Thursday, 12th December 2024

ರಥಸಪ್ತಮಿ

ಶೈನಾ ಶ್ರೀನಿವಾಸ್ ಶೆಟ್ಟಿ

ಸೂರ್ಯದೇವನನ್ನು ಆರಾಧಿಸುವ ಪರ್ವ ದಿನವೇ ರಥಸಪ್ತಮಿ. ಸಪ್ತ ಕುದುರೆಗಳನ್ನೊಳಗೊಂಡ ರಥವನ್ನು ಏರಿ ಸೂರ್ಯದೇವ ತನ್ನ ಭ್ರಮಣೆಯ ದಿಕ್ಕನ್ನು ಉತ್ತರದ ಕಡೆಗೆ ಮುಖ ಮಾಡುತ್ತಾನೆ.

ರಥಸಪ್ತಮಿಯನ್ನು  ಅಚಲಾ ಸಪ್ತಮಿ ಎಂದು ಕೂಡ ಕರೆಯಲಾಗುತ್ತದೆ. ಮಾಘಮಾಸದ ಶುಕ್ಲಪಕ್ಷದ ಸಪ್ತಮಿಯಂದು
(19.2.2021) ರಥಸಪ್ತಮಿ ಬರುತ್ತದೆ. ಸೂರ್ಯ ಸಕಲ ಜೀವಕೋಟಿಗೆ ಅಧಿಪತಿ. ಸೂರ್ಯನಿಲ್ಲದೆ ಬದುಕಿಲ್ಲ. ಬೆಳಕನ್ನು ನೀಡುವ
ಸೂರ್ಯದೇವ ಪ್ರತಿ ಜೀವಿಯ ಮನದೊಳಗಿನ ಅಂಧಕಾರವನ್ನು ದೂರ ಮಾಡಿ, ಜ್ಞಾನದ ಬೆಳಕನ್ನು ಬೆಳಗಿಸಿ ಸುಜ್ಞಾನದ ಹಾದಿಯನ್ನು ತುಳಿಯುವಂತೆ ಮಾಡುತ್ತಾನೆ. ಸೂರ್ಯನ ಸಹವಾಸವು ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ವೃದ್ಧಿಸು ವುದು.

ಅಂತಹ ಶಕ್ತಿ ದೇವತೆ ಸೂರ್ಯನನ್ನು ಆರಾಧಿಸುವ ದಿನ ರಥಸಪ್ತಮಿ. ಸೂರ್ಯನನ್ನು ಉತ್ತಮ ಬದುಕಿಗಾಗಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸಮುದ್ರ ಸ್ನಾನವನ್ನು ಮಾಡಲಾಗುತ್ತದೆ. ಸೂರ್ಯನಿಗೆ ಎಕ್ಕದ ಎಲೆ ಅತ್ಯಂತ ಪ್ರಿಯವಾದುದು. ಹಾಗಾಗಿ ರಥಸಪ್ತಮಿಯ ಸಮುದ್ರ ಸ್ನಾನದ ಸಮಯದಲ್ಲಿ ತಲೆಯ ಮೇಲೆ , ತೋಳಿನ ಮೇಲೆ ಏಳು ಎಕ್ಕದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡುವ ರೂಢಿಯಿದೆ.

ಸಂಖ್ಯೆ ಏಳು ಸೂರ್ಯ ತತ್ತ್ವ , ಸಪ್ತಾಶ್ವ , ಸಪ್ತ ಪ್ರಾಣಗಳ ಸಂಕೇತವೂ ಹೌದು. ಎಕ್ಕದ ಎಲೆ, ಎಲಚಿಯ ಎಲೆ, ಗರಿಕೆ ಹುಲ್ಲು ,ಅಕ್ಷತೆಯನ್ನು ಬಳಸಿ ಪೂಜೆ ಮಾಡುವ ಪದ್ಧತಿ. ಜತೆಯಲ್ಲೇ ಸೂರ್ಯ ಗಾಯತ್ರಿ, ಅರುಣ ಮಂತ್ರ, ಮಹಾ ಸೌರ ಮಂತ್ರಗಳನ್ನು ಹೇಳುವುದುಂಟು. ಸೂರ್ಯನ ಎಳೆ ಬಿಸಿಲನ್ನು ಮೈಗೆ ತಾಗಿಸಿ ಕೊಂಡರೆ ದೇಹಕ್ಕೆ ಬೇಕಾದ ಶಕ್ತಿ, ಆರೋಗ್ಯದ ಜೊತೆ ಜೊತೆ ಚೈತನ್ಯವೂ ಹೆಚ್ಚುತ್ತದೆ.

ಮನುಷ್ಯನ ದೇಹಕ್ಕೆ ‘ವಿಟಮಿನ್ ಡಿ’ ಯ ಅಗತ್ಯತೆಯನ್ನು ಪಡೆಯಲು ರಥಸಪ್ತಮಿಯ ಆಚರಣೆಯು ಸಹಕಾರಿ. ಯೋಗ ಮತ್ತು ಯೋಗದಿಂದಾಗುವ ಲಾಭವನ್ನು ಅರಿತ ಜ್ಞಾನಿಗಳು ಸೂರ್ಯ ನಮಸ್ಕಾರವನ್ನು ರಥಸಪ್ತಮಿಯ ದಿನ ಮಾಡುವುದು
ಆರೋಗ್ಯಕರ ಎಂದಿದ್ದಾರೆ. ಸೂರ್ಯ ನಮಸ್ಕಾರದ ಮಂತ್ರ ಹಾಗೂ ಆಸನದ ಭಂಗಿಗಳು ದೇಹದ ಸಮಸ್ಯೆಗಳನ್ನು ಹೊರದಬ್ಬು ತ್ತದೆ ಹಾಗು ದೇಹಕ್ಕೆ ನವ ಚೈತನ್ಯವನ್ನು ಒದಗಿಸುತ್ತದೆ. 108 ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಸೂರ್ಯ ದೇವರಿಗೆ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ.

ಪೆರುವಿನಲ್ಲಿ ಸೂರ್ಯ ದೇಗುಲ
ಪೆರುವಿನ ಕುಸ್ಕೋ ಪಟ್ಟಣದಲ್ಲಿ ಸೂರ್ಯ ದೇವಾಲಯದ ಅವಶೇಷಗಳಿವೆ. ಹದಿನಾರನೆಯ ಶತಾನದ ತನಕ ತಲೆ ಎತ್ತಿ ನಿಂತಿದ್ದ ಈ ಭವ್ಯ ಶಿಲಾ ದೇಗುಲವನ್ನು ಯುರೋಪಿಯನ್ ಅತಿಕ್ರಮಣಕಾರರು 1536ರ ಸಮಯದಲ್ಲಿ ನಾಶ ಮಾಡಿದರು.

ವೃತ್ತಾಕಾರದ ಈ ಶಿಲಾ ದೇಗುಲಕ್ಕೆ ನಾಲ್ಕು ಮಹಡಿಗಳಿದ್ದು, ಸುಮಾರು 60 ಅಡಿ ಎತ್ತರವಿತ್ತು. ಪೆರುವಿನ ಮೂಲ ನಿವಾಸಿಗಳು ಸೂರ್ಯನನ್ನು ಇಂತಿ ಎಂದು ಕರೆಯುತ್ತಿದ್ದರು. ಪ್ರತಿ ವರ್ಷ ಜೂನ್‌ನಲ್ಲಿ ಸೂರ್ಯನನ್ನು ಪೆರುವಿನವರು ಪೂಜಿಸುತ್ತಾರೆ.