Sunday, 15th December 2024

ಚಂದನವನ ಅರಸಿ ಬಂದ ಪಂಜಾಬಿ ಬೆಡಗಿ ನೇಹಾ ಸಕ್ಸೇನಾ

ನನಗೆ ಹೊಸ ಬದುಕು ನೀಡಿದ್ದು ಕರ್ನಾಟಕ. ಹಾಗಾಗಿ ನಾನು ಪಂಜಾಬಿ ಹುಡುಗಿಯಾಗಿದ್ದರು ಕನ್ನಡದವಳು ಎಂದು ಹೆಮ್ಮೆ ಯಿಂದ ಹೇಳಿಕೊಳ್ಳುತ್ತೇನೆ. ನನ್ನ ಗುರಿಯ ದಾರಿಯಲ್ಲಿ ಸಾಗಿದಾಗ ಅವಕಾಶ ನೀಡಿದ್ದು ಕನ್ನಡ ಚಿತ್ರರಂಗ, ಅದಕ್ಕಾಗಿ ನಾನು ಸದಾ ಸ್ಯಾಂಡಲ್ ವುಡ್‌ನಲ್ಲಿ ಇರಬೇಕು ಎಂದು ಬಯಸುತ್ತೇನೆ.

ಪರಭಾಷೆಯಲ್ಲಿ ನನಗೆ ಅವಕಾಶಗಳು ಬಂದರು ನನಗೆ ಕನ್ನಡ ಚಿತ್ರಗಳೇ ಅಚ್ಚುಮೆಚ್ಚು. ಮುಂದೆ ದರ್ಶನ್, ಪುನೀತ್ ರಾಜ್‌ ಕುಮಾರ್, ಯಶ್, ಸುದೀಪ್ ಅವರೊಂದಿಗೆ ನಟಿಸುವ ಆಸೆಯಿದೆ. ಆ ಸದಾವಕಾಶಕ್ಕಾಗಿ ಕಾಯುತ್ತಿದ್ದೇನೆ. ಕೆಲವು ವರ್ಷಗಳಿಂದ ಕನ್ನಡ ನಟಿಯರು ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿ ಮುಂಚೂಣಿಯಲ್ಲಿದ್ದು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಅದು ಹೆಮ್ಮೆಯ ವಿಚಾರವೂ ಹೌದು. ಅಂತೆಯೇ ಪರಭಾಷೆಗಿಂತ ಕನ್ನಡ ಚಿತ್ರರಂಗವೇ ಉತ್ತಮ ಎಂದು ಬರುವ ನಟಿಯರು ಇದ್ದಾರೆ.

ಅಂತಹವರಲ್ಲಿ ಪಂಜಾಬಿ ಬೆಡಗಿ ನೇಹಾ ಸಕ್ಸೇನಾ ಕೂಡ ಒಬ್ಬರು. ಬೆಂಗಳೂರಿಗೆ ಕೆಲಸ ಅರಸಿ ಬಂದ ನೇಹಾ, ಮಾಡೆಲ್‌ನತ್ತ ಮುಖ ಮಾಡಿದರು. ಸಿನಿಮಾರಂಗದತ್ತ ಒಲವು ತಾಳಿದರು. ಸದ್ಯ ನಟಿಯಾಗಿಯೂ ಗುರುತಿಸಿಕೊಂಡಿರುವ ನೇಹಾ, ಇಷ್ಟಪಟ್ಟು
ಕನ್ನಡವನ್ನು ಕಲಿತಿದ್ದಾರೆ. ಕನ್ನಡವೇ ನನಗೆ ಅವಕಾಶ ಕೊಟ್ಟ ಭಾಷೆ, ಹಾಗಾಗಿ ಎಂದೆಂದಿಗೂ ಕರುನಾಡೇ ನನಗೆ ಸರ್ವಸ್ವ ಎನ್ನುತ್ತಾರೆ.

ಮಾಡೆಲಿಂಗ್‌ನಲ್ಲಿ ಗುರತಿಸಿಕೊಂಡ ನೇಹಾಗೆ ಸಿನಿಮಾದಲ್ಲಿ ನಟಿಸಬೇಕೆಂಬ ತುಡಿತವಿತ್ತು. ಅದಕ್ಕಾಗಿ ಎದುರು ನೋಡುತ್ತಿದ್ದರು. ಆ ವೇಳೆ ತುಳು ಸಿನಿಮಾ ಆಟೋರಿಕ್ಷಾ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೊದಲ ಚಿತ್ರದಲ್ಲೇ ವಕೀಲಳಾಗಿ ನಟಿಸಿದರು. ಆಸಿಡ್ ಸಂತ್ರಸ್ತೆಯೊಬ್ಬರು ತನಗಾದ ಅನ್ಯಾಯಕ್ಕಾಗಿ ನ್ಯಾಯಪಡೆಯಲು ಹೋರಾಡುವ ಕಥೆಯಿದು. ಈ ಚಿತ್ರದಲ್ಲಿ ಮೆಚ್ಚುವ ನಟನೆ ತೋರಿದರು ನೇಹಾ. ಆ ಬಳಿಕ ಕನ್ನಡದ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಚಂದನವನದ ಸುಂದರಿ ತುಳು ಚಿತ್ರದ ಯಶಸ್ಸು ನೇಹಾರನ್ನು ಸ್ಯಾಂಡಲ್‌ವುಡ್‌ನತ್ತ ಕರೆದು ತಂದಿತು. ಆಗ ತಾನೇ ಸೆಟ್ಟೇರಿದ್ದ ಜಸ್ಟ್‌ಲವ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಈ ಚಿತ್ರದಲ್ಲಿ ನಾಯಕಿಯಾಗಿ ಬಣ್ಣಹಚ್ಚಿ ಭರವಸೆ ಮೂಡಿಸಿದರು. ಬಳಿಕ ಅರ್ಜುನ್ ಸರ್ಜಾ ನಟನೆಯ ಗೇಮ್ ಚಿತ್ರದಲ್ಲಿ ಮೆಚ್ಚುವ ಅಭಿನಯ ತೋರಿದರು. ಈ ಚಿತ್ರಗಳು ನೇಹಾಗೆ ಮತ್ತಷ್ಟು ಅವಕಾಶಗಳು ಬರುವಂತೆ ಮಾಡಿದವು. ಈಗಷ್ಟೇ
ಸೆಟ್ಟೇರಿರುವ ಹೊಸ ಚಿತ್ರಗಳಲ್ಲೂ ನೇಹಾ ಅಭಿನಯಿಸುತ್ತಿದ್ದಾರೆ. ಸಂಸ್ಕೃತ ಭಾಷೆಯ ಮೃಚ್ಚ ಕಡಿಗಂ ಚಿತ್ರದಲ್ಲೂ ನಟಿಸಿದ್ದಾರೆ.
ಪರಭಾಷೆಗೂ ಕಾಲಿಟ್ಟ ನೇಹಾ ಕನ್ನಡದಲ್ಲಿ ನಟಿಸಿದ ನೇಹಾ, ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸುವ ಅವಕಾಶ ಪಡೆದರು. ಅಲ್ಲಿಂದ ನೇರವಾಗಿ ಮಾಲಿವುಡ್ ಗೆ ಹಾರಿದರು.

ಮಲಯಾಳಂಗೆ ಎಂಟ್ರಿಕೊಟ್ಟ ನೇಹಾ, ಕಸಬಾ ಎಂಬ ಚಿತ್ರದಲ್ಲಿ ಬಣ್ಣಹಚ್ಚಿದರು. ಮೊದಲ ಚಿತ್ರದಲ್ಲಿಯೇ ಮಾಲಿವುಡ್ ಸ್ಟಾರ್
ನಟ ಮಮ್ಮುಟಿ ಅವರೊಂದಿಗೆ ಅದ್ಭುತವಾಗಿ ನಟಿಸಿದರು. ಈ ಚಿತ್ರದ ಬಳಿಕ ಸಾಲು ಸಾಲು ಮಲಯಾಳಂ ಚಿತ್ರದಲ್ಲಿ ಅಭಿನಯಿ ಸುವ ಸದಾವಕಾಶ ನೇಹಾರನ್ನು ಅರಸಿ ಬಂದವು. ಹೀಗೆ ಮೋಹಲ್‌ಲಾಲ್ ಅವರ ಚಿತ್ರದಲ್ಲಿಯೂ ಅಭಿನಯಿಸಿದರು. ಮಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.

ಸದ್ಯ ನೇಹಾ ಅಭಿನಯದ ಆರತ್, ಲಾಲ್‌ಭಾಗ್, ಫೈವ್, ೪೮ ಹವರ‍್ಸ್, ಬ್ಲಡ್ ಮೂನ್ ಕೊಂಡೊಟ್ಟಿ ಪೂರಮ್ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಸೈಫ್ ಜತೆ ರೊಮ್ಯಾನ್ಸ್ ಮಾಲಿವುಡ್‌ನಲ್ಲಿ ಖ್ಯಾತಿ ಪಡೆದಿದ್ದ ನೇಹಾ ಅಲ್ಲಿಂದ ಬಾಲಿವುಡ್‌ಗೂ ಜಿಗಿದರು. ಸೈಫ್ ಅಲಿಖಾನ್ ನಟನೆಯ ಶೇಫ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿ ನೇಹಾರದ್ದು ಸಣ್ಣ ಪಾತ್ರವಾದರೂ, ಚಿತ್ರದ ಕಥೆಗೆ
ತಿರುವು ನೀಡುವ ಪಾತ್ರವೇ ಆಗಿತ್ತು.

ಹಿಂದಿಯಲ್ಲಿಯೂ ಸೈ ಎನಸಿಕೊಂಡ ನೇಹಾ, ಬಾಲಿವುಡ್‌ನ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಸಿದ್ಧತೆಯಲ್ಲಿದ್ದಾರೆ. ಮೂಲತಃ ಪಂಜಾಬಿ ಬೆಡಗಿಯಾದ ನೇಹಾ, ಪಂಜಾಬಿ ಭಾಷೆಯ ಚಿತ್ರಗಳಲ್ಲಿ ಬಣ್ಣಹಚ್ಚಲು ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ
ಕುರಿತಂತೆ ಮಾತುಕತೆಯೂ ನಡೆದಿದ್ದು, ಲಾಕ್‌ಡೌನ್ ಬಳಿಕ ಚಿತ್ರೀಕರಣಕ್ಕೆ ತೆರಳಲಿದ್ದಾರೆ.