Thursday, 12th December 2024

ಬೇಡಿಕೆ ಹೆಚ್ಚಿಸಿಕೊಂಡ ಫೋಟೋ ಶೂಟ್

ಸಂಧ್ಯಾ ಎಂ. ಸಾಗರ 

ಮದುವೆ ಎಂಬುದು ಪ್ರತಿ ವ್ಯಕ್ತಿಯ ಜೀವನದ ಬಹುಮುಖ್ಯ ಘಟ್ಟ. ಮೊದಲೆಲ್ಲ ಮದುವೆ ಹೇಗೆ ಆಗಬೇಕು ಎಂಬುದನ್ನು ಹಿರಿಯರು ನಿರ್ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಗಂಡು -ಹೆಣ್ಣು ತಮ್ಮ ಮದುವೆಯ ವಿಷಯದಲ್ಲಿ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಈಗ ಬದಲಾದ ಟ್ರೆಂಡ್‌ನಲ್ಲಿ ಮದುವೆಗೂ ಮೊದಲು ಫೋಟೋಶೂಟ್ ಮಾಡಿಸುವುದು ವಾಡಿಕೆಯಾಗಿದೆ. ಮದುವೆಯ ಪ್ರತಿಯೊಂದು ಶಾಸ್ತ್ರ ಸಂಪ್ರ ದಾಯಗಳು ನಡೆಯುತ್ತೇವೆಯೋ ಇಲ್ಲವೋ ಈ ಪ್ರಿ ವೆಡ್ಡಿಂಗ್ ಶೂಟ್ ಮಾತ್ರ ಆಗಲೇ  ಬೇಕು.

ಏನಿದು ಪ್ರಿ ವೆಡ್ಡಿಂಗ್ ಶೂಟ್?

ಮದುವೆಯ ದಿನ ವಧು ವರರ ಫೋಟೋ ತೆಗೆಯುವುದು ಸಾಮಾನ್ಯ. ಇಬ್ಬ ರನ್ನೇ ವಿವಿಧ ಭಂಗಿಗಳಲ್ಲಿ ನಿಲ್ಲಿಸಿ ತೆಗೆಯಲಾಗುತ್ತದೆ. ಆದರೆ ಇದು ಮದುವೆಯ ದಿನದಂದು ತೆಗೆಯುವುದಲ್ಲ. ಮದುವೆಗೆ ಕೆಲ ದಿನಗಳಿವೆ ಎನ್ನುವಾಗ ಹುಡುಗ-ಹುಡುಗಿ ತಮ್ಮಿಷ್ಟದ ಸ್ಥಳದಲ್ಲಿ ತಮ್ಮಿಷ್ಟದಂತೆ ತಯಾರಾಗಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ.

ಕೆಲವೊಮ್ಮೆ ಪ್ರಿ ವೆಡ್ಡಿಂಗ್ ವಿಡಿಯೋಗಳನ್ನು ಸಹ ಮಾಡಲಾಗತ್ತದೆ. ಈ ಪ್ರಿ ವೆಡ್ಡಿಂಗ್ ಶೂಟ್ ಎನ್ನುವುದು ಮದುವೆಯ ಒಂದು ಭಾಗವಾಗಿ ಬಿಟ್ಟಿದೆ. ಕೆಲವರು ಮದುವೆಯ ಆಮಂತ್ರಣ ಕಾರ್ಡ್ ಬದಲು, ಇದೇ ಫೋಟೋಗಳನ್ನು ಎಡಿಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಕರೋನಾದಿಂದ ಪ್ರಿ ವೆಡ್ಡಿಂಗ್ ಶೂಟ್‌ಗೆ ಬಹು ಬೇಡಿಕೆ

ಕರೋನಾ ಬಂದ ಕಾರಣದಿಂದ ನಿಗದಿಯಾಗಿದ್ದ ಅದೆಷ್ಟೋ ಮದುವೆ ಗಳು ಈಗ ನಡೆಯುತ್ತಿವೆ. ಮದುವೆಗಳಲ್ಲಿ ಹೆಚ್ಚಿನ ಜನರು ಸೇರುವುದರಿಂದ ಸರಕಾರ ಹಲವಾರು ನಿಬಂಧನೆಗಳನ್ನು ಹಾಕಿದ್ದು,
ಹೆಚ್ಚು ಜನರನ್ನು ಕರೆಯುವಂತಿಲ್ಲ ಎಂದು ಆದೇಶಿಸಿದೆ. ಇದು ಅದ್ಧೂರಿಯಾಗಿ ಮದುವೆಯಾಗಬೇಕೆಂದಿದ್ದವರಿಗೆ ಕಷ್ಟವಾಗಿದೆ.

ಹಾಗಾಗಿ ಮದುವೆಗಿಂತ ಹೆಚ್ಚಾಗಿ ಫೋಟೋ ಶೂಟ್‌ನತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮೊದಲೆಲ್ಲ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮೊತ್ತ 20 ಸಾವಿರದಿಂದ ಆರಂಭವಾಗುತ್ತಿತ್ತು. ಆದರೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ 40 ಸಾವಿರಕ್ಕೆ ಏರಿದ್ದು, ಕೆಲವೊಮ್ಮೆ ಲಕ್ಷ ದಾಟಿದ್ದು ಇದೆ ಎನ್ನುತ್ತಾರೆ ಫೋಟೋಗ್ರಾಫರ್‌ಗಳು.

ಸುಂದರ ನೆನಪುಗಳನ್ನು ಕಟ್ಟಿಡುವ ಕೆಲಸ

ಮೊದಲೇ ಹೇಳಿದಂತೆ ಮದುವೆ ಜೀವಮಾನದಲ್ಲಿ ಶಾಶ್ವತವಾಗಿ ನೆನಪಿನಲ್ಲಿರುವ ದಿನ. ಹಾಗಾಗಿ ಆ ದಿನವನ್ನು ಸುಂದರಗೊಳಿಸಿ ಮನದಲ್ಲಿ ಅಚ್ಚಳಿಯದಂತೆ ಉಳಿಯಲು ಸಹ ಈ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸ ಲಾಗುತ್ತದೆ. ಮದುವೆಯ ದಿನ ಟಿವಿ ಪರದೆಯ ಮೇಲೆ ತಮ್ಮ ಫೋಟೋಗಳನ್ನು ಹಾಕಿ ಸವಿನೆನಪುಗಳನ್ನು ಇನ್ನಷ್ಟು ಸುಂದರ ಗೊಳಿಸಲಾಗುತ್ತದೆ.

ಪ್ರಿ ವೆಡ್ಡಿಂಗ್ ಶೂಟ್ ಮೇಕಪ್
ಮೊದಲೆಲ್ಲ ಫೋಟೋಗಳನ್ನು ತೆಗೆಯಲು ಹೆಣ್ಣು ಮಕ್ಕಳು ತಾವೇ ತಯಾರಾಗಿ ಹೋಗುತ್ತಿದ್ದರು. ಆದರೆ ಕಾಲ ಬದಲಾದಂತೆ ಬ್ಯೂಟಿ ಪಾರ್ಲರ್‌ಗಳನ್ನು ಅವಲಂಬಿಸಿದ್ದಾರೆ. ಮದುವೆಗೆ ಹೇಗೆ ಸಿದ್ಧರಾಗುತ್ತಾರೋ ಅದೇ ರೀತಿ ಫೋಟೋ ತೆಗೆಸಿಕೊಳ್ಳಲು
ಸಿದ್ಧರಾಗುತ್ತಾರೆ. ಬರೀ ಪಾರ್ಲರ್‌ಗಳು ಮಾತ್ರವಲ್ಲ. ಬಟ್ಟೆಯ ಡಿಸೈನರ್‌ಗಳನ್ನು ಸಹ ಕೆಲವರು ಬುಕ್ ಮಾಡಿರುತ್ತಾರೆ.

ಸಾಮಾನ್ಯವಾಗಿ ನಾವು ಪ್ರಿ ವೆಡ್ಡಿಂಗ್ ಫೋಟೋಗಳಲ್ಲಿ ನೋಡಿರುತ್ತೇವೆ. ಹುಡುಗ-ಹುಡುಗಿ ವಿವಿಧ ರೀತಿಯ ಬೋರ್ಡ್‌ಗಳನ್ನು
ಹಿಡಿದುಕೊಂಡಿರುತ್ತಾರೆ. ಅದೂ ಸಹ ಮೊದಲು ಮನೆಯಲ್ಲಿ ತಯಾರಿಸಲಾಗುತ್ತಿತ್ತು, ಆದರೆ ಈಗ ಪ್ರತಿಯೊಂದು ವಸ್ತುವು
ಅಂದವಾಗಿರಬೇಕು ಎಂಬ ಉದ್ದೇಶದಿಂದ ಆರ್ಟ್ ವರ್ಕ್‌ಗಳನ್ನು ಮಾಡುವ ಆರ್ಟಿಸ್‌ಟ್‌‌ಗಳ ಬಳಿ ಮಾಡಿಸಲಾಗುತ್ತದೆ.

ಕರೋನಾ ಭಯದ ನಡುವೆ ಹೇಗೆ ?
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ತೀರ ಹೊಸದೇನಲ್ಲ. ಹಲವಾರು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಆದರೆ ಕರೋನಾ ಕಾರಣಗಳಿಂದಲೇ ಇದಕ್ಕೆ ಹೆಚ್ಚಿನ ಮಹತ್ವ ದೊರೆತದ್ದು. ಆದರೆ ಮೊದಲಿನ ಹಾಗೇ ಪ್ರತಿಯೊಂದು ಪ್ರದೇಶಗಳಿಗೆ ತೆರಳಿ ಫೋಟೋ ತೆಗೆಸುವುದು ಈಗ ಸುಲಭವಲ್ಲ. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸರಕಾರ ನಿಬಂಧನೆ ಗಳನ್ನು ಹಾಕಿದೆ. ಕೆಲ ಸ್ಥಳಗಳಿಗೆ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಇನ್ನು ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿ ಯಿಂದ ಕೆಲ ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.

1. ಸ್ಥಳಕ್ಕೆ ತೆರಳುವ ಮುನ್ನ ಅಲ್ಲಿನ ನೀತಿ ನಿಯಮಗಳನ್ನು ತಿಳಿದುಕೊಳ್ಳಬೇಕು.
2. ಮಾಸ್ಕ್‌ ಧರಿಸದೇ ಓಡಾಡಬಾರದು.
3. ಕೇವಲ ಹುಡುಗ-ಹುಡುಗೆ ಮಾತ್ರ ಫೋಟೋ ತೆಗೆಯುವ ವೇಳೆ ಮಾಸ್ಕ್‌ ತೆಗದಿಡಬಹುದು.
4. ಪದೇ ಪದೇ ಸ್ಯಾಟಿಟೈಸರ್ ಬಳಕೆ ಉತ್ತಮ
5. ಪ್ರಮುಖವಾಗಿ ಹೊರಗಿನ ಆಹಾರವನ್ನು ಸೇವಿಸದೆ ಇರುವುದು ಉತ್ತಮ.

ಇತ್ತೀಚೆಗೆ ನಡೆಯುತ್ತಿರುವ ಮದುವೆಗಳನ್ನು ಗಮನಿಸಿದರೆ, ಮದುವೆಯ ಸಿಂಗಾರಕ್ಕಿಂತ ಈ ಫೋಟೋದಲ್ಲಿ ಹೆಣ್ಣು ಸಿಂಗಾರ ಗೊಂಡಿರುತ್ತಾಳೆ. ಸಾಮಾನ್ಯ ಜನರಷ್ಟೆ ಅಲ್ಲ ಸಿನಿಮಾ ನಟಿಯರು ಸಹ ಪ್ರಿ ವೆಡ್ಡಿಂಗ್ ಶೂಟ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ದು  ಇಲ್ಲಿಗೆ ನಿಲ್ಲುವುದಿಲ್ಲ, ಪೋಸ್ಟ್‌ ವೆಡ್ಡಿಂಗ್, ಮ್ಯಾಟರ್ನಿಟಿ ಶೂಟ್, ಬೇಬಿ ಶೊವರ್ (ಸೀಮಂತ) ಶೂಟ್ ಹೀಗೆ ಈ ಫೋಟೋ ಶುಟ್ ಹಾವಳಿ ಮುಂದುವರೆಯುತ್ತಲೇ ಹೋಗುತ್ತದೆ.