ಪ್ರೊ.ವಸಂತ ಶಿಂಧೆ
ಅಳಿದು ಹೋದ ಮಹಾನದಿಯ ಕಥೆ
ನಮ್ಮ ದೇಶದ ಏಳು ಪುರಾತನ ನದಿಗಳಲ್ಲಿ ಆರು ಇಂದಿಗೂ ಜೀವನದಿಗಳೆನಿಸಿವೆ. ತನ್ನ ಹರಿವನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ, ಸರಸ್ವತಿ ನದಿಯು ಒಂದು ಕಾಲ್ಪನಿಕ ನದಿ ಎಂಬ ಅಭಿಪ್ರಾಯವೂ ಒಡಮೂಡಿತ್ತು. ಆದರೆ, 1970ರ ದಶಕದಲ್ಲಿ ಅಮೆರಿಕದ ಲ್ಯಾಂಡ್‌ಸ್ಯಾಟ್ ಉಪಗ್ರಹ ಚಿತ್ರಗಳು ಸರಸ್ವತಿ ನದಿಯ ವಿಶಾಲ ಹರಹನ್ನು ಸ್ಪಷ್ಟವಾಗಿ ಗುರುತಿಸಿದವು ಮತ್ತು ಎಲ್ಲರ ಅಧ್ಯಯನಕ್ಕೆ ಲಭ್ಯವಾದವು.
ಅಂದಿನಿಂದ, ಇಂತಹ ಒಂದು ನದಿ ನಮ್ಮ ದೇಶದಲ್ಲಿ ನಿಜಕ್ಕೂ ಇತ್ತು ಎಂಬ ಸತ್ಯವು ಬಯಲಿಗೆ ಬಂತು. ಆ ಉಪಗ್ರಹಗಳ ಚಿತ್ರಗಳನ್ನು ಅಧ್ಯಯನ ಮಾಡಿದಾಗ, ಸರಸ್ವತಿ ನದಿಯು ಒಂದು ಬೃಹತ್ ಜೀವನದಿಯಾಗಿದ್ದು, ಕೆಲವು ಕಡೆ 15 ಕಿಮೀಗಿಂತಲೂ ಅಗಲವಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದು, ವಿಸ್ಮಯ
ಮೂಡಿಸಿತು. ಸರಸ್ವತಿ ನಿಜವಾಗಿಯೂ ಇತ್ತು ಎಂಬ ವಿಚಾರ ಖಚಿತಗೊಂಡ ನಂತರ, ಮುಂದಿನ ಹೆಜ್ಜೆಯಾಗಿ, ಈ ವಿಶಾಲ ಜೀವನದಿಯು ಯಾವ ನಾಗರಿಕತೆ ಯನ್ನು ಹುಟ್ಟುಹಾಕಿತ್ತು ಎಂಬ ಸಂಶೋಧನೆಗೆ ಚಾಲನೆ ದೊರಕಿತು. ನಮ್ಮ ರಾಜ್ಯದ ಸಂಶೋಧಕರಾದ ಶಿಕಾರಿಪುರ ರಂಗನಾಥ ರಾವ್ ಅವರೂ ಸೇರಿದಂತೆ ಹಲವು ವಿದ್ವಾಂಸರು ಸರಸ್ವತಿ ನದಿಯ ಕುರಿತು ಗ್ರಂಥಗಳನ್ನು ರಚಿಸಿ ದರು. ಈಚೆಗೆ ಜಿ.ಡಿ.ಭಕ್ಷಿಯವರು, ‘ದ ಸರಸ್ವತಿ ಸಿವಿಲೈಸೇಷನ್’ ಎಂಬ ಪುಸ್ತಕ ರಚಿಸಿದ್ದು, ಅದು ಈಗ ಕನ್ನಡಕ್ಕೂ ಅನುವಾದಗೊಂಡಿದೆ. ಸರಸ್ವತಿ ನದಿಯ ಕುರಿತು ನಡೆದ ಹೊಸ ಸಂಶೋಧನೆಗಳ ಹಿನ್ನೆಲೆಯಲ್ಲಿ ಈ ಪುಸ್ತಕದ ಓದು ನಮ್ಮ ದೇಶದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಬಲ್ಲದು.
ವೇದ ಸಾಹಿತ್ಯದ ಉದ್ದಗಲಕ್ಕೂ ಸರಸ್ವತಿ ನದಿಯ ಉಲ್ಲೇಖವು ಅಲ್ಲಲ್ಲಿ ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತದೆ. ಭಾರತಕ್ಕೆ ಸಾಂಸ್ಕೃತಿಕ ಹೆಗ್ಗುರುತನ್ನು ನೀಡಿದ ಸರಸ್ವತಿ
ನದಿಯ ತಪ್ಪಲನ್ನು ಮಹಾ ನಾಗರಿಕತೆಯ ತೊಟ್ಟಿಲು ಎನ್ನುತ್ತಾರೆ. ಪ್ರಾಚೀನ ಕಾಲದಲ್ಲಿ ದಕ್ಷಿಣ ಏಷ್ಯಾದಲ್ಲಿ ಮೊಟ್ಟಮೊದಲ ನಾಗರಿಕತೆಯು ಹುಟ್ಟಿ ಬೆಳೆದು ವಿಜೃಂಭಿಸಿದ್ದು ಈ ಮಹಾನದಿ ಮತ್ತದರ ಉಪನದಿಗಳ ತೀರದಲ್ಲಿ ಎನ್ನುವುದು ಕೂಡಾ ಚರಿತ್ರೆಯಲ್ಲಿ ದಾಖಲಾರ್ಹ ವಿಷಯ.
ಇಷ್ಟು ಬೃಹತ್ ಆಗಿದ್ದ ನದಿಯು ಬಿಸಿಇ 2000ದ ಸುಮಾರಿಗೆ ಸಂಪೂರ್ಣವಾಗಿ ಕಣ್ಮರೆಯಾಗಿದ್ದು ಮಾತ್ರ ವಿಪರ್ಯಾಸ. ಇದರೊಂದಿಗೆ ಒಂದು ಕಾಲದಲ್ಲಿ ಉಚ್ಛ್ರಾಯದಲ್ಲಿದ್ದ ಹರಪ್ಪಾ ನಾಗರಿಕತೆಯು ಕಾಲಕ್ರಮೇಣವಾಗಿ ಕಳೆಗುಂದುತ್ತಾ ಅವನತಿಯತ್ತ ದಾಪುಗಾಲಿಟ್ಟಿತು. ಇದರಿಂದಾಗಿ ನದಿ ತೀರದ ಜನರ ಬದುಕು, ಸಂಸ್ಕೃತಿ, ಜನವಸತಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮಗಳುಂಟಾಗಿ ಬದಲಾವಣೆಯು ಅನಿವಾರ್ಯವಾಯಿತು. ಈ ಕುರಿತು ಅನೇಕ ನಿಖರವಾದ ಮಾಹಿತಿಗಳು ಲಭ್ಯವಾಗಿವೆಯಾದರೂ ಇತ್ತೀಚೆಗೆ ದೊರೆತ ಪುರಾತತ್ವ ಶಾಸಜ್ಞರ ಮಾಹಿತಿಗಳ ಪ್ರಕಾರ ಬಿಸಿಇ 2000ದ ಸುಮಾರಿಗೆ ಸರಸ್ವತಿ ನದಿಯು ಸಂಪೂರ್ಣವಾಗಿ ಕಣ್ಮರೆಯಾಯಿತೆಂದು ತಿಳಿದು ಬರುತ್ತದೆ.
ಪ್ರಾಚೀನ (ಬಿಸಿಇ ೫೫೦೦-೨೬೦೦) ಹರಪ್ಪಾ ಹಾಗೂ ಪ್ರೌಢ ಹರಪ್ಪಾಗಳು (ಬಿಸಿಇ ೨೬೦೦-೨೦೦೦) ಸರಸ್ವತಿ ನದಿಯ ತೀರದಲ್ಲಿ ಕಂಡುಬಂದಿದ್ದರೆ ನಂತರದ ಅಂತಿಮ ಕಾಲದ ಹರಪ್ಪಾ ( ಬಿಸಿಇ ೧೯೦೦ರ ನಂತರ) ಸಂಸ್ಕೃತಿಯು ಸರಸ್ವತಿ ನದೀತೀರದ ಮುಖ್ಯಧಾರೆಯಿಂದ ದೂರ ಸರಿದಿದ್ದು ತಿಳಿದು ಬಂದಿದೆ. ಇದರಿಂದ ಅರಿವಿಗೆ ಬರುವ ಸತ್ಯವೇನೆಂದರೆ ಮುಖ್ಯ ನದಿಯು ಬತ್ತಿ ಹೋಗುತ್ತಿದ್ದಂತೆ, ನದಿತೀರದ ಜನರು ನೀರಿನ ಮೂಲಗಳನ್ನು ಹುಡುಕುತ್ತಾ ಸರಸ್ವತಿ ನದಿಯ ಇತರೆ ಉಪನದಿಗಳತ್ತ ವಲಸೆ ಹೋಗಿ ನೆಲೆ ನಿಂತರು. ಇದರೊಂದಿಗೆ ಅವರ ಜನಜೀವನ ಆಚಾರ – ವಿಚಾರಗಳಲ್ಲೂ ಕಾಲಕ್ರಮೇಣ ಅನೇಕ ಮಾರ್ಪಾಡುಗಳಾದವು.
೧೮ನೇ ಶತಮಾನದ ಆರಂಭದಿಂದಲೂ ಸಂಶೋಧಕರು ವೈದಿಕ ಸರಸ್ವತಿಯ ನದೀಪಾತ್ರ ಅದರ ಹುಟ್ಟು ಬೆಳವಣಿಗೆ, ಅಳಿವಿನ ಕಾಲಘಟ್ಟ ಹಾಗೂ ಈ ಬದಲಾವಣೆಗಳ ಹಿಂದೆ ಇರಬಹುದಾದ ಕಾರಣಗಳನ್ನು ತಿಳಿದುಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಭೂವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ಅನೇಕಾನೇಕ ವಿಭಾಗಗಳ ನೂರಾರು ಪರಿಣಿತರು ತಮ್ಮೆ ಶ್ರಮವನ್ನು ಮತ್ತು ಶಕ್ತಿಯನ್ನು ಈ ಕಾರ್ಯದಲ್ಲಿ ವಿನಿಯೋಗಿಸಿದ್ದಾರೆ.
ಬಹುವಿಭಾಗೀಯ ತಜ್ಞರ ಕ್ರೂಢೀಕೃತ ಪರಿಶ್ರಮದ ಫಲವಾಗಿ ಕಳೆದೊಂದು ದಶಕದಿಂದ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಭಾರತದ ಉತ್ತರ-ಪಶ್ಚಿಮ ಭಾಗದಲ್ಲಿ ಘಗ್ಗರ್ ಹಕ್ರಾ ಎಂದು ಕರೆಯಲಾಗುವ ನದಿಯೇ ಪೂರ್ವದಲ್ಲಿ ವೈದಿಕ ಸರಸ್ವತಿಯಾಗಿತ್ತೆಂದು ವಿಜ್ಞಾನಿಗಳು ಖಚಿತವಾಗಿ ನಿರ್ಧರಿಸಿದ್ದಾರೆ. ಈ ನದಿಯು ಕೆಳಗಿನ ಶಿವಾಲಿಕ್ ಪರ್ವತ ಶ್ರೇಣಿಗಳಲ್ಲಿ ಹುಟ್ಟಿ, ಪಂಜಾಬ, ಹರಿಯಾಣ ಪಶ್ಚಿಮ ರಾಜಸ್ಥಾನಗಳ ಮೂಲಕ ಹರಿದು ಇಂದಿನ ಪಾಕಿಸ್ತಾನದಲ್ಲಿರುವ ಭವಾಲ್ಪುರ ಜಿಲ್ಲೆಯನ್ನು ದಾಟಿ, ಕೊನೆಯಲ್ಲಿ ಗುಜರಾತಿನ ಕಛ್ ತೀರದ ಬಳಿ ಸಮುದ್ರವನ್ನು ಸೇರುತ್ತದೆ.
ವೇದಗಳಲ್ಲಿ ಬರುವ ಉಲ್ಲೇಖಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನದಿಪಾತ್ರದ ವಾಸಿಗಳನ್ನು ಪ್ರಾಚೀನ ವೈದಿಕ ಜನರೆಂದು ಸುಲಭವಾಗಿ ಗುರುತಿಸಬಹುದು. ಋಗ್ವೇದ ಕಾಲದ ಜನರಿಗೂ ಸರಸ್ವತಿ ನದಿಗೂ ಒಂದು ಭಾವಪೂರ್ಣವಾದ ಗಟ್ಟಿ ನಂಟಿತ್ತು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಭಾರತದ ಅತಿ ಪ್ರಾಮುಖ್ಯ ವಾದ ನದಿಗಳಲ್ಲಿ ಒಂದಾಗಿರುವ ಮತ್ತು ಹರಪ್ಪಾ ನಾಗರಿಕತೆಯ ಹೆಚ್ಚಿನ ಜನವಸತಿಗಳನ್ನು ಆಧರಿಸಿರುವ ಈ ಸರಸ್ವತಿ ನದಿಯ ಕುರಿತು ಬಹುವಿಭಾಗಿಯ ತಜ್ಞರ ಕ್ರೊಢೀಕೃತ ತಂಡದಿಂದ ಸಾಕಷ್ಟು ಸಂಶೋಧನೆಗಳು ನಡೆದಿಲ್ಲವೆನ್ನುವುದು ಆಶ್ಚರ್ಯವೂ, ಸತ್ಯವೂ ಮತ್ತು ವಿಪರ್ಯಾಸವೂ ಹೌದು. ಈ ಕುರಿತು ತುಣುಕುಗಳಲ್ಲಿ ಮಾಹಿತಿಯ ಮಹಾಪೂರವೇ ಇದ್ದರೂ ಮೇ.ಜ. ಭಕ್ಷಿ ಅವರು ತಮ್ಮ ಪುಸ್ತಕದಲ್ಲಿ ಇವೆಲ್ಲವನ್ನೂ ಅಮೂಲಾಗ್ರವಾಗಿ ಸಂಗ್ರಹಿಸಿ ಏಕಸೂತ್ರದಲ್ಲಿ ಪೋಣಿಸಿ
ಪ್ರಕಟಿಸಿರುವುದು ಶ್ಲಾಘನೀಯವಾದ ವಿಚಾರ.
ಇನ್ನೂ ವಿಶೇಷವೆಂಬಂತೆ ತೀರಾ ಇತ್ತೀಚಿನವುಗಳೆನ್ನಬಹುದಾದ ಅನೇಕ ವೈಜ್ಞಾನಿಕ ಮಾಹಿತಿಗಳನ್ನು ಕೂಡಾ ಇಲ್ಲಿ ಸಮೂಲವಾಗಿ ಮತ್ತು ವಿಶದವಾಗಿ ದಾಖಲಿಸ ಲಾಗಿದೆ. ಸರಸ್ವತಿಯ ಕುರಿತಾದ ಬಹುತೇಕ ಎಲ್ಲಾ ಸಂದೇಹಗಳಿಗೂ ಸೂಕ್ತ ಉತ್ತರವನ್ನು ಭಕ್ಷಿಯವರು ನೀಡಿರುತ್ತಾರೆ. ಕಳೆದುಹೋದ ಸರಸ್ವತಿ ನದಿಯ ಹುಡುಕಾಟವು ಹೆಚ್ಚು ಕಮ್ಮಿ ಭಾರತೀಯರ ಅಸ್ಮಿತೆ, ಸ್ವಂತಿಕೆ ಹಾಗೂ ಪಾರಂಪರಿಕ ಅಸ್ತಿತ್ವದ ಹುಡುಕಾಟವೂ ಹೌದು. ಪ್ರತಿಯೊಬ್ಬ ಭಾರತೀಯನಿಗೂ ತನ್ನ ನಾಗರಿಕತೆಯ ಮೂಲದ ಸತ್ಯಶೋಧನೆಯ ಜೊತೆಜೊತೆಗೆ ತನ್ನತನದ ನೈಜಗುರುತಿನ ಪುನರುಜ್ಜೀವನವು ಈ ಮೂಲಕ ಸಾಧ್ಯವಾಗಿದೆ.
ಭಾರತೀಯರಾದ ನಾವು ಮೂಲತಃ ಯಾರು? ಇಂಡೋ-ಆರ್ಯನ್ ಜನಾಂಗ ಎಲ್ಲಿಂದ ಬಂದವರು? ಇಂದಿನ ನಮ್ಮ ಹಿಂದೂ ಸಂಸ್ಕೃತಿಗೆ ಶಿಲಾನ್ಯಾಸವನ್ನು ಮಾಡಿದವರು ಇದೇ ಆರ್ಯರಿರಬಹುದೇ? ಆರ್ಯರ ಮೂಲ ನೆಲೆ ಯಾವುದು? ಆರ್ಯರು ಭಾರತದ ಮೂಲನಿವಾಸಿಗಳೇ ಅಥವಾ ಪರಕೀಯರೇ? ಪರಕೀಯರಾದರೆ ಎಲ್ಲಿಂದ ಬಂದವರು? ಟರ್ಕಿಯ ಅನಟೋಲಿಯಾ ಪ್ರಾಂತ್ಯವೇ? ಮಧ್ಯ ಏಷ್ಯಾದ ಹುಲ್ಲುಗಾವಲೇ? ಭಾರತೀಯರು ತಮ್ಮ ತಾಯಿ ಬೇರನ್ನು ಹುಡುಕುತ್ತಾ ಎಲ್ಲಿ ಹೋಗಬೇಕು? ಪ್ರಸಕ್ತ ಯುರೋಪ್ ಮತ್ತು ಏಷ್ಯಾದಲ್ಲಿ ಪ್ರಚಲಿತವಿರುವ ಹೆಚ್ಚಿನ ಭಾಷೆಗಳಿಗೆ ಏಕ ಮೂಲವಾದ ಆ ಇಂಡೋ- ರೋಪಿಯನ್ ಭಾಷೆ ಯಾವುದು? ಆರ್ಯರು ಕಂಚಿನ ಯುಗದಲ್ಲಿ ಭಾರತಕ್ಕೆ ದಾಳಿ ಮಾಡಿದ್ದ ಪರದೇಶಿಗಳೇ? ಆರ್ಯರ ಯುದ್ಧ ದೇವತೆ ಇಂದ್ರನು ಭಾರತದ ಮೂಲನಿವಾಸಿ ಗಳಾದ ದ್ರಾವಿಡ ಜನಾಂಗದ ಹತ್ಯಾಕಾಂಡವನ್ನು ಮಾಡಿಸಿದ ಪಾಪಿಯೇ? ಆರ್ಯರು ಸಿಂಧೂನದಿ ಪ್ರಾಂತ್ಯದ ದ್ರಾವಿಡರ ೧೦೦ ಕೋಟೆ ನಗರಗಳನ್ನು ಧ್ವಂಸ ಮಾಡಿದ್ದರೇ? ಅದು ಸತ್ಯವಾಗಿದ್ದಲ್ಲಿ ಮತ್ತು ಬೃಹತ್ ಪ್ರಮಾಣದ ಜನನಾಶವು ಸಂಭವಿಸಿದ ಹೋರಾಟವು ನಿಜವಾಗಲೂ ನಡೆದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಯಾವ ಕುರುಹುಗಳೂ ಉತ್ಖನನದಲ್ಲಿ ಇದುವರೆಗೂ ಏಕೆ ಪತ್ತೆಯಾಗಿಲ್ಲ?
ನಿಜ ಹೇಳಬೇಕೆಂದರೆ ಜಗತ್ತಿನ ಪ್ರಪ್ರಥಮ ನಗರ ಸಂಸ್ಕೃತಿಯ ನೆಲೆಯಾದ ಪಶ್ಚಿಮೋತ್ತರ ಭಾರತದಲ್ಲಿ ಇದುವರೆಗೂ ಕೇವಲ ೧೦ ನಗರಗಳು ಮಾತ್ರವೇ ಪತ್ತೆಯಾಗಿವೆ (ಒಂದು ನಗರವೆಂದರೆ ಕನಿಷ್ಠ ೧೦೦ ಹೆಕ್ಟೇರುಗಳಿಗಿಂತ ಹೆಚ್ಚಿನ ವಿಸ್ತಾರವನ್ನು ಹೊಂದಿರಬೇಕು). ಆರ್ಯರ ಆಕ್ರಮಣ ಸಿದ್ಧಾಂತವು (ಎಐಟಿ) ಇಂಥ ಹಲವಾರು ಆಂತರಿಕ ವಿರೋಧಾಭಾಸಗಳಿಂದ ತುಂಬಿದೆ. ವಸಾಹತುಶಾಹಿ ಕಾಲದ ಐರೋಪ್ಯರ ಪೂರ್ವಾಗ್ರಹಪೀಡಿತ ಸಿದ್ಧಾಂತಗಳನ್ನೆ ಕಣ್ಣು ಮುಚ್ಚಿ ಒಪ್ಪಿಕೊಳ್ಳುವ ಗುಲಾಮಿ ಮಾನಸಿಕತೆಯ ಪೊರೆಯನ್ನು ಕಳಚಿ ವೈಜ್ಞಾನಿಕವಾದ ಸಾಕ್ಷ್ಯಗಳ ಆಧಾರದಲ್ಲಿ ಹೊಸದಾಗಿ ಚಿಂತನೆಯನ್ನು ಮಾಡಲು ಈಗ ಕಾಲವು ಪರಿಪಕ್ವವಾಗಿದೆ.
ಇತ್ತೀಚೆಗೆ ಲಭ್ಯವಾದ ಪ್ರಾಚೀನ ಪಳೆಯುಳಿಕೆಗಳಲ್ಲಿ ದೊರೆತ ವರ್ಣತಂತುಗಳ ಪರೀಕ್ಷೆ ಹಾಗೂ ಪ್ರಾಕ್ತನ ಸಂಶೋಧಕರಿಗೆ ಲಭ್ಯವಾದ ಹೆಚ್ಚಿನ ಮಾಹಿತಿಗಳನ್ನು ಈಗ ಸಮನ್ವಯಗೊಳಿಸಿ ಅರ್ಥೈಸಿಕೊಳ್ಳಬೇಕಿದೆ. ವಿಜ್ಞಾನಿಗಳ ಚಿಂತನೆಯ ದಾರಿಯನ್ನು ತಪ್ಪಿಸಲೆಂದೇ, ಪೂರ್ವಾಗ್ರಹದ ಸಂಚಿನಿಂದ ಹೆಣೆದ ಆರ್ಯರ ವಲಸೆಯ ಸಿದ್ಧಾಂತವು ಪುರಾವೆಗಳ ಅಭಾವದಿಂದ ತಾನೇ ತಾನಾಗಿ ಬಿದ್ದುಹೋಗಿದೆ. ಪುರಾತತ್ವಶಾಸ್ತ್ತಜ್ಞರ ಸಂಶೋಧನೆಗಳನ್ನು, ವರ್ಣತಂತುಗಳ ಪರೀಕ್ಷೆಯ ವರದಿಯೊಂದಿಗೆ ಅಳೆದು-ತೂಗಿ ತಾಳೆ ಹಿಡಿದು ವಿಶ್ಲೇಷಿಸಬೇಕಿದೆ. ಈಗ ದೊರಕಿದ ಹೊಚ್ಚ ಹೊಸ ಪುರಾವೆಗಳು ಈ ವಲಸೆಯ ಸಿದ್ಧಾಂತವನ್ನು ಸುಳ್ಳೆಂದು ವಿಶದಪಡಿಸಿವೆ.
ಪಾಕಿಸ್ತಾನದ ಮೆಹರ್ ಘರ್, ಭಿರಾನಾ ಮತ್ತು ಗಿರ್ವಾಡದಂಥ ಸರಸ್ವತಿ ನದಿತಪ್ಪಲಿನ ವಸತಿಗಳಲ್ಲಿ ದೊರೆತ ಸಾಕ್ಷ್ಯಗಳು ಅಲ್ಲೇ ನಾಗರಿಕತೆಗಳು ಸ್ಥಳೀಯವಾಗಿಯೇ ಹುಟ್ಟಿ ವಿಕಸಿತಗೊಂಡವೆಂದು ಪುಷ್ಟೀಕರಿಸುತ್ತವೆ. ಬಿಸಿಇ ೭೦೦೦ ದ ಸುಮಾರಿಗೆ ಹುಟ್ಟಿಕೊಂಡ ಮೂಲ ಸಂಸ್ಕೃತಿಯು ಕಾಲಾಂತರದಲ್ಲಿ ಮಾರ್ಪಾಡುಗೊಂಡು ೩ನೇ ಸಹಸ್ರಮಾನದ ಹೊತ್ತಿಗೆ ವ್ಯವಸ್ಥಿತ ನಗರೀಕೃತ ಸಾಮಾಜಿಕ ವ್ಯವಸ್ಥೆಯಾಗಿ ವಿಕಸನಗೊಂಡಿತ್ತೆಂದು ತಿಳಿದುಬರುತ್ತದೆ. ತದ ನಂತರದಲ್ಲಿ ಬೆಳೆದುನಿಂತ ಭವ್ಯ ಸನಾತನ ಹಿಂದೂ ಸಂಸ್ಕೃತಿಗೆ ಇದೇ ಮೂಲ ಸ್ರೋತವಾಗಿತ್ತೆಂದು ಖಚಿತವಾಗಿ ಹೇಳಬಹುದು. ಮುಂದಿನ ಅನೇಕ ಸಹಸ್ರಮಾನಗಳಲ್ಲಿ ನೂರಾರು ವಲಸೆ ಪ್ರಕ್ರಿಯೆಗಳ ಕಾರಣ ದೂರ ದೇಶದ ಹಲವಾರು ವಿವಿಧ ಜನಪದಗಳ ವೈವಿಧ್ಯತೆಯನ್ನೂ, ಸಮೃದ್ಧತೆಯನ್ನೂ ತನ್ನಲ್ಲಿ ಮೈಗೂಡಿಸಿಕೊಂಡು ಆಧುನಿಕ ರೂಪದಲ್ಲಿ ಪಡಿಮೂಡಿದ್ದೇ ಹಿಂದೂ ಸಭ್ಯತೆಯ ಪರಮ ವಿಶೇಷ.
ಹೊರದೇಶಗಳೊಡನೆ ವ್ಯಾಪಾರದೊಂದಿಗೆ ಸಾಂಸ್ಕೃತಿಕ ವಿನಿಮಯವೂ ನಡೆದಿತ್ತೆಂಬುದು ಜೆನೆಟಿಕ್ ಹಾಗೂ ಅನೇಕ ಸಾಂಸ್ಕೃತಿಕ ಪುರಾವೆಗಳ ಆಧಾರದಲ್ಲಿ ನಿರ್ಧರಿತವಾಗಿದೆ. ಆಧುನಿಕ ಸಂಶೋಧನೆಗಳು ಆರ್ಯರ ವಲಸೆಯ ನಿರಾಧಾರವಾದ ಕಟ್ಟುಕಥೆಯನ್ನು ಈಗ ನಿರ್ವಿವಾದವಾಗಿ ತಳ್ಳಿಹಾಕಿದೆ. ಕಳೆದ ೧೦೦೦೦ ವರ್ಷಗಳಲ್ಲಿ ಹಾಗೊಂದು ಬೃಹತ್ ಪ್ರಮಾಣದ ಜನ ವಲಸೆಯು ದಕ್ಷಿಣ ಏಷ್ಯಾದಲ್ಲಿ ಎಲ್ಲೂ ನಡೆದಿಲ್ಲವೆಂಬುದು ತಜ್ಞರೆಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿದೆ.
ಋಗ್ವೇದದಲ್ಲಿ ದೊರೆತ ಹೊಚ್ಚ ಹೊಸ ಮಾಹಿತಿಗಳನ್ನು ವೈಜ್ಞಾನಿಕ ತಥ್ಯಗಳ ಆಧಾರದಲ್ಲಿ ವಿಶದೀಕರಿಸಿ ನಮ್ಮ ಪಠ್ಯಪುಸ್ತಕಗಳಲ್ಲಿ ಪಡಿಮೂಡಿಸುವ ಕೆಲಸವು ಈಗ ಅತ್ಯಗತ್ಯವಾಗಿದೆ. ಇಲ್ಲವಾದರೆ ನಮ್ಮ ಭವ್ಯ ದಿವ್ಯ ಇತಿಹಾಸ ಹಾಗೂ ಪರಂಪರೆಯ ಸತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಅಸಾಧ್ಯ.
ಮೇ.ಜ. ಜಿ.ಡಿ. ಭಕ್ಷಿಯವರು ವಿಸ್ತಾರವಾದ ಅಧ್ಯಯನ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ವಿಶ್ವಪ್ರಯತ್ನದಿಂದ ಪ್ರಸ್ತುತಪಡಿಸಿದ ಈ ಪುಸ್ತಕವು ಭಾರತೀಯರಾದ ನಮ್ಮೆಲ್ಲರ ಇತಿಹಾಸ ಮತ್ತು ಸಂಸ್ಕೃತಿಗಳ ಮೇಲೆ ಗಾಢವಾದ ಬೆಳಕನ್ನು ಚೆಲ್ಲುವುದಲ್ಲದೇ ಹಲವಾರು ಗೊಂದಲಗಳನ್ನೂ ಸುಲಭವಾಗಿ ಪರಿಹರಿಸುತ್ತದೆ. ಇದು ಅಜ್ಞರಿಗೂ ತಜ್ಞರಿಗೂ ಏಕಕಾಲಕ್ಕೆ ಉಪಯುಕ್ತವಾದ ಪುಸ್ತಕವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. (ಪುಣೆಯ ಡೆಕ್ಕನ್ ಕಾಲೇಜಿನ ಉಪಕುಲಪತಿಯಾಗಿರುವ ಪ್ರೊ. ಶಿಂಧೆಯವರು ಈ ಪುಸ್ತಕಕ್ಕೆ ಬರೆದ ಮುನ್ನುಡಿ)
೦೦೦