲು ಮನಸ್ಥಿತಿಯಿಂದ ಹೋರಾಡಬೇಕು. ಮಾದಕ ವ್ಯಸನಕ್ಕೆ ಬಲಿಯಾಗುವ ಯುವ ಪೀಳಿಗೆಯು ಮತ್ತು ಯುವ ಪೀಳಿಗೆಯ ಪೋಷಕರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಮಕ್ಕಳು ಹಾದಿ ತಪ್ಪದಂತೆ ಪೋಷಕರು ಹಾಗೂ ತಾವು ಹಾದಿತಪ್ಪದಂತೆ ಯುವ ಪೀಳಿಗೆ ಎಚ್ಚರ ವಹಿಸಿಕೊಂಡು ನಿಜವಾದ ಆನಂದದ ಬಗ್ಗೆ ಅರಿತುಕೊಳ್ಳ ಬೇಕು. ನಾವು ನಮ್ಮ ಸ್ನೇಹಿತರು, ಪರಿಚಯಸ್ಥರು, ಕುಟುಂಬದವರು ಯಶಸ್ಸು ಕಾಣುವಾಗ ನಮಗೆ ಸಂತಸ ಹೆಚ್ಚಾಗಬೇಕು. ಆದರೆ ಅಲ್ಲಿ ಅಸೂಯೆ ಹುಟ್ಟುತ್ತದೆ.

ದುರಂತ ಎಂದರೆ ನಾವು ಸಾಮಾನ್ಯವಾಗಿ ಹೋಲಿಕೆ ಮಾಡಿಕೊಳ್ಳುವುದು ಮತ್ತು ಅಸೂಯೆ ಪಡುವುದು ನಮ್ಮ ಪರಿಚಯಸ್ಥರ, ಸ್ನೇಹಿತರ, ಬಂಧು-ಬಳಗದವರೊಂದಿಗೆ ಅಥವಾ ಸರಿ ಸಮಾನದವರೊಂದಿಗೆ ಮಾತ್ರ. ಪ್ರಪಂಚದ ಶ್ರೇಷ್ಠಸಾಧಕರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿರುವವರ ವಿಷಯದಲ್ಲಿ ಮಾತ್ರ ಅಸೂಯೆ ಪಟ್ಟುಕೊಳ್ಳುತ್ತೇವೆ. ನಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಅಸೂಯೆ ಪಟ್ಟುಕೊಳ್ಳುವುದು ತಪ್ಪು ಎಂಬ ಭಾವನೆಯೂ ನಮ್ಮಲ್ಲಿ ಮೂಡುವುದಿಲ್ಲ.

ಅಸೂಯೆಯು ನಮ್ಮಲ್ಲಿರುವ ನಕಾರಾತ್ಮಕ ಯೋಚನೆಯನ್ನು ತೋರಿಸುತ್ತದೆ. ನಮ್ಮಲ್ಲಿ ಏನೇನು ಇಲ್ಲ ಎಂಬುದರ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ. ಸಕಾರಾತ್ಮವಾಗಿದ್ದರೆ ನಮಗೆ ಅಸೂಯೆ ಹುಟ್ಟುವುದೇ ಇಲ್ಲ. ಹಾಗಾಗಿ ಸಕಾರಾತ್ಮಕವಾಗಿ ಯೋಚಿಸುತ್ತಾ, ಆನಂದ ಪಡೆಯೋಣ.

ಆನಂದದಿಂದ ಬದುಕಿ
ಇತರರಿಗೆ ಅಪಕಾರವನ್ನುಂಟು ಮಾಡುವ ಕೆಲಸವನ್ನು ಮಾಡದೆ ಮತ್ತು ತನ್ನ ಮನಸ್ಸಿಗೆ ನಾಚಿಕೆಯುಂಟಾಗುವಂತಹ ಕೆಲಸ ವನ್ನು ಮಾಡದೇ ಇರುವುದು, ಮನೋವಾಕ್ಕಾಯಗಳಿಂದ (ಮನ+ವಾಕ್+ಕಾಯ) ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು, ಯಾರಿಗೂ ದ್ರೋಹವನ್ನು ಮಾಡದ ಬದುಕೇ ಶ್ರೇಷ್ಠ. ಆದುದರಿಂದ ಶೀಲವಂತರಾಗಿ, ಆನಂದದಿಂದ ಬದುಕಿ ಬ್ರಹ್ಮಾನಂದ ಪಡೆ ಯಲು ಹೆಜ್ಜೆ ಇಡೋಣ.

ಸಂತೋಷ ಮಾನವನ ಸಹಜ ಸ್ಥಿತಿ
ಸಂತೋಷವು ಮಾನವಕುಲದ ಸಹಜ ಸ್ಥಿತಿಯಾಗಿದೆ. ಮಾನವಕುಲವು ನೋವು ಮತ್ತು ಆಹ್ಲಾದದ ಉಭಯತ್ವಗಳನ್ನು ಬೆಳೆಸು ತ್ತದೆ. ನೋವು ಹಾಗೂ ಕಷ್ಟಗಳ ಪರಿಕಲ್ಪನೆಗಳು ಮನಸ್ಸು ಕಾಲಾನಂತರದಲ್ಲಿ ಬೆಳೆಸಿಕೊಂಡ ಅಭ್ಯಾಸಗಳ ಕಾರಣ. ಮನಸ್ಸು ಯಶಸ್ಸು, ಘನತೆ ಮತ್ತು ವಿಜಯವನ್ನು ಆಹ್ಲಾದಕರ ಸಂಗತಿಗಳೆಂದು ಮತ್ತು ಸೋಲು, ವೈಫಲ್ಯ, ದುರಾದೃಷ್ಟವನ್ನು ಅಹಿತಕರ ಸಂಗತಿಗಳೆಂದು ಕಾಣುತ್ತದೆ. ಎಲ್ಲ ಬಯಕೆ, ಸಂದೇಹ, ಕ್ರಿಯೆ, ಕಷ್ಟ, ನೋವು ಮತ್ತು ಸಾಮಾನ್ಯ ದೈಹಿಕ ಹಾಗೂ ಮಾನಸಿಕ ಆಹ್ಲಾದಗಳಿಂದ ಮುಕ್ತವಾದಾಗ ಎನಿಸುವ ಮಹೋನ್ನತ ಸಂತೋಷದ ಸ್ಥಿತಿಯೇ ಆನಂದ. ಆನಂದ ಶಬ್ದವು ಬ್ರಹ್ಮನ್ ಅನ್ನು ಸೂಚಿಸಲು. ಬ್ರಹ್ಮನ್ ಅಂದರೆ ಅಂತರತಮ ಆತ್ಮ, ಇದಕ್ಕೆೆ ಯಾವುದೇ ವಾಸ್ತವ ಬಂಧನಗಳಿಲ್ಲ.