Thursday, 12th December 2024

ಒಳ್ಳೆಯ ಮಗಳಾಗಲು ಎಷ್ಟೆಲ್ಲಾ ತ್ಯಾಗ ಮಾಡಬೇಕು ?

ನಾಗೇಶ್ ಜೆ. ನಾಯಕ ಉಡಿಕೇರಿ

ನಿಮ್ಮನ್ನು ಜೀವಕ್ಕಿಂತ ಇಷ್ಟಪಡುವ ನಾನು ನಿಮ್ಮ ಸಾವನ್ನು ಬಯಸಲೇ ಪಪ್ಪಾ? ಇಲ್ಲ, ಖಂಡಿತ ಇಲ್ಲ. ನನ್ನೊಳಗಿನ ಕನಸುಗಳ ಗೋಣು ಮುರಿದಿದ್ದೇನೆ. ನನ್ನ ಪ್ರೀತಿಯ ಹುಡುಗನ ನೆನಪುಗಳಿಗೆ ಬೆಂಕಿಯಿಟ್ಟು ಬೂದಿಯಾಗಿಸಿದ್ದೇನೆ. ನನಗೆ ಜೀವ ನೀಡಿದ ನಿಮಗೆ ನನ್ನ ಬದುಕನ್ನು ಧಾರೆಯರೆಯಲು ಸಿದ್ಧಳಾಗಿದ್ದೇನೆ.

ಪ್ರೀತಿಯ ಪಪ್ಪಾ,
ಹೇಗಿದ್ದೀರಿ? ಮಗಳ ಮದುವೆ ಮಾಡಿ ಕಳಚಿಕೊಂಡ ನಿರಾಳ ಭಾವ ನಿಮ್ಮನ್ನು ಹಗುರಗೊಳಿಸಿರಬಹುದಲ್ಲವೇ? ಮದುವೆಯ ದಿನ ನೀವು ಮತ್ತು ಮಮ್ಮಿ ಎಷ್ಟೊಂದು ಸಡಗರದಿಂದ ಓಡಾಡುತ್ತಿದ್ದಿರಿ. ಬಂದ ಅತಿಥಿಗಳನ್ನು ವೆಲ್‌ಕಮ್ ಮಾಡುತ್ತಿದ್ದ ರೀತಿ,
ಅವರೆದುರು, ಮಗಳು ಒಳ್ಳೆಯ ಹುಡುಗನನ್ನು ಕೈ ಹಿಡಿದಳು ನಮ್ಮ ಮೇಲಿನ ಬಹು ದೊಡ್ಡ ಭಾರ ಕಳೆದು ಹೋಯಿತೆಂದು ಹೇಳಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಿರಿ. ವೆಲ್, ನಿಮ್ಮ ಆ ಖುಷಿ ಕೊನೆಯವರೆಗೂ ಖಾಯಮ್ಮಾಗಿರಲಿ.

ಆ ಇಡೀ ದಿನ ನನ್ನ ಕಣ್ಣುಗಳು ನಿಮ್ಮ ಖುಷಿಯ ಬಗ್ಗೆೆಯೇ ತಾಳೆ ಹಾಕುತ್ತಿದ್ದವು. ಮದುವೆಯ ಎಲ್ಲ ರಿವಾಜುಗಳು ಮುಗಿದು, ಗಂಡನ ಮನೆಗೆ ಹೊರಡುವ ಘಳಿಗೆಯವರೆಗೂ ನೀವು ನನ್ನ ಮುಖಕ್ಕೆ ಮುಖ ಕೊಟ್ಟು ಮಾತಾಡಲಿಲ್ಲ. ನಾನೆದುರು ಬಂದಾಗ ಲೆಲ್ಲ ನಿಮ್ಮ ಕಣ್ಣುಗಳು ಸುಳ್ಳೇ ನೆಪ ಹೂಡಿ ಮರೆಯಾಗು ತ್ತಿದ್ದವು. ನನ್ನೊಳಗಿನ ನೋವುಗಳಿಗೆ ಇನ್ನ್ಯಾರೂ ಆಸರೆಯಾಗಲಾರರು ಅನ್ನಿಸಿದಾಗ ಸುಖಾಸುಮ್ಮನೆ ಈ ಬಿಳಿ ಹಾಳೆಯ ಮೇಲೆ ಬೇಗುದಿಗಳ ಬಯಲು ಮಾಡಲು ಕುಳಿತಿದ್ದೇನೆ. ಎಂದಾದರೂ ನಿಮಗೆ ಇದು ಸಿಕ್ಕು ನಿಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುತ್ತೀರಿ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ, ತಂದೆಗೆ ಒಬ್ಬ ಒಳ್ಳೆಯ ಮಗಳಾಗಲು ಎಷ್ಟೆಲ್ಲ ತ್ಯಾಗ ಮಾಡಬೇಕಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಸಲು.

ಎಣೆ ಇಲ್ಲದ ಪ್ರೀತಿ
ಅಪ್ಪಾ, ಬಾಲ್ಯದಿಂದಲೂ ನಿಮ್ಮ ಜೊತೆ ಇರುವ ಅಟ್ಯಾಚ್‌ಮೆಂಟು ಬಹುಶಃ ಮಮ್ಮಿಯ ಜೊತೆಗೂ ಇರಲಿಲ್ಲ. ನೀವಂದ್ರೆ ಜೀವ ಕ್ಕಿಂತ ಇಷ್ಟಪಡುತ್ತಿದ್ದೆ. ನಿಮ್ಮ ಜೊತೆ ಊಟ, ಆಟ, ತುಂಟಾಟ ಎಲ್ಲವೂ ಇಷ್ಟವಾಗಿತ್ತು. ಪ್ರತಿ ಬೆಳಗೂ ನಿಮ್ಮ ಮೊಗದ ದರ್ಶನ ದಿಂದಲೇ ಶುರುವಾದರೆ, ಪ್ರತಿರಾತ್ರಿಯೂ ನಿಮ್ಮ ತೊಡೆಯ ಮೇಲೆ ಮಲಗಿ, ಚುಕ್ಕು ತಟ್ಟುವಿಕೆಯ ಸುಖದ ಮೂಲಕ ಕೊನೆ ಯಾಗುತ್ತಿತ್ತು. ನನ್ನೆಲ್ಲ ಬೇಡಿಕೆಗಳಿಗೆ ಅಮ್ಮ ಅಡ್ಡಗಾಲು ಹಾಕುತ್ತಿದ್ದರೆ ನೀವು ಯೋಚನೆ ಮಾಡದೆ ಪೂರೈಸುತ್ತಿದ್ದೀರಿ. ವೀಕೆಂಡ್ ‌ನಲ್ಲಿ ಪಿಕ್‌ನಿಕ್, ಸಿನಿಮಾ, ಸರ್ಕಸ್ ಅಂತ ಸುತ್ತಾಡಿಸುತ್ತಿದ್ದೀರಿ. ‘ ತೀರಿ ಹೋದ ನನ್ನ ಅಮ್ಮ ಇದ್ದ ಹಾಗೆ ನೀನು ಕಣೇ, ನಿನ್ನ ಕಣ್ಣಲ್ಲಿ ಒಂಚೂರು ನೀರು ಬರಬಾರದು’ ಅಂತ ನಾನು ಹಠ ಮಾಡಿ ಅಳುತ್ತಿದ್ದಾಗಲೆಲ್ಲ ರಮಿಸುತ್ತಿದ್ದೀರಿ.

ನನ್ನ ಫ್ರೆಂಡ್ಸ್ ಎಲ್ಲ ನಿಮ್ಮನ್ನು ಕಂಡು ಜಲಸ್ ಪಡುತ್ತಿದ್ದರು. ಆಗ ನನಗೆ ಎಷ್ಟು ಹೆಮ್ಮೆ ಆಗುತ್ತಿತ್ತು ಗೊತ್ತಾ? ಹೈಸ್ಕೂಲ್‌ಗೆ ಹೋಗುವಾಗ ನೀವು ಕೊಡಿಸಿದ ಸೈಕಲ್, ಪ್ರತಿ ಬರ್ತ್‌ಡೇಗೆ ನೀವು ಕೊಡಿಸುತ್ತಿದ್ದ ದುಬಾರಿ ಗಿಫ್ಟ್, ಕಾಡಿ ಕೊಡಿಸಿಕೊಂಡ ಲ್ಯಾಪ್‌ ಟಾಪ್ ಎಲ್ಲವೂ ನಿಮ್ಮ ಪ್ರೀತಿಯ ಕಾಣಿಕೆಗಳೇ. ಹಾಗಿದ್ದವರೂ ಹೇಗಾದಿರಿ ಪಪ್ಪಾ?

ಹೀಗೇಕಾದೆ ಅಪ್ಪಾ

ಅದೇ ಮೊದ ಮೊದಲು ಕಾಲೇಜು ಸೇರಿದ ಅನುಭವ. ಒಳಗೊಳಗೆ ಹೆಪ್ಪುಗಟ್ಟಿದ ಭಯ. ಫ್ರೆಂಡ್ಸ್  ಎಂತಹವರು ಸಿಗ್ತಾರೋ ಎನ್ನುವ ಆತಂಕ. ಅವನ್ನೆಲ್ಲ ನಿವಾರಿಸಿ, ಬೈಕ್ ಮೇಲೆ ಕಾಲೇಜಿಗೆ ಕರೆತಂದು ಬಿಟ್ಟು, ಧೈರ್ಯ ಹೇಳಿದ ರೀತಿ ಕಣ್ಣಿಗೆ ಕಟ್ಟಿದಂತಿದೆ ಪಪ್ಪಾ. ನಿಮ್ಮ ಪ್ರಕಾರ ನಾನು ಮಾಡಿದ ಮೊದಲನೇ ಹಾಗೂ ದೊಡ್ಡ ತಪ್ಪು ಎಂದರೆ ಒಬ್ಬ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದು ಮತ್ತು ಅದನ್ನು ಮುಚ್ಚಿಟ್ಟುಕೊಳ್ಳದೇ ನಿಮ್ಮೆದುರು ಹೇಳಿಕೊಂಡಿದ್ದು. ಆಮೇಲೆ ಯಾವತ್ತಿಗೂ ನನ್ನ ಮೊದಲಿನ ಅಪ್ಪನನ್ನು ನಾನು ಕಾಣಲೇ ಇಲ್ಲ ಗೊತ್ತಾ? ಅಲ್ಲಿಯವರೆಗೆ ಮಗಳ ಎಲ್ಲ ಇಷ್ಟಗಳನ್ನು ಪೂರೈಸುತ್ತಿದ್ದ ನೀವು ಬದುಕಿನ ಬಹು ದೊಡ್ಡ ಇಷ್ಟವನ್ನು ಕಡೆಗಣಿಸಿಬಿಟ್ಟಿರಿ.

ಕಾಲೇಜು ಬಿಡಿಸಿದಿರಿ, ಮೊಬೈಲ್ ಕಸಿದುಕೊಂಡಿರಿ, ನನ್ನ ಫ್ರೆಂಡ್ಸ್‌ ಯಾರೂ ಮನೆಗೆ ಬಾರದಂತೆ ತಡೆದಿರಿ, ಕನಿಷ್ಠ ಪಕ್ಷ ನನ್ನ ಕಣ್ಣೀರಿನ ಹನಿಗಳನ್ನು ತೊಡೆಯುವ ಪ್ರಯತ್ನ ಕೂಡ ಮಾಡಲಿಲ್ಲ. ಹೀಗೇಕಾದಿರಿ ಪಪ್ಪಾ? ನಾನು ಮನೆ ಬಿಟ್ಟು ಆ ಹುಡುಗನ ಜೊತೆ ಓಡಿ ಹೋಗುತ್ತೇನೆಂಬ ಆತಂಕ, ಭಯ ನಿಮ್ಮನ್ನು ಕಾಡಿತ್ತಲ್ಲವೇ? ಒಂದು ವೇಳೆ ಮಗಳು ಮನೆ ಬಿಟ್ಟು ಓಡಿ ಹೋದರೆ
ಮನೆಯ ಮರ್ಯಾದೆ, ಆಫೀಸಿನಲ್ಲಿ ಕಳೆದು ಹೋಗುವ ಘನತೆ, ಸಮಾಜದೆದುರು ತಲೆ ಎತ್ತಿಕೊಂಡು ಓಡಾಡದ ಪರಿಸ್ಥಿತಿ ನಿರ್ಮಾಣವಾಗುತ್ತದೆಯೆಂದು ನೀವು ಕಲ್ಪನೆ ಮಾಡಿಕೊಂಡಿರಬೇಕು.

ಅಲ್ಲ ಪಪ್ಪಾ, ನಾನು ನನ್ನ ಹುಡುಗನ ಜೊತೆ ಓಡಿ ಹೋಗುವುದೇ ಆದರೆ ನನ್ನ ಪ್ರೀತಿಯ ವಿಷಯ ನಿಮ್ಮೆದುರು ಹೇಳುವ ಅಗತ್ಯವೇ ಇರಲಿಲ್ಲ ಅಲ್ಲವೇ? ನಿಮಗೆ ಕೊಂಚ ಸುಳಿವನ್ನು ಬಿಟ್ಟು ಕೊಡದೆ ಹೋಗಬಹುದಿತ್ತಲ್ಲವೇ? ನೀವು ನನ್ನ ಬೆಸ್ಟ್
ಫ್ರೆಂಡ್ ಪಪ್ಪಾ… ನಿಮ್ಮ ಮನಸ್ಸನ್ನು ನೋಯಿಸಬೇಕು, ನಿಮಗೆ ಹರ್ಟ್ ಆಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಅಂತ ಖಂಡಿತ ನಾನು ಯೋಚಿಸಿರಲಿಲ್ಲ. ನನ್ನ ಪ್ರತಿ ಇಷ್ಟಗಳನ್ನು ಈಡೇರಿಸುವ ನೀವು, ಲೈಫ್ ಪಾರ್ಟ್‌ನರ್ ಆಯ್ಕೆಯಲ್ಲಿ ನನ್ನ ಇಷ್ಟವನ್ನು ನಿಜವಾಗಲೂ ಪೂರೈಸುತ್ತೀರಿ ಅಂತಲೇ ನಿಮಗೆ ಹೇಳಿದ್ದೆ. ಪ್ರೀತ್ಸೋದು ತಪ್ಪಾ ಪಪ್ಪಾ?

ತರಾತುರಿಯ ಮದುವೆ
ತರಾತುರಿಯ ಒಳಗೆ ನನಗೆ ಗಂಡು ಹುಡುಕುವ ಶಾಸ್ತ್ರಗಳು ಶುರುವಾದವು. ನನ್ನ ಗೋಗರೆತ, ಕಣ್ಣಿರು, ಮನದಾಳದ ನೋವು ಯಾವುದೂ ನಿಮ್ಮ ಗಟ್ಟಿ ನಿರ್ಧಾರವನ್ನು ಅಲುಗಾಡಿಸಲಿಲ್ಲ. ‘ನೀನು ಒಂದು ವೇಳೆ ನಾವು ಹುಡುಕುವ ಹುಡುಗನನ್ನು ಮದುವೆ ಯಾಗದಿದ್ದರೆ ನಾನು ಸತ್ತು ಹೋಗುತ್ತೇನೆ’ ಎಂದು ನೀವು ಉಪಯೋಗಿಸಿದ ಕೊನೆಯ ಅಸ್ತ್ರ ನನ್ನ ಬಾಯಿಯನ್ನು ಕಟ್ಟಿ ಹಾಕಿತು,

ಕುತ್ತಿಗೆ ನೀಡುವ ಹಾಗೆ ಮಾಡಿತು. ನಿಮ್ಮನ್ನು ಜೀವಕ್ಕಿಂತ ಇಷ್ಟಪಡುವ ನಾನು ನಿಮ್ಮ ಸಾವನ್ನು ಬಯಸಲೇ ಪಪ್ಪಾ? ಅಂದೇ ನಿಮ್ಮ ಇಷ್ಟದ ವಿರುದ್ಧ ಹೋಗಬಾರದೆಂದು ನಿರ್ಧರಿಸಿದೆ. ನನ್ನೊಳಗಿನ ಕನಸುಗಳ ಗೋಣು ಮುರಿದೆ. ನನ್ನ ಹುಡುಗನ ನೆನಪುಗಳಿಗೆ ಬೆಂಕಿಯಿಟ್ಟು ಬೂದಿಯಾಗಿಸಿದೆ, ನನಗೆ ಜೀವ ನೀಡಿದ ನಿಮಗೆ ನನ್ನ ಬದುಕನ್ನು ಧಾರೆಯರೆಯಲು ಸಿದ್ಧಳಾದೆ.
ನೀವು ತೋರಿಸಿದ ಹುಡುಗನನ್ನು ತುಟಿಪಿಟಕ್ಕೆನ್ನದೆ ಒಪ್ಪಿಕೊಂಡು, ಅವನಿಂದ ಕೊರಳಿಗೆ ತಾಳಿ ಬಿಗಿಸಿಕೊಂಡೆ.

ನನ್ನ ಹುಡುಗನಿಗೆ ಮಾಡಿದ ಆಣೆ-ಪ್ರಮಾಣ ಗಳೆಲ್ಲವೂ ಎದೆಗಿರಿದು, ಎಂದೆಂದೂ ಮಾಯದ ಗಾಯವಾಗಿಸಿದವು. ಕೊನೆ ಘಳಿಗೆಯಲ್ಲಾದರೂ ನೀವು ನನ್ನ ಮುಖಕ್ಕೆ ಮುಖ ಕೊಟ್ಟು ಮಾತಾಡಬಹುದು ಎಂದುಕೊಂಡಿದ್ದೆ. ಊಹುಂ.. ಅದು ನಡೆಯಲೇಯಿಲ್ಲ. ಮಗಳ ಇಷ್ಟಗಳನ್ನೆಲ್ಲ ಪೂರೈಸಿದ ತಂದೆಯೊಬ್ಬ ಅವಳ ಬದುಕಿನ ಅಂತಿಮ ಆಯ್ಕೆಯ ಇಷ್ಟವನ್ನು ಏಕೆ ಈಡೇರಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಂದಿಗೂ ಸಿಕ್ಕಿಲ್ಲ. ಹಾಗೆಯೇ ತುಂಬಾ ಇಷ್ಟಪಡುವ ಅಪ್ಪನ ಒಳ್ಳೆಯ ಮಗಳಾಗಲು ಎಷ್ಟೆಲ್ಲ ತ್ಯಾಗ ಮಾಡಬೇಕಾಗುತ್ತೆ ಎನ್ನುವುದು ಗೊತ್ತಾಯಿತು.

ನಾನಿಲ್ಲಿ ನೀವು ಅಂದುಕೊಂಡ ಹಾಗೆ ಸುಖವಾಗಿಯೇ ಇದ್ದೇನೆ ಎಂದು ನಟಿಸುವುದು ತೀರಾ ಕಷ್ಟವೇನೂ ಆಗುವುದಿಲ್ಲ. ನೀವು ಚೆನ್ನಾಗಿರಿ ಪಪ್ಪಾ. ನಿಮ್ಮನ್ನು ಯಾವತ್ತೂ ಅಪರಾಧಿ ಪ್ರಜ್ಞೆ ಕಾಡದಿರಲಿ.

ಐ ಲವ್ ಯುವ್ ಪಪ್ಪಾ…..
ಇಂತೀ ನಿಮ್ಮ ಮುದ್ದಿನ ಮಗಳು