Wednesday, 11th December 2024

ರೂಬಿಕ್ಸ್‌ ಕ್ಯೂಬ್‌ನಲ್ಲಿ ಭಾವಚಿತ್ರ

ನಳಿನಿ ಎಸ್.ಸುವರ್ಣ

ಮನಸ್ಸಿನ ಏಕಾಗ್ರತೆ ಮತ್ತು ಕೈಬೆರಳುಗಳ ಚಾಕಚಕ್ಯತೆಯ ಸಮತೋಲನದಿಂದ ರೂಬಿಕ್ಸ್‌ ಕ್ಯೂಬ್ ಆಟವನ್ನು ಆಡುವ
ಯುವಕರನ್ನು ನೀವು ನೋಡಿರಬಹುದು. ಬಣ್ಣ ಬಣ್ಣದ ರೂಬಿಕ್ಸ್‌ ಕ್ಯೂಬ್ ಬಳಸಿ, ವ್ಯಕ್ತಿಗಳ ಮುಖಗಳನ್ನು ರೂಪಿಸುವುದು ಸಹ ವಿದೇಶಗಳಲ್ಲಿ ಜನಪ್ರಿಯ.

ಇಂತಹ ಕಲೆಯನ್ನು ನಮ್ಮ ಕರ್ನಾಟಕದಲ್ಲಿ ಒಡಮೂಡಿಸುವ ಬಹುಮುಖ ಪ್ರತಿಭೆಯ ಕಲಾವಿದರೊಬ್ಬರಿದ್ದಾರೆ. ಯಾರು ಗೊತ್ತೆ? ಅವರೇ ಮಹೇಶ್ ಮಲ್ಪೆ. ಇವರು 35 ರಿಂದ 45 ಸೆಕೆಂಡ್ ಗಳಲ್ಲಿ ರೂಬಿಕ್ಸ್‌ ಕ್ಯೂಬ್ ವರ್ಣಸಂಯೋಜನೆ ಮಾಡುತ್ತಾರೆ. ರೂಬಿಕ್ಸ್‌ ಕ್ಯೂಬ್ ಬಳಸಿ ದೊಡ್ಡ ಗಾತ್ರದ ಕಲಾಕೃತಿಗಳನ್ನು ರಚಿಸುವಲ್ಲಿ ಇವರ ಕೌಶಲ ಮೆರೆದಿದೆ.

ಕರಾವಳಿಯ ಜನಪದ ವೀರರಾದಕೋಟಿ ಚೆನ್ನಯ ಅವರ ಪ್ರತಿರೂಪವನ್ನು ರೂಬಿಕ್ಸ್ ಕ್ಯೂಬ್‌ನಿಂದ ರಚಿಸಿದ್ದಾರೆ. ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರತಿರೂಪವನ್ನು 1,500 ರೂಬಿಕ್ಸ್ ಕ್ಯೂಬ್ ನಿಂದ ರಚಿಸಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ.

ಇವರ ಈ ಪ್ರಯತ್ನ ಬಹಳ ಜನರ ಗಮನ ಸೆಳೆದಿದೆ. ಈ ಕಲೆಯನ್ನು ಕರಗತಗೊಳಿಸಿಕೊಳ್ಳುವುದಕ್ಕೆ ಹಲವು ಮುಖದ ಪ್ರತಿಭೆ, ಕೌಶಲ ಬೇಕು. ಸಂಪೂರ್ಣ ವಿವಿಧ ಬಣ್ಣಗಳಲ್ಲಿ ಮಿಶ್ರಣಗೊಂಡ 1500 ರೂಬಿಕ್ಸ್‌ ಕ್ಯೂಬ್ ಗಳನ್ನು ಒಂದು ಬುಟ್ಟಿಯಲ್ಲಿ ತಂದಿಟ್ಟುಕೊಳ್ಳುವ ಮಹೇಶ್, ಅವುಗಳನ್ನು ಒಂದೊಂದಾಗಿ ಏಕಮುಖ ಬಣ್ಣಕ್ಕೆ ಪರಿವರ್ತಿಸಿಕೊಳ್ಳುತ್ತಾರೆ. ನಂತರ, ಯಾವ ಬಣ್ಣ ಬೇಕೋ, ಆ ಬಣ್ಣದ ರೂಬಿಕ್ಸ್‌ ಕ್ಯೂಬ್‌ನ್ನು ಸೂಕ್ತ ಸ್ಥಳದಲ್ಲಿಟ್ಟು, ಎಲ್ಲಾ ಕ್ಯೂಬ್‌ಗಳನ್ನು ಜೋಡಿಸಿದಾಗ ಮೋದಿಯವರ ಮುಖ ಒಡಮೂಡುತ್ತದೆ!

ರೂಬಿಕ್ಸ್‌ ಕ್ಯೂಬ್‌ಗಳನ್ನು ಬಹು ಬೇಗನೆ ಜೋಡಿಸುವುದರ ಜತೆಯಲ್ಲೇ, ಕಲಾವಿದನಂತೆ ಚಿತ್ರವನ್ನೂ ರಚಿಸಬೇಕು! ಮೋದಿಯ ಮುಖದ ಜತೆ, ಶ್ರೀಕೃಷ್ಣನ ಚಿತ್ರ, ಸಾಲುಮರದ ತಿಮ್ಮಕ್ಕರ ಚಿತ್ರಗಳನ್ನು ರೂಬಿಕ್ಸ್‌ ಕ್ಯೂಬ್‌ನಲ್ಲಿ ಇವರು ರಚಿಸಬಲ್ಲರು. ಹಲವು ಸ್ಪರ್ಧೆಗಳಲ್ಲಿ ವಿಜೇತ ನೆಸ್ಟ್ಲೆ ಕಂಪೆನಿ ಆಯೋಜಿಸಿದ್ದ ರಾಷ್ಟ್ರಮಟ್ಟದ 2020 ರ ಮಂಚ್ ಸ್ಟಾರ್ ಪ್ರತಿಭಾ ಪ್ರದರ್ಶನ ದಲ್ಲಿ 1,300 ರೂಬಿಕ್ಸ್‌ ಕ್ಯೂಬ್‌ನಲ್ಲಿ ಕಲಾಕೃತಿಯೊಂದನ್ನು ರಚಿಸಿದರು.

ಈ ವಿಶಿಷ್ಟ ಸಾಧನೆಗೆ ಪ್ರಥಮ ಬಹುಮಾನದೊಂದಿಗೆ 5ಲಕ್ಷ ರುಪಾಯಿಗಳ ಬಹುಮಾನವನ್ನು ಪಡೆದ ಹೆಗ್ಗಳಿಕೆ ಇವರದ್ದಾಗಿದೆ. ಮಾರ್ಚ್ 2021ರಲ್ಲಿ ನಡೆದ ರೆಡ್ ಎಫ್ ಎಮ್ ಹಾಗು ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನಡೆಸಿದ ಟ್ಯಾಲೆಂಟ್ ಅನ್ ಲಾಕ್ಡ್‌ ಆನ್ ಲೈನ್‌ಸ್ಪರ್ಧೆಯಲ್ಲಿ ಭಾರತದಾದ್ಯಂತ 56,000 ಸ್ಪರ್ಧಿಗಳು ಭಾಗವಹಿಸಿದ್ದು ಇದರಲ್ಲಿ ಮಹೇಶ್ 1,300 ರೂಬಿಕ್ಸ್ ಕ್ಯೂಬ್
ಬಳಸಿ ಇರ್ಫಾನ್ ಖಾನ್ ರವರ ಭಾವಚಿತ್ರ ರಚಿಸಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.

ತನ್ನ ಈ ವಿಶೇಷ ಪ್ರತಿಭೆಯನ್ನು ಬಳಸಿ, ಅನೇಕ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ರೂಬಿಕ್ಸ್‌ ಕ್ಯೂಬ್ ತರಬೇತಿಯನ್ನು, ಕಾರ್ಯಗಾರ ವನ್ನು ಮಾಡುತ್ತಿದ್ದಾರೆ. ಇಲ್ಲಿ ರೂಬಿಕ್ಸ್‌ ಕ್ಯೂಬ್ ವರ್ಣ ಸಂಯೋಜನೆ ಮಾಡುವ ಜತೆಯಲ್ಲೇ, ವಿದ್ಯಾರ್ಥಿಗಳಿಗೆ ಜೀವನ ಪಾಠ ವನ್ನು ಹೇಳುವುದು ಇವರ ವಿಶೇಷತೆ. ಉಡುಪಿ ಜಿಲ್ಲೆಯ ಮಲ್ಪೆಯವರಾದ ಇವರು ಶೇಖರ್ ಪೂಜಾರಿ ಹಾಗು ಮೀನಾಕ್ಷಿ ದಂಪತಿ ಗಳ ಮಗ. ಪ್ರಸ್ತುತ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಡಿಪಾರ್ಟ್‌‌ಮೆಂಟ್‌ನಲ್ಲಿ ಮಾರ್ಕೆಟಿಂಗ್ ಹಾಗು ಫೀಲ್ಡ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬಹುಮುಖ ಪ್ರತಿಭೆಯ ಮಹೇಶ ಮಲ್ಪೆಯವರು ನಟನೆ, ಫೋಟೋಗ್ರಫಿ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ರೂಬಿಕ್ಸ್‌ ಕ್ಯೂಬ್ ಮತ್ತು ಮೊಸೈಕ್ ಆರ್ಟ್ ಎರಡು ಕಲೆಯನ್ನು ಸೇರಿಸಿ ಗಿನ್ನಿಸ್ ರೆಕಾರ್ಡ್ ಮಾಡುವ ಕನಸನ್ನು ಹೊಂದಿದ್ದಾರೆ