Friday, 13th December 2024

ದೃಶ್ಯ ೨ ಕುಟುಂಬ ಒಂದು – ರಾಜೇಂದ್ರ ಪೊನ್ನಪ್ಪನಾಗಿ ರವಿಮಾಮ

ಕನ್ನಡದಲ್ಲಿ ಮೂಡಿಬಂದ ದೃಶ್ಯ ಚಿತ್ರ ಸ್ಯಾಂಡಲ್‌ವುಡ್ ಶೋ ಮ್ಯಾನ್ ಕ್ರೇಜಿಸ್ಟಾರ್‌ಗೆ ಹೊಸ ಇಮೇಜ್ ತಂದುಕೊಟ್ಟಿತು. ಸಾಮಾನ್ಯ ವ್ಯಕ್ತಿಯಾಗಿ, ಅಸಮಾನ್ಯ ಬುದ್ದಿವಂತಿಕೆ ತೋರುವ ಪಾತ್ರದಲ್ಲಿ ಮಿಂಚಿದ ರವಿಮಾಮ ಪ್ರೇಕ್ಷಕರನ್ನು ರಂಜಿಸಿದರು.

ಚಿತ್ರ ಯಶಸ್ವಿ ಪ್ರದರ್ಶನ ಕಂಡಿತು. ದೃಶ್ಯ ಚಿತ್ರ ತೆರೆಗೆ ಬಂದು ಆರು ವರ್ಷಗಳು ಕಳೆದರು, ಆ ದೃಶ್ಯ, ಪ್ರೇಕ್ಷಕರ ಮನದಿಂದ ಇನ್ನು ಮರೆಯಾಗಿಲ್ಲ. ಈಗ ಆರು ವರ್ಷಗಳ ಬಳಿಕ ಮುಂದುವರಿದ ಭಾಗವಾಗಿ ದೃಶ್ಯ 2 ತೆರೆಗೆ ಬರಲು ಸಿದ್ಧವಾಗಿದೆ. ದೃಶ್ಯ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ ಗಮನಸೆಳೆದಿದ್ದ ರವಿಮಾಮ, ಈಗ ಮತ್ತೆ ಅದೇ ಅವತಾರದಲ್ಲಿ ತೆರೆಯಲ್ಲಿ ಪ್ರತ್ಯಕ್ಷವಾಗಲಿದ್ದಾರೆ. ವಿಶೇಷ ಎಂದರೆ ದೃಶ್ಯ 2 ಚಿತ್ರಕ್ಕಾಗಿ ಮತ್ತೆ ಅದೇ ಕುಟುಂಬ ಒಂದಾಗಿದೆ. ಸೀತಾಳ ಪಾತ್ರದಲ್ಲಿ ನವ್ಯಾ ನಾಯರ್, ಮಕ್ಕಳ ಪಾತ್ರದಲ್ಲಿ ಆರೋಹಿ ನಾರಾಯಣ್ ಹಾಗೂ ಉನ್ನತಿ ನಟಿಸಿದ್ದಾರೆ.

ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪ ತನ್ನ ಕಟುಂಬವನ್ನು ರಕ್ಷಿಸಲು ಸಾಕಷ್ಟು ಶ್ರಮಪಡುತ್ತಾನೆ. ತನ್ನ ಮಗಳು ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು, ಬಲು ಬುದ್ದಿವಂತಿಕೆಯಿಂದ ಶವವನ್ನು ಪೊಲೀಸ್ ಠಾಣೆ ಯಲ್ಲಿಯೇ ಹೂತು, ಕುಟುಂಬವನ್ನು ಪಾರು ಮಾಡುತ್ತಾನೆ. ಇನ್ನು ಮುಂದಿನ ಭಾಗದಲ್ಲಿ ಆ ಕೇಸ್ ರೀ ಓಪೆನ್ ಆಗಲಿದೆ. ಈಗ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ರಕ್ಷಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಸಿಲುಕುತ್ತಾನೆ. ಅದಕ್ಕಾಗಿ ಏನು ಉಪಾಯ ಹೂಡುತ್ತಾನೆ ಎಂಬುದೆ ದೃಶ್ಯ 2 ಚಿತ್ರದ ಕಥೆ. ಅದನ್ನು ಮತ್ತಷ್ಟು ರೋಚಕವಾಗಿ ತೆರೆಗೆ ತರುತ್ತಿದ್ದಾರೆ ನಿರ್ದೇಶಕ ಪಿ.ವಾಸು.

ಇದು ನನ್ನ ಎರಡನೆ ಕುಟುಂಬ

ದೃಶ್ಯ 2 ಚಿತ್ರೀಕರಣ ಪೂರ್ಣಗೊಳಿಸಿದ ಸಂತಸದಲ್ಲಿರುವ ರವಿಚಂದ್ರನ್, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಆರು ವರ್ಷಗಳ ಹಿಂದೆ ದೃಶ್ಯ ಚಿತ್ರದಲ್ಲಿದ್ದ ಕುಟುಂಬವೇ ಈ ಚಿತ್ರದಲ್ಲಿಯೂ ಇದೆ. ನನಗೆ ಇದು ಎರಡನೇ ಕುಟುಂಬ. ಇಡೀ ಚಿತ್ರತಂಡವೇ ಒಂದು ಕುಟುಂಬದಂತಿತ್ತು. ಬೆಳ್ಳಿಗ್ಗೆ ಎದ್ದು ಚಿತ್ರೀಕರಣಕ್ಕೆ ಹೊರಟಾಗ ಮನದಲ್ಲಿ ಸಂತಸ ಮನೆ ಮಾಡುತ್ತಿತ್ತು. ಅಂದುಕೊಂಡಂತೆ ಚಿತ್ರೀಕರಣ ಮುಗಿಸಿದ್ದೇವೆ ಎನ್ನುತ್ತಾರೆ ರವಿಮಾಮ.

ಥಿಯೇಟರ್ ಸಂಸ್ಕೃತಿ ಮುಂದುವರಿಯಲಿ

ನಮಗೆ ಒಟಿಟಿ ತಿಳಿದಿಲ್ಲ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇವೆ. ಅದಕ್ಕಾಗಿ ಚಿತ್ರಮಂದಿರಗಳಲ್ಲಿ ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗುವವರೆಗೂ ಕಾಯುತ್ತೇವೆ. ದೃಶ್ಯ 2 ಚಿತ್ರದಲ್ಲಿ ಪ್ರೀತಿ ತುಂಬಿದ ಕುಟುಂಬದ ಕಥೆ ಇದೆ. ಹಾಗಾಗಿ ಚಿತ್ರವನ್ನು ಕುಟುಂಬ ಸಮೇತರಾಗಿಯೇ ನೋಡ ಬೇಕು. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದಾಗ ಸಿಗುವ ಮನರಂಜನೆ ಎಲ್ಲೂ ಸಿಗುವುದಿಲ್ಲ. ಅದಕ್ಕಾಗಿ ಥಿಯೇಟರ್ ಸಂಸ್ಕೃತಿ ಮುಂದುವರಿಯಲೇ ಬೇಕು ಎನ್ನುತ್ತಾರೆ ರವಿಚಂದ್ರನ್.

ಹೃದಯಕ್ಕೆ ಹಿಡಿಸಿದ ಚಿತ್ರ 

ಮಲಯಾಳಂ ಬೆಡಗಿ ನವ್ಯಾ ನಾಯರ್, ಸೀತಾಳ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ದೃಶ್ಯ, ನನ್ನ ಹೃದಯಕ್ಕೆ ಹಿಡಿಸಿದ ಚಿತ್ರ. ಹಾಗಾಗಾಗಿ ದೃಶ್ಯ 2 ರಲ್ಲೂ ಸಂತಸ ದಿಂದಲೇ ನಟಿಸಿದ್ದೇನೆ. ರವಿಚಂದ್ರನ್ ಅವರ ಜತೆ ನಟಿಸುವಾಗ ಹೊಸತನ ತರುತ್ತಿತ್ತು. ಅವರ ಸಿನಿಮಾಗಳ ಹಾಡನ್ನು ಕೇಳಿದ್ದೇನೆ. ಯಮ್ಮೋ ಯಮ್ಮೋ.. ಹಾಡಿನ ಸಾಹಿತ್ಯವನ್ನು ಈ ಚಿತ್ರದಲ್ಲಿಯೂ ಬಳಸಿಕೊಳ್ಳಲಾಗಿದೆ ಎಂದು ಹರ್ಷದಿಂದಲೆ ನುಡಿಯುತ್ತಾರೆ ನವ್ಯಾ ನಾಯರ್.

ರಿಮೇಕ್ ಕಥೆ

ದೃಶ್ಯ ಚಿತ್ರ ಮಲಯಾಳಂನ ದೃಶ್ಯಂ ಚಿತ್ರದ ರಿಮೇಕ್ ಆಗಿತ್ತು. ಕನ್ನಡದಲ್ಲಿಯೂ ಚಿತ್ರ ಯಶಸ್ವಿಯಾಯಿತು. ಈ ಗೆಲುವಿನ ಸಂತಸದಲ್ಲಿರುವ ಚಿತ್ರತಂಡ, ಈಗ
ದೃಶ್ಯ 2 ತೆರೆಗೆ ತರಲು ಸಜ್ಜಾಗಿದೆ. ದೃಶ್ಯ 2 ಕೂಡ ಮಲಯಾಳಂ ರಿಮೇಕ್ ಆಗಿದೆ. ಮಲಯಾಳಂ ಭಾಷೆಯಲ್ಲಿ ನೀತು ಜೋಸೆಫ್ ನಿರ್ದೇಶಿಸಿದ್ದ ಚಿತ್ರವನ್ನು ಕನ್ನಡದಲ್ಲಿ ಪಿ.ವಾಸು ತೆರೆಗೆ ತರುತ್ತಿದ್ದಾರೆ. ಈ ಬಾರಿ ಕ್ಲೈಮ್ಯಾಕ್ಸ್‌ನಲ್ಲಿ ಒಂದಷ್ಟು ಬದಲಾವಣೆ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ವಾಸು.