Sunday, 15th December 2024

ಕಮೂ ಬರೆದ ಪ್ಲೇಗ್‌ ಮತ್ತು ವೈದ್ಯನ ಮನಸ್ಸು

ಡಾ.ಕೆ.ಎಸ್‌.ಪವಿತ್ರ

ಪ್ಲೇಗ್ ರೋಗದ ನೆಪ ಮಾಡಿಕೊಂಡು, ಮನುಷ್ಯ ಜೀವಿತದ ಅಸಂಗತತೆಯನ್ನು ವಿಶ್ಲೇಷಿಸಲು ಯತ್ನಿಸುವ ಈ ಕಾದಂಬರಿಯು, ಈಗ ಒಂದು ವರ್ಷದಿಂದ ಬಹು ಚರ್ಚಿತ ಕೃತಿಯಾಗಿ ಹೊರಹೊಮ್ಮಿದೆ. ಏಳು ದಶಕಗಳ ಹಿಂದೆ ಕಮೂ ಬರೆದ ಈ ಕಾದಂಬರಿಯು, ಥಟ್ಟನೇ 2020ರ ಸನ್ನಿವೇಶವನ್ನು, ಈಗ ಒಂದು ವರ್ಷ ದಿಂದ ಜಗತ್ತು ಎದುರಿಸುತ್ತರುವ ತಲ್ಲಣವನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆಯೇನೋ ಎಂಬಷ್ಟು ಪ್ರಾಮುಖ್ಯತೆ ಪಡೆದಿದೆ. ಪ್ಲೇಗ್‌ನಂತಹ ಸೋಂಕು ರೋಗಗಳು, ಹೇಗೆ ಮನುಷ್ಯನ ಮನೋಗತದ ಮೇಲೆ ಪರಿಣಾಮ ಬೀರಬಲ್ಲದು ಮತ್ತು ಮನುಷ್ಯನ ಯೋಚನಾಕ್ರಮವನ್ನು ಬದಲಿಸಬಲ್ಲವು ಎಂಬುದನ್ನು,
ಕರೋನಾ ಹಿನ್ನೆಲೆಯಲ್ಲಿ ಮನೋವೈದ್ಯೆಯೊಬ್ಬರು ಇಲ್ಲಿ ವಿಶ್ಲೇಷಿಸಿದ್ದಾರೆ.

ಆಲ್ಬರ್ಟ್ ಕಮೂನ ಬಗ್ಗೆ ಸಾಹಿತ್ಯ ಜಗತ್ತಿನಲ್ಲಿ ಗೊತ್ತಿರದವರು ವಿರಳ. ನೊಬೆಲ್ ವಿಜೇತ, ಫ್ರೆಂಚ್ ತತ್ವಜ್ಞಾನಿ-ಲೇಖಕ ಬರೆದ ಪುಸ್ತಕ ‘ಲಾ ಪೆಸ್ವೆ’ (ದಿ ಪ್ಲೇಗ್) ಪ್ರಕಟವಾದದ್ದು 1947ರಲ್ಲಿ. ಅಂದರೆ ನಮಗೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ!

40ರ ದಶಕದಲ್ಲಿ ಫ್ರೆಂಚ್ ಅಲ್ಜೀರಿಯಾದ ಒಂದು ಪುಟ್ಟ ಪಟ್ಟಣದಲ್ಲಿ ಪ್ಲೇಗ್ ಸೃಷ್ಟಿಸಿದ ವಾತಾ ವರಣದ ಕಥೆ ಈ ಕಾದಂಬರಿಯ ಮುಖ್ಯ ಹಿನ್ನೆಲೆ. ಪ್ಲೇಗ್‌ಗೆ ಒಳಗಾದ, ಒಳಗಾಗದ ವಿಭಿನ್ನ ಜನರ ಪ್ರತಿಕ್ರಿಯೆಗಳನ್ನು ತನ್ನ ವಿಶಿಷ್ಟ ‘ಅಸಂಗತ’ ತಾತ್ವಿಕ ಮಸೂರದಡಿ ಕಮೂ ಚಿತ್ರಿಸುತ್ತಾನೆ. ಈ ಕಾದಂಬರಿ ಬಂದು ಸುಮಾರು 70 ವರ್ಷಗಳ ನಂತರ, ಅಂದರೆ ಈಗ, ‘ಪ್ಲೇಗ್’ ನಂತಹುದೇ ಮತ್ತೊಂದು ಕಾಯಿಲೆಯಿಂದ 18 ಕೋಟಿಗೂ ಹೆಚ್ಚು ಜನ ಸೋಂಕಿತರಾಗಿ, 40 ಲಕ್ಷದಷ್ಟು ಜನ ಮರಣ ಹೊಂದಿರುವಾಗ ಸಹಜವಾಗಿ ನಮ್ಮೆಲ್ಲರ ಮನಸ್ಸು ಇತಿಹಾಸದ ಪುಟಗಳನ್ನು ಕುತೂಹಲದಿಂದ ತಿರುಗಿಸಲಾರಂಭಿಸುತ್ತದೆ.

ಹೀಗೆ ತಿರುಗಿಸಲು ಪ್ರಚೋದನೆ ನೀಡಿದ ಕಾದಂಬರಿ ಲೇಖಕ, ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್‌ರವರು ಅನುವಾದಿಸಿರುವ ಕಮೂನ ‘ಪ್ಲೇಗ್’. ನಿರಂಜನರ ‘ತಾಯಿ’ (ಮ್ಯಾಕ್ಸಿಂ ಗೋರ್ಕಿ), ‘ಮೃತ್ಯುಂಜಯ’ ಕಾದಂಬರಿಗಳಂತೆ ‘ಗಂಭೀರ ಕಥೆ’ ಎಂದೆನಿಸಿದರೂ, ‘ರಂಜನೀಯ’ ಎನಿಸದಿದ್ದರೂ, ಮನಸ್ಸನ್ನು ದೀರ್ಘಕಾಲ ಕಾಡುವ ಕಥೆಯಿದು. ಕನ್ನಡದ ಅನುವಾದ, ಅನುವಾದದಂತೆ ಇರದೆ, ನಮ್ಮದೆ ಊರಿನ ಚಿತ್ರಣದಂತೆ ಇರುವುದೇ ಈ ಕಾದಂಬರಿ ನಮ್ಮನ್ನು
ಮತ್ತಷ್ಟು ತಟ್ಟುತ್ತದೆ.

ಒಬ್ಬ ವೈದ್ಯೆಯಾಗಿ, ‘ಕೊರೋನಾ’ದ ವಿವಿಧ ಮುಖಗಳನ್ನು ನೋಡಿರುವ ನನಗೆ ‘ಪ್ಲೇಗ್’ ಕಾದಂಬರಿ ನೀಡಿದ ಒಳನೋಟಗಳು ಹಲವು. ನಾನು ಅನುಭವಿಸಿರುವ, ನೋಡಿರುವ ಸಂದರ್ಭಗಳು ಕಾದಂಬರಿಯಲ್ಲಿ ಬಂದಾಗ ತಾದಾತ್ಮ್ಯದ ಭಾವ ಮೂಡಿಸಿದರೆ, ಕೆಲ ಸಂದರ್ಭಗಳಲ್ಲಿ ನಾವು ಗಮನಿಸಿರದ ಎಷ್ಟೋ ಅಂಶಗಳು ಕಾದಂಬರಿ ಓದಿದ ನಂತರ ಬುದ್ಧಿ- ಭಾವಗಳಿಗೆ ಹೊಳೆದು ಅಚ್ಚರಿ ಮೂಡಿಸಿಬಿಡುತ್ತವೆ. ಶ್ರೇಷ್ಠ ಸಾಹಿತ್ಯವೆಂದರೆ ‘ಅದು ದೇಶ-ಕಾಲ-ಭಾಷೆಗಳನ್ನು ಮೀರಿದ
ಬರವಣಿಗೆ’ ಎಂಬ ರಾಘವೇಂದ್ರರಾಯರ ಮಾತುಗಳು ‘ಸತ್ಯ’ ಎನಿಸುತ್ತವೆ. ಅವರು ಹೇಳುವ ‘ಕರೋನಾ ಬಂದಿತೆಂದು ಇದರ ಮಹತ್ವ ಹೆಚ್ಚಾಗುವುದಿಲ್ಲ, ಹೋಯಿತೆಂದು ಕಡಿಮೆಯಾಗುವುದಿಲ್ಲ’ ಮಾತುಗಳು ನಿಜವಾಗಿರಬಹುದು.

ಆದರೂ ಒಬ್ಬ ವೈದ್ಯೆಯಾಗಿ ನನ್ನ ಮಟ್ಟಿಗೆ ಈ ಕಾದಂಬರಿ ಕೊರೋನಾದ ಕಾರಣದಿಂದಾಗಿಯೇ ನನಗೆ ಈ ಹೊತ್ತಿನಲ್ಲಿ ಮುಖ್ಯವೆನಿಸುತ್ತದೆ. ಸಾಹಿತ್ಯದ ಶಕ್ತಿಯನ್ನು ಮನದಟ್ಟು ಮಾಡಿಸುತ್ತದೆ. ಸತ್ಯ ನಿರೂಪಣೆ-ಸತ್ಯ ಶೋಧನೆಗಳೇ ಇಲ್ಲಿನ ಮುಖ್ಯ ಉದ್ದೇಶ. ಹಾಗಾಗಿ ಉತ್ಪ್ರೇಕ್ಷೆ, ಭಾವಾವೇಶ, ಭಾವುಕತೆ, ರಂಜ
ಕತೆ ಇವುಗಳಲ್ಲಿ ನಿರೀಕ್ಷಿಸುವಂತಿಲ್ಲ. ಓದುತ್ತಾ, ಓದುತ್ತಾ ನಿರ್ಲಿಪ್ತತೆಗೂ ಮನಸ್ಸನ್ನು ಮುಟ್ಟುವ ಶಕ್ತಿಯಿದೆ ಎಂಬುದು ಅರಿವಾಗಬೇಕು. ಈಗಿನ ಸಂದರ್ಭಕ್ಕೆ ಮಾತ್ರ ಇದರ ಕಾಣ್ಕೆಯನ್ನು ಸೀಮಿತವಾಗಿಸುವುದಾಗಲಿ ಅಥವಾ ಸಾಹಿತ್ಯದ ಅಳತೆಗೋಲಿನಿಂದ ಅಳೆಯುವುದಾಗಲಿ ಈ ಕಥೆಯ ವ್ಯಾಪ್ತಿಯನ್ನು ಕುಗ್ಗಿಸಿ ಬಿಡುವ ಅಪಾಯದತ್ತ ನಮ್ಮ ಗಮನವನ್ನು ಪುಸ್ತಕದ ಕೊನೆಯಲ್ಲಿರುವ ಟಿಪ್ಪಣಿ ಸೆಳೆಯುತ್ತದೆ.

ಒರಾನ್ ನಗರಕ್ಕೆ 1940ರ ದಶಕದಲ್ಲಿ ಯಾವುದೋ ಒಂದು ವರ್ಷದ ಏಪ್ರಿಲ್‌ನಲ್ಲಿ ಹಠಾತ್ತನೆ ‘ಪ್ಲೇಗ್’ ಬಂದೆರಗುತ್ತದೆ. ‘ಪ್ಲೇಗ್‘ ಎಂಬ ಕಾಯಿಲೆಯ ರೂಪಕದಲ್ಲಿ ಹಲವು ರೀತಿಯ ‘ಸೋಂಕು’ಗಳು ಬಂದೆರಗುವುದನ್ನು ಕಾಣುತ್ತೇವೆ. ಒಬ್ಬ ಮನೋವೈದ್ಯೆಯಾಗಿ ಕೊರೋನಾ ಹರಡುತ್ತಿರುವ ಸೋಂಕಿನ ಜೊತೆಗೇ ವಿವಿಧ ರೀತಿಯ ಮಾನಸಿಕವಾದ ಸೋಂಕುಗಳನ್ನೂ ಸಮಾಜದಲ್ಲಿ ಗಮನಿಸುವ ನನಗೆ ‘ಪ್ಲೇಗ್’ ಕಾದಂಬರಿ ಕೇವಲ ಸಾಹಿತ್ಯಿಕ ಸೃಷ್ಟಿಗಿಂತ, ಜೀವನ-ಸಾಹಿತ್ಯ-ಸಾವು-ಕಾಯಿಲೆ-ಸಮಾಜ ಎಲ್ಲವನ್ನೂ ಬೆಸೆಯುವ ದಾಖಲೆಯಾಗುತ್ತದೆ. ಕರೋನಾ ಸಮಯದಲ್ಲಿ ಅತಿ ಒತ್ತಡದಲ್ಲಿ ಬದುಕುತ್ತಿರುವವರು ವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆ.

ನಂತರದ ಚಿಂತೆಯ ಬಹುಪಾಲು ಸೋಂಕಿಗೊಳಗಾಗಿ ಕ್ವಾರಂಟೈನ್ ಅಥವಾ ಆಸ್ಪತ್ರೆಯಲ್ಲಿರುವವರದ್ದು. ಅನಿಶ್ಚಿತತೆಯ ಸಂಕಟದ ನಡುವೆ ಅವರ ಬದುಕು. ಇಂಥ ಸಾಮಾಜಿಕವಾಗಿ ಬೆರೆಯಲು ಸಾಧ್ಯವಿಲ್ಲದ ಸನ್ನಿವೇಶ ಅಂದೂ ಇತ್ತು. ಅಂತರ್ಜಾಲ ಮೊಬೈಲುಗಳಿಲ್ಲದ ಸಂದರ್ಭ! ವೈದ್ಯಕೀಯ ಜಗತ್ತು, ಆಡಳಿತ ವ್ಯವಸ್ಥೆಯ ಪರದಾಟ, ಸೋಂಕಿಗೀಡಾದವರ ಶಿಬಿರದಲ್ಲಿ ನೋವು-ಹತಾಶೆ ಇವುಗಳು ಪದರ ಪದರವಾಗಿ ಇಂದು ನಾವು ಪ್ರತಿನಿತ್ಯ ನೋಡುತ್ತಿರುವಂತೆ ಇಲ್ಲಿಯೂ ಬಿಚ್ಚಿಕೊಳ್ಳುತ್ತವೆ.

ಕಾದಂಬರಿಯಲ್ಲಿ ಬರುವ ಕೆಲ ಸಾಲುಗಳು ‘ಇವರು ದಿನವೆಲ್ಲಾ ಏನು ಮಾಡ್ತಾರೆ?’, ‘ಏನೂ ಮಾಡಲ್ಲ’, ಬಹುಪಾಲು ಜನರ ಕೈ ಖಾಲಿ ಇತ್ತು. ತೋಳು ಸುಮ್ಮನೆ
ಜೋತಾಡುತ್ತಿದ್ದವು. ಈ ದಿಕ್ಕೆಟ್ಟ ಜನಸಮುದಾಯದ ವಿಚಿತ್ರ ಲಕ್ಷಣವೆಂದರೆ ಅದರ ಮೌನ. ರೋಂಬೆ ಹೇಳಿದ ‘ಇವರು ಇಲ್ಲಿಗೆ ಬಂದ ಹೊಸದರದಲ್ಲಿ ನಾವು ಆಡಿದ ಮಾತು ನಮಗೇ ಕೇಳಿಸ್ತಿರಲಿಲ್ಲ. ಅಷ್ಟು ಗಲಾಟೆ ಇರ‍್ತಾ ಇತ್ತು. ದಿನ ಕಳೆದ ಹಾಗೆ ಇವರು ಮಾತು ಕಡಿಮೆ ಮಾಡಿದ್ರು. ಈಗಂತೂ ನಿಂತೇ ಹೋಗಿದೆ’- ಈ ಸಾಲುಗಳು ತಮ್ಮೊಳಗೆ ಹೊಂದಿರುವ ನೋವಿನ ಚಿತ್ರಣ, ಇಂದು ವೈದ್ಯರೆಲ್ಲರೂ ದಿನನಿತ್ಯ ನೋಡಿರುವ ದೃಶ್ಯಗಳೇ.

ಇಂದಿನ ನಮ್ಮ ಆಡಳಿತ ವ್ಯವಸ್ಥೆಗಳು ಮಾಡುತ್ತಿರುವ ಸರ್ಕಸ್‌ಗಳಂತೆಯೇ ಹಲವು ಕಸರತ್ತುಗಳನ್ನು ಓರಾನ್ ನಗರದಲ್ಲಿಯೂ ಮುನಿಸಿಪಾಲಿಟಿ ಮಾಡುತ್ತದೆ. ಪುರಸಭೆ ‘ಆರೋಗ್ಯ ಸಮಿತಿ’ ಯನ್ನು ಸ್ಥಾಪಿಸುವುದು, ಅದಕ್ಕೆ ಪರ-ವಿರೋಧಗಳು, ಪ್ಲೇಗ್ ಹೌದೆ-ಅಲ್ಲವೆ ಎಂಬ ಬಗ್ಗೆ ಚರ್ಚೆ, ಡಾ. ರಿಯೂ ಹೇಳುವ ‘ಅದನ್ನು ಪ್ಲೇಗ್ ಎಂದು ಕರೆಯಿರಿ ಅಥವಾ ದೇಹವು ಬೆಳೆಯುವಾಗ ಉಂಟಾಗುವ ಸಹಜವಾದ ನೋವು ಎಂದು ಕರೆಯಿರಿ, ಅದು ಮುಖ್ಯವಲ್ಲ, ಊರಿನ ಅರ್ಧ ಜನ ಸಾಯ
ದಂತೆ ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಮುಖ್ಯವಾದ ಪ್ರಶ್ನೆ’ ಎಂಬ ಮಾತುಗಳು, ನಿಯಮಗಳು-ವಾರ್ತಾ ಪತ್ರಗಳು ಕಾಲಕಾಲಕ್ಕೆ ಬದಲಾಗುವ ರೀತಿ ಇವು ಕಳೆದ ಒಂದೂವರೆ ವರ್ಷದಲ್ಲಿ ನಾವು ಸಾಕ್ಷೀಭೂತವಾಗಿರುವಂತಹವೇ!

ಸುತ್ತಲೂ ನಡೆಯುತ್ತಿರುವ ಸಾವು ನೋವಿನ ಮಧ್ಯೆ ಜೀವಿಸುವ ಡಾ. ರಿಯೂ, ಕಾದಂಬರಿಯ ಮತ್ತೊಂದು ಪ್ರಮುಖ ಪಾತ್ರ ತಾಹೂವಿನ ಪ್ರಶ್ನೆಗೆ ನೀಡುವ ಉತ್ತರ
‘ಇದೆಲ್ಲದರ ಕೊನೆಯಲ್ಲಿ ಏನಾಗುತ್ತೆ ಅನ್ನೋದು ನಂಗೆ ಗೊತ್ತಿಲ್ಲ, ನನಗಾಗಿ ಏನು ಕಾದಿದೆ ಅನ್ನೋದೂ ಗೊತ್ತಿಲ್ಲ. ಆದ್ರೆ ಈ ಕ್ಷಣದಲ್ಲಿ ನಂಗೆ ಇಷ್ಟು ಗೊತ್ತು. ಖಾಯಿಲೆ ಬಂದಿರೋ ಮನುಷ್ಯರು ಇದಾರೆ. ಅವರಿಗೆ ಚಿಕಿತ್ಸೆ ಬೇಕಾಗಿದೆ. ಆ ಮೇಲೆ, ಖಾಯಿಲೆ ಗುಣವಾದ ಮೇಲೆ ಅವರು ಇಂಥ ವಿಚಾರಗಳ ಬಗೆಗೆ ಯೋಚನೆ ಮಾಡಬಹುದು, ನಾನೂ ಮಾಡ್ತೀನಿ. ಆದರೆ, ಈಗ ಅವರಿಗೆ ಚಿಕಿತ್ಸೆ ಕೊಡೋದು, ಖಾಯಿಲೆ ವಾಸಿ ಮಾಡೋದು ಮುಖ್ಯ’.

ನೋವಿನಿಂದ ನರಳುವ ಹಲವರನ್ನು ಪ್ರತಿನಿತ್ಯ ನೋಡುವ ನನಗೆ, ಆತ್ಮೀಯರ ಕಳೆದುಕೊಂಡವರು ಬಂದು ತಮ್ಮ ದುಃಖವನ್ನು ಹಂಚಿಕೊಳ್ಳುವ ಜನರಿಗೆ ಚಿಕಿತ್ಸೆ
ನೀಡುವಾಗ ಈ ಮಾತುಗಳು ಅರ್ಥಪೂರ್ಣ ಎನಿಸುತ್ತದೆ. ತಾಹೂವಿನ ‘ಇದನ್ನೆಲ್ಲಾ ನಿಮಗೆ ಯಾರು ಹೇಳಿಕೊಟ್ರು ಡಾಕ್ಟರ್?’ ಎಂಬ ಪ್ರಶ್ನೆಗೆ ಡಾ.ರಿಯೂ ಹೇಳುವ ಪ್ರತ್ಯುತ್ತರ ಎರಡೇ ಪದಗಳು ‘ನೋವು -ಯಾತನೆ’!

ಜೀವನದ ‘ಅಸಂಗತತೆ’ – ಬಹುಜನ ವಿಮರ್ಶಕರು ಗುರುತಿಸುವಂತೆ ಇಲ್ಲಿ ಪ್ರಮುಖವಾಗಿ ಎದ್ದು ನಿಲ್ಲುತ್ತದೆ. ‘ಪ್ಲೇಗ್’ ಅಥವಾ ಪ್ಲೇಗ್‌ನಂತಹ ಹಲವು ಸೋಂಕು ರೋಗಗಳು -ಸಾಮಾಜಿಕ ಮೌಢ್ಯಗಳು – ಅಜ್ಞಾನ ಇವು ‘ಅಸಂಗತ’. ಅಂದರೆ ಇದ್ದಕ್ಕಿದ್ದಂತೆ ಧುತ್ತೆಂದು ಸಮಸ್ಯೆಗಳಾಗಿ ಎದ್ದು ನಿಲ್ಲುತ್ತವೆ. ಅವನ್ನು ವಿವರಿಸಲು ಸಾಧ್ಯವಿಲ್ಲ. ನಮ್ಮ ಜೀವನವನ್ನು ಆವರಿಸುತ್ತವೆ. ನಮ್ಮ ಆರಾಮವಾದ ಕನಸಿನಂತಹ ಬದುಕಿನಲ್ಲಿ ಹಠಾತ್ ಬದಲಾವಣೆಗಳನ್ನು ತಂದು ನಮ್ಮೆಲ್ಲರನ್ನೂ ಎಲ್ಲಾ ಭೇದಗಳನ್ನು ಮೀರಿ ‘ಒಂದೇ’ ಎನ್ನುವಂತೆ ಪರಿವರ್ತಿಸುತ್ತದೆ. ಅಲ್ಲಿಯವರೆಗೆ ‘ನಮ್ಮ’ ಬಗ್ಗೆ ವೈಯಕ್ತಿಕವಾಗಿ ಯೋಚಿಸುತ್ತಿದ್ದ ನಾವು ಒಮ್ಮೆಲೇ ಸಾಮುದಾಯಿಕ ವಾಗಿ ಯೋಚಿಸಬೇಕಾದ ಅನಿವಾರ್ಯತೆಯತ್ತ ಅಡಿಯಿಡಬೇಕಾಗುತ್ತದೆ.

ಡಾ.ರಿಯೂ ತನ್ನ ರೋಗಿಗಳಿಗಾಗಿ ಸದಾ ಕಷ್ಟಪಡುವ ರೀತಿಯಲ್ಲಿಯೇ ತಾಹೂ, ರೋಂಬೇ ನಿಧಾನವಾಗಿ ತಾವೂ ಇತರರಿಗಾಗಿ ವೈಯಕ್ತಿಕ ಸುಖ-ಇಷ್ಟಗಳನ್ನು ಬದಿಗಿಡುತ್ತಾರೆ. ಆರೈಕೆಯಲ್ಲಿ ತೊಡಗುತ್ತಾರೆ. ವೈದ್ಯಳಾಗಿ ನಾನು ರೋಗಿಗಳನ್ನು ಪ್ರಶ್ನಿಸುವುದಿದೆ ‘ಲಾಕ್ ಡೌನ್ ಇದೆ ಎಂದು ಬಸ್ಸು ಬಾರದಿರಬಹುದು, ಆದರೆ
ಕಾಯಿಲೆ? ನಿಮ್ಮ ಬಳಿ ಹಣವಿಲ್ಲ /ಮನೆಯಲ್ಲಿ ಸಮಾರಂಭವಿದೆ ಎಂದು ಕಾಯಿಲೆ ಬಾರದಿರಬೇಕೆಂದಿದೆಯೇ?’ ‘ಪ್ಲೇಗ್’ ಕಾದಂಬರಿಯಲ್ಲಿ ‘ನರಳುವಿಕೆ-ಸಾವು-ಕಾಯಿಲೆ’ ಜಾತಿ -ಅಂತಸ್ತು-ಲಿಂಗ ಭೇದಗಳನ್ನು ಲೆಕ್ಕಿಸದೆ ಇಡೀ ಪಟ್ಟಣದಲ್ಲಿ ಹರಡುತ್ತದೆ. ಹಾಗೆ ನರಳುವವರ ಕಡೆಗೆ ವಾಲುವ ಯಾರೂ, ತಾಹೂ-ರಿಯೂ-ರೋಂಬೆರಂತೆ ಇಂಥ ವೈಪರೀತ್ಯದ ನಡುವೆಯೂ ಮಾನವೀಯ ಸಮಾಜವನ್ನು ನಿರ್ಮಿಸುತ್ತಾರೆ.

ಕಾಮೂ ಕರೆಯುವ ‘earthly Kingdom‘ ನಿರ್ಮಾಣವಾಗಲು ಇದು ದಾರಿಯಾಗುತ್ತದೆ. ಇಂದಿನ ಸಂದರ್ಭ ‘ಪ್ಲೇಗ್’ ಕಾದಂಬರಿಯನ್ನು ಮತ್ತಷ್ಟು ಪ್ರಸ್ತುತ ವಾಗಿಸುತ್ತದೆ ಎಂಬುದಂತೂ ನಿಜ. ಜಗತ್ತನ್ನು ಕಾಡುವ ಪ್ರತಿ ‘ಪ್ಯಾಂಡೆಮಿಕ್’ – ಸಾರ್ವತ್ರಿಕ ಸಾಂಕ್ರಾಮಿಕವೂ ‘ಮನಸ್ಸು ಮತ್ತು ಸಮಾಜಗಳ ಪ್ಯಾಂಡೆಮಿಕ್’ ಆಗಿರುತ್ತದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಸಾಮಾಜಿಕ ಅಂತರಗಳು-ಆರ್ಥಿಕ ವ್ಯವಸ್ಥೆ ಸಂಬಂಧಗಳ ಕಳೆದುಕೊಳ್ಳುವಿಕೆ ಇವೆಲ್ಲವೂ ಕೊರೋನಾ ದಂತಹ ಪ್ಯಾಂಡೆಮಿಕ್ ಬೆಳೆಸುವುದು ಎನ್ನುವುದಕ್ಕಿಂತ ಅವು ನಿಚ್ಚಳವಾಗಿ ಗೋಚರಿಸುವಂತೆ ಮಾಡುವುದು ಎನ್ನುವುದೇ ಸರಿ.

ಹಾಗಾಗಿಯೇ ಕಾದಂಬರಿಯ ಕೊನೆಯ ಸಾಲುಗಳು ‘ಪ್ಲೇಗ್‌ನ ಬ್ಯಾಕ್ಟೀರಿಯಾ ಎಂದಿಗೂ ಸಂಪೂರ್ಣವಾಗಿ ಸಾಯುವುದಿಲ್ಲ, ಮಾಯವಾಗುವುದಿಲ್ಲ. ಅದು ಪೀಠೋಪಕರಣಗಳಲ್ಲಿ, ಬಟ್ಟೆಯ ಕಪಾಟುಗಳಲ್ಲಿ ಹತ್ತಾರು ವರ್ಷ ತಾಳ್ಮೆಯಿಂದ ಸಮಯ ಕಾಯುತ್ತಿರುತ್ತದೆ. ಮನುಷ್ಯನಿಗೆ ಪಾಠ ಕಲಿಸಲೆಂದೋ, ಅವನನ್ನು ನಾಶ ಮಾಡಲೆಂದೋ ತನ್ನ ಇಲಿಗಳನ್ನು ಎಚ್ಚರಿಸಿ ಸಂತೋಷವಾಗಿರುವ ಯಾವುದೋ ಊರಿನಲ್ಲಿ ಸಾಯಲೆಂದು ಕಳಿಸಿಕೊಡುತ್ತದೆ’ ಇದು ನನಗೆ ಮನೋ ವೈದ್ಯೆಯಾಗಿ ಎಚ್ಚರಿಕೆಯ ಕರೆಗಂಟೆ ಎನಿಸುತ್ತವೆ.

ಕಾದಂಬರಿಯನ್ನು ಓದಿ ಮುಗಿಸುವಾಗ ಒಂದು ರೀತಿಯ ವಿಷಾದ ಮನವನ್ನು ಆವರಿಸಿದರೂ, ಜೀವನಕ್ಕೆ ಉಪಯುಕ್ತವಾಗುವ ‘ಸತ್ಯ’ವೊಂದು ಮನಸ್ಸಿಗೆ
ಅರ್ಥವಾದ ತೃಪ್ತಿಯೂ ಅನುಭವಕ್ಕೆ ಬರುತ್ತದೆ. ‘ಸ ಹಿತಯೋಃ ಸಾಹಿತ್ಯ’ -ಹಿತವನ್ನು ಉಂಟು ಮಾಡುವುದು ಸಾಹಿತ್ಯ ಎನ್ನುವ ಮಾತನ್ನು ಒಪ್ಪಬಹುದಾದರೆ ಇದೇ ‘ಸಾಹಿತ್ಯ’ ಅಲ್ಲವೇ?