Sunday, 15th December 2024

ರೊಮ್ಯಾಂಟಿಕ್ ಕಾಮಿಡಿಯ ನಿನ್ನ ಸನಿಹಕೆ

ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಹಾಗೂ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಚಿತ್ರ ಅಕ್ಟೋಬರ್ 8 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಇಂಪಾದ ಹಾಡುಗಳ ಮೂಲಕವೇ ಜನಪ್ರಿಯತೆ ಪಡೆದಿರುವ ನಿನ್ನ ಸನಿಹಕೆ, ಬಿಡುಗಡೆಗೂ ಮುನ್ನವೇ ಸದ್ಧು ಮಾಡುತ್ತಿದೆ.

ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ರೊಮ್ಯಾಂಟಿಕ್ ಕಾಮಿಡಿ ಕಥೆಯ ಈ ಚಿತ್ರದಲ್ಲಿ, ನಮ್ಮ ಸುತ್ತಮುತ್ತ ನಡೆದ ಕೆಲವೊಂದು ಘಟನೆಗಳನ್ನೇ ಆಧರಿಸಿ ಕಥೆ ಹೆಣೆದಿದ್ದು, ಅದಕ್ಕೆ ಮನ ರಂಜನೆ ಬೆರೆಸಿ ತೆರೆಗೆ ತರಲಾಗುತ್ತಿದೆ. ಪ್ರೇಮಕಥೆ ಅಂದಾಕ್ಷಣ ಇಲ್ಲಿ ಮಾಮೂಲಿ ಕಥೆ ಇಲ್ಲ. ಬದಲಾಗಿ ಇಂದಿನ ಆಧುನಿಕ ಯುಗದಲ್ಲಿ ಒತ್ತಡ, ಜಂಜಾಟ, ನಡುವೆಯೂ ಸಾಮಾನ್ಯವಾಗಿರುವ ವಿರಸ, ಕೋಪ ತಾಪ ಹೀಗೆ ಹಲವು ವಿಚಾರಗಳು ಚಿತ್ರದಲ್ಲಿವೆ.

ಆದಿ-ಅಮೃತಾಳ ಪ್ರೇಮಕಥೆ
ಲಿವಿಂಗ್ ರಿಲೇಶನ್‌ಶಿಪ್ ಕಥೆ ಇಟ್ಟುಕೊಂಡು ಈ ಚಿತ್ರ ತಯಾರಾಗಿದೆ. ಚಿತ್ರದ ನಾಯಕ ಆದಿ ಹಾಗೂ ನಾಯಕಿ ಅಮೃತಾ ಉದ್ಯೋಗ ಅರಸಿ ದೂರದೂರಿನಿಂದ ಬೆಂಗಳೂರಿಗೆ ಬರುತ್ತಾರೆ. ಕೆಲವು ದಿನಗಳಲ್ಲೇ ಆದಿ, ಅಮೃತಾ ಪರಿಚಿತರಾಗುತ್ತಾರೆ. ಬಳಿಕ ಲಿವಿಂಗ್ ರಿಲೇಶನ್ ಶಿಪ್ ಆರಂಭವಾಗುತ್ತದೆ. ಹಾಸ್ಯದ ಜತೆಗೆ
ನವಿರಾದ ಪ್ರೇಮಕಥೆ ತೆರೆಯಲ್ಲಿ ಸಾಗುತ್ತದೆ. ಅದರ ಜತೆಗೆ ಸೆಂಟಿಮೆಂಟ್, ಆಕ್ಷನ್ ಕೂಡ ಚಿತ್ರದ ಕಥೆಯಲ್ಲಿ ಮಿಳಿತವಾಗಿದೆ. ಸೂರಜ್ ಕಂಪ್ಲೀಟ್ ಕಮರ್ಷಿಯಲ್ ಚಿತ್ರದಲ್ಲಿ ಮಿಂಚಿದ್ದಾರೆ. ಧನ್ಯಾ ರಾಮ್‌ಕುಮಾರ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.

ನನಸಾದ ಕನಸು 
ಹಿಂದೆ ಸಿಲಿಕಾನ್ ಸಿಟಿ ಚಿತ್ರದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಮಿಂಚಿದ್ದ ಸೂರಜ್, ಈ ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮೊದಲಿನಿಂದಲೂ ನನಗೆ ನಟನೆಗಿಂತ ನಿರ್ದೇಶನದಲ್ಲಿಯೇ ಹೆಚು ಆಸಕ್ತಿ. ಅದಕ್ಕೆ ಪೂರಕ ಎಂಬಂತೆ ಈ ಚಿತ್ರವನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕಿತು. ಈ ಚಿತ್ರವನ್ನು ತುಂಬಾ ಇಷ್ಟಪಟ್ಟು ನಿರ್ದೇಶನ ಮಾಡಿದ್ದೇನೆ. ನಟನೆಯ ಜತೆಗೆ ನಿರ್ದೇಶನ ನನಗೆ ಹೊರೆ
ಅನ್ನಿಸಲಿಲ್ಲ. ಒಂದೊಳ್ಳೆಯ ಅನುಭವವಾಯ್ತು.

ಲವ್‌ಸ್ಟೋರಿ ಚಿತ್ರಗಳಲ್ಲಿ ಅಭಿನಯಿಸಬೇಕೆಂದು ನನ್ನ ಆಸೆಯಾಗಿತ್ತು. ಆದರೆ ಯಾವಾಗಲೂ ಥ್ರಿಲ್ಲರ್, ಎಕ್ಸಪರಿ ಮೆಂಟಲ್ ಚಿತ್ರಗಳೇ ಬರುತ್ತಿದ್ದವು. ನಾನೇ ಯಾಕೆ ಕಥೆ ಬರೆಯಬಾರದು ಎಂದುಕೊಂಡೆ ಅದರಂತೆ ಒಂದು ಕಾಮಿಡಿ ಲವ್ ಸ್ಟೋರಿಯ ಕಥೆ ರಚಿಸಿದೆ. ಅದನ್ನು ನಾನೇ ನಿರ್ದೇಶನ ಮಾಡಬೇಕಾಗಿಯೂ ಬಂತು, ಇದು ಮತ್ತಷ್ಟು ಸಂತಸ ತಂದಿದೆ ಎನ್ನುತ್ತಾರೆ ಸೂರಜ್. ನಿರ್ದೇಶನ ನನ್ನ ಬಹುದಿನಗಳ ಕನಸಾಗಿತ್ತು. ಅದು ಈಗ ನನಸಾಗಿದೆ. ಚಿತ್ರ ತೆರೆಗೆ ಸಿದ್ಧವಾಗಿ ಒಂದು ವರ್ಷವೇ ಕಳೆದಿದೆ. ಚಿತ್ರ ಬಿಡುಗಡೆಗೆ ಕರೋನಾ ಅಡ್ಡಿಯಾಗಿತ್ತು. ಓಟಿಟಿಯಲ್ಲಿ ಬೇಡಿಕೆ ಬಂದರೂ ಚಿತ್ರಮಂದಿರದಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ನಿರ್ಮಾಪಕರ ಆಸೆಯಾಗಿತ್ತು. ಅದರಂತೆ ನಿನ್ನ ಸನಿಹಕೆ ಮುಂದಿನ ವಾರ ತೆರೆಗೆ ಬರಲಿದೆ.

ತುಂಟಾಟದ ಹುಡುಗಿ ಧನ್ಯಾ
ದೊಡ್ಮನೆ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಿನ್ನ ಸನಿಹಕೆ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಧನ್ಯಾ ತುಂಟಾಟದ ಹುಡುಗಿ ಯಾಗಿ ಕಾಣಿಸಿಕೊಂಡಿದ್ದಾರೆ. ಅಮೃತಾಳಾಗಿ ತೆರೆಯಲ್ಲಿ ಮಿಂಚಲಿದ್ದಾರೆ. ನನ್ನ ಚೊಚ್ಚಲ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ಚಿತ್ರವನ್ನು ದೊಡ್ಡ ಪರದೆಯಲ್ಲಿ ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದೇನೆ. ನಮ್ಮ ಸುತ್ತಮುತ್ತಲೇ ನಡೆದಿರುವ, ಕೇಳಿರುವ ಕೆಲವೊಂದು ಘಟನೆಗಳನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ. ಮನರಂಜನೆಯೇ ಚಿತ್ರದಲ್ಲಿ ಮುಖ್ಯವಾಗಿದೆ. ಹಾಗಾಗಿ ಪ್ರೇಕ್ಷಕರು ಖಂಡಿತಾ ನಮ್ಮ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಿರೀಕ್ಷೆಯಿದೆ ಎನ್ನುತ್ತಾರೆ ಧನ್ಯಾ.