Sunday, 15th December 2024

ಪಕ್ಷ ಸಂಘಟನೆಗಳನ್ನು ಮೀರಿ ಬೆಳೆದ ಧೀಮಂತ ವಿದ್ವಾಂಸ ಮಂಡಗದ್ದೆ ರಾಮಾಜೋಯಿಸ್

ಮಂಜುನಾಥ ಅಜ್ಜಂಪುರ

ಈ ವಾರ ನಮನ್ನು ಅಗಲಿದ ನ್ಯಾಯಮೂರ್ತಿ ಮಂಡಗದ್ದೆ ರಾಮಾಜೋಯಿಸ್ ಅವರು ಅಪಾರ ತಿಳಿವಳಿಕೆ ಹೊಂದಿದ್ದ ವಿದ್ವಾಂಸರಾಗಿದ್ದರು. ಸರಳ ಹಿನ್ನೆಲೆಯಿಂದ ಬಂದಿದ್ದ ರಾಮಾಜೋಯಿಸ್ ಅವರು ಉಚ್ಚನ್ಯಾಯಾಲಯದ ನ್ಯಾಯ ಮೂರ್ತಿಯಾಗಿ, ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ ಪರಿಯೇ ಬೆರಗು ಮೂಡಿಸುವಂತಹದ್ದು. ಹಲವು ಅಪರೂಪದ ಮತ್ತು ವಿದ್ವತ್‌ಪೂರ್ಣ ಗ್ರಂಥಗಳನ್ನೂ ರಚಿಸಿದ್ದ ರಾಮಾಜೋಯಿಸ್ ಅವರು ಕರ್ನಾಟಕದ ಹೆಮ್ಮೆ.

ನಮ್ಮ ನಾಡು – ನುಡಿಗಳನ್ನು ಬೆಳೆಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಿದ್ಧವನಹಳ್ಳಿ ಕೃಷ್ಣಶರ್ಮ ಮುಂತಾದ ಪ್ರಾತಃ ಸ್ಮರಣೀಯರ ಸಾಲಿನಲ್ಲಿ, ತಮ್ಮ ಹಳ್ಳಿಗೆ, ತಮ್ಮ ಜಿಲ್ಲೆಗೆ, ಅಷ್ಟೇಕೆ ತಮ್ಮ ರಾಜ್ಯಕ್ಕೇ ಅಪಾರ ಖ್ಯಾತಿ ತಂದವರು ಮಂಡಗದ್ದೆ ರಾಮಾಜೋಯಿಸ್. ಅವರ ಬಗೆಗಿನ ಭೌತಿಕ ವಿವರಗಳನ್ನು, ಅವರು ಏರಿದ ಪದವಿ – ಸ್ಥಾನಗಳನ್ನು ಮೀರಿದ ಅವರ ವಿಶಿಷ್ಟ ಸಾಧನೆಯ ಕೆಲವು ಹೆಜ್ಜೆಗುರುತುಗಳು ನನ್ನ ಕಣ್ಮುಂದೆ ನಿಲ್ಲುತ್ತಿವೆ.

ವಿದ್ವತ್ತಿನೊಂದಿಗೆ ಅಪರೂಪದ ವಿನಯವಂತಿಕೆಯನ್ನೂ ಮೈಗೂಡಿಸಿಕೊಂಡಿದ್ದ ವ್ಯಕ್ತಿತ್ವ ಅವರದ್ದು. ಅವರನ್ನು ನೋಡು ವಾಗ, ಅವರೊಂದಿಗೆ ಮಾತನಾಡುವಾಗ, ಇವರು ದೊಡ್ಡ ನ್ಯಾಯವಾದಿಯಾಗಿದ್ದವ ರು, ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದವರು, ರಾಜ್ಯಪಾಲರೂ ಆಗಿದ್ದವರು ಎಂಬ ಭಾವನೆಯೇ ಬರುತ್ತಿರಲಿಲ್ಲ. ಸಂವಿಧಾನ, ಕಾನೂನು, ನ್ಯಾಯಶಾಸ್ತ್ರಗಳು ಸೇರಿದಂತೆ, ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಅವರದ್ದು ಮೆಚ್ಚುವಂತಹ ಜ್ಞಾನ ಮತ್ತು ವಿದ್ವತ್ತು. ಏಳೆಂಟು ವರ್ಷಗಳ ಹಿಂದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರೂ – ನನ್ನ ಮಾರ್ಗ ದರ್ಶಕರೂ ಆದ ಮಾನ ನೀಯ ನ.ಕೃಷ್ಣಪ್ಪನವರನ್ನು ಮಾತನಾಡಿಸಲು ‘ಕೇಶವಕೃಪ’ ಕಾರ್ಯಾಲಯಕ್ಕೆ ಹೋಗಿದ್ದ.

ಅಲ್ಲಿ ಅವರು ಗ್ರಂಥವೊಂದರ ಕರಡನ್ನು ತಿದ್ದುತ್ತಿದ್ದರು. ಅದು ಮಂಡಗದ್ದೆ ರಾಮಾಜೋಯಿಸ್ ಅವರ ಅಚ್ಚಾಗಲಿದ್ದ ಕೃತಿ ಎಂಬುದು ತಿಳಿಯಿತು. ಅದರಲ್ಲಿನ ಸಂಸ್ಕೃತ ಪಠ್ಯವನ್ನು ಕೃಷ್ಣಪ್ಪನವರು ತಿದ್ದು ತ್ತಿದ್ದರು, ಪರಿಷ್ಕರಿಸುತ್ತಿದ್ದರು. ಜನಪ್ರಿಯ ಸಾಹಿತ್ಯಲೋಕಕ್ಕೆ ಅಷ್ಟಾಗಿ ಪರಿಚಿತರಲ್ಲದ ಕೃಷ್ಣಪ್ಪ ನವರು ಓರ್ವ ಸಂಸ್ಕೃತ ವಿದ್ವಾಂಸರು. ಆ ಕ್ಷಣದಲ್ಲಿ ಮಂಡಗದ್ದೆ ರಾಮಾಜೋಯಿಸ್ ಅವರ ಬಗೆಗಿನ ಗೌರವ ಇಮ್ಮಡಿಸಿತು.

ಸಂಸ್ಕೃತ ಕ್ಲಿಷ್ಟ ಭಾಷೆ. ವಾಕ್ಯರಚನೆಗಳನ್ನು – ಉಲ್ಲೇಖಗಳನ್ನು ದೋಷರಹಿತವಾಗಿ ಅಚ್ಚು ಮಾಡುವುದು, ಗುಣಮಟ್ಟದ ಗ್ರಂಥಗಳನ್ನು ಸಿದ್ಧಪಡಿಸುವುದು ಬಲು ಶ್ರಮದ ಕೆಲಸ. ಸ್ವತಃ ದೊಡ್ಡ ವಿದ್ವಾಂಸರಾದ ಮಂಡಗದ್ದೆ ರಾಮಾಜೋಯಿಸರು,
ಅತ್ಯುತ್ತಮವಾದ ಮತ್ತು ದೋಷರಹಿತವಾದ ಗ್ರಂಥವನ್ನು ಹೊರತರಲು ಮುಕ್ತ ಮನಸ್ಸಿನಿಂದ ಕೃಷ್ಣಪ್ಪನವರ ನೆರವು ಪಡೆ ದುದೇ ನನಗೆ ವಿಶೇಷ ಎನ್ನಿಸಿತು. ಹೃದಯ ತುಂಬಿಬಂತು. ಅವರ ಸರಳತೆ, ವಿನಯ, ಶ್ರದ್ಧೆಗಳಿಗೆ ಮನಸ್ಸಿನಲ್ಲಿಯೇ ನಮಿಸಿದೆ.

ಗೋಕಾಕ್ ಚಳವಳಿ ತೀರ್ಪು
ಕರ್ನಾಟಕದ ಇತಿಹಾಸದಲ್ಲಿಯೇ ಎಂಬತ್ತರ ದಶಕವು ಐತಿಹಾಸಿಕ ಮಹತ್ತ್ವದ್ದು. ಗೋಕಾಕ್ ಚಳವಳಿ, ಕಾನೂನಾತ್ಮಕ ಹೋರಾಟ, ಸರ್ಕಾರೀ ಆದೇಶ – ಆಜ್ಞೆಗಳು, ಉಚ್ಚ ನ್ಯಾಯಾಲಯದಲ್ಲಿ ಮೂರು ಜನರ ಪೀಠದ ಮುಂದೆ ಬಂದ ಮೊಕದ್ದಮೆ, ಇತ್ಯಾದಿ ನೆನಪಾಗುತ್ತವೆ. 1987 – 1988ರ ಅವಧಿಯಲ್ಲಿ ಈ ಪೀಠದ ಕಲಾಪಗಳನ್ನು ಆಸ್ಥೆಯಿಂದ ನಾನೂ ಗಮನಿಸು ತ್ತಿದ್ದೆ. ಆ ಪೀಠದಲ್ಲಿದ್ದವರು ನ್ಯಾಯಮೂರ್ತಿಗಳಾದ ರಾಮಾಜೋಯಿಸರು, ಎಚ್.ಜಿ.ಬಾಲಕೃಷ್ಣ ಮತ್ತು ರಾಜೇಂದ್ರ ಬಾಬು.

ರಾಮಾಜೋಯಿಸರೇ, ಪೀಠದ ಮುಖ್ಯಸ್ಥರು. ಆಗ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದವರೊಬ್ಬರು ಸರಿಯಾಗಿ ಪೂರ್ವಸಿದ್ಧತೆ ಮಾಡಿಕೊಳ್ಳದೇ ಹೋಗುತ್ತಿದ್ದರು ಮತ್ತು ಆಗಾಗ ರಾಮಾಜೋಯಿಸರ ಆಕ್ಷೇಪಗಳಿಗೆ ತುತ್ತಾಗುತ್ತಿದ್ದರು. ಕನ್ನಡವೇ ಪ್ರಥಮ ಭಾಷೆಯಾಗಬೇಕು ಮತ್ತು ಕಡ್ಡಾಯವಾಗಬೇಕು ಎಂಬ ಆಶಯದ ಗೋಕಾಕ್ ವರದಿ ಕುರಿತಾದ ಒಂದು ತೀರ್ಪು ನೀಡುವುದು ಸುಲಭದ ವಿಷಯವಲ್ಲ. ಬಹು ಭಾಷೆಗಳ ಸಂಕೀರ್ಣ ವ್ಯವಸ್ಥೆಯ ಭಾರತದಂತಹ ದೇಶದಲ್ಲಿ ಸಂವಿಧಾನ ತಜ್ಞರಿಗೆ – ಕಾನೂನು ತಜ್ಞರಿಗೆ ಸಹ ಇಂತಹ ಮೊಕದ್ದಮೆಗಳು ದೊಡ್ಡ ಸವಾಲೇ ಆಗುತ್ತವೆ, ಆಗಿದ್ದವು.

ಮುಂದೆ, ರಾಮಾ ಜೋಯಿಸರು ಮತ್ತು ರಾಜೇಂದ್ರ ಬಾಬು ಒಂದು ತೀರ್ಪು ಕೊಟ್ಟರೆ, ಬೇರೆ ಅಭಿಪ್ರಾಯ ವ್ಯಕ್ತಪಡಿಸಿ ಎಚ್.ಜಿ.ಬಾಲಕೃಷ್ಣ, ಬೇರೊಂದು ತೀರ್ಪನ್ನೇ ಬರೆದರು. ಅದೇನೇ ಇರಲಿ, ರಾಮಾ ಜೋಯಿಸರು ತಮ್ಮ ತೀರ್ಪಿನಲ್ಲಿ ಅಂದು ಬರೆದ ಸಾಲುಗಳು ನನ್ನನ್ನು ಇಂದಿಗೂ ಕಾಡುತ್ತವೆ. ಭಾರತದಲ್ಲಿ ಅಣುಗಾತ್ರದ ಅಲ್ಪ ಸಂಖ್ಯಾತರಾದ ((Microscopic Minority of Anglo-Indians ಎಂಬ ಪದ ಬಳಸಿ ದ್ದರು) ಆಂಗ್ಲೋ ಇಂಡಿಯನ್ನರ ಮಾತೃಭಾಷೆ ಆದ ಇಂಗ್ಲಿಷ್ ಭಾಷೆಯು ಬದಲಿಸ ಲಾಗದ ಶಿಕ್ಷಣ ಮಾಧ್ಯಮವಾಗಿ ಹೋಗಿರುವ ಬಗೆಗೆ ಅವರ ಸಾಲುಗಳಲ್ಲಿ ವಿಷಾದ ಭಾವವಿತ್ತು, ಅಚ್ಚರಿಯಿತ್ತು.

ಪೋಷಕರಿಂದ ಇಂಗ್ಲಿಷ್ ತಮ್ಮ ಮಾತೃಭಾಷೆ ಎಂಬ ಅಫಿಡವಿಟ್ ಪಡೆದು ಕೊಬ್ಬುತ್ತಿದ್ದ ಧನದಾಹೀ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಅವರು ಆತಂಕದಿಂದ ಗಮನಿಸಿದ್ದರು. ಮೇಲ್ನೋಟಕ್ಕೆ ತಮ್ಮ ತೀರ್ಪಿನಲ್ಲಿ ಕನ್ನಡಕ್ಕೆ ಕಡ್ಡಾಯದ ಪ್ರಥಮ ಭಾಷೆಯ ಸ್ಥಾನ ನೀಡುವ ಬದಲು, ಎರಡನೆಯ – ಮೂರನೆಯ ಕಡ್ಡಾಯ ಭಾಷೆಯ ಆಯ್ಕೆಯ ಅವಕಾಶವೂ ಇರುವಂತಹ ಸ್ಥಾನಮಾನ ನೀಡಿದರು ಎಂದೆನ್ನಿಸಿದರೂ ಮುಂದೆ ಸುಪ್ರೀಂ ಕೋರ್ಟಿಗೆ ಹೋದರೂ ಬದಲಿಸಲಾಗದಂತಹ ಜಾಣತನದ ತೀರ್ಪು ಅದಾಗಿತ್ತು. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ಪ್ರಾದೇಶಿಕ ಭಾಷೆಗಳಿಗೆ ಸಂಬಂಧಿಸಿದಂತೆ ಇಂತಹುದೇ ಮೊಕದ್ದಮೆ ಹೂಡಿದರೂ, ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಬೇಕಾಗಿ ಬಂದರೂ ಸುಲಭವಾಗಿ ಅನ್ವಯವಾಗು ವಂತಹ ಅನುಷ್ಠಾನವಾಗು ವಂತಹ ಜಾಣತನದ ತೀರ್ಪು ಅದು.

ಆದರೆ, ಕನ್ನಡ ಪರ ಹೋರಾಟಗಾರರು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ, ಒಪ್ಪಿಕೊಳ್ಳಲಿಲ್ಲ. ರಾಮಾಜೋಯಿಸರು ನ್ಯಾಯಾಧೀಶರಾದುದರಿಂದ ಈ ಕುರಿತಂತೆ ವಿಚಾರ – ಚರ್ಚೆ – ಅವರ ದೂರಾಲೋಚನೆಯ ಕಾರ್ಯತಂತ್ರ ಇತ್ಯಾದಿಗಳ ಬಗೆಗೆ ಮಾತನಾಡುವಂತಿರಲಿಲ್ಲ. ಮುಂದೆ, ಸರ್ಕಾರೀ ನಿರ್ಣಯಗಳು, ಆದೇಶಗಳು, ಉಚ್ಚ ನ್ಯಾಯಾಲಯ – ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳು ಎತ್ತೆತ್ತಲೋ ಸಾಗಿದವು. ಏನೇನೋ ಆಗಿಹೋಯಿತು. ಮಹತ್ತ್ವದ ಈ ಅವಧಿಯಲ್ಲಿ ಕನ್ನಡ – ಕನ್ನಡ ಮಾಧ್ಯಮ (ಅಷ್ಟೇಕೆ, ಭಾರತೀಯ ಭಾಷೆಗಳೇ) ಮೂಲೆಗುಂಪಾಗಿ, ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ಮಾಧ್ಯಮಗಳು ತ್ರಿವಿಕ್ರಮ ಸ್ವರೂಪದಲ್ಲಿ ಆವರಿಸಿಕೊಂಡುಬಿಟ್ಟವು.

ಬಹಳ ಮಹತ್ತ್ವದ ಐತಿಹಾಸಿಕ ತೀರ್ಪೊಂದು ದೇಶದ ಭವಿಷ್ಯವನ್ನು ಬದಲಾಯಿಸುವ ಅವಕಾಶವೊಂದು ಹೀಗೆ ವಿಫಲ ವಾಯಿತು. ಭಾಷೆಯ ವಿಷಯವಿರಲಿ, ಶಿಕ್ಷಣ ಮಾಧ್ಯಮದ ವಿಷಯವಿರಲಿ, ಬಿಡಿ, ನಮ್ಮ ಸಂಸ್ಕೃತಿ – ನಮ್ಮ ಪ್ರಪಂಚಗಳೇ ಇಂಗ್ಲಿಷ್ ಮಯವಾಗಿಬಿಟ್ಟವು.

ಮತ್ತೆ ಹಿಂತಿರುಗಿ ಬಾರದ ಹಾದಿಗೇ ನಾವೆಲ್ಲಾ ಹೋಗಿಬಿಟ್ಟೆವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರೆಂದರೆ,
ಜ್ಞಾನ ಸಾಧನೆಗೆ – ಜ್ಞಾನಾರ್ಜನೆಗೆ ತಪೋನಿರತರಾದ ಪ್ರಾಚೀನ ಭಾರತದ ಋಷಿಗಳಂತೆ. ತಮ್ಮ ಸರ್ವಸ್ವವನ್ನೂ ಭಾರತೀಯ
ಸಮಾಜೋನ್ನತಿಯ ಕಾರ್ಯಸಾಧನೆಗೆ ಧ್ಯೇಯಸಾಧನೆಗೆ ಮುಡಿಪಾಗಿಟ್ಟವರು. ನರೇಂದ್ರ ಮೋದಿಯವರು ಸಹ ಅಂತಹ ತ್ಯಾಗಜೀವಿಗಳಲ್ಲೊಬ್ಬರು. ತಮ್ಮ ಸಂಸಾರಕ್ಕಿಂತ ದೇಶ – ಸಮಾಜಗಳು ಹೆಚ್ಚು ಎಂದು ಪರಿಭಾವಿಸಿದವರು ಅವರು.

ಜಶೋದಾ ಬೆನ್ ಅವರೊಂದಿಗೆ ಅವರ ವಿವಾಹವಾಯಿತು. ಅದು ಬಾಲ್ಯವಿವಾಹ. ಆದರೆ, ಮೋದಿಯವರು ಸಂಸಾರ
ಮಾಡಲೇ ಇಲ್ಲ. ದೇಶದ ಕರೆಗೆ ಓಗೊಟ್ಟು ಪತ್ನಿಯನ್ನು ತ್ಯಜಿಸಿ ಸಮಾಜಸೇವೆಗಾಗಿ ಹೊರಟುಹೋದರು. ಜಶೋದಾ ಬೆನ್
ಅವರೂ ಅಪರೂಪದ ತ್ಯಾಾಗಮಯಿ ಹೆಣ್ಣುಮಗಳು. ಒಂಟಿಯಾಗಿಯೇ ಉಳಿದು (ಮತ್ತೆ ಯಾರನ್ನೂ ವಿವಾಹವಾಗದೇ)  ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪರೋಕ್ಷವಾಗಿ ಮೋದಿಯವರ ಮಹತ್ಸಾಧನೆಗೆ ಬೆಂಬಲವಾಗಿ ನಿಂತರು.

ಇಡೀ ಭಾರತೀಯ ಸಮಾಜವೇ ಅವರಿಗೆ ಕೃತಜ್ಞರಾಗಿರಬೇಕು. ಮೋದಿ – ಜಶೋದಾ ಬೆನ್ ಅವರದ್ದು ಅಪೂರ್ವ ಜೋಡಿ, ತ್ಯಾಗಮಯ ಜೀವನ. ನರೇಂದ್ರ ಮೋದಿ ಅಂತಹ ಸಾಧಕರ ಜೀವನದಲ್ಲಿ ಟೀಕೆ ಭರ್ತ್ಸನೆಗಳು ಸಹಜ. ಸಮಾಜ ಇರುವುದೇ
ಹಾಗೆ. ಸತ್ಕಾರ್ಯಕ್ಕೆ ಸಾವಿರ ಅಡ್ಡಿಗಳು, ಸಾವಿರ ಟೀಕೆಗಳು. ಮೋದಿ ಅವರಂತೂ ‘ಟೀಕಾಕಾರರ ಬೈಗುಳವೇ ನನ್ನ ನಿತ್ಯ
ಆಹಾರ’ ಎಂದು ತಮಾಷೆ ಮಾಡುವುದುಂಟು. ಸ್ವಂತದ ಸುಖಜೀವನವನ್ನು ಬಿಟ್ಟು ಸಮಾಜದ ಒಳಿತಿಗಾಗಿ ತ್ಯಾಗಜೀವನ ನಡೆಸುತ್ತಿರುವ ಮೋದಿ ಅವರಿಗೆ, ಟೀಕಾಕಾರರು ‘ಹೆಂಡತಿ ಬಿಟ್ಟವರು, ಹೆಂಡತಿಯನ್ನು ನೋಡಿಕೊಳ್ಳದವರು’ ಮುಂತಾದ ಅನುಚಿತ ಟೀಕೆಗಳ ವಿಷವನ್ನೇ ಕಾರಿದರು.

ಈ ಸಮಯದಲ್ಲಿ ಮಂಡಗದ್ದೆ ರಾಮಾಜೋಯಿಸರು ಪತ್ರಿಕೆಯೊಂದರಲ್ಲಿ ಬರೆದ ಯಾಜ್ಞವಲ್ಕ್ಯ – ಮೈತ್ರೇಯೀ ಅವರ ಸೋದಾಹರಣ ಕಥೆ, ಸಾರ್ವಕಾಲಿಕ ಮೌಲ್ಯವುಳ್ಳದ್ದು ಮತ್ತು ಭಾರತೀಯ ಆರ್ಷ ಪರಂಪರೆಯ ಅತ್ಯುತ್ತಮ ಉದಾಹರಣೆ ಎನ್ನುವಂತಹುದು. ಬೃಹದಾರಣ್ಯಕೋಪನಿಷತ್ತು ಒಂದು ಪ್ರಮುಖವಾದ ಉಪನಿಷತ್ತು. ಅದರ ಕರ್ತೃ ಯಾಜ್ಞವಲ್ಕ್ಯ ಋಷಿ.
ಯಾಜ್ಞವಲ್ಯರ ಪತ್ನಿಯೇ ಈ ಮೈತ್ರೇಯೀ. ಯಾಜ್ಞವಲ್ಕ್ಯರು ‘ಮೈತ್ರೇಯೀ, ನಾನೀಗ ಈ ಗೃಹಸ್ಥಾಶ್ರಮ ಬಿಡಲು ನಿಶ್ಚಯಿಸಿದ್ದೇನೆ’ ಎಂದರು.

ಜ್ಞಾನಸಾಧನೆಗಾಗಿ, ವಿದ್ವತ್ಸಂಚಯನಕ್ಕಾಗಿ ಗ್ರಂಥರಚನೆಗಾಗಿ ಅನಂತರ ಯಾಜ್ಞವಲ್ಕ್ಯರು ತಮ್ಮ ಜೀವನವನ್ನೇ ಮುಡುಪಾಗಿ ಟ್ಟರು. ಅಮೃತತ್ವದ ಸಿದ್ಧಿಗಾಗಿ, ಬ್ರಹ್ಮವಿದ್ಯೆಯ ಆರ್ಜನೆಗಾಗಿ ಮೈತ್ರೇಯೀ ಸಹ ಸಾಂಸಾರಿಕ ಜೀವನವನ್ನು ತ್ಯಾಗ ಮಾಡಿ, ಯಾಜ್ಞವಲ್ಕ್ಯರಿಗೆ ಸಹಕರಿಸಿದಳು, ಬೆಂಬಲಿಸಿದಳು. ಯಾಜ್ಞವಲ್ಕ್ಯ ಮಹರ್ಷಿ – ಮೈತ್ರೇಯೀ ಅವರ ಅಸಾಮಾನ್ಯ ದಾಂಪತ್ಯವನ್ನು
ಹೋಲಿಸಿ, ಮಂಡಗದ್ದೆ ರಾಮಾಜೋಯಿಸರು ನರೇಂದ್ರ ಮೋದಿ – ಜಶೋದಾ ಬೆನ್ ಅವರ ಬಗೆಗೆ ಬರೆದ ಆ ಬರೆಹವು ಅತ್ಯಪೂರ್ವವಾದ ಆರ್ಷ ಉದಾಹರಣೆಯಾಗಿತ್ತು, ಈ ಈರ್ವರ ತ್ಯಾಗಕ್ಕೆ ಸಲ್ಲಿಸಿದ ಸೂಕ್ತ ಗೌರವವಾಗಿತ್ತು.

ಈ ನರೇಂದ್ರ ಮೋದಿ -ಜಶೋದಾ ಬೆನ್ ಅವರ ಜೋಡಿಯ ಬಗೆಗೆ, ರಾಮಾಜೋಯಿಸರಂತೆ ಇಂತಹ ಅತ್ಯುತ್ಕೃಷ್ಟ ಉದಾಹರಣೆಯನ್ನು ಬೇರೆ ಯಾರೂ ನೀಡಿಲ್ಲ. ಮಹತ್ತ್ವದ ಲೇಖಕರಾದ ರಾಮಾಜೋಯಿಸರು ನ್ಯಾಯಶಾಸ್ತ್ರ, ಕಾನೂನು,
ಸಂವೈಧಾನಿಕ ಇತಿಹಾಸ, ಧರ್ಮ, ಪ್ರಾಚೀನ ಭಾರತದ ಕಾನೂನು ವ್ಯವಸ್ಥೆ, ಇತ್ಯಾದಿ ಬಗೆಗೆ ಉತ್ಕೃಷ್ಟ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳ ನಡುವೆ, ನನಗೆ ತುಂಬಾ ವಿಶೇಷ ಎನ್ನಿಸುವುದು ಸ್ವಾರಸ್ಯಪೂರ್ಣವಾದ ಅವರ ‘ಮೆಸೇಜ್ ಫ್ರಮ್ ಪಾರ್ಲಿಮೆಂಟ್ ಹೌಸ್ ಭಾರತ್’ ಕೃತಿ.

ನಮ್ಮ ಸಂಸತ್ ಭವನದ ವಿಶೇಷವೆಂದರೆ, ಅಲ್ಲಿನ ಭಿತ್ತಿಗಳಲ್ಲಿ ದ್ವಾರಗಳಲ್ಲಿ ರಾಮಾಯಣ, ಮಹಾಭಾರತ, ವೇದ, ಉಪನಿಷತ್, ಚಾಣಕ್ಯನೀತಿ, ಶುಕ್ರನೀತಿ, ಮುಂತಾದವುಗಳಿಂದ ಆರಿಸಿ ಕೆತ್ತಿಸಿದ ಸೂಕ್ತಿ ಸುಭಾಷಿತ ಸಂದೇಶಗಳಿವೆ. ಆದರೂ ಅವುಗಳನ್ನೆಲ್ಲಾ ಸರಿಯಾಗಿ ಗಮನಿಸಿದವರೇ ಇಲ್ಲ. ಸಾಮಾನ್ಯರೇ ಹಾಗೆ. ಸುತ್ತಲೂ ಏನೆಲ್ಲಾ ಅದ್ಭುತಗಳಿವೆ, ಎಂಬುದನ್ನು ಸರಿಯಾಗಿ ನೋಡಿಯೇ ಇರುವುದಿಲ್ಲ.

ರಾಮಾಜೋಯಿಸರು ಅಂತಹ ಸೂಕ್ತಿಗಳನ್ನೆಲ್ಲಾ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ದಶಕಗಳ ಕಾಲ ಸಂಸದ ರಾದವರೂ, ಸಂಸದ್ ಭವನದಲ್ಲಿಯೇ ತಮ್ಮ ಬಹುಪಾಲು ಜೀವನವನ್ನು ಕಳೆದವರೂ ಈ ಪುಸ್ತಕ ನೋಡಿ ಬೆರಗಾಗಿದ್ದಾರೆ. ಈವರೆಗೆ ನೋಡಿಯೇ ಇರಲಿಲ್ಲವಲ್ಲ, ಎಂದು ವಿಷಾದಿಸಿದ್ದಾರೆ. ನಿಜ. ರಾಮಾಜೋಯಿಸರ ಹೆಜ್ಜೆಗುರುತುಗಳು ಅತ್ಯಪೂರ್ವವೇ.