ವಾಣಿ ಹುಗ್ಗಿ ಹುಬ್ಬಳ್ಳಿ
ಈ ಜೀವನದಲ್ಲಿ ಯಶಸ್ಸು ಬೇಕು ನಿಜ. ಆದರೆ ಯಾವ ರೀತಿಯ ಯಶಸ್ಸು ಬೇಕು? ನೆಮ್ಮದಿಯ ಕುಟುಂಬವನ್ನು ಕಟ್ಟು ಕೊಡುವ ಜೀವನವು ಮೊದಲ ಆದ್ಯತೆಯಾಗಬೇಕು ಮತ್ತು ಸಾಧಿಸಿದ ಯಶಸ್ಸು ಕುಟುಂಬದ ನೆಮ್ಮದಿಗೆ ಪೂರಕ ವಾಗಿರಬೇಕಲ್ಲವೆ? ನೆಮ್ಮದಿ ತಂದುಕೊಡದ ಯಶಸ್ಸಿನಿಂದ ಯಾವ ಲಾಭ? ಇಂದಿನ ಯಶಸ್ಸಿನ ಮಾನದಂಡ ಬದಲಾ ಗುವ ಅವಶ್ಯಕತೆ ಇದೆಯೆ?
ಎಲ್ಲರೂ ಮಾತಾಡ್ಕೊತಾರೆ ಹುಟ್ಟಿದ್ಮೇಲೆ ಏನಾದರೂ ಸಾಧಿಸಬೇಕು. ಜೀವನದಲ್ಲಿ ಯಶಸ್ಸು ಹೊಂದಬೇಕು ಅಂತ. ಆದರೆ ಈ ಸಾಧನೆ, ಯಶಸ್ಸು ಎಂದರೇನು? ಮಗುವಾಗಿದ್ದಾಗ ಅಂಬೆಗಾಲಿಡುವುದು, ನಡೆಯುವುದು, ಮಾತು ಕಲಿಯುವುದು ಸಾಧನೆ ಯಾಗುತ್ತೆ. ವಿದ್ಯಾರ್ಥಿಯಾಗಿದ್ದಾಗ ಪರೀಕ್ಷೆಯಲ್ಲಿ ನೂರು ಅಂಕಗಳಿಸುವುದು, ಸ್ಪರ್ಧೆಗಳಲ್ಲಿ ಜಯಶಾಲಿಯಾಗುವುದು ಸಾಧನೆ
ಎನಿಸುತ್ತೆ.
ಮಕ್ಕಳು ಇದರಲ್ಲಿ ಏನೂ ಮಾಡದಿದ್ದರೆ ತಾವು ವಿಫಲರು, ಯಾವುದಕ್ಕೂ ಉಪಯೋಗಕ್ಕಿಲ್ಲದವರು, ಯಾವುದೇ ಪ್ರತಿಭೆ ಇಲ್ಲದವ ರೆಂದು ನಿರ್ಧರಿಸಿಬಿಡುತ್ತಾರೆ. ಯೌವ್ವನದಲ್ಲಿ ಪ್ರೀತಿ ಸಂಪಾದಿಸುವುದು, ನಡುವಯಸ್ಸಿನಲ್ಲಿ ದುಡ್ಡು, ಐಶಾರಾಮಿ ವಾಹನ, ಬಂಗಲೆ, ಆಸ್ತಿ ಮಾಡುವುದು ಸಾಧನೆಯಾಗುತ್ತೆ. ಇಷ್ಟೆಲ್ಲ ಮಾಡದಿದ್ದರೆ ಅವರು ಬದುಕಿದ್ದು ವ್ಯರ್ಥ. ಮಾಡಿದರೆ ನಾಲ್ಕು ಜನ ಗುರುತಿಸಬೇಕು. ಜನಪ್ರಿಯತೆ ಗಳಿಸಬೇಕು. ಯಾರೂ ಮಾಡದ್ದನ್ನು ಮಾಡಿದರೆ ಜನಪ್ರಿಯತೆ ಸಿಗುತ್ತದೆಂದು ಏನೂ ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ವಿಧವಿಧವಾಗಿ ಪ್ರಯತಿಸುತ್ತಾರೆ, ಪರಿತಪಿಸುತ್ತಾರೆ.
ಯಶಸ್ಸಿನ ಬೆನ್ನು ಹತ್ತುವವರು
ಜೀವನದಲ್ಲಿ ಯಶಸ್ಸು, ಜನಪ್ರಿಯತೆ ಅಷ್ಟು ಮುಖ್ಯವೇ? ಯಶಸ್ವಿಯಾಗದಿದ್ದರೆ ನೊಂದುಕೊಂಡು ಖಿನ್ನರಾಗುವುದೇಕೆ? ಬದುಕಿನ ಉತ್ಸಾಹ ಕಳೆದುಕೊಳ್ಳುವುದೇಕೆ? ಮಾನವ ಭಿನ್ನ ಜೀವಿ. ಅವನಿಗೆ ಯೋಚನಾ ಸಾಮರ್ಥ್ಯವಿದೆ. ಬುದ್ಧಿಯನ್ನು
ಉಪಯೋಗಿಸಿ ಬದುಕನ್ನು ಚೆನ್ನಾಗಿ ಮಾಡಿಕೊಂಡಿದ್ದಾನೆ. ಭೂಮಿಯನ್ನು ಆಳುತ್ತಿದ್ದಾನೆ. ಪ್ರಕೃತಿಯನ್ನು ನಾಶ ಮಾಡಿ
ಅಭಿವೃದ್ಧಿ ಸಾಧಿಸುವುದು ಯಶಸ್ಸೆ? ಅಲ್ಲ ತಾನೆ. ಹಾಗಾದರೆ ಮಾನವನ ಮನಸ್ಸಿನ ನೆಮ್ಮದಿಯನ್ನು ಘಾಸಿಗೊಳಿಸಿ ಮತ್ತೊಬ್ಬ ರನ್ನು ಮೆಚ್ಚಿಸಲು ಮಾಡುವ ಕೆಲಸಗಳು ಯಶಸ್ಸೆ? ಮನೆಯವರನ್ನೆಲ್ಲ ಕಡೆಗಣಿಸಿ ದುಡ್ಡಿಗಾಗಿ ದುಡಿಯುವುದು ಸಾಧನೆಯೇ? ಸಾಧಿಸಿದ ಮೇಲೆ ಕಾಡುವ ಒಂಟಿತನವನ್ನು ದೂರ ಮಾಡಲು ನಶೆಗೆ ದಾಸರಾಗುವುದು ಯಶಸ್ಸೆ? ಬೇರೊಬ್ಬರು ಸಾಧನೆ
ಮಾಡಿದರೆ ಮೊದಲಿನವನನ್ನು ಮರೆತು ಅವನನ್ನು ಮೆರೆಸುತ್ತಾರೆ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುವುದು ಸ್ವಾಭಾವಿಕವಲ್ಲವೇ? ಹೀಗೆ ಬಂದು ಹಾಗೆ ಹೋಗುವ ಜನಪ್ರಿಯತೆಗೆ ಹಪಹಪಿಸುವ ಅವಶ್ಯಕತೆ ಇದೆಯೆ? ಯಾರೂ ಗುರುತಿಸ ದಿದ್ದರೆ ಅದು ಜೀವನವಲ್ಲವೆ?
ನೀವಾಗಬೇಕು ಚಂದನ
ಬೆಳಿಗ್ಗೆ ಹುಟ್ಟಿ ರಾತ್ರಿ ಸಾಯುವ ಚಂದದ ನಾಯಿಕೊಡೆ ನಾನಿಲ್ಲಿದ್ದೇನೆಂದು ಕೂಗಿ ಹೇಳುತ್ತದೆಯೇ? ಗಿಡಗಳಲ್ಲಿ ಮೊಗ್ಗಾಗಿ, ಅರಳಿ ಹೂವಾಗಿ ನಂತರ ಬಾಡುವ ಹೂವುಗಳು ನಾವಿದ್ದೇವೆಂದು ಚೀರುತ್ತವೆಯೆ? ದೇವರ ಮುಡಿಗೇರುವ, ನಾರಿಯ ತಲೆಯೇರುವ ಅಥವಾ ಮನುಷ್ಯರ ಬಳಕೆಗೆ ಬರುವ ಹೂ ಶ್ರೇಷ್ಠವೋ? ಇದಕ್ಕೆ ಸರಿಯಾದ ಉತ್ತರವಿದೆಯೇ? ಹೂವು ತನ್ನ ಪಾಲಿನ ಕೆಲಸವನ್ನು ಸದ್ದಿಲ್ಲದೆ ಮಾಡಿ ಮುಗಿಸುತ್ತದೆ. ಆದರೆ ಮನುಷ್ಯ ಮಾತ್ರ ಹೂವುಗಳನ್ನು ಹೋಲಿಸುತ್ತಾ, ಒಂದು ಹೂ ಇಂಥದೇ ಮಾಡಿದರೆ ಮಾತ್ರ ಅದು ಶ್ರೇಷ್ಠವೆಂದು ನಿರ್ಧರಿಸುತ್ತಾನೆ. ಈ ಹೂವುಗಳು ಜನಪ್ರಿಯತೆ ಹಿಂದೆ ಓಡುತ್ತಿದ್ದರೆ ಏನಾಗುತ್ತಿತ್ತು? ನಾನಿಲ್ಲಿ ಹೇಳ ಹೊರಟಿರುವುದು ಏನೂ ಮಾಡದೆ ಸೋಮಾರಿಯಾಗಿ ಎಂದಲ್ಲ. ಹತ್ತರಲ್ಲಿ ಹನ್ನೊಂದಾಗಿ ಎಂತಲೂ ಅಲ್ಲ. ನಮ್ಮಲ್ಲೆ ಮೊದಲು ಎಂದು ಬಡಬಡಿಸುವ ಸುದ್ದಿವಾಹಿನಿಗಳಾಗದೆ, ನಿಖರವಾಗಿ ಮಾತನಾಡುವ ಚಂದನಗಳಾಗಿ ಎಂದು.
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳಬೇಕೆ ಅಥವಾ ಬೇಡವೆ? ನೀರು ಹಾಕಿದ್ರೂ ಅಥವಾ ಜೋತು ಬಿದ್ರೂ ತಪ್ಪಿಲ್ಲ.
ಆ ಆಲದ ಮರ ಎಷ್ಟೊ ಪಕ್ಷಿ, ಅಳಿಲುಗಳಿಗೆ ಆಶ್ರಯತಾಣ. ಶುದ್ಧಗಾಳಿಯನ್ನು ಪೂರೈಸುವ ಕೇಂದ್ರಬಿಂದು. ನಾಲ್ಕು ಜನ
ಮಾತಾಡುವುದಕ್ಕಿಂತ ನಾಲ್ಕು ಜನರಿಗೆ ಉಪಕಾರ ಮಾಡುವುದು ಉತ್ತಮವಲ್ಲವೆ? ಎಲ್ಲರೊಂದಿಗೆ ಸೇಹ ಸೌಹಾರ್ದದಿಂದ
ಬಾಳುವುದು ಒಳ್ಳೆಯದಲ್ಲವೆ? ಕೌಟುಂಬಿಕ ಜೀವನವನ್ನು ಪ್ರೀತಿ ಜವಾಬ್ದಾರಿಯಿಂದ ನಿರ್ವಹಿಸುವುದು ಯಶಸ್ಸೆ ತಾನೆ. ಯಶಸ್ವಿ ಜೀವನಕ್ಕಿಂತ ಸಾರ್ಥಕ ಬದುಕು ಹಿರಿದಲ್ಲವೆ? ಈಗ ಎಲ್ಲೆಡೆ ಪ್ರಚುರವಾಗಿರುವ ಯಶಸ್ಸಿನ ಸೂತ್ರ ಬದಲಾಗಬೇಕಲ್ಲವೆ? ಯೋಚಿಸಿ.
ಅತಿ ಪ್ರಚಾರದ ಈ ಯುಗ
ಅತಿ ಜನಪ್ರಿಯತೆ, ಎಲ್ಲರಿಗೆ ಪರಿಚಿತನಾಗಿರುವುದು, ಎಲ್ಲೆಡೆಯೂ ಸುದ್ದಿಯಾಗುವುದು ಸಹ ಇಂದು ಯಶಸ್ಸಿನ ಮಾನದಂಡ ಎನಿಸಿದೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರಚಾರಗೊಂಡು, ಅಲ್ಲಲ್ಲಿ ಕೆಲವು ಸನ್ಮಾನಗಳಿಗೆ ಭಾಜನ ರಾಗುವುದು ಯಶಸ್ಸು ಎನಿಸಿದೆ. ನಿಜವಾದ ಸಾಧನೆಗಿಂತ, ತಮ್ಮ ತುತ್ತೂರಿ ತಾವೇ ಊದುವುದು, ಆ ಮೂಲಕ ಸಾಧನೆಯನ್ನು ದೊಡ್ಡದಾಗಿ ತೋರಿಸಿಕೊಳ್ಳುವುದು ಸಹ ಯಶಸ್ಸಿನ ಸೂತ್ರ ಎಂದು ಪ್ರಚುರಗೊಂಡಿದೆ.
ಯಶಸ್ಸಿನ ಬೆನ್ನು ಹತ್ತಿರುವ ಹಲವರು, ತಮ್ಮ ಕೌಟುಂಬಿಕ ಜೀವನದಲ್ಲಿ ಸುಖ, ನೆಮ್ಮದಿ ಪಡೆದಿರುವರೆ? ಹೊಸದೇನನ್ನೋ
ಸಾಧಿಸುವ ಭರದಲ್ಲಿ, ಮನೆಯ ಶಾಂತಿಯನ್ನು ಕದಡಿ, ಮನದ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆಯೆ? ಅಂತಹ ಕೆಲವು ಉದಾಹರಣೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಯಶಸ್ಸು ಮತ್ತು ಸಾರ್ಥಕ ಜೀವನ ಇವೆರಡರಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶ ವಿದ್ದರೆ, ನಾವು ಸಾರ್ಥಕ ಜೀವನವನ್ನೇ ಆಯ್ಕೆ ಮಾಡಿಕೊಳ್ಳುವುದು ಉಚಿತ. ಹೌದೆ?