Sunday, 15th December 2024

ಮೂಡಿಬರಲಿದೆ ಮತ್ತೊಂದು ಪ್ರೇಮಲೋಕ

ರವಿಮಾಮ ಬಿಚ್ಚಿಟ್ಟ ಹೊಸ ಕನಸು

ವಿ.ರವಿಚಂದ್ರನ್ ಕರುನಾಡಿನ ಕಸನುಗಾರ, ಅವರ ಕನಸುಗಳನ್ನು ಸಿನಿಮಾಗಳ ಮೂಲಕವೇ ಸಾಕಾರಗೊಳಿಸಿದ ಹಠವಾದಿ. ಉಳಿದ ಚಿತ್ರರಂಗಕ್ಕಿಂತ ಸ್ಯಾಂಡಲ್‌ವುಡ್ ಕಡಿಮೆ ಏನಿಲ್ಲ ಎಂದು ತೋರಿಸಿಕೊಟ್ಟ ರಣಧೀರ. ಬರೀ ಸಿನಿಮಾ ಕಥೆಯ ಮೂಲಕವೇ ಅಲ್ಲ, ಚಿತ್ರದ ಹಾಡು, ಸಂಗೀತ, ಅಲ್ಲಿದ್ದ ಅದ್ದೂರಿತನದ ಮೂಲಕವೂ ಕನ್ನಡ ಚಿತ್ರರಂಗವನ್ನು  ಶ್ರೀಮಂತ ಗೊಳಿಸಿದವರು.

ಕೋಟ್ಯಾಂತರ ಹಣ ಹೂಡಿ ಅದ್ದೂರಿ ಸೆಟ್ ನಿರ್ಮಿಸಿ ತೋರಿಸಿದ ಛಲವಾದಿ ಕ್ರೇಜಿಸ್ಟಾರ್. ಹಾಗಂತ ರವಿಮಾಮ ನಟರಾಗಿ ಮಾತ್ರವಲ್ಲ ಅತಿ ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಾಪಕರಾಗಿ, ಬಳಿಕ ನಿರ್ದೇಶಕರಾಗಿಯೂ ಚಿತ್ರಗಳನ್ನು ತೆರೆಗೆ ತಂದರು, ಪ್ರಸಿದ್ಧಿ ಪಡೆದವರು. ಚಂದನವನದಲ್ಲಿ ಸದಾ ನೆನಪಿನಲ್ಲಿಡುವ ಸಿನಿಮಾಗಳನ್ನು ಸಿನಿಪ್ರಿಯರಿಗೆ ನೀಡಿ, ಅವರ ಮನದಲ್ಲಿ ಮನೆ ಮಾಡಿದರು.

ಅರವತ್ತರ ವಯಸ್ಸು ಚಿಗುರಿದ ಹೊಸ ಕನಸು

ಈಗ ರವಿಮಾಮ ೬೦ ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಈ ಸುದೀರ್ಘ ಸಿನಿ ಪಯಣದಲ್ಲಿ ಸೋಲು ಗೆಲವು ಎರಡನ್ನೂ ಕಂಡಿದ್ದಾರೆ. ಈಗಲೂ ಅವರ ಸಿನಿಮಾ ಪ್ರೀತಿ ಕಡಿಮೆಯಾಗಿಲ್ಲ. ಹೊಸ ಹೊಸ ಕನಸುಗಳು ಇನ್ನೂ ಅವರಲ್ಲಿ ಅಚ್ಚಾಗಿವೆ. ಆ ಕನಸುಗಳನ್ನು ಈ ೬೦ ರ ಸಂವತ್ಸರದಲ್ಲಿ ಬಿಚ್ಚಿಟ್ಟಿದ್ದಾರೆ. ಅದು ಎಂಟು ನಿಮಿಷದ ಒಂದು ವಿಡಿಯೊದಲ್ಲಿ ತಮ್ಮ ಕನಸು ಗಳನ್ನು ಅನಾವರಣಗೊಳಿಸಿದ್ದಾರೆ. ಆ ಮೂಲಕ ತಮ್ಮ ಮುಂದಿನ ಯೋಜನೆಗಳನ್ನು ಒಂದೊಂದಾಗಿ ಅಭಿಮಾನಿಗಳ ಮುಂದಿರಿಸಿದ್ದಾರೆ.

ಹೊಸ ಕನಸಿನ ಬೆನ್ನತ್ತಿದ ಪುಟ್ನಂಜ

ನಿಮಿಷದ ಈ ವಿಡಿಯೊ ವಿಶೇಷವಾಗಿ ಮೂಡಿಬಂದಿದೆ. ಇದರಲ್ಲಿ ಮನಸೆಳೆವ ಕೋಟ್ಸ್‌ಗಳನ್ನು ಬಳಸಿ ಮುಂದಿನ ಕನಸು ಗಳನ್ನು ಸಾದರಪಡಿಸಿದ್ದಾರೆ. ಮೂರು ಹೊಸ ಸಿನಿಮಾಗಳನ್ನು ಘೋಷಿಸಿದ್ದಾರೆ. ಒಂದು ಸಿನಿಮಾಗೆ ಗಾಡ್ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಇದರಲ್ಲಿ ವಿಶೇಷವಾದ ಗೆಟಪ್ ತಾಳಿದ್ದು, ದುರುಳರನ್ನು ಸೆದೆ ಬಡಿಯುವ ಮಲ್ಲಿಕಾರ್ಜುನನ್ನಂತೆ ಅಬ್ಬರಿಸುತ್ತಾರೆ. ಮತ್ತೊಂದು ಚಿತ್ರ ೬೦ ಎಂಬ ಹೆಸರಿನಲ್ಲಿ ಮೂಡಿಬರಲಿದೆ. ಇದರಲ್ಲಿ ನಟಿ ಪಾವನಾ ಗೌಡ ಕಾಣಿಸಿಕೊಂಡಿದ್ದಾರೆ. ಇದರ ದೃಶ್ಯ ವಂತೂ ಕಣ್ಣಿಗೆ ಕಟ್ಟುವಂತೆ ಬಣ್ಣ ಬಣ್ಣದಿಂದ ಮೂಡಿಬಂದಿದೆ. ದೃಶ್ಯಗಳನ್ನು ನೋಡುತ್ತಿದ್ದರೆ ಇದು ಅಪ್ಪಟ ಪ್ರೇಮಕಥೆಯ ಸಿನಿಮಾ ಎನ್ನುವುದು ಸ್ಪಷ್ಟವಾಗುತ್ತದೆ.

ಹಾಗಾಗಿ ಈ ಚಿತ್ರದ ಮೂಲಕ ರವಿಮಾಮ, ಸಿನಿಪ್ರಿಯರನ್ನು ಮತ್ತೊಂದು ಪ್ರೇಮಲೋಕಕ್ಕೆ ಕೊಂಡೊಯ್ಯುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡುತ್ತದೆ.

ಪುತ್ರರ ಚಿತ್ರಕ್ಕೆ ಆಕ್ಷನ್ ಕಟ್

ಕ್ರೇಜಿಸ್ಟಾರ್ ರವಿಚಂದ್ರನ್ ಮುಂದೊಂದು ದಿನ ತಮ್ಮ ಪುತ್ರರಿಗಾಗಿ ಚಿತ್ರ ನಿರ್ದೇಶನ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ತಮ್ಮ ವಿಡಿಯೊದಲ್ಲಿ ಅಭಿಮಾನಿಗಳನ್ನು ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತಮ್ಮ ಪುತ್ರರಿಬ್ಬರಿಗಾಗಿ ಚಿತ್ರದ ಕಥೆ ಸಿದ್ದಪಡಿಸುತ್ತಿದ್ದು, ಬ್ಯಾಡ್‌ಬಾಯ್ಸ್ ಟೈಟಲ್‌ನಲ್ಲಿ ಈ ಹೊಸ ಚಿತ್ರ ಸೆಟ್ಟೇರಲಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ಪುತ್ರರಾದ ವಿಕ್ರಮ್ ಹಾಗೂ ಮನೋರಂಜನ್ ಕಾಣಿಸಿಕೊಳ್ಳಲಿ ದ್ದಾರೆ.

ಬ್ಯಾಡ್‌ಬಾಯ್ಸ್‌ನಲ್ಲಿ ಹೊಸ ಅವತಾರ ತಾಳಲಿದ್ದಾರೆ ರವಿಮಾಮ. ಕಣ್ಮನ ಸೆಳೆದ ಕನ್ನಡಿಗನ ಟೀಸರ್ ಇನ್ನು ಲಾಕ್‌ಡೌನ್ ಮುಗಿದ ಬಳಿಕ ರವಿ ಬೋಪಣ್ಣನಾಗಿ ತೆರೆಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ ರವಿಚಂದ್ರನ್. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ನಟಿಸಿರುವುದು ವಿಶೇಷ. ಈ ಚಿತ್ರದ ಜತೆಗೆ ಐತಿಹಾಸಿಕ ಕಥೆಯ ಕನ್ನಡಿಗ ಚಿತ್ರದಲ್ಲಿಯೂ ಕ್ರೇಜಿಸ್ಟಾರ್ ಮಿಂಚಲಿದ್ದಾರೆ.

ಇಲ್ಲಿ ರವಿಚಂದ್ರನ್ ಲಿಪಿಕಾರನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕನ್ನಡಿಗ ಟೀಸರ್ ರಿಲೀಸ್ ಆಗಿದ್ದು, ಲಕ್ಷಾಂತರ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದು, ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿ.ಎಂ.ಗಿರಿರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎನ್.ಎಸ್.ರಾಜ್‌ಕುಮಾರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.