ರಾಜಗೋಪಾಲನ್. ಕೆ. ಎಸ್.
ಮಹಾಭಾರತದ ಯುದ್ಧ ಆರಂಭವಾಗುವುದರಲ್ಲಿತ್ತು. ಇದ್ದಕ್ಕಿದ್ದಂತೆ ಅಳುಕಿತು, ಅರ್ಜುನನ ಮನಸ್ಸು- ‘ಛೆ! ನಾವೇನು ಮಾಡಹೊರಟಿದ್ದೇವೆ? ದಾಯಾದಿಗಳನ್ನು ಕೊಲ್ಲುವುದೇ? ಗುರುಗಳನ್ನು ಹತ್ಯೆೆ ಮಾಡುವುದೇ? ಸಲಹಿದ ತಾತ, ಭೀಷ್ಮರನ್ನು ವಧಿ
ಸುವುದೇ? ಯುದ್ಧದಲ್ಲಿ ವೀರರು ಸತ್ತರೆ, ಅವರ ಪತ್ನಿಯರ ಗತಿಯೇನು? ಮುಂತಾಗಿ ಯೋಚಿಸಿದ ಅವನ ಕೈಯಿಂದ ಗಾಂಡೀವ ಧನುಸ್ಸು ಜಾರಿತು.
ಯುದ್ಧ ಮಾಡುತ್ತಿರುವುದು ದ್ವೇಷ ಸಾಧನೆಗಲ್ಲ; ಧರ್ಮವನ್ನುಳಿಸಲು; ಧರ್ಮರಕ್ಷಣೆಗೆ ಉಳಿದ ಉಪಾಯಗಳು ಮುಗಿದ ಮೇಲಷ್ಟೆ
ಅಲ್ಲವೇ ರಣೋನ್ಮುಖರಾಗಿದ್ದು?…….ಇತ್ಯಾದಿ ತಿಳಿ ಹೇಳಿ ಇಡೀ ಸೃಷ್ಟಿಯನ್ನೇ ಅವನ ಮುಂದೆ ತೆರೆದಿಟ್ಟು ವಿಶ್ವರೂಪದರ್ಶನ ಮಾಡಿಸಿ ಅರ್ಜುನನನ್ನು ಕ್ಷತ್ರಿಯ ಧರ್ಮದ ಹಾದಿಯಲ್ಲಿ ಪ್ರವೃತ್ತನನ್ನಾಗಿ ಮಾಡುವುದರೊಳಗಾಗಿ ಶ್ರೀಕೃಷ್ಣನಿಗೆ ಸಾಕು ಸಾಕಾಯಿತು.
ಜ್ಞಾನ, ಭಕ್ತಿ ಹಾಗೂ ಕರ್ಮಗಳ ಮರ್ಮವನ್ನು ಬಿಚ್ಚಿಟ್ಟಿದ್ದ ಕೃಷ್ಣನ ಅನುಗ್ರಹದಿಂದಾಗಿ ಪಾರ್ಥನ ಮನದ ಮೇಲೆ ಕವಿದಿದ್ದ ಮೋಹದ ಕಾರ್ಮೋಡ ಕಳೆಯಿತು. ಇದು ಎಲ್ಲರಿಗೂ ಪರಿಚಿತ ಕಥೆ. ಸರಿಯಾದ ಮಾರ್ಗದರ್ಶನವಿಲ್ಲದೇ ಇದನ್ನೋದಿದಾಗ,
‘ದಯಾನಿಧಿಯಾದ ಭಗವಂತ, ಪಾಪಿಗಳಾದ ಕೌರವರ ವಿಷಯದಲ್ಲಿಯೂ ದಯೆಯನ್ನೇ ತೋರಿಸಿಬಿಟ್ಟಿದ್ದರೆ ಎಷ್ಟೋ ಮಂದಿ ಅವನನ್ನು ಕೊಂಡಾಡುತ್ತಿರಲಿಲ್ಲವೇ? ಸರ್ವಶಕ್ತನಾದ ಸ್ವಾಮಿಯು ತನ್ನ ಸಂಕಲ್ಪದಿಂದಲೇ ಕೌರವರ ಮನಃಪರಿವರ್ತನೆ ಮಾಡಬಹುದಾಗಿತ್ತಲ್ಲವೇ?’ ಇತ್ಯಾದಿ ಪ್ರಶ್ನೆಗಳು ಬಾಧಿಸದೇ ಇರವು.
ಅರ್ಜುನನು ಕೌರವರ ವಿಷಯದಲ್ಲಿ ತೋರಿದ ಅನುಕಂಪವನ್ನು ಶ್ರೀರಂಗಮಹಾಗುರುಗಳು ‘ಅಸ್ಥಾನ ಸ್ನೇಹ ಕಾರುಣ್ಯ’ ಎನ್ನುತ್ತಿದ್ದರು. ದಯೆ ತೋರುವುದು ಒಳ್ಳೆಯದೇ. ಆದರೆ ಅದನ್ನು ಸಕಾಲದಲ್ಲಿ, ಸತ್ಪಾತ್ರರಲ್ಲಿ ತೋರಿಸಬೇಕಷ್ಟೇ. ಚೇಳಿನ ವಿಷಯದಲ್ಲಿ ಎಷ್ಟೇ ದಯೆ ತೋರಿದರೂ ಅವಕಾಶ ಸಿಕ್ಕ ಕೂಡಲೇ ಅದು ನಮ್ಮನ್ನು ಕುಟುಕದೇ ಬಿಡದು. ರಾಮನು ಕ್ರೋಧ ವನ್ನು ಬರಮಾಡಿಕೊಂಡು (ಸಾಮಾನ್ಯರಂತೆ ಕೋಪಕ್ಕೆ ತುತ್ತಾಗದೆ) ರಾಕ್ಷಸರನ್ನು ಕೊಂದ ಎಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ.
ಸೃಷ್ಟಿಯ ಸಹಜ ನಡೆಯನ್ನು ಮೀರಿ ದೇವರೂ ಪ್ರವರ್ತಿಸುವುದಿಲ್ಲ. ಆದ್ದರಿಂದಲೇ ರಾಮನು ಅಧರ್ಮಿಗಳನ್ನು ಕೊಂದುದು.
ಧರ್ಮರಕ್ಷಣೆಗೆ ಬೇಕಾದಾಗಷ್ಟೆ ರಾಮನ ಕ್ರೋಧ; ಉಳಿದ ಸಮಯದಲ್ಲಿ ಆತ ಪರಮದಯಾಳು. ನಮ್ಮ ದೇಶದ ಮೇಲೆ ಪರಕೀ ಯರ ಆಕ್ರಮಣದಿಂದಾಗಿ, ಎಷ್ಟೋ ಅನ್ಯಾಯಗಳಾದವು. ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದಿರುವುದರಿಂದಲೇ, ಭಗವಂತ ಹೇಗೋ ಕಾಪಾಡುತ್ತಾನೆಂದು ನಂಬಿಕೊಂಡು, ವಿದೇಶೀಯರ ಆಕ್ರಮಣವನ್ನು ಭಾರತೀಯರೆಲ್ಲ ಒಗ್ಗೂಡಿ ಎದುರಿಸ ಲಿಲ್ಲ.
ಕೆಲವು ರಾಜರು ವೈಯಕ್ತಿಕವಾಗಿ ಎದುರಿಸಿದರೂ, ಎಲ್ಲರೂ ಒಗ್ಗಟ್ಟಿನಿಂದ ಎದುರಿಸಲಿಲ್ಲ. ಇಷ್ಟಾಗಿ ನಮ್ಮ ರಾಜಸಂಸ್ಥಾನದ ವಿರುದ್ಧ ಹೋರಾಡುತ್ತಿದ್ದ ಸೈನ್ಯದಲ್ಲಿ ಬಹುಪಾಲು ಇದ್ದದ್ದು ನಮ್ಮ ದೇಶದವರೇ. ಪರಕೀಯರಲ್ಲಿ ಅವರು ಸೈನಿಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಸಂಬಳ ಕೊಡುವ ಧಣಿಗೆ ನಿಷ್ಠರಾಗಿರಬೇಕೆಂಬುದು ಧರ್ಮವೆಂದು ಅವರು ಭಾವಿಸಿದ್ದರು. ಆದ್ದರಿಂದ, ನಮ್ಮ ದೇಶದ ಜನರೇ ಪರಕೀಯ ಸೈನ್ಯದ ಭಾಗವಾಗಿ, ಹೋರಾಡಿದರು. ಸಂಬಳ ನೀಡುವ ಧಣಿಯನ್ನು ಗೌರವಿಸುವ ಆ ಧರ್ಮ ಕ್ಕಿಂತಲೂ ದೊಡ್ಡದಾದ, ಸಂಸ್ಕೃತಿ, ರಾಷ್ಟ್ರಗಳ ರಕ್ಷಣದಂತಹ ದೊಡ್ಡಧರ್ಮವನ್ನು ಉಳಿಸಲು ಸಣ್ಣ ಧರ್ಮಗಳನ್ನು ಕೈಬಿಡ ಬೇಕೆಂಬ ಪರಿಜ್ಞಾನ ಅವರಿಗಿಲ್ಲದೇ ಹೋಯಿತು.
ಮಹಾಭಾರತದ ಶ್ಲೋಕವೊಂದು ಹೀಗೆ ಹೇಳುತ್ತದೆ- ಯಾರನ್ನು ರಕ್ಷಿಸಬೇಕೋ, ಅವರ ಹಿಂದೆ ದೊಣ್ಣೆ ಹಿಡಿದು ರಕ್ಷಿಸುವ ಗೋಪಾಲಕರ ರೀತಿ ದೇವತೆಗಳು ಬರುವುದಿಲ್ಲ. ಯಾರನ್ನು ರಕ್ಷಿಸಬೇಕೋ ಅವರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಬುದ್ಧಿ ಯನ್ನು ಕೊಡುವರು. ದೇವರು ಕೊಟ್ಟ ಬುದ್ಧಿಯನ್ನು ಬಳಸಿ ನಮ್ಮ ಒಳ ಹೊರ ಶತ್ರುಗಳನ್ನು ಪರಿಹರಿಸೋಣ. ಧರ್ಮ ವನ್ನು ಎಲ್ಲಿ, ಹೇಗೆ ರಕ್ಷಿಸಬೇಕೆಂಬುದನ್ನು ಚಿಂತಿಸಿ ಕಾರ್ಯಪ್ರವೃತ್ತರಾಗೋಣ. ಹಾಗೆ ಮಾಡಿದರಷ್ಟೇ, ಧರ್ಮಕ್ಕಾಗಿ ಯುದ್ಧ ಮಾಡಿದ ಪಾಂಡವರನ್ನು ಕೃಷ್ಣನು ಕಾಪಾಡಿದಂತೆ, ನಮ್ಮನ್ನು ದೇವರು ರಕ್ಷಿಸಿಯಾನು.