ಭೂಗತ ಲೋಕದಲ್ಲಿ ಗುರುತಿಸಿಕೊಂಡಿದ್ದ ಜಯರಾಜ್ ಪುತ್ರ ಅಜಿತ್ ಜಯರಾಜ್ ಈಗ ಚಿತ್ರರಂಗದಲ್ಲಿ ಕಲಾವಿದನಾಗಿ ಬೆಳೆಯುತ್ತಿದ್ದಾರೆ.
‘ಹನಿಹನಿ ಇಬ್ಬನಿ’, ‘ತ್ರಾಟಕ’ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಅಜಿತ್, ಈಗ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರೈಮ್ಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಜಿತ್‌ಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪೋಸ್ಟರ್ ಇತ್ತೀಚೆಗಷ್ಟೇ ಅನಾವರಣಗೊಂಡಿದೆ.
ನಿವೃತ್ತ ಪೋಲೀಸ್ ಅಧಿಕಾರಿ ಬಿ.ಬಿ.ಅಶೋಕ್ ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಾವೇನೇ ಕೇಸ್ ಪತ್ತೆ ಮಾಡಿದರೂ ಅದನ್ನು ಸಿನಿಮಾಗಳಲ್ಲಿ ಇನ್ನು ರೋಚಕವಾಗಿ ತೋರಿಸುತ್ತಾರೆ.
ನಾನು, ಅಜಿತ್ ತಂದೆ ಜಯರಾಜ್ ಜತೆ ತುಂಬಾ ಕಾದಾಡಿದವನು. ನಾನು ಪೋಲೀಸ್ ಇಲಾಖೆಗೆ ಬರಲು ಒಂದು ರೀತಿ ಸಿನಮಾನೇ ಕಾರಣ, ಅಮಿತಾಭ್ ಅವರ ‘ಜಂಜೀರ್’ ಸಿನಿಮಾ ನೋಡಿ ಪ್ರೇರಿತ ನಾಗಿದ್ದೆ. ಯಾರು ಪೋಲೀಸರನ್ನು ದ್ವೇಷಿಸು ತ್ತಿದ್ದರೊ ಅವರ ಮಗನೇ ಈಗ ಪೋಲೀಸ್ ಪಾತ್ರ ಮಾಡುತ್ತಿರುವುದು ಸಂತಸ ತಂದಿದೆ ಎಂದರು ಅಶೋಕ್ ಕುಮಾರ್.
ಚಿತ್ರದ ಕ್ಲೈಮಾಕ್ಸ್ ಯಾರೂ ಊಹಿಸಲು ಸಾಧ್ಯವಿಲ್ಲ, ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಕುತೂಹಲ ಭರಿತ ಕಥೆ ಚಿತ್ರದಲ್ಲಿದೆ ಎಂದು ಚಿತ್ರದ ಬಗ್ಗೆ ಮತ್ತಷ್ಟು ಕಾತರತೆ ಹೆಚ್ಚಿಸಿದರು ಅಜಿತ್ ಜಯರಾಜ್.
ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಕಥಾನಕ ಒಳಗೊಂಡಿರುವ ಈ ಚಿತ್ರದಲ್ಲಿ ಸರಣಿ ಕೊಲೆಗಳ ಹಿನ್ನೆಲೆಯನ್ನು ಬಯಲಿಗೆಳೆಯುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ಆ ಎಲ್ಲಾ ಕೊಲೆಗಳ ಹಿಂದೆ ‘ರೈಮ್ಸ್’ ಇರುತ್ತದೆ.
ಅದರ ಹಿನ್ನೆಲೆ ಏನೆಂಬುದು ಕ್ಲೈಮಾಕ್ಸ್‌ನಲ್ಲಿ ತಿಳಿಯುತ್ತದೆ. ಸುಷ್ಮಾ ನಾಯರ್ ನಾಯಕಿಯಾಗಿ ಕಾಣಸಿಕೊಂಡಿದ್ದಾರೆ. ಶುಭಾ ಪೂಂಜ ಪತ್ರಕರ್ತೆಯಾಗಿ ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಶಕ್ತಿ ಅವರ ಸಂಗೀತ, ಅರ್ಜುನ ಅಕ್ಕೋಟ ಅವರ ಛಾಯಾಗ್ರಹಣವಿದೆ.